ಪ್ರಚಲಿತ

ಕಲಾಂ,ಕನಸು ಹಾಗು ಫೋಖ್ರಾನ್-II

ಅದೊಂದು ದಿನ ಮೌನಿಯಾಗಿ ಕೂತಿದ್ದೆ,ಹೌದು ಕೇವಲ ಮೌನವೊಂದೇ ಮನಸ್ಸನ್ನ ಆವರಿಸಿತ್ತು..ಮೊದಲ ಬಾರಿ ನಾನು ಸೋತೆ ಎಂದು ಕುಗ್ಗಿದ್ದೆ..ನನ್ನದೇ ನಿರ್ಧಾರ ನನ್ನನ್ನ ಹಂತ ಹಂತವಾಗಿ ಕುಗ್ಗಿಸಿತ್ತು,ಇದು ಅಂದು ನಾನೇ ತೆಗೆದುಕೊಂಡ ನಿರ್ಧಾರವೇ? ನನಗೇ ನಂಬಲಾಗುತ್ತಿರಲಿಲ್ಲ..ಪ್ರತೀ ಕ್ಷಣವೂ ಸೋಲುತ್ತಿದ್ದ ಮನಸ್ಥಿತಿಯ ಎದುರು ನಾನು ಕುಬ್ಜನಾಗುತ್ತಾ ಸಾಗಿದ್ದೆ..ಕಾರಣ ಹುಡುಕುವ ಪ್ರಯತ್ನ ಮಾಡಬೇಕೇ?  ಅಥವಾ ಕಾರಣವೇ ಇಲ್ಲದೇ ಶೂನ್ಯನಾಗಬೇಕೆ ತಿಳಿಯುತ್ತಿರಲಿಲ್ಲ..ಒಂದು ಕಡೆ ಬಿಡದೇ ಬೆನ್ನುಹತ್ತಿದ್ದ ಸೋಲು,ಇನ್ನೊಂದು ಕಡೆ “ನೀನು ಸೋಲನ್ನು ಅಪ್ಪಿಕೊಂಡಿರುವವ” ಎಂದು ನನ್ನನ್ನೇ ಅಣಕಿಸುತ್ತಿದ್ದ ನನ್ನ ಮನಸ್ಸು..”ಮಗನೇ ಕುಗ್ಗಬೇಡ ಒಂದು ದಿನ ನೀನು ಗೆಲ್ಲುವೇ”ಎಂಬ ಅಮ್ಮನ ಮಾತು ಕ್ಷಣಕ್ಕೆ ಸಮಾಧಾನ ಪಡಿಸಿತ್ತು ಆದರೆ ಅದೇಕೋ ಅಳುಕು ಮತ್ತೆ ಅದೇ ಸೋಲು ಬೆನ್ನುಹತ್ತಿದರೇ? ಎಂದು..ಸೋಲು ಅದೆಷ್ಟು ಕುಗ್ಗಿಸಿಬಿಡುತ್ತೆ ನಮ್ಮನ್ನು..ಸೋಲು ಅದೆಷ್ಟು  ಮೌನಿಯಾಗಿಸುತ್ತೆ ನಮ್ಮನ್ನು..ಸೋಲು ಚಂದ ಎಂದು ಕಾಣಿಸುತ್ತಿದ್ದ ಬದುಕಿನ ಇನ್ನೊಂದು ಭಾಗದ ದರ್ಶನ ಮಾಡಿಸುತ್ತೆ..ಆದರೂ ಅನಿರೀಕ್ಷಿತ ಎಂಬಂತೆ ಪದೆ ಪದೆ ಬಂದೆರುಗುವ ಸೋಲು ಮನುಷ್ಯನ ಆತ್ಮಸ್ಥೈರ್ಯದ ಅದ:ಪತನಕ್ಕೆ ಕಾರಣೀಭೂತವಾಗುತ್ತದೆ..ನಮ್ಮದಲ್ಲದ ಈ ಜೀವನದಲ್ಲಿ ಏನನ್ನೋ ಹುಡುಕುತ್ತ ಸಾಗುವ ನಾವು ಒಂದು ಹಂತದಲ್ಲಿ ಏನು ಹುಡುಕುತ್ತಿದ್ದೇವೆ, ಯಾವುದಕ್ಕಾಗಿ ಇಷ್ಟೊಂದು ಪರಿತಪಿಸುತ್ತಿದ್ದೇವೆ ಎಂಬುದನ್ನೇ ಮರೆತಿರುತ್ತೇವೆ..ಕನಸುಗಳನ್ನ ಕಂಡು ಅದ್ಯಾವುದೋ ಅಡೆತಡೆಗಳ ಮೀರಿ ನಿಲ್ಲಲಾಗದೇ ಕನಸುಗಳನ್ನೆಲ್ಲ ಮೂಟೆ ಕಟ್ಟಿ ಎಲ್ಲೋ ಎಸೆದು ಬಿಡುತ್ತೇವೆ..ಮತ್ತೆ ಈ ಜೀವನ ಪಯಣ ಸಾಗುತ್ತದೆ ಆದರೆ ಅದು ನಾವು ಬಯಸಿದ ಜೀವನವೇ?ಅಲ್ಲ ‘ಬಂದತೇ ಎದುರಿಸೋಣ’ಎಂಬ ಅದ್ಯಾವುದೋ ಉತ್ತರ ನಮ್ಮನ್ನ ಸಮಾಧಾನಿಸುತ್ತದೆ.ಆದರೆ ಅಲ್ಲೆಲ್ಲೋ ಎಸೆದ ಕನಸಿನ ಮೂಟೆಗೆ ಗೆದ್ದಲು ಹಿಡಿದಿರುತ್ತೆ..ಕೊನೆಯಿಲ್ಲದ ಜೀವನ ಎಂದುಕೊಂಡು ಸಾಗುತ್ತಲೇ ಇರುತ್ತೇವೆ.ಸತ್ತು ಹೋಯಿತೆ ಅಂದು ನಾ ಕಂಡ ಕನಸು?ಸೋಲಿಗಿರುವಷ್ಟು ಶಕ್ತಿ ನನಗಿಲ್ಲವೇ? ಅಂದು ಅಳಬೇಕು ಅನ್ನಿಸಿತ್ತು,ಯಾರೂ ಇರದ ಆ ಜಾಗ ಆಪ್ತವೆನ್ನಿಸಿತ್ತು.ಅತ್ತರೆ ಸಮಾಧಾನಿಸುವರಿಲ್ಲ,ಸಮಾಧಾನ ಮಾಡಿದಂತೆ ನಟಸಿ ಜೋರಾಗಿ ನಗುವ “ನನ್ನವರು”ಎಂದುಕೊಂಡವರಿಲ್ಲ,ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಬಿಡದೇ ಸುರಿಯುತ್ತಿದ್ದ ಮಳೆಯಿತ್ತು.ಇಷ್ಟು ದಿನ ಗೆದ್ದಾಗ ಬಂದು ಮಾತನಾಡಿಸಿದವರು ನನ್ನ ಆ ಸೋಲನ್ನ ನೋಡಿ “ಆಗ ಗೆದ್ದಿದ್ದನಲ್ಲ ಅದು ಕೇವಲ ಅದೃಷ್ಟ” ಎಂದಾಗ ಅದೇಕೆ ಬದುಕಿರುವೇ ಇಲ್ಲಿ ಅನ್ನಿಸಿತ್ತು.ಆಗೊಂದು ಪುಸ್ತಕ ನನಗೆ ಬದುಕಿನಲ್ಲಿ ಭರವಸೆ ಮೂಡಿಸಿತ್ತು ಅದೇ “ವಿಂಗ್ಸ್ ಆಫ್ ಫೈಯರ್”.ಅದನ್ನೋದದಿದ್ದರೆ ನಾನು ನನ್ನ ಕನಸನ್ನ ಅರಸುತ್ತಿರಲಿಲ್ಲ.ಬದುಕಿದ್ದರೂ ಭರವಸೆ ಇರುತ್ತಿರಲಿಲ್ಲ.ಅರ್ಧಂಬರ್ಧ ಬರುತ್ತಿದ್ದ ಇಂಗ್ಲಿಷ್ ನಲ್ಲಿ ಅದೆಂಗೋ ಅದನ್ನ ಓದಿದ್ದೆ,ಆದರೂ ಆ ಅಕ್ಷರಗಳು ನನ್ನ ಬದುಕಿನ ನಿರ್ಣಯಗಳಿಗೆ ಬೆಂಬಲವಾಗಿ ನಿಂತಿದ್ದವು.”ಕನಸು”ಎಂಬುದರ ಅರ್ಥ ತಿಳಿದಿತ್ತು.”ಬದುಕು”ಎಂಬುದರ ದರ್ಶನವಾಗಿತ್ತು..’ಕಲಾಂ’ಎಂಬ ಮನುಷ್ಯ ಪಟ್ಟ ಕಷ್ಟದೆದುರು ನನ್ನದೇನು ಮಹಾನ್ ಅನ್ನಿಸಿತ್ತು..ಮತ್ತೆ ಮೌನಿಯಾಗಿದ್ದೆ ಆದರೆ ಸೋಲಿಗೆ ಹೆದರಿ ಅಲ್ಲ ಕನಸುಗಳ ಬೆನ್ನತ್ತುವ ಭರದಲ್ಲಿ.ನನ್ನದೆನ್ನುವ ಕನಸು ನನಗಾಗಿ ತೆರೆದುಕೊಂಡಂತೆ ಭಾಸವಾಗಿತ್ತು.”ಸಮಾಧಾನ” ನನಗೆ ನಾನೇ ಹೇಳಿಕೊಳ್ಳುವ ಪರೀಸ್ಥಿತಿಯಲ್ಲಿರುವಾಗ “ಕಲಾಂ”ಎಂಬ ‘ಪೀಪಲ್ಸ್ ಪ್ರೆಸಿಡೆಂಟ್’ ನನ್ನ ಕನಸುಗಳಿಗೊಂದು ವ್ಯಾಖ್ಯಾನ ನೀಡಿದ್ದರು. ದೇವರೇ, ಜೀವಂದಲ್ಲೊಮ್ಮೆ ಆ ಮನುಷ್ಯನ ಭೇಟಿಯಾಗಬೇಕು,ಪ್ರೀತಿಯಿಂದ ಮಾತನಾಡಬೇಕು ಎಂದು ಅಂದುಕೊಂಡಿದ್ದೆ ಆದರೆ ಅದಕ್ಕೆ ಅವಕಾಶವೇ ಸಿಗಾಲಿಲ್ಲವಲ್ಲ. ಸಾವು ನಿನಗೊಂದು ದಿಕ್ಕಾರ ಹೇಳಲೇ ಬೇಕೆನಿಸುತ್ತಿದೆ. ಪ್ರೇರಣೆ ನಮ್ಮೊಳಗೆ ಆದರೆ ಬಡಾವಣೆ ಕೂಡ ನಮ್ಮೊಳಗಿನಿಂದಲೇ ಶುರುವಾಗುತ್ತದೆ. ನನ್ನೊಳಗಿನ ಪ್ರೇರಣೆ,ನನ್ನೊಳಗಿನ ಚೈತನ್ಯ ಕಲಾಂ ಆಗಿದ್ದರು.

ಕಲಾಂ ಎಂಬ ಮಿಸೈಲ್ ಮ್ಯಾನ್ ಬಗ್ಗೆ ನಾನು ಹೆಚ್ಚೇನೂ ಹೇಳಲು ಹೋಗುವುದಿಲ್ಲ ಆದರೆ “ಫೋಖ್ರಾನ್”ಸ್ಪೋಟದ ಯಶಸ್ವೀ ಕಥನದ ಬಗ್ಗೆ ಹೇಳುವ ಪ್ರಯತ್ನ ಮಾಡುತ್ತೇನೆ.ಅದು ೧೯೯೮ ರ ಮೇ ೧೧ ಭಾರತ ಯಶಸ್ವಿಯಾಗಿ ಪರಮಾಣುಸ್ಪೋಟವನ್ನ ಮಾಡಿತ್ತು..’ಭಾರತೀಯರು ನಮ್ಮ ಕಾಲಕೆಳಗಿನ ಕಸ’ ಎಂದು ನಂಬಿದ್ದ ಅಮೇರಿಕಕ್ಕೆ ನಂಬಲೇ ಸಾಧ್ಯವಾಗದ ಉತ್ತರವನ್ನ ಭಾರತದ ವಿಜ್ಞಾನಿಗಳು ನೀಡಿದ್ದರು.ಭಾರತದ ಶಕ್ತಿ ವಿಶ್ವಕ್ಕೇ ಅನಾವರಣಗೊಂಡಿತ್ತು.ರಷ್ಯಾ,ಅಮೇರಿಕ,ಚೀನ ಜೊತೆಗೆ ಬದ್ಧವೈರಿ ಪಾಕಿಸ್ತಾನವೂ ಕೂಡ ಒಂದು ಕ್ಷಣ ಬೆಚ್ಚಿತ್ತು ಭಾರತದ ವಿಜ್ಞಾನಿಗಳ ಈ ಅಭೂತಪೂರ್ವ ಸಾಧನೆಗೆ.ಅಬ್ಬಾ! ಅಂತದ್ದೊಂದು ಸಾರ್ಥಕ ಕ್ಷಣದ ನಿರ್ಮಾಣ ಸುಲಭವಾಗಿರಲಿಲ್ಲ.ಹಿಂದೊಮ್ಮೆ ೧೯೭೪ ರ ಮೇ ೧೮ ರಂದು ಭಾರತ ಫೋಖ್ರಾನ್ ನಲ್ಲೇ ನಡೆಸಿದ್ದ ಅಣುಸ್ಪೋಟದ ಪ್ರಯತ್ನ ವಿಫಲವಾಗಿತ್ತು,ಅದಾದ ನಂತರ ಭಾರತ ಅಣುಸ್ಪೋಟವನ್ನ ನಡೆಸುವ ಸಾಹಸವನ್ನೇ ಮಾಡಲಿಲ್ಲ.ಅಂದರೆ ಅಂತಹ ಗಂಡೆದೆಯ ಪ್ರಧಾನಿ ನಮಗೆ ಸಿಗಲೇ ಇಲ್ಲ. ಆದರೆ ಭಾರತದ ವಿಜ್ಞಾನಿಗಳು ಕನಸು ನನಸಿನಲ್ಲೂ ನಮಗೊಂದು ಗಂಡೆದೆಯ ಪ್ರಧಾನಿ ಸಿಗಲಿ,ಮುನ್ನಡೆಯಿರಿ ವಿಜ್ಞಾನಿಗಳೇ ವಿಶ್ವಕ್ಕೆ ನಮ್ಮ ಶಕ್ತಿ ತೋರಿಸೋಣ ಎಂದು ಹುಮ್ಮಸ್ಸಿನ ಮಾತಾಡುವ ಪ್ರಧಾನಿ ಸಿಗಲೆಂದು ಬೇಡಿಕೊಳ್ಳುತ್ತಿದ್ದರು.ಅಂತಹ ಪ್ರಧಾನಿಯೊಬ್ಬರ ಆಗಮನ ಆ ಸಮಯದಲ್ಲಿ ಆಗುತ್ತದೆ ಅವರೇ ಅಟಲ್ ಬಿಹಾರಿ ವಾಜಪೇಯಿ. ಅಟಲ್ ಜಿ ಅಧಿಕಾರದ ಬಾಲ ಹಿಡಿದುಕೊಂಡು ಬಂದಿರಲಿಲ್ಲ ಬದಲಾಗಿ ಭವ್ಯ ಭಾರತ ಕಟ್ಟುವ ಕನಸು ಮತ್ತು ಛಲದಿಂದ ಬಂದಿದ್ದರು. ೧೯೯೬ರಲ್ಲಿ ಅಟಲ್ ಜಿ ಪ್ರಧಾನಿಯಾಗಿ ಬಂದಾಗ ಮೊದಲು ಮಾಡಿದ ಕೆಲಸ ಏನು ಗೊತ್ತೇ? ಅಬ್ದುಲ್ ಕಲಾಂ ರನ್ನು ಕರೆದು “ಅಣುಸ್ಪೋಟ ಮಾಡೋಣ ಭಾರತದ ಶಕ್ತಿಯನ್ನ ವಿಶ್ವಕ್ಕೆ ತಿಳಿಸೋಣ ಕೈ ಜೋಡಿಸುತ್ತೀರಿಯೇ ” ಎಂದು ಕೇಳಿದರು..ಹೌದು ಅದೇ ಸಮಯಕ್ಕೆ ಕಾಯುತ್ತಿದ್ದ ಕಲಾಂ “ನೀವು ಹ್ಞಂ ಅಂದರೆ ನಾಳೆಯಿಂದಲೇ ಕೆಲಸ ಶುರು ಮಾಡುತ್ತೇವೆ ನೀವು ಬರುವ ಲಕ್ಷಣ ತಿಳಿದು ಆಗಲೇ ವಿಜ್ಞಾನಿಗಳು ಹುಮ್ಮಸ್ಸಿನಲ್ಲಿದ್ದಾರೆ ನಾವು ಸಿದ್ದರಾಗಿದ್ದೇವೆ.ಆದರೆ ಈ ವಿಷಯ ಬೇರೆ ಯಾರಿಗೂ ತಿಳಿಯಬಾರದು ಅದು ನಮ್ಮವರಿಗೂ ತಿಳಿಯಬಾರದು,ತಿಳಿದರೆ ಅಮೇರಿಕ ನಮ್ಮ ಕೆಲಸಕ್ಕೆ ಅಡ್ಡಗಾಲು ಹಾಕಬಹುದು”ಅಂದರು.ಆಗ ಅಟಲ್ ಜಿ ಒಂದು ಮಾತನ್ನ ಹೇಳುತ್ತಾರೆ “ಕಲಾಂ ಜಿ ನನಗೂ ಮದುವೆ ಆಗಲಿಲ್ಲ,ನಿಮಗೂ ಆಗಲಿಲ್ಲ ಹಾಗಾಗಿ ವಿಷಯ ಹೊರಗೆ ಹೋಗುವ ಭಯ ಬೇಡ”ಎಂದು ಬಿಟ್ಟರು.ಆದರೆ ಸಮಯ ಕೈ ಕೊಟ್ಟಿತ್ತು ೧೩ ದಿನಕ್ಕೆ ಅಟಲ್ ಜಿ ಅವರ ಸರ್ಕಾರ ಪತನಗೊಂಡಿತ್ತು.ವಿಜ್ಞಾನಿಗಳ ಆಸೆಗೆ ಸಮಯವೇ ತಣ್ಣೀರೆರೆಚಿತು.ಅಟಲ್ ಜಿ ನಂತರ ಬಂದ ದೇವೆಗೌಡರು ಮತ್ತು ಗುಜ್ರಾಲರು ಈ ಬಗ್ಗೆ ಯೋಚಿಸಲೇ ಇಲ್ಲ.ಆದರೆ ಒಂದು ಬಲವಾದ ಶಕ್ತಿ ವಿಜ್ಞಾನಿಗಳಲ್ಲಿ ಪಸರಿಸುತ್ತಲೇ ಇತ್ತು.ಅದರ ಫಲವೋ ಏನೋ ಅಟಲ್ ಜಿ ಮತ್ತೆ ಪ್ರಧಾನಿಯಾದರು.೧೯೯೮ ರಲ್ಲಿ ಅಟಲ್ ಜಿಗೆ ಮತ್ತೆ ಅಧಿಕಾರ ದೊರೆಯಿತು.ಅಣುಪರೀಕ್ಷೆಗೆ ತಯಾರಿ ಮತ್ತೆ ಶುರು ಮಾಡಿಕೊಳ್ಳಲು ಪ್ರಧಾನಿ ವಿಜ್ಞಾನಿಗಳಿಗೆ ಕರೆ ನೀಡಿದರು.ಎರೋನಾಟಿಕಲ್ ಎಂಜಿನಯರಿಂಗ್ ಮುಗಿಸಿದ್ದ ಅಬ್ದುಲ್ ಕಲಾಂ DRDO ದಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.೧೯೯೨ ರಿಂದ ೧೯೯೯ರ ವರೆಗೆ ರಕ್ಷಣಾಮಂತ್ರಿಗಳಿಗೆ Scientific Advisor ಆಗಿ ಕೆಲಸ ನಿರ್ವಹಿಸಿದ್ದರು ಕಲಾಂ.ಅಣುಸ್ಪೋಟದ ಜವಾಬ್ದಾರಿಯನ್ನು ಹೊತ್ತು ಕೆಲಸಕ್ಕೆ ಅಣಿಯಾಗಿದ್ದರು ಕಲಾಂ.ಭಾರತದ ಶಕ್ತಿ ಪ್ರದರ್ಶನಕ್ಕೆ ಭರದ ತಯಾರಿ ಥಾರ್ ಮರುಭೂಮಿಯಲ್ಲಿ ನಡೆಯುತ್ತಿತ್ತು.

೫೮ ವಿಜ್ಞಾನಿಗಳು ಹಗಲು ರಾತ್ರಿ ಕೆಲಸಮಾಡತೊಡಗಿದರು.ಕಲಾಂ,ಕಾಕೋಡ್ಕರ್ ಮತ್ತು ಚಿದಂಬರಂ ನೆತೃತ್ವದಲ್ಲಿ ವಿಜ್ಞಾನಿಗಳು ಅಣುಪರೀಕ್ಷಗೆ ಅನುವಾಗುತ್ತಿದ್ದರು.ವಿಚಿತ್ರವೇನು ಗೊತ್ತೆ ಈ ಅಣು ಪರೀಕ್ಷೆಯ ಬಗ್ಗೆ ಪ್ರಧಾನಿ ಅಟಲ್,ಕಲಾಂ ಹಾಗು ವಿಜ್ಞಾನಿಗಳನ್ನು ಬಿಟ್ಟು ಬೇರೆ ಯಾರಿಗೂ ತಿಳಿದಿರಲಿಲ್ಲ. ಅಡ್ವಾಣಿ ಹಾಗೂ ಜಾರ್ಜ ಫರ್ನಾಂಡೀಸ್ ಅವರಿಗೆ ಅಣುಪರೀಕ್ಷೆಯ ಬಗ್ಗೆ ತಿಳಿದಿದ್ದು ಮೇ ೧೦ ರ ರಾತ್ರಿ ಅಲ್ಲಿಯವರೆಗೂ ಅವರಿಗೆ ಇಂತಹದೊಂದು ಬೆಳವಣಿಗೆಯ ಅರಿವೇ ಇರಲಿಲ್ಲ.ಥಾರ್ ಮರುಭೂಮಿಯಲ್ಲಿ ತಯಾರಿ ನಡೆಸಿದ್ದ ವಿಜ್ಞಾನಿಗಳು ಅಮೇರಿಕಾದ ಕಣ್ತಪ್ಪಿಸಿ ಅಣುಪರೀಕ್ಷೆಯ ತಯಾರಿ ನಡೆಸಬೇಕಿತ್ತು.ಏಕೆಂದರೆ ಅಮೇರಿಕ ಭಾರತದಲ್ಲಿ ನಡೆಯಿತ್ತಿದ್ದ ಪ್ರತೀ ಬೆಳವಣಿಗೆಯನ್ನ ಗಮನಿಸಲು ನಾಲ್ಕು ಉಪಗ್ರಹಗಳನ್ನ ಭಾರತದ ಮೇಲೆಯೇ ಸುತ್ತುತ್ತಿರುವಂತೆ ಮಾಡಿತ್ತು.ಏನಾದರೂ ಕೆಲಸ ಮಾಡಬೇಕೆಂದರೆ ರಾತ್ರಿಯೇ ಮಾಡಬೇಕಿತ್ತು ಆಗ ಆ ಉಪಗ್ರಹಗಳಿಗೆ ಭಾರತದ ನಡೆಯುವ ಬೆಳವಣಿಗೆಗಳ ಕಲೆಹಾಕುವುದು ಅಸಾಧ್ಯವಾಗಿತ್ತು.ಹಗಲಿಡೀ ಅವು ಭಾರತದಲ್ಲಿ ನಡೆಯುವ ಎಲ್ಲ ಆಗುಹೋಗುಗಳನ್ನ ಸೆರೆ ಹಿಡಿಯುತ್ತಿತ್ತು, ಆದರೆ ನಮ್ಮ ವಿಜ್ಞಾನನಿಗಳು ಕೇವಲ ವಿಜ್ಞಾನಿಗಳಾಗಿ ಕೆಲಸಮಾಡಲಿಲ್ಲ ಬದಲಾಗಿ ಸೈನಿಕರಂತೆ ಕೆಲಸ ಮಾಡುತ್ತಿದ್ದರು.ರಾತ್ರಿಯಿಡೀ ದುಡಿದು ಬೆಳಿಗ್ಗೆಯಾಗುತ್ತಿದ್ದಂತೆ ಎಲ್ಲ ಸಲಕರಣೆಗಳನ್ನ ಅದೇ ಜಾಗದಲ್ಲಿಟ್ಟು ಅನುಮಾನ ಬರದ ಹಾಗೆ ಮಾಡಿರುತ್ತಿದ್ದರು.ಅಮೇರಿಕ ಗಮನಿಸಬಾರದು ಎಂದು ಸೈನಿಕರ ಬಟ್ಟೆ ತೊಟ್ಟು ಕೆಲಸ ಮಾಡಿದರು.ಥಾರ್ ನಲ್ಲಿ ಗುಂಡಿತೋಡುವ ಕೆಲಸ ಭರದಿಂದ ಸಾಗಿತ್ತು.ಅದರಲ್ಲಿ ಒಂದಕ್ಕೆ ವೈಟ್ ಹೌಸ್ ಎಂದು ಇನ್ನೊಂದಕ್ಕೆ ತಾಜ್ ಮಹಲ್ ಎಂದು ಮತ್ತುಳಿದ ನಾಲ್ಕು ತಗ್ಗುಗಳನ್ನು ನವ್ ತಾಲ್ ಎಂದು ನಾಮಕರಣ ಮಾಡಲಗಿತ್ತು.ಒಂದು ಹೈಡ್ರೊಜನ್ ಬಾಂಬ್ ಮತ್ತು ಇನ್ನುಳಿದ ಸಣ್ಣ ಪರೀಕ್ಷೆಗಳನ್ನ ನಡೆಸುವುದು ವಿಜ್ಞಾನಿಗಳ ಯೋಜನೆಯಾಗಿತ್ತು.ಒಂದು ದೊಡ್ಡ ಸ್ಪೋಟ ಇನ್ನು ನಾಲ್ಕು ಸಾಮಾನ್ಯ ಅಣು ಸ್ಪೋಟದ ರೂಪುರೇಷೆ ಸಿದ್ಧಗೊಂಡಿತ್ತು,ಜೀವಕ್ಕೆ ಜೀವ ಕೊಟ್ಟು ಆ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದರು.ಭಾರತದ ಶಕ್ತಿಯ ಅನಾವರಣಕ್ಕೆ ಕ್ಷಣಗಣನೆ ಶುರು ಆಗಿತ್ತು.ಆದರೆ ಅದೇ ಸಮಯದಲ್ಲಿ ಸ್ಥಳೀಯ ಜನರು ಕೆಲವರಿಗೆ ಈ ಮಾಹಿತಿ ದೊರೆತು ಅವರು ಆ ಸ್ಥಳಕ್ಕೆ ಬರುತ್ತಾರೆ,ವಿಜ್ಞಾನಿಗಳಿಗೆ ಕೊನೆಯ ಹಂತದಲ್ಲಿ ನಮ್ಮ ಯೋಜನೆ ವಿಫಲವಾದರೇನು ಕಥೆ ಎಂಬ ಭಯ ಆದರೆ ಅಲ್ಲಿ ಬಂದ ಸ್ಥಳೀಯನೊಬ್ಬ “೧೯೭೪ ರಲ್ಲಿ ನೀವು ಅಣುಸ್ಪೋಟ ಮಾಡಿದಾಗ ನನ್ನ ಮನೆಯ ಗೋಡೆ ಬಿರುಕು ಬಿಟ್ಟಿತ್ತು ಆದರೆ ಈಗ ಪೂರ್ತಿ ಮನೆ ಚೂರಾಗಿ ಹೋದರು ತೊಂದರೆಯಿಲ್ಲ ಯಶಸ್ವೀಯಾಗಿ ನಿಮ್ಮ ಕೆಲಸ ಮಾಡಿ ನಿಮ್ಮ ಜೊತೆ ನಾವಿದ್ದೇವೆ”ಎಂದನು.ವಿಜ್ಞಾನಿಗಳ ಕಣ್ಣಂಚು ಒದ್ದೆಯಾಗಿತ್ತು.ಗೊತ್ತಿದ್ದೋ ಗೊತ್ತಿಲ್ಲದೆಯೋ ಇಡೀ ಭಾರತೀಯರ ಹಾರೈಕೆ ನಮ್ಮ ಜೊತೆಗಿದೆ ಅಂದಮೇಲೆ ನಾವು ಗೆಲ್ಲಲೇಬೇಕು ಎಂದು ಅವರು ತೀರ್ಮಾನಿಸಿದ್ದರು. ಥಾರ್ ಮರುಭೂಮಿಯಲ್ಲಿ ನಡೆಯುತ್ತಿದ್ದ ಈ ಕೆಲಸದ ಸುಳಿವು ಯಾರಿಗೂ ತಿಳಿದಿರಲಿಲ್ಲ.ಅಟಲ್ ಜಿ ದಿನದಿಂದ ದಿನಕ್ಕೆ ಭಾವುಕರಾಗುತ್ತಾ ಹೋದರು. ಪ್ರತೀ ದಿನ ಕಲಾಂ ಅವರೊಡನೆ ಬಿಡದೇ ಮಾತುಕತೆ ನಡೆಸುತ್ತಿದ್ದರು.ಕ್ಷಣ ಕ್ಣಣದ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದರು.ಅದೇ ಸಮಯದಲ್ಲಿ ಈ ಯೋಜನೆಯ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದ ಕಾಕೋಡ್ಕರ್ ಅವರ ತಂದೆ ವಿಧಿವಶರಾಗಿದ್ದರು,ಆದರೆ ಆ ಮನುಷ್ಯ ತಂದೆಯ ಮುಖವನ್ನೊಮ್ಮೆ ನೋಡಿ ಕೆಲಸಕ್ಕೆ ವಾಪಸ್ಸಾಗಿಬಿಟ್ಟರು,ಅಂತಿಮ ವಿಧಿವಿಧಾನಗಳನ್ನೂ ಮಾಡಲು ಅವರು ನಿಲ್ಲಲಿಲ್ಲ ಅದಕ್ಕವರು “ನನ್ನತಂದೆಯವರ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ನಾವು ಪರಮಾಣುಸ್ಪೋಟವನ್ನ ಯಶಸ್ವಿಯಾಗಿ ನೆರವೇರಿಸಬೇಕು”ಎಂದರು.ಅಬ್ಬಾ ಅದೆಂತಾ ಆತ್ಮಸ್ತೈರ್ಯ.ಪ್ರತಿಯೊಬ್ಬ ವಿಜ್ಞನಿಯೂ ತನ್ನ ಕುಟುಂಬದ ಬಗ್ಗೆ ಯೋಚಿಸಲೇ ಇಲ್ಲ,ಅವರೆಲ್ಲರ ಯೋಚನೆ ಪರಮಾಣು ಸ್ಫೋಟ ಮತ್ತು ಭಾರತದ ಅಖಂಡ ಶಕ್ತಿಯ ಪ್ರದರ್ಶನಕ್ಕೆ ಸೀಮಿತವಾಗಿತ್ತು.ಅಟಲ್ ಜಿ ಆ ಮಹಾದಿನವನ್ನ ನಿಗದಿ ಮಡಿಸಿಯೇ ಬಿಟ್ಟರು.ಮೇ ೧೧ ಆ ದಿನಾಂಕ..ಅಂತೂ ಆ ದಿನ ಬಂದೇ ಬಿಟ್ಟಿತು..ಆದರೆ ಮೇ ೧೦ ರ ರಾತ್ರಿ ಬಿರುಗಾಳಿ ತೂರಿಕೊಂಡು ಬಂತು.ಮಳೆಬರುವ ವಾತಾವರಣ ನಿರ್ಮಾಣವಾಗಿತ್ತು.ಕಲಾಂ ಒಂದುಕ್ಷಣ ಹೆದರಿದರು.ವಿಜ್ಞಾನಿಗಳು ಸ್ವಲ್ಪ ವಿಚಲಿತರಾದರು,ಮಳೆ ಈಗೆನಾದರು ಬಂದರೆ? ಇಲ್ಲ ಅವರ್ಯಾರಿಗು ಅದನ್ನ ಕಲ್ಪಿಸಿಕೊಳ್ಳುವುದು ಕಷ್ಟವಾಗಿತ್ತು.ಆದರೆ ಇಷ್ಟೊಂದು ಕಷ್ಟಪಟ್ಟಿದ್ದಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಒಂದು ಕಡೆ.ಅಟಲ್ ಜಿ ಕೈ ಮುಗಿದು ಕುಳಿತಿದ್ದರು.ಕಲಾಂ,ಚಿದಂಬರಂ,ಕಾಕೋಡ್ಕರ್ ಆ ಅಮೂಲ್ಯ ಸಮಯಕ್ಕೆ ಕಾಯುತ್ತಿದ್ದರು..ಅಡ್ವಾಣಿ,ಫರ್ನಾಂಡೀಸ್ , ಬ್ರಿಜೆಶ್ ಮಿಶ್ರ ಮತ್ತು ಅಟಲ್ ಜಿ ಕ್ಷಣ ಕ್ಷಣದ ಮಾಹಿತಿಯನ್ನು ಅಟಲ್ ಜಿ ಅವರ ಮನೆಯಲ್ಲಿ ಕುಳಿತು ಪಡೆಯುತ್ತಿದ್ದರು..ಹವಾಮಾನದಲ್ಲಿ ಮಹತ್ವದ ಬದಲಾವಣೆ ಆಗಿತ್ತು ಆ ಕ್ಷಣ ಬಂದೇ ಬಿಟ್ಟಿತ್ತು.ಬಿರುಗಾಳಿ ಕಡಿಮೆ ಆಗಿತ್ತು,ಮೋಡ ಮರೆಯಾಗಿತ್ತು ವಿಜ್ಞಾನಿಗಳು countdown ಶುರು ಮಾಡಿದ್ದರು ೪….೩….೨…೧…೦ ಪರಮಾಣುಸ್ಫೋಟವಾಯಿತು ಇಡೀ ಭೂಮಿ ಒಂದು ಕ್ಷಣ ನಡುಗಿತ್ತು,ವೈಟ್ ಹೌಸ್ ಛಿದ್ರಗೊಂಡಿತ್ತು. ಅಮೇರಿಕದ CIA ತನ್ನ ಇತಿಹಾಸದಲ್ಲೇ ಮೊದಲಬಾರಿಗೆ ಗೂಢಚಾರಿಕೆಯಲ್ಲಿ ಎಡವಿತ್ತು. ಅವರೆಲ್ಲ ಅಂದುಕೊಂಡಿದ್ದರು ಭಾರತದಲ್ಲಿ ಭೂಕಂಪವಾಗಿದೆ.ಆದರೆ ಯಾವಾಗ ಭಾರತ ಅದು ಭೂಕಂಪನವಲ್ಲ ಪರಮಾಣು ಸ್ಫೂಟದ ಪರೀಕ್ಷೆ ಎಂದು ಅದಿಕೃತ ಪ್ರಕಟಣೆಯಲ್ಲಿ ಹೇಳಿತೋ ಅಮೇರಿಕ ಬೆಚ್ಚಿ ಬಿದ್ದಿತ್ತು. ಭಾರತ ಗೆದ್ದಿತ್ತು. ವಿಜ್ಞಾನಿಗಳು ಇಡೀ ವಿಶ್ವಕ್ಕೆ ಭಾರತದ ಶಕ್ತಿಯನ್ನ ಪ್ರದರ್ಶಿಸಿದ್ದರು .ಕಲಾಂ ಮುಖದಲ್ಲಿ ಗೆಲುವಿನ ನಗೆ ಕಾಣುತ್ತಿತ್ತು, ಅಟಲ್ ಜಿ ಕಣ್ಣಂಚು ಒದ್ದೆಯಾಗಿತ್ತು.ಕಲಾಂ ಎಂಬ ವಿಜ್ಞಾನಿಯು ಧೈರ್ಯದಿಂದ ಭಾರತ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದರು. ಅಮೇರಿಕಕ್ಕೆ ದೊಡ್ಡ ಅಘಾತವಾಗಿತ್ತು,ಪಾಕಿಸ್ತಾನದ ಎದೆಯಲ್ಲಿ ನಡುಕ ಶುರುವಾಗಿತ್ತು.ಒಟ್ಟಿನಲ್ಲಿ ಭಾರತ ಗೆದ್ದಿತ್ತು.ಹೆಮ್ಮೆಯ ಕ್ಷಣವೊಂದರ ಸ್ರಷ್ಟಿಯಾಗಿತ್ತು..

“Today, I remember the hot day of 1998 at Pokhran: 53C. When most of the world was sleeping; India’s nuclear era emerged.”

ಇದು ಮೇ ೧೧,೨೦೧೫ ರಂದು ‘ಮಿಸೈಲ್ ಮ್ಯಾನ್’ ಕಲಾಂ ಮಾಡಿದ್ದ ಟ್ವೀಟ್..ಆ ಸುವರ್ಣ ಕ್ಷಣವನ್ನ ನೆನಪಿಸಿಕೊಂಡಿದ್ದರು ಕಲಾಂ.ಕಲಾಂ ತಾತ ಅವರ ಈ ಟ್ವೀಟ್ ನೋಡಿ ನನ್ನ ಮನಸ್ಸು ಭಾರವಾಗಿತ್ತು. ಜಗತ್ತಿನ ಬಹುತೇಕ ದೇಶಗಳು ಮಲಗಿದ್ದಾಗ ಭಾರತದ ವಿಜ್ಞಾನಿಗಳು ಕೆಲಸಮಾಡಿದರು.ಅಮೇರಿಕಾದ CIA ಕೂಡ ಭಾರತೀಯರ ಸಾಧನೆಯ ಹೆಜ್ಜೆಗಳನ್ನು ಹುಡುಕಲು ಸಾಧ್ಯವಾಗಲೇ ಇಲ್ಲ.ಜಗತ್ತೇ ಭಾರತದ ಈ ಸಾಧನೆಯನ್ನು ಕೊಂಡಾಡಲೇ ಬೇಕಿತ್ತು. “ಬುದ್ದ ನಕ್ಕಿದ್ದ”. ಪರಮಾಣು ಸ್ಫೋಟದ ಬಗ್ಗೆ ವಿಜ್ಞಾನಿ ಚಿದಂಬರಂ “ಅಂದು ಮೇ ೧೧,೧೯೯೮ ಅವತ್ತು ಬುಧ್ದ ಪೂರ್ಣಿಮೆ ಆದರೆ ನಮಗೆ ಭಯವೇನೆಂದರೆ ೧೯೭೪ರ ಮೇ ೧೮ ಕೂಡ ಬುಧ್ದ ಪೂರ್ಣಿಮೆಯಾಗಿತ್ತು,ಹಾಗಾಗಿ ಎಲ್ಲಿ ಮತ್ತೆ ಎಡವಿಬಿಡುತ್ತೇವೋ ಎಂಬ ಭಯ ಕಾಡುತ್ತಿತ್ತು ಆದರೆ ಬುದ್ಧ ನಕ್ಕಿದ್ದ,ಭಾರತ ಗೆದ್ದಿತ್ತು” ಎಂದು ತಮ್ಮ ಮನದಾಳದ ಮಾತನ್ನ ಹೊರಹಾಕುತ್ತಾರೆ. ಕಲಾಂ ಮತ್ತು ಅಟಲ್ ಜೋಡಿ ಭಾರತ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದರು.ಇಡೀ ವಿಶ್ವ ಭಾರತದ ಈ ಸಾಧನೆಗೆ ತಲೆಬಾಗಲೇಬೇಕಿತ್ತು.ಇಂತಹ ಸಾಧನೆಮಾಡಲು ಕಾರಣರಾದ ಆ ಎಲ್ಲ ವಿಜ್ಞಾನಿಗಳು ಪ್ರೀತಿಯ ಕೋಟಿ ಕೋಟಿ ಅಭಿನಂದನೆಗೆ ಅರ್ಹರು.

ಕಲಾಂ ತಾತ ನಿಮಗೊಂದು ಸಲಾಂ.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!