ಪ್ರಚಲಿತ

ಬಡವರನ್ನು ಬಡವರನ್ನಾಗಿಸಿಯೇ ಇರಿಸುವುದು ನಿಮ್ಮ ರಾಜಕೀಯ ಧರ್ಮವಾ?

ನಾಡಿನ ಹಿರಿಯ ಸಾಹಿತಿಯಾಗಿರುವ ಎಸ್.ಎಲ್.ಭೈರಪ್ಪನವರು ದಿನ ಪತ್ರಿಕೆಗಳಲ್ಲಿ  ಅನ್ನ ಭಾಗ್ಯದ ಕುರಿತು ನೀಡಿದ ಹೇಳಿಕೆಯನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಎರಡು ಕಾರಣಗಳು. ಒಂದು ಪ್ರಚಾರಕ್ಕಾಗಿ, ಬಾಯಿ ಚಪಲಕ್ಕಾಗಿ ಮಾತನಾಡುವ ಥರ್ಡ್ ಕ್ಲಾಸ್ ಸಾಹಿತಿಯಲ್ಲ ಭೈರಪ್ಪನವರು. ಎರಡನೇಯದು ಭೈರಪ್ಪನವರು ಏನೇ ಹೇಳಿದರೂ ಅದಕ್ಕೆ ಅಧಾರವಿದ್ದುಕೊಂಡೇ ಹೇಳುತ್ತಾರೆ. ಅದರಲ್ಲಿ ಬಹಳ ಆಳವಾದ ಸಂಶೋಧನೆ ಇರುತ್ತದೆ. ಇರಲಿ.

ಭೈರಪ್ಪನವರು ಹೇಳುವಂತೆ ಸರ್ಕಾರ ಇಂತಹಾ ಭಾಗ್ಯಗಳನ್ನು ನೀಡುವ ಮೂಲಕ ಜನರನ್ನು ಹಂಗಿನಲ್ಲಿ ಜೀವಿಸುವಂತೆ ಮಾಡುವುದಕ್ಕಿಂತ ಅವರಿಗೆ ಉದ್ಯೋಗ ನೀಡಿ ಅವರನ್ನು ಸ್ವಾವಲಂಬಿಗಳನ್ನ್ನಾಗಿ ಮಾಡುವುದು ನೂರು ಪಾಲು ಒಳಿತು. ಉದ್ಯೋಗ ಸೃಷ್ಟಿಗಾಗಿ ಸರ್ಕಾರ ಏನು ಮಾಡಿದೆ ಎನ್ನುವುದು ಅಷ್ಟರಲ್ಲೇ ಇದೆ. ಹೋಂಡಾ ಸಂಸ್ಥೆ ಕರ್ನಾಟಕದಿಂದ ಕಾಲ್ಕಿತ್ತಂತೆ ಅಂತರ್ಜಾಲ ಮಾರಾಟ ಸಂಸ್ಥೆ ಅಮೆಜಾನ್ ಡಾಟ್ ಇನ್ ಕೂಡಾ ಕರ್ನಾಟಕಕ್ಕೆ ಗುಡ್ ಬೈ ಹೇಳಿತ್ತು. ಅಲ್ಲಿಗೆ ಕರ್ನಾಟಕದಿಂದ ಈ ಕಂಪನಿಗಳು ಹೋಗಿದ್ದು ಮಾತ್ರವಲ್ಲದೆ ಇಡೀಯ ಕಾರ್ಪೋರೇಟ್ ವಲಯದಲ್ಲಿ ಹೂಡಿಕೆಗೆ ಕರ್ನಾಟಕ ಅರ್ಹ ಪ್ರದೇಶವಲ್ಲ ಎನ್ನುವ ಸಂದೇಶವೂ ಹೋಗಿರುತ್ತದೆ. ಇಲ್ಲಿನ ಮೂಲ ಸೌಕರ್ಯಗಳ ಬಗ್ಗೆ ವಿನಾಕಾರಣ ಸಂಶಯ ಮೂಡಿರುತ್ತದೆ. ಇದರಿಂದ ನಷ್ಟ ಯಾರಿಗೆ?ಇದಕ್ಕೆಲ್ಲಾ ಹೊಣೆ ಯಾರು? ಒಂದು ವೇಳೆ ಅವುಗಳು ಕರ್ನಾಟಕದಲ್ಲಿ ತಮ್ಮ ಉದ್ಯಮ ಸ್ಥಾಪಿಸಿದ್ದರೆ ಬಡ ಕಾರ್ಮಿಕ ವರ್ಗದಿಂದ ಹಿಡಿದು ಎಂಜಿನಿಯರುಗಳವರೆಗೆ ಹೆಚ್ಚಿನವರು ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದರು. ಅವುಗಳ ಉದ್ಯಮ ನೆಪದಲ್ಲಿ ಆ ಪ್ರದೇಶಗಳಲ್ಲಿ ರಸ್ತೆ, ಶಾಲೆ, ಆಸ್ಪತ್ರೆಯಂತಹ ಮೂಲ ಸೌಕರ್ಯಗಳ ಅಭಿವೃಧ್ಧಿಯಾಗುತ್ತಿದ್ದವು. ಸಿಧ್ಧರಾಮಯನವರ ಸರ್ಕಾರ ಹೋಣೆಯರಿತು ಇದನ್ನೆಲ್ಲ ಜವಾಬ್ದಾರಿಯುತವಾಗಿ ನಿಭಾಯಿಸುವುದು ಬಿಟ್ಟು ಅಗ್ಗದ ಪ್ರಚಾರಕ್ಕಾಗಿ ಜನರನ್ನು  ಅನ್ನಭಾಗ್ಯ, ಶಾದಿ ಭಾಗ್ಯಗಳ ಹಂಗಿಗೆ ತಳ್ಳುತ್ತಿರುವುದೇಕೆ?

ಅಷ್ಟಕ್ಕೂ ಬಡಜನರಿಗೆ ಈ ಸರ್ಕಾರ ಮಾತ್ರವಲ್ಲ, ಈ ಹಿಂದಿನ ಸರ್ಕಾರಗಳೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಶಾಲೆ ಬಿಟ್ಟು ಹೋಗಿದ್ದ ಮಕ್ಕಳನ್ನು ಪುನಃ ಕರೆತರಲು ಮತ್ತು ಬಡವರಿಗೆ ಅನುಕೂಲವಾಗುವಂತೆ ಅಕ್ಷರ ದಾಸೋಹ ಯೋಜನೆ ಜಾರಿಗೆ ತಂದರು. ಅದರಲ್ಲಿ ಅವರು ಎಲ್ಲಿಯೂ ಜಾತಿಯ ಮುಖ ನೋಡಿರಲಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆ ತಂದರು. ಹಿಂದೂ ಮುಸ್ಲಿಂ ದಲಿತರು ಅವರು ಇವರೆನ್ನದೆ ಎಲ್ಲಾ ಸಮಾಜದ ಹೆಣ್ಣು ಮಕ್ಕಳಿಗೆ ಸ್ವಾವಲಂಬಿಯಾಗಿ ಜೀವನ ರೂಪಿಸುವ ಯೋಜನೆ ಅದಾಗಿತ್ತು. ಹೀಗೆ ಎಲ್ಲರೂ ಒಂದು ನಿರ್ಧಿಷ್ಟ ಉದ್ದೇಶದೊಂದಿಗೆ ಸಮಾಜಸ್ನೇಹಿ ಯೋಜನೆಯನ್ನು ಜಾರಿಗೆ ತಂದರೇ ಹೊರತು ಜನರನ್ನು ಸೋಮಾರಿಯನ್ನಾಗಿಸುವ ಯೋಜನೆಯನ್ನು ಯಾರೂ ಜಾರಿಗೆ ತಂದಿದ್ದಿಲ್ಲ.

ಇದೆಲ್ಲವೂ ಬಡಜನರ ಉದ್ದಾರಕ್ಕಾಗಿ, ಮೇಲ್ವರ್ಗದ ಜನರಿಗೆ ಇದರ ಮಹತ್ವದ ಅರಿವಾಗದು  ಎಂದು ಹೇಳುವ ಮುಖ್ಯಮಂತ್ರಿಗಳೇ, ಸ್ವಾತಂತ್ರ್ಯ ಬಂದು ಅರುವತ್ತು ವರ್ಷಗಳೇ ಕಳೆದವು. ಈ ಅರುವತ್ತು ವರ್ಷಗಳಲ್ಲಿ  ಕೇಂದ್ರ ಮತ್ತು ರಾಜ್ಯದಲ್ಲಿ ಹೆಚ್ಚು ಕಮ್ಮಿ ಐವತ್ತು ವರ್ಷಗಳನ್ನು ನಿಮ್ಮ ಕಾಂಗ್ರೆಸ್ಸ್ ಪಕ್ಷವೇ ಆಳಿದೆ. ಬಡಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಇನ್ನೆಷ್ಟು ವರ್ಷಗಳು ಬೇಕು ಸಾರ್? ಬಡವರನ್ನು ಬಡವರನ್ನಾಗಿಸಿಯೇ ನಿಮ್ಮ ಓಟು ಬ್ಯಾಂಕ್ ಭದ್ರ ಪಡಿಸಿಕೊಳ್ಳುವುದೊಂದೇ ನಿಮ್ಮ ರಾಜಕೀಯ ಧರ್ಮವಾ? ಇನ್ನೈವತ್ತು ವರ್ಷಗಳನ್ನು ನಿಮಗೆ ನೀಡಿದರೂ ಬಡವರನ್ನು ನೀವು ಭಾಗ್ಯಗಳ ಅಲೆಯಲ್ಲಿ ತೇಲಿಸುತ್ತೀರಿ ಹೊರತು ಬಡವರನ್ನು ಶ್ರೀಮಂತರನ್ನಾಗಿ ಮಾಡುವುದಿಲ್ಲ.

ಸಿಧ್ಧರಾಮಯ್ಯನವರಿಗೆ ಹಾಗೂ ಬಡಜನರಿಗೆ ಒಳ್ಳೆಯದನ್ನು ಮಾಡಬೇಕೆಂದಿದ್ದರೆ ಅನ್ನಭಾಗ್ಯ ಯೋಜನೆಯಡಿಯಲ್ಲಿ 1 ರೂಗೆ ಅಕ್ಕಿ ನೀಡುವುದನ್ನು ನಿಲ್ಲಿಸಲಿ. ಜನರಿಗೆ ಉದ್ಯೋಗ ನೀಡಿ, ಅವರ ವಿದ್ಯಾರ್ಹತೆಗೆ ತಕ್ಕಂತ ಸಂಬಳ ಸಿಗುವಂತೆ ಮಾಡಿ, ಬಡವರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಗುವಂತಹ ವ್ಯವಸ್ಥೆ ಕಲ್ಪಿಸಿ. ಯುವಕರು ಸ್ವಂತ ವ್ಯಾಪಾರ ವಹಿವಾಟು ನಡೆಸುವಂತಹ ಅನುಕೂಲಕರ ಸ್ಥಿತಿಯನ್ನು ನಿರ್ಮಿಸಿ ಹಾಗು ಅನ್ನ ಭಾಗ್ಯಕ್ಕಾಗಿ ವಿನಿಯೋಗಿಸುತ್ತಿರುವ ಸಾವಿರಾರು ಕೋಟಿ ರೂಪಾಯಿಗಳನ್ನು  ಬತ್ತ ಬೇಳೆಯುವ ರೈತನಿಗೆ ಸಬ್ಸಿಡಿ ರೂಪದಲ್ಲಿ ನೀಡಿ ಅಥವಾ ಅವರ ಬ್ಯಾಂಕ್ ಸಾಲಗಳ ಬಡ್ಡಿ ದರ ಕಡಿತಕ್ಕೋ, ಬಡ್ಡಿ ಮನ್ನಾಕ್ಕೋ ಉಪಯೋಗಿಸಿ. ಅವರ ಬೆಳೆಗಳಿಗೆ ಬೇಕಾಗುವ ನೀರಾವರಿ ಕಾಲುವೆಗಳನ್ನು ನಿರ್ಮಿಸಿ ಕೊಡಿ, ಅವರೂ ತಮ್ಮ ಬದುಕನ್ನು ನೆಮ್ಮದಿಯಿಂದ ಕಟ್ಟಿಕೊಳ್ಳುವಂತೆ ಮಾಡಿ. ಕಡೇ ಪಕ್ಷ  ಸರ್ಕಾರಕ್ಕೆ ರೈತರ ಆತ್ಮಹತ್ಯೆಯಂತಹ ತಲೆ ನೋವಾದರೂ ತಪ್ಪೀತು!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!