ಪ್ರಚಲಿತ

ಸಾಂತ್ವನದಿಂದ ಸಿದ್ಧಿಸುವುದೇ ಸಿದ್ಧರಾಮಯ್ಯನವರೇ?

“ಒಲೆ ಹತ್ತಿ ಉರಿದೊಡೆ

ನಿಲ್ಲಬಹುದಲ್ಲದೆ.

ಧರೆ ಹತ್ತಿ ಉರಿದೊಡೆ

ನಿಲ್ಲಬಹುದೇ?”

ಈ ಸಾಲು ಇಂದು ತುಂಬ ನೆನಪಾಯಿತು. ಹನ್ನರಡನೇಯ ಶತಮಾನದ ಶರಣರು ಮುಂದಿನ ಭವಿಷ್ಯವನ್ನು ಅಂದೆ ನುಡಿದಿದ್ದರು ಎನಿಸುತ್ತದೆ. ಒಲೆ ಒಂದು ಚಿಕ್ಕ ಬೆಂಕಿಯನ್ನು ಒಳಗೊಂಡಿದೆ, ಅದನ್ನು ನಾವು ಆರಿಸಬಹುದಾಗಿದೆ. ಆ ಬೆಂಕಿ ಮನುಷ್ಯನ ಹತೋಟಿಯಲ್ಲಿರುವದಾಗಿದೆ. ಅದು ಮನೆಯೊಳಗೆ ನುಗ್ಗುವ ಮುನ್ನ ಆರಿಸಿ ಮನೆಯನ್ನು ಉಳಿಸಿಕೊಳ್ಳಬೇಕಾದ ಅಗತ್ಯ ನಮ್ಮದಾಗಿದೆ.

ಧರೆ ಹತ್ತಿ ಉರಿದಾಗ ನಿಲ್ಲಿಸಲು ಅಸಾಧ್ಯವಾಗಿದೆ. ಏಕೆಂದರೆ ಅದರ ಹರಿವು ವಿಸ್ತಾರ ಎಲ್ಲವೂ ಮನುಷ್ಯನ ಹತೋಟಿ ಮೀರಿರುತ್ತದೆ. ಹಾಗೆಯೇ ಇಂದು ನಮ್ಮ ಸರಕಾರ “ಗುಡ್ಡಕ್ಕೆ ಬೆಂಕಿ ಹತ್ತಿದಾಗ, ನೀರಿನ ಗುಂಡಿ ತೋಡುವ ಕೆಲಸ ಮಾಡುತ್ತಿದೆ.” ಈ ಮಾತು ಏಕೆ ನೆನಪಾಯಿತು ಎಂದರೆ ಇಂದು ನಾನು ಸಮುದಾಯದಲ್ಲಿ ಕೆಲಸ ಮಾಡುವಾಗ ಸಮುದಾಯದಲ್ಲಿ ಒಂದು ವ್ಯಾನ್ ಬಂದು ನಿಂತಿತು, ಅದು ನಮ್ಮ ಸರಕಾರದ ವಾರ್ತಾ ಇಲಾಖೆಯ ವಾಹನವಾಗಿತ್ತು, ಅದರ ಮೇಲೆ ದೊಡ್ಡ ಸ್ಪೀಕರ್ ಹಾಕಿತ್ತು ಅದರೊಳಗೆ ಹಲವು ಜನ ಕಾರ್ಯಕರ್ತರು ಕುಳಿತುಕೊಂಡಿದ್ದರು ಒಂದಿಷ್ಟು ಸುತ್ತುಗಳನ್ನು ಹಾಕಿ, ಜನರಿಗೆ ಕರಪತ್ರ ಹಂಚುತ್ತಿದ್ದರು.

ಇದೆಲ್ಲ ಸರಕಾರ ಧರೆ ಹೊತ್ತಿ ಉರಿದಾಗ ಆರಿಸಲು ಓಡಾಡುವ ಕೆಲಸವೆಂದು ಅಕ್ಷರಸ್ತನಾದ ನನಗೆ ತಡವಾಗಿ ಅರಿವಾಯಿತು. ಇನ್ನು ಅನಕ್ಷರಸ್ತರಾದ ನಮ್ಮ ರೈತರು ಈ ವಿಷಯವನ್ನು ಎಷ್ಟು ಬೇಗ ಅರ್ಥಮಾಡಿಕೊಳ್ಳುವರು ಎಂಬ ಕಲ್ಪನೆ ನಿಮಗೆ ಬಿಟ್ಟಿದ್ದು. ರಾಜ್ಯ ಸರಕಾರ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಮಾಹಿತಿಯನ್ನು ವಾರ್ತಾ ಇಲಾಖೆಯ ಜೊತೆಗೂಡಿ ಕೆಲವು ಪ್ರೋತ್ಸಾದಾಯಕ ಮಾತುಗಳನ್ನು ಸಮುದಾಯದಲ್ಲಿ ಹೇಳುತ್ತ ಮುಖ್ಯಮಂತ್ರಿಗಳ ಭಾಷಣದ ತುಣುಕನ್ನು ರೈತ ಮಿತ್ರರಿಗೆ ತಿಳಿಸುತ್ತ ಈ ಕಾರ್ಯಕ್ರಮ ಜಾರಿ ಮಾಡಿದೆ ಆದರೆ ದುರ್ದೈವ ನೋಡಿ ಈ ಮಾಹಿತಿ ನಿಜವಾದ ರೈತನಿಗೆ ಮುಟ್ಟುವಲ್ಲಿ ಯಡವಟ್ಟಾಗುತ್ತಿದೆ.

ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ನೈಜ ಕಾರಣಗಳಿದ್ದು ಇದೀಗ ಆತ್ಮ ಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಏರುಮುಖವಿದೆ. ಒಬ್ಬರೂ ಇಬ್ಬರೂ ರೈತರು ಆತ್ಮ ಹತ್ಯೆ ಮಾಡಿಕೊಂಡಾಗ ಪ್ರತಿಕಿಯೆ ನೀಡದ ಸರಕಾರ ಮೌನವಾಗಿ ಕುಳಿತಿತ್ತು ಇದೀಗ ಪರಿಸ್ಥಿತಿ ಗಂಭೀರವಾಗಿದ್ದು ರಾಜ್ಯದಲ್ಲಿ ರೈತರ ಆತ್ಮಹತ್ಯೆ ಧರೆ ಹತ್ತಿ ಉರಿದಂತೆ ಭಾಸವಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಮಾನ್ಯ ಸಿದ್ಧರಾಮಯ್ಯನವರು ರೈತರಿಗೆ ಸಾಂತ್ವನ ಹೇಳುವ ಕೆಲಸದಲ್ಲಿ ನಿರತರಾಗಿರುವುದು ಸರಕಾರದ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ. ಗುಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೋಡುವ ಯೋಚನೆ ಸರಕಾರದ್ದಾಗಿದೆ.

ರೈತರ ಆತ್ಮ ಹತ್ಯೆಯೆಂಬ ಕೃತ್ಯ ಅವಿರತವಾಗಿ ಬೆಳೆದು ನಿಂತಾಗ ಅದನ್ನು ತಡೆಯುವುದು ಅಷ್ಟು ಸುಲಭದ ಕೆಲಸವಲ್ಲ ಇದನ್ನು ಸ್ವತ: ರೈತ ಕುಟುಂಬದವರಾದ ಮುಖ್ಯಮಂತ್ರಿಗಳು ಅರ್ಥಮಾಡಿಕೊಳ್ಳುವಲ್ಲಿ ಯಡವಿದ್ದಾರೆ ಎಂಬ ಸತ್ಯ ಅರಿವಿಗೆ ಬರುತ್ತದೆ. ಅಂದು ರಾಜ್ಯದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತು ಪತ್ರಕರ್ತ ಮಿತ್ರರು ಕೇಳಿದಾಗ ಈ ಬಗ್ಗೆ ಪ್ರತಿಕ್ರಿಯೆಸಲಾರೆ ಎಂದವರು ಇಂದೇಕೆ ಹಲವು ಯೋಜನೆಗಳು ಘೋಷಣೆ ಮಾಡಿ ರೈತರ ಬಗ್ಗೆ ಒಲವು ತೋರುತ್ತಿದ್ದಾರೆ ಎಂಬ ಕಟುಸತ್ಯ ಮಾತ್ರ ಅರ್ಥವಾಗುತ್ತಿಲ್ಲ.

ಇಷ್ಟೆಲ್ಲವನ್ನು ಮುಖ್ಯಮಂತ್ರಿಗಳು ಮೊದಲೇ ಯೋಚಿಸಬೇಕಿತ್ತು ಮತ್ತು ಉತ್ತಮವಾಗಿ ಯೋಜಿಸಬೇಕಿತ್ತು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಸರಕಾರ ಇಷ್ಟು ರೈತರ ಆತ್ಮ ಹತ್ಯೆಯಾಗಲು ಬಿಡಬಾರದಿತ್ತು. ಇನ್ನು ಹಳ್ಳಿಗಳಲ್ಲಿ ಸಾಂತ್ವನ  ಹೇಳಲು ಹೊರಟಿರುವವರು ನೈಜ ರೈತರ ಬಳಿಗೆ ಹೋಗಿ ನಿಜವಾದ ಸಾಂತ್ವನ ಹೇಳುತ್ತಿದ್ದಾರೆಯೇ ಎಂಬ ಅಂಶ ಮಾತ್ರ ಯಾರು ಗಮನಿಸುತ್ತಿಲ್ಲ. ಮಾನ್ಯ ಮುಖ್ಯಮಂತ್ರಿಗಳ ಯೋಜನೆ ರೈತರಿಗೆ ತಲುಪುವ ಮುನ್ನವೇ ಸೋರಿಕೆಯಾಗುತ್ತಿದೆ. ಇನ್ನಾದರು ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳಲಿ ತಾವು ಜಾರಿಗೆ ತಂದ ಹಲವು ಯೋಜನೆಗಳ ಸಮರ್ಪಕ ಮೇಲ್ವೀಚಾರಣೆ ನಡೆಯಲಿ ಹೊಸ ಯೋಜನೆಗಳು ತರುವ ಮುನ್ನ ಹಳೆ ಯೋಜನೆಗಳ ಫಲಿತಾಂಶದ ಬಗ್ಗೆ ಮುಖ್ಯಮಂತ್ರಿಗಳು ಗಮನಕೊಡಲಿ.

  • ಕೆ.ಎಂ.ವಿಶ್ವನಾಥ ಮರತೂರ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!