ಅಂಕಣ

ಬದುಕಿನ ಚೌಕಟ್ಟಿಲ್ಲದ ಚಿತ್ರಗಳು!

ಬದುಕು ಅನ್ನೋದು ಒಂಥರ ಚೌಕಟ್ಟಿಲ್ಲದ ಚಿತ್ರದಂತೆ. ಬಿಡಿಸ್ತಾ ಹೋದ್ರೆ ಎಷ್ಟು ದೂರ ಬೇಕಾದ್ರು ಬಿಡಿಸಬಹುದು. ಸಾಕು ಅಂದಾಗ ನಿಲ್ಲಿಸಬಹುದು. ಯಾವುದ್ರಲ್ಲೆ ಆಗ್ಲಿ ನಾವು ಎಲ್ಲಿಗೆ ಚೌಕಟ್ಟನ್ನು ಹಾಕಿಕೊಳ್ತೀವಿ ಅನ್ನೋದು ಮಹತ್ವದ್ದು. ಪ್ರತಿದಿನ ಎಷ್ಟೋ ಅವಮಾನ ಆಗುತ್ತೆ. ನೋವಾಗುತ್ತೆ. ಎಲ್ಲ ಅವಮಾನಕ್ಕು ಉತ್ತರ ಕೊಡ್ತೀವಿ ಅಂತ ಹೋದ್ರೆ ನಮ್ಮ ಕಥೆ ಮುಗೀತು! ಅದೊಂಥರ ಹೈವೆಯಲ್ಲಿ ನೀವು ಚಟಕ್ಕೆ ಬಿದ್ದು ಸಂಬಂಧವೇ ಇಲ್ಲದ ಯಾರನ್ನೋ ಓವರ್‌ಟೇಕ್‌ ಮಾಡಿದ ಹಾಗೆ. ಇದ್ರಿಂದ ನನ್ನ ಬದುಕಿಗೆ ಏನು ಪ್ರಯೋಜನ ಇಲ್ಲ ಅನ್ನೋದು ಬಹಳ ದೂರ ಹೋದ ನಂತ್ರ ಅರಿವಾಗುತ್ತೆ.

ನಾವು ಪ್ರತಿಸಲ ನಮ್ಮದೇ ಶ್ರೇಷ್ಠ, ನಾವೇ ಮಹಾನ್‌ ಬುದ್ದಿವಂತರು, ನಾವೇ ದೊಡ್ಡ ಶ್ರೀಮಂತರು ಅಂದೊಕೊಳ್ತಾ ಇರ್ತಿವಿ. ಸೈಕಲ್‌ನಲ್ಲಿ ಬದುಕುತ್ತಿದ್ದವನಿಗೆ ಬೈಕ್‌ ಬಂದಾಕ್ಷಣ ನಾನು ಶ್ರೀಮಂತ ಆಗಿಬಿಟ್ಟೆ ಅನ್ನೋ ಭ್ರಮೆ. ಬೈಕ್‌ನವನಿಗೆ ಕಾರು ಬಂದ್ರೆ ಭ್ರಮೆ. ಆದ್ರೆ ಸಿಗ್ನಲ್‌ನಲ್ಲಿ ನಿಂತಾಗ್ಲೆ ಗೊತ್ತಾಗೋದು ನಂದು ತೀರ ಸಣ್ಣ ಕಾರು. ಪಕ್ಕದವನ ಬಳಿ ಬೆಂಜ್‌ ಇದೆ. ಅದಕ್ಕು ಪಕ್ಕದವನ ಹತ್ರ ಬಿಎಂಡಬ್ಲ್ಯು ಇದೆ. ಈ ಕಡೆ ಪಕ್ಕದವನದ್ದು ಜಾಗ್ವಾರ್‌ ಕಾರು ಅಂತ!

ತೃಪ್ತಿ ಮತ್ತು ಭ್ರಮೆಯ ನಡುವೆ ವ್ಯತ್ಯಾಸ ಇದೆ. ಮೇಲಿನ ಹೋಲಿಕೆ ಭ್ರಮೆಯನ್ನು ಹೋಗಲಾಡಿಸುತ್ತೆ. ಹಾಗಂತ ಅದಕ್ಕೆ ಹೊಟ್ಟೆಕಿಚ್ಚು ಪಟ್ಟುಕೊಂಡು, ಜಿದ್ದಿಗೆ ತೆಗೆದುಕೊಂಡು ಹೊರಟ್ರೆ ಬದುಕಿನ ಕಥೆ ಮುಗೀತು. ಕೆಲವು ಸಲ ಅವಮಾನ, ನೋವು, ಯಾರೋ ಆಡಿಕೊಂಡಿದ್ದು ನಮ್ಮನ್ನು ಎತ್ತರಕ್ಕೆ ಬೆಳೆಸುತ್ತೆ ನಿಜ. ಹಾಗಂತ ಪ್ರತಿ ಅವಮಾನವನ್ನು ಸವಾಲಾಗಿ ತೆಗೆದುಕೊಂಡ್ರೆ ಜೀವನ ಅನ್ನೋದು ಏನೂ ಅರ್ಥವಾಗದೆಯೆ ಮುಕ್ಕಾಲು ಆಯುಷ್ಯ ಕಳೆದು ಹೋಗುತ್ತೆ!

ಬದುಕಿಗೊಂದು ಇತಿಮಿತಿಯಿಲ್ಲ. ನಾವು ಹೇಗೆ ತೆಗೆದುಕೊಳ್ಳುತ್ತೀವೊ  ಹಾಗೆ ಅಂತ ಎಷ್ಟೊ ಸಲ ಅಂದುಕೊಳ್ತಾ ಇರ್ತಿನಿ. ಬೆಳಿಗ್ಗೆ ಹೂವಿನ ಆಂಟಿ ಬರ್ತಾಳೆ. ಆಕೆ ಫಸ್ಟ್‌ಟ್ರಿಪ್‌ ಬಂದಾಗ ನಂಗಂತು ಬೆಳಗಾಗಿರುವುದಿಲ್ಲ! ತಿಂಗಳಿಗೆ ಒಂದ್ಸಲ ದುಡ್ಡು ಇಸಿದುಕೊಳ್ಳಬೇಕು ಅಂತ ಸೆಕೆಂಡ್‌ ಟ್ರಿಪ್‌ ಬರುವಾಗ ಹೂವು ಹಾಕ್ತಾರೆ. ಅಪ್ಪಿ, ತಪ್ಪಿ ನೀವೇನಾದ್ರು ‘ಏನ್‌ ಆಂಟಿ ಹಳೆ ಹೂ ಹಾಕ್ತೀರಾ? ದೇವ್ರಿಗೆ ಮುಡಿಸೋಕೆ ಮನಸ್ಸು ಬರಲ್ಲ’ ಅಂದ್ರೆ ನಿಮ್ಮ ಕಥೆ ಮುಗೀತು. ಬೆಳಿಗ್ಗೆ ಎದ್ದು ಮಾರ್ಕೆಟ್‌ಗೆ ಹೋಗಿ ಹೂ ತರೋದ್ರಿಂದ ಹಿಡಿದು, ನಿನ್ನೆ ಮಳೆ ಬಂತು ಇಷ್ಟು ಲಾಸ್‌ ಆಯ್ತು ಅನ್ನೊವರೆಗಿನ ಕಥೆ! ಬೆಳ್ಳಂಬೆಳಿಗ್ಗೆ ಕರೆಕ್ಟಾಗಿ ಒಂದು ಗಂಟೆ ೨೨ ನಿಮಿಷ ಡಮಾರ್‌ ಅಂದಿರುತ್ತೆ. ಓಕೆ ಮುಂದೊಂದು ದಿನ ಈಕೆಯ ಕಥೆ ಯಾವುದೋ ಕಥೆಗೊಂದು ಪಾತ್ರ ಆಗುತ್ತೆ ಅಂತ ನನಗೆ ನಾನೇ ಸಮಾಧಾನ ಮಾಡಿಕೊಳ್ಳಬೇಕು!’ ಹಳೆ ಹೂವಾದ್ರು ಪರ್ವಾಗಿಲ್ಲ. ನೀವೇ ಗ್ರೇಟ್‌. ಕೊಡೊ ೭ ರೂಪಾಯಿಗೆ ಸೂಪರ್‌ ಹೂವು ಹಾಕಿದ್ದೀರಿ’ ಅಂತ ಅಂದುಕೊಂಡು ಏರಿಸಲಾಗದ ಹೂವನ್ನು ಕಸದ ಬುಟ್ಟಿಗೆ ಎಸೆದು, ೧೦ ರೂಪಾಯಿಗೊಂದು ಮಳ ಹೂವು ಖರೀದಿಸಿ ಏರಿಸುವುದು, ಆಂಟಿಗೆ ಕಂಪ್ಲೆಂಟ್‌ ಮಾಡೋದಕ್ಕಿಂತ ಉತ್ತಮ!

ಅವರವರಿಗೆ ಅವರ ಜಗತ್ತೇ ಶ್ರೇಷ್ಠ. ರಾಮಣ್ಣನ ಅಂಗಡಿ ಹೋದ್ರೆ ‘ಸುಸ್ತಾಗಿ ಹೋಯ್ತು ಸಾರ್‌. ಈ ಅಂಗಡಿಯೂ ಬೇಡ ಮತ್ತೊಂದು ಬೇಡ. ಯಶವಂತಪುರಕ್ಕೆ ಹೋಗಿ ಮೂಟೆ ಇಳಿಸಿಕೊಂಡು ಬರುವಾಗ ಬೆನ್ನೆಲ್ಲ ಬಿದ್ದು ಹೋಗುತ್ತೆ. ಒಬ್ರೆ ಒದ್ದಾಡೊಕೆ ಆಗಲ್ಲ. ನಾವು ನಿಮ್ಮ ಥರ ಓದಿಕೊಂಡು ಕೆಲಸಕ್ಕೆ ಸೇರಿಕೊಂಡು ಬಿಡಬೇಕಿತ್ತು’ ಅಂತಿರುತ್ತಾರೆ.

‘ನಾವು ದುಡಿಯೋದೆಲ್ಲ ಲಾಭ ಕಂಪನಿಗೆ. ತೀರ ಸಂಬಳವೊಂದನ್ನೇ ನಂಬಿಕೊಂಡ್ರೆ ನಾನು ಈ ಬೆಂಗ್ಳೂರಲ್ಲಿ ಬದುಕೋಕೆ ಆಗಲ್ಲ. ನಾನು ಸ್ವಂತದ್ದು ಏನಾದ್ರು ಮಾಡಬೇಕು’ ಅಂತ ನಾನು ಯೋಚಿಸ್ತಾ ಇರ್ತಿನಿ! ಅಲ್ಲೆಲ್ಲೋ ಹೊಟೆಲ್‌ಗೆ ಹೋದ್ರೆ, ಅವ್ರಿಗೆ ಬಿಬಿಎಂಪಿ ಚುನಾವಣೆ ತಲೆಬಿಸಿ. ಮೋಸ್ಟ್ಲಿ ಇವ್ರೆ ಈ ದೇಶದ ಎಲ್ಲ ಉಸ್ತುವಾರಿಯನ್ನು ನೋಡಿಕೊಳ್ಳೋದು ಇರಬೇಕು ಅನ್ನೋ ರೇಂಜಿಗೆ ಆಡ್ತಾ ಇರ್ತಾರೆ ಒಂದಷ್ಟು ಜನ. ಈ ಕಡೆ ಸಿನಿಮಾ ಪ್ರೆಸ್‌ಮೀಟ್‌ ಹೋದ್ರೆ ಅದೊಂದು ಬೇರೆಯದೆ ಜಗತ್ತು. ಅವ್ರಿಗೆ ಬಿಬಿಎಂಪಿ ಚುನಾವಣೆಯೂ ಬೇಡ, ರಾಮಣ್ಣನ ಕಷ್ಟ ಸುಖವೂ ಬೇಡ. ‘ ಆ ಸಿನಿಮಾ ಹಂಗಿತ್ತು. ಮೊನ್ನೆ ಆ ನಟ ಹಾಗೆ ಅಂದ, ನೀವ್ಯಾಕೆ ಆ ಪ್ರೆಸ್‌ಮೀಟ್‌ಗೆ ಬಂದಿಲ್ಲ, ಆ ಹೀರೋಯಿನ್‌ ಅವನ ಹಿಂದೆ ಬಿದ್ದಿದಾಳಂತೆ ಹೌದಾ, ಆ ನಾಯಕ ಯಾವುದೋ ನಿರ್ದೇಶಕನಿಗೆ ಸಿನಿಮಾ ಮಾಡುತ್ತಿದ್ದಾನಲ್ಲ’ ಎಂಬಿತ್ಯಾದಿ ಮಾತುಗಳು.

ಈ ಕಡೆ ಚಾನೆಲ್‌ಗೆ ಬಂದ್ರೆ ಅವ್ರಿಗೆ ಇನ್ನೊಂದು ಜಗತ್ತಿನ ಪರಿವೇ ಇಲ್ಲ. ಟಿಆರ್‌ಪಿ, ರಿಯಾಲಿಟಿ ಶೋ, ನಮ್ಮ ಶೋ ಅದಕ್ಕಿಂತ ಚೆನ್ನಾಗಿತ್ತು ವಗೈರೆ, ವಗೈರೆಗಳು…’ಸಾರ್‌ ಸೀನ್‌ ಕಳ್ಸಿ ಸಾರ್‌, ನಾಳೆ ಆ ಹೀರೋ ಡೇಟ್‌ ಇಲ್ಲ. ನಾಡಿದ್ದು ಆ ಹೀರೋಯಿನ್‌ ಡೇಟಿಂಗ್‌ನಲ್ಲಿ ಇರ್ತಾಳೆ’ ಅಂತ ಸೀರಿಯಲ್‌ ಮ್ಯಾನೇಜರ್‌ ಅಳಲು. ಅವನಿಗೆ ಒಂದು ಹೂವಿನ ಆಂಟಿ ಸ್ಟೋರಿ, ಸಿನಿಮಾ ಪ್ರೆಸ್‌ಮೀಟ್‌ ಯಾವುದೂ ಮುಖ್ಯ ಅಲ್ಲ. ಆವತ್ತಿನ ದಿನಕ್ಕೆ ಬೇಕಾದ ಸ್ಕ್ರಿಪ್ಟ್‌ನ ಪ್ರಿಂಟೌಟ್‌ ನಿರ್ದೇಶಕರಿಗೆ ಕೊಟ್ಟು, ಬೇಕಾದ ಕಲಾವಿದರನ್ನು ಸೆಟ್‌ಗೆ ತಂದು ಗುಡ್ಡೆ ಹಾಕಿ, ಬರೆದ ಪ್ರಾಪರ್ಟಿಗಳನ್ನು ತಂದು ಹೂತಾಕಿದರೆ ಮ್ಯಾನೇಜರ್‌ನ ಆವತ್ತಿನ ಜೀವನ ಮುಗೀತು. ನಾನು ಒಂದು ಹತ್ತು ನಿಮಿಷ ಆರಾಮವಾಗಿ ನಿದ್ದೆ ಮಾಡಬಹುದು ಅನ್ನೋದು ಅವನ ಯೋಚನೆ!

‘ಗುರು ಇವತ್ತು ಈ ಕುದುರೆನೆ ಗೆಲ್ಲೋದು. ಅದ್ರ ಮೇಲೆ ದುಡ್ಡು ಹಾಕು. ನಾನು ಎಷ್ಟು ಗೆದ್ದೆ ಗೊತ್ತಾ’ ಬೈಕ್‌ ಹತ್ತಿ ಆಫೀಸ್‌ಗೆ ಹೊರಟ್ರೆ ರೇಸ್‌ಕೋರ್ಸ್‌ ರೋಡಿನಲ್ಲಿ ಕೇಳುವ ಮಾತು. ಜೆಸಿ ರಸ್ತೆಗೆ ಹೋದ್ರೆ ಅವ್ರಿಗೆ ಕಾರು, ಸೀಟು, ಟಯರ್‌, ನಟ್ಟು, ಬೋಲ್ಟು ಬಿಟ್ಟು ಬೇರೆ ಪ್ರಪಂಚ ಬೇಡ!

ಪ್ರತಿ ದಿನ ನಾವು ನಮ್ಮದೆ ಆದ ಭ್ರಮೆಯಲ್ಲಿ ಬದುಕ್ತಾ ಇರ್ತಿವಿ. ‘ನಾನು ಇವತ್ತು ಆ ಕೆಲಸ ಮಾಡಿದೆ. ಭಯಂಕರ, ಇವತ್ತು ಇದೊಂದು ಬರೆದುಬಿಟ್ಟೆ ಅದ್ಭುತ. ನಾನೊಬ್ಬ ಮಹಾನ್‌ ಅಂಕಣಕೋರ. ನನ್ನ ಪತ್ರಿಕೆ ೭ ಲಕ್ಷ ಪ್ರಸರಣ ಇದೆ. ನಂಗಷ್ಟು ಅಭಿಮಾನಿಗಳು ಇದಾರೆ’ ಅಂತೆಲ್ಲ ಬೀಗುತ್ತಾ ಇರ್ತಿವಿ. ‘ಸಾರ್‌ ಇವತ್ತು ನಿಮ್ಮ ಬರಹ ಅದ್ಭುತ ಬಿಡಿ ಸಾರ್‌. ಶರ್ಟ್‌ ಎಲ್ಲಿ ತಗೊಂಡ್ರಿ ಸಾರ್‌. ಸೂಪರ್‌ ಆಗಿದೆ. ನೀವು ಹಾಕಿದ ಚೆಡ್ಡಿಯಂತೂ ವಿಶ್ವದ ಹನ್ನೆರಡನೆ ಅದ್ಭುತದಂತಿದೆ’ ಸಹೋದ್ಯೋಗಿಯೊಬ್ಬ ಚೆನ್ನಾಗಿ ರೈಲು ಹತ್ತಿಸಿ ಉಬ್ಬಿಸುತ್ತಿರುತ್ತಾನೆ. ನಾಳೆ ಆಗೋ ಇಂಕ್ರಿಮೆಂಟಿನ ಚಿಂತೆ ಅವನಿಗೆ. ಬಾಸ್‌ನ ಚೆನ್ನಾಗಿ ಇಟ್ಟುಕೊಳ್ಳದೆ ಹೋದ್ರೆ, ನಾಳೆ ಎಲ್ಲೂ ಕೆಲಸ ಸಿಗದೆ ಹೋದ್ರೆ ನನ್ನ ಬದುಕು, ನನ್ನ ಹೆಂಡ್ತಿ, ಮಕ್ಕಳು ಅನ್ನೋ ಆಲೋಚನೆ. ಹೀಗಾಗಿ ತನ್ನ ತನವನ್ನು ಮಾರಿಕೊಂಡು ಆತ ದಿನ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಾನೆ. ಲಾಭ ಆಗುವ ವ್ಯಕ್ತಿಗಳಿಗೆ ದಿನಕ್ಕೆ ಮೂರು ಸಲ ನಮಸ್ಕಾರ ಹಾಕ್ತಾನೆ. ಮನುಷ್ಯ ಎಷ್ಟು ಸ್ವಾರ್ಥಿ ಅಂದ್ರೆ, ಲಾಭ ಆಗದವರಿಗೆ ಕನಿಷ್ಟ ಒಂದು ನಗುವನ್ನು ಆತ ಬೀರಲಾರ! ಅಲ್ಲೆಲ್ಲೋ ಬೀದರ್‌ನಲ್ಲಿ ರಸ್ತೆಗೆ ಟಾರ್‌ ಹಾಕುತ್ತಿರುವ ಲಂಬಾಣಿ ಮಹಿಳೆ ಇದ್ಯಾವುದರ ಪರಿವೇ ಇಲ್ಲದೆ, ಮಗುವಿನ ಕುಂಡೆ ತೊಳಿಸಲು ನೀರಿಲ್ಲದೆ, ಅಂಕಣಕೋರನ ಬರಹ ಹರಿದು ಕುಂಡೆ ಒರೆಸುತ್ತಿರುತ್ತಾಳೆ!

“ನೀನು ಏನಯ್ಯ ನೆಟ್ಟಗೆ ಬರಿಯಕ್ಕೆ ಬರಲ್ಲ, ಅವನ್ನ ನೋಡು ಜಗತ್ತಿನ ಒಂಬತ್ತನೆ ಅದ್ಭುತ ಬರಹಗಾರ. ಅವಳನ್ನು ನೋಡು, ಸ್ಕ್ರೀನ್‌ ಪ್ಲೆ ಬರೆದ್ರೆ ಹೆಂಗೆ ಇರುತ್ತೆ ಗೊತ್ತಾ? ಬರೆದ್ರೆ ಆಥರ ಬರೀಬೇಕು. ನೀವೆಲ್ಲ ವೇಸ್ಟು’ ಅಂತ ಒಂದು ಫ್ರೇಮ್‌ನಲ್ಲಿ ಯಾರೋ ಬೈತಾ ಇರ್ತಾರೆ. “ಸಾರ್‌  ನೀವೆಷ್ಟು ಅದ್ಭುತವಾಗಿ ಬರಿತೀರಿ ಸಾರ್‌. ನಾನು ನಿಮ್ಮ ಬ್ಲಾಗ್‌ ಯಾವಾಗ್ಲೂ ಓದ್ತೀನಿ. ಮೊನ್ನೆ ನಿಮ್ಮ ಪುಸ್ತಕ ಸಿಗ್ತು’ ಅಂತ ಇನ್ನೊಂದು ಫ್ರೇಮ್‌ನಲ್ಲಿ ಮತ್ತೊಬ್ಬ ಹೇಳ್ತಾ ಇರ್ತಾನೆ. ನಾನಂತೂ ಎರಡೂ ಫ್ರೇಮ್‌ನಲ್ಲೂ ನಕ್ಕು ಥ್ಯಾಂಕ್ಸ್‌ ಹೇಳ್ತೀನಿ.

‘ಅವನು ಅಷ್ಟಾವಧಾನ ಮಾಡ್ತಾನಂತೆ. ಅವನೆಷ್ಟು ಬುದ್ದಿವಂತ ಇರ್‌ಬಹುದು. ಅವ್ರು ಶತವಧಾನ ಮುಗಿಸಿ ಸಹಸ್ರಾವಧಾನವನ್ನೂ ಮಾಡಿದ್ರಂತೆ, ಖಂಡಿತ ಜಗತ್ತಿನಲ್ಲಿ ಅವರೇ ಶ್ರೇಷ್ಠರು. ಅವರು ತಲೆಯೊಳಗೆ ಏನಿದೆ ಅಂತ ನೋಡಬೇಕು. ಅವಳು ಹಾಡ್ತಾಳೆ, ಬರಿತಾಳೆ, ಪೇಂಟಿಂಗ್‌ ಮಾಡ್ತಾಳೆ, ಡ್ಯಾನ್ಸ್‌ ಗೊತ್ತಿದೆ. ಮಲ್ಟಿ ಟ್ಯಾಲೆಂಟ್‌. ನಾನು ಅವಳ ಅರ್ಧದಷ್ಟಾದ್ರು ಆಗೋದು ಹೇಗೆ. ನನ್ನ ನೆಚ್ಚಿನ ಬರಹಗಾರರ ಥರ ಕಥೆ ಬರೆಯೋದು ಹೇಗೆ’ ಅಂತ ನನ್ನ ಮನಸ್ಸು ಯೋಚಿಸ್ತಾ ಇರುತ್ತೆ.

ಇಷ್ಟೆಲ್ಲದರ ನಡುವೆ ‘ರೀ ಇಲ್ನೋಡಿ ಪೇಪರು’ ಅಂದ್ರೆ, ನಾನು ಜಗತ್ತಿನ ಏನೋ ವಿಸ್ಮಯದ ಸುದ್ದಿ ಬಂದಿರಬೇಕು ಅಂತ ತಿರುಗ್ತೀನಿ. ಕೊನೆಗೆ ನೋಡಿದ್ರೆ, ‘ಚಿನ್ನದ ರೇಟು ೨೩ ಸಾವಿರಕ್ಕೆ ಬಂದಿದೆಯಂತೆ. ನಾನೊಂದು ನಕ್ಲೇಸ್‌ ಮಾಡಿಕೊಳ್ಳಬೇಕು’ ಅಂತ ಹೆಂಡ್ತಿಯ ಕಾಮಿಡಿ ಅಪ್ಲಿಕೇಷನ್‌!

‘ಅಮ್ಮ ತಾಯಿ ೨೯ ಸಾವಿರ ಇದ್ದಾಗ ಮಾಡಿಸಿದ ಅರ್ಧ ಕೆಜಿ ಬಂಗಾರವೇ ವೇಸ್ಟು ಈಗ’ ಅಂತೇನಾದ್ರು ಅಂದ್ರೆ, ಮತ್ತದು ಹೂವಿನ ಆಂಟಿ ಥರ ಒಂದು ಗಂಟೆ ೨೨ ನಿಮಿಷದ ದೃಶ್ಯ. ಅದಕ್ಕಿಂತ ಸೈಲೆಂಟಾಗಿ ಸಂಜೆ ೫ ಗಂಟೆಗೆ ಮಲ್ಲೇಶ್ವರಂ ಹೋಗಿ ಯಾವುದೋ ಆಭರಣದಂಗಡಿಯಲ್ಲಿ ಕಾರ್ಡ್‌ ಉಜ್ಜಿ, ಸೀರೆಯುಟ್ಟ ಲಲನೆಯರತ್ತ ಕಣ್ಣು ಹಾಯಿಸಿ, ಸಿಟಿಆರ್‌ನಲ್ಲಿ ಎರಡು ದೋಸೆ ತಿಂದು ಬರೋದೆ ಎಷ್ಟೋ ಸುಖ!

‘ಸಾರ್‌ ಆ ಮನುಷ್ಯ ಎಷ್ಟು ಸ್ವಾರ್ಥಿ ಅಂದ್ರೆ, ಆಫೀಸ್‌ಗೆ ಬಂದ ಕೇಕ್‌ನ್ನು ಮನೆಗೆ ಕಳಿಸಿಬಿಡ್ತಾನೆ. ದ್ರಾಕ್ಷಿ ಬೆಳೆಗಾರರದಿಂದ ಹಣ್ಣು ಪೀಕಿ, ಅದನ್ನು ಆಫೀಸ್‌ಗೆ ಗೊತ್ತಾಗದಂತೆ ಕಾರಿನ ಡಿಕ್ಕಿಗೆ ಹಾಕಿಸಿದ. ನಾನು ಡಿಕ್ಕಿಗೆ ಹಾಕಿದೆ ಎಂಬ ಕೃತಜ್ಞತೆಗೂ ಒಂದು ಹಣ್ಣು ಕೊಡಲಿಲ್ಲ’ ಅನ್ನುತ್ತಿದ್ರು ಅವ್ರು. ಬದುಕು ಇರೋದೆ ಇಲ್ಲಿ. ಕೋಟಿ ಮಾಡಿದವನ ಪಕ್ಕ ಎರಡು ಕೋಟಿ ಮಾಡಿದವನು ಸಿಗ್ತಾನೆ. ಬುದ್ಧಿವಂತನ ಎದ್ರಿಗೆ ಇನ್ನೊಬ್ಬ ಅತಿ ಬುದ್ಧಿವಂತ. ಅಂದ್ರೆ ಇಂಥ ಹೋಲಿಕೆಗೆ, ಸಮರಕ್ಕೆ ಅಂತ್ಯವಿಲ್ಲ.

ಕನಿಷ್ಠ ಮಾನವೀಯತೆ, ವಾಸ್ತವ ಸ್ಥಿತಿಯ ಅರಿವು, ಎರಡು ಜನವಾದ್ರು ಬದುಕಿದ್ರೆ ಅವನ ಥರ ಬದುಕಬೇಕು ಅನ್ನೋ ಹಾಗೆ ಬದುಕುಬೇಕು ಅಲ್ವಾ? ಬದುಕಿನ ಎಲ್ಲ ಸಮರಗಳು ಕಳೆದು ಈ ಅಂಶ ಅರ್ಥವಾಗುವಾಗ ನಮಗೆ ೬೨ ವರ್ಷದ ಮೂರು ತಿಂಗಳು ಆಗಿರುತ್ತೆ! ಹಾಗಾಗಿಯೇ ಮಠದಲ್ಲಿ, ಸೇವೆ ಮಾಡುವ ಕ್ಷೇತ್ರಗಳಲ್ಲೆಲ್ಲ ನಮಗೆ ತೀರ ವಯಸ್ಸಾದವರೇ ಕಾಣಿಸುವುದು.

ಇವಿಷ್ಟು ಓದಿದ ಮೇಲೆ ಏನು ಸಿಕ್ಕಿಲ್ಲ, ಏನು ಅರ್ಥವಾಗಿಲ್ಲ ಅಂತ ಬೈಕೊಬೇಡಿ. ಯಾಕಂದ್ರೆ ಹೀಗೆ ಬರೆಯುವುದು ನನ್ನ ಬದುಕಿನ ಇನ್ನೊಂದು ಫ್ರೇಂ! ಇಂಥ ಸುಂದರ ಬದುಕಿಗೊಂದು ಜೈಹೋ.

Facebook ಕಾಮೆಂಟ್ಸ್

ಲೇಖಕರ ಕುರಿತು

Vinayaka Kodsara

ಅದ್ಯಾಕೊ ಗೊತ್ತಿಲ್ಲ, ನನ್ನ ದೇಶ, ನನ್ನ ಊರು, ನನ್ನ ಅಪ್ಪ, ಅಮ್ಮ ಅಂದ್ರೆ ನನಗೆ ಮೊದಲಿನಿಂದಲೂ ಪ್ರೀತಿ. ಶಿವರಾಮ ಕಾರಂತರ ‘ಹುಚ್ಚು ಮನಸಿನ ಹತ್ತು ಮುಖಗಳು’ ಬದುಕಿನ ಕುರಿತಾಗಿ ನನಗೊಂದು ಕನಸು ಕಟ್ಟಿಕೊಟ್ಟ ಕೃತಿ. ಕಂಡಿದ್ದನ್ನು ಕಂಡ ಹಾಗೆ ಹೇಳೋದು ನನ್ನ ಸ್ವಭಾವ. ಹಾಗಾಗಿ ಕಾರಂತರು, ಓಶೋ ರಜನೀಶ, ಎಸ್.ಎಲ್ ಭೈರಪ್ಪ, ಪೂರ್ಣಚಂದ್ರ ತೇಜಸ್ವಿ…ನನ್ನಿಷ್ಟದ ಲೇಖಕರು. ನಿದ್ದೆ ಮಾಡುವುದು ಅಂದರೆ ಪಂಚಪ್ರಾಣ. ಓದು, ಯಕ್ಷಗಾನ, ಸಂಗೀತ…ಇವೆಲ್ಲ ಒಂಟಿತನದಿಂದ ನನ್ನನ್ನು ಕೆಲ ಕಾಲ ದೂರ ಇಡುತ್ತವೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!