ಸಿವ ವೊತ್ತಾರೆ ಎದ್ದು ಬೋ ಬೇಜಾರಲ್ಲಿದ್ದ. ಗೋಪಾಲಣ್ಣಂಗೆ ಇವ್ನ ಮೋನ ತಡಿಲಾರ್ದೆ ಕೇಳ್ದ, “ ಏನಲೇ ಬೇಕೂಫಾ.. ಇದ್ಯಾಕಿಂಗೆ ಆಕಾಸಾನೇ ತಲ್ಮ್ಯಾಕೆ ಬಿದ್ದಂಗಾಡ್ತಿ?”
“ಏನೇಳ್ಳಿ ಗೋಪಾಲಣ್ಣ, ನಮ್ ಯಾಕೂಬುನ ನೇಣ್’ಗಂಬಕ್ಕಾಬಾರ್’ದಿತ್ತು. ಅದ್ಕೇಯಾ ಬೇಜಾರು..” ಸಿವ ಕಣ್ಣೀರಾಕ್ದ.
“ಎಲಾ ಬಡ್ಡೀ ಮಗನಾ.. ನಿಂದೂಕೆ ಅವರ್ದೂಕೆ ಏನಲಾ ಸಮ್ಮಂದ? ಪೀಡೆ ತೊಲಗ್ತು ಅಂತ ಕುಸಿ ಪಡಾದ್ ಬಿಟ್ಟು ನಮ್ಮ ಅಣ್’ತಮ್ಮಗಳ್ ಥರಾ ಯಾಕೂಬ್’ಗೆ ಸಪ್ಪೋರ್ಟ್ ಮಾಡ್ತಿದೀಯಾಲ್ಲಾ ಬಿಕ್’ನಾಸಿ.. ನಿಂಗೆ ಬುದ್ದೀ ಗಿದ್ದಿ ಏನರ ಐತಾ?” ಕ್ವಾಪ ಕಾರ್ದ ಗೋಪಾಲಣ್ಣ.
“ಬುಡು ಗೋಪಾಲಣ್ಣ.. ನಾವ್ಯಾಕೆ ಬಡ್ಕೋಬೇಕು.. ಏನಾರ ವೊಸ ವಿಸ್ಯ ಇದ್ರೆ ಹೇಳಿ”
“ಅಂಗೇಳು ಮತ್ತೆ… ಒಳ್ಳೇ ವಿಸ್ಯ ಐತೆ ಕಣ್ಲಾ. ನಮ್ ರಮ್ಯ ಮೇಡಮ್ಮು ಪಾರಿನ್ನಿಂದ ಬಂದೈತೆ ಕಣ್ಲಾ, ಮಂಡ್ಯ ಹೈಕ್ಲು ಮತ್ತೆ ಫಿದಾ ಆಗ್ಬುಟ್ಟವ್ರೆ” ಗೋಪಾಲಣ್ಣ ಹೇಳ್ದ.
“ಅಲೆಲೆಲೆ… ಇದಪ್ಪ ಗುಡ್ ನ್ಯೂಸ್ ಅಂದ್ರೆ.. ಸೋತ್ ಒಂದ್ವರ್ಸ ಆದ್ಮ್ಯಾಕೆ ಯಾಕೆ ಗೋಪಾಲಣ್ಣ ರಮ್ಯ ಬಂದಿದ್ದು? ಮತ್ತೆ ಯಾವ್ದಾರ ಎಲೆಕ್ಸನ್ನು ಬಂತಾ? ಈ ಬಡ್ಡೆತ್ತಾವ ಮಂಡ್ಯ ಹೈಕ್ಲು, ಮತ್ತೆ ಗೆಲ್ಸ್’ಬುಟ್ಟಾರು” ಸಿವ ಮಖ ಸಿಂಡರ್ಸ್ದ.
“ಥತ್.. ಅಬ್ಬೇಪಾರಿ.. ರಾಜ್ಯದ ಏಳ್ ಕೋಟಿ ಜನ ಥರಾ ನೀನೂ ಅಂಗೇ ಹೇಳಕ್ಕೆ ಸುರು ಮಾಡ್’ಬುಟ್ಯಾ? ಅಂಗಲ್ಲ ಕಣ್ಲಾ. ನಮ್ ಮಂಡ್ಯದಾಗ ರೈತ್ರು ಸೂಸೈಡ್ ಮಾಡ್ತಿದಾರಲ್ಲ. ಅವ್ರನ್ನೆಲ್ಲಾ ಮಾತಾಡ್ಸೋಣ ಅಂತ ಬಂದಿದ್ದಂತೆ ರಮ್ಯ ಮೇಡಮ್ಮು”
“ಓ.. ಅಂಗಾರೆ ಕನ್’ಫರ್ಮ್..ಮೊನ್ನೆ ರಾವುಲ್ಲು ಗಾಂಧಿ ಆಂಧ್ರದಾಗೆ ಪಾದಯಾತ್ರೆ ಮಾಡಿದ್ರಲ್ಲ, ಅಂಗೇ ನೆಕ್ಸ್ಟ್ ಮಂತ್ ಮಂಡ್ಯಾಕ್ಕೂ ಬತ್ತಾರಂತೆ. ಅವಾಗ ಎಲ್ಲಿ ನಮ್ಮ್ ಯೆಂಪಿ ಕ್ಯಾಂಡೇಟು, ಅವ್ರೆಸ್ಟ್ ಸಲ ಬಂದೋದ್ರು ರೈತ್ರ ಕಷ್ಟ ಕೇಳೋಕೆ ಅಂತ ಕೇಳ್ತವ್ರೆ. ಅವಾಗ ರಮ್ಯ ಮೇಡಮ್ಮು ಬರ್ಲೇ ಇಲ್ಲಾ ಅಂದ್ರೆ ನೆಕ್ಸ್ಟ್ ಎಲೆಕ್ಸನ್ನಾಗೆ ಟಿಕೇಟು ಮಿಸ್ಸಾಗೋದು ಗ್ಯಾರಂಟೀ. ಅದ್ಕೇ ಈ ಎಣ್ಮಗ ಟ್ರಿಕ್ಕು ಮಾಡ್ತೈತಿ ಗೋಪಾಲಣ್ಣ” ಸಿವ ಡೈರೆಕ್ಟಾಗೇ ಹೇಳ್ದ.
“ಬಾಪ್ಪರೇ ಮಗನ.. ನೀನ್ ಹೇಳಾದೂ ಸರ್ಯಾಗೈತೆ. ಎಲೆಕ್ಸನ್ನು ಮುಂಚೆ ಮಂಡ್ಯದಾಗೆ ಮನೆ ಮಾಡ್ತೀನಿ ಅಂದಿದ್ಲು, ಸೋತ್ಮ್ಯಾಕೆ ಲಂಡನ್ನಾಗೆ ಮನೆ ಮಾಡಿದ್ಲು. ಆಕಡೆ ಪಾಲಿಟಿಕ್ಸು ಇಲ್ಲ್ದೆ ಈ ಕಡೆ ಪಿಚ್ಚರ್ರೂ ಇಲ್ದೆ ತಲೆ ಕೆಟ್ಟೋಗಿತ್ತು ಮೇಡಂಗೆ. ಅದ್ಕೆ ರೈತ್ರು ಸಮಸ್ಯೆ ಬಗ್ಗೆ ಪಿ.ಎಚ್.ಡಿ ಮಾಡ್ತಾ ಇವ್ನಿ ಅಂತ ಸುಳ್ಳೇಳಿ ಪಾರಿನ್’ಗೆ ಹಾರ್ಬುಡ್ತು. ಈಕಡೆ ಮಂಡ್ಯದಾಗೆ ರೈತ್ರು ಸಾಲ ಮಾಡಿ ಸತ್ರೂ ಆವಮ್ಮ ಕಾಲೂ ಮಡುಗ್’ಲಿಲ್ಲ”
“ಅದೆಲ್ಲ ಸರಿ ಕಣಣ್ಣ.. ರಮ್ಯ ಮೇಡಮ್ಮು ಬಂದಿದ್ಕೆ ಮಂಡ್ಯದ್ ಮನೆ ದ್ಯಾವ್ರು ಅಂಬ್ರೀಸುಗೆ ಕ್ವಾಪ ಬರಲ್ವಣ್ಣಾ?”
“ಅಗಳಗಳ.. ಮೊನ್ನೆ ಸಿದ್ದಣ್ಣ ನೀನೇನೂ ಕೆಲ್ಸ ಮಾಡ್ತಾ ಇಲ್ಲ ಅನ್ನೋವಾಗ್ಲೆ ಅಂಬ್ರೀಸು ಅಂಡ್ ಸುಟ್ಟ್ಕೊಂಡಿತ್ತು. ಈಗ ರಮ್ಯ ಬಂದೈತೆ ಅನ್ನೊವಾಗ ಪಾಪ ಹಾವು ಬುಟ್ಕೊಂಡಿರತ್ತೆ. ಎಲ್ಡು ಸ್ಕಾಚು ಒಳಕ್ಕೋಗಿರತ್ತೆ ಈಟೋತ್ಗೆ. “
“ಬುಡಿ ಗೋಪಾಲಣ್ಣ.. ಏನಾರ ಹಾಳಗೋಗ್ಲಿ. ನಾವ್ ನಮ್ ಕೆಲ್ಸ ನೋಡಾಣ.” ಸಿವ ಎದ್ದು ಕೆಲ್ಸಕ್ಕೆ ಹೊಂಟ.
“ಸರಿ ಕಣಲಾ.. ಸಿವನೇ ಸಂಬುಲಿಂಗ”