ಅಂಕಣ

ಧಾರ್ಮಿಕ ಭಾವನೆಗಳಿಗೆ ಕಿಚ್ಚು ಹೊತ್ತಿಸಿದ ಕೆ.ಎಸ್ ಭಗವಾನರಿಗೆ ಅ”ಕಾಮಿಡಿ” ಪ್ರಶಸ್ತಿಯೇ?

“ಪ್ರಭು ಶ್ರೀರಾಮಚಂದ್ರ ತಂದೆಗೆ ಹುಟ್ಟಿದ ಮಗನಲ್ಲ” ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಹಿಂದೂ ಬಾಂಧವರ ಧಾರ್ಮಿಕ ಭಾವನೆಗೆ ಧಕ್ಕೆ ತಂದು ಪ್ರಚಾರದಲ್ಲಿ ಉಳ್ಳವರು ಹಿರಿಯ ವಿದ್ವಾಂಸ, ಸಾಹಿತಿ, ಬುದ್ಧಿಜೀವಿ ಎಂದು ಕರೆಯಿಸಿಕೊಳ್ಳುವ ಶ್ರೀ ಕೆ. ಎಸ್ ಭಗವಾನ ರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಟ್ಟು ತನ್ನ ಗೌರವ, ಪ್ರಶಸ್ತಿಗಿದ್ದ ಘನತೆಯನ್ನು ಕಡಿಮೆ ಮಾಡಿಕೊಂಡದ್ದು ನಿಜಕ್ಕೂ ವಿಪರ್ಯಾಸ.

ಓರ್ವ ಹಿರಿಯ ವ್ಯಕ್ತಿಯಾಗಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಪ್ರೊಫೆಸರ್ ಆಗಿ, ಕನ್ನಡಾಂಬೆ ತಾಯಿ ಭುವನೇಶ್ವರಿಯ ಸೇವೆ ಮಾಡಲು ಹೊರಟು ಇಂತಹ ಅಸಂಬದ್ಧ, ವೈಚಾರಿಕತೆಗೆ ವಿರುದ್ಧವಾಗಿ ಹೇಳಿಕೆ ನೀಡಿದ ಭಗವಾನರು ತಮ್ಮ ಮೇಲಿನ ಗೌರವವನ್ನು ತಾವಾಗಿಯೇ ಕಳೆದುಕೊಂಡರು. ಸನಾತನ ಧರ್ಮವಾದ ಹಿಂದೂ ಧರ್ಮೀಯರ ಪವಿತ್ರ ಗ್ರಂಥಗಳಾದ ರಾಮಾಯಣ, ಮಹಾಭಾರತಗಳ ಕುರಿತಾಗಿ ಎಲುಬಿಲ್ಲದ ನಾಲಗೆಯಿಂದ ಪುಂಖಾನುಪುಂಖವಾಗಿ ಅಸಂಬದ್ಧ ಹೇಳಿಕೆಗಳನ್ನು ನೀಡಿದವರು. ಪ್ರಚಾರಪ್ರಿಯರಾಗಿ ತನ್ನ ಬಗೆಗಿನ ಪ್ರಚಾರ ಮನೆ-ಮನ ತಲುಪಲಿ ಎಂದು ಭಗವದ್ಗೀತೆ ಯನ್ನು ಸುಡಲು ಮುಂದಾದ ಈ ಮಹಾ ವ್ಯಕ್ತಿ ಭಗವಾನರು ಮಹಾಭಾರತದಲ್ಲಿ ಬರುವ ಬಕಾಸುರನನ್ನು ಮೀರಿ ಇಂದು ಜನತೆಯ ನಿದ್ದೆ ಗೆಡಿಸುವಲ್ಲಿ ಸಫಲರಾಗಿದ್ದಾರೆ.

“ತಾ ಕೆಟ್ಟ ಕೋತಿ ವನವನ್ನೆಲ್ಲಾ ಕೆಡಿಸಿತು” ಎಂಬಂತೆ ತಾನೂ ಹಾಳಾಗುವುದಲ್ಲದೆ ತನ್ನ ಹಾದಿಯಲ್ಲೇ ಬರಲು ಪ್ರೇರೇಪಿಸಿ ಹಲವು ಹಿರಿಯ ಸಾಹಿತಿಗಳನ್ನು ಜನರ ಮನದಿಂದ ಕಿತ್ತೊಗೆಯುವಲ್ಲಿ ಭಗವಾನರು ಯಶಸ್ವಿಯಾಗಿದ್ದಾರೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುವ ಉಪದೇಶಗಳಲ್ಲಿ “ಶ್ರೀ ಭಗವಾನುವಾಚ” ಎಂದು ಬಿಂಬಿಸಲಾಗಿದೆ. ಅಂತಹ ಶ್ರೀಕೃಷ್ಣನ  ಅನ್ವರ್ಥ ನಾಮವನ್ನು ಇಂತಹವರಿಗೆ ಹೆಸರಿಟ್ಟರಲ್ಲಾ? ಎಂದು ವ್ಯಥೆ ಪಟ್ಟುಕೊಳ್ಳುವ ಸರದಿ ಇಂದು ನಮ್ಮದಾಗಿರುವಂತಹದ್ದು ನಿಜಕ್ಕೂ ಖೇದಕರ.

ಅಷ್ಟಕ್ಕೂ ಈ ಭಗವಾನರು ಮಾಡಿರುವ ಮಹಾನ್ ಸಾಧನೆಯಾದರೂ ಏನು? ಒಪ್ಪಿಕೊಳ್ಳುವ ವಿಚಾರವೆಂದರೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಶಂಕರಾಚಾರ್ಯ ಮತ್ತು ಪ್ರತಿಗಾಮಿತನ, ಅಂತರ್ಯ, ಬದಲಾವಣೆ, ಕುವೆಂಪು ಯುಗ ಇತ್ಯಾದಿ.. ರಾಷ್ಟ್ರಕವಿ ಕುವೆಂಪು ರವರು ಜ್ಞಾನಪೀಠ ಪ್ರಶಸ್ತಿ ಪಡೆದದ್ದು ಮಹಾಕಾವ್ಯ “ಶ್ರೀರಾಮಾಯಣ ದರ್ಶನಂ” ಎಂಬ ಪೂಜಿಸಲ್ಪಡುವ ಗ್ರಂಥಕ್ಕೆ. ಅಂತಹ ಅಮೃತ ಸತ್ವವಿರುವ ರಾಮಾಯಣದ ಕುರಿತು ಅತಿರೇಕದ ಹೇಳಿಕೆ ನೀಡಿ ಜನರ ಭಾವನೆಗಳಿಗೆ ಕಿಚ್ಚು ಹೊತ್ತಿಸುವ “ಮಹತ್ತರವಾದ ಕಾರ್ಯ” ಮಾಡಿದ ಸಾಹಿತ್ಯ ಕರ್ನಾಟಕ ಪ್ರಶಸ್ತಿ (2011) ವಿಜೇತ  ಶ್ರೀಯುತ ಕೆ.ಎಸ್ ಭಗವಾನರಿಗೆ 2013 ನೇ ಸಾಲಿನ “ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ”!!!! ಕರ್ನಾಟಕ  ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿರುವವರು ಬಹುಶಃ ಕೆ.ಎಸ್ ಭಹಗವಾನರ ನಿಕಟವರ್ತಿಗಳು, ಇಲ್ಲವೇ ಪ್ರಶಸ್ತಿಯ ಅರ್ಹತೆಯ ಗಂಧ-ಗಾಳಿ ಗೊತ್ತಿಲ್ಲದಿರುವ ದೊಡ್ಡ ಮನುಷ್ಯರು.

ಈ ನಡುವೆ, “ಯಾವ ಬೆದರಿಕೆಗಳಿಗೂ ನಾನು ಹೆದರುವುದಿಲ್ಲ. ಪ್ರಶಸ್ತಿ ಕೊಡುತ್ತಿರುವುದು ಸಾಹಿತ್ಯ ಅಕಾಡೆಮಿ” ಎಂಬ ಅಹಂಕಾರದ ಹೇಳಿಕೆಗಳು ಬೇರೆ. ಇಂತಹವರಿಗೆ ಪೋಲೀಸ್  ಭದ್ರತೆ ಬೇಕಂತೆ. ಜೀವದ ಮೇಲಿನ ಆಸೆ ಇರುವ ಇಂತಹ ವ್ಯಕ್ತಿಗಳಿಗೆ “ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ” ಎಂದು ಕನಕದಾಸರು ಅಂದೇ ಹೇಳಿದ್ದರು. ಕೆ.ಎಸ್ ಭಗವಾನ್ ರಂತವರಿಗೆ ಇಂತಹ ವಾಣಿ ಎಲ್ಲವೂ ಕೋಣನ ಮುಂದೆ ಕಿಂದರಿ ಬಾರಿಸಿದಂತೆ. ಏನು ಹೇಳಿದರೂ ಪ್ರಯೋಜನವಿಲ್ಲ.

ಹಾಗೆಂದು ಈ ಮೊದಲು ಪ್ರಶಸ್ತಿಗಳಿಸಲ್ಪಟ್ಟವರೆಲ್ಲರೂ ಭಗವಾನ್ ರಂತಹ ಸಣ್ಣ ಮನಸ್ಸಿನವರೇ? ಖಂಡಿತಾ ಅಲ್ಲ. ಕುವೆಂಪು, ಬೇಂದ್ರೆ, ಗೋಕಾಕ್, ಡಿ.ವಿ.ಜಿ, ಪು.ತಿ.ನ, ಮಾಸ್ತಿ… ಹಲವರು. ಇಂತಹವರ ಸಾಲಿನಲ್ಲಿ ಭಗವಾನರಿಗೂ ಮಣೆ ಹಾಕಿದರಲ್ಲಾ? ಎಂಬ ವ್ಯಥೆ ಪ್ರತಿಯೊಬ್ಬನಲ್ಲೂ ಕಾಡುತ್ತಿದೆ.

ಇಂದು ನನ್ನನ್ನೂ ಸೇರಿಸಿ ಜನಸಾಮಾನ್ಯರಲ್ಲಿ ಮೂಡಿರುವ ಕೆಲವು ಪ್ರಶ್ನೆಗಳು : ಯಾವುದೇ ಹೆಸರಾಂತ ಪ್ರಶಸ್ತಿ ಗಳಿಗಿರುವ ಅರ್ಹತೆಗಳೇನು? ಜನರ ಧಾರ್ಮಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ಅಥವಾ ಪವಿತ್ರ ಗ್ರಂಥಗಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿದರೆ ಪ್ರಶಸ್ತಿ ಸಿಗುವುದೇ? ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿಯ  ಜೊತೆ ಭಾವಚಿತ್ರ ತೆಗೆಸಿಕೊಂಡು ಆಯ್ಕೆ ಸಮಿತಿಯ ಮುಂದೆ ನೀಡಿದರೆ ಆತ ಪ್ರಶಸ್ತಿಗೆ ಅರ್ಹನೇ? ಬುದ್ಧಿಜೀವಿ ಎಂಬ ಹಣೆಪಟ್ಟಿ ಅಂಟಿಸಿಕೊಂಡು, “ಭಗವದ್ಗೀತೆಯನ್ನು ನಾನು ಸುಡುತ್ತೇನೆ” ಎಂಬ ಹೇಳಿಕೆ ನೀಡಿದರೆ ನನ್ನನ್ನೂ ನೀವು ಪ್ರಶಸ್ತಿಗೆ ಆಯ್ಕೆ ಮಾಡುವಿರೇ? ಉತ್ತರವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಪದಾಧಿಕಾರಿಗಳಿಂದ ನಿರೀಕ್ಷಿಸುತ್ತಿದ್ದೇನೆ.

ಅದೇನೇ ಇರಲಿ, ನಮ್ಮ ಹೋರಾಟ ಭಗವಾನರು “ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ”ಗೆ ಯೋಗ್ಯರೇ ಎಂಬುದು. ಅದು ಹೇಗೆ ಸಾಧ್ಯ. ಪ್ರಶಸ್ತಿ ಪಡೆದವರನ್ನು, ಪಡೆಯುವವರನ್ನು ಜನರು ಗೌರವಿಸಬೇಕೇ ಹೊರತು ಎಲ್ಲೆಲ್ಲೂ ತೆಗಳುವ ಓರ್ವ ಕೊಳಕು ಮನಸ್ಸಿನ ವ್ಯಕ್ತಿಗೆ ಪ್ರಶಸ್ತಿ ಸಲ್ಲುತ್ತದೆ ಎಂದಾದರೆ ಅದು ಪ್ರಶಸ್ತಿಗಾಗುವ ಅಪಚಾರ. ಈ ನಿಟ್ಟಿನಲ್ಲಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಹಿ ಅಭಿಯಾನ ಕೆಲಸ ಆರಂಭವಾಗಿದ್ದು ಹತ್ತು ಸಾವಿರಕ್ಕೂ ಅಧಿಕ ಸಹಿಗಳು ಸಂಗ್ರಹವಾಗಿದ್ದು ಓರ್ವ ವ್ಯಕ್ತಿಯೂ ಭಗವಾನರ ಹೇಳಿಕೆಗೆ ಪರವಾಗಿ ಹೇಳಿಕೆ ಹಾಕಿಲ್ಲ. ಇದರ ಅರ್ಥವೇನು? ಜನಸಾಮಾನ್ಯರ ಅಭಿಪ್ರಾಯಕ್ಕೆ ಅಕಾಡೆಮಿ ಬೆಲೆ ಕೊಡುವುದಿದ್ದಲ್ಲಿ ಈ ಕೂಡಲೇ ಕೆ. ಎಸ್ ಭಗವಾನರ ಹೆಸರನ್ನು ಪ್ರಶಸ್ತಿ ಸಮಿತಿ ಕೈ ಬಿಡಬೇಕು. ಇಲ್ಲವೇ, ಜನತೆಯ ತಾಳ್ಮೆ ಒಡೆದು ದಂಗೆ ಏಳುವುದನ್ನು ಕಾಣಬೇಕು. ಕವಿವಾಣಿ ಹೇಳುತ್ತದೆ,

“ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು

ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ,

“ಹರೆಯದೀ ಮಾಂತ್ರಿಕ”ನ ಮಾಟ ಮಸಳುವ ಮುನ್ನ,

ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ,

ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ

ಕಟ್ಟುವೆವು ನಾವು ಹೊಸ ನಾಡೊಂದನು, ಸುಖದ ಬೀಡೊಂದನು”

ಬಹುಶಃ, ಸುಖದ ಬೀಡು ನಿರ್ಮಾಣವಾಗಬೇಕಾದರೆ ಹರೆಯ ತುಂಬಿದ ಮಾಂತ್ರಿಕನ ಉತ್ಥಾನವಾಗಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

Shri Krishna P I

B.E, MBA. Interests in Photography, writing, riding and trekking.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!