‘ನನ್ನ ಬದುಕು ಇನ್ನೆಲ್ಲೋ ಇದೆ’ ಎಂಬ ಯೋಚನೆ ನಮ್ಮೆಲ್ಲರಲ್ಲೂ ಕಾಡುತ್ತಲೇ ಇರುತ್ತದೆ… ಇಂದು ಏನು ನಡೀತಾ ಇದೆ? ನಿನ್ನೆ ಏನು ಆಗಿತ್ತು? ನಾಳೆ ಏನು? ಮುಂದೆ ಏನು? ಈ ರೀತಿಯ ಯೋಚನೆಗಳಲ್ಲೇ ನಮ್ಮ ಬದುಕು ಮುಂದೆ ಸಾಗುತ್ತಿದೆ. ಮುಂದೊಂದು ದಿನ ಹಿಂತಿರುಗಿ ನೋಡಿದರೆ, ಜೀವನ ಪೂರ್ತಿ ಖಾಲಿ ಹಾಳೆಗಳು. ವಿದ್ಯಾರ್ಥಿ ಜೀವನ, ಕೆಲಸ, ಸಂಸಾರ ಸಾಗರ, ವೃದ್ಧ ಜೀವನ, ಇಷ್ಟೇನಾ ಜೀವನ ಎಂದರೆ? ನಾವು ಚಿಕ್ಕಂದಿನಿಂದಲೂ ಏನಾದರು ಸಾಧಿಸ ಬೇಕು, ಸಾಧನೆಗಳೇ ಬದುಕು ಅನ್ನುವುದನ್ನು ಬಾಲ್ಯದಿಂದಲೇ ನಮ್ಮ ತಲೆಗೆ ತುಂಬುತ್ತಲೇ ಬರುತ್ತಾರೆ ನಮ್ಮ ದೊಡ್ಡವರು. ‘ಬೇರೇನನ್ನೋ ನಾನು ಮಾಡಬೇಕಾಗಿತ್ತು’ ಎಂದುಕೊಳ್ಳುತ್ತಲೇ ಐವತ್ತು ವರ್ಷಗಳು ಕಳೆದು ಹೋಗುತ್ತವೆ. ನಾವು ಏನಾದರು ಮಾಡಬೇಕು, ಏನಾದರು ಸಾಧಿಸಬೇಕು ಎಂದೆನಿಸಿದರು, ಅದಕ್ಕೆ ಅರ್ಥವೇ ಇಲ್ಲ ನಮ್ಮ ಬದುಕಿನಲ್ಲಿ! ತಕ್ಕ ಅವಕಾಶಗಳು ಸಿಗುವುದಿಲ್ಲ, ಸಿಕ್ಕಲ್ಲಿ ಮನೆಯವರು ಅಥವಾ ಆಪ್ತರಿಂದ ಅಡ್ಡಿ, ‘ಇದು ಮಾಡ ಬೇಡ, ಮುಂದೆ ಕಷ್ಟ ಆಗುತ್ತೆ’ ಎಂಬ ಮಾತುಗಳೇ ನಮ್ಮನ್ನು ಏನು ಮಾಡಲಾಗದೆ ಮಾಡಿ ಬಿಡುತ್ತದೆ.
ಮಾಡುವ ಕೆಲಸ ಎಲ್ಲರೂ ಮೆಚ್ಚುವಂತೆ ಇರಬೇಕು, ನಾವು ಸಮಾಜಕ್ಕೆ ಹೆದರಿ ಬದುಕ ಬೇಕು, ಮಾಡಿಕೊಳ್ಳುವ ಸ್ನೇಹಿತರು ನಮಗೆ ತಕ್ಕಂತೆ ಇರಬೇಕು, ಜೀವನದಲ್ಲಿ ಗುರಿ ಮುಖ್ಯವಲ್ಲ, ದಾರಿ ಮುಖ್ಯ. ಇದೆಲ್ಲ ನಾನು ಹೊಸದಾಗಿ ಹೇಳ್ಳುತ್ತಿರುವ ಮಾತುಗಳಲ್ಲ, ನಮ್ಮ ಹಿರಿಯರು ನಮ್ಮಗೆ ಹೇಳಿಕೊಂಡು ಬಂದಿರುವ ಮಾತುಗಳೇ. ಕಸ ಎತ್ತುವುದು ಎಲ್ಲರೂ ಮೆಚ್ಚುವ ಕೆಲಸವೇ? ಆದರೆ ಅದೇ ಕಸ ಎತ್ತುವವರು ಇಲ್ಲವಾದರೆ ನಮ್ಮಗೆ ಎಷ್ಟು ಕಷ್ಟವಾಗುತ್ತದೆ? ನಾವು ನಮಗೆ ಇಷ್ಟ ಬಂದ ಹಾಗೆ ಬದುಕಿದರೆ ನಮ್ಮ ಮನಸ್ಸಿನ ತೃಪ್ತಿಗೆ ಮಿತಿಯೇ ಇರುವುದಿಲ್ಲ. ಆದರೆ ನಾವು ಎಲ್ಲರೂ ನಮ್ಮಗೋಸ್ಕರ ನಾವು ಎಷ್ಟು ಜನ ಇದ್ದೀವಿ? ಹೀಗೆ ಮಾಡಿದರೆ ಅವರು ಏನು ಅಂದುಕೊಳ್ಳುತ್ತಾರೆ, ಜನಗಳ ಮದ್ಯೆ ನಮ್ಮಗೆ ಮರ್ಯಾದೆ ಮುಖ್ಯ ಎಂದು ಬೇರೆ ಅವರಿಗೋಸ್ಕರ, ಸಮಾಜಕ್ಕೆ ಹೆದರಿ ಜೀವನ ನಡೆಸ್ಸುತ್ತಿದ್ದೇವೆ. ನಮ್ಮ ಜೊತೆ ಯಾವಗಲು ಇರುವ ಬಾಲ್ಯ ಸ್ನೇಹಿತರು ಆಗಲಿ, ನಮ್ಮ ಸಹಪಾಠಿಗಳು ನಮ್ಮ ಕಷ್ಟಕ್ಕೆ ಆಗದೆ ಇರಬಹುದು. ಹಾಗೋ ಹೀಗೋ ಹೇಗೋ ಪರಿಚಯ ಆದ ವ್ಯಕ್ತಿಗಳೇ ಕೆಲವೊಮ್ಮೆ ನಮ್ಮ ಕಷ್ಟಗಳಿಗೆ ಆಗಬಹುದು! ನಮ್ಮಗೆ ತಕ್ಕ ಸ್ನೇಹಿತರು ಅಂದರೆ ಯಾರು? ಜೀವನದ ದಾರಿ ಬಲ್ಲವರು ಯಾರು? ನಮ್ಮ ಜೀವನ ನಮ್ಮ ಕೈಗಳಲ್ಲಿ ಇಲ್ಲ. ಯಾರು ಯಾವಾಗ ಬೇಕಾದರೂ ಸಾಯಬೋದು. ನಮ್ಮ ಜೀವನಕ್ಕೆ ನಮಗೆ ಗ್ಯಾರಂಟೀ ಇಲ್ಲದೆ ಇರುವಾಗ ಇಂದಿನ ಜೀವನದಲ್ಲಿ ನಾಳೆಯ ಬಗ್ಗೆಯೇ ಯೋಚನೆಗಳೇ ಜಾಸ್ತಿ.
ಸಂಜೆಯ ವೇಳೆ, ದಿನದ ಕೆಲಸ ಮುಗಿಸಿಕೊಂಡು, ಮನೆಗೆ ಬಂದು ಕಾಫಿ ಕುಡಿಯುತ್ತಾ, ಸುಮ್ಮನೆ ಕೂತಾಗ ಇದ್ದಕ್ಕಿದ್ದಂತೆ ಅದೆಂಥದ್ದೋ ಯೋಚನೆ. ಸೂರ್ಯ ಮುಳುಗುವ ಹೊತ್ತು, ಆ ಮೌನದೊಳಗೊಂದು ಆರ್ತನಾದ. ನನ್ನ ಬದುಕು ಯಾವ ಕಡೆ ಹೋಗುತ್ತಿದೆ? ನನ್ನ ಬದುಕು ಇನ್ನೆಲ್ಲೋ ಇದೆ. ಬೇರೇನನ್ನೋ ನಾನು ಮಾಡಬೇಕಾಗಿತ್ತು. ಅನಿವಾರ್ಯವಾಗಿ ಈ ಕೆಲಸ ಮಾಡುತ್ತಿದ್ದೇನೆ. ಮನಸ್ಸೆಂಬ ಸಮುದ್ರದಲ್ಲಿ ರಾಶಿಗಟ್ಟಲೆ ಯೋಚನೆ. ಕೆಲವೊಮ್ಮೆ ಇದೂ ಒಂದು ಬದುಕಾ? ಎಂದು ಸಹ ಅನ್ನಿಸಿಬಿಡುತ್ತದೆ. ಹಿಂತಿರುಗಿ ನೋಡಿದರೆ ನಮ್ಮ ಜೊತೆ ಆಪ್ತರಾಗಿದ್ದು ದೂರವಾದವರು, ನಮ್ಮಗೆ ವಯುಕ್ತಿಕವಾಗಿ ಮೋಸ ಮಾಡಿದ ಜನರ ನೆನಪುಗಳು. ಮುಂದೆ ಏನು? ನಾಳೆ ಹೇಗೆ? ಎಂದು ನಾಳಿನ ಬಗ್ಗೆ ಇಂದೇ ಯೋಚನೆ. ಬದುಕು ಒಡಂಬಡಿಕೆಯಲ್ಲಿ ಇದೆಯೋ, ಈಡೇರಿಕೆಯಲ್ಲೋ ಎಂಬ ಗೊಂದಲ, ಈ ಗೊಂದಲಗಳ ನಡುವೆಯೇ ಜೀವನ.
ಹಣ ಇರುವವರು ಬೇರೆ. ಹಣ ಸಂಪಾದಿಸುವವರು ಬೇರೆ. ಮನುಷ್ಯನಿಗೆ ಹಣದ ಹುಚ್ಚು ಇರಕೂಡದೆಂದು ನಂಬುವವರಲ್ಲಿ ನಾನೂ ಒಬ್ಬ. ನಾಲಕ್ಕು ವರ್ಷಗಳ ಮುಂಚೆ, ನಮ್ಮ ಮನೆ ಬೆಂಗಳೂರಿನ ಬನಶಂಕರಿಯ ಹತ್ತಿರದಲ್ಲಿ ಇತ್ತು. ನನಗೆ ಪರಿಚಯ ಆದವನು ಸೂರಜ್ ಎಂಬ ಹುಡುಗ. ಮೊನ್ನೆ ಒಂದು ಫ್ಲೈಓವರ್ ನ ಕೆಳಗೆ ಗುರುತು ಸಿಗದ ಪರಿಸ್ಥಿತಿಯಲ್ಲಿ ನೋಡಿದಾಗ ತುಂಬ ಬೇಜಾರು ಆಯಿತು. ಅವನ ತಂದೆ ತಾಯಿಗೆ ಸೂರಜ್ ಒಬ್ಬನೇ ಮಗ, ಒಂದು ಹೆಸರು ವಾಸಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿದ್ದಾನೆ. ಎರಡು ವರ್ಷಗಳ ಮುಂಚೆ ತನ್ನ ತಂದೆ ತಾಯಿಯು, ರಸ್ತೆ ಅಪಘಾತದಲ್ಲಿ ವಿಧಿವಶರಾದ ವಿಷಯ ತಿಳಿಯತು. ತಂದೆ ತಾಯಿಯೇ ಜಗತ್ತಾಗಿದ್ದ ಸೂರಜನಿಗೆ, ಇಂದು ಮನೆ ಇಲ್ಲದೆ, ಕೆಲಸ ಇಲ್ಲದೆ ರಸ್ತೆ ಬದಿಯಲ್ಲಿ ಮಲಗುವ ಪರಿಸ್ಥಿತಿ. ಹಾಗೆಯೇ ನನಗೆ ತಿಳಿದವರಲ್ಲೇ ಒಬ್ಬರು, ತಮ್ಮ ತಂದೆಯನ್ನು ವೃದ್ದಾಶ್ರಮಕ್ಕೆ ಸೇರಿಸಿದ ವಿಷಯ, ಮೊನ್ನೆ ಆಕಸ್ಮಿಕವಾಗಿ ಆಶ್ರಮಕ್ಕೆ ಭೇಟಿ ನೀಡಿದಾಗ ತಿಳಿಯಿತು. ಜೀವನ ಪೂರ್ತಿ ದುಡಿದು, ತಮ್ಮ ಆಸೆಗಳನ್ನು ಬದಿಗಿಟ್ಟು, ತಮ್ಮ ಮಕ್ಕಳಿಗಾಗಿ ಕಷ್ಟ ಪಟ್ಟು ದುಡಿದು, ಚೆನ್ನಾಗಿ ಓದಿಸಿ, ಇರಕ್ಕೆ ನೆಲ ಮಾಡಿಕೊಟ್ಟು, ಮಕ್ಕಳು ಇಷ್ಟ ಪಟ್ಟ ಹಾಗೆ ಜೀವನ ಒದಗಿಸಿ ಕೊಟ್ಟವರಿಗೆ, ವಯಸ್ಸಾದ ಮೇಲೆ ವಿಶ್ರಾಂತಿ ತೆಗದುಕೊಳ್ಳುವ ವಯ್ಯಸಿನಲ್ಲಿ ಈ ರೀತಿ ಮಾಡುವುದು ಎಷ್ಟು ಸರಿ? ಓದಲು ತುಂಬಾ ಆಸಕ್ತಿ ಇದ್ದರು, ಬಡತನದ ಕಾರಣದಿಂದ ಶಾಲೆಗೇ ಹೋಗಲಾಗದೆ ಕೂಲಿ ಕೆಲಸ, ಹೊಟೇಲುಗಳಲ್ಲಿ ಕೆಲಸ ಮಾಡುತ್ತಿರುವುದು ನಾವು ನೋಡುತ್ತಲೇ ಇದೀವಿ.
ಹೀಗೆ ನಮ್ಮ ಜೀವನ ಅನಿರೀಕ್ಷಿತ, ಯಾವ ಸಮಯದಲ್ಲಿ ಏನು ಬೇಕಾದರೂ ಆಗ ಬಹುದು. ಹೇಗೋ ಇದ್ದವರು ಹೇಗೋ ಕಳೆದು ಹೋಗುತ್ತಾರೆ. ಯಾರ ಹಣೆ ಬರೆಹ ಹೇಗಿರುತ್ತದೆ, ಯಾವ ಸಮಯದಲ್ಲಿ ಏನು? ಎಲ್ಲವೂ ಅನಿರೀಕ್ಷಿತ. ಹುಟ್ಟು ಉಚಿತ. ಸಾವು ಖಚಿತ. ಇರುವಷ್ಟು ದಿನ ನಮಗೆ ಇಷ್ಟವಾದ ಹಾಗೆ ಇದ್ದು, ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು, ನೊಂದವರಿಗೆ ನೆರವಾಗುತ್ತಾ, ದೇವರು ಕೊಟ್ಟಿದ್ದಲ್ಲಿ ತೃಪ್ತಿಯಿಂದ ಬದುಕು ಸಾಗಿಸೋಣ. ನಮ್ಮ ಜೀವನ ನಮ್ಮ ಕೈಲಿದೆ, ಸುಂದಾರವಾಗಿ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.