ಅಂಕಣ

2+2 = 5!

ವಿನ್’ಸ್ಟನ್ ಸ್ಮಿತ್ ಲಂಡನ್ನಿನಲ್ಲಿ ಸರಕಾರಿ ಕೆಲಸದಲ್ಲಿರುವ, 39ರ ಹರೆಯದ ತರುಣ. ತಿಂಗಳ ಕೊನೆಗೆ ಕೈತುಂಬುವ ಸಂಬಳ, ನೆಚ್ಚಿನ ಕೆಲಸ, ಮಡದಿ ಮಕ್ಕಳು,ಚೆಂದದೊಂದು ಮನೆ, ಅಡ್ಡಾಡಲು ಗೆಳೆಯರು, ಮನರಂಜನೆಗೆ ನಾಟಕ, ಸಿನೆಮಾ, ಹಾಡುಹಸೆ – ಹೀಗೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂಬ ರೀತಿಯಲ್ಲಿಅವನು ಇರಬಹುದಾಗಿತ್ತು. ಆದರೆ ವಿನ್’ಸ್ಟನ್ ರಾಜ್ಯದಲ್ಲಿ ಬಿಗ್ ಬ್ರದರ್’ನ ಆಡಳಿತ ಇದೆ. ಈ ದೊಡ್ಡಣ್ಣನ ಪ್ರಕಾರ ರಾಜ್ಯದ ಯಾವುದೇ ಪ್ರಜೆ ತನ್ನ ಅಭಿಪ್ರಾಯಹೇಳುವಂತಿಲ್ಲ; ಸಾರ್ವಜನಿಕ ಭಾಷಣ ಮಾಡುವಂತಿಲ್ಲ; ಲೇಖನಗಳನ್ನೋ ಪುಸ್ತಕಗಳನ್ನೋ ಬರೆಯುವಂತಿಲ್ಲ; ಗೆಳೆಯರೊಂದಿಗೆ ಗುಂಪು ಗೂಡುವಂತಿಲ್ಲ. ಅವನಮನರಂಜನೆಗಾಗಿ ಸರಕಾರವೇ ನಾಟಕ, ಟಿವಿ ಕಾರ್ಯಕ್ರಮಗಳ ಆಯೋಜನೆ ಮಾಡುತ್ತದೆ. ಅವನು ಯಾವುದನ್ನು ಓದಬೇಕು ಎನ್ನುವುದನ್ನು ನಿರ್ಧರಿಸುವವರುಸರಕಾರದ ಅಧಿಕಾರಿಗಳೇ. ರಾಜ್ಯದ ಎಲ್ಲ ಬೀದಿಗಳಲ್ಲಿ, ಮನೆಗಳಲ್ಲಿ ಮತ್ತು ಮನೆಗಳ ಬೆಡ್’ರೂಮ್, ಪಡಖಾನೆಗಳಲ್ಲಿ ಕೂಡ ಕ್ಯಾಮೆರ ಇಡಲಾಗಿದೆ. ಸರಕಾರದಆದೇಶಗಳು, ನೀತಿ ಸಂದೇಶಗಳು ನಿರಂತರವಾಗಿ ಪ್ರಜೆಗಳನ್ನು ತಲುಪುತ್ತಿರಬೇಕು ಎಂಬ ಉದ್ಧೇಶದಿಂದ ಅಲ್ಲಲ್ಲಿ ಮೈಕುಗಳನ್ನು ಅಳವಡಿಸಲಾಗಿದೆ. ಒಟ್ಟಿನಲ್ಲಿಮನುಷ್ಯ ಒಂದು ಪೂರ್ತಿ ಬೆಂದ ಆಲೂಗಡ್ಡೆಯಾಗಿದ್ದರೆ ಈ ರಾಜ್ಯದಷ್ಟು ನಿರಾಳವಾದ ಸ್ವರ್ಗ ಅವನಿಗೆ ಬೇರೆ ಇಲ್ಲ. ಯಾಕೆಂದರೆ ಸ್ವಾತಂತ್ರ್ಯ ಎನ್ನುವುದನ್ನೊಂದುಬಿಟ್ಟರೆ ಮಿಕ್ಕಿದ್ದೆಲ್ಲವನ್ನೂ ಸರಕಾರ ಅವನ ಕಾಲಕೆಳಗೆ ಧಾರಾಳವಾಗಿ ಸುರಿದಿದೆ.

ಇಂಥ ಪರಿಸ್ಥಿತಿಯಲ್ಲಿ ನಮ್ಮ ಕಥಾ ನಾಯಕ ಬದುಕುತ್ತಿದ್ದಾನೆ. ಅವನಿಗೆ ಒಂದು ದಿನ ತನ್ನದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಜೂಲಿಯಳಪರಿಚಯವಾಗುತ್ತದೆ. ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಕೊನೆಗೊಂದು ದಿನ ಸರಕಾರದ ಎಲ್ಲ ಕ್ಯಾಮೆರಗಳ ಕಣ್ಣುತಪ್ಪಿಸಿ ಅವರು ಹಳ್ಳಿಗಾಡಿನ ಪರಿಸರವೊಂದಕ್ಕೆಹೋಗುತ್ತಾರೆ. ಅಲ್ಲಿ ಅನುಭವಿಸುವ ಸ್ವಾತಂತ್ರ್ಯದ ಸುಖಕ್ಕೆ ವಿನ್’ಸ್ಟನ್ ಹುಚ್ಚನೇ ಆಗಿಬಿಡುತ್ತಾನೆ. ಜೂಲಿಯಳನ್ನು ಮನದಣಿಯೆ ಮುದ್ದಿಸುತ್ತಾನೆ. ಇಬ್ಬರೂಪರಸ್ಪರರನ್ನು ಬಿಟ್ಟಿರಲಾರೆವೆಂದೂ ಏಳೇಳು ಜನ್ಮದಲ್ಲಿ ಗಂಡಹೆಂಡಿರಾಗಿ ಹುಟ್ಟೋಣವೆಂದೂ ನಮ್ಮೆಲ್ಲ ಕಾವ್ಯ-ಸಾಹಿತ್ಯದ ಅಮರಪ್ರೇಮಿಗಳಂತೆಯೇರೋಮ್ಯಾಂಟಿಕ್ಕಾಗಿ ಭಾಷೆ ಕೊಟ್ಟುಕೊಳ್ಳುತ್ತಾರೆ. ವಿನ್’ಸ್ಟನ್’ಗೆ ಜೂಲಿಯಳ ಜೊತೆ ಹೇಗೆ ಸಲಿಗೆ ಇದೆಯೋ ಹಾಗೆಯೇ ತನ್ನ ಉನ್ನತಾಧಿಕಾರಿಯಾದಓಬ್ರಯಾನ್ ಎಂಬವನ ಜೊತೆಗೂ ಖಾಸಗಿ ವಿಷಯಗಳನ್ನು ಚರ್ಚಿಸುವಷ್ಟು ಆತ್ಮೀಯತೆ ಇದೆ. ಒಂದು ದಿನ ಓಬ್ರಯಾನ್, ಈ ಇಬ್ಬರು ಪ್ರೇಮಿಗಳನ್ನೂ ತನ್ನಮನೆಯ ಖಾಸಗಿ ಔತಣಕೂಟಕ್ಕೆ ಆಮಂತ್ರಿಸುತ್ತಾನೆ. ತನ್ನ ಹಿರಿಯ ಅಧಿಕಾರಿಗೆ ಹತ್ತಿರವಾದ ಖುಷಿಯಲ್ಲಿ ಅಂದು ವಿನ್’ಸ್ಟನ್ ತಾನೊಬ್ಬ ಕ್ರಾಂತಿಕಾರಿಯಾಗಬಯಸುವುದಾಗಿಯೂ ಈ ರಾಜ್ಯದ ಎಲ್ಲ ಕಟ್ಟುಕಟ್ಟಳೆಗಳ ವಿರುದ್ಧವೂ ಸಿಡಿದೇಳುವುದಾಗಿಯೂ ಹೇಳಿಬಿಡುತ್ತಾನೆ. ಓಬ್ರಯಾನ್ನಿಂದ ಅದಕ್ಕೆ ಧಾರಾಳವಾದಪ್ರೋತ್ಸಾಹದ ಮಾತುಗಳು ಸಿಗುತ್ತವೆ. ಅಯ್ಯೋ, ನಿನ್ನ ಹಾಗೆಯೇ ನಾನೂ ಯೋಚಿಸಿದ್ದೆನಲ್ಲೋ! ನನಗೀಗ ವಯಸ್ಸಾಯಿತು ನೋಡು. ಆದರೆ ನಿನ್ನದಿನ್ನೂಕುದಿಯುವ ರಕ್ತ. ಕ್ರಾಂತಿ ಆಗಬೇಕಾಗಿರೋದು ನಿಮ್ಮಂತಹ ಎಳೆಯರಿಂದಲೇ. ಮಾಡು, ಮಾಡು ಎಂದು ಹುರಿದುಂಬಿಸುತ್ತಾನಾತ. ಆದರೆ, ಚಕ್ರವ್ಯೂಹದೊಳಗೆಗೊತ್ತಿಲ್ಲದೆ ಬಂದು ನಿಂತುಬಿಟ್ಟಿದ್ದೇನೆಂಬ ವಾಸ್ತವ ವಿನ್’ಸ್ಟನ್’ಗೆ ತಿಳಿಯುವುದು ಆತನ ಮನೆ ಮುರಿದು ಪೋಲೀಸರು ನುಗ್ಗಿ ಬಂದು ಹಿಗ್ಗಾಮುಗ್ಗಾ ಹೊಡೆದಾಗಲೇ!ಕ್ರಾಂತಿಕಾರಿಯಾಗಲಿದ್ದ ಯುವಕ ಸರಕಾರೀ ಯಾತನಾ ಶಿಬಿರ ಸೇರುತ್ತಾನೆ. ಅಲ್ಲಿ ಅವನಿಗೆ ಪೋಲೀಸ್ ಇಲಾಖೆಯ ಎಲ್ಲ ಬಗೆಯ ರಾಜೋಪಚಾರಗಳನ್ನೂಮಾಡಿ ಜೀವಚ್ಛವ ಮಾಡಲಾಗುತ್ತದೆ. ಕರೆಂಟು ಹಾಯಿಸಲಾಗುತ್ತದೆ. ಇಲಿಗಳನ್ನು ಕಂಡರೆ ಬೆಚ್ಚಿಬೀಳುವ ವಿನ್’ಸ್ಟನ್ ಸುತ್ತ ಇಲಿಗಳನ್ನೋಡಿಸಿ ಕೊನೆಗೆ ಆತನೇ,ಇದನ್ನು ಜೂಲಿಯಳಿಗೇ ಮಾಡಿ, ನನಗೆ ತೊಂದರೆ ಕೊಡಬೇಡಿ ಎನ್ನುವ ಮಟ್ಟಕ್ಕೆ ಗೋಳು ಹೊಯ್ದುಕೊಳ್ಳಲಾಗುತ್ತದೆ. ಇವೆಲ್ಲ ಅತಿಥಿ ಸತ್ಕಾರ ಮುಗಿದ ಮೇಲೆಅವರಿಬ್ಬರನ್ನೂ ಪೋಲೀಸ್ ಇಲಾಖೆ ಬಿಟ್ಟುಬಿಡುತ್ತದೆ.

ವಿನ್’ಸ್ಟನ್ ಈಗ ಮತ್ತೆ ಸಮಾಜಕ್ಕೆ ಕಾಲಿಟ್ಟಿದ್ದಾನೆ. ಆದರೆ ಅವನೊಂದು ಜೀವಂತ ಹೆಣ. ರಸ್ತೆಯಲ್ಲಿ ನಡೆಯುತ್ತಾನೆ; ಆಫೀಸಿನಲ್ಲಿ ಕೆಲಸ ಮಾಡುತ್ತಾನೆ;ರೆಸ್ಟೊರೆಂಟಲ್ಲಿ ಜ್ಯೂಸು ಕುಡಿಯುತ್ತಾನೆ; ಸ್ನಾನ ಊಟ ನಿದ್ದೆ ಎಲ್ಲವನ್ನೂ ಮಾಡುತ್ತಾನೆ. ಇವೆಲ್ಲವನ್ನು ಮಾಡಿದರೂ ಆತನೀಗ ಯೋಚಿಸಲಾರ. ಸರಿ ತಪ್ಪುಗಳವಿಮರ್ಶೆ ಕೊಡಲಾರ. ಪತ್ರಿಕೆಯನ್ನು ಓದುವುದೂ ಟಿವಿಯಲ್ಲಿ ಬಿಗ್ ಬ್ರದರ್’ನ ಸಂದೇಶಗಳನ್ನು ಕೇಳುವುದೂ ರೇಡಿಯೋದಲ್ಲಿ ಸಂಗೀತ ಕೇಳುವುದೂ ಯಾಂತ್ರಿಕ.ಕಣ್ಣು ಕಿವಿ ನಾಲಗೆಗಳಿಗೂ ಹೃದಯಕ್ಕೂ ಸಂಪರ್ಕ ತಪ್ಪಿಹೋಗಿದೆ. ಅವನೀಗ ನಿಜವಾದ ಅರ್ಥದಲ್ಲಿ ಪೂರ್ತಿ ಬೆಂದಿರುವ ಆಲೂಗಡ್ಡೆ.

ಇದು ಜಾರ್ಜ್ ಆರ್ವೆಲ್ 1940ರ ದಶಕದಲ್ಲಿ ಬರೆದ “1984” ಎಂಬ ಕಾದಂಬರಿಯ ವಸ್ತು. ಎರಡನೆ ಮಹಾಯುದ್ಧ ಮುಗಿದು, ನಾಜಿ ಮತ್ತು ಸೋವಿಯೆಟ್ಒಕ್ಕೂಟಗಳ ರಂಪ ರಾಮಾಯಣ ಆರ್ಭಟಗಳು ತಣ್ಣಗಾದ ಮೇಲೆ ಯುದ್ಧ, ಸರಕಾರ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮುಂತಾದ ಎಲ್ಲ ಗೊಂದಲಗಳು,ಅಪಸವ್ಯಗಳು ಮತ್ತು ಸೌಕರ್ಯಗಳ ಬಗ್ಗೆ ಆಳವಾಗಿ ಯೋಚಿಸಿ ಆರ್ವೆಲ್ ಬರೆದ ಕಾದಂಬರಿ ಇದು. ಕತೆಯ ಆಳಕ್ಕೆ ಇಳಿಯುತ್ತ ಹೋದಂತೆಲ್ಲ ಎಂಥವನನ್ನೂಹಿಡಿದು ಅಲುಗಾಡಿಸಿಬಿಡುವ ಕರಾಳ ವಾಸ್ತವವನ್ನು ಆರ್ವೆಲ್ ನಮ್ಮೆದುರು ಬಿಚ್ಚಿಡುತ್ತಾ ಹೋಗುತ್ತಾನೆ. ತಮಾಷೆಯೆಂದರೆ, ಆತ ಚಿತ್ರಿಸಿದ ಕತೆಯಲ್ಲಿ, ತನ್ನಆಡಳಿತದ ಒಂದು ಭಾಗವಾಗಿ ಸರಕಾರ ಜನರಿಗೆ ಇಂಗ್ಲೀಷ್ ಭಾಷೆಯನ್ನು ಮರೆಸಿ ಹೊಸದೊಂದು ಭಾಷೆಯನ್ನು ಆವಿಷ್ಕರಿಸಿ ಅದನ್ನೇ ಬಳಸಬೇಕೆಂದು ತಾಕೀತುಮಾಡುತ್ತದೆ. ಜನರಿಗೆ ಹಳೆಯದರ ನೆನಪು ಬರಬಾರದೆಂಬ ಕಾರಣಕ್ಕೆ ಹಿಂದಿನ ಎಲ್ಲಾ ಗ್ರಂಥಗಳನ್ನೂ ಸುಟ್ಟುಹಾಕುತ್ತದೆ. ಬಿಗ್ ಬ್ರದರ್ ಒಬ್ಬನೇ ದೇವರು,ಅವನನ್ನೇ ಇಪ್ಪತ್ತನಾಲ್ಕು ತಾಸೂ ಸ್ಮರಣೆ ಮಾಡಬೇಕು ಎಂಬ ಸಂದೇಶ ಹೋಗುತ್ತದೆ. ಹಿಸ್ಟೀರಿಯವನ್ನು ಹುಟ್ಟಿಸುವುದೇ ಸರಕಾರದ ಒಂದಂಶದಕಾರ್ಯಕ್ರಮವಾಗಿದೆ. ಯಾವುದೂ ಅಂತಿಮ ಸತ್ಯವಲ್ಲ. ನಾವು ಹೇಳುವ ಸತ್ಯ-ಸುಳ್ಳು, ಪಾಪ-ಪುಣ್ಯಗಳಿಗೂ ಮಿತಿಗಳಿವೆ; ನಮ್ಮನ್ನು ಆಳುವವರು ಯಾರುಎಂಬುದರ ಮೇಲೆ ಈ ಎಲ್ಲ ಮೌಲ್ಯನಿರ್ಣಯಗಳಾಗುತ್ತವೆ ಎನ್ನುವುದನ್ನು ಆರ್ವೆಲ್ ಸೂಚ್ಯವಾಗಿ ಹೇಳುತ್ತಾನೆ. ಎರಡು ಕೂಡಿಸು ಎರಡು ಎಂದರೆ ಐದು ಕೂಡಆಗಬಹುದು; ಸರಕಾರ ಐದೇ ಎಂದು ನಿರ್ಣಯಿಸಿಬಿಟ್ಟರೆ!

ನಮ್ಮ ರಾಜ್ಯದಲ್ಲಿ, ದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡಿದಾಗ ನನ್ನನ್ನು ಆರ್ವೆಲ್ಲರ ಕೃತಿ ಕಾಡುತ್ತಿದೆ. ಪ್ರತಿ ಪಕ್ಷವೂ ತಾನು ಜನರ ರಕ್ಷಕ, ಅವರೇತನ್ನ ಅನ್ನದಾತರು, ಪ್ರಜಾ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದು ತನ್ನ ಪರಮಪವಿತ್ರ ಗುರಿ, ಅದಕ್ಕಾಗಿ ತಾನು ಆತ್ಮಾಹುತಿಯಾಗಲೂ ಸಿದ್ಧ ಎಂಬಯೂಟೋಪಿಯ ಕನಸಿನ ಪ್ರಣಾಳಿಕೆ ಹಿಡಿದು ಬರುತ್ತದೆ. ಆದರೆ, ಬಲೆಗಳನ್ನು ಹೆಣೆಹೆಣೆಯುತ್ತ ಕೊನೆಗೆ ಸರಕಾರವೇ ಅದರೊಳಗೆ ಉಸಿರುಕಟ್ಟುವಂತೆಸಿಕ್ಕಿಹಾಕಿಕೊಳ್ಳುತ್ತದೆ. ಉದಾಹರಣೆಗೆ, ಅಮೆರಿಕ ಎಂಬ ದೊಡ್ಡಣ್ಣ (ಈ ದೊಡ್ಡಣ್ಣ ಎಂಬ ಪದ ಬಂದಿರುವುದೇ ಆರ್ವೆಲ್’ರ ಕಾದಂಬರಿಯಿಂದ) ತಾನು ಇಡೀ ದೇಶದಮೇಲೆ ಕಣ್ಣಿಡಬೇಕಿದೆ; ಅದು ತನ್ನೆಲ್ಲರ ಪ್ರಜೆಗಳ ಕ್ಷೇಮದ ದೃಷ್ಟಿಯಿಂದ ಮುಖ್ಯ ಎಂದು ಹೇಳುತ್ತ ಎಲ್ಲ ದೇಶವಾಸಿಗಳ ಟೆಲಿಫೋನ್ ಮಾಹಿತಿ ಸಂಗ್ರಹಿಸುತ್ತಿತ್ತು.ಪ್ರಜೆಗಳು ಸರಕಾರದ ಕಣ್ಣುತಪ್ಪಿಸಿ ಯಾವ ಟೆಲಿಫೋನ್ ಸಂಭಾಷಣೆಗಳನ್ನೂ ನಡೆಸುವ ಹಾಗಿಲ್ಲ; ಯಾವ ಮೆಸೇಜುಗಳನ್ನೂ ಕಳಿಸುವಂತಿಲ್ಲ! ಇದು ಸ್ವಾತಂತ್ರ್ಯಅಲ್ಲ; ಅದರ ಹರಣ ಎಂದು ಜನ ಕೂಗೆಬ್ಬಿಸಿದರು. ಹಾಗೇನಿಲ್ಲ; ನೀವು ಬದುಕುಳಿಯಬೇಕಾದರೆ ನಿಮ್ಮ ಬದುಕಿನ ಎಲ್ಲಾ ವಿವರಗಳು ನಮಗೆ ಗೊತ್ತಿರುವುದು ಅತೀಅಗತ್ಯ; ವಾದ ಮಾಡಬೇಡಿ ಎಂದು ಸರಕಾರ ಕಟ್ಟಪ್ಪಣೆ ಮಾಡಿತು! ಇದು ಪ್ರಜಾಪ್ರಭುತ್ವದ ಕತೆಯಾದರೆ, ಅತ್ತ ಜನರ ನಿದ್ದೆ ಮೈಥುನಗಳನ್ನೂ ನಿರ್ಧರಿಸುವಚೀನಾ, ಉತ್ತರ ಕೊರಿಯದಂಥ ದೇಶಗಳ ಪರಿಸ್ಥಿತಿ ಯಾವ ರೀತಿ ಇರಬಹುದು, ಯೋಚಿಸುವುದು ಕಷ್ಟವಲ್ಲ. ಇವೆರಡೂ ಅತಿಗಳಿಂದ ದೂರ ನಿಲ್ಲಬೇಕೆಂದುಹೆಣಗಾಡುತ್ತ ಎಲ್ಲ ಬಗೆಯ ಸಂಕೀರ್ಣತೆಗಳನ್ನೂ ಗರ್ಭೀಕರಿಸಿಕೊಂಡಿರುವ ಭಾರತದ ಕತೆ ಹರೋಹರ! ಇಲ್ಲಿ ತಮಗಿಂಥಾದ್ದೇ ಸರಕಾರ ಬೇಕು ಎಂದು ಹಂಬಲಿಸಿಪ್ರಜೆಗಳು ಮತದಾನ ಮಾಡುತ್ತಾರೆ; ಅದಾಗಿ ಎರಡು ಮೂರು ವರ್ಷಗಳಾಗುತ್ತಲೇ, ಇಂಥ ಅಕರಾಳ ವಿಕರಾಳ ರಾಜ್ಯಭಾರವನ್ನು ನಾವು ಹಿಂದೆಂದೂಕಂಡಿರಲಿಲ್ಲ; ಇದು ಪ್ರಜಾಪ್ರಭುತ್ವದ ಅಧಃಪತನ ಎಂದು ಗೋಳಾಡುತ್ತಾರೆ. ಯಾಕೆಂದರೆ, ಆಡಳಿತದ ಚುಕ್ಕಾಣಿ ಹಿಡಿವ ಪ್ರತಿಪಕ್ಷಕ್ಕೂ ಚಿಂತಿಸುವ, ಸರಿತಪ್ಪುಗಳವಿವೇಚನೆ ಮಾಡುವ ಸಾಮರ್ಥ್ಯವಿರುವ ಆರೋಗ್ಯಪೂರ್ಣ ವಿನ್’ಸ್ಟನ್’ ಸ್ಮಿತ್’ಗಳು ಬೇಕು. ಆದರೆ, ಅದು ಮತದಾನ ಆಗುವವರೆಗೆ ಮಾತ್ರ. ಅಲ್ಲಿಂದ ಮುಂದೆ,ಒಮ್ಮೆ ಗದ್ದುಗೆ ಏರಿದ ಬಳಿಕ ಅದೇ ವಿನ್’ಸ್ಟನ್’ರನ್ನು ಈ ಸರಕಾರಗಳು ಬ್ರೈನ್ ವಾಷ್ ಮಾಡಲು ಯತ್ನಿಸುತ್ತವೆ. ಯಾಕೆಂದರೆ ತಾವು ಅಧಿಕಾರದಲ್ಲಿರುವಾಗಅವರಿಗೆ ಒಂದೊಮ್ಮೆ ಓಟು ಹಾಕಿದ್ದ ಮತದಾರ ಯೋಚಿಸುವ, ವಿವೇಚಿಸುವ ಪ್ರಾಣಿಯಾಗಿ ಉಳಿಯುವುದು ಬೇಕಾಗಿಲ್ಲ. ಹಾಗೇನಾದರೂ ಪ್ರಜೆಚಿಂತನಾಜೀವಿಯಾಗಿ ಮುಂದುವರಿದದ್ದೇ ಆದರೆ ಅದು ತಮ್ಮ ಗದ್ದುಗೆಯನ್ನು ಅಲುಗಿಸಬಹುದು; ತಮಗೇ ಪ್ರತಿಸ್ಪರ್ಧೆಯಾಗಿ ಆ ಮತದಾರ ಬೆಳೆಯಬಹುದು.ತಾನು ಚಲಾಯಿಸಿದ ಮತದಾನವೆಂಬ ಹಕ್ಕಿನ ಮೂಲಕ ಈಗ ಅವರ ಮೇಲೆಯೇ ಆತ ಅಧಿಕಾರ ಚಲಾಯಿಸಲು ಏರಿ ಬರಬಹುದು! ಹಾಗಾಗಿ ಸರಕಾರಕ್ಕೆಪ್ರಜೆಗಳನ್ನು ಆದಷ್ಟು ಬೇಗ ಶಾಕ್ ಟ್ರೀಟ್’ಮೆಂಟ್ ಕೊಡಿಸಿ ತಣ್ಣಗಾಗಿಸುವುದು ಅಗತ್ಯವಾಗುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!