ಅಂಕಣ

ಮನ್ ಕೀ ಬಾತ್ v/s ದಿಲ್ ಕೀ ಬಾತ್

ಇದೇನಿದು??? ಒಂದರ ವಿರುದ್ಧ ಇನ್ನೊಂದು ಅಂದುಕೊಳ್ಳುವುದು ಬೇಡ. ಎರಡು ವಿಷಯಕ್ಕೂ ಅರ್ಥದಲ್ಲಿ ಸಾಮ್ಯತೆಯಿದ್ದರೂ ಉದ್ದೇಶ ವಿಭಿನ್ನವಾಗಿದೆ. ಏನಿದು ಮನ್ ಕೀ ಬಾತ್ ಮತ್ತು ದಿಲ್ ಕೀ ಬಾತ್ ? ನಮ್ಮ ಪ್ರಧಾನಿ ಮೋದಿಯವರು ಸುಮಾರು 10 ತಿಂಗಳಿನ ಹಿಂದೆ ಆಕಾಶವಾಣಿ ಸಂಭಾಷಣೆಯನ್ನು ಪ್ರಾರಂಭಿಸಿದರು… ಅದಕ್ಕೆ ‘ಮನ್ ಕೀ ಬಾತ್’ (ಮನದ ಮಾತು) ಎಂದು ನಾಮಕರಣ ಮಾಡಿದರು … ಭಾರತದ ಜನರೊಂದಿಗೆ ಮನ ಬಿಚ್ಚಿ ತನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮಹದಾಸೆ..  ಅದು ಹೇಗೆಲ್ಲಾ ಇಂತಹಾ ಹೊಸ ಆಸೆ ಹುಟ್ಟಿಕೊಳ್ಳುತ್ತದೆಯೋ??? ಅವರೇ ಬಲ್ಲರು… ಯಾವುದೇ ವಿಷಯವಿರಲಿ ಅದರಲ್ಲಿ ಹೊಸತನವಿರುತ್ತದೆ.

ಖಾದಿ, ಸ್ವಚ್ಛ ಭಾರತ, ಹೆಣ್ಮಕ್ಕಳ ಶಿಕ್ಷಣ ಮತ್ತು ಪ್ರೋತ್ಸಾಹ ಧನ, ವಿದ್ಯಾರ್ಥಿಗಳ ಕುರಿತು, ನಿಷೇಧಿತ ಮಾದಕ ವಸ್ತು ಅಥವಾ ಉದ್ದೀಪನದ ಎಚ್ಚರಿಕೆ, ರೈತರ ಕಾಳಜಿ ಹೀಗೆ ಹತ್ತು ಹಲವು ವಿಷಯಗಳನ್ನು ತನ್ನದೇ ರೀತಿಯಲ್ಲಿ ದೇಶದ ಜನರ ಮುಂದೆ ಇಟ್ಟಿದ್ದರು… ಈ ಎಲ್ಲಾ ವಿಷಯಗಳ ಬಗ್ಗೆ ನಾವು ದಿನ ನಿತ್ಯ ಚರ್ಚಿಸುವಂತೆ ಮಾಡಿದೆ. ಈ ನೆಪವೊಡ್ಡಿಯಾದರು ಪ್ರಧಾನಿಯ ಮಾತು ಕೇಳಲು ರೇಡಿಯೋದ ಗಂಧ ಗಾಳಿ ಇಲ್ಲದವರೂ ಕೈಯಲ್ಲಿ ಸಣ್ಣದೊಂದು ರೇಡಿಯೋ ಹಿಡಿಯುವಂತೆ ಮಾಡಿದೆ. ದೇಶದ ಜನತೆಯಿಂದ ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿದೆ… ಇದು ಮೋದಿಯವರಲ್ಲಿನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ತಮ್ಮಲ್ಲಿ ಮೂಡುತ್ತಿರುವ ಭಾವನೆಗಳನ್ನು ಜನರ ಜೊತೆ ಹಂಚಿಕೊಳ್ಳುವುದರಲ್ಲಿ ಅದೇನೋ ಖುಷಿ ಅವರಿಗೆ..ಸತತ 10 ತಿಂಗಳಿನಿಂದ ತಿಂಗಳಿಗೆ ಒಂದು ಬಾರಿ ತಪ್ಪದೆ ಅದೆಷ್ಟೇ ಕೆಲಸವಿದ್ದರೂ ಯಾವುದೋ ವಿದೇಶಿ ಪ್ರವಾಸದಲ್ಲಿದ್ದರೂ ತಿಂಗಳಿನ ಯಾವುದಾದರು ಒಂದು ಭಾನುವಾರ ಬಿಡುವು ಮಾಡಿಕೊಂಡು ಅಕಾಶವಾಣಿ ಸಂಭಾಷಣೆ ಮಾಡುತ್ತಾರೆ. ಅಕಾಶವಾಣಿಯ ಮೂಲಕ ಜನರಲ್ಲಿ ತನ್ನ ಭಾವನೆಗಳನ್ನು ಹಂಚುತ್ತಿರುವ ಮೊದಲ ಪ್ರಧಾನಿ ಈ ನರೇಂದ್ರ ಮೋದಿ… !!!

http://www.narendramodi.in/mann-ki-baat
ಆಸಕ್ತಿ ಇರುವವರು ಮೇಲೆ ಕೊಟ್ಟ ಅಂತರ್ಜಾಲದ ಕೊಂಡಿಯಲ್ಲಿ ಮೋದಿಯವರ ರೇಡಿಯೋದ ಮನ್ ಕೀ ಬಾತ್ ನ ಧ್ವನಿ ಮುದ್ರಿಕೆಯಿದೆ ಅದನ್ನು ಆಲಿಸಬಹುದು…. ಬಡವರೊಂದಿಗೆ ತನ್ನ ಅಭಿಪ್ರಾಯ, ಭಾವನೆಗಳನ್ನು ನೇರವಾಗಿ ಹೇಳಿಕೊಳ್ಳಬಹುದು ಎನ್ನುವುದು ಅವರ ಉದ್ದೇಶ . ತುಂಬಾ ಒಳ್ಳೆಯ ಉದ್ದೇಶ. ಇದರಿಂದ ದೇಶದ ಜನರ ಮನಸ್ಸಿನ ಹತ್ತಿರ ತಲುಪುವಲ್ಲಿ ಯಶಸ್ವಿಯೂ ಆದರು. “ರಾಜಕಾರಣಿಗಳೆಲ್ಲಾ ಖಾದಿ ಧರಿಸುತ್ತಾರೆ ನೀವೆಲ್ಲಾ ಯಾಕೆ ಖಾದಿ ಧರಿಸಬಾರದು” ಎಂದಿದ್ದಷ್ಟೇ ……. ಮುಂದಿನ ತಿಂಗಳೇ ಖಾದಿ ವ್ಯಾಪಾರ ದುಪ್ಪಟ್ಟಾಯಿತು. …!!!! ಅಂದರೆ ಮೋದಿಯವರ ಮಾತು ಜನರ ಮನಸ್ಸಿಗೆ ಅಷ್ಟರ ಮಟ್ಟಿಗೆ ನಾಟಿತ್ತು. ಮೋದಿಯವರು ಅದೇನೇ ಪ್ರಯೋಗ ಮಾಡಿದರೂ ಅದರಲ್ಲಿ ಯಶಸ್ವಿಯಾಗುತ್ತಾರೆ. ಕೆಲವೊಮ್ಮೆ ಅನಿಸುತ್ತದೆ ಮೋದಿಯವರಿಗೆ ಅದೆಷ್ಟು processor ಇದೆಯೋ ????… ಯಾವೆಲ್ಲಾ ದಿಕ್ಕಿನಲ್ಲಿ ಸಂಚರಿಸುತ್ತದೋ.??? ವಿಶ್ವದ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷರು ನಮ್ಮ ದೇಶದ ಆಕಾಶವಾಣಿಯಲ್ಲಿ ‘ಮನ್ ಕೀ ಬಾತ್’ ನಲ್ಲಿ ಮಾತನಾಡುವಂತೆ ಮಾಡಿದ್ದಾರೆ. ಈ ‘ಮನ್ ಕೀ ಬಾತ್’ ನಲ್ಲಿ ಅದೆಷ್ಟು ಉಪಯುಕ್ತ ಮಾಹಿತಿಗಳನ್ನು ಮೋದಿಯವರು ಹಂಚಿಕೊಂಡಿದ್ದಾರೆ. ಪ್ರತಿಯೊಂದು ಮಾತು ಮೌಲ್ಯಾಧಾರಿತವಾಗಿದೆ. ಅವರು ಎಲ್ಲಿಯೇ ಇರಲಿ ಧ್ವನಿ ಕೇಳಿದಾಕ್ಷಣ ಮಿಂಚಿನ ಸಂಚಲನ ಸೃಷ್ಟಿಸುತ್ತದೆ. ಮೋದಿಯವರನ್ನು ‘ಮಾತಿನ ಮಲ್ಲ’ ಎಂದರೂ ತಪ್ಪಿಲ್ಲ. ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಅನಿಸುತ್ತದೆ.ಅವರ ಮಾತಿನ ಶೈಲಿ ಜನರು ಆಕರ್ಷಿತರಾಗುತ್ತಾರೆ. ಮೋದಿಗೆ ಮೋದಿಯೇ ಸರಿಸಾಟಿ.

‘ಮನ್ ಕೀ ಬಾತ್’ ಅಂತ ಕೇಳುತ್ತಿರುವಾಗ ಮತ್ತೊಂದು ‘ದಿಲ್ ಕೀ ಬಾತ್ ‘ (ಹೃದಯದ ಮಾತು) ಎಂಬ ಇನ್ನೊಂದು ಆಕಾಶವಾಣಿ ಕಾರ್ಯಕ್ರಮ ಪ್ರಾರಂಭಗೊಂಡಿದೆ. ಇದು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಕಾಶವಾಣಿಯ ಮಾತು. ಇತ್ತೀಚೆಗೆ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಲೇ ಇದೆ. ಮುಖ್ಯಮಂತ್ರಿಗಳಿಗೆ ದಿಕ್ಕೇ ತೋಚದಂತಾಗಿದೆ. ಒಂದು ಕಡೆ ತಮ್ಮದೇ ಪಕ್ಷದೊಳಗೆ ಕುರ್ಚಿಯಿಂದ ಕೆಳಗಿಳಿಸಲು ಮಾಡುವ ಷಡ್ಯಂತ್ರ.. ಇನ್ನೊಂದು ಕಡೆ ರೈತರ ಸರಣಿ ಆತ್ಮಹತ್ಯೆ ಪ್ರಕರಣ.. “ಅತ್ತ ಧರಿ ಇತ್ತ ಪುಲಿ” ಬಾಯಲ್ಲಿರುವ ಬಿಸಿ ತುಪ್ಪವನ್ನು ಉಗುಳಲು ಆಗದೆ ನುಂಗಲು ಆಗದ ಪರಿಸ್ಥಿತಿ ಅವರದ್ದು. ಇದರಿಂದ ರಾಜ್ಯದ ಎಲ್ಲಾ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದೆ. ಒಂದೇ ಸವನೆ ಮೋದಿಯವರನ್ನು ಹೀಯಾಳಿಸುತ್ತಿದ್ದ ಸಿದ್ಧರಾಮಯ್ಯ ಇದೀಗ ಅವರದ್ದೇ ಹಾದಿ ಹಿಡಿದದ್ದು ಮಾತ್ರ ವಿಪರ್ಯಾಸ. ಮೋದಿಯವರು ತಮ್ಮ ಎಲ್ಲಾ ಜನಪ್ರಿಯ ಯೋಜನೆಗಳು ಜನರನ್ನು ತಲುಪಲು ಸಾಮಾಜಿಕ ತಾಣಗಳನ್ನು ಅತಿಯಾಗಿ ಬಳಸಿಕೊಳ್ಳಿ ಎಂದು ತಮ್ಮ ಮಂತ್ರಿ ವರ್ಗಕ್ಕೆ ಸೂಚಿಸಿದ್ದರು. ಅದಕ್ಕಾಗಿ ಎಲ್ಲಾ ಸಚಿವರು ತಮ್ಮ ಖಾತೆಗಳನ್ನು ತೆರೆದಿದ್ದರು. ಸ್ವಲ್ಪ ಸಮಯದ ನಂತರ ಸಿದ್ಧರಾಮಯ್ಯನವರು ಇದೇ ಹಾದಿಯನ್ನು ಹಿಡಿದರು. ತಮ್ಮ ಸಚಿವರಲ್ಲಿ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ತೆರೆಸಿದರು. ಪತ್ರಿಕಾಗೊಷ್ಟಿಯಲ್ಲಿ ಪತ್ರಕರ್ತ ಮಿತ್ರರೊಬ್ಬರ ಪ್ರಶ್ನೆಗೆ “ಇದೆಲ್ಲಾ ಮೊದಲೇ ನನಗೆ ತಿಳಿದಿತ್ತು. ಮೋದಿಯವರಿಂದ ನಾನು ಕಲಿತ್ತದ್ದಲ್ಲ” ಎಂದರು. ‘ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂದಂತಾಯಿತು. ಇದೀಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತದೇ ಮೋದಿಯವರ ಹಾದಿಯನ್ನೇ ಹಿಡಿದಿದ್ದಾರೆ. ವಿರೋಧಪಕ್ಷಗಳ ಒತ್ತಡ ಹೆಚ್ಚಾಗುತ್ತಿದ್ದಂತೆ ತಕ್ಷಣ ಹೊಳೆದದ್ದೇ ಮೋದಿಯವರ ರೇಡಿಯೋ ಸಂಭಾಷಣೆ. ನಾನು ಯಾಕೆ ಅವರಂತೆ ರೇಡಿಯೋದಲ್ಲಿ ರೈತರಿಗೆ ಸಾಂತ್ವಾನ ಹೇಳಬಾರದು ಅಂದುಕೊಂಡು ನೇರವಾಗಿ ಸದ್ದಿಲ್ಲದೆ ಅಕಾಶವಾಣಿ ಕೇಂದ್ರಕ್ಕೆ ತೆರಳಿ ರೇಡಿಯೋ ಮೂಲಕ ರೈತರಿಗೆ ಧೈರ್ಯ ತುಂಬಿದರು ಮತ್ತು ಆತ್ಮಹತ್ಯೆ ಮಾಡಿದ ರೈತ ಕುಟುಂಬಕ್ಕೆ ಸಾಂತ್ವಾನ ಹೇಳಿಯೇ ಬಿಟ್ಟರು. ಆ ರೇಡಿಯೋ ಸಂಭಾಷಣೆಗೆ ‘ದಿಲ್ ಕೀ ಬಾತ್’ (ಹೃದಯದ ಮಾತು) ಎಂಬ ನಾಮಕರಣವನ್ನೂ ಮಾಡಿದರು. ಈ. ಮನ್ ಕೀ ಬಾತ್ ಮತ್ತು ದಿಲ್ ಕೀ ಬಾತ್ ಗೆ ಅಜಗಜಾಂತರ ವ್ಯತ್ಯಾಸವಿದೆ. ಎರಡರ ಉದ್ದೇಶ ವಿಭಿನ್ನ. ಒಂದಕ್ಕೊಂದು ಪ್ರತಿಸ್ಪರ್ಧೆಯೂ ಅಲ್ಲ. ಕೆಲವರು ಅಂದುಕೊಂಡಿರಬಹುದು ಮೋದಿಯವರ ಚಿಂತನೆಗಳು ಸಿದ್ಧರಾಮಯ್ಯಗೂ ಹೊಳೆಯುತ್ತದೆ ಎಂದು..ಆದರೆ ಇದು ಹೊಳೆದದ್ದಲ್ಲ ನಕಲು ಮಾಡಿದ್ದು ಎನ್ನುವುದು ತಿಳಿದಿಲ್ಲ… ಒಳ್ಳೆಯ ವಿಚಾರಗಳನ್ನು ನಕಲು ಮಾಡಲಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲಿ ಯಾವುದೇ ತಪ್ಪಿಲ್ಲ.. ಅದೇನೆ ಇರಲಿ ರಾಜ್ಯದ ರೈತರಲ್ಲಿ ಕೊಂಚ ಸಮಾಧಾನದ ಅಲೆ ಉಕ್ಕಿದ್ದಂತೂ ಸತ್ಯ.

ಮಾತು ಹೃದಯದಿಂದಲಾದರೂ ಬರಲಿ ಮನಸ್ಸಿನಿಂದಲಾದರೂ ಬರಲಿ ದೇಶದ ಜನದ ಮನದಾಳದಲ್ಲಿ ಬೇರೂರಿದರೆ ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಉದ್ದೇಶ ಈಡೇರಿದಂತಾಗುತ್ತದೆ. ದೇಶದ ಅಭಿವೃದ್ಢಿಯಾದರೆ ಸಾಕು ಅಲ್ಲವೇ.. ಈ ಎರಡು ‘ಬಾತ್ ‘ ಗಳು ರಾಜಕೀಯದ ಬಿಸಿ ಬಿಸಿ ಚರ್ಚೆಗೆ ವೇದಿಕೆಯಾಗದಿರಲಿ ಎನ್ನುವುದೇ ಎಲ್ಲರ ಆಶಯ.

Jagath Bhat

Facebook ಕಾಮೆಂಟ್ಸ್

ಲೇಖಕರ ಕುರಿತು

Jagath Bhat

ಜಗತ್ ಭಟ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಯಕ್ಷಗಾನ, ಛಾಯಾಗ್ರಹಣ ಮತ್ತು ಬರವಣಿಗೆ ಇವರ ಹವ್ಯಾಸ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!