ಅಂಕಣ

ಪರಿಸರ ಗಣಪನ ಪರಿಪರಿಯ ಕೋರಿಕೆ…!

ಅಬ್ಬಾ.. ಕಾಲ ಅದೆಷ್ಟು ಬೇಗ ಸರಿದು ಹೋಯಿತು..! ಮೊನ್ನೆ ಮೊನ್ನೆಯಷ್ಟೇ ನನ್ನ ಜನ್ಮದಿನೋತ್ಸವ ಕಳೆದು ಇದೀಗ ಮತ್ತೊಂದು ಹುಟ್ಟುಹಬ್ಬ.! ನಿಮಗೆಲ್ಲಾ ನಿನ್ನ ಜನ್ಮದಿನವೆಂದರೆ ತುಂಬಾ ತುಂಬಾ ಸಡಗರ ತಾನೇ? ಆದರೆ ನನಗೆ ಮಾತ್ರ ನನ್ನ ಜನ್ಮದಿನ ಸಮೀಪಿಸುತ್ತಿದ್ದಂತೆಯೇ ಅದೇನೋ ಚಡಪಡಿಕೆ, ಆತಂಕ, ಅಸಹ್ಯಕರ ಭಾವ ಮನದಾಳದಿಂದ ಪುಟಿದೇಳುತ್ತದೆ. ಎಲ್ಲರಿಗೂ ಅವರವರ ಹುಟ್ಟುಹಬ್ಬ ಸಂತಸಕರವಾಗಬೇಕು ತಾನೇ, ಮತ್ತೆ ನನ್ನೊಳಗೆ ಮಾತ್ರ ಇಂತಹ ನಿರಾಶಾವಾದ ಯಾಕೆಂದು ನಿಮಗೆ ಕುತೂಹಲವಿರಬಹುದು. ಅದಕ್ಕೂ ಕಾರಣವಿದೆ, ಅದೊಂದು ದೊಡ್ಡಕಥೆ. ಅಯ್ಯೋ! ಇಷ್ಟಕ್ಕೂ ನಾನ್ಯಾರು ಅನ್ನುವುದನ್ನು ಪರಿಚಯಿಸಲೇ ಇಲ್ಲವಲ್ಲಾ.? ಅಂದಹಾಗೆ ಕೈಲಾಸವಾಸಿ ಪಾರ್ವತಿ ಪರಮೇಶ್ವರರ ಸುಪುತ್ರರಲ್ಲಿ ನಾನೂ ಒಬ್ಬ. ಭಾದ್ರಪದ ಶುಕ್ಲದ ಚೌತಿಯ ಪುಣ್ಯದಿನವೇ ನನ್ನ ಜನ್ಮದಿನ.! ಹಾಂ.!! ನಾನೇ..ಗಜಮುಖ, ಲಂಬೋದರ, ವಿನಾಯಕ, ವಿಘ್ನೇಶ, ಮುಂತಾದ ನಾಮಾಂಕಿತಗಳಿಂದ ಅರ್ಚಿಸಲ್ಪಡುತ್ತಿರುವ ನಿಮ್ಮ ಮೆಚ್ಚಿನ ಗಣಪತಿ.! ಸಮಾಜದಲ್ಲಿ ಒಂದಷ್ಟು ಜಾಗೃತಿ ಮೂಡಿಸುವ ಸಲುವಾಗಿ ನಾನೀಗ ಪರಿಸರ ಗಣಪ.

ನನ್ನ ಜನ್ಮದಿನಕ್ಕಾಗಿ ಎಲ್ಲಾ ಕಡೆಯೂ ಭರದ ಸಿದ್ಧತೆಗಳು ನಡೆಯುತ್ತಿದೆ. ಅಂದ ಹಾಗೆ ನನ್ನ ಬೇಸರಕ್ಕೆ ಕಾರಣವೇನೆಂದು ಯೋಚಿಸುತ್ತಿದ್ದೀರಾ? ನೋಡಿ, ನನ್ನ ಜನ್ಮರಹಸ್ಯ ನಿಮಗೆಲ್ಲಾ ತಿಳಿದೇ ಇದೆ. ನಾನು ನಿಮ್ಮಂತೆ ಸಹಜ ಪ್ರಕ್ರಿಯೆಯಿಂದ ಹುಟ್ಟಿಬಂದವನಲ್ಲ.! ನೀವೆಲ್ಲಾ ಬಾಲ್ಯದಲ್ಲಿ ಮಣ್ಣಿನ ಮೇಲೆ ಹೊರಳಾಡಿದ್ದೀರಿ, ಆಟವಾಡಿದ್ದೀರಿ, ಆಸರೆ ಪಡೆದಿದ್ದೀರಿ. ಆ ಕಾರಣಕ್ಕಾಗಿಯೇ ನಿಮ್ಮ ಬಾಲ್ಯದ ನೆನಪಾದಾಗ ನಿಮಗೆ ಆ ಮಣ್ಣಿನ ಮೇಲೆ ಅಗಾಧವಾದ ಪ್ರೀತಿ ಉಕ್ಕಿ ಬರುತ್ತದೆ ನಿಜ. ಆದರೆ ನಾನಾದರೋ ನಿಮ್ಮಂತೆ ಕೇವಲ ಮಣ್ಣಿನ ಜೊತೆ ಆಟವಾಡುತ್ತಾ ಬೆಳೆದದ್ದು ಮಾತ್ರವಲ್ಲ, ನನ್ನ ದೇಹ ಕೂಡ ಅದೇ ಮಣ್ಣಿನಿಂದಲೇ ರೂಪಗೊಂಡದ್ದೆಂದು ನಿಮಗೆ ನೆನಪಿದೆಯೇ? ಹೌದು, ನನ್ನಮ್ಮನ ಮೈಮೇಲಿನ ಬೆವರಿಗಂಟಿದ ಮಣ್ಣಿನ ಕಣಕಣಗಳಿಂದಲೇ ಮನುಷ್ಯ ರೂಪ ತಳೆದು ಅದಕ್ಕೆ ಜೀವತುಂಬಿಕೊಂಡು ಅವತರಿಸಿಬಿಟ್ಟವನು ನಾನು. ಆಮೇಲೆ ಅದೇನೋ ಕಾರಣಕ್ಕೆ ನನ್ನಪ್ಪ ನನ್ನ ತಲೆಯನ್ನು ಕತ್ತರಿಸಿ ಆನೆಯ ತಲೆಯನ್ನು ಜೋಡಿಸಿದ್ದು, ಮೊದಲ ಪೂಜೆ ಪಡೆಯುವಂತೆ ಮಾಡಿದ್ದು, ಹೊಟ್ಟೆ ಬಿರಿದಾಗ ಸರ್ಪವನ್ನು ಸುತ್ತಿಕೊಂಡದ್ದು, ಚಂದ್ರನ ಮೇಲಿನ ಕೋಪದಿಂದ ಹಲ್ಲನ್ನು ಮುರಿದುಕೊಂಡದ್ದು, ಎಲ್ಲವೂ ನಿಮಗೆ ಗೊತ್ತೇ ಇದೆ.! ಅದಿರಲಿ, ಕೇವಲ ಮಣ್ಣಿನಲ್ಲಿ ಆಟವಾಡಿದ್ದೀರಿ ಅನ್ನುವ ಕಾರಣಕ್ಕೆ ನಿಮಗೆ ಆ ಮಣ್ಣಿನ ಮೇಲೆ ಅಷ್ಟೊಂದು ಪ್ರೀತಿ ಇರುವುದಾದರೆ, ಇನ್ನು ಅದೇ ಮಣ್ಣಿನಿಂದಲೇ ದೇಹವನ್ನು ಪಡೆದ ನನಗೆಷ್ಟು ಪ್ರೀತಿಯಿರಬೇಡ? ಹೌದು, ನನಗೆ ಮಣ್ಣೆಂದರೆ ಪಂಚಪ್ರಾಣ, ಅದರೊಂದಿಗೆ ಜನ್ಮತಃ ಅವಿನಾಭಾವ ಸಂಬಂಧ. ಇದನ್ನೆಲ್ಲಾ ಈಗೇಕೆ ಹೇಳುತ್ತಿದ್ದೇನೆ ಗೊತ್ತಾ? ಅದೇ ನಾಡಿದ್ದು ಚೌತಿಯ ದಿನ ನನ್ನನ್ನು ಆವಾಹಿಸಿ ಪೂಜಿಸುವುದಕ್ಕಾಗಿಯೇ ಬಗೆಬಗೆಯ ಮೂರ್ತಿಗಳನ್ನು ಪ್ರತಿಷ್ಟಾಪಿಸುತ್ತಾರಲ್ಲಾ, ಅದನ್ನು ಯಾವುದರಿಂದ ತಯಾರಿಸುತ್ತಾರೆ ಹೇಳಿ.? ಅಷ್ಟು ಸಡಗರದಿಂದ ಓಡೋಡಿ ಬರುವ ನಾನು ಪ್ಲಾಸ್ಟರ್ ಆಪ್ ಪ್ಯಾರೀಸ್ ನ ಭವ್ಯ ಮೂರ್ತಿಯನ್ನು ಕಂಡಾಗ ಅದೆಷ್ಟು ನೊಂದುಕೊಳ್ಳುತ್ತೇನೆ ಗೊತ್ತಾ? ಮಣ್ಣಿನಿಂದಲೇ ಜನ್ಮತಳೆದ ನನಗೆ ಪ್ಲಾಸ್ಟರ್ ಆಪ್ ಪ್ಯಾರೀಸ್ ನ ಮೂರ್ತಿಯೊಳಗೆ ಆವಾಹನೆಗೊಳ್ಳಲು ಮನಸ್ಸಾದರೂ ಬಂದೀತೆ? ಇನ್ನು ಆ ನನ್ನ ವಿಗ್ರಹದ ಮೇಲೆ ವಿಷಪೂರಿತ ಬಣ್ಣಗಳನ್ನು ಲೇಪಿಸುವಾಗ ನನ್ನ ಮೈ ಅದೆಷ್ಟು ಉರಿಯುತ್ತದೆಯೆಂದು ಊಹಿಸಿದ್ದೀರಾ? ವಾರಗಟ್ಟಲೆ ನೀವು ನನ್ನನ್ನು ಪೂಜಿಸುವಾಗ ಮೈಮೇಲಿನ ಉರಿಯನ್ನು ಸಹಿಸಿಕೊಳ್ಳುತ್ತಾ ಕೂರುವುದಾದರೂ ಹೇಗೆ ತಾನೆ ಸಾಧ್ಯ.? ವಿಸರ್ಜನೆಯ ಬಳಿಕವಾದರೂ ನೀರಿನಲ್ಲಿ ಮುಳುಗಿ ದೇಹದ ಉರಿಯನ್ನು ತಣಿಸಿಕೊಳ್ಳೋಣವೆಂದರೆ ಪ್ಲಾಸ್ಟರ್ ಆಪ್ ಪ್ಯಾರೀಸ್ ನಿಂದ ನಿರ್ಮಾಣಗೊಂಡ ನನ್ನ ಮೂರ್ತಿ ಮುಳುಗುವುದೇ ಇಲ್ಲ.! ಕೊನೆಗೆ ನನ್ನ ಅಂಗಾಂಗಗಳನ್ನು ಛಿದ್ರಗೊಳಿಸಿ ನನ್ನನ್ನು ಮುಳುಗಿಸುವ ದೃಶ್ಯವಂತೂ ಅತ್ಯಂತ ನೋವಿನ ಸಂಗತಿ. ಮಣ್ಣಿನ ತಳಭಾಗವನ್ನು ಕಾಣುತ್ತಿದ್ದಂತೆಯೇ ಆ ಮಣ್ಣಿನ ಜೊತೆ ನನ್ನ ದೇಹವನ್ನು ಒಂದಾಗಿಸಿ ನನ್ನಮ್ಮನನ್ನು ಕಾಣುವ ತವಕ ಅತಿಯಾಗುತ್ತದೆ. ಆದರೆ ಮಣ್ಣಿನಲ್ಲಿ ಒಂದಾಗದ ಆ ಪ್ಲಾಸ್ಟರ್ ಆಪ್ ಪ್ಯಾರೀಸ್ ನ ನನ್ನ ಮೂರ್ತಿ ನೀರಿನಲ್ಲಿ ಕರಗುವುದೇ ಇಲ್ಲ.! ನನ್ನ ಮೈಮೇಲೆ ನೀವು ಲೇಪಿಸಿದ ವಿಷಪೂರಿತ ರಾಸಾಯನಿಕ ಬಣ್ಣ ನೀರಿನೊಂದಿಗೆ ಬೆರೆಯುತ್ತಿದ್ದಂತೆಯೇ ಜಲಚರಗಳೆಲ್ಲಾ ಪ್ರಾಣಸಂಕಟದಿಂದ ವಿಲವಿಲನೆ ಒದ್ದಾಡುತ್ತವೆ. ಅಯ್ಯೋ.. ನನ್ನಿಂದಾಗಿ ಪರಿಸರ ಈ ರೀತಿ ಕಲುಷಿತಗೊಳ್ಳುವುದಾದರೆ ನಾನು ಖುಷಿಯಿಂದಿರಲು ಸಾಧ್ಯವೇ.? ಈ ಕಾರಣಕ್ಕಾಗಿಯೇ ನನಗೆ ಮಣ್ಣಿನ ಮೂರ್ತಿಯ ಮೇಲೆಯೇ ವಿಪರೀತ ವ್ಯಾಮೋಹ. ಮಣ್ಣಿನ ಮೂರ್ತಿಗೆ ರಾಸಾಯನಿಕವಲ್ಲದ ಬಣ್ಣಗಳನ್ನು ಲೇಪಿಸಿ ಪೂಜಿಸುವ ಭಕ್ತರನ್ನು ಕಂಡರಂತೂ ಎಲ್ಲಿಲ್ಲದ ಅಕ್ಕರೆ, ಪ್ರೀತಿ.! ನಾನು ಮೂಷಿಕವಾಹನ ಅನ್ನುವುದು ಗೊತ್ತಿದ್ದರೂ ಕೆಲವರು ನನ್ನನ್ನು ಸ್ಕೂಟರ್ ಮೇಲೆ ಕುಳಿತ ಭಂಗಿಯಲ್ಲಿ ಚಿತ್ರಿಸಿ ವಿರೂಪಗೊಳಿಸುತ್ತಾರೆ. ಕೆಲವರು ನನ್ನನ್ನು ಷಟಲ್ ಆಡುವಂತೆ, ಕ್ರಿಕೆಟ್ ಆಡುವಂತೆ, ಕನ್ನಡಕ ತೊಟ್ಟಂತೆ ಜಾಹೀರಾತಿನಲ್ಲಿ ವಿರೂಪಗೊಳಿಸಿ ಅಪಹಾಸ್ಯ ಮಾಡುವಾಗಲಂತೂ ನನ್ನಮ್ಮನ ಸೆರಗ ಮರೆಯಲ್ಲಿ ಕುಳಿತು ಅತ್ತೇ ಬಿಡುತ್ತೇನೆ.!

ಹಿಂದೊಮ್ಮೆ ನಾನು ಮನೆಮನೆಯಲ್ಲಿ ಪೂಜಿಸಲ್ಪಡುತ್ತಿದ್ದವನು ಬೀದಿಗೆ ಬಂದದ್ದು ಒಂದು ಒಳ್ಳೆಯ ಉದ್ದೇಶಕ್ಕಾಗಿಯೇ. ಆ ಉದ್ದೇಶ ಸಾಧನೆಗಾಗಿ ನನ್ನನ್ನು ಸಾರ್ವಜನಿಕವಾಗಿ ಪ್ರತಿಷ್ಟೆ ಮಾಡಿದ ಕೀರ್ತಿ ಸಲ್ಲುವಂತದ್ದು ಲೋಕಮಾನ್ಯ ಬಾಲಗಂಗಾಧರನಾಥ ತಿಲಕರಿಗೆ.! ಚೌತಿಯ ನೆಪದಲ್ಲಿ ಸಾತ್ವಿಕ ಬಂಧುಗಳೆಲ್ಲಾ ಜೊತೆ ಸೇರಿ ರಾಷ್ಟ್ರೀಯ ವಿಚಾರಗಳನ್ನು ಜನರಿಗೆ ತಲುಪಿಸಬೇಕು, ಈ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಬೇಕು, ಈ ನೆಲದ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸುವಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆ ವೇದಿಕೆಯಲ್ಲಿ ಹಮ್ಮಿಕೊಳ್ಳಬೇಕೆನ್ನುವುದು ತಿಲಕರ ಕನಸಾಗಿತ್ತು. ಆದರೆ ಇಂದು ಕೆಲವು ಕಡೆ ಅದೇ ವೇದಿಕೆಯಲ್ಲಿ ರಾಷ್ಟ್ರೀಯ ವಿಚಾರ ಒಂದನ್ನು ಬಿಟ್ಟು ಬೇರೆಲ್ಲಾ ಕಾರ್ಯಕ್ರಮ ಆಯೋಜಿಸುತ್ತಾರೆ. ಒಂದೆಡೆ ನನ್ನ ಮೂರ್ತಿಯನ್ನು ತಯಾರಿಸಲು ಪ್ರಾರಂಭಿಸುತ್ತಿದ್ದಂತೆಯೇ ಇನ್ನೊಂದೆಡೆ ಆ ಮೂರ್ತಿಯ ಮುಂದೆ ಯಾವ ಸಿನೆಮಾದ ಹಾಡಿಗೆ ಯಾವ ಹೆಜ್ಜೆ ಹಾಕಬೇಕೆನ್ನುವ ಭರ್ಜರಿ ತಯಾರಿಯೂ ನಡೆಯುತ್ತದೆ.! ಚೌತಿ ಹಬ್ಬದ ನೆಪದಲ್ಲಿ ಭಜನೆ, ಕೀರ್ತನೆ, ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯದಿಂದ ಪುಳಕಿತನಾಗಲು ನಾನು ಕಾತರದಿಂದ ಓಡೋಡಿ ಬರುತ್ತೇನೆ. ಆದರೆ ಪೆಂಡಾಲ್ ನ ಅಡಿಯಲ್ಲಿ ನನ್ನನ್ನು ಕುಳ್ಳಿರಿಸಿ ಪಕ್ಕದಲ್ಲೇ ಅಶ್ಲೀಲ ಸಿನೆಮಾ ಹಾಡಿಗೆ ನೀವು ನರ್ತಿಸುವಾಗ ನನ್ನ ಪುಟ್ಟ ಪುಟ್ಟ ಕಂಗಳಲ್ಲಿ ಅದೆಷ್ಟು ಕಂಬನಿ ಸುರಿಯುತ್ತದೆಯೆಂದು ಒಮ್ಮೆಯಾದರೂ ಗಮನಿಸಿದ್ದೀರಾ?. ಕೆಲವು ವೇದಿಕೆಯಲ್ಲಿ ಧಾರ್ಮಿಕ ಪ್ರವಚನವನ್ನೇನೋ ಹಮ್ಮಿಕೊಳ್ಳುತ್ತಾರೆ, ಆದರೆ ಮರುಕ್ಷಣ ಅದೇ ವೇದಿಕೆಯಲ್ಲಿ ಅಬ್ಬರದ ಸಿನೆಮಾ ಹಾಡು ಕಿವಿತಮಟೆಯನ್ನು ತೂರಿಬರುತ್ತದೆ.! ಹಾಗಾದರೆ ಮಾಡಿದಂತಹ ಧಾರ್ಮಿಕ ಉಪದೇಶವನ್ನು ಅನುಷ್ಟಾನಗೊಳಿಸುವವರು ಯಾರು? ನೀರಿನ ಮೇಲಿಟ್ಟ ಹೋಮದಂತೆ ಆ ಉಪದೇಶವೆಲ್ಲವೂ ವ್ಯರ್ಥವೆನಿಸುವುದಿಲ್ಲವೇ.? ನನ್ನೆದುರು ಕುಳಿತ ಅರ್ಚಕರು ಶಂಖದ ಓಂಕಾರದೊಂದಿಗೆ, ಘಂಟೆಯ ನಿನಾದದೊಂದಿಗೆ, ವೇದಮಂತ್ರಘೋಷಗಳ ಮೇಳದೊಂದಿಗೆ ನನ್ನ ಗುಣಗಾನ ಮಾಡುತ್ತಿರುವುದನ್ನು ಕಿವಿತುಂಬಿಕೊಳ್ಳೋಣವೆಂದರೆ ನನ್ನ ಇಷ್ಟಗಲದ ಕಿವಿಯೊಳಗೆ ಕರ್ಕಶ ಸಿನೆಮಾ ಹಾಡುಗಳೇ ತೂರಿಬರುತ್ತವೆ.! ಪಾಪ, ಆ ಗದ್ದಲದ ನಡುವೆಯೂ ಏಕಾಗ್ರತೆಯಿಂದ ನನ್ನನ್ನು ಅರ್ಚಿಸಲಾಗದೆ ಮನೋಚಾಂಚಲ್ಯದಿಂದ ಒದ್ದಾಡುವ ಅರ್ಚಕರನ್ನು ಕಂಡಾಗ ನಾನು ಮತ್ತಷ್ಟು ತಳಮಳಗೊಳ್ಳುತ್ತೇನೆ. ನನ್ನನ್ನು ಪ್ರತಿಷ್ಟಾಪಿಸಿದ ಪರಿಸರದ ತುಂಬಾ ನನ್ನ ದಿವ್ಯತೆಯೇ ತುಂಬಿರುತ್ತದೆ. ಆದರೆ ನನ್ನ ನಾಮಸ್ಮರಣೆಯೊಂದಿಗೆ ಆ ದಿವ್ಯ ಸ್ಪಂದನವನ್ನು ಅನುಭವಿಸುವ ಬದಲು ನನ್ನತ್ತ ಕಿಂಚಿತ್ತೂ ಗಮನಹರಿಸದೆ ಕೆಲವರೆಲ್ಲಾ ಮೋಜು ಮಸ್ತಿಯಲ್ಲೇ ಮುಳುಗಿಬಿಡುತ್ತಾರೆ. ಯಾರದೋ ಮನೆಗೆ ಅಪರೂಪಕ್ಕೊಮ್ಮೆ ಅತಿಥಿಯಾಗಿ ಹೋದ ನಿಮ್ಮನ್ನು ಮಾತನಾಡಿಸದೇ ಆ ಮನೆಯವರು ಅವರ ಪಾಡಿಗೇ ಇದ್ದುಬಿಟ್ಟರೆ ನಿಮಗೆ ಮುಜುಗರವಾಗುವುದಿಲ್ಲವೇ.? ಚೌತಿಯ ಸಂದರ್ಭದಲ್ಲೂ ಅಪರೂಪದ ಅತಿಥಿಯಾಗಿ ನಿಮ್ಮಲ್ಲಿಗೆ ಬರುವ ನನ್ನ ಬಗ್ಗೆ ಗಮನಹರಿಸದೇ ಸಿನೆಮಾ ಹಾಡಿನ ಗುಂಗಿನಲ್ಲೇ ಮುಳುಗಿರುವ ಕೆಲವರನ್ನು ಕಂಡಾಗ ನನಗೂ ಅದೇ ರೀತಿಯ ಮುಜುಗರವಾಗುತ್ತದೆ.! ಪಾಪ, ಅದಾವುದೋ ಕಾಣದ ಲೋಕದಲ್ಲಿ ಕುಳಿತು ಇದನ್ನೆಲ್ಲಾ ನೋಡುತ್ತಿರುವ ತಿಲಕರು ಅದೆಷ್ಟು ವ್ಯಥೆ ಪಡುತ್ತಾರೋ!

ಸರಿ, ಕೊನೆಯ ದಿನ ವಿಸರ್ಜನೆಗೆಂದು ಆಡಂಬರದ ಮೆರವಣಿಗೆಯಲ್ಲಿ ನನ್ನನ್ನು ಕರೆದೊಯ್ಯುತ್ತಾರೆ. ಆಗಲಾದರೂ ನನಗೆ ನೆಮ್ಮದಿಯಿದೆಯೇ.? ಕೆಲವರು ನನ್ನ ಮುಂದೆಯೇ ಕುಡಿದು ನಶೆಯೇರಿಸಿ ತೂರಾಡುತ್ತಾ ನರ್ತಿಸುವುದನ್ನು ಕಂಡಾಗ ತುಂಬಾ ಅಸಹ್ಯವೆನಿಸಿಬಿಡುತ್ತದೆ. ಧೂಪಗಂಧಗಳ ಸುವಾಸನೆಯನ್ನು ಆಘ್ರಾಣಿಸುವುದಕ್ಕಾಗಿ ನನ್ನ ಉದ್ದನೆಯ ಸೊಂಡಿಲನ್ನೆತ್ತಿದಾಗ ಮದ್ಯದ ವಾಸನೆಯೇ ಮೂಗಿಗೆ ಬಡಿದು ವಾಕರಿಕೆ ಬಂದುಬಿಡುತ್ತದೆ.! ಅಂತಹ ಪರಿಸರದಲ್ಲಿ ಭಕ್ತಿ ಭಾವವನ್ನು ಉದ್ಧೀಪನಗೊಳಿಸಲು ಸಾಧ್ಯವೇ.? ಪಾಪ, ಇದನ್ನೆಲ್ಲಾ ನೋಡುತ್ತಿರುವ ನಿಮ್ಮ ಮನೆಯ ಪುಟ್ಟ ಪುಟ್ಟ ಕಂದಮ್ಮಗಳ ಮನಸ್ಸಿನಲ್ಲಿ ಬದಲಾಗುತ್ತಿರುವ ಭಾವನೆಗಳ ಕುರಿತು ಚಿಂತಿಸಿದ್ದೀರಾ? ‘ಚೌತಿಯೆಂದರೆ ಕುಡಿದು ತೂರಾಡುತ್ತಾ ಗಣಪತಿಯ ಮುಂದೆ ಸಿನೆಮಾ ಹಾಡಿಗೆ ನರ್ತಿಸುವುದು’ ಅನ್ನುವ ತಪ್ಪು ಕಲ್ಪನೆ ಆ ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿಬಿಡುವುದಿಲ್ಲವೇ.! ಅಯ್ಯೋ.., ನನ್ನ ಹುಟ್ಟುಹಬ್ಬದಿಂದ ಮುಂದಿನ ಪೀಳಿಗೆಗೆ ಇಂತಹ ತಪ್ಪು ಸಂದೇಶ ರವಾನೆಯಾಗುವುದನ್ನು ನಾನಾದರೋ ಹೇಗೆ ಸಹಿಸಲಿ. ಇದನ್ನೆಲ್ಲಾ ಕಂಡ ಮೇಲೂ ಕೃಪೆ ಹರಿಸುವುದಾಗಲೀ, ಶ್ರದ್ಧೆ, ಸಭ್ಯತೆಯಿಲ್ಲದ ಪೂಜೆಗೆ ನಾನು ಒಲಿದು ಬರುವುದಾಗಲೀ ಹೇಗೆ ತಾನೇ ಸಾಧ್ಯ? ವಿಘ್ನನಿವಾರಕನಾದರೂ ಕೆಲವು ಸಲ ನಾನು ವಿಘ್ನಕಾರಕನಾಗುವುದು ಇದೇ ಕಾರಣಕ್ಕೆ.!

ಇರಲಿ, ನನಗೂ ಗೊತ್ತಿದೆ. ಒಮ್ಮಿಂದೊಮ್ಮೆಲೇ ಇದನ್ನೆಲ್ಲಾ ಬದಲಾಯಿಸಲು ಸಾಧ್ಯವಿಲ್ಲ. ಈ ವರ್ಷದ ಹಬ್ಬದ ಸಿದ್ಧತೆಯೂ ಅದಾಗಲೇ ಪ್ರಾರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿಯಾದರೂ ಬದಲಿಸಬಹುದಲ್ಲವೇ.? ರಾಷ್ಟ್ರೀಯ ವಿಚಾರಗಳು, ಸಂಸ್ಕೃತಿ ಸಂಸ್ಕಾರಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕ ಗಣೇಶೋತ್ಸವದ ‘ಮೂಲ ಉದ್ಧೇಶ’ಕ್ಕೆ ಮರಳಬಹುದಲ್ಲವೇ.? ಕೊನೆಯದಾಗಿ ನನ್ನ ಕೋರಿಕೆಯಿಷ್ಟೇ.. “ನನ್ನ ಹುಟ್ಟುಹಬ್ಬದ ನೆಪದಲ್ಲಿ ಪ್ರಕೃತಿ ಕಲುಷಿತಗೊಳ್ಳದಿರಲಿ, ಅದರ ಜೊತೆಗೆ ಸಂಸ್ಕೃತಿಯೂ ಕಲುಷಿತಗೊಳ್ಳದಿರಲಿ…!!” ಆಗ ಮಾತ್ರ ‘ಪರಿಸರ ಗಣಪ’ನೆಂದು ಕರೆಸಿಕೊಳ್ಳಲು ನನಗೆ ನೈತಿಕ ಅರ್ಹತೆ ಒದಗಿ ಬರುತ್ತದೆ..!!

Facebook ಕಾಮೆಂಟ್ಸ್

ಲೇಖಕರ ಕುರಿತು

Udayabhaskar Sullia

ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ಜನಿಸಿದ್ದು ಪ್ರಸ್ತುತ ಸುಳ್ಯದಲ್ಲಿ ವಾಸ್ತವ್ಯ. ಜೀವನ ನಿರ್ವಹಣೆಗಾಗಿ ಸ್ವ ಉದ್ಯೋಗ ಹೊಂದಿರುತ್ತೇನೆ. ದೇಶಭಕ್ತಿಯ ಭಾಷಣ, ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದು, ಹಳೆಯ ಸಿನೆಮಾ ಹಾಡು, ಭಾವಗೀತೆ, ಭಕ್ತಿಗೀತೆಗಳನ್ನು ಆಲಿಸುವುದು, ಸಮಾಜಸೇವೆ, ಸದ್ವಿಚಾರ ಪ್ರಸಾರ... ಇವು ನನ್ನ ಆಸಕ್ತಿಯ ಕ್ಷೇತ್ರಗಳು. ಭಜನೆ ಹಾಡುವುದು, ಕವನ ರಚನೆ, ಸಾಮಾಜಿಕ-ದೇಶಭಕ್ತಿ- ಸಂಸ್ಕೃತಿಗಳ ಕುರಿತಾದ ಚಿಕ್ಕಪುಟ್ಟ ಲೇಖನಗಳನ್ನು ಬರೆಯುವುದು ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಸದ್ಗ್ರಂಥಗಳ ಅಧ್ಯಯನ.. ಇವು ನನ್ನ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!