ಅಂಕಣ

ಭಾವನೆಗಳನ್ನು ಘಾಸಿ ಮಾಡಬಹುದು … ನಂಬಿಕೆಗಳನ್ನಲ್ಲ

ನನಗೀಗಲೂ ಆ ಧ್ವನಿ ಕೇಳಿಸುತ್ತಿದೆ. ಆಗಸ್ಟ್ ತಿಂಗಳಿನ ಆ ಭಯಂಕರ ಮಳೆಗೆ ಮಾಣಿ ಮಠದ ಶೀಟಿನ  ಛಾವಣಿಯ ಮೇಲೆ ದೊಪ್ಪನೆ ನೀರು ಬೀಳುವಾಗ ಭರೋ.. ಎಂಬ ಶಬ್ದ. ಅಷ್ಟೊಂದು ಮಳೆ ಸುರಿಯುತ್ತಿದ್ದರೂ ಇಡೀಯ ಸಭಾಂಗಣ ತುಂಬಿ, ಹೊರಗೆಯೂ ಜನರು ನಿಂತುಕೊಂಡು ಎಲ್’ಸಿಡಿ ಟಿವಿಗಳತ್ತ ನೋಡುತ್ತಿದ್ದರು. ಸಣ್ಣ ಪುಟ್ಟ ಮಕ್ಕಳ ಚಿಲಿಪಿಲಿ ಸದ್ದು ಬಿಟ್ಟರೆ ಸಭಾಂಗಣದ ಒಳಗೆ ಸೂಜಿ ಬಿದ್ದರೂ ಕೇಳುವಷ್ಟು ಮೌನ. ಅದರೆಡೆಯಲ್ಲಿ ಮೈಕಿನಲ್ಲಿ ಕೇಳಿಬರುವ ಗುರುಗಳ ಧ್ವನಿ… ಆಹ್…! ಈಗಲೂ ಕೇಳಿಸುತ್ತಿದೆ. ಮೈನವೀರೇಳಿಸುತ್ತಿದೆ….

ಇದು ಎರಡು ವರ್ಷಗಳ ಹಿಂದೆ ಮಾಣಿ ಮಠದಲ್ಲಿ ನಡೆದ ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯದ ಕಥೆ. ನನ್ನದೇ ಅನುಭವವನ್ನು ಹೇಳುವುದಾದರೆ ಅದಕ್ಕೂ ಮೊದಲೇ ನಾನು ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯದಲ್ಲಿ ಭಾಗವಹಿಸಿರಲಿಲ್ಲ. ಕೇಳ್ಪಟ್ಟಿದ್ದೆ ಅಷ್ಟೇ. ಚಾತುರ್ಮಾಸ್ಯವೆಂದರೆ ಸಂತರ ಬದುಕಿನ ಪವಿತ್ರ ದಿನಗಳು ಮಾತ್ರವಲ್ಲ ಶಿಷ್ಯರ ಬದುಕಿನ ಒಂದು  ವೈಭವದ ಜಾತ್ರೆ ಎಂದು ನನಗೆ ಗೊತ್ತಾಗಿದ್ದು ಆಗಲೇ. ರಾಮಕಥೆಯೆಂದರೆ ಕೇಳುವುದೇ ಬೇಡ. ಮಕ್ಕಳು, ತಾಯಂದಿರು, ಯುವಕರು, ಅಷ್ಟೇ ಏಕೆ ಈ ಭಾಗಗಳಲ್ಲಿ ಕೃಷಿ ಮತ್ತಿತರ ವ್ಯವಹಾರ ನಡೆಸುತ್ತಿರುವ ಗಂಡಸರೂ ಸಹಾ ಐದು ಗಂಟೆಗೆ ಮಠದಲ್ಲಿ ಹಾಜರಿ ಹಾಕುತ್ತಿದ್ದರು. ಅಂತಹಾ ವೈಭವೋಪೇತ ಚಾತುರ್ಮಾಸ್ಯಕ್ಕೆ ಸಾಕ್ಷಿಯಾಗಿತ್ತು ಮಾಣಿ ಮಠದ ವಿಜಯ ಚಾತುರ್ಮಾಸ್ಯ.

ವಿಜಯ ಚಾತುರ್ಮಾಸ್ಯದ ಕುರಿತ ನನ್ನ ಒಡನಾಟವನ್ನು ನಾನಿಲ್ಲಿ ಹೇಳಲೇ ಬೇಕು. ಮಠದ ಇತರ ಕಾರ್ಯಕ್ರಮಗಳಲ್ಲಿ ನಾನು ಮೊದಲು ಸಕ್ರಿಯವಾಗಿ ಪಾಲ್ಗೊಂಡಿದ್ದರೂ ಅದೇಕೋ ಚಾತುರ್ಮಾಸ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ವಿಜಯ ಚಾತುರ್ಮಾಸದ ಸಂದರ್ಭದಲ್ಲಿ ನಾನು ಆಗಷ್ಟೇ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ನೌಕರಿಗೆ ಸೇರಿಕೊಂಡಿದ್ದೆ. ಸ್ವಾತಂತ್ರ ದಿನಾಚರಣೆ ಮತ್ತು ವೀಕೆಂಡ್ ರಜೆಯಿದ್ದ ಕಾರಣ ಮನೆಗೆ ಬಂದಿದ್ದೆ. ಆವತ್ತು ಸಂಜೆ ಸ್ನೇಹಿತನೊಬ್ಬನ ಕರೆ ಬಂತು ‘ರಾಮಕಥೆಗೆ ಹೋಗೋಣ’ ಎಂದು. ಕೆಲಸಕ್ಕೆ ಸೇರಿದ ಒಂದು ತಿಂಗಳ ಬಳಿಕ ಮೊದಲ ಭಾರಿಗೆ  ಮನೆಗೆ ಬಂದಿದ್ದ ನನಗೆ ಆ ದಿನ ಬೇರೇನೋ ಕೆಲಸವಿತ್ತು. ಆದ್ದರಿಂದ ಬರುವುದಿಲ್ಲ ಎಂದೆ. ಅದಕ್ಕವನು ಬಿಡದೆ ಒತ್ತಾಯ ಮಾಡಿ ನನ್ನನ್ನು ರಾಮಕಥೆಗೆ ಕರೆದುಕೊಂಡು ಹೋದ. ಅದೇ ನೋಡಿ ನನ್ನ ಜೀವನದ ಟರ್ನಿಂಗ್ ಪಾಯಿಂಟ್.

ಎಲ್ಲೆಲ್ಲಿ ಅಡ್ಡಾಡುವುದೆನ್ನ ಮನವೂ.. ಅಲ್ಲಲ್ಲಿ ಕಾಣಲೈ ಗುರು ನಿನ್ನ ತನುವು..

ಇದನ್ನು ನಾವು ಹಾಡುವುದಕ್ಕಿಂತ ಗುರುಗಳ ಬಾಯಿಯಿಂದಲೇ ಕೇಳಬೇಕು. ಗುರು ಶಿಷ್ಯರ ನಡುವಿನ ಭಾವ ಅಮಿತಾನಂದವನ್ನು ಹೊಂದುವುದೇ ಆವಾಗ. ಎಲ್ಲೆಲ್ಲಿ ಅಡ್ಡಡುವುದೆನ್ನ ಮನವೂ ಎಂದು ಹೇಳುವಾಗ ಗುರುಗಳ ತಲೆಯಲ್ಲಿ ಅವರ ಗುರುಗಳು ಬರುತ್ತಿದ್ದರೋ ಅಲ್ಲ ಶ್ರೀ ರಾಮನೇ ಬರುತ್ತಿದ್ದನೋ ಗೊತ್ತಿಲ್ಲ, ನಮ್ಮ ತಲೆಯಲ್ಲಿ ನಿಚ್ಚಳವಾಗಿ ರಾಘವೇಶ್ವರರು ಬರುತ್ತಿದ್ದರು. ಆ ಕ್ಷಾತ್ರ ತೇಜಸ್ಸಿನ ಮುಖ ಕಾಣುತ್ತಿತ್ತು.  ಜನಮಾನಸದಲ್ಲಿ ರಾಮಕಥೆಯೆಂಬುದು ಎಷ್ಟು ಪ್ರಭಾವ ಬೀರಿತೆಂದರೆ ನಿತ್ಯದ ಸುಪ್ರಭಾತ, ಫೋನಿನ ರಿಂಗ್’ಟೋನ್ ಎಲ್ಲವೂ ರಾಮಕಥೆಯ ಹಾಡುಗಳಾಗಿ ಹೋಯ್ತು. ಅಷ್ಟು ಮಾತ್ರವಲ್ಲ ಪ್ರವಚನಗಳಲ್ಲಿ ಗುರುಗಳು ಹೇಳಿದ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಾರಂಭಿಸಿದರು  ಜನ.  ಇದಕ್ಕಿಂತ ಸಾರ್ಥಕ ಭಾವ ಇನ್ನೇನು ಬೇಕು ಹೇಳಿ?

ಮೊದಲ ದಿನವೇ ನಾನು ರಾಮಕಥೆಯ ಮೋಡಿಗೊಳಗಾದೆ. ರಾಮಾಯಣದ  ಕುರಿತಾದ ಸುಶ್ರಾವ್ಯ ಸಂಗೀತದ ಗಾಯನ, ನಿತ್ಯ ಜೀವನಕ್ಕೆ ಅನ್ವಯಿಸಿ, ಮನಸ್ಸಿಗೆ ನಾಟುವಂತಹ ಉದಾಹರಣೆಗಳ ಸಹಿತವಾಗಿ ಗುರುಗಳು ಮಾಡುತ್ತಿದ್ದ ಪ್ರವಚನ ಎಲ್ಲವೂ ನನ್ನಲ್ಲಿ ಆಳವಾದ ಪರಿಣಾಮ ಬೀರಲು ಶುರುಮಾಡಿತು. ಎರಡನೇ ದಿನ, ಮೂರನೇ ದಿನವೂ ಉತ್ಸಾಹದಿಂದ ಪಾಲ್ಗೊಂಡೆ. ನಿಜ ಹೇಳಬೇಕೆಂದರೆ ಅಲ್ಲಿಯವರೆಗೆ ರಾಮಕಥೆಯ ಬಗ್ಗೆ ಪೇಪರಿನಲ್ಲಿ ಮಾತ್ರ ಓದಿದ್ದೆ. ನಾನು ಮಠದ ಶಿಷ್ಯನಾಗಿದ್ದರೂ ಸಹ ರಾಮಕಥೆಯ  ಬಗ್ಗೆ ಅರಿವಿರದಿದ್ದ ಕಾರಣ ಪೂರ್ವಾಗ್ರಹಪೀಡಿತನಾಗಿದ್ದೆ. ‘ರಾಮಕಥೆಯಂತೆ,  ಕಡೆಗೆ ಎಲ್ಲರೂ ಕುಣಿಯುತ್ತಾರಂತೆ’ ಎಂಬುದನ್ನು ಕೇಳಿ ಇವರಿಗೇನು ಹುಚ್ಚೋ ಎಂದುಕೊಂಡಿದ್ದೆ. ಆದರೆ ಯಾವುದನ್ನು ನಾನು ಹುಚ್ಚು ಅಂದುಕೊಂಡಿದ್ದನೋ ಆ ಹುಚ್ಚು ಕಡೆಗೆ ನನಗೂ ಹಿಡಿಯಿತು.  ‘ಜೈ ರಾಮಕಥಾ’ ಎಂದು ಹಾಡಿದೆ, ಕುಣಿದೆ, ಕುಪ್ಪಳಿಸಿದೆ. ಆಧ್ಯಾತ್ಮವೆಂಬ ಅಮೃತ ಸಾಗರದಲ್ಲಿ ಮಿಂದೆದ್ದೆ.

ಹೇಳಿದೆನಲ್ಲಾ, ನಾನು ಬೆಂಗಳೂರಿಗೆ ಹೋಗಿ ಒಂದು ತಿಂಗಳಷ್ಟೇ ಆಗಿತ್ತು. ಬೆಂಗಳೂರೆಂಬ ಮಾಯಾ ನಗರಿಗೆ ಒಗ್ಗಿಕೊಳ್ಳುತ್ತಿದ್ದೆ. ಆ ಒಂದು ತಿಂಗಳು ನನಗೆ ಮನೆಯವರನ್ನೂ ನೆನಪಿರಲಿಲ್ಲ. ಆದರೆ ಯಾವತ್ತು ಈ ಚಾತುರ್ಮಾಸಕ್ಕೆ ಹೋದೆನೋ ಅವತ್ತು ನನಗೆ ಕೆಲವೊಂದು ವಿಷಯಗಳು ಕಾಡಲು ಶುರುವಾಯಿತು. ನನ್ನ ಊರಿನ ಸಂಸ್ಕೃತಿ, ಪರಂಪರೆಯ ಸೊಗಡು, ಮನೆ ಮಠ ಮಂದಿರ ದೇವಸ್ಥಾನ ಜಾತ್ರೆ ಎಂದು ಬಹಳವಾಗಿಯೇ ಓಡಾಡಿಕೊಂಡಿದ್ದ ನನಗೆ ಬೆಂಗಳೂರೆಂಬ ಭಾವ ರಹಿತ ಕಾಂಕ್ರೀಟ್ ಕಾಡು ಸೂಕ್ತವಲ್ಲ ಎಂಬ ಭಾವನೆ ಬರಲಾರಂಭಿಸಿತು. ಆದರೇನು ಮಾಡುವುದು ನಾಲ್ಕನೇ ದಿನ ಮತ್ತೆ ಬೆಂಗಳೂರು  ಬಾ ಎಂದು ಕರೆಯಲು ಶುರು ಮಾಡಿತ್ತು. ರಾಮಕಥೆಯ ವೈಭವದ ಸಿಹಿ ನೆನಪಿನೊಂದಿಗೆ ಒಲ್ಲದ ಮನಸ್ಸಿನಿಂದ ಬೆಂಗಳೂರಿಗೆ ಹಿಂತಿರುಗಿದ್ದೆ ಆಗ.

ಬೆಂಗಳೂರಿಗೆ ವಾಪಾಸ್ಸಾಗಿದ್ದೇ ತಡ, ನನಗೆ ಅದೂವರೆಗೂ ಇರದಿದ್ದ ‘ಹೋಮ್ ಸಿಕ್’ ಕಾಡಲು ಶುರುವಾಗಿತ್ತು. ನನ್ನ ಭವಿಷ್ಯವೋ ಇಲ್ಲಾ ಊರು ಸೇರುವುದೋ ಎಂಬ ತೊಳಲಾಟ ಶುರುವಾಗಿತ್ತು. ನನ್ನ ಪರಿಸ್ಥಿತಿ ಎಷ್ಟು ಗಂಭೀರವಾಯ್ತು ಎಂದರೆ ಬೆಂಗಳೂರಿಗೆ ಹಿಂತಿರುಗಿದ ಒಂದೇ ವಾರದಲ್ಲಿ ಅಲ್ಲಿನ ಕೆಲಸ ಬಿಟ್ಟೆ, ಇದಕ್ಕೆ ಬೇರೆ ಹಲವು ಕಾರಣಗಳೂ ಇತ್ತೆನ್ನಿ. ಕೆಲಸ ಬಿಟ್ಟ ಕಹಿನೆನಪಿನೊಂದಿಗೆ, ಚಾತುರ್ಮಾಸದಲ್ಲಿ ಭಾಗಿಯಾಗುವ ಹಿತ ಭಾವದೊಂದಿಗೆ ಊರಿಗೆ ಮರಳಿದೆ. ಬೆಂಗಳೂರು ಬಿಟ್ಟ ಒಂದೇ ವಾರದಲ್ಲಿ ನನಗೆ ಮಂಗಳೂರಿನಲ್ಲಿ ನೌಕರಿ ಸಿಕ್ಕಿತು. ಅದು ಬೇರೆ ವಿಷಯ.

ಆದರೆ ನನ್ನ ಹಾಗೆ ಬೇರೆ ಹಲವರ ಜೀವನದಲ್ಲಿ ಬಹಳ ಆಳವಾಗಿ ಪ್ರಭಾವ ಬೀರಿದ, ಆಧ್ಯಾತ್ಮದ ಸಿಂಚನ ಮಾಡಿದ ಶ್ರೀಗಳ ಮೇಲೆ ಸುಳ್ಳು ಆರೋಪಗಳಡಿಯಲ್ಲಿ ಕೇಸು ದಾಖಲಾಗುತ್ತದೆ ಎಂಬುದು ಸಾವಿರಾರು ಗುರುಭಕ್ತರಿಗೆ ಬೇಸರ ತರುತ್ತಿರುವ ವಿಷಯ. ನಮ್ಮಲ್ಲಿ ಎರಡು ಬಗೆಯ ಜನರಿದ್ದಾರೆ. ಒಂದು ಈ ರಾಘವೇಶ್ವರ ಶ್ರೀಗಳನ್ನು ‘ಅವರು ಆಢಂಬರ ಮಾಡುತ್ತಾರೆ, ಆಡಿ ಕಾರಿನಲ್ಲಿ ಹೋಗುತ್ತಾರೆ, ಶ್ರೀಮಂತರ ಮಕ್ಕಳಿಗೆ ಬೆಳ್ಳಿಯಲ್ಲಿ ಪೋಣಿಸಿದ ಸ್ಫಟಿಕದ ಮಾಲೆಗಳನ್ನು ಹಾಕುತ್ತಾರೆ ಬಡವರಿಗೆ ಹಾಕುವುದಿಲ್ಲ,  ಸಂನ್ಯಾಸಿಗಳು ಈ ಥರಾ ಇರಬಾರದು’ ಎಂದು ಶ್ರೀಗಳೇನೇ ಮಾಡಿದರೂ  ಟೀಕಿಸುವವರು, ಮತ್ತೊಂದು ಶ್ರೀಗಳು ಯಾವ ಕಾರಿನಲ್ಲಾದರೂ ಹೋಗಲಿ, ನಮಗೆ ಬೇಕಿರುವುದು ಅವರ ಆಶೀರ್ವಾದ ಮಾತ್ರ, ಸ್ಫಟಿಕದ ಮಾಲೆ ಹಾಕಲಿ ಬಿಡಲಿ, ನಮ್ಮ ಕಡೆಗೊಮ್ಮೆ ದಿವ್ಯ ತೇಜಸ್ಸುಳ್ಳ ಆ ನೋಟ ಬೀರಿದರೂ ಸಾಕು ಎಂದು ಬಯಸುವವರು.  ಈ ಮೊದಲನೇ ಗುಂಪಿಗೆ ಸೇರಿದವರಿಂದ ನಿರ್ದೇಶಿಸಲ್ಪಡುತ್ತಿರುವ ಧಾರಾವಾಹಿಯೇ ಈ ಎಲ್ಲಾ ಆರೋಪಗಳು.

ಒಬ್ಬಾಕೆಯ ಮೇಲೆ ನೂರಾರು ಬಾರಿ ಅತ್ಯಾಚಾರವಾದರೂ ಆಕೆ ಬಾಯಿಬಿಡುವುದಿಲ್ಲ. ರಾಮನ ಮೇಲೆ ಮಾಡಿದ ಆಣೆಯೇ ಮುಳುವಾಯಿತು. ಮತ್ತೊಬ್ಬಾಕೆ 2006ರಲ್ಲಿಯೇ ಅತ್ಯಾಚಾರವಾದರೂ ಆಕೆಗದು ಈಗ ನೆನಪಾಯಿತು. ಅಲ್ಲಾ ಒಂದು ಸಣ್ಣ ಮಗು ಕೂಡ ಲೈಗಿಂಕ ಕಿರುಕುಳಕ್ಕೊಳಗಾದರೆ ಸ್ವಲ್ಪ ದಿನ ಬಿಟ್ಟಾದರೂ ಅಮ್ಮನ ಬಳಿ ಬಾಯಿ ಬಿಡುತ್ತದೆ, ಇವರುಗಳಿಗೆ  ಬಾಯಿ ಬಿಡಲು ಇಷ್ಟು ದಿನ ಬೇಕಾದವೇ? ಇಷ್ಟೊಂದು ಅಡ್ವಾನ್ಸ್ಡ್ ಆಗಿರುವ ಪೋಲೀಸ್ ಇಲಾಖೆ ನಮ್ಮಲ್ಲಿರುವಾಗ, ಬೆದರಿಕೆ ಹಾಕಿದ್ದಾರೆ ಎಂಬ ಕಾರಣಕ್ಕೆ ಸುಮ್ಮನೆ ಕೂರಲು ರಾಘವೇಶ್ವರ ಶ್ರೀಗಳೇನು ರೌಡಿಯೇ? ಇದೂವರೆಗೆ ಇಲ್ಲದಿದ್ದ ಧೈರ್ಯ ಇದ್ದಕ್ಕಿದ್ದಂತೆ ಎಲ್ಲಿಂದ ಬಂತು? ಎಲ್ಲರಿಗೂ ತಿಳಿದ ಮಟ್ಟಿಗೆ ಗುರುಗಳು ದಿನದ 24 ಗಂಟೆಯಲ್ಲಿ ಬಹಳಷ್ಟು ಸಮಯ ಚಟುವಟಿಕೆಯಿಂದ ಕೂಡಿರುತ್ತಾರೆ. ಬೆಳಗ್ಗಿನಿಂದ ರಾಮ ಪೂಜೆ, ಭಿಕ್ಷೆ, ಮಂತ್ರಾಕ್ಷತೆ, ಆಶೀರ್ವಚನ, ಪ್ರವಾಸ ಹೀಗೆ…  ಸ್ವಲ್ಪ ಬಿಡುವಾಯಿತೆಂದರೆ ಜನರ ಅತ್ಯಾಕರ್ಷಣೆಯ ಕೇಂದ್ರಬಿಂದುವಾಗಿರುವ ಗುರುಗಳನ್ನು ಭೇಟಿ ಮಾಡಲು ಹತ್ತಾರು ಜನ ಸಾಲು ನಿಂತಿರುತ್ತಾರೆ. ಹೀಗಿರುವಾಗ ಗುರುಗಳಿಗೆ ಅತ್ಯಾಚಾರಕ್ಕೆಲ್ಲ ಸಮಯವೆಲ್ಲಿಂದ ಬಂತು? ಯಾರಿಲ್ಲದಿದ್ದರೂ ಪರಿವಾರದವರು ಮತ್ತು ಮಠದ ಹಿರಿಯ ಅಧಿಕಾರಿಗಳು ಸದಾ ಗುರುಗಳ ಜೊತೆ ಇದ್ದೇ ಇರುತ್ತಾರೆ. ಮತ್ತೆ ಪ್ರೈವೆಸಿಯೆಲ್ಲಿಂದ? ಪರಿವಾರದವರಿಗೆ, ಅಧಿಕಾರಿಗಳಿಗೆ ಗೊತ್ತಿದ್ದೂ ಅವರೆಲ್ಲ ಸುಮ್ಮನಿರಲು ಅವರಿಗೇನಾದರೂ ದಾರಿದ್ರ್ಯ ಬಡಿದಿದೆಯೇ? ಅಥವಾ ವಿದ್ಯಾವಂತ ಹವ್ಯಕ ಸಮಾಜದ ಪೀಠಾಧಿಪತಿಯೊಬ್ಬರು ಇಷ್ಟೆಲ್ಲಾ ಅನಾಚಾರಗಳನ್ನೂ ಮಾಡುತ್ತಿದ್ದಾರೆ ಎಂದ ಮೇಲೂ ಅವರನ್ನೇ Follow ಮಾಡಲು ನಾವೇನು ಮೂಢರೇ? ಹತ್ತಾರು ಅತ್ಯಾಚಾರಗಳಾದ ಬಳಿಕವೂ ಮಠವನ್ನು ನಂಬಿಕೊಂಡು ಬಂದಿದ್ದಾರೆ, ರಾಮನ ಅಣೆಗೊಳಗಾಗಿ ಸುಮ್ಮನಿದ್ದೆ ಎನ್ನುವ ಅವರುಗಳು ಮೂಢರೋ ಅಥವಾ ಶ್ರೀಗಳನ್ನು ನಿಷ್ಕಲ್ಮಶ ಭಕ್ತಿಯಿಂದ ಆರಾಧಿಸುತ್ತಿರುವ ನಾವು ಮೂಢರೇ? ಹೇಳಿ,  ಅದ್ಯಾವಗಲೋ ಓಬೀರಾಯನ ಕಾಲದಲ್ಲಿ ಅತ್ಯಾಚಾರ ನಡೆದಿದೆ ಎಂದು ಈಗ ದೂರು ದಾಖಲಿಸುತ್ತಿದ್ದಾರಲ್ಲಾ,  ಇದು ಷಡ್ಯಂತ್ರವಲ್ಲದೆ ಮತ್ತಿನ್ನೇನು?

ಹ್ಹ.. ಒಂದು ಮಾತನ್ನು ಸ್ಪಷ್ಟವಾಗಿ ಹೇಳುತ್ತೇನೆ. ನೀವಿವತ್ತು ಗುರುಗಳ ಕನ್ಯಾಸಂಸ್ಕಾರದ ಕುರಿತು ಟೀಕೆ ಮಾಡುತ್ತೀರಲ್ಲ, ನನ್ನ ಕೆಲವು ಸ್ನೇಹಿತೆಯರು ಈ ಸೇವೆಯನ್ನು ಮಾಡಿಸಿಕೊಂಡವರಿದ್ದಾರೆ. ಅವರು ಮಾತ್ರವಲ್ಲ, ಅವರ ಅಕ್ಕ ತಂಗಿ ನೆಂಟರಿಷ್ಟರೂ ಕೂಡಾ.. ಎಲ್ಲರೂ ವಿದ್ಯಾವಂತರೇ. ಅಂತಹಾ ನೂರು ಮಂದಿಯನ್ನು ಕೇಳಿ ನೋಡಿ. ಒಮ್ಮೆಯೂ ಗುರುಗಳು ತಮ್ಮತ್ತ ಕೆಟ್ಟ ದೃಷ್ಟಿಯನ್ನು ಬೀರಿಲ್ಲ ಎಂಬ ಉತ್ತರವೇ ಸಿಗುತ್ತದೆ. ವಿದ್ಯಾವಂತರಾದ, ಪ್ರಜ್ಞಾವಂತರಾದ ನಾವೆಲ್ಲರೂ ಯಾವ ರಾಮನ ಮೇಲಿನ ಆಣೆಗೂ ಒಳಗಾಗಿ ಮಠವನ್ನು, ಶ್ರೀಗಳನ್ನು ನಂಬಿಕೊಂಡು ಬರುತ್ತಿಲ್ಲ. ಮಠದಿಂದ ಪ್ರಯೋಜನ ಪಡೆದು ಕುರುಡು ಭಕ್ತಿಯನ್ನು ಪ್ರದರ್ಶಿಸುತ್ತಿರುವವರೂ ನಾವಲ್ಲ. ಆರೋಪ ಬಂದ ಕೂಡಲೇ ನಾವದನ್ನು ಒಪ್ಪಿಕೊಳ್ಳುವುದೂ ಇಲ್ಲ.  ಎಂದೋ ನಡೆದಿದೆ ಎನ್ನಲಾಗುತ್ತಿರುವ ಅತ್ಯಾಚಾರಕ್ಕೆ ಶ್ರೀಗಳನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯ ಮಾಡುತ್ತೀರಲ್ಲ, ಮುಂದೆ ನಿಮ್ಮ ತಂದೆ, ಗಂಡ, ಅಣ್ಣ-ತಮ್ಮಂದಿರ  ಮೇಲೆ ದುರುದ್ದೇಶಪೂರಿತವಾದ ಅತ್ಯಾಚಾರದ ಆರೋಪಗಳು ಬರಬಹುದು. ನಂಬಿ ಬಿಡುತ್ತೀರಾ? ಆರೋಪ ಸುಳ್ಳು, ನನ್ನ ಮನೆಯವರು ಈಥರಾ ಮಾಡಲು ಸಾಧ್ಯವಿಲ್ಲ ಎಂದು ಗೊತ್ತಿದ್ದೂ ತಕ್ಷಣವೇ ಬಂಧಿಸಿ ಎಂದು ಆಗ್ರಹಿಸುತ್ತೀರಾ?

ಅದೇನೇ ಇರಲಿ, ಈ ಷಡ್ಯಂತ್ರಗಳನ್ನು ವಿಫಲಗೊಳಿಸುವ ಕೆಲಸವನ್ನು ನಮ್ಮ ಘನ ನ್ಯಾಯಾಲಯಕ್ಕೂ, ನಮ್ಮ ಆರಾಧ್ಯಮೂರ್ತಿಯಾದ ಶ್ರೀರಾಮಚಂದ್ರನಿಗೂ ನೀಡುತ್ತೇನೆ. ಒಂದಂತೂ ಸೂರ್ಯ ಸತ್ಯ, ಹಣದಾಸೆಗೋ, ಹೊಟ್ಟೆಕಿಚ್ಚಿಗೋ ಇವರುಗಳೆಲ್ಲಾ ಸೇರಿಕೊಂಡು ನಮ್ಮ ಭಾವನೆಗಳನ್ನು ಘಾಸಿಗೊಳಿಸಬಹುದು, ನಂಬಿಕೆಗಳನ್ನಲ್ಲ.

ಚಿತ್ರ ಕೃಪೆ:  Yen Kay

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!