ಅಂಕಣ

ಕೃಷಿ ಉತ್ಪನ್ನಗಳಿಗಿಲ್ಲದ ಬೆಲೆ

ಕೃಷಿಕರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಬೆಲೆ ಮತ್ತು ಅಂಥ ಉತ್ಪನ್ನಗಳನ್ನು ಬೆಳೆಯಲು ತಗಲುವ ವೆಚ್ಚಕ್ಕೆ ತಾಳೆಯಾಗದಿರುವುದು ಇಂದಿನ ಕೃಷಿರಂಗದ ದೊಡ್ದ ಸಮಸ್ಯೆ.ಕೃಷಿಕರು ಬೆಳೆಯುವ ಯಾವುದೆ ಬೆಳೆಯನ್ನು ತಗೊಂಡರೂ ಅವೆಲ್ಲವಕ್ಕೆ ಧಾರಣೆ ನಿಗದಿಮಾಡುವುದು ಕೃಷಿಕ ಅಲ್ಲ. ಆತನಿಗೆ ಕೇವಲ ಕಷ್ಟಪಟ್ಟು ಬೆಳೆಯಲು ಮಾತ್ರ ಅಧಿಕಾರ. ಬೆಳೆದ ಉತ್ಪನ್ನಗಳನ್ನುಸಜ್ಜುಗೊಳಿಸಿ ಮಾರುಕಟ್ಟೆಯ ಮುಂದೆ ಒಯ್ಯಲು ಮಾತ್ರ ಅವಕಾಶ. ತನ್ನ ಸ್ವಂತ ಶ್ರಮದಿಂದ ಕ್ರೋಢೀಕರಿಸಿದ ಫಸಲನ್ನು ತನ್ನಿಷ್ಟದಂತೆ ವಿಕ್ರಯಿಸಲು ಆತ ಇನ್ನೊಬ್ಬನ ಆಶ್ರಯ ಅಥವಾ ಸಹಕಾರಪಡೆಯಬೇಕು. ಇದು ಭಾರತದ ಕೃಷಿಕ ಅನುಭವಿಸುವ ಅತ್ಯಂತ ದುಃಖಕರ ಸ್ಥಿತಿ.

ಎಲ್ಲ ಬೆಳೆಗಳೂ ಒಂದೆ

  ತೆಂಗು, ಅಡಿಕೆ, ರಬ್ಬರ್, ತರಕಾರಿ, ಬಾಳೆಕಾಯಿ, ಕಾಳುಮೆಣಸು ಹೀಗೆ ಯಾವ ಪಟ್ಟಿ ಮಾಡಿದರೂ ಕೃಷಿಕನಿಗೆ ಅವುಗಳಿಗೆ ಇಷ್ಟು ದರ ಅಂತ ನಿಗದಿ ಮಾಡುವ ಯಾವ ಸ್ವಾತಂತ್ರ್ಯವೂ ಇಲ್ಲ.ವೀಳ್ಯದೆಲೆ ಬೆಳೆದ ಕೃಷಿಕ ಒಂದು ಸೂಡಿ ವೀಳ್ಯದೆಲೆ ಮಾರುಕಟ್ಟೆಯೊಳಗೆ ಒಯ್ಯುತ್ತಾನೆ. ಆತನಿಗೆ ಒಂದು ಸೂಡಿ ಅಂದರೆ ಎಂಭತ್ತೊ ನೂರೊ ಎಲೆಗಳಿಗೆ ಸಿಗುವುದು ಹದಿನೈದು ರೂಪಾಯಿ. ಆತಮಾರಾಟ ಮಾಡಿದ ಅಂಗಡಿಯಿಂದ ಹಣಪಡೆದು ಹೊರಡುವುದಕ್ಕಿಂತ ಮೊದಲು ಮಾರಾಟ ಮಾಡಿದ ವೀಳ್ಯದೆಲೆಗೆ ಗಿರಾಕಿ ಬಂದುಬಿಡುತ್ತಾನೆ. ಕೃಷಿಕ ಮಾರಾಟ ಮಾಡಿದ ಒಂದು ಸೂಡಿ ವೀಳ್ಯದೆಲೆಗಿರಾಕಿಗೆ ಅಗತ್ಯವಿದೆ. ಆತ ಮೂವತ್ತು ರೂಪಾಯಿ ತೆತ್ತು ಒಂದು ಸೂಡಿ ವೀಳ್ಯದೆಲೆಯನ್ನು ಕೊಂಡುಕೊಳ್ಳುತ್ತಾನೆ. ವೀಳ್ಯದೆಲೆ ಬೆಳೆದಾತನ ಕಣ್ಣೆದುರೆ ಅಂಗಡಿಯಾತ ಯಾವ ಕಷ್ಟವೂ ಇಲ್ಲದೆ ಹದಿನೈದುರೂಪಾಯಿಗಳ ಲಾಭ ಹೊಡೆಯುತ್ತಾನೆ. ಗಿರಾಕಿಯ ಸಮ್ಮುಖದಲ್ಲೆ ಇರುವ ಕೃಷಿಕನ ಮನೋಸ್ಥಿತಿ ಈ ಹೊತ್ತಿನಲ್ಲಿ ಹೇಗಾಗಿರಬಹುದು? ಕೃಷಿಕನ ಕಷ್ಟ ಮತ್ತು ಬವಣೆಗಳ ಒಳಹೊಕ್ಕು ನೋಡಿದವರಿಗೆಮಾತ್ರ ಈ ಭಾವನೆಗಳನ್ನು ಸರಿಯಾಗಿ ಅರ್ಥೈಸಲು ಸಾಧ್ಯ. ಇಲ್ಲಿ ವೀಳ್ಯದೆಲೆ ಸಾಂಕೇತಿಕ ಉದಾಹರಣೆ ಮಾತ್ರ. ಯಾವುದೇ ಉತ್ಪನ್ನ ತೆಗೆದುಕೊಂಡರೂ ಕೃಷಿಕನ ಪಾಲಿಗೆ ಸಿಗುವುದು ಬಹುತೇಕಸೊನ್ನೆ.

ಇನ್ನೊಂದು ಮುಖ

ಕೃಷಿಕರಲ್ಲಿ ಬಹುತೇಕ ಜನರಿಗೆ ಇನ್ನೊಂದು ರೀತಿಯ ಅನುಭವ ಸಾಮಾನ್ಯವಾಗಿ ಆಗಿಯೆ ಆಗಿರುತ್ತದೆ. ತಾವು ಬೆಳೆದ ಜಾಯಿಕಾಯಿ, ಜಾಪತ್ರೆ, ಏಲಕ್ಕಿ, ಕೆತ್ತೆಹುಳಿ ಮುಂತಾದ ಸಾಮಾನ್ಯವಾಗಿಮಾರುಕಟ್ಟೆ ಕಡಿಮೆ ಇರುವ ಉತ್ಪನ್ನಗಳಿಗೆ ಪೇಟೆಗೆ ಹೋದಾಗ ಮತ್ತು ಕೆಲವೊಮ್ಮೆ ಒಂದು ದಿನದ ಹಿಂದೆ ಕೃಷಿಕ ಬೆಲೆ ಕೇಳಿ ಬರುತ್ತಾನೆ. ಮಾರುಕಟ್ಟೆಯಲ್ಲಿ ‘ಉತ್ಪನ್ನಗಳನ್ನು ನೀವು ತನ್ನಿ ನಿಮಗೆಉತ್ತಮ ದರ ಕೊಡುವ’ ಅನ್ನುವ ಭರವಸೆ ಕೂಡ ಸಿಗುತ್ತದೆ. ಈ ಭರವಸೆಯ ಆಧಾರದಲ್ಲಿ ಕೃಷಿಕ ಉತ್ಪನ್ನಗಳನ್ನು ದೂರದ ಮಾರುಕಟ್ಟೆಗೆ ಹೊತ್ತೊಯ್ಯುತ್ತಾನೆ. ಮಾರುಕಟ್ಟೆಗೆ ಹೋದಾಗ ಒಂದು ದಿವಸಸಿಕ್ಕಿದ ಭರವಸೆಯ ಮಾತು ಬೆಲೆ ಕಳೆದುಕೊಂಡಿರುತ್ತದೆ. ‘ ನೀವು ಬೆಲೆ ವಿಚಾರಿಸುವಾಗ ಅದಕ್ಕೆ ಒಳ್ಳೆ ಬೆಲೆ ಇತ್ತು ಸ್ವಾಮಿ, ಈಗ ಅದರ ಬೆಲೆ ಬಿದ್ದುಹೋಯ್ತು. ಈಗ ದರ ತುಂಬ ಕಡಿಮೆಯಾಗಿದೆ.ನೀವೇನು ಕೊಡುತ್ತೀರೊ ಅಲ್ಲ ಕೊಂಡುಹೋಗುತ್ತೀರೊ’ ಎನ್ನುವ ಮಾತು ಕೃಷಿಕ ಕೇಳಬೇಕಾಗುತ್ತದೆ. ದೂರದ ಮನೆಯಿಂದ ಮಾರುಕಟ್ಟೆಗೆ ಒಂದೆರಡು ಬಸ್ಸಿನಲ್ಲಿ ಕಷ್ಟಪಟ್ಟು ಹೊತ್ತು ತಂದವ ಮತ್ತೆ ಬೆಲೆಸರಿಯಾಗಿಲ್ಲವೆಂದು ಮನೆಗೆ ಒಯ್ಯುವುದಿಲ್ಲ ಅನ್ನುವ ಸಂಗತಿ ಅಂಗಡಿಯಾತನಿಗೆ ತಿಳಿದಿದೆ. ಮಾರುಕಟ್ಟೆಗೆ ಹಳ್ಳಿಯಿಂದ ಬೆಳೆಗಾರನೊಬ್ಬ ಕಾರ್ಮಿಕರಿಗೆ ಐನ್ನೂರೊ ಆರು ನೂರೊ ರೂಪಾಯಿ ಸಂಬಳಕೊಟ್ಟು ಕೆತ್ತೆಹುಳಿ ಉತ್ಪನ್ನ ತಯಾರು ಮಾಡುತ್ತಾನೆ. ಕೊಯ್ದು ಅದನ್ನು ತುಂಡರಿಸಿ ಸಂಸ್ಕರಿಸಿದ ಕೆತ್ತೆ ಹುಳಿ ಮಾಲು ತಂದ ಬೆಳೆಗಾರನಿಗೆ ‘ನೀವು ತರುವ ಮಾಲು ಹೀಗಿರುತ್ತದೆ ಅಂತ ನಮಿಗೆಗೊತ್ತಿರಲಿಲ್ಲ. ಇದಕ್ಕೆ ಸುಲಭದಲ್ಲಿ ಗಿರಾಕಿ ಸಿಗದು ಸ್ವಾಮಿ. ಇಷ್ಟಕ್ಕಾದರೆ ಕೊಟ್ಟುಹೋಗಿ. ಇದು ಸ್ವಲ್ಪ ಕಪ್ಪಾಗಿದೆ. ಸಾಧ್ಯವಾದರೆ ಚೆನ್ನಾಗಿ ಸರ್ಫ್ ನೀರಿನಲ್ಲಿ ಹಾಕಿ ತೊಳೆದು ತನ್ನಿ. ಬಿಳಿಯಾಗುತ್ತದೆ.’ಅನ್ನಬೇಕೇ? ಇದು ಒಂದೆರಡು ಕೃಷಿಕರ ಸೋಲಿನ ಮುಖಗಳು ಅಷ್ಟೆ. ಇಂಥಹ ಅನುಭವಗಳು ಪ್ರತಿಯೊಬ್ಬ ಕೃಷಿಕನಿಗೆ ನಿತ್ಯ ಆಗಿಯೇ ಆಗುತ್ತದೆ.

ಯಾಕೆ ಹೀಗಾಗುತ್ತದೆ?

ಕೃಷಿಕನಿಗೆ ಒಗ್ಗಟ್ಟು ಇಲ್ಲದೆ ಇರುವುದು ಈ ಸಮಸ್ಯೆ ನಿತ್ಯ ನಿರಂತರ ಜೀವಂತವಾಗಿ ಇನ್ನೂ ಇರುವುದಕ್ಕೆ ಕಾರಣ. ನಾವು ಬೆಳೆದ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವ ಅವಕಾಶ ಬೆಳೆದವನಿಗೆಇರಬೇಕಾದ್ದು ಅತ್ಯಗತ್ಯ. ಈ ಬಗ್ಗೆ ಕೃಷಿಕರು ದೊಡ್ಡ ಧ್ವನಿಯಲ್ಲಿ ಹಕ್ಕೊತ್ತಾಯ ಮಾಡುವ ಅಗತ್ಯವಿದೆ. ಈಗಿರುವ ವ್ಯವಸ್ಥೆಯಲ್ಲಿ ಬೆಳೆದವ ಯಾವ ಕಾಲಕ್ಕೂ ಉದ್ಧಾರವಾಗಲು ಸಾಧ್ಯವಿಲ್ಲ.ಮಾರುಕಟ್ಟೆಯಲ್ಲಿ ಒಬ್ಬನ ಕೈಯಿಂದ ಪಡೆದುಕೊಂಡು ಇನ್ನೊಬ್ಬನ ಕೈಗೆ ಹಸ್ತಾಂತರಿಸುವ ಮಧ್ಯವರ್ತಿ ದೊಡ್ಡಮಟ್ಟಿನ ಲಾಭ ಹೊಡೆಯುತ್ತಾನೆ. ಆತ ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪಾರ ವಹಿವಾಟುವಿಸ್ತರಿಸುತ್ತ ಹೋಗುತ್ತಾನೆ. ಕೃಷಿಕ ಒಂದು ವರ್ಷ ಬೆಳೆದವ ಮುಂದಿನ ವರ್ಷ ಅದಕ್ಕೆ ಸರಿಯಾದ ಬೆಲೆ ಬರುವುದಿಲ್ಲ ಅಂತ ಬೆಳೆಯುವುದನ್ನೇ ನಿಲ್ಲಿಸಿಬಿಡುತ್ತಾನೆ. ಒಬ್ಬ ಕೃಷಿಕ ನಿಲ್ಲಿಸಿದರೆ ಏನಂತೆಮಾರುಕಟ್ಟೆಯಾತ ಮತ್ತೊಬ್ಬ ಕೃಷಿಕನಿಗೆ ಬಳ್ಳಿ ಹಾಕಿ ತನ್ನ ಕೆಲಸ ಮುಗಿಸುತ್ತಾನೆ.

ನೇರ ಗಿರಾಕಿಗೆ

ಬೆಳೆದ ಯಾವ ಉತ್ಪನ್ನ ಇರಲಿ ಅದು ಮಧ್ಯವರ್ತಿ ಕೈಗೆ ಹೋಗದೆ ನೇರವಾಗಿ ಗಿರಾಕಿಯ ಕೈಗೆ ಸೇರುವ ವ್ಯವಸ್ಥೆ ಬರಬೇಕು. ಈಗಿನ ಅತ್ಯುನ್ನತ ತಂತ್ರಜ್ಞಾನದ ಬೆಳಕಿನಲ್ಲಿ ಸಂವಹನ ಕಷ್ಟವೇ ಇಲ್ಲ. ಈರೀತಿ ಮಾಡಿದರೆ ಗಿರಾಕಿಗಳು ಉತ್ತಮ ಮಾಲುಗಳನ್ನು ಇನ್ನಷ್ಟು ಸುಲಭವಾಗಿ ಮಾರುಕಟ್ಟೆಯಿಂದ ಪಡೆಯಬಹುದು. ಕೃಷಿಕನಿಗೂ ಅಷ್ಟೆ. ತಾನು ಬೆಳೆದ ಮಾಲುಗಳು ಮಾರಾಟವಾದ ನಂತರ ಒಂದಷ್ಟುಲಾಭಾಂಶ ತಂದುಕೊಡುತ್ತವೆ. ಇಂಥಹ ವ್ಯವಸ್ಥೆಯನ್ನು ಎಲ್ಲರೂ ಜಾರಿಗೆ ತಂದಾಗ ಒಟ್ಟು ಕೃಷಿಕರ ವಲಯ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಯೆ ಹೆಚ್ಚಿಸುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!