ಇಲ್ಲ, ನನ್ನಿಂದ ತಡೆದುಕೊಳ್ಳುವುದು ಅಸಾಧ್ಯವೇ ಆಗಿತ್ತು. ನಿನ್ನೆ ಮೊನ್ನೆಯೆಲ್ಲಾ ಈ ಸಾಮಾಜಿಕ ಜಾಲತಾಣ (ಫ಼ೇಸ್ ಬುಕ್, ಟ್ವಿಟ್ಟರ್) ತೆರೆದಾಗಲೆಲ್ಲಾ #pornban ಇವುಗಳದ್ದೇ ಸದ್ದು – ಗದ್ದಲ. ‘Are you aware of this?? Porn websites are banned!! ಎಂದು ಜನರಿಗೆ ಅದೇನೋ ದೇಶವೇ ಕೊಳ್ಳೆ ಹೋಗುತ್ತಿರುವುದರ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂಬಂತೆ ಬಿಂಬಿಸುವ ಸಾವಿರ – ಸಾವಿರ ಪೋಸ್ಟುಗಳು. ಬಹುಶಃ ಪಾರ್ನ್ ವೆಬ್’ಸೈಟ್ ಬ್ಯಾನ್ ಮಾಡುವುದರಿಂದ ದೇಶಕ್ಕೆ ಬೆಂಕಿ ಬೀಳುತ್ತದೆ ಎಂದು ಅನಿಸುವಷ್ಟರ ಮಟ್ಟಿಗೆ ದೇಶದಾದ್ಯಂತ ವಿರೋಧ, ನಮ್ಮ ಮೂಲಭೂತ ಹಕ್ಕೊಂದನ್ನು ಸರ್ಕಾರ ಕಸಿದುಕೊಳ್ಳುತ್ತಿದೆ ಎನ್ನುವಷ್ಟು ಟೀಕಾಪ್ರಹಾರ, ಎಮರ್ಜೆನ್ಸಿ ಡಿಕ್ಲೇರ್ ಆಯ್ತೇನೋ ಅಂದುಕೊಳ್ಳಬೇಕು, ಅಂತಹ ಸ್ಥಿತಿ!!!!
ಪಾರ್ನ್ ವೆಬ್ ಸೈಟ್ ಬ್ಯಾನ್ ಮಾಡುವುದರ ಸರಿ-ತಪ್ಪುಗಳನ್ನೆಲ್ಲಾ ಬದಿಗಿಟ್ಟು ನನಗೆ ಬಂದ ಯೋಚನೆಗಳೊಂದಿಷ್ಟನ್ನು ಇಲ್ಲಿ ಹೇಳುತ್ತಿದ್ದೇನೆ. ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಬಾವುಟ, ಐಸಿಸ್ ಉಗ್ರರ ಬಾವುಟ ಹಾರಾಡಿತು. ಕರ್ನಾಟಕ ರಾಜ್ಯದಲ್ಲಿ ಹಲವು ರೈತರ ಆತ್ಮಹತ್ಯೆ. ಈ ಭಾರಿ ಸರಿಯಾಗಿ ಮಳೆ ಬರದೆ ಹಲವೆಡೆ ಕುಡಿಯುವ ನೀರಿಗೂ ಬರ, ಇಂದಿಗೂ ಮೂಲಭೂತ ಸೌಕರ್ಯವಿಲ್ಲದೆ ಸಂಕಷ್ಟದಲ್ಲಿರುವ ಅದೆಷ್ಟೋ ಊರುಗಳು. ದೊಡ್ಡ ದೊಡ್ಡ ಡಿಗ್ರಿಗಳಿದ್ದರೂ, ತಮ್ಮ ಕ್ವಾಲಿಫಿಕೇಷನ್ ಗೆ ಸರಿಯಾದ ಕೆಲಸವಿಲ್ಲದೆ ಒದ್ದಾಡುತ್ತಿರುವ ಹಲವರು. ಆಸಿಡ್ ಅಟ್ಯಾಕ್, ರೇಪ್ ಮುಂತಾದ ಕೃತ್ಯಗಳಿಗೆ ಬಲಿಯಾಗುತ್ತಿರುವ ಮುಗ್ದ ಜೀವಗಳು, ಪ್ರತಿ ಕ್ಷಣವೂ ಕಣ್ಣಲ್ಲಿ ಕಣ್ಣಿಟ್ಟು ದೇಶ ಕಾಯುತ್ತಿರುವ ಯೋಧ ಹಾಗೂ ಪೋಲೀಸ್ ಡಿಪಾರ್ಟ್’ಮೆಂಟ್.
ಪಟ್ಟಿ ಮಾಡಿದರೆ ಇನ್ನಷ್ಟಿದೆ, ಇದೆಲ್ಲಾ ಯಾಕೆ ಹೇಳಿದೆ ಎಂದರೆ. ಅಲ್ಲಾ ನಮ್ಮವರಿಗೆಲ್ಲಾ ಪಾರ್ನ್ ವೆಬ್’ಸೈಟ್ ಬ್ಯಾನ್ ಆಗಿದ್ದೇ ದೊಡ್ಡ ವಿಚಾರವಾಯಿತು ಇದ್ಯಾವುದೂ ಕಾಣಿಸಲೇ ಇಲ್ಲವೇ ನಿಮಗೆಲ್ಲಾ???
ನಿಜ, ಕಾಶ್ಮೀರದಲ್ಲಿ ಪಾಕಿಸ್ತಾನ ಬಾವುಟ ಹಾರಿದಾಗೆಲ್ಲಾ ಮನಸ್ಸಲ್ಲಿ ಅದೇನೋ ಸಂಕಟ ಉಂಟಾಗುತ್ತಿತ್ತು. ಆದರೆ ಎಂದಿಗೂ #pornban ಗೆ ಬಂದ ಪರಿಯ ಹೋರಾಟವಾಗಲಿ ವಿರೋಧವಾಗಲಿ, ದೇಶಕ್ಕಾಗಿ, ಈ ವಿಚಾರಕ್ಕಾಗಿ ಎಂದಾದರೂ ಬಂದಿತ್ತಾ?? ಅಯ್ಯೋ ಅಲ್ಲಿ ಏನೋ ಆದರೆ ನಾವೇನು ಮಾಡಬಹುದು ಎಂದು ಯೋಚಿಸುತ್ತಿರಬಹುದು, ಅಂತಹವರಿಗೆಲ್ಲಾ ಒಂದು ಮಾತು, ದೇಶವಾಸಿಗಳೆಲ್ಲಾ ಒಗ್ಗೂಡಲಿ ಯಾರಿಂದ ಏನು ಮಾಡಲು ಸಾಧ್ಯ ಹೇಳಿ?? ಪಾಕಿಸ್ತಾನ ಧ್ವಜ ಹಾರಾಡಿದಾಗ ಅರೆಕ್ಷಣವಾದರೂ ಯೋಚಿಸುವ ಗೋಜಿಗೆ ಹೋಗಿದ್ದೇವಾ ನಾವು? ಬಿಡಿ #pakflaginkashmir / #kashmirisintegralpartofindia ಎಂಬ ಹ್ಯಾಶ್’ಟ್ಯಾಗ್ ಎಲ್ಲಿಯಾದರೂ ಕ್ರಿಯೇಟ್ ಆಗಿದ್ದುಂಟೇ?? ಮೊನ್ನೆ ಪಂಜಾಬಿನಲ್ಲಿ ಎಸ್.ಪಿ ಬಲ್ಜೀತ್ ಸಿಂಘ್ ಉಗ್ರರ ಗುಂಡಿಗೆ ಬಲಿಯಾದಾಗ ಅದೆಷ್ಟು ಜನ ಹ್ಯಾಶ್ ಟ್ಯಾಗ್ ಹಾಕಿಕೊಂಡಿದ್ದೇವೆ? ಎಲ್ಲದಕ್ಕೂ ಉತ್ತರ ಇಲ್ಲ!
ಎಲ್ಲಾ ಬಿಡಿ, ನಮ್ಮ ರಾಜ್ಯಕ್ಕೇ ಬರೋಣ. ರೈತ ನಮ್ಮ ಬೆನ್ನೆಲುಬು ಆತನಿಲ್ಲದೆ ಆಹಾರ ಇಲ್ಲ ಎಂದೆಲ್ಲಾ ಭಾಷಣ ಬಿಗಿಯುತ್ತೇವೆ. ಆದರೆ ಅದೆಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ನಮಗಿದರ ಅರಿವಿದೆಯೇ? ಅದಕ್ಕೇನಾದರೂ ಪರಿಹಾರ ಸಾಧ್ಯವಿದ್ಯಾ ಅಂತ ಎಂದಾದರೂ ಯೋಚನೆ ಮಾಡುವ ಮನಸ್ಸು ಮಾಡಿದ್ದೇವಾ?? ಅಥವಾ #Iamwith… ಅಂಥ ಸ್ಟೇಟಸ್ ಹಾಕಿಕೊಂಡಿದ್ದೇವಾ? ಇಲ್ಲ. ಮತ್ತೆ ಅದೇ ಉತ್ತರ … ಯುವಜನತೆ ಒಗ್ಗೂಡಿದರೆ ಸರ್ಕಾರವೇ ಬರಬೇಕೆಂದೇನಿಲ್ಲ ಇದೆಲ್ಲಾ ನಮ್ಮ ಧೀಶಕ್ತಿಯಿಂದಲೂ ಪರಿಹಾರ ಸಿಗಬಹುದಾದ ಸಮಸ್ಯೆ ಅನಿಸುತ್ತದೆ ನನಗೆ.
ಇಂದಿಗೂ ಬೇಸಿಗೆ ಕಾಲದಲ್ಲಿ ಕುಡಿಯಲು ನೀರಿಲ್ಲದೆ ಒದ್ದಾಡುವ ಅದೆಷ್ಟೋ ಊರುಗಳಿವೆ, ಆಧುನಿಕ ಯುಗ ಎಂದು ಬಡಾಯಿ ಕೊಚ್ಚುಕೊಳ್ಳುತ್ತಿರುವ ನಮಗೆ ಇದಕ್ಕೂ ಪರಿಹಾರ ಹುಡುಕಲು ಸಮಯವಿಲ್ಲ ಅದೇ ನೀಲಿ ಚಿತ್ರ ವೆಬ್’ಸೈಟ್ ಬ್ಯಾನ್ ಆದರೆ ಬೊಬ್ಬಿಡಲು 2-3 ದಿನಗಳನ್ನೇ ಮೀಸಲಿಡಲು ಸಮಯವಿದೆ. ಮಳೆಗಾಲದಲ್ಲಿ ನೀರು ಇಂಗಿಸುವ ಎನ್ನುವ ಕಿಂಚಿತ್ತು ಅರಿವು ನಮಗಿಲ್ಲ. ಪಾರ್ನ್ ವೆಬ್’ಸೈಟ್ ಬ್ಯಾನ್ ಆಗಿದ್ದುದರ ಅರಿವು ಮಾತ್ರ ದೇಶಕ್ಕೆಲ್ಲಾ ತಿಳಿಯಬೇಕು. ಅದೆಂತಹಾ ವಿಚಿತ್ರ ಮನಸ್ಥಿತಿ ನಮ್ಮದು.
ಡಿಗ್ರಿ ಪಡೆದು ಹೊರಬಂದವರೆಷ್ಟೊ ಮಂದಿ ಕೆಲಸವಿಲ್ಲದೆ ಕಷ್ಟ ಪಡುತ್ತಿದ್ದಾರೆ ಎಂಬ ಅರಿವಿದ್ಯಾ?? ಅವರೆಲ್ಲಾ ಸೇರಿಕೊಂಡು ಅದೆಷ್ಟೋ ಉದ್ಯೋಗ ಸೃಷ್ಟಿಸುವ ಕಂಪನಿಯೇ ಶುರುಮಾಡುಬಹುದು ಅದಕ್ಕೆ ನಾವು ಪ್ರೇರಣೆ, ಅಥವಾ ಸಹಾಯದ ಹಸ್ತವಾಗಬಹುದು ಎಂದು ಅರಿವಿದ್ಯಾ??
ಆಸಿಡ್ ಅಟ್ಯಾಕ್ ಗೆ, ಅದ್ಯಾರದ್ದೋ ಕಾಮಾಂಧತೆಗೆ ನಲುಗಿ ಹೋದ ಜೀವಗಳೆಷ್ಟೊ ಇವರಿಗೆಲ್ಲಾ ಒಂದು ಸುಂದರ ಬದುಕು ಕಟ್ಟಿಕೊಡುವ ಪ್ರಯತ್ನ ಮಾಡಬಹುದು ಎಂಬುದರ ಅರಿವುಂಟೇ??
ಎಲ್ಲಾ ಬಿಡಿ… ದೇಶದ ಗಡಿಯಲ್ಲಿ, ಕೊರೆಯುವ ಚಳಿಯಲ್ಲಿ, ಸುಡು ಬಿಸಿಲಿನಲ್ಲಿ, ನಮ್ಮೆಲ್ಲರ ಜೀವನಕ್ಕಾಗಿ ಯೋಧರು ಪ್ರತಿದಿನ ಹೋರಾಡುತ್ತಿದ್ದಾರೆ, ಪೋಲೀಸ್ ಡಿಪಾರ್ಟ್’ಮೆಂಟ್ ದೇಶದೊಳಗಿನ ಶಾಂತಿಯನ್ನು ಕಾಪಾಡುವಲ್ಲಿ ಪ್ರತಿಕ್ಷಣ ಹಲವು ರಾಜಕೀಯಗಳನ್ನೂ ಎದುರಿಸಿಕೊಂಡು ಬದುಕುತ್ತಿದ್ದಾರೆ.
ಇಷ್ಟು ಅಂಶಗಳಲ್ಲಿ ಒಂದಾದರೂ ನಮ್ಮಲ್ಲಿ ಅರಿವು ಮೂಡಿಸಿದ್ದುಂಟೇ?? ಇಲ್ಲ ಎಂಬುದೊಂದೇ ಉತ್ತರ…
ಇನ್ನೊಂದು ಆಯಾಮದಲ್ಲೂ ಯೋಚಿಸುತ್ತಾ ಹೀಗೂ ಅನಿಸಿತು. ನಮ್ಮ ಸರ್ಕಾರ ಈ ವೆಬ್’ಸೈಟ್’ಗಳನ್ನು ಬ್ಯಾನ್ ಮಾಡುವುದರ ಉದ್ದೇಶ ಏನು? ಇವುಗಳನ್ನು ಬ್ಯಾನ್ ಮಾಡಿದಾಕ್ಷಣ ಕೆಟ್ಟ ಮನಸ್ಥಿತಿಯನ್ನು ತೊಡೆದು ಹಾಕಲು ಸಾಧ್ಯವಾ?? ಹಿಂದಿನ ಸರ್ಕಾರದ ಕೊಳೆಯನ್ನು ತೊಳೆಯಲೇ ಕೆಲವು ವರ್ಷಗಳು ಬೇಕು, ಇಂತಹುದ್ದಕ್ಕೆಲ್ಲಾ ಸಮಯ ವ್ಯರ್ಥಗೊಳಿಸುತ್ತಿರುವುದ್ದೇಕೆ? ಈ ಇಂಟರ್’ನೆಟ್ ಯುಗದಲ್ಲಿ ನಿಜವಾಗಿಯೂ ಇವನ್ನೆಲ್ಲಾ ಬ್ಯಾನ್ ಮಾಡಲು ಸಾಧ್ಯವೇ ಇಲ್ಲ. ಒಂದು ಸಣ್ಣ ಪ್ರದೇಶಕ್ಕೆ ಇರುವ ವೈ-ಫ಼ೈ ಲಾಕ್ ಆಗಿದ್ದರೆ ಅದನ್ನು ಅನ್’ಲಾಕ್ ಮಾಡಲು ತಿಳಿದಿದೆ, ಇನ್ಯಾವುದೋ ವೆಬ್’ಸೈಟ್’ಗಳನ್ನು ಹ್ಯಾಕ್ ಮಾಡಲು ಹಲವು ತಂತ್ರಜ್ಞಾನಗಳಿವೆ, ಅಂದ ಮೇಲೆ ಇಂತಹ ಬ್ಯಾನ್ ಎಲ್ಲಾ ಅರ್ಥವೇ ಇಲ್ಲ. ಅದನ್ನು ನೋಡಿಯೇ ಸಿದ್ಧ ಎನ್ನುವವರು ಇನ್ಯಾವುದೋ ದಾರಿ ಬಳಸುತ್ತಾರೆ ಅಷ್ಟೇ.
ಇಂತಹಾ ವಿಷಯಗಳನ್ನು ತಂದು ಹಾಕಿ ಸರ್ಕಾರ ಮಾಡುತ್ತಿರುವ ಉತ್ತಮ ಕಾರ್ಯಗಳು ಈ ಯಕಶ್ಚಿತ್ ವಿಷಯಗಳಿಂದ ಸದ್ದೇ ಇಲ್ಲದಂತಾಗುತ್ತಿರುವುದು ನಮ್ಮ ಸರ್ಕಾರಕ್ಕೂ ಅರಿವಿಲ್ಲ ಅನಿಸುತ್ತಿದೆ! ಮೋದಿ ಮಾಡುತ್ತಿರುವ ಉತ್ತಮ ಕೆಲಸಗಳು ಇಂತಹಾ ವಿಷಯಗಳಿಂದ ಜನರಿಗೆ ತಲುಪದೇ ಇರುವ ಸಾಧ್ಯತೆಗಳೇ ಜಾಸ್ತಿಯಾಗುತ್ತಿದೆ. ಅಲ್ಲದೇ, ಸದಾ ತಪ್ಪನ್ನು ಹುಡುಕಲು ಕಾಯುತ್ತಿರುವವರಿಗೂ ಆಹಾರವಾಗುತ್ತಿದೆ ಎಂಬುದೇ ಬೇಸರದ ಸಂಗತಿ.
ಕೊನೇಗೆ ಅನಿಸಿದಿಷ್ಟೇ, ಕಾಶ್ಮೀರದಲ್ಲಿ ಪಾಕಿಸ್ತಾನ ಧ್ವಜ ಹಾರಡುವುದರಿಂದ ದೊಡ್ದ ಸಂಕಟ ಪಾರ್ನ್ ವೆವ್’ಸೈಟ್’ಗಳನ್ನು ಬ್ಯಾನ್ ಮಾಡಿದಾಗ ಆಗುತ್ತದೆಯೆಂದಾದರೆ, ಅದುವೇ ನಮಗೆ ದೊಡ್ಡ ಅರಿವು ಎಂದಾದರೆ ನಮ್ಮ ಅರಿವಿನ ಮನ ಸ್ಥಿತಿ ಯಾವ ಹಂತಕ್ಕೆ ತಲುಪಿದೆ??