ಭಾರತ ಹಳ್ಳಿಗಳ ದೇಶ, ಆದರೆ ಅಲ್ಲಿನ ಜನರ ಬದುಕಿನ ಸ್ಥಿತಿ ಗತಿ ನೋಡಿದಾಗ ಕಂಡುಬರುವುದು ಹಸಿವು, ಬಾಯಾರಿಕೆ, ಕಿತ್ತು ತಿನ್ನುವ ಬಡತನ, ರೋಗಗಳಿಂದ ಸೊರಗಿದ ದೇಹ, ಮುಂದುವರಿದ ವರ್ಗದವರ ಅಮಾನವೀಯ ಶೋಷಣೆ, ಮತೀಯ ಗಲಭೆಗಳು, ಅವುಗಳಿಂದಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಸಮಾಜಘಾತಕ ಶಕ್ತಿಗಳು, ಭ್ರಷ್ಟ ಅಧಿಕಾರಿಗಳು ಜೊತೆಗೆ ಅವರ ನೆರಳಾಗಿ ನಿಂತಿರುವ ಹೊಲಸು ರಾಜಕೀಯ. ಗ್ರಾಮೀಣ ಜನರ ಬದುಕು ಮುಖ್ಯವಾಗಿ ಕೃಷಿಯನ್ನವಲಂಬಿಸಿದೆ. ರೈತರು ದೇಶದ ಬೆನ್ನಲಬು. ಇದು ಚಿಕ್ಕಂದಿನಿಂದಲೂ ನಮ್ಮಗೆ ಹಿರಿಯರು ಹೇಳಿಕೊಂಡು ಬಂದಿರುವ ಮಾತು. ದೇಶದ ಬೆನ್ನಲಬು ಮಾತ್ರವಲ್ಲ, ಅನ್ನದಾತ. ನಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ಮುಖ್ಯವಾದ್ದು ಹಸಿವು. ನಮ್ಮ ಈ ಹಸಿವನ್ನು ನೀಗಿಸುವನೆ ರೈತ. ನಮ್ಮ ದೇಶದ ಬೆನ್ನಲಬು ರೈತ. ನಿಜ, ಆದರೆ ರೈತನ ಬೆನ್ನಲಬು? ನಾವು ತಿನ್ನುವ ಪ್ರತಿಯೊಂದು ಅಕ್ಕಿ ಕಾಳಿನ ಹಿಂದೆ ರೈತರ ಶ್ರಮವಿದೆ. ನಮ್ಮ ದೇಶದಲ್ಲಿ, ಅದರಲ್ಲೂ ದಕ್ಷಿಣ ಭಾಗದಲ್ಲಿ ಮಳೆಯಾದರಿತ ಕೃಷಿ ಹೆಚ್ಚು. ಇತ್ತೀಚಿನ ದಶಕಗಳಲ್ಲಿ, ಹವಮಾನ ವೈಪರಿತ್ಯದಿಂದಾಗಿ ಮಳೆ ರೈತನಿಗೆ ಕೈಕೊಡುತ್ತಲೇ ಬರುತ್ತಿದೆ. ಸಾಲ ಮಾಡಿ ಬೆಳೆ ಬೆಳೆದ ರೈತನಿಗೆ ಸರಿಯಾದ ಸಮಯಕ್ಕೆ ಮಳೆ ಬರದೆ ಇದ್ದರೆ, ಪರ್ಯಾಯ ವ್ಯವಸ್ಥೆಯು ಇಲ್ಲದಾಗಿ ರೈತ ಕಂಗಾಲಾಗುತ್ತಾನೆ. ಕೊನೆಗೆ ಆತ್ಮ ಹತ್ಯೆಗೆ ಶರಣಾಗುತ್ತಾನೆ. ಇವತ್ತು ಮಳೆ, ರೈತರು ಬೆಳೆ ಬೆಳೆಯಲು ಬೀಜ ಬಿತ್ತಿದ್ದಾಗ ಬರದೆ ಕೈ ಕೊಟ್ಟರೆ, ಮುಂದೆ ಬೆಳೆ ಬಂದಾಗ ಅದನ್ನು ಪಡೆದುಕೊಳ್ಳಲು ಸಾದ್ಯವಾಗದಂತೆ ಪ್ರವಾಹದ ರೀತಿಯಲ್ಲಿ ಬಂದು ಕೈಗೆ ಬಂದ ಬೆಳೆ ಬಾಯಿಗೆ ಬರದಂತೆ ಮಾಡುತ್ತಿದೆ. ಒಟ್ಟಿನಲ್ಲಿ ಮಳೆಗಾಲ ರೈತನಿಗೆ ಅನೂಕುಲಕ್ಕಿಂತ ಅನಾನುಕೂಲವನ್ನೆ ಜಾಸ್ತಿ ಮಾಡುತ್ತಿದೆ.
ಕಳೆದ ಹದಿನೈದು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ, ಐದು ಲಕ್ಷಕ್ಕೂ ಹೆಚ್ಚು. ಕೃಷಿ ವಿಜ್ನಾನಿಗಳ ಸಂಶೋಧನೆಗಳು ರೈತರಿಗೆ ಅನುಕೂಲ ಮಾಡಿದ್ದಿಕ್ಕಿಂತ ಹೆಚ್ಚಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಉಪಯೊಗವಾಗಿದ್ದೆ ಜಾಸ್ತಿ. ಕಂಪನಿಗಳು ಯಾವ ಬೆಲೆ ಇಟ್ಟರೂ, ಆ ಬೆಲೆಗೆ ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕ ಪಡೆಯಲೇ ಬೇಕಾಗುತ್ತದೆ. ರೈತರಿಂದಲೇ ನಾವು ಬದುಕು ಸಾಗಿಸುತ್ತಿದ್ದೇವೆ. ರೈತರನ್ನು ತೋರಿಸಿಕೊಂಡೆ ರಾಜಕೀಯ ಪಕ್ಷಗಳು ಬೆಳೆದುಕೊಂಡು ಹೋಗುತ್ತಿದೆ, ನಮ್ಮ ರೈತರಿಂದಲೇ ನಮ್ಮ ದೇಶದ ಆರ್ಥಿಕತೆ ಹೆಚ್ಚುತಿರುವುದು. ರೈತನಿಂದ ನಮಗೆ ಇಷ್ಟೆಲ್ಲಾ ಉಪಯೋಗವಿದ್ದರು, ಇಂದು ರೈತನಿಗೆ ಸಿಗುತ್ತಿರುವ ಬಹುಮಾನ ಸಾವು. ಇತ್ತೀಚೆಗೆ ಕಬ್ಬು ಬೆಳೆಗಾರರು, ಸಾಲ ಬಾಧೆಗೆ ಹೆದರಿ ಸಾವಿಗೆ ಶರಣಾಗುತ್ತಿರುವ ರೈತರಿಂದಾಗಿ, ಕರ್ನಾಟಕವು ದೇಶದಾದ್ಯಂತ ಸುದ್ದಿ ಮಾಡಿದೆ. ನಮ್ಮ ರಾಜ್ಯದ ಬಹುತೇಕ ಬೆಳೆಗಾರರು ನೀರಾವರಿ ಅಥವಾ ಕೊಳವೆಬಾವಿ ಆಧರಿಸಿ ಕಬ್ಬು ಬೆಳೆಯುತ್ತಾರೆ. ರೈತ ಮತ್ತು ಆತನ ಕುಟುಂಬದ ಸದಸ್ಯರೆಲ್ಲ ವರ್ಷ ಪೂರ್ತಿ ಹೊಲದಲ್ಲಿ ತಮ್ಮೆಲ್ಲ ಸಮಯ, ಹಣ ಖರ್ಚು ಮಾಡುವುದರ ಜೊತೆಗೆ, ಬೆವರು ಸುರಿಸಿ ಕಷ್ಟ ಪಡುತ್ತಾರೆ. ಫಸಲು ಕೈಗೆ ಬರುವ ಹೊತ್ತಿಗೆ ಬೆಲೆ ಕುಸಿಯುತ್ತದೆ. ಸಕ್ಕರೆ ಕಾರ್ಖಾನೆಗಳು ಸಕಾಲಕ್ಕೆ ಹಣ ಪಾವತಿಸುವುದಿಲ್ಲ. ಕಬ್ಬು ಕಡಿದರೆ ಕೂಲಿಯೂ ಗಿಟ್ಟದಂತಹ ಸ್ಥಿತಿ ಎದುರಾದಾಗ ಹತಾಶನಾದ ರೈತ ಬೆಳೆಗೆ ಬೆಂಕಿ ಹಚ್ಚಲು ಮುಂದಾಗುತ್ತಾನೆ. ಇಂದು ಬಹುತೇಕ ರೈತರ ಪರಿಸ್ಥಿತಿ ಇದೇ ರೀತಿಯಲ್ಲಿ ಇದೆ.
ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಕಾರ್ಮಿಕರ ಕೂಲಿಗಾಗಿ ರೈತರು ಹೆಚ್ಚಿನ ಬಡ್ಡಿಯಾದರು ಪರವಾಗಿಲ್ಲ ಎಂದು ಸಾಲ ಪಡೆದಿರುತ್ತಾರೆ. ಇನ್ನೊಂದೆಡೆ ಮಕ್ಕಳ ಶಾಲಾ ಶುಲ್ಕ, ಆಸ್ಪತ್ರೆ ವೆಚ್ಚ, ಕೌಟುಂಬಿಕ ಧಾರ್ಮಿಕ ಕಾರ್ಯಕ್ರಮಗಳು, ಹಬ್ಬ ಹರಿದಿನಗಳು, ಮದುವೆ, ಮಕ್ಕಳ ಜನನ, ಹಿರಿಯರ ಸಾವು ಮತ್ತಿತರ ಉದ್ದೇಶಗಳಿಗೆ ಅವರಿಗೂ ಹಣದ ಅಗತ್ಯ ಇದ್ದೇ ಇರುತ್ತದೆ. ವರ್ಷ ಪೂರ್ತಿ ಕಷ್ಟ ಪಟ್ಟು ಬೆಳೆಯುವ ಬೆಳೆ ಚೆನ್ನಾಗಿ ಆಗಿ, ಅದು ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಗೆ ಮಾರಾಟವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಎಲ್ಲವು ಮಾಡುತ್ತಾರೆ. ಬರುವ ನೋವುಗಳನ್ನು ಒಳಗೊಳಗೇ ನುಂಗಿಕೊಂಡು, ಮೇಲ್ನೋಟಕ್ಕೆ ನಲಿಯುತ್ತಾ ಜೀವನ ಸಾಗಿಸುತ್ತಾರೆ. ಇಂದು ಅತ್ಯಂತ ಬಡ ರೈತರ ಆಸೆ ಆಕಾಂಕ್ಷೆಗಳೂ ಹೆಚ್ಚಿವೆ. ಹಾಗೆಯೇ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸಬೇಕೆಂದು ಸಾಲ ಮಾಡಿಯಾದರೂ ಸೇರಿಸುತ್ತಾರೆ. ತಮ್ಮ ಮಕ್ಕಳು ಒಳ್ಳೆಯ ಗುಣಮಟ್ಟದ ವಿದ್ಯೆ ಕಲಿಯಲಿ ಎಂದು ಬಯಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಅಂಶವೇ ಇದಕ್ಕೆ ಕಾರಣ. ಸರ್ಕಾರಿ ಆಸ್ಪತ್ರೆಗಳದ್ದೂ ಇದೇ ಕಥೆ. ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ದೊರೆಯುವಂತೆ, ಇಲ್ಲಿಯೂ ಉಚಿತ ಸೇವೆ ದೊರೆಯುತ್ತಿದ್ದರೂ ಬಹುತೇಕರು ಅಲ್ಲಿಗೆ ಹೋಗಲು ಬಯಸುವುದಿಲ್ಲ. ಸಾಲ ಮಾಡಿಯಾದರೂ ಉತ್ತಮ ಆರೋಗ್ಯ ಸೇವೆ ಪಡೆಯಲು ಮುಂದಾಗಿ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ.
ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇ.60 ರಷ್ಟು ಜನ ರೈತರು ಎಂದು ನಮಗೆ ತಿಳಿದೇ ಇದೆ. ಪ್ರತಿ ವರ್ಷ ರಾಸಾಯನಿಕಗಳ ಬಳಕೆ ಜಾಸ್ತಿಯಾಗುತ್ತಿದೆ. ರೈತನಿಗೆ ರಾಸಾಯನಿಕ ಗೊಬ್ಬರಗಳ ಬಳಕೆ ಇಲ್ಲದೆ ಬೇಸಾಯ ಮಾಡಲಾರದಷ್ಟು ಅದಕ್ಕೆ ಅವಲಂಬಿತನಾಗಿದ್ದಾನೆ. ಮಿತಿ ಮೀರಿದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಬಂಜರಾಗುತ್ತದೆ. ಇದರಿಂದ ಕೃಷಿ ಉತ್ಪನ್ನಗಳ ಇಳುವರಿಕೆ ಕಡಿಮೆಯಾಗುತ್ತದೆ. ಬೆಳೆ ಬಂದಂತಹುಗಳಿಗೆ ಸರಿಯಾದ ಮಾರುಕಟ್ಟೆ ದರ ಸಿಗುವುದಿಲ್ಲ. ಯಾವ ಬೆಳೆ ಯಾರು ಎಷ್ಟೆಷ್ಟು ಬೆಳೆಯಬೇಕು ಎನ್ನುವದರ ಬಗ್ಗೆ ನಮ್ಮಲಿ ಸರಿಯಾದ ನೀತಿಗಳು, ಅರಿವು ಇಲ್ಲದ ಕಾರಣ ಎಲ್ಲರೂ ಒಂದೇ ರೀತಿಯ ಬೆಳೆ ಬೆಳೆಯುತ್ತಾರೆ. ಇದರಿಂದಲೇ ಸರಿಯಾದ ಬೆಲೆ ಸಿಗುತ್ತಿಲ್ಲ. ಪರಿಣಾಮ ರೈತ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾನೆ. ಇದರ ಜೊತೆಗೆ ಅಧಿಕ ರೈತರು ತಮ್ಮ ಕೃಷಿ ಬಿಟ್ಟು, ಕೆಲಸ ಹುಡುಕಿ ಕೊಂದು ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ.
ರೈತರ ಆತ್ಮಹತ್ಯೆ ಹೆಚ್ಚುತ್ತಲೇ ಇದೆ, ಪ್ರತಿನಿತ್ಯ ನೋಡುತ್ತಲೇ ಇದ್ದೀವಿ. ಇದು ನಿನ್ನೆ ಮೊನ್ನೆಯ ವಿಷಯವಲ್ಲ! ದಶಕಗಳಿಂದ ಕ್ರಮೇಣವಾಗಿ ಆಗುತ್ತಲೇ ಇದೆ. ಇದಕ್ಕೆ ಕೊನೆ ಎಂದು? ಈ ಪ್ರೆಶ್ನೆಗೆ ಉತ್ತರ ಸಿಗುವುದು ಕಷ್ಟಕರ. ಇತ್ತೀಚಿನ ದಿನಗಳಲ್ಲಿ ರೈತನು ತನ್ನ ಎಲ್ಲ ಕೃಷಿ ಚಟುವಟಿಕೆಗಳಿಗೆ ಬೇರೆ ಅವರ ಮೇಲೆಯೇ ಅವಲಂಬಿಯಾಗಿದ್ದಾನೆ. ತನ್ನ ಭೂಮಿಗೆ ಬೇಕಾದ ಬೀಜಗಳನ್ನು, ಗೊಬ್ಬರಗಳನ್ನು ತಾನೇ ಉತ್ಪಾದಿಸಿಕೊಳ್ಳುವಂತಾಗಬೇಕು. ರಾಸಾಯನಿಕ ಗೊಬ್ಬರಗಳ, ಕ್ರಿಮಿನಾಶಕಗಳ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತಾ, ಪೂರ್ತಿಯಾಗಿ ನಿಷೇಧಿಸ ಬೇಕು. ರೈತರಾದವರು ತಮ್ಮದೇ ಆದ ಸಂಘಟನೆಗಳನ್ನು ಮಾಡಿಕೊಂಡು ಯಾರು ಯಾರು ಯಾವ ಯಾವ ಬೆಳೆಗಳನ್ನು ಎಷ್ಟೆಷ್ಟು ಬೆಳೆಯಬೇಕು ಎಂಬುದರ ನಿರ್ಧಾರ ತೆಗದುಕೊಳ್ಳಬೇಕು. ಇದರಿಂದ ಬೆಳೆ ಬೆಳೆದರೆ ಬೆಲೆ ಕುಸಿತದ ಭಯವು ಇರುವುದಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ರೈತನ ಉದ್ಧಾರ ಮಾಡುತ್ತೇವೆ ಎಂದು ಆಶ್ವಾಸನೆ ನೀಡುವ ರಾಜಕಾರಣಿಗಳ ಮಾತನ್ನು ನಂಬದಿರಿ. ಇಲ್ಲಿಯವರೆಗೂ ನಿಮ್ಮನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳಿ ತಮ್ಮ ಅಡಿಯಲ್ಲಿ ಇಟ್ಟುಕೊಂಡಿದ್ದಾರೆ. ಅವರಿಗೆ ರೈತರು ಸ್ವಾವಲಂಭಿಗಳಾಗಿ ಬದುಕುವುದು ಇಷ್ಟವಿಲ್ಲಾ. ಇನ್ನು ಕೃಷಿ ಸಂಶೋಧಕರು ಯಾವುದಾದರೂ ಕಂಪನಿಯ ಉತ್ಪನ್ನ ಬಳಸಿ, ಇದನ್ನ ಬಳಸಿ ಎಂದು ಬಂದರೆ, ಉಗಿದು ಕಳುಹಿಸಿ. ಕೃಷಿ ಸಂಶೋಧನೆಗಳು ಯಾವಾಗಲೂ ರೈತರನ್ನು ಸ್ವಾವಲಂಬಿಯಾಗಿಸುವ ಹಾಗೆ ಇದ್ದರೆ ಮಾತ್ರ ಅದನ್ನು ರೈತರು ಬೆಂಬಲಿಸಬೇಕು.
ಕೊನೆಯದಾಗಿ, ಕಷ್ಟಕಾಲದಲ್ಲಿ ರೈತರಿಗೆ ಮಾನಸಿಕವಾಗಿ ಹಾಗು ಆರ್ಥಿಕವಾಗಿ ಸಹಾಯ ದೊರಕಿಸಿಕೊಡಲು ಸರ್ಕಾರ ಹಾಗು ಸಂಘ ಸಂಸ್ಥೆಗಳು ಶ್ರಮಿಸಬೇಕು. ನಾವು ತಿನ್ನುವ ಪ್ರತಿ ಅಕ್ಕಿ ಕಾಳಿನ ಹಿಂದೆ, ಒಬ್ಬ ರೈತನ ಒಂದು ವರ್ಷದ ಕಷ್ಟ ಫಲವಿದೆ. ಏನು ಮಾಡಿದರು ನಮ್ಮಿಂದ ರೈತರ ಋಣ ತೀರಿಸಲಾಗದು. ನಮ್ಮ ರೈತರ ಮೇಲೆ ನಮ್ಮಗೆ ಅಪಾರ ಗೌರವ ಹಾಗು ಘರ್ವ ಇದೆ. ರೈತರು ಸಮಸ್ಯೆಗಳಿಂದ ಹೊರಬರಲು ತಮ್ಮಲ್ಲೇ ಪರಿಹಾರ ಇದೆ. ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ದೃಡ ಸಂಕಲ್ಪಕ್ಕೆ ಬರದಿರಿ! ನಿಮ್ಮನ್ನು ನಂಬಿಕೊಂಡು ನಿಮ್ಮ ಸಂಸಾರವಿದೆ. ನಿಮ್ಮ ಸೇವೆ ಅನಿಯಮಿತ. ನಿಮ್ಮಗೆ ನನ್ನ ಅನಂತಾಂತ ಧನ್ಯವಾದಗಳು.