ಪ್ರಚಲಿತ

ಒಬ್ಬ ಅಲ್ಲಿ …. ಮತ್ತೊಬ್ಬರು ಇಲ್ಲಿ….

ಕಷ್ಟ ಪಟ್ಟಾದರೂ ಉನ್ನತ ವ್ಯಕ್ತಿಯಾಗಬೇಕೆಂಬ ಆಸೆ ಕಲಾಂರಲ್ಲಿತ್ತು… ಯಾವುದೇ ಕೆಟ್ಟ ಹಾದಿ ಹಿಡಿಯದೆ ಸನ್ಮಾರ್ಗದಿಂದ ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದರು…ತಾವೇ ಸ್ವತ: ಮನೆ ಮನೆಗೆ ದಿನಪತ್ರಿಕೆಗಳನ್ನು ಹಂಚಿ ತಮ್ಮ ಶಾಲಾ ಶುಲ್ಕವನ್ನು ಭರಿಸಿದ್ದರು.. ವೈಮಾನಿಕ ಇಂಜಿನೀಯರಿಂಗ್ ಪದವಿ, ನಂತರ ಪಿ ಹೆಚ್ ಡಿ, ಎಮ್ ಟೆಕ್ ನ್ನು ಮುಗಿಸಿದರು.. ಇಸ್ರೋ ದಲ್ಲಿ ವಿಜ್ಞಾನಿಯಾಗಿ ಆ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ… ಕ್ಷಿಪಣಿ ಹಾಗೂ ರಾಕೇಟ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ ಕಾರಣ ‘ಮಿಸೈಲ್ ಮ್ಯಾನ್’ ಎಂದೇ ಪ್ರಸಿದ್ಧಿ ಪಡೆದವರು. ರಾಮೇಶ್ವರದ ಒಂದು ಬಡ ಮುಸಲ್ಮಾನ ಕುಟುಂಬದಲ್ಲಿ ಜನಿಸಿದ ಅಬ್ದುಲ್ ಕಲಾಂ ಇಡೀ ಭಾರತೀಯರ ಮನಗೆದ್ದ ರಾಷ್ಟ್ರಪತಿಗಳಾದರು. ಸರ್ವಧರ್ಮಗಳನ್ನು ಸಮಾನವಾಗಿ ಕಂಡಂತವರು. ಯಾರನ್ನೂ ನೋಯಿಸಿದವರಲ್ಲ. ‘ಅಜಾತಶತ್ರು’ವಿಗೆ ಇನ್ನೊಂದು ಅರ್ಥವೇ ಈ ಅಬ್ದುಲ್ ಕಲಾಂ. ಅಮೆರಿಕದ ಗುಪ್ತಚಾರರ ಕಣ್ತಪ್ಪಿಸಿ ಅಣ್ವಸ್ತ್ರ ಪರೀಕ್ಷೆ ನಡೆಸಿ ಇಂದಿಗೂ ಅವರನ್ನು ಬೆಚ್ಚಿಬೀಳಿಸುತ್ತದೆ. ಪೊಖ್ರಾಣ್ ಅಣ್ವಸ್ತ್ರ ಪರೀಕ್ಷೆ ಯಲ್ಲಿ ಅಬ್ದುಲ್ ಕಲಾಂರದ್ದೇ ಮಹತ್ತರ ಪಾತ್ರ. ಅದೊಂದು ಅಣ್ವಸ್ತ್ರ ಪರೀಕ್ಷೆ ಭಾರತವನ್ನು ಇಡೀ ವಿಶ್ವವೇ ಹುಬ್ಬೇರಿಸಿ ನೋಡಿತ್ತು. ರಾಷ್ಟ್ರಪತಿಗಳಾಗಿ ಅವರು ರಬ್ಬರ್ ಸ್ಟಾಂಪ್ ಎನ್ನುವ ಹಣೆಪಟ್ಟಿಯನ್ನು ಕಿತ್ತೆಸೆದವರು. ವಿದ್ಯಾರ್ಥಿಗಳೊಂದಿಗೆ ಅದೆಷ್ಟು ಸಂವಾದ ಕಾರ್ಯಕ್ರಮ ಮಾಡಿದಾರೋ ಅವರೇ ಬಲ್ಲರು. ಕೇವಲ ವರ್ಷಕ್ಕೆ ೩-೪ ಬಾರಿ ಕಾಣಿಸಿಕೊಳ್ಳುತ್ತಿದ್ದ ರಾಷ್ಟ್ರಪತಿಗಳ ಸಂಪ್ರದಾಯಕ್ಕೆ ವಿದಾಯ ಹೇಳಿ ಸದಾ ಸಮಾಜಮುಖಿಯಾಗಿದ್ದರು. ಕೊನೆಗೂ ಮದುವೆಯೆಂಬ ಬಂಧನಕ್ಕೊಳಗಾಗದೆ ದೇಶಸೇವೆಯನ್ನೇ ಕಾಯಕವನ್ನಾಗಿಸಿದ ಮಹಾನ್ ದೇಶಭಕ್ತ. ಇವರಿಂದ ಮೊದಲು ಇಂತಹಾ ವ್ಯಕ್ತಿ ಹುಟ್ಟಿಲ್ಲ ಮುಂದೆಯೂ ಹುಟ್ಟಲಾರ. ಆದ್ದರಿಂದ ಅವರು ಕೊಟ್ಟ ಸಲಹೆ ಸೂಚನೆ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಕಲಾಂರ ಬಾಲ್ಯವನ್ನು ಮಾತ್ರ ಹೋಲಿಸಬಹುದಾದ ವ್ಯಕ್ತಿಯೊಬ್ಬ ಇದ್ದಾನೆ… ಬಹುಷಃ ಅವನನ್ನು ವ್ಯಕ್ತಿಯೆಂದರೆ ತಪ್ಪಾದೀತು.. ಆದರೂ ಇರಲಿ. ಅವನೇ ಕಸಬ್ .. ಇವನ ಬಾಲ್ಯವು ಕಲಾಂ ರ ಬಾಲ್ಯವು ಸ್ವಲ್ಪ ಮಟ್ಟಿಗೆ ಹೋಲಿಸಬಹುದು. ಕಸಬ್ ನ ಮನೆ ಬಡತನದಿಂದ ತುಂಬಿದ ಕುಟುಂಬ ಮನೆಯಲ್ಲಿದ್ದರು ಕೆಲವರು ದುಡಿಯುತ್ತಿದ್ದರು… ಆ ದುಡಿಮೆಯಿಂದ ಯಾರೊಬ್ಬರ ಹೊಟ್ಟೆಯೂ ತುಂಬುತ್ತಿರಲಿಲ್ಲ. ಕಲಾಂ ಮತ್ತು ಕಸಬ್ ಗೆ ಕೇವಲ ಹೋಲಿಕೆಯಿರುವುದು ಬಡತನವೆಂಬ ಬಾಲ್ಯ ಮತ್ತು ಮುಸಲ್ಮಾನ ಎಂಬುವುದು ಮಾತ್ರ. ಬಡತನವನ್ನು ದೂರ ಮಾಡಲು ಕಸಬ್ ನ ಅಣ್ಣ ಆಯ್ಕೆ ಮಾಡಿಕೊಂಡ ಕೆಲಸ ‘ದರೋಡೆ’… ಕಸಬ್ ಸ್ವಲ್ಪ ಬೆಳೆಯುತ್ತಲೇ ತನ್ನ ಅಣ್ಣನೊಂದಿಗೆ ದರೋಡೆ ವೃತ್ತಿಗೆ ಕಾಲಿಟ್ಟ.. ದರೋಡೆಯಲ್ಲಿ ಕುಖ್ಯಾತಿಯನ್ನು ಪಡೆದ.. ಅದೆಷ್ಟು ಬಾರಿ ಪೋಲೀಸರ ಆತಿಥ್ಯವನ್ನು ಪಡೆದಿದ್ದನೋ ಅವನೇ ಬಲ್ಲ. ಅದೇಕೋ ಅವನಿಗೆ ದರೋಡೆಯಿಂದ ಬರುತ್ತಿದ್ದ ಸಂಪಾದನೆ ಸಾಲುತ್ತಿರಲಿಲ್ಲ .. ಯಾರದ್ದೋ ಪರಿಚಯದಿಂದ ದೇಶದ್ರೋಹ ಭಯೋತ್ಪಾದನೆಯ ಚಟುವಟಿಕೆಗೆ ಸೇರಿಕೊಂಡ… ಬಹುಷಃ ದರೋಡೆ ಮಾಡುತ್ತಾ ಇರುತ್ತಿದ್ದರೆ ನೇಣಿಗೆರುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ ?? ಬಡತನವೆಂಬ ಸಣ್ಣ ನೆಪವಿಟ್ಟು ಭಯೋತ್ಪಾದನೆ ಮಾಡುವುದು ಸರಿಯೇ??? ಬಡತನ ದೂರಮಾಡಲು ಹಲವು ಉತ್ತಮ ಮಾರ್ಗಗಳಿವೆ. ಒಂದೇ ಬಾರಿಗೆ ಶ್ರೀಮಂತರಾಗುವ ಅತಿಯಾಸೆ. ಮತಾಂಧರ ಕೈ ಸಿಲುಕಿ ಇಡೀ ಜೀವನವನ್ನೇ ಹಾಳುಮಾಡಿಕೊಂಡ ಮಹಾಪಾಪಿ. ಅವನ ಪ್ರಕಾರ ತನ್ನ ಮನೆಯವರ ಸುಖಕ್ಕೆ ದೇಶದ್ರೋಹಿ ಚಟುವಟಿಕೆಯನ್ನು ಮಾಡತೊಡಗಿದನಂತೆ. ಕಳ್ಳನಿಗೊಂದು ಪಿಳ್ಳೆ ನೆಪವಲ್ಲದೆ ಮತ್ತೇನು?? ಇವನ ಹೆತ್ತವರು ತನ್ನ ಮಗನೇ ಅಲ್ಲ ಎಂದಿದ್ದರು.. ಕೊನೆಗೆ ಅವನ ಶವವನ್ನೂ ತೆಗೆದುಕೊಳ್ಳಲು ನಿರಾಕರಿಸಿತ್ತು… ಬಹುಷಃ ಇಂತಹಾ ಮಗ ಹುಟ್ಟಿದ ತಪ್ಪಿಗೆ ತಮ್ಮವನಲ್ಲ ಎಂದು ಹೇಳಿ ಮಾಡಿದ ತಪ್ಪಿನ ಪ್ರಾಯಶ್ಚಿತ್ತ ಮಾಡಿಕೊಂಡರೇನೋ…!!! ಮುಂಬೈ ದಾಳಿಯ ಸಂದರ್ಭದಲ್ಲಿ ಅದೆಷ್ಟು ಮುಗ್ಧ ಮನಸ್ಸುಗಳಿಗೆ ಘಾಸಿ ಮಾಡಿದ್ದಾನೋ?? ಎಷ್ಟು ಜನರ ಶಾಪವಿದೆಯೋ???

ಕಸಬ್ ಮತ್ತು ಕಲಾಂ ರನ್ನು ಹೋಲಿಸಿದಾದ ಗಿಳಿಗಳೆರಡರ ಕಥೆ ನೆನಪಾಗುವುದು ಸಹಜ.
ಒಬ್ಬ ಗಿಳಿ ವ್ಯಾಪಾರಿಯಿಂದ ಋಷಿಮುನಿಯು ಹಾಗೂ ಬೇಟೆಗಾರ ಇಬ್ಬರೂ ತಲಾ ಒಂದೊಂದು ಗಿಳಿ ಮರಿಯನ್ನು ಖರೀದಿಸಿದರು. ಸ್ವಲ್ಪ ಸಮಯದ ನಂತರ ಆ ವ್ಯಾಪರಿಯು ಆವರಿಬ್ಬರ ಮನೆಗೂ ಭೇಟಿ ಮಾಡಿದ ಋಷಿಮುನಿಯ ಮನೆಯಲ್ಲಿ ಒಳ ಹೊಕ್ಕ ತಕ್ಷಣ ಅಲ್ಲಿದ್ದ ಗಿಳಿಯು ” ಆತ್ಮೀಯ ಸ್ವಾಗತ, ಬನ್ನಿ ಕುಳಿತುಕೊಳ್ಳಿ, ತಕ್ಷಣಕ್ಕೆ ಕುಡಿಯಲು ನೀರೇನಾದರು ಬೇಕೆ ? ” ಎಂದು ಕೇಳಿತು.. ಅಷ್ಟೊಂದು ನಯ ವಿನಯದಿಂದ ಮಾತನಾಡಿದ ಗಿಳಿಯನ್ನು ಕಂಡು ಗಿಳಿ ವ್ಯಾಪಾರಿಯು ಸಂತೋಷಪಟ್ಟುಕೊಂಡ. ಇದಾದ ಮೇಲೆ ಬೇಟೆಗಾರನ ಮನೆಗೂ ಭೇಟಿಕೊಟ್ಟ ಅಲ್ಲಿ ಒಳಹೊಕ್ಕ ತಕ್ಷಣ ವ್ಯಾಪಾರಿಗೆ ಅತ್ಯಂತ ಭಯಭೀತನಾದನು. ಯಾಕಿರಬಹುದು ?

ಅಲ್ಲಿದ್ದ ಗಿಳಿಯು ” ನಮ್ಮ ಮನೆಗೆ ಏನೋ ಬಂದಿದೆ ಅದನ್ನು ಹೊಡೆದು ಬಡಿದು ಕಡಿಯಿರಿ” ಎಂದಿತ್ತು. ಅಲ್ಲಿಂದಲೇ ನೇರವಾಗಿ ವ್ಯಾಪಾರಿಯು ತನ್ನ ಮನೆಯ ಕಡೆ ಹೊರಟೇ ಹೋದನು. ಇದರಿಂದ ಅವನು ತಿಳಿದುಕೊಂಡದ್ದು ಏನೆಂದರೆ ಅದೆಷ್ಟೇ ಕಷ್ಟವಿದ್ದರೂ ಕೆಟ್ಟವರ ಸಹವಾಸ ಮಾಡಬಾರದು. ‘ಸಜ್ಜನರ ಸಂಘವದು ಹೆಜ್ಜೇನು ಸವಿದಂತೆ ದುರ್ಜನರ ಸಂಘವದು ಹೆಜ್ಜೇನು ಕಡಿದಂತೆ ‘ ಎನ್ನುವ ಮಾತು ನಮ್ಮನ್ನು ಸದಾ ಎಚ್ಚರಿಸುತ್ತಿರಬೇಕು.
ಅಬ್ದುಲ್ ಕಲಾಂ ಅಪ್ಪಟ ಭಾರತೀಯ ಮುಸಲ್ಮಾನ .ದೇಶಭಕ್ತಿ ರಕ್ತದಲ್ಲಿಯೇ ಕರಗತವಾಗಿರುತ್ತದೆ. ಆದರೆ ಪಾಕಿಸ್ಥಾನಿ ಮುಸಲ್ಮಾನನಿಗೆ ಮತಾಂಧತೆಯೇ ತುಂಬಿಕೊಂಡಿರುತ್ತದೆ. ಬಹುಷಃ ಮೋದಿಯವರು ಕಲಾಂರನ್ನು ಮುಂದಿಟ್ಟು ” ಅಪ್ಪಟ ಭಾರತೀಯ ಮುಸ್ಲೀಮರು ಯಾರೂ ದೇಶದ್ರೋಹದ ಚಟುವಟಿಕೆಗಳಿಗೆ ಅವಕಾಶ ಕೊಡುವುದಿಲ್ಲ” ಈ ಮಾತನ್ನು ಹೇಳಿದರು ಅನಿಸುತ್ತದೆ. ಆದ್ದರಿಂದ ನಾವು ನಮ್ಮ ಸಜ್ಜನರ ಸಂಘವನ್ನೇ ಮುಂದುವರಿಸೋಣ… ಉಪಕಾರಿಯಾಗದಿದ್ದರೂ ಅಪಕಾರಿಯೆನಿಸುವುದು ಬೇಡ. ನಮ್ಮ ಜೀವನದಲ್ಲಿ ಕಲಾಂ ಕೊಟ್ಟ ಅದ್ಭುತ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳೋಣ… ಅವರಂತೆ ಆಗದಿದ್ದರೂ ಅವರು ನಡೆದ ಸನ್ಮಾರ್ಗದಲ್ಲಿ ನಾವು ನಡೆಯೋಣ ಆಗ ಯಶಸ್ಸು ತಾನಾಗಿಯೇ ನಮ್ಮನ್ನು ಆವರಿಸಿಕೊಳ್ಳುತ್ತದೆ.

ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಒಳ್ಳೆಯ ಫಲವನ್ನೇ ನಿರೀಕ್ಷಿಸಬಹುದು. ಕೇವಲ ಕೆಟ್ಟ ಕಾರ್ಯವನ್ನೇ ಮಾಡಿ ಕೊನೆಗೆ ಒಳ್ಳೆಯ ಫಲ ನಿರೀಕ್ಷಿಸುವುದು ಸರಿಯೇ?? ಇದುವೇ ಕಲಾಂರಿಗೂ ಕಸಬ್ ಗೂ ಇರುವ ಪ್ರಮುಖ ವ್ಯತ್ಯಾಸ. ಅಬ್ದುಲ್ ಕಲಾಂ ರು ಇನ್ನೊಮ್ಮೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸೋಣ…

Jagath Bhat

Facebook ಕಾಮೆಂಟ್ಸ್

ಲೇಖಕರ ಕುರಿತು

Jagath Bhat

ಜಗತ್ ಭಟ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಯಕ್ಷಗಾನ, ಛಾಯಾಗ್ರಹಣ ಮತ್ತು ಬರವಣಿಗೆ ಇವರ ಹವ್ಯಾಸ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!