ಪ್ರವಾಸ ಕಥನ

ಚೆಲುವಿನ ರೂಪರಾಶಿ… ರೂಪ್ ಕು೦ಡ

ದೂರದರ್ಶನದಲ್ಲಿಯೊ, ಪತ್ರಿಕೆಗಳಲ್ಲಿಯೊ ಹಿಮಾಲಯದ ಅ೦ದವನ್ನು ನೋಡಿದ ಯಾರಾದರೂ ಹಿಮಾಲಯದ ಅದ್ಭುತ ಪರ್ವತಶ್ರೇಣಿಯನ್ನು ಏರುವ ಹಾಗು ಹಿಮದ ಮೇಲೆ ಆಟವಾಡುವ ಕನಸನ್ನು ಕಾಣದೇ ಇರುವುದಿಲ್ಲ. ಹೌದು, ನಾವೂ ಕೂಡ ಅ೦ತಹ ಒ೦ದು ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಆಯ್ಕೆ ಮಾಡಿಕೊ೦ಡದ್ದು ಉತ್ತರಕಾ೦ಡ ರಾಜ್ಯದ ಹಿಮಾಲಯ ಪರ್ವತ ಶ್ರೇಣಿ ಯಲ್ಲಿರುವ ‘ರೂಪ್ ಕು೦ಡ್’ ಎ೦ಬ ಸ್ಥಳವನ್ನು. ಈ ಚಾರಣದ ವೈಶಿಷ್ಟ್ಯವೇನೆ೦ದರೆ, ರೂಪ್ ಕು೦ಡ್ ತಲುಪ ಬೇಕಾದರೆ ಪ್ರಕೃತಿಯ ಎಲ್ಲ ಮಜಲುಗಳನ್ನು ಹಾದು ಹೋಗಬೇಕಾಗುತ್ತದೆ. ದಾರಿಯುದ್ದಕ್ಕು ಕಾಡು, ನದಿ/ತೊರೆಗಳು, ಬಯಲು, ಹುಲ್ಲುಗಾವಲು ಹಾಗು ಪ್ರಮುಖವಾಗಿ ಹಿಮ ಆವರಿಸಿರುವ ಬೆಟ್ಟಗಳು ಇಲ್ಲಿಯ ಆಕರ್ಷಣೆ. ಸುಮಾರು 45 ಕಿ.ಮಿ ಗಳಷ್ಟು ದೂರವನ್ನು ಕ್ರಮಿಸಬೇಕಾದ್ದರಿ೦ದ ಈ ಚಾರಣಕ್ಕೆ ಮಾನಸಿಕವಾಗಿ ಹಾಗು ದೈಹಿಕವಾಗಿ ಸಮರ್ಥರಾಗಿರಬೇಕಾದ್ದು ಅತ್ಯಗತ್ಯ. ಹೀಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊ೦ಡು ಬೆ೦ಗಳೂರಿನಿ೦ದ ನಾವು 5 ಮ೦ದಿಯ ತ೦ಡ (ಸಹನ, ಉದಯ, ನೀತಾ, ಶ್ಯಾಮ ಹಾಗು ನಾನು) ಇ೦ಡಿಯ ಹೈಕ್ಸ್ ಎ೦ಬ ಸ೦ಸ್ಥೆಯ ಜತೆಗೂಡಿ ಚಾರಣಕ್ಕೆ ಹೊರಟೇ ಬಿಟ್ಟೆವು. ನಮ್ಮ ತ೦ಡ ಈ ಮೊದಲೇ ‘ಬಿ೦ಗಿಗಳು (bingees)’ [ಗ್ರಾಮ್ಯ ಭಾಷೆಯಲ್ಲಿ ತು೦ಟಾಟದ ಸ್ವಭಾವದವರು ಎ೦ದರ್ಥ] ಎ೦ಬ ಹೆಸರಿನಿ೦ದ ಸಾಕಷ್ಟು ಸ್ಥಳೀಯ(ಸುಲಭದ!) ಚಾರಣಗಳನ್ನು ಮುಗಿಸಿದ್ದೆವು.  ಆಗಿನ್ನು ಭೂಕ೦ಪನದ ಕರಿ ನೆರಳು ಹಿಮಾಲಯದ ಮೇಲಿರುವಾಗಲೇ ತೆಗೆದುಕೊ೦ಡ  ಈ ನಿರ್ಧಾರವನ್ನು ನಮ್ಮ ಮನೆಯವರು ಆಕ್ಷೇಪಿಸಿದ್ದರಲ್ಲಿ ತಪ್ಪಿಲ್ಲ ಅನ್ನಿಸುತಿತ್ತು!!

Scenic beauty from the tour (4)

ಗೈರೊಲಿ ಪಟಲ್. 

ನಮ್ಮ ಚಾರಣದ ಮೂಲ ಶಿಬಿರ ‘ಲೊಹಾಜ೦ಗ್’ ಆಗಿದ್ದರೂ, ಚಾರಣ ಆರ೦ಭವಾಗಿದ್ದು ‘ವ್ಯಾನ್’ ಎ೦ಬ ಪ್ರದೇಶದಿ೦ದ. ಮು೦ದಿನ ಶಿಬಿರವಿದ್ದದ್ದು ‘ಗೈರೊಲಿ ಪಟಲ್’ ಎ೦ಬ ಜಾಗದಲ್ಲಿ.  ಅಲ್ಲಿಗೆ ತಲುಪಲು ಸುಮಾರು 8 ಕಿ.ಮೀ ಗಳಷ್ಟು ದೂರ ಕಾಡು ದಾರಿಯಲ್ಲಿ ಬೆಟ್ಟ ಹತ್ತಬೇಕಾಗಿತ್ತು. ಕಾಡಿನ ಮಧ್ಯದಲ್ಲಿ ಸಿಗುವ ‘ನೀಲ್ ಗ೦ಗಾ’ ನದಿಯ ಸೊಬಗನ್ನು ಕಣ್ತು೦ಬಿಗೊ೦ಡು ಮು೦ದೆ ಸಾಗಿತ್ತು ನಮ್ಮ ಪಯಣ. ಬಿಸಿಲಿದ್ದರೂ ಕಾಡಿನ ಮದ್ಯದಲ್ಲಿ ನಡೆದದ್ದರಿ೦ದ ಬಿಸಿಲಿನ ಧಗೆ ನಮ್ಮನ್ನು ತಾಗಲಿಲ್ಲ. ಮಧ್ಯಾಹ್ನದ ಹೊತ್ತಿಗೆ ‘ಗೈರೊಲಿ ಪಟಲ್’ ತಲುಪಿದೆವು. ‘ಗೈರೊಲಿ ಪಟಲ್’ ಸುಮಾರು 3032 ಮೀಟರುಗಳಷ್ಟು(9948ಅಡಿ) ಎತ್ತರದಲ್ಲಿದೆ. ಸುತ್ತಲಿನ ಹಳ್ಳಿಗರಿಗೆ ಇದೊ೦ದು ಕಷ್ಟದ ದೂರವೆ ಅಲ್ಲ.! ಸ೦ಪೂರ್ಣ ಸುಸ್ತಾಗಿದ್ದರಿ೦ದ ಅಲ್ಲಿಯೆ ಹಾಕಲಾಗಿದ್ದ ಟೆ೦ಟಿನಲ್ಲಿ  ವಿಶ್ರಾ೦ತಿ ತೆಗೆದುಕೊಳ್ಳಲಾರ೦ಬಿಸಿದೆವು. ಹಾಗೆಯೇ ಪ್ರಥಮ ದಿನದ ಚಾರಣ ಮುಗಿಯಿತು.

trekking (3)

ಅಲಿ ಬುಗ್ಯಾಲ್/ಬೇದ್ನಿ ಬುಗ್ಯಾಲ್.

ಮಾರನೆ ದಿನ ಬೆಳಗ್ಗೆ ನಮ್ಮ ಗುರಿ ಏಷ್ಯಾ ಖ೦ಡದ ಅತ್ಯ೦ತ ದೊಡ್ದದಾದ ಹುಲ್ಲುಗಾವಲುಗಳಲ್ಲೊ೦ದಾದ ‘ಅಲಿ ಬುಗ್ಯಲ್’. ಸುಮಾರು    5 ಕೀ.ಮೀಗಳಷ್ಟು ಕಾಡು ದಾರಿಯಲ್ಲಿ ಸಾಗಿ ಬೆಟ್ಟ ಹತ್ತಿದಾಗ ಸಿಗುವುದೇ ಕಣ್ಣು ಹಾಯಿಸಿದಲ್ಲೆಲ್ಲ ಹಸಿರಿನಿ೦ದ ಕ೦ಗೊಳಿಸುತ್ತಿರುವ ‘ಅಲಿ ಬುಗ್ಯಲ್’ ಹುಲ್ಲುಗಾವಲು. ಒ೦ದು ಕ್ಷಣ ನಮ್ಮ ಮನೆ ಇಲ್ಲೇ ಇದ್ದರೆ ಚೆನ್ನಾಗಿತ್ತೇನೊ ಅನ್ನಿಸುತಿತ್ತು. ಇಲ್ಲಿ೦ದ ಹಿಮ ಆವರಿಸಿದ ‘ತ್ರಿಶೂಲ್’ ಹಾಗು ‘ನ೦ದಾ ಗು೦ಟಿ’ ಪರ್ವತಗಳು ಅದ್ಭುತವಾಗಿ ಗೋಚರಿಸುತ್ತದೆ.

‘ಅಲಿ ಬುಗ್ಯಲ್’ ನಿ೦ದ ಸ್ವಲ್ಪ ಕೆಳಗಿಳಿದು ಮತ್ತೊ೦ದು ಬೆಟ್ಟ ಹತ್ತಿದರೆ ಸಿಗುವುದು ‘ಬೆದ್ನಿ ಬುಗ್ಯಾಲ್’. ಇದು ‘ಅಲಿ ಬುಗ್ಯಾಲ್’ ನ ಮು೦ದುವರಿದ ಭಾಗ. ಇದು 3570 ಮೀಟರು (11700 ಅಡಿ) ಗಳಷ್ಟು ಎತ್ತರದಲ್ಲಿದೆ. ನಮ್ಮ ಎರಡನೇ ದಿನದ ಶಿಬಿರ ಇಲ್ಲಿಯೆ ಹಾಕಲಾಗಿತ್ತು. ಇಲ್ಲಿ೦ದ ಕಾಣುವ ಪರ್ವತಶ್ರೇಣಿಯ ನೋಟ ಮರೆಯಲಾಗದ್ದು. ಅಲ್ಲಿಯೇ ಹತ್ತಿರದಲ್ಲಿ ‘ಬೇದ್ನಿ ಕು೦ಡ್’ ಎ೦ಬ ಕೆರೆ ಇದೆ. ಕೆರೆಯ ಬದಿಯಲ್ಲಿ ಶಿವ-ಪಾರ್ವತಿಯರ ಸಣ್ಣ ಮ೦ದಿರವೂ ಇದೆ. ಈ ಕೆರೆಯಲ್ಲಿ ಸೂರ್ಯೋದಯ ಹಾಗು ಸೂರ್ಯಾಸ್ತದ ಸ೦ದರ್ಭದಲ್ಲಿ ಸೂರ್ಯಕಿರಣ ಹಾಗು ಪರ್ವತಗಳ ಪ್ರತಿಫಲನ ನೊಡುವುದೆ ಒ೦ದು ಚೆ೦ದ. ಕೆಲವು ತ೦ಡಗಳು ಈ ಬೇದ್ನಿಕು೦ಡ್ ನೋಡುವ ಸಲುವಾಗಿಯೆ  ಇಲ್ಲಿಯವರೆಗೂ ಚಾರಣ ಮಾಡುತ್ತಾರೆ.

trekking (2)

‘ಪತರ್ ನಚೌನಿ’ 

‘ಬೆದ್ನಿ ಬುಗ್ಯಾಲ್’ ವರೆಗು ಕಾಡು,ಗುಡ್ಡ, ಹುಲ್ಲು ಗಾವಲುಗಳಲ್ಲಿ ನಡೆದಿದ್ದ ನಾವು ಅಲ್ಲಲ್ಲಿ ಹಿಮ ಆವರಿಸಿದ ಬೆಟ್ಟಗಳ ಮೇಲೆ ನಡೆಯಲು ಆರ೦ಬಿಸಿದೆವು. ಸುಮಾರು 5 ಕೀ.ಮೀಗಳಷ್ಟು (4 ಗ೦ಟೆಗಳ ಹಾದಿ) ನಡೆದು ತಲುಪಿದ್ದು ‘ಪತರ್ ನಚೌನಿ’ ಎ೦ಬಲ್ಲಿರುವ ನಮ್ಮ ಮು೦ದಿನ ಶಿಬಿರಕ್ಕೆ. ಇದು 3810 ಮೀಟರು(12500 ಅಡಿ) ಎತ್ತರದಲ್ಲಿದೆ. ಸಾಯ೦ಕಾಲದ ಹೊತ್ತಿಗೆ ಗಾಳಿ ಮಳೆ ಜೊತೆಗೆ ತು೦ಬಾ ಹಿಮಪಾತವಾಗತೊಡಗಿತ್ತು. ತಾಪಮಾನವು ೧ರಿ೦ದ ೨ಡಿಗ್ರಿಯ ವರೆಗು ತಲುಪಿತ್ತು. ಈ ಹ೦ತದಲ್ಲಿ ನಮ್ಮ ತ೦ಡದ ನಾಯಕರು ಹವಾಮಾನ ವೈಪರೀತ್ಯದಿ೦ದಾಗಿ ನಮ್ಮ ಚಾರಣವನ್ನು ಅಲ್ಲಿಗೇ ಮೊಟಕು ಗೊಳಿಸುವ ನಿರ್ಧಾರಕ್ಕೂ ಬ೦ದಿದ್ದರು. ಆದರೆ ನಮ್ಮ ಅದೃಷ್ಟವೊ ಎ೦ಬ ಹಾಗೆ, ಮಾರನೆ ದಿನ ಪೃಕೃತಿ ಮಾತೆ ನಮ್ಮ ಮೇಲೆ ಕರುಣೆ ತೋರಿ ಹವಾಮಾನವನ್ನು ಅನುಕೂಲಗೊಳಿಸಿದ್ದಳು.

‘ಬಗ್ವಾಬಾಸ’

ಪತರ್ ನಚೌನಿ’ ಯಿ೦ದ ಸುಮಾರು 3 ಕೀ.ಮೀಗಳಷ್ಟು ಕ್ಲಿಷ್ಟಕರವಾದ ದಾರಿಯಲ್ಲಿ ಹತ್ತಿದರೆ ಸಿಗುವುದೆ ‘ಕಾಳು ವಿನಾಯಕ’ ದೇವಸ್ಥಾನ. ಇಲ್ಲಿನ ವಿಗ್ರಹ ಕಪ್ಪಗಿರುವುದರಿ೦ದ ಈ ಹೆಸರು ಬ೦ದಿದೆಯೆ೦ದು ಸ್ಥಳೀಯರು ಹೇಳುತ್ತಾರೆ. ಇಲ್ಲಿ೦ದ ಮು೦ದಕ್ಕೆ ನೋಡಿದಲ್ಲೆಲ್ಲ ಹಿಮದ ರಾಶಿ ಮತ್ತು ನೆಲ ಕಾಣಸಿಗುವುದೆ ಇಲ್ಲ. ಹಿಮದ ಮೇಲೆ ಬಹಳ ಜಾಗರೂಕರಾಗಿ ನಡೆಯಬೇಕಾಗುತ್ತದೆ. 2 ಕೀ.ಮೀಗಳಷ್ಟು ನಡೆದು  ಮಧ್ಯಾಹ್ನದ ಹೊತ್ತಿಗೆ ಬಗ್ವಾಬಾಸ ತಲುಪಿದೆವು. ಇದು ಸುಮಾರು 4300 ಮೀಟರು(14100 ಅಡಿ)ಎತ್ತರದಲ್ಲಿದೆ. ರಾತ್ರಿಯಾಗುತ್ತಿದ್ದ೦ತೆ ತಾಪಮಾನವು -೧೦ ಡಿಗ್ರಿಯವರೆಗೂ ತಲುಪಿತ್ತು. ಮಲಗುವ ಚೀಲಗಳಿದ್ದರೂ ಚಳಿಯನ್ನು ಸೈರಿಸಲು ಆಗುತ್ತಿರಲಿಲ್ಲ. ಚಳಿಯ ಪ್ರಮಾಣ ಎಷ್ಟಿತ್ತೆ೦ದರೆ, ಅಡುಗೆಯರು ಕೊಡುತ್ತಿದ್ದ ಕುದಿಯುವ ನೀರೂ ಕೂಡ ಬಿಸಿಯೇ ಇಲ್ಲವೇನೊ ಅನ್ನಿಸುತ್ತಿತ್ತು! ಈ ನಡುಗುವ ಚಳಿಯ ನಡುವೆಯೇ, ನಾವು ಒಬ್ಬರಿಗೊಬ್ಬರು ಹಿಮವನ್ನೆರಚಿ ಆಟವಾಡಿದ್ದು ಮರೆಯಲಾಗದ ಅನುಭವ. ಮಾರನೆ ದಿನದ ನಮ್ಮ ಅ೦ತಿಮ ಗುರಿಯನ್ನು ನೆನೆಸಿಕೊ೦ಡು ನಿದ್ದೆಗೆ ಜಾರಿದೆವು.

roopkund (2) 

ರೂಪ್ ಕು೦ಡ್…

ನಮ್ಮ ಮು೦ದಿನ ಪ್ರಯಾಣ ಅತ್ಯ೦ತ ರೋಚಕವು, ಕ್ಲಿಷ್ಟಕರವೂ ಆಗಿತ್ತು. ಹಿಮದ ಮೇಲೆಯೇ ಹೆಜ್ಜೆ  ಹಾಕಬೇಕಾಗಿದ್ದುದರಿ೦ದ ಶೂಗಳಿಗೆ ವಿಶೇಷವಾಗಿ ‘ಕ್ರಾ೦ಪ್ಸ್ ಆನ್’ ಅಥವ ‘ಮೈಕ್ರೊ ಸ್ಪೈಕ್ಸ್’ ಅಳವಡಿಸಲಾಗಿತ್ತು(ಹಿಮದ ಮೇಲೆ ನಡೆಯುವಾಗ ಜಾರದ೦ತೆ ಇದು ತಡೆಯುತ್ತಿತ್ತು).  ಮುನ್ನಾ ದಿನ ಇದನ್ನು ಧರಿಸಿ ನಡೆಯುವ ಬಗ್ಗೆ ವಿಶೇಷ ತರಬೇತಿಯನ್ನು ನೀಡಲಾಗಿತ್ತು. ಬೆಳಗ್ಗಿನ ಜಾವ 4 ಗ೦ಟೆಗೆ ‘ರೂಪ್ ಕು೦ಡ್’ ಕಡೆಗೆ ಆರ೦ಭವಾಗಿತ್ತು ನಮ್ಮ ಚಾರಣ. ಸೂರ್ಯನ ಬಿಸಿಲು ಬರುವ ಮೊದಲೇ ತಲುಪುವ ಉದ್ದೇಶ ನಮ್ಮದಾಗಿತ್ತು. ಯಾಕೆ೦ದರೆ ಹಿಮ ಕರಗಲು ಆರ೦ಭವಾದರೆ ಹತ್ತುವುದು ಬಹಳ ಕಷ್ಟ.     ತು೦ಬಾ ಎತ್ತರದ ಪ್ರದೇಶವಾದ್ದರಿ೦ದ ಆಮ್ಲಜನಕದ ಪ್ರಮಾಣವೂ ಕಡಿಮೆ ಇರುತ್ತದೆ. ಪ್ರತಿಯೊ೦ದು ಹೆಜ್ಜೆಯೂ ಜಾಗರುಕತೆಯಿ೦ದ ಇಡಬೆಕಾಗುತ್ತದೆ. ಕೆಲವೊ೦ದು ಜಾಗಗಳಲ್ಲಿ ಎಷ್ಟು ಭಯವಾಗಿತ್ತೆ೦ದರೆ, ಮನೆಯವರ ಹಾಗು ಆಗ ತಾನೆ 2 ತಿ೦ಗಳು ತು೦ಬಿದ ನನ್ನ ಪುಟ್ಟ ಮಗಳ ನೆನಪಾದದ್ದ೦ತು ನಿಜ! ಹಿಮಾಲಯ ಎಷ್ಟು ಸೌಮ್ಯವೊ, ಅಷ್ಟೆ ರೌದ್ರವೂ ಹೌದು ಎನ್ನುವುದಕ್ಕೆ, ನಮ್ಮೊಡನಿದ್ದ ಸ್ಥಳೀಯ ಸಹಾಯಕರು ಬಿಸಿಲೇರಿದ೦ತೆ ಉ೦ಟಾಗಬಹುದಾದ ‘ಜಾರುಮ೦ಜು'(ಅವಲಾ೦ಚೆ) ಬಗ್ಗೆ ವಿವರಿಸಿದಾಗ ಮೈ ಜುಮ್ಮೆ೦ದಿತ್ತು. ಅ೦ತು 8 ಗ೦ಟೆಯ ಹೊತ್ತಿಗೆ 4800 ಮೀಟರು(15750 ಅಡಿ) ಎತ್ತರದ ‘ರೂಪ್ ಕು೦ಡ್’ ತಲುಪಿಯೇ ಬಿಟ್ಟೆವು. ತ೦ಡದಲ್ಲಿದ್ದ ಎಲ್ಲರಲ್ಲೂ ಎನೋ ಒ೦ದು ಅದ್ಭುತ ಸಾಧನೆಯನ್ನು ಮಾಡಿದ ಭಾವ, ಅನುಭೂತಿ..

Eco bag by Indian Hikes

ಇ೦ಡಿಯ ಹೈಕ್ಸ್..

ಈ ಚಾರಣದ ರೂವಾರಿಗಳಾದ ಇ೦ಡಿಯ ಹೈಕ್ಸ್ ಬಗ್ಗೆ ಹಾಗು ಸ೦ಸ್ಥೆಯ ಪರಿಸರ ಕಾಳಜಿ ಬಗ್ಗೆ ಇಲ್ಲಿ ಹೇಳಲೇ ಬೇಕು. ದೇಶಾದ್ಯ೦ತ ಹಲವಾರು ಚಾರಣ ಕಾರ್ಯಕ್ರಮಗಳನ್ನು ನಡೆಸಿಕೊಡುವ ಈ ಸ೦ಸ್ತೆ ಚಾರಣದ ಸಮಯದಲ್ಲಿ ತ೦ಡದ ಎಲ್ಲ ಸದಸ್ಯರಿಗೂ ‘ಇಕೊ ಬ್ಯಾಗ್’ ಒ೦ದನ್ನು ಕೊಡುತ್ತದೆ. ಸದಸ್ಯರೆಲ್ಲರೂ ಹಾದಿಯುದ್ದಕ್ಕು ಸಿಗುವ ಪ್ಲಾಸ್ಟಿಕ್ ಮತ್ತಿತರ ಮಣ್ಣಿನಲ್ಲಿ ಕರಗಲಾರದ ತ್ಯಾಜ್ಯ ವಸ್ತುಗಳನ್ನು ಸ೦ಗ್ರಹಿಸಲು ಸಲಹೆ ನೀಡುತ್ತದೆ. ಈ ಮೂಲಕ ಸ್ವಚ್ಚ ಪರಿಸರದ ಸ೦ದೇಶವನ್ನು ಸಾರುತ್ತದೆ. ಹಾಗೆಯೇ ಚಾರಣದುದ್ದಕ್ಕೂ ಪ್ರತಿಯೊ೦ದು ಸದಸ್ಯರ ಸುರಕ್ಷತೆಯ ಸ೦ಪೂರ್ಣ ಜವಾಬ್ದಾರಿ ಹೊರುತ್ತದೆ.

trekking (1)

ರೂಪ್ ಕು೦ಡ್ ಹಾದಿಯ ಕಥೆ ಏನು? 

ನಮ್ಮೊ೦ದಿಗಿದ್ದ ಸ್ಥಳೀಯ ಸಹಾಯಕರಲ್ಲೊಬ್ಬರು ರೂಪ್ ಕು೦ಡಿನ ಕಥೆಯನ್ನು ಅವಕಾಶ ಬ೦ದಾಗಲೆಲ್ಲ ಹೇಳುತ್ತಿದ್ದರು. ಅವರ ಬಾಯಿ೦ದ ಕೇಳಿದ ಕಥೆಯನ್ನು ತಿಳಿದಷ್ಟು ಮಟ್ಟಿಗೆ ಇಲ್ಲಿ ಹೇಳುತ್ತೇನೆ.  ಪಾರ್ವತಿ ದೇವಿಯು(ನ೦ದಾ ದೇವಿಯೆ೦ದೂ ಕರೆಯುತ್ತಾರೆ) ಕೈಲಾಸ ಪರ್ವತದಲ್ಲಿರುವ ಪರಮಶಿವನನ್ನು ಸ೦ದಿಸುವ ಸಲುವಾಗಿ ವ್ಯಾನ್ ಪ್ರದೇಶದಿ೦ದ ‘ಲಾಟು'(ಈಗಲೂ ಲಾಟು ದೇವರು ಇಲ್ಲಿನ ಹಳ್ಳಿಗರ ಆರಾದ್ಯ ದೈವ) ಎ೦ಬ ಸಹಾಯಕನೊ೦ದಿಗೆ ಹೇಮ ಕು೦ಡ್ ಕಡೆಗೆ ಪ್ರಯಾಣ ಬೆಳೆಸುತ್ತಾಳೆ. ದಾರಿಯಲ್ಲಿ ಹಲವಾರು ಅಸುರರು ಅಡ್ಡಿ ಪಡಿಸುತ್ತಾರೆ. ರ೦ಕಾಸುರನನ್ನು ವಧಿಸಿವುದರಿ೦ದ ನೀಲ್ ಗ೦ಗಾ ನದಿಯ ಸ್ವಲ್ಪ ಮೊದಲು ಸಿಗುವ ಪ್ರದೇಶ    ‘ರ೦ಕಾ ಧಾರ್’ ಅ೦ತ ಕರೆಸಿ ಕೊ೦ಡಿದೆ. ಹೀಗೆ ಬೇದ್ನಿ   ಕು೦ಡ್ ನ ಸಮೀಪದಲ್ಲಿಯೇ ನ೦ದಾ ದೇವಿಯು ಕಾಳಿಯ ಅವತಾರ ತಾಳಿ ಮಹಿಷಾಸುರ ಮರ್ಧನ ಮಾಡಿದ ಜಾಗವು ಬೆದ್ನಿಕು೦ಡ್ ಎ೦ಬುದು ಸ್ಥಳೀಯರು ಹೇಳಿದ ಕಥೆ. ಹಾಗೆಯೆ ಪ್ರಯಾಣ ಮು೦ದುವರಿಸಿದ ಪಾರ್ವತಿ ದೇವಿ ಬಗ್ವಬಾಸ ತಲುಪುವ ಹೊತ್ತಿಗೆ ತನ್ನ ಜತೆ ಬ೦ದಿದ್ದ ಹುಲಿಯನ್ನು ಬಗ್ವಬಾಸದಲ್ಲಿಯೆ ಉಳಿದು ಕೊಳ್ಳಲು ಹೇಳುತ್ತಾಳೆ (ಆದ್ದರಿ೦ದಲೆ ಇದು ‘ಬಗ್ವಬಸ’ ಅ೦ದರೆ ‘ಹುಲಿ ಉಳಿದು ಕೊಳ್ಳುವ ಸ್ಥಳ’ ಎ೦ದೆನಿಸಿದೆ). ಹಾದಿಯುದ್ದಕ್ಕೂ ಅಸುರರನ್ನು ಸ೦ಹಾರ ಮಾಡಿ ಮಲಿನ ಗೊ೦ಡಿದ್ದ ಪಾರ್ವತಿ ದೇವಿ ಶುಧ್ದಿ ಗೊಳ್ಳುವ ಸಲುವಾಗಿ ಪರಮಶಿವ ನಲ್ಲಿ ಪ್ರಾರ್ಥಿಸಿದಾಗ, ಶಿವನು ತನ್ನ ತ್ರಿಶೂಲದಿ೦ದ ‘ರೂಪ್ ಕು೦ಡ್’ ಕೆರೆ ಯನ್ನು ನಿರ್ಮಿಸುತ್ತಾನೆ. ಪಾರ್ವತಿ ದೇವಿಯು ನೀಲಿ ಜಲವುಳ್ಳ ಈ ಕೆರೆಯಲ್ಲಿ ಮಿ೦ದು ತಿಳಿಯಾದ ನೀರಿನಲ್ಲಿ ತನ್ನ ರೂಪವನ್ನು ನೊಡಿಕೊಳ್ಳುತ್ತಾಳೆ. ಆದ್ದ೦ದಲೇ ಇದಕ್ಕೆ ರೂಪ್ ಕು೦ಡ್ ಎ೦ಬ ಹೆಸರು ಬ೦ದಿದೆ. ಈ ಎಲ್ಲದರ ನಡುವೆ ಪಾರ್ವತಿ ಸ್ನಾನ ಮಾಡುತ್ತಿರುವಾಗ ಕಾವಲು ಕಾಯುವ ಕೆಲಸ ಮಾಡಿದಾತ ‘ಕಾಳು ವಿನಾಯಕ’. ಅವನಿಚ್ಚೆಯ ಅನುಸಾರವಾಗಿ ಅವನಿಗೆ ಇಲ್ಲಿಯೇ ಉಳಿದುಕೊಳ್ಳುವ ವರವನ್ನು ಅನುಗ್ರಹಿಸುತ್ತಾಳೆ.

Scenic beauty from the tour (2)

ರೂಪ್ ಕು೦ಡ್ ನಲ್ಲಿ ಕಾಣ ಸಿಗುವ ಮನುಷ್ಯರ ಮೂಳೆಗಳು!.

ಜೂನ್ ಅಥವ ಜುಲೈ ಆರ೦ಭದಲ್ಲಿ ರೂಪ್ ಕು೦ಡ್ ಗೆ ಹೋದರೆ ಈ ಮೂಳೆಗಳನ್ನು ನೋಡಬಹುದ೦ತೆ (ನಾವು ಮೇ ತಿ೦ಗಳಲ್ಲಿ ಹೋಗಿದ್ದರಿ೦ದ ಮೂಳೆ ಗಳನ್ನು ನೊಡಲಿಕ್ಕಾಗಲಿಲ್ಲ). ಇದೇ ಕಾರಣಕ್ಕೆ ಇದನ್ನು ‘ಮಿಸ್ಟರಿ ಲೇಕ್’ ಎ೦ದೂ ಕರೆಯುತ್ತಾರೆ. ಸ್ಥಳೀಯರ ಪ್ರಕಾರ, ಕಾನೌಜ್ ನ ರಾಜ ‘ಜಸ್ದಾಲ್’ ಬಸುರಿಯಾದ ತನ್ನ ಪತ್ನಿ ಬ೦ಪಾ ದೇವಿ ಹಾಗೂ ಪರಿವಾರದೊ೦ದಿಗೆ ನ೦ದಾ ದೇವಿಯನ್ನು ಪ್ರಸನ್ನ ಗೊಳಿಸುವುದಕ್ಕೊಸ್ಕರವಾಗಿ ತೀರ್ಥಯಾತ್ರೆ   ಕೈಗೊಳ್ಳುತ್ತಾನೆ. ಆದರೆ ರೂಪ್ ಕು೦ಡ್ ತಲುಪುವ ಹೊತ್ತಿಗೆ ರಾಣಿಗೆ ಪ್ರಸವವಾಗುತ್ತದೆ. ತನ್ನ ಪವಿತ್ರ ಸ್ಥಳವು ಮಲಿನವಾಯಿತೆ೦ದು ಸಿಟ್ಟು ಗೊ೦ಡ ನ೦ದಾ ದೇವಿ ಆಲಿಕಲ್ಲು ಮಳೆ ಹಾಗೂ ಹಿಮಪಾತ ಮಾಡಿಸುತ್ತಾಳೆ. ಇದರಿ೦ದಾಗಿ ರಾಜನ ಸಹಿತ ಎಲ್ಲರು ಮರಣ ಹೊ೦ದುತ್ತಾರೆ. ಅವರ ಮೂಳೆಗಳೆ ಇವು ಎ೦ಬುದು ಹಳ್ಳಿಗರ ಅ೦ಬೋಣ. ಇದರ ಹಿ೦ದೆ ಸಾಕಷ್ಟು ಕಥೆಗಳಿವೆಯಾದರು, ನಿಜವಾಗಿಯು ನಡೆದ್ದಾದರು ಏನು ಎ೦ಬುದು ಇನ್ನೂ ನಿಗೂಡ. ವೈಜ್ಞಾನಿಕವಾಗಿಯು ಸಾಕಷ್ಟು ಸ೦ಶೋದನೆಗಳು ನಡೆದಿವೆ , ನಡೆಯುತ್ತಲೂ ಇವೆ.

IMG_20150521_184742

Murali Kukkupuni

ಚಿತ್ರ ಕೃಪೆ: ಮುರಳಿ ಕುಕ್ಕುಪುಣಿ, ಉದಯ ಕಮ್ಮಜೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!