ಅಂಕಣ

‘ಸೋಲು’- ವಾಸ್ತವದ ಪರದೆ ಸರಿಸುವ ಗುರು..!   

ಬದುಕಿನ ಹಾದಿಯಲ್ಲಿ ಗೆಲುವಿನ ಕಡೆಗೆ ಹೆಜ್ಜೆಯಿಡುತ್ತಿದ್ದಾಗ ಕೆಲವು ಸಲ ಅನಿರೀಕ್ಷಿತವಾಗಿ ಸೋಲು ನಮ್ಮನ್ನು ಅಪ್ಪಿಕೊಂಡುಬಿಡುತ್ತದೆ. ನಮ್ಮ ಎಲ್ಲಾ ನಿರೀಕ್ಷೆಗಳನ್ನೂ ತಲೆಕೆಳಗೆ ಮಾಡಿ ಮೇಲಕ್ಕೆ ಏರಲಾರದಂತಹ ಪ್ರಪಾತಕ್ಕೆ ತಳ್ಳಿಬಿಡುತ್ತದೆ. ಸೋಲನ್ನು ಯಾರೂ ಕೂಡ ಬೇಕೆಂದೇ ಆಹ್ವಾನಿಸುವುದಿಲ್ಲ, ಆದರೆ ಸೋತ ವ್ಯಕ್ತಿಯನ್ನು ಸಮಾಜ ನೋಡುವ ದೃಷ್ಟಿಕೋನವನ್ನು ಗಮನಿಸಿದಾಗ ಸೋಲನ್ನು ಅವನಾಗಿಯೇ ಬರಮಾಡಿಕೊಂಡನೇನೋ ಎಂಬಂತೆ ಭಾಸವಾಗಿಬಿಡುತ್ತದೆ. ಯಾಕೆಂದರೆ ಸಮಾಜದ ಬಹುತೇಕ ಮಂದಿ ಜೀವನದಲ್ಲಿ ಸೋತವನನ್ನು ಕೆಟ್ಟವನೆಂಬಂತೆ ಕಂಡು ಅವನೊಂದಿಗಿನ ತಮ್ಮ ಸಂಬಂಧವನ್ನು ಇದ್ದಕ್ಕಿದ್ದಂತೆಯೇ  ಮೊಟಕುಗೊಳಿಸಿಬಿಡುತ್ತಾರೆ.!

ಒಂದರ್ಥದಲ್ಲಿ ಬದುಕಿನ ನಿಜವಾದ ಪಾಠ-ಪರೀಕ್ಷೆ ಎಲ್ಲವೂ ಅಲ್ಲಿಂದಲೇ ಪ್ರಾರಂಭ.! ಆಗಲೇ ಮಿತ್ರರು ಶತ್ರುಗಳಾಗುತ್ತಾರೆ, ಒಂದೇ ತಟ್ಟೆಯಲ್ಲಿ ಉಂಡವರು ಕೂಡ ವಿಷವನ್ನೇ ಉಣಬಡಿಸಲು ಹಾತೊರೆಯುತ್ತಾರೆ, ನಮ್ಮ ಜೊತೆಯಾಗಿ ಹೆಜ್ಜೆ ಹಾಕಿದವರು ಕೂಡ ಕಳ್ಳ ಹೆಜ್ಜೆಯಿಟ್ಟು ನಮ್ಮ ಚಲನವಲನವನ್ನು ಗಮನಿಸುತ್ತಾ ಅಣಕಿಸಲು ಪ್ರಾರಂಭಿಸುತ್ತಾರೆ, ಕೈಹಿಡಿಯಲೆಂದೇ ಜೊತೆಗಿದ್ದವರು ಅದಾಗಲೇ ಕೈಕೊಟ್ಟು ಪರಾರಿಯಾಗಿಬಿಡುತ್ತಾರೆ, ಸಂತಸದ ಕ್ಷಣಗಳಲ್ಲಿ ಜೊತೆಯಾಗಿ ನಕ್ಕು ನಲಿದವರೇ ನಾವು ಸೋತಾಗ ಎಲ್ಲೋ ಮರೆಯಾಗಿ ನಿಂತು ಅಪಹಾಸ್ಯ ಮಾಡುತ್ತಾರೆ. ಮನೆಮಂದಿಯ ಪಾಲಿಗೂ ಸೋತ ವ್ಯಕ್ತಿ ಬೇಡದವನಾಗಿ ಹೊರೆಯಾಗಿಬಿಡುತ್ತಾನೆ. ನೋಟಿನ ಕಂತೆಯನ್ನೆಣಿಸುತ್ತಾ ಮನೆಗೆ ಮರಳುತ್ತಿದ್ದವನ ಮೇಲೆ ಪ್ರೀತಿಯ ಸುರಿಮಳೆಗೈಯುತ್ತಿದ್ದ ಮನೆಯವರೇ ಆತನ ಜೇಬು ಖಾಲಿಯಾದಾಗ ಶತ್ರುಗಳಂತೆ ವರ್ತಿಸತೊಡಗುತ್ತಾರೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ತಮ್ಮವರೆನಿಸಿಕೊಂಡವರ ಕುಹಕದ ಮಾತುಗಳಿಂದ ಉಂಟಾಗುವ ಮಾನಸಿಕ ನೋವು ಮಾತ್ರ ಅತ್ಯಂತ ಅಸಹನೀಯವಾದದ್ದು. ಕೆಲವರು ಸಾಂತ್ವನ ಕೊಡುವ ನೆಪದಲ್ಲಿ ಸೋಲಿನ ಎಲ್ಲಾ ಕಾರಣಗಳನ್ನು ಎಳೆ ಎಳೆಯಾಗಿ ಬಿಡಿಸಿ ಕೆದಕುತ್ತಾ ಮಾನಸಿಕವಾಗಿ ಮತ್ತಷ್ಟು ಘಾಸಿಗೊಳಿಸಿ ಗಾಯದ ಮೇಲೆ ಉಪ್ಪು ಸವರಿಬಿಡುತ್ತಾರೆ. ಸೋತಂತಹ ವ್ಯಕ್ತಿಯೊಬ್ಬ ತನ್ನ ಸಮಸ್ಯೆಗೆ ಪರಿಹಾರ ಕೊಡುವವರಿಗಿಂತಲೂ ತನಗೆ ಮಾನಸಿಕ ಸಾಂತ್ವನ ಕೊಡಬಲ್ಲವರಿಗಾಗಿ ಹುಡುಕಾಡುತ್ತಿರುತ್ತಾನೆ. ಸೋಲಿನ ಸಂದರ್ಭದಲ್ಲಿ ಮಿತ್ರತ್ವ, ಬಂಧುತ್ವ, ಮಾನಸಿಕ ನೆಮ್ಮದಿ, ಊಟ-ನಿದ್ರೆ, ದೇಹದ ಮೇಲಿನ ಕಾಳಜಿ ಎಲ್ಲವೂ ನಷ್ಟವಾದಂತೆ ಭಾಸವಾಗುವುದು ನಿಜವಾದರೂ ಅದೇ ‘ಸೋಲು’ ನಮಗೆ ವಾಸ್ತವ ಜೀವನದ ಕಟು ಸತ್ಯವನ್ನು ಅನಾವರಣಗೊಳಿಸಿ ‘ನಮ್ಮವರು ಯಾರು.?’ ಎಂಬುದನ್ನು ತೋರಿಸಿಕೊಟ್ಟು ಬದುಕಿನ ಬಹುದೊಡ್ಡ ಗುರುವಾಗಿಬಿಡುತ್ತದೆ.! ಪ್ರತಿಯೊಬ್ಬರ ಬದುಕಿನಲ್ಲಿಯೂ ಆ ಸೋಲಿನ ಹಂತ ದಾಟಿದಾಗಲೇ ನಿಜವಾದ ಬಂಧುಗಳನ್ನು ಆರಿಸಿ ತೆಗೆಯಲು ಸಾಧ್ಯವಾಗುವುದು.! ಸೋಲಿನ ಬವಣೆಯಲ್ಲಿ ಬೇಯುತ್ತಿರುವಾಗಲೇ ಸಮಾಜದ ಜನರ ಇನ್ನೊಂದು ಅಸಲಿ ಮುಖದ ಪರಿಚಯ ನಮಗಾಗುವುದು.! ವೇದಿಕೆಯ ಮೇಲೇರಿ ಜನಸೇವೆಯ ಕುರಿತು ಕಂಠಹರಿದು ಭಾಷಣ ಬಿಗಿಯುವವರು ಕೂಡ ಯಾರದೋ ಸೋಲಿನ ಛಾಯೆ ಕಂಡಾಕ್ಷಣ ಸದ್ದಿಲ್ಲದಂತೆಯೇ ಜಾರಿಕೊಳ್ಳುತ್ತಾರೆ. ಆಗಲೇ ಅವರ ನಾಲಗೆಯಿಂದ ಉದುರುವ ತತ್ವ-ವೇದಾಂತದ ಅಣಿಮುತ್ತುಗಳ ಯಥಾರ್ಥ ತಿರುಳಿನ ಸಾಚಾತನ ನಮ್ಮ ಕಣ್ಣಿಗೆ ಗೋಚರಿಸಿಬಿಟ್ಟು ನಮ್ಮನ್ನು ಎಚ್ಚೆತ್ತುಕೊಳ್ಳುವಂತೆ ಮಾಡುತ್ತದೆ! ನಾಲ್ಕು ಗೋಡೆಗಳ ನಡುವೆ ಕುಳಿತು ಕೇಳುವ ವ್ಯಕ್ತಿತ್ವ ವಿಕಸನದ ಎಲ್ಲ ತರಗತಿಗಳಿಗಿಂತಲೂ ಉತ್ತಮ ಪಾಠವನ್ನು ಸೋಲು ನಮಗೆ ಆ ಕ್ಷಣದಲ್ಲಿಯೇ ಬೋಧಿಸಬಲ್ಲುದು. ಪುಸ್ತಕದ ಹಾಳೆಗಳಲ್ಲಿ ಮುದ್ರಿಸಲ್ಪಟ್ಟಿರುವ ಎಲ್ಲ ತತ್ವ ಬೋಧನೆಗಳು ಓದುವುದಕ್ಕೆ ಚೆನ್ನಾಗಿರಬಹುದು ನಿಜ, ಆದರೆ ಕೆಲವು ಸಲ ವಾಸ್ತವ ಬದುಕಿಗದು ಉಪಯೋಗಕ್ಕೆ ಬರದೇ ಸಪ್ಪೆಯಾಗಿಬಿಡಬಹುದು. ಯಾಕೆಂದರೆ ಕಥೆ-ಕಾದಂಬರಿಗಳಲ್ಲಿ ಬರುವ ಕಾಲ್ಪನಿಕ ಬದುಕಿಗಿಂತಲೂ ನೈಜ ಬದುಕು ಬಹಳಷ್ಟು ಭಿನ್ನವಾಗಿರುತ್ತದೆ. ರಂಗುರಂಗಿನ ಬದುಕನ್ನು ಹತ್ತಿರದಿಂದ ನೋಡುವ ಅವಕಾಶ ಸಿಗುವುದು ಸೋತಾಗ ಮಾತ್ರ.! ಈ ಕಾರಣದಿಂದಲೇ ಅದೆಷ್ಟೋ ಜನ ಇತರರ ಬದುಕಿಗೆ ಉಪದೇಶ ಮಾಡಬಲ್ಲರೇ ಹೊರತು ತನ್ನ ಸ್ವಂತ ಬದುಕಿಗೆ ಬಂದೆರಗುವ ಸೋಲಿನ ಮುಂದೆ ಅಸಹಾಯಕರಾಗಿಬಿಡುತ್ತಾರೆ.!

ನಮ್ಮ ನಡವಳಿಕೆಯನ್ನು ತಿದ್ದಿಕೊಂಡು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಕೂಡ ಸೋಲಿನ ಪಾತ್ರ ಪ್ರಮುಖವಾದದ್ದು.!  ಗೆಲುವಿನ ಹೊಸ್ತಿಲಲ್ಲಿದ್ದಾಗ ಕೆಲವರು ಜಗತ್ತೇ ನನ್ನ ಕೈಯೊಳಗಿದೆಯೆನ್ನುವಷ್ಟು ಅಹಂಕಾರದಲ್ಲಿ ಮೆರೆದಾಡುತ್ತಾರೆ. ಮಾತೆತ್ತಿದರೆ ತಮ್ಮ ದರ್ಪದ ಮಾತುಗಳಿಂದ ಸಿಡಿಮಿಡಿಗೊಳ್ಳುತ್ತಲೇ ಸಮಾಜದ ಸ್ವಾಸ್ಥ್ಯ ಕೆಡಿಸಿಬಿಡುತ್ತಾರೆ. ಆ ನೆತ್ತಿಗೇರಿದ ಮತ್ತನ್ನು ಇಳಿಸಲೆಂದೇ ಪ್ರಕೃತಿ ನಮಗೆ ಸೋಲಿನ ಮೂಲಕ ಪಾಠ ಕಲಿಸಿ ನಮ್ಮ ದುರ್ಗುಣಗಳನ್ನು ತಿದ್ದಿಕೊಳ್ಳುವಲ್ಲಿ ನೆರವಾಗುತ್ತದೆ. ಸಾಮಾನ್ಯವಾಗಿ ಒಮ್ಮೆ ಸೋಲಿನ ಹೊಡೆತ ತಿಂದಾತ ಬಾಲ ಸುಟ್ಟ ಬೆಕ್ಕಿನಂತಾಗಿ ತನ್ನ ಹದ್ದು ಮೀರಿದ ಹಾರಾಟಕ್ಕೆ ಸಹಜವಾಗಿ ಕಡಿವಾಣ ಹಾಕಿಬಿಡುತ್ತಾನೆ. ಅಥವಾ ಮುಂದೊಮ್ಮೆ ತಾನು ಯಶಸ್ಸಿನ ತುತ್ತತುದಿಗೇರಿದಾಗಲೂ ಹಳೆಯ ನೆನಪುಗಳು ಮರುಕಳಿಸಿ ಗೆಲುವಿನ ಉನ್ಮಾದದಲ್ಲಿ ದಾರಿತಪ್ಪದಂತೆ ಆತನನ್ನು ಜಾಗರೂಕನನ್ನಾಗಿಸುತ್ತದೆ. ಪ್ರಖರವಾದ ಉಳಿಯೇಟಿಗೆ ಜಡಶಿಲೆಯೊಂದು ಸುಂದರವಾದ ಮೂರ್ತರೂಪ ತಳೆದು ಜೀವಂತಿಕೆಯ ಕಳೆಯೊಂದಿಗೆ ಗುಡಿಯಲ್ಲಿ ಅರ್ಚಿಸಲ್ಪಡುವಂತೆ, ಸೋಲಿನ ಒಂದೊಂದು ಹೊಡೆತಗಳು ಕೂಡ ನಮ್ಮ ಬದುಕನ್ನು ಸುಂದರಗೊಳಿಸುತ್ತವೆ. ಜೀವನದ ಪ್ರತೀ ಹಂತದಲ್ಲಿಯೂ ಆಗೊಮ್ಮೆ ಈಗೊಮ್ಮೆ ಅಪ್ಪಳಿಸುವ ಸಣ್ಣಪುಟ್ಟ ಸೋಲಿನ ಹೊಡೆತಗಳು ನಮ್ಮಲ್ಲಿ ಆತ್ಮಸ್ಥೈರ್ಯವನ್ನು ಉದ್ಧೀಪನಗೊಳಿಸಿ ದೊಡ್ಡದೊಡ್ಡ ಆಘಾತಗಳನ್ನು ಸಹಿಸಿಕೊಳ್ಳುವಷ್ಟರಮಟ್ಟಿಗೆ ನಮ್ಮನ್ನು ಗಟ್ಟಿಗೊಳಿಸುತ್ತದೆ.! ಅಲ್ಲಿಯತನಕ ಗೋಡೆಯ ಮೇಲೆ ಹರಿದಾಡುವ ಹಲ್ಲಿ, ಜಿರಳೆಗಳನ್ನು ಕಂಡರೂ ಬೆಚ್ಚಿಬೀಳುತ್ತಾ, ಚಿಕ್ಕಪುಟ್ಟ ಇರುವೆಗಳ ಕಡಿತವನ್ನು ಸಹಿಸಿಕೊಳ್ಳುವುದಕ್ಕೆ ಹರಸಾಹಸಪಡುತ್ತಿದ್ದವರು ಕೂಡ ಒಮ್ಮೆ ಸೋಲಿನಲ್ಲಿ ಮಿಂದೆದ್ದ ಬಳಿಕ ಬದುಕಿನಲ್ಲಿ ಸಂಭವಿಸಬಹುದಾದ ಯಾವ ಆಘಾತಗಳಿಗೂ ವಿಚಲಿತರಾಗುವುದಿಲ್ಲ.! ಕೇವಲ ಸಿರಿವಂತಿಕೆಯ ಸುಖದಲ್ಲೇ ಬೆಳೆದು ಬದುಕಿನ ಯಾವ ಸೋಲಿನ ಅನುಭವವಿಲ್ಲದ ವ್ಯಕ್ತಿಯೊಬ್ಬ ಅನಿರೀಕ್ಷಿತವಾಗಿ ತನಗೆದುರಾಗುವ ಚಿಕ್ಕಪುಟ್ಟ ಸೋಲಿನ ಆಘಾತವನ್ನು ಕೂಡ ಸಹಿಸಿಕೊಳ್ಳುವಲ್ಲಿ ವಿಫಲನಾಗಿಬಿಡುತ್ತಾನೆ.

ಸೋಲಿನ ಹೊಡೆತದ ತೀವ್ರತೆಯ ಪ್ರಮಾಣಕ್ಕೆ ಅನುಗುಣವಾಗಿ ಒಬ್ಬೊಬ್ಬರು ಅನುಭವಿಸುವ ಯಾತನೆಯೂ ಒಂದೊಂದು ರೀತಿಯದ್ದಾಗಿರುತ್ತದೆ.ಸೋಲಿನ ಕಹಿ ನೆನಪನ್ನೇ ಮೆಲುಕು ಹಾಕುತ್ತಿರುವಾತ ಬದುಕಿನಲ್ಲಿ ಮುಂದೆ ಸಾಗುವ ದಾರಿ ಕಾಣದೆ ಕುಳಿತಲ್ಲಿ ನಿಂತಲ್ಲಿ ಅದೇ ಯೋಚನೆಯಲ್ಲಿ ತಲ್ಲೀನನಾಗಿ ಹತಾಶನಾಗಿಬಿಡುತ್ತಾನೆ. ಅದರ ಪರಿಣಾಮವಾಗಿಯೇ ಮಾನಸಿಕವಾಗಿ ಮತ್ತಷ್ಟು ನೊಂದು ದೇಹ ಕೃಶವಾಗುತ್ತದೆ, ಅನಾರೋಗ್ಯ ಮುತ್ತಿಕೊಳ್ಳುತ್ತದೆ, ಮುಖದ ಕಾಂತಿ ಕಳೆಗುಂದಿ ಆತನ ಆತ್ಮವಿಶ್ವಾಸವೇ ಉಡುಗಿ ಹೋಗುತ್ತದೆ. ದೇಹಸೌಂದರ್ಯದ ಮೇಲಿನ ಕಾಳಜಿ ಕಡಿಮೆಯಾಗಿ ಉಡುಗೆ-ತೊಡುಗೆ, ವಸ್ತ್ರ-ವಿನ್ಯಾಸಗಳೆಲ್ಲವೂ ನಗಣ್ಯವೆನಿಸಿಬಿಡುತ್ತದೆ. ಆತನಲ್ಲಿದ್ದ ಪ್ರತಿಭೆ, ಸೃಜನಶೀಲತೆ ಎಲ್ಲವೂ ಸೋಲಿನ ಮುಸುಕಿನಡಿಯಲ್ಲಿ ಬಂಧಿಯಾಗುತ್ತವೆ. ಸೋಲಿನ ಬೇಗೆಯಲ್ಲಿ ಸೊರಗಿ ಹೋದ ದೇಹ-ಮನಸ್ಸುಗಳು ಐಹಿಕ ಜೀವನದ ನಶ್ವರತೆಯನ್ನು ಬಹುಬೇಗನೆ ಅರ್ಥೈಸಿಕೊಂಡು ಬಿಡುತ್ತವೆ. ಆ ಕಾರಣದಿಂದಲೇ ಕೆಲವರು ನಿರ್ಲಿಪ್ತ ಭಾವದಿಂದ ಅಧ್ಯಾತ್ಮದ ಕಡೆಗೆ ಹೊರಳಿ ಶಾಶ್ವತ ಸತ್ಯವನ್ನು, ನೈಜ ಆನಂದವನ್ನು ಹುಡುಕುವಲ್ಲಿ ಮನಮಾಡುತ್ತಾ ಪಾರಮಾರ್ಥಿಕ ಪಥದಲ್ಲಿ ಸಾಗಿಬಿಡುತ್ತಾರೆ. ದೇವರನ್ನೇ ನಂಬಿ ಬದುಕುತ್ತಿರುವ ಆಸ್ತಿಕನೊಬ್ಬ ‘ದೇವರಿದ್ದರೆ ಹೀಗಾಗುತ್ತಿತ್ತೇ’ ಎಂದು ದೇವರ ಅಸ್ತಿತ್ವದಲ್ಲಿ ನಂಬಿಕೆಯನ್ನು ಕಳೆದುಕೊಂಡು ನಾಸ್ತಿಕನಾಗಿ ಬಿಡುವುದು ಹಾಗೂ ದೇವರಲ್ಲಿ ನಂಬಿಕೆಯಿಲ್ಲದಿರುವ ನಾಸ್ತಿಕನೊಬ್ಬ ‘ಇನ್ನಾದರೂ ದೇವರನ್ನು ನಂಬಿಕೊಂಡಲ್ಲಿ ತನ್ನ ಸಮಸ್ಯೆಗೇನಾದರೂ ಪರಿಹಾರ ಸಿಗಬಹುದೇನೋ’ ಎನ್ನುವ ಆಸೆಯಿಂದ ಆಸ್ತಿಕನಾಗಿ ಬದಲಾಗುವ ಎರಡು ವಿಭಿನ್ನ ಪ್ರಕ್ರಿಯೆಗಳು ಕೂಡ ಈ ಸೋಲಿನ ಸಂದರ್ಭದಲ್ಲಿಯೇ ನಡೆದುಹೋಗುತ್ತದೆ.! ಇನ್ನು ಕೆಲವು ದೃಢಮನಸ್ಸಿನ ಛಲವಾದಿಗಳು ಸೋಲಿನೊಂದಿಗೂ ಸೆಣಸಾಡುತ್ತಾ ಗೆಲುವು ದಕ್ಕುವವರೆಗೂ ಹೋರಾಡಿ ಯಶಸ್ಸಾಗುತ್ತಾರೆ. ಅದಿಲ್ಲದೇ ಹೋದ ದುರ್ಬಲ ಹೃದಯದವರು ಸೋಲಿನ ಹೊಡೆತವನ್ನು ತಾಳಲಾರದೆ ಅತ್ಮಹತ್ಯೆಗೂ ಶರಣಾಗಿ ಬದುಕನ್ನೇ ಕೊನೆಗೊಳಿಸಿಬಿಡುತ್ತಾರೆ. ಹೀಗೆ ಸೋಲಿನ ನಾನಾ ಮುಖಗಳು ಒಬ್ಬೊಬ್ಬರಿಗೂ ಒಂದೊಂದು ರೀತಿಯ ಅನುಭವಗಳನ್ನು ಕೊಡುತ್ತಾ ಸಾಗುತ್ತದೆ. ನಾವು ಯಾವ ಮನೋಭಾವದಿಂದ ಸೋಲನ್ನು ಸ್ವೀಕರಿಸುತ್ತೇವೆಯೋ ಅದರ ಫಲಿತಾಂಶದಂತೆ ನಮ್ಮ ಮುಂದಿನ ಭವಿಷ್ಯ ನಿರ್ಧರಿತವಾಗುತ್ತದೆ. ಯಾಕೆಂದರೆ, ಕೆಲವರ ಬದುಕಿನಲ್ಲಿ ಧನಾತ್ಮಕವಾಗಿ ಉತ್ತಮ ಪರಿಣಾಮಗಳನ್ನು ಬೀರಿ ಅದ್ಭುತ ಬದಲಾವಣೆಗೆ ಕಾರಣವಾಗುವ ಸೋಲು, ಕೆಲವರಿಗೆ ಋಣಾತ್ಮಕವಾಗಿ ಪರಿಣಮಿಸಿ ಅವರ ಬದುಕಿಗೇ ಇತಿಶ್ರೀ ಹಾಡಿಬಿಡುತ್ತದೆ.!

ಸೋತವರಿಗೆ ಸಾಂತ್ವನ ನೀಡಿದಾಗ ಸಿಗುವ ಆತ್ಮತೃಪ್ತಿ ಗೆದ್ದವರ ಜೊತೆ ಸಂಭ್ರಮ ಹಂಚಿಕೊಂಡಾಗ ಸಿಗಲಾರದು. ಗೆಲುವಿನಿಂದ ಬೀಗುತ್ತಿರುವವನು ಅದಾಗಲೇ ಎಲ್ಲರ ಹೊಗಳಿಕೆಯ ಮಾತುಗಳಿಂದ ಉಬ್ಬಿಹೋಗಿರುತ್ತಾನೆ. ನಮ್ಮ ಸ್ಪೂರ್ತಿಯ ಮಾತುಗಳನ್ನು ಕೇಳುವ ವ್ಯವದಾನ

Facebook ಕಾಮೆಂಟ್ಸ್

ಲೇಖಕರ ಕುರಿತು

Udayabhaskar Sullia

ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ಜನಿಸಿದ್ದು ಪ್ರಸ್ತುತ ಸುಳ್ಯದಲ್ಲಿ ವಾಸ್ತವ್ಯ. ಜೀವನ ನಿರ್ವಹಣೆಗಾಗಿ ಸ್ವ ಉದ್ಯೋಗ ಹೊಂದಿರುತ್ತೇನೆ. ದೇಶಭಕ್ತಿಯ ಭಾಷಣ, ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದು, ಹಳೆಯ ಸಿನೆಮಾ ಹಾಡು, ಭಾವಗೀತೆ, ಭಕ್ತಿಗೀತೆಗಳನ್ನು ಆಲಿಸುವುದು, ಸಮಾಜಸೇವೆ, ಸದ್ವಿಚಾರ ಪ್ರಸಾರ... ಇವು ನನ್ನ ಆಸಕ್ತಿಯ ಕ್ಷೇತ್ರಗಳು. ಭಜನೆ ಹಾಡುವುದು, ಕವನ ರಚನೆ, ಸಾಮಾಜಿಕ-ದೇಶಭಕ್ತಿ- ಸಂಸ್ಕೃತಿಗಳ ಕುರಿತಾದ ಚಿಕ್ಕಪುಟ್ಟ ಲೇಖನಗಳನ್ನು ಬರೆಯುವುದು ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಸದ್ಗ್ರಂಥಗಳ ಅಧ್ಯಯನ.. ಇವು ನನ್ನ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!