ಪ್ರಚಲಿತ

ನಮ್ಮ ವ್ಯವಸ್ಥೆ ಸರಿಯಾಗಲು ಇನ್ನೆಷ್ಟು ಸೌಮ್ಯಗಳು ಬಲಿಯಾಗಬೇಕು?

ಕಳೆದ ಭಾರಿಯ ಲೇಖನದಲ್ಲಿ ಆ ಕೊಲೆಯ ಬಗ್ಗೆ ನಿಮಗೆಲ್ಲರಿಗೂ ನೆನಪಿಸಿದ್ದೆ. ಸಾಧಾರಣವಾಗಿ ನಮ್ಮಲ್ಲಿ ಯಾರಾದರೂ ಸತ್ತರೆ ಒಮ್ಮೆ ಕೆಲವು ದಿನಗಳ ಕಾಲ ಕೊರಗಿ ಮತ್ತೆ ಸ್ವಲ್ಪ ದಿನಗಳಲ್ಲಿ ಮರೆತು ಬಿಡುತ್ತೇವೆ. ಸತ್ತವರು ನಮ್ಮ ಮನೆಯವರೇ ಆಗಿದ್ದರೂ.. ಆದರೆ ಸೌಮ್ಯ ಸಾವು ಸಂಭವಿಸಿ ಹದಿನೇಳು ವರ್ಷಗಳೇ ಸಂದಿದ್ದರೂ ಯಾರೊಬ್ಬರೂ ಆ ಸಾವನ್ನು ಮರೆತಿಲ್ಲ. ಸುಖಾ ಸುಮ್ಮನೆ ಮರೆಯುವಂತಹ ಸಾವೂ ಅದಲ್ಲ. ಆಕೆ ನಮ್ಮವಳೇ, ನಮ್ಮ ಸ್ವಂತ ಅಕ್ಕನೇ ಎನ್ನುವಷ್ಟರ ಮಟ್ಟಿಗೆ ಆ ಸಾವು ನಮ್ಮಲ್ಲಿ ಭಾವನಾತ್ಮಕತೆ ಹುಟ್ಟು ಹಾಕಿದೆ.

ಅದಕ್ಕೆ ಕಾರಣಗಳೂ ಇವೆ. ಆ ಸೌಮ್ಯ ಹೆಸರಿನಲ್ಲಿ ಮಾತ್ರವಲ್ಲ ನಡೆ ನುಡಿಯಲ್ಲೂ ಅಷ್ಟೇ ಸೌಮ್ಯ ಸ್ವಭಾವದವಳಂತೆ. ಕಬಕ, ಮಿತ್ತೂರು, ಆಲದಗುಂಡಿ, ಪುತ್ತೂರು ಆಸುಪಾಸಿನಲ್ಲಿ ಎಲ್ಲೇ ಹೋಗಿ ಯಾರನ್ನೇ ವಿಚಾರಿಸಿ, ನಿಮಗಿದೇ ಮಾತು ಕೇಳಿ ಬರುತ್ತದೆ. ವಿವೇಕಾನಂದ ಕಾಲೇಜಿನಲ್ಲಿ ಓದುತ್ತಿದ್ದ ಆಕೆಯ ಸಹಪಾಠಿಗಳು, ಜೂನಿಯರ್’ಗಳು ಅಥವಾ ಆಕೆಯ ಉಪನ್ಯಾಸಕರೂ ಸಹ ಆಕೆ ಅತ್ಯಂತ ಮೃದು ಸ್ವಭಾವದ ಹುಡುಗಿ, ಯಾರ ಸುದ್ದಿಗೂ ಹೋಗುವವಳಲ್ಲ ಎಂದೇ ಸ್ಮರಿಸುವುದನ್ನು ಅದೆಷ್ಟೋ ವರ್ಷಗಳ ನಂತರವೂ ಕೇಳ್ಪಟ್ಟಿದ್ದೇನೆ.

ಅದಕ್ಕಾಗಿಯೇ ಅಂದು ಆಕೆಯ ಸಹಪಾಠಿಗಳು ಬೀದಿಗಿಳಿದಿದ್ದು, ಬೆಂಕಿಯಿಟ್ಟದ್ದು, ಕಲ್ಲು ತೂರಾಟ ನಡೆಸಿದ್ದು, ಆ ಪಾಪ ಮುಗ್ಧ ಹುಡುಗಿಯನ್ನು ಅಷ್ಟೊಂದು ಅಮಾನುಷವಾಗಿ ಕೊಲೆ ಮಾಡಿದ್ದನ್ನು ನೋಡಿ ‘ನಮಗೇನು, ನಮ್ಮ ಮನೆಯವಳಲ್ಲ, ಅವಳು ಸತ್ತಳೆಂದು ನಾವು ನಮ್ಮ ಭವಿಷ್ಯ ಹಾಳು ಮಾಡಿಕೊಳ್ಳುವುದೇಕೆ?’ ಎಂದು ಸುಮ್ಮನೆ ಕೂರಬಹುದಿತ್ತು. ಊಹೂ…ನಮ್ಮವರಿಗೆ ಆಕೆಯ ಕೊಲೆಯನ್ನು ಅರಗಿಸಿಕೊಳ್ಳಲಾಗಲಿಲ್ಲ. ತರಗತಿ ಬಹಿಷ್ಕರಿಸಿ ಹೋರಾಟಕ್ಕಿಳಿದರು, ಆಕೆಯ ಸಹಪಾಠಿಗಳ್ಯಾರೂ ತಮ್ಮ ತರಗತಿಗಳು ಮಿಸ್ ಆಗುತ್ತಿವೆ ಇದರಿಂದ ಹಾಜರಾತಿ, ಪರೀಕ್ಷೆಗಳಿಗೆ ತೊಂದರೆಯಾಗಬಹುದೆಂದು ಲೆಕ್ಕಿಸದೇ ಹೋರಾಟಕ್ಕಿಳಿದಿದ್ದರು, ಅಷ್ಟರ ಮಟ್ಟಿಗೆ ಸೌಮ್ಯ ಸಾವು ಅವರಲ್ಲಿ ಕಿಡಿ ಹೊತ್ತಿಸಿತ್ತು.

ಆವಾಗೆಲ್ಲ JusticeforSoumya ಎಂದೆಲ್ಲಾ ನಮ್ಮ ಗೋಡೆಗಳ ಮೇಲೆ ಅಂಟಿಸಿಕೊಳ್ಳಲು ಯಾವ ಅವಕಾಶವೂ ಇರಲಿಲ್ಲ. ತ್ವರಿತವಾಗಿ ಜನರನ್ನು ತಲುಪಲು ಯಾವ ಲೈಕು ಪೇಜುಗಳೂ ಇರಲಿಲ್ಲ. ಆದರೆ ಆವತ್ತು ಈ ಹೋರಾಟದ ಕಿಚ್ಚು ಎಷ್ಟೊಂದು ವ್ಯಾಪಕವಾಗಿ ಹಬ್ಬಿತ್ತೆಂದರೆ ಇವತ್ತೂ ಕೂಡ ಅಂತಹಾ ಹೋರಾಟ ರೂಪಿಸಲು ಸಾಧ್ಯವಿಲ್ಲ. ವಿದ್ಯಾರ್ಥಿ ಸಮೂಹ ಯಾವ ಪರಿ ಒಗ್ಗಟ್ಟಾಗಿತ್ತೆಂದರೆ ಇಡೀ ರಾಷ್ಟ್ರಕ್ಕೆ ವಿದ್ಯಾರ್ಥಿ ಶಕ್ತಿ ಸಿಡಿದೆದ್ದರೆ ಅದರ ಮುಂದೆ ಯಾವುದೂ ಲೆಕ್ಕಕ್ಕಿಲ್ಲ ಎಂಬುದು ಸಾಬೀತಾಗಿತ್ತು ಆವತ್ತು. ಅದಕ್ಕಾಗಿ ಪುತ್ತೂರಿನಲ್ಲಿ ಕರ್ಫ್ಯೂ ಹೇರಲಾಗಿತ್ತು. ಒಂದಲ್ಲ ಎರಡು ಭಾರಿ!

ಇನ್ನು ಆರೋಪಿಯ ವಿಷಯಕ್ಕೆ ಬರೋಣ, ಈ ಕೇಸಿನ ಬಗ್ಗೆ ಇನ್ನೂ ಅಧ್ಯಯನ ಮಾಡಿದಾಗ ಒಂದು ವಿಷಯ ತಿಳಿದು ಬಂತು, ಅದೇನೆಂದರೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಆರೋಪಿ ಅಶ್ರಫ್’ನನ್ನು ಬಿಡುಗಡೆಗೊಳಿಸಲಾಗಿದೆ. ಆದರೆ ಎರಡು ಬಾರಿ ಪೋಲೀಸರಿಂದ ತಪ್ಪಿಸಿಕೊಂಡ ತಪ್ಪಿಗೆ ಆತ ಪೋಲೀಸರಿಗೆ ಬೇಕಾಗಿದ್ದ. ನನ್ನ ಪ್ರಶ್ನೆಯಿಷ್ಟೇ, ಆ ನಿರ್ಜನ ಪ್ರದೇಶದಲ್ಲಿ ನಡೆದ ಕೊಲೆಗೆ ಬೇರೆ ಸಾಕ್ಷಿಯೆಲ್ಲಿಂದ ತರುವುದು? ಒಮ್ಮೆ ಸೆರೆಹಿಡಿದ ನಂತರ ಆತನೆ ಕೊಲೆ ಮಾಡಿದ್ದು ಎಂಬುದಕ್ಕೆ ಒಂದೇ ಒಂದು ಸಾಕ್ಷ್ಯವೂ ಸಿಗದೇ ಹೋಯಿತೇ? ಶ್ವಾನದಳ, ಬೆರಳಚ್ಚು ತಜ್ಞರು ಎಲ್ಲರೂ ವ್ಯರ್ಥರಾದರೇ? ಇದು ನಮ್ಮ ಪೋಲೀಸ್ ಇಲಾಖೆಯ ನಿಷ್ಕ್ರೀಯತೆಯೋ ಅಥವಾ ಆರೋಪಿಯ ಚಾಲಕಿತನವೋ?

ಸರಿ, ಆರೋಪಿ ಕೊಲೆ ಮಾಡಿಲ್ಲ ಎಂಬುದಕ್ಕೆ ಸಾಕ್ಷ್ಯಾಧಾರಗಳಿಲ್ಲದೆ ಬಿಡುಗಡೆ ಮಾಡಲಾಯಿತಲ್ಲ, ಹಾಗಾದರೆ ಆಕೆಯನ್ನು ನಿಜವಾಗಿತೂ ಕೊಂದದ್ದು ಯಾರು? ಇದನ್ನಾದರೂ ಪೋಲೀಸ್ ಇಲಾಖೆ ಪತ್ತೆ ಹಚ್ಚಿತೇ? ಅದೂ ಇಲ್ಲ. ಹೋಗಲಿ ಆರೋಪಿ ಪತ್ತೆಗಾಗಿ ಪೋಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳಾದರೂ ಏನು? ಹೀಗೆ ಅರೋಪಿಗಳ ತಪ್ಪನ್ನು ಪ್ರೂವ್ ಮಾಡಲು ಸಾಧ್ಯವಾಗದೇ ಇದ್ದರೆ ಅಥವಾ ನಮ್ಮ ಇಲಾಖೆಗೆ ನೈಜ ಆರೋಪಿಯನ್ನು ಹಿಡಿಯಲು ಸಾಧ್ಯವಾಗದಿದ್ದರೆ ಸಮಾಜಕ್ಕೆ ಎಂತಹಾ ಸಂದೇಶ ಹೋಗುತ್ತದೆ? ಇಲ್ಲಿ ಯಾರನ್ನು ರೇಪ್ ಮಾಡಿದರೂ, ಯಾರನ್ನು ಕೊಲೆ ಮಾಡಿದರೂ ಕೇಳುವವರು ಯಾರೂ ಇಲ್ಲ, ಆರಾಮವಾಗಿರಬಹುದು ಎಂದು ತಾನೆ? ಇದಕ್ಕೆ ಸೌಜನ್ಯ, ಅಕ್ಷತಾ, ನಂದಿತಾರಂತಹ ರಾಜ್ಯದಲ್ಲಿ ಬಲಿಯಾಗುತ್ತಿರುವ ಹಲವಾರು ಸೌಮ್ಯಗಳೇ ಸಾಕ್ಷಿ!

ಆವತ್ತು ಸಾರ್ವಜನಿಕರು ಮತ್ತು ಪೋಲೀಸರ ನಡುವಿನ ಕಾದಾಟದಲ್ಲಿ ಪೋಲೀಸರ ಕೈ ಮೇಲಾಗಿತ್ತು. ವಿದ್ಯಾರ್ಥಿಗಳ ಮೇಲೆ ಕೇಸು ದಾಖಲಿಸಿದ್ದರಿಂದ ಮತ್ತು ತಮ್ಮ ತಮ್ಮ ಭವಿಷ್ಯದ ದೃಷ್ಟಿಯಿಂದ ಹೋರಾಟದ ಕಿಚ್ಚು ಕಡಿಮೆಯಾಯಿತು. ಮತ್ತೆ ಕೆಲವು ವರ್ಷ ಇದರ ಹೊಗೆಯಾಡಿದರೂ ಫಲಶೃತಿಯೇನೂ ದಕ್ಕಲಿಲ್ಲ. ಸಾರ್ವಜನಿಕರು ಈ ಘಟನೆಯನ್ನು ಮರೆಯದಿದ್ದರೂ, ಬೇರೆ ದಾರಿಯಿಲ್ಲದೆ ಹೋರಾಟ ಬಿಟ್ಟು ತಮ್ಮ ವ್ಯವಹಾರಗಳಿಗೆ ಒಗ್ಗಿಕೊಂಡರು. ಆರೋಪಿ ಪರಾರಿಯಾಗುವುದರೊಂದಿಗೆ ಕೇಸೂ ಬಿಟ್ಟು ಹೋಯಿತು.

ಇದನ್ನು ನೋಡುವಾಗ ಆಕ್ರೋಶ ಮೂಡುತ್ತದೆ. ಒಬ್ಬ ಅಮಾಯಕ, ಮುಗ್ಧೆ ಪ್ರೀತಿ ನಿರಾಕರಿಸಿದ್ದಕ್ಕಾಗಿ ಆಕೆಯನ್ನು ಬರ್ಬರವಾಗಿ ಕೊಲ್ಲಲಾಯಿತಲ್ಲಾ, ನಮ್ಮ ಷಂಡತನದ ವ್ಯವಸ್ಥೆಗೆ ಹದಿನೇಳು ವರ್ಷಗಳಾದರೂ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲವಲ್ಲ, ಹಾಗಾದರೆ ಸೌಮ್ಯಳ ಜೀವಕ್ಕೆ ಬೆಲೆಯೇ ಇಲ್ಲದಾಯ್ತೇ? ಮತ್ತೆ ನಮ್ಮಿಂದ ಅದೆಂತಹ ‘ವುಮೆನ್ ಎಂಪವರ್’ಮೆಂಟ್’ ಸಾಧ್ಯ? ನಮ್ಮ ವ್ಯವಸ್ಥೆ ಸರಿಯಾಗಬೇಕಾದರೆ ಅದೆಷ್ಟು ಸೌಮ್ಯಗಳು ಬಲಿಯಾಗಬೇಕು?
ನನ್ನ ಆಶಯವಿಷ್ಟೇ. JusticeforSoumya ದ ಧ್ವನಿ ಇನ್ನೂ ಗಟ್ಟಿಯಾಗಲಿ, ಆಕೆಯ ಸಾವಿಗೆ ಇನ್ನಾದರೂ ನ್ಯಾಯ ಸಿಗಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!