ಅಂಕಣ

ವಿಕೃತಿ ಮರೆಯಾಗಿ ಸಂಸ್ಕೃತಿ ಪಸರಿಸಲಿ

ವಿಜ್ಞಾನದಲ್ಲಿ ಎಂಟ್ರೋಪಿ(Entropy) ಎಂಬ ಪದವೊಂದಿದೆ. ಅದು ಒಂದು ವ್ಯವಸ್ಥೆಯಲ್ಲಿರುವ ಅಕ್ರಮಗಳನ್ನು ಅಳೆಯುತ್ತದೆ. ಈ ಎಂಟ್ರೋಪಿ ಎನ್ನುವುದು ಕೇವಲ ವಿಜ್ಞಾನಕ್ಕಷ್ಟೇ ಸೀಮಿತವಾಗಿರದೆ ನಮ್ಮ ದೈನಂದಿನ ಬದುಕಿಗೂ ಅಳವಡಸಲ್ಪಡುತ್ತದೆ.ಇಂದಿನ ಜಗತ್ತಿನಲ್ಲಿ ಎಲ್ಲಿ ನೋಡಿದರೂ ಅವ್ಯವಸ್ಥೆ,ಅಕ್ರಮಗಳು ಕಾಣಸಿಗುತ್ತದೆ.ಸದಾ ಧಾವಂತದಲ್ಲಿರುವ ಬದುಕು,ಜನಗಳು.ಸಾಲು ಸಾಲು ಅತ್ಯಾಚಾರ, ದರೋಡೆ, ಕೊಲೆ ಸುಲಿಗೆಗಳು, ಅನಾಚಾರಗಳು, ಅಧರ್ಮಗಳು, ಅವುಗಳ ಹಿಂದಿರುವ ವಿಕೃತ ಮನಸ್ಸುಗಳು.ಇವುಗಳಿಂದಾಗಿ ಪ್ರಪಂಚದ ಎಂಟ್ರೋಪಿ ಸದಾ ಏರುತ್ತಲೇ ಇರುತ್ತದೆ.ಕೆಲವು ವಿಕೃತ ಮನಸ್ಸಿನ ಜನರು ತಾವೆಂಥ ಶ್ರೇಷ್ಠ ಪರಂಪರೆ,ಸಂಸ್ಕೃತಿಯುಳ್ಳವರು ಎಂಬುದನ್ನು ಮರೆತು ಪ್ರಾಣಿಗಳಿಗಿಂತಲೂ ಕೀಳಾಗಿ ವರ್ತಿಸುತ್ತಿದ್ದಾರೆ.ಅಂಥ ಜನರು ಸರಿದಾರಿಗೆ ಬರದೆ ಹೋದರೆ ಜಗತ್ತು ಅಳಿವಿನತ್ತ ಸಾಗುತ್ತದೆ.

ಇಡೀ ಜಗತ್ತಿಗೇ ಹೆಣ್ಣನ್ನು ಪೂಜ್ಯಸ್ಥಾನದಲ್ಲಿ ನೋಡಬೇಕು ಎಂದು ಕಲಿಸಿಕೊಟ್ಟವರು ಭಾರತೀಯರು. ಎಲ್ಲಿ ಹೆಣ್ಣು ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂದು ತಿಳಿಸಿದವರೂ ನಾವೇ.ಆದರೆ ಈಗ ನಡೆಯುತ್ತಿರುವುದೇನು?ಎಲ್ಲೆಂದರಲ್ಲಿ ಹೆಣ್ಣಿನ ಮಾನಭಂಗ,ಅತ್ಯಾಚಾರ,ಕೊಲೆ.ಎಲ್ಲ ಬಗೆಯ ಸಂಬಂಧಗಳನ್ನೂ ಮೀರಿ ಹೇಸಿಗೆ ಹುಟ್ಟಿಸುವ ರೀತಿ ಮಾವ ಸೊಸೆಯ ಮೇಲೆ,ತಂದೆಯೇ ಮಗಳ ಮೇಲೆ,ಅಣ್ಣ ತಂಗಿಯ ಮೇಲೆ ಅತ್ಯಾಚಾರವೆಸಗುತಿದ್ದಾರೆ.ಇವರ ವಿಕೃತ ಮನಸ್ಸು ಯಾವ ರೀತಿಯಿರಬಹುದು?ಹೆಣ್ಣು ಕಡಿಮೆ ಬಟ್ಟೆ ತೊಟ್ಟು ಪ್ರಚೋದಿಸುತ್ತಾಳೆ,ಹೆಣ್ಣು ಮಕ್ಕಳ ನಡತೆಯೇ ಸರಿಯಿಲ್ಲ ಎಂದು ಅನೇಕರು ವಾದಿಸಬಹುದು.ಆದರೆ ಮೂರು ವರ್ಷದ ಹಸುಳೆಯ ಮೇಲೂ,ಅರವತ್ತು ವರ್ಷದ ಮುದುಕಿಯ ಮೇಲೂ ವಿಕೃತ ಕಾಮಿಗಳು ಅತ್ಯಾಚಾರವೆಸಗುತ್ತಾರೆಂದರೆ ಅತ್ಯಾಚಾರಕ್ಕೆ ಹೆಣ್ಣು ಮಕ್ಕಳು ಧರಿಸುವ ಬಟ್ಟೆಯೇ ಮೂಲ ಕಾರಣವಲ್ಲ,ಕಾಮುಕರ ವಿಕೃತ ಮನಸ್ಥಿತಿಯೇ ಕಾರಣವೆಂದು ನಾವು ತಿಳಿಯಬಹುದು.ಇಂಥ ವಿಕೃತ ಮನಸ್ಸು ಯಾವ ರೀತಿ ಕ್ಷೋಭೆಗೊಳಗಾಗಿರುತ್ತದೆಂದರೆ ಆ ಸಮಯದಲ್ಲಿ ಅವರಿಗೆ ತಮ್ಮ ತೆವಲು ತೀರಿಸಿಕೊಳ್ಳಲು ಯಾರು ಸಿಕ್ಕಿದರೂ ನಡೆಯುತ್ತದೆ.ಆಗ ಮಗಳು,ತಂಗಿ,ಸೊಸೆ ಎಂಬ ಸಂಬಂಧಗಳೆಲ್ಲಾ ಅವರಿಗೆ ಗೌಣವಾಗಿ ಕಾಣುತ್ತದೆ.ನಂತರ ಇಂಥ ಮನುಷ್ಯರೇ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕೊಟ್ಟರೆ ಅದು ಅಶ್ಲೀಲ ಎಂದು ಬೊಬ್ಬಿರಿಯುತ್ತಾರೆ.ಇಂಥ ವಿಕೃತ ಮನಸ್ಥಿತಿಯವರನ್ನು ಪೋಷಿಸುತ್ತಿರುವುದು ಇಂದಿನ ಕೆಲವು ಟಿವಿ ಕಾರ್ಯಕ್ರಮಗಳು.ನಾನಾ ರೀತಿಯ ರಿಯಾಲಿಟಿ ಶೋಗಳೆಂಬ ಹೆಸರಲ್ಲಿ ಸದಾ ನಮ್ಮ ಭಾರತೀಯ ಸಂಸ್ಕೃತಿ,ಪರಂಪರೆ,ಧರ್ಮಗಳಿಗೆ ಅಪಚಾರವೆಸಗುತ್ತಲೇ ಇವೆ.ಹೆಣ್ಣನ್ನು ಹಲವು ರೀತಿಯ ಜಾಹಿರಾತುಗಳಿಗೆ ಬಳಸಿಕೊಂಡು,ಅಸಭ್ಯವಾಗಿ ತೋರಿಸಿ,ಅವಳನ್ನು ಮಾರಾಟದ ಸರಕನ್ನಾಗಿ ಮಾಡಿರುವುದು ಇಂಥ ವಿಕೃತ ಮನಸ್ಸಿನ ಜನರಲ್ಲಿ ಹೆಣ್ಣನ್ನು ಏನು ಬೇಕಾದರೂ ಮಾಡಬಹುದು,ಏನು ಮಾಡಿದರೂ ಅವಳು ಸುಮ್ಮನಿರುತ್ತಾಳೆ,ಹಣ ಕೊಟ್ಟು ಅವಳನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳಬಹುದು ಎಂಬ ಭಾವನೆ ಮೂಡಿಸುತ್ತದೆ.ಆದ್ದರಿಂದ ಟಿವಿಯಲ್ಲಿ ಪ್ರಸಾರವಾಗುವ ಕೆಲವು ವಿಕೃತಿಗಳನ್ನು ನಿಲ್ಲಿಸಿ ಸಂಸ್ಕೃತಿ ಪಸರಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ.

ಮತ್ತೊಂದು ರೀತಿಯ ವಿಕೃತ ಮನಸ್ಸುಗಳಿವೆ. ಅದೇ ಭಯೋತ್ಪಾದಕರದ್ದು. ಜಗತ್ತಿನಾದ್ಯಂತ ಭಯವನ್ನು ಹುಟ್ಟಿಸಿ ಆ ಮೂಲಕ ತಾವು ಔನ್ನತ್ಯಕ್ಕೇರಬೇಕೆಂದು ಬಯಸುವ ಮಹನೀಯರುಗಳು ಇವರು. ಕೆಲವರು ‘ಜಿಹಾದ್’ ಎಂಬ ಹೆಸರಲ್ಲಿ ಧರ್ಮಯುದ್ಧ ನಡೆಸುತ್ತೇವೆನ್ನುತ್ತಾರೆ. ಆ ಮೂಲಕ ತಮ್ಮ ಧರ್ಮವನ್ನು ವಿಸ್ತರಿಸುವ ಉದ್ದೇಶದೊಂದಿಗೆ ಗುಂಡಿನ ಮಳೆಗೆರೆಯುತ್ತಾರೆ.ಜನರನ್ನು ಕೊಂದು ಅದು ಹೇಗೆ ತಮ್ಮ ಧರ್ಮವನ್ನು ವಿಸ್ತರಿಸುತ್ತಾರೋ ದೇವರಿಗೇ ಗೊತ್ತು.ತಾವು ಹಿಂದೆ ಮುಂದೆ ನೋಡದೇ ಬಾಂಬುಗಳನ್ನಿಟ್ಟಾಗ ಅದರಲ್ಲಿ ತಮ್ಮ ಧರ್ಮದವರೂ ಸಾಯುತ್ತಾರೆ ಎನ್ನುವ ಕಲ್ಪನೆಯೂ ಇಲ್ಲದ ಮೂರ್ಖರಿವರು.ಜನರನ್ನು ಕೊಂದು ಧರ್ಮವನ್ನು ವಿಸ್ತರಿಸುತ್ತೇವೆ ಎನ್ನುವವರದ್ದು ಎಂಥ ವಿಕೃತ ಮನಸ್ಥಿತಿ ಇರಬಹುದು.

ಧರ್ಮದ ಹೆಸರಲ್ಲಿ ಭಯೋತ್ಪಾದಕರು ಸಾಯಿಸುವ ಅಮಾಯಕ ಹಸುಳೆಗಳು,ಮಕ್ಕಳು,ಹೆಂಗಸರು,ವೃದ್ಧರಿಂದ ಇವರ ಧರ್ಮಕ್ಕೆ ಅದ್ಯಾವ ಅಪಾಯವಿದೆಯೆಂದು ಬಹುಷ: ಅವರಿಗೇ ಗೊತ್ತಿರಲಿಕ್ಕಿಲ್ಲ.ಮೇಲೆ ಕುಳಿತ ಯಾರೋ ದೊಡ್ಡ ಧಣಿ “ನೀವು ವೀರಮರಣವನ್ನಪ್ಪಿ ಸ್ವರ್ಗಕ್ಕೆ ಹೋದಾಗ ಅಲ್ಲಿ ನಿಮ್ಮ ಸೇವೆಗೆ ಚಿರಯವ್ವನೆಯರಾದ ತರುಣಿಯರು ಸದಾ ಸಿದ್ಧರಿರುತ್ತಾರೆ” ಎನ್ನುವ ಮಾತನ್ನು ನಂಬಿ ಹರಕೆಯ ಕುರಿಯಂತೆ ಬಂದು ಆತ್ಮಾಹುತಿ ಬಾಂಬರ್ ಗಳಾಗಿ ಬದಲಾಗುತ್ತಾರಲ್ಲ ಇವರದ್ದು ವಿಕೃತ ಮನಸ್ಥಿತಿಯೇ ಅಥಾವ ಮೂರ್ಖತನವೇ?ಉಗ್ರಗಾಮಿಗಳಾಗಿ ತಮ್ಮ ಧರ್ಮ ರಕ್ಷಣೆಗಾಗಿ ಭಯೋತ್ಪಾದನೆ ಮಾಡುವ ಇವರುಗಳು ಕೊನೆಗೆ ನಾಯಕನ ಪಟ್ಟಕ್ಕಾಗಿ ತಮ್ಮ ತಮ್ಮಲ್ಲೇ ಹೊಡೆದಾಡಿಕೊಂಡು ಆ ಮೂಲಕ ಮತ್ತಷ್ಟು ಅಮಾಯಕರ ಸಾವಿಗೆ ಕಾರಣರಾಗುತ್ತಾರೆ.ಪ್ರಯತ್ನ ಪಟ್ಟರೆ ಅತ್ಯಾಚಾರಿಗಳ ವಿಕೃತ ಮನಸ್ಸಿನಲ್ಲಿ ಸಂಸ್ಕಾರ ತುಂಬಿ ಅವರನ್ನು ಒಳ್ಳೆಯವರನ್ನಾಗಿ ಮಾಡಬಹುದು.ಆದರೆ ಈ ಭಯೋತ್ಪಾದಕರ ಮನಸ್ಸನ್ನು ಪರಿವರ್ತಿಸಲು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲವೇನೋ.

ಇತ್ತೀಚಿನ ಕೆಲವು ಬುದ್ಧಿಜೀವಿಗಳೂ ಸಹ ತಾವು ಹಿಂದೆಂದೋ ಬರೆದ ಒಂದಷ್ಟು ಕಾವ್ಯ,ಕಾದಂಬರಿಗಳನ್ನು ಜನರು ಮೆಚ್ಚಿಕೊಂಡು ತಮ್ಮನ್ನು ಗೌರವಿಸಿದ್ದಾರೆಂದು ಅವಕಾಶ ಸಿಕ್ಕಾಗೆಲ್ಲಾ ಮಾತಿನ ಮೂಲಕ ತಮ್ಮ ವಿಕೃತಿಯನ್ನು ಜನರ ಮುಂದಿಟ್ಟು ಅದನ್ನು ಜನರು ನಂಬಬೇಕೆಂದು ಬಯಸುತ್ತಾರೆ.ಜನರ ಧಾರ್ಮಿಕ,ಸಾಮಾಜಿಕ ನಂಬಿಕೆಗಳಿಗೆ ಧಕ್ಕೆಯನ್ನುಂಟು ಮಾಡುವ ಮಾತನ್ನಾಡಿ ಕೊನೆಗೆ ಜನರಿಂದ ತೀವ್ರ ರೀತಿಯಲ್ಲಿ ವಿರೋಧ ವ್ಯಕ್ತವಾದಾಗ ಕ್ಷಮೆ ಕೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ.ದೇಶದ ಅಭಿವೃದ್ಧಿಯಾಗದಿದ್ದರೂ ಪರವಾಗಿಲ್ಲ ತಮ್ಮ ಬೇಳೆ ಮಾತ್ರ ಬೆಂದರೆ ಸಾಕು ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ.ಸಾಹಿತಿಯಾದವನು,ಬುದ್ಧಿಜೀವಿಯಾದವನು ಸರಿಯಾದ ಮಾರ್ಗದಲ್ಲಿ ಸರ್ಕಾರವನ್ನು,ರಾಜಕಾರಣಿಗಳನ್ನು,ಜನರನ್ನು ಮಾರ್ಗದರ್ಶನ ಮಾಡಬೇಕು.ಅದು ಬಿಟ್ಟು ಯಾವುದೋ ಒಂದು ಗುಂಪು,ಪಂಗಡಕ್ಕೆ ಸೇರಿದವರಂತೆ ವರ್ತಿಸಿ ಒಳ್ಳೆ ಕೆಲಸ ಮಾಡುವವನನ್ನೂ ಅನೇಕ ವಾಮಮಾರ್ಗಗಳ ಮೂಲಕ ತಡೆಯುವ ಪ್ರಯತ್ನ ಇವರು ಮಾಡುತ್ತಿದ್ದಾರೆ.ನಮ್ಮ ದೇಶದ ಧರ್ಮ,ಪರಂಪರೆ,ಸಂಸ್ಕೃತಿ.ಆಚಾರ-ವಿಚಾರಗಳನ್ನು ಸರಿಯಾದ ರೀತಿಯಲ್ಲಿ ತಮ್ಮ ಬರಹಗಳ,ಮಾತಿನ ಮೂಲಕ ಜನರಿಗೆ ತಲುಪಿಸುವುದನ್ನು ಬಿಟ್ಟು ವಿಕೃತಿಯನ್ನು ತುಂಬುವ ಕೆಲಸವನ್ನೂ ಇವರು ಮಾಡುತ್ತಿದ್ದಾರೆ.ಜಾತ್ಯಾತೀತತೆಯನ್ನು ಕೇವಲ ತಮ್ಮ ಬರಹಗಳು,ಮಾತುಗಳಲ್ಲಿ ಪ್ರತಿಪಾದಿಸಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಇವರು ನೈಜ ಜೀವನದಲ್ಲಿ ಜಾತ್ಯಾತೀತತೆಯನ್ನು ಪಾಲಿಸದೇ ಸಮಾಜದ ಸ್ವಾಸ್ಥ್ಯ ಕೆಡಿಸಲು ಮುಂದಾಗುತ್ತಾರೆ.ಅತ್ಯಾಚಾರಿಗಳದ್ದು,ಭಯೋತ್ಪಾದಕರದ್ದು ಒಂದು ರೀತಿಯ ವಿಕೃತಿಯಾದರೆ ಜನರನ್ನು ಹಾದಿ ತಪ್ಪಿಸುವ ಕೆಲವು ‘ದುರ್ಬುದ್ಧಿ’ ಜೀವಿಗಳದ್ದು ಮತ್ತೊದು ರೀತಿಯ ವಿಕೃತಿ.

ಈಗ ಕೆಲವೇ ದಶಕಗಳ ಹಿಂದೆ ಭಾರತದಲ್ಲಿ ರಂಗಭೂಮಿ ಮನೋರಂಜನೆಯ ಪ್ರಮುಖ ಮಾಧ್ಯಮವಾಗಿತ್ತು.ನಂತರ ಸಿನೆಮಾಗಳು ಬಂದಂತೆ ನಾಟಕಗಳು ಕಡಿಮೆಯಾಗತೊಡಗಿದವು.ಪ್ರಸಿದ್ಧ ನಾಟಕ ಕಂಪೆನಿಗಳು ಮುಚ್ಚಿದವು.ಆಗ ಬರುತ್ತಿದ್ದ ಸಿನೆಮಾಗಳೂ ಉತ್ತಮವಾಗಿದ್ದವು.ಹಿಂದಿ,ಕನ್ನಡ,ತಮಿಳು,ತೆಲುಗು ಮತ್ತು ಇನ್ನೂ ಮುಂತಾದ ಭಾಷೆಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ,ನಮ್ಮ ಮೌಲ್ಯಗಳನ್ನು ಎತ್ತಿ ಹಿಡಿಯುವ,ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಚಲನಚಿತ್ರಗಳು ಬರುತ್ತಿದ್ದವು.ಅಣ್ಣಾವ್ರ ‘ಬಂಗಾರದ ಮನುಷ್ಯ’ ಚಿತ್ರ ನೋಡಿದ ಎಷ್ಟೋ ಜನ ನಿರುದ್ಯೋಗಿ ಯುವಕರು ಕೈಕಟ್ಟಿ ಕುಳಿತುಕೊಳುವುದನ್ನು ಬಿಟ್ಟು ಕೃಷಿ,ಸ್ವಂತ ಉದ್ಯೋಗಗಳನ್ನು ಮಾಡಿ ಸ್ವಾವಲಂಬಿಗಳಾದರು.ಅನೇಕ ಶಿಲ್ಪಿಗಳ ಮಕ್ಕಳು ಮೊದಲು ತಮ್ಮ ಉದ್ಯೋಗವನ್ನು ತಾತ್ಸಾರದಿಂದ ನೋಡುತ್ತಿದ್ದವರು ‘ಅಮರ ಶಿಲ್ಪಿ ಜಕಣಾಚಾರಿ’ ಚಿತ್ರವನ್ನು ನೋಡಿ ತಮ್ಮ ಕುಲಕಸುಬಿಗೆ ಅಂಟಿಕೊಂಡು ಶ್ರೇಷ್ಠ ಶಿಲ್ಪಿಗಳಾಗಿ ಬೆಳೆದರು.ಇಂಥ ಚಿತ್ರಗಳು ಇಂದು ಒಂದಾದರೂ ಬರುತ್ತಿವೆಯೇ?

ಇಂದಿನ ನಟ-ನಟಿಯರು ಕಮರ್ಷಿಯಲ್ ಚಿತ್ರಗಳನ್ನು ಕೇವಲ ಮನೋರಂಜನೆಗಾಗಿ ಮಾತ್ರ ಮಾಡುತ್ತಾ ಮೌಲ್ಯ,ಸಂಸ್ಕೃತಿಗಳನ್ನು ಗಾಳಿಗೆ ತೂರುತ್ತಿದ್ದಾರೆ.ಬಹುತೇಕ ಎಲ್ಲ ಚಿತ್ರಗಳಲ್ಲಿ ಮಚ್ಚು-ಲಾಂಗುಗಳ ಹಿಂಸೆ,ಅಶ್ಲೀಲತೆ,ಕೆಳಮಟ್ಟದ ಹಾಸ್ಯ ಸಾಮಾನ್ಯ ಸಂಗತಿಯಾಗಿದೆ.ಇವತ್ತಿನ ತಾರೆಯರು,ನಿರ್ದೇಶಕರು ಹಣ ಕೊಟ್ಟರೆ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ.ತಮ್ಮ ಸಿನೆಮಾಗಳ ಮೂಲಕ ಸಮಾಜಕ್ಕೆ,ಜನರಿಗೆ ಎಂಥ ಸಂದೇಶ ಹೋಗುತ್ತದೆ,ಅದರ ಪರಿಣಾಮಗಳು ಏನಾಗುತ್ತದೆ ಎಂಬುದನ್ನು ಸ್ವಲ್ಪವೂ ಆಲೋಚಿಸುವುದಿಲ್ಲ.ಒಳ್ಳೆಯ ಮೌಲ್ಯ,ಸಂದೇಶವುಳ್ಳ ಚಿತ್ರಗಳನ್ನು ಮಾಡುವುದನ್ನು ಬಿಟ್ಟು ಹಿಂಸೆ,ಅಶ್ಲೀಲತೆಗಳ ಮೂಲಕ ತಮ್ಮ ವಿಕೃತ ಮನಸ್ಸನ್ನು ಜನರಿಗೆ ತೋರಿಸಿ ಜನರೂ ತಮ್ಮನ್ನೇ ಅನುಕರಿಸುವಂತೆ ಮಾಡುತ್ತಾರೆ.ಕೆಲ ಪ್ರೇಕ್ಷಕರೂ ಸಹ ಸ್ವಲ್ಪವೂ ಆಲೋಚಿಸದೇ ತಮ್ಮ ನೆಚ್ಚಿನ ತಾರೆಯರು ಮಾಡಿದ್ದನ್ನೇ ತಾವೂ ಅನುಕರಿಸಿ ಅವರ ವಿಕೃತಿಯಲ್ಲಿ ತಾವೂ ಪಾಲುದಾರರಾಗುತ್ತಿದ್ದಾರೆ.ಇನ್ನಾದರೂ ಚಲನಚಿತ್ರಗಳು ವಿಕೃತಿಯನ್ನು ಬಿಟ್ಟು ಭಾರತದ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಮಾಡಬೇಕಿದೆ.

ಹೇಳುತ್ತಾ ಹೋದರೆ ಇಂಥಾ ವಿಕೃತಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಈ ವಿಕೃತಿಗಳನ್ನು ಮರೆಯಾಗಿಸುವ ಕುರಿತು ನಾವೆಲ್ಲರೂ ಕಾರ್ಯೋಮುಖವಾಗಬೇಕಿದೆ.ಕೇವಲ ಸರ್ಕಾರದಿಂದ ಹಾಗೂ ಮಾಧ್ಯಮಗಳಿಂದಷ್ಟೇ ಈ ಕೆಲಸ ಸಾಧ್ಯವಾಗದು.ನಾವೆಲ್ಲರೂ ಭಾರತೀಯ ಸಂಸ್ಕೃತಿ,ಪರಂಪರೆಯ ಕುರಿತು ತಿಳಿದುಕೊಂಡು ಇಂದಿನ ಯುವ ಪೀಳಿಗೆಗೆ,ನಮ್ಮ ಮಕ್ಕಳಿಗೆ ಕಲಿಸುವ ಕೆಲಸ ಮಾಡಬೇಕು.ಅದೇ ರೀತಿ ಸರ್ಕಾರವೂ ಸಹ ವಿಕೃತ ಮನಸ್ಸಿನ ಅತ್ಯಾಚಾರಿಗಳಿಗೆ,ಭಯೋತ್ಪಾದಕರಿಗೆ,ಕೋಮುವಾದಿಗಳಿಗೆ ಉಗ್ರ ಶಿಕ್ಷೆಯನ್ನು ವಿಧಿಸಬೇಕು.ಬುದ್ಧಿ ಜೀವಿಗಳೂ ಜನರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಿ ಎಲ್ಲರೂ ಒಂದಾಗಿ ಜಾತಿ,ಧರ್ಮದ ಭೇದ ಮರೆತು ಭಾರತೀಯ ಸಂಸ್ಕೃತಿಯನ್ನು ಅರಿತು ಪಾಲಿಸುವಂತಾದರೆ ಮೊದಲು ಭಾರತದಲ್ಲಿ ನಂತರ ಇಡೀ ವಿಶ್ವದಲ್ಲಿ ವಿಕೃತಿ ಮರೆಯಾಗಿ ಸಂಸ್ಕೃತಿ ಪಸರಿಸಿ ಜಗತ್ತೇ ಸಂಸ್ಕಾರಯುತವಾಗಿ ಶಾಂತವಾಗಿರುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!