ಅಂಕಣ

ನಮ್ಮ ನಾಳೆಗಾಗಿ ತಮ್ಮ ಭವಿಷ್ಯವನ್ನು ಬಲಿಕೊಟ್ಟವರು

ಈ ಜೂನ್ ಬಂತೆಂದರೆ ಸಾಕು. ದೊಪ್ಪನೆ ಸುರಿಯುವ ಮಳೆಯ ಜೊತೆಗೆ ಆ ಯುಧ್ಧವೂ ನೆನಪಿಗೆ ಬರುತ್ತದೆ. ಜುಲಾಯಿ ಬಂತೆಂದರೆ ಆ ನೆನಪುಗಳು ಇನ್ನೂ ಹೆಚ್ಚಾಗಿ ಮನಸ್ಸಿನಲ್ಲಿ ರೋಷ, ಕೆಚ್ಚು, ನಮ್ಮ ಸೈನಿಕರ ಬಗೆಗೆ ಹೆಮ್ಮೆ, ಮಡಿದವರ ಬಗೆಗೆ ಗೌರವ, ಅವರ ಕುಟುಂಬದ ಮೇಲೆ ಅನುಕಂಪ, ವಿಜಯ ದಿವಸದ ಸಂತಸ ಎಲ್ಲವೂ ಒಟ್ಟಿಗೆ ಮೂಡುತ್ತದೆ. ನಮ್ಮ ಭಾಯೀ ಭಾಯೀಗಳ ಕುತಂತ್ರ, ತಮ್ಮದೆಲ್ಲವನ್ನೂ ನಮಗೋಸ್ಕರ ತ್ಯಾಗ ಮಾಡಿ ದೇಶಕ್ಕಾಗಿ ಜೀವಿಸುವ ನಮ್ಮ ಸೈನಿಕರ ಅಪ್ರತಿಮ ಸಾಹಸವನ್ನು ತೋರಿಸಿಕೊಟ್ಟ ಯುಧ್ಧ ಕಾರ್ಗಿಲ್ ಯುಧ್ಧ.

ಬಹುಶಃ ನಮ್ಮ ಕಾಲಘಟ್ಟದಲ್ಲಿ ಸಂಭವಿಸಿದ, ನಾವೆಲ್ಲರೂ ಹತ್ತಿರದಿಂದ ಗಮನಿಸಿದ ಒಂದೇ ಯುಧ್ಧವಿದು. ಆವತ್ತು ನಮ್ಮನ್ನು ನೇರವಾಗಿ ಎದುರಿಸಲಾಗದ ಪಾಕಿಸ್ತಾನ ಸದ್ದಿಲ್ಲದೆ ಕಾರ್ಗಿಲ್ ಬೆಟ್ಟದ ಮೇಲೇರಿತ್ತು. ಕಾಶ್ಮೀರವೆಂಬ ಸುಂದರ ಭೂಭಾಗಕ್ಕಾಗಿನ ತುಡಿತವೇ ಈ ಯುಧ್ಧದ ಮೂಲ ಜಾಡಾಗಿತ್ತು. ಈ ತುಡಿತವನ್ನು ಸಾಧಿಸುವುದಕ್ಕಾಗಿ ಕಹಳೆಯೂದದೆಯೇ ಸೈನಿಕರನ್ನು ಕಳುಹಿಸಿದ ಪಾಕಿಸ್ತಾನ ತನ್ನ ಹೇಡಿತನ ಮೆರೆಯಿತು.

ಅಷ್ಟಕ್ಕೂ ನಾವೇನು ಹೇಡಿಗಳಾ? ಪಾಕಿಸ್ತಾನ ಯುಧ್ಧಕ್ಕೆ ಸಕಲ ಸನ್ನಧ್ಧವಾಗಿ ಬಂದಿದೆ ಎಂದ ಮಾತ್ರಕ್ಕೆ ನಾವೇನು ಹೆದರಿ ಶರಣಾಗಿ ಬಿಡುತ್ತೇವೆಯೇ? ಯುಧ್ಧದ ಮುನ್ಸೂಚನೆಯೇ ಸಿಕ್ಕಿಲ್ಲ ಎಂಬ ಕಾರಣಕ್ಕೆ ಕೈಚೆಲ್ಲಿ ಬಿಡುತ್ತೇವೆಯೇ? ನೆವರ್! ಕಾರ್ಗಿಲ್ ಪ್ರದೇಶವನ್ನು ಪಾಕ್ ಸೈನಿಕರು ಆಕ್ರಮಿಸಿಕೊಂಡಿದ್ದಾರೆ ಎಂಬ ಸಂದೇಶ ತಲುಪಿದ ಕೂಡಲೇ ಆಗಿನ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್.ಡಿ.ಎ ಸರ್ಕಾರ ಕ್ಯಾಬಿನೆಟ್ ಮೀಟಿಂಗ್ ನಡೆಸಿ ಅಧಿಕೃತವಾಗಿ ಯುದ್ಧ ಘೋಷಣೆ ಮಾಡಿತು. ಮುಂದೆ ನಡೆದಿದ್ದೆಲ್ಲವೂ ಇತಿಹಾಸ.

ಆದರೆ ಒಂದು ನಮ್ಮ ಗಮನದಲ್ಲಿರಬೇಕು. ಯುಧ್ಧವಾಗಲೀ, ಬೇರೆ ಯಾವುದೇ ಕೆಲಸವಾಗಲಿ, ಅದು ಘೋಷಣೆ ಮಾಡಿದಷ್ಟು ಸುಲಭದ ಮಾತಲ್ಲ. ಆಳುವವರು ಗರ್ವದಿಂದ ಆದೇಶ ಕೊಟ್ಟಾಕ್ಷಣಕ್ಕೆ ಎಲ್ಲವೂ ನಾವಂದುಕೊಂಡಂತೆ ಆಗುವುದಿಲ್ಲ. ಹೇಳಿ ಕೇಳಿ ಅದು ಕಾರ್ಗಿಲ್. ಕಾಶ್ಮೀರವೇ  ಕಡಿದಾದ ಕಣಿವೆಗಳ ನಾಡು. ಕಡಿದಾದ ಬೆಟ್ಟ ಗುಡ್ಡಗಳು, ಸಾಗಬೇಕಾದ ಹಾದಿಯಲ್ಲಿಯೇ ಅಡ್ಡಲಾಗಿ ಹರಿಯುವ ನದಿ, ಒಮ್ಮೊಮ್ಮೆ ಭಯಂಕರ ಮಳೆ, ಮತ್ತೆ ಕೆಲವೊಮ್ಮೆ ಭೀಕರ ಚಳಿ, ಕ್ಷಣ ಕ್ಷಣವೂ ಬದಲಾಗುತ್ತಿರುವ ವಾತಾವರಣ, ಬೆನ್ನಿನ ಮೇಲೆ ಮಣ ಬಾರದ ಯುಧ್ದ ಸಲಕರಣೆಗಳು, ಆಹಾರ ಸಾಮಾಗ್ರಿಗಳನ್ನೆಲ್ಲಾ ಹೊತ್ತುಕೊಂಡು ಬೆಟ್ಟ ಹತ್ತುತ್ತಾ ಯುಧ್ದ ಮಾಡಬೇಕು. ಪಾಕಿಗಳು ಮೇಲಿನಿಂದಿಳಿದು ಬರುತ್ತಿದ್ದಾರೆ. ಶತ್ರುಗಳು ಯಾವ ಕ್ಷಣದಲ್ಲಾದರೂ ಧುತ್ತನೆ ಎದುರಾಗಬಹುದು. ಗುಂಡು ಹಾರಿಸಬಹುದು, ಬಾಂಬ್ ಸಿಡಿಸಬಹುದು, ಗ್ರೇನೇಡ್ ದಾಳಿ ಮಾಡಬಹುದು. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು.  ಎಲ್ಲವೂ ಅನಿಶ್ಚಿತ.

ಶತ್ರುಗಳು ಎದುರಾದರೆ ಗುಂಡಿನ ಮೊರೆತ, ಅಷ್ಟರಲ್ಲಿ ತನ್ನ ಕಣ್ಣ ಮುಂದೆಯೇ ಅತ್ಯಂತ ಗೌರವದ ಹಿರಿಯ ಅಧಿಕಾರಿಯೋ, ತನ್ನ ಜೊತೆ ಜೊತೆಗೇ ಸಾಗುತ್ತಿದ್ದ ಆತ್ಮೀಯ ಕಿರಿಯ ಅಧಿಕಾರಿಯೋ ಗುಂಡು ತಗುಲಿ ನರಳಿ ಪ್ರಾಣ ಬಿಡುತ್ತಿದ್ದರೂ ಅವರತ್ತ ಹೋಗಲು ಸಾಧ್ಯವಿಲ್ಲ. ಹೋದರೆ ತನಗೆ ಉಳಿಗಾಲವಿಲ್ಲ ಮತ್ತು ಅದರಿಂದ ಭಾರತ ಮಾತೆಗೂ ಆಪತ್ತು ತಪ್ಪಿದ್ದಲ್ಲ. ಅಬ್ಬಬ್ಬಾ..! ಪ್ರಾಣತ್ಯಾಗಕ್ಕೂ ಮುನ್ನ ತನ್ನ ಮನಸ್ಸಿನ ಭಾವನೆಗಳನ್ನೂ ತ್ಯಾಗ ಮಾಡಬೇಕು. ಎಂತಹಾ ಸನ್ನಿವೇಷವದು?? ಅಂತಹಾ ಕಠೋರ ಪರಿಸ್ಥಿತಿಯಲ್ಲಿ ಸಮಯ ಪ್ರಜ್ನೆ  ಮೆರೆದು, ಶ್ರಧ್ಧೆಯಿಂದ ತಮ್ಮ ಕರ್ತವ್ಯವನ್ನೂ ಪೂರೈಸಿದ, ಪ್ರಾಣತ್ಯಾಗ ಮಾಡಿ ತಾಯಿ ಭಾರತಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಆ ಅಪ್ರತಿಮ ವೀರ ಸೇನಾನಿಗಳನ್ನು ಹೇಗೆ ಕೊಂಡಾಡುವುದು??

ಮೆ.ಕಮಲೇಶ್ ಪಾಠಕ್,ಮೆ.ಪದ್ಮಪಾಣಿ ಆಚಾರ್ಯ, ಮೆ.ರಾಜೇಶ್ ಸಿಂಘ್ ಅಧಿಕಾರಿ, ಕ್ಯಾ.ಅಮೋಲ್ ಕಾಲಿಯಾ, ಲೆ.ವಿನತಾಂತ್ ತಾಪರ್, ಸಿಪಾಯಿ ದಿನೇಶ್ ಭಾಯ್, ಸಿಪಾಯಿ ಹೀರೇಂದ್ರಗಿರಿ ಗೋಸ್ವಾಮಿ, ಸಿಪಾಯ್ ಅಮರಿಶ್ ಪಾಲ್ ಭಂಗಿ, ಹವಾಲ್ದಾರ್ ಬಲ್ದೇವ್ ರಾಜ್, ಸುಬೇದಾರ್ ಬನ್ವಾರ್ ಸಿಂಘ್ ರಾಥೋಡ್, ಸಂಜಯ್ ಕುಮಾರ್,  ರಾಜ್ ಕಿಶೋರ್ ಸಾಹು, ಲೆ. ಸೌರಭ್ ಕಾಲಿಯಾ, ಕ್ಯಾ.ಹನೀಫುದ್ದೀನ್, ಮೆ.ಮರಿಯಪ್ಪನ್ ಸರವಣನ್, ಕ್ಯಾ.ಮನೋಜ್ ಕುಮಾರ್ ಪಾಂಡೆ, ಕ್ಯಾ.ವಿಕ್ರಮ್ ಭಾತ್ರ… ಅಬ್ಬಬ್ಬಾ.. ಪ್ರಾಣತ್ಯಾಗ ಮಾಡಿದವರು ಒಬ್ಬರಲ್ಲ, ಇಬ್ಬರಲ್ಲ. ಭರ್ತಿ ಐನೂರ ಇಪ್ಪತ್ತೇಳು ಮಂದಿ! ಅದರಲ್ಲಿ ಹೆಚ್ಚು ಕಡಿಮೆ ನಾನೂರು ಮಂದಿ ಮೂವತ್ತೈದು ವಯಸ್ಸಿನ ಒಳಗಿನವರೆಂದರೆ ಅದೆಂತಹಾ ಮಹಾತ್ಯಾಗ ಅಲ್ವಾ?  ಅನ್ನದಾನ, ನೇತ್ರದಾನ, ರಕ್ತದಾನ ಹಾಗು ಸತ್ತ ಬಳಿಕ ಮಾಡುವ ದೇಹದಾನ, ಇವುಗಳೆಲ್ಲಾ ದಾನಗಳಲ್ಲಿ ಅತ್ಯಂತ ಶ್ರೇಷ್ಟವಾದುದು ಎಂದು ಪರಿಗಣಿತವಾಗಿದೆ. ಆದರೆ ಜೀವಂತವಾಗಿದ್ದುಕೊಂಡೇ ಪರರಿಗಾಗಿ ಪ್ರಾಣದಾನ ಮಾಡುವುದಕ್ಕಿಂತ ಮಿಗಿಲಾದ ದಾನ ಯಾವುದಿದೆ ಹೇಳಿ?

ಕಾರ್ಗಿಲ್ ಯುಧ್ಧದಲ್ಲಿ ಮಡಿದವರಲ್ಲಿ ಹಲವರು ನವ ವಿವಾಹಿತರಿದ್ದರು. ಮಧುಚಂದ್ರಕ್ಕೆ ತೆರಳಿ ಸುಮಧುರ ದಾಂಪತ್ಯವನ್ನು ಸವಿಯುವ ಕನಸು ಕಟ್ಟಿಕೊಂಡವರಿದ್ದರು. ಕೆಲವರಿಗೆ ನಿಶ್ಚಿತಾರ್ಥವಾಗಿ ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಲಿತ್ತು. ಅವರ ಆಗಮನಕ್ಕಾಗಿ ಇಡೀ ಕುಟುಂಬವೇ ಕಾತರದಿಂದ ಕಾಯುತ್ತಿತ್ತು.  ಕೆಲವರು ಆಗಷ್ಟೇ ತಂದೆಯಾದವರು ತನ್ನ ಮಗುವನ್ನು ನೋಡುವುದಕ್ಕಾಗಿ ಹಂಬಲಿಸುತ್ತಿದ್ದರು.ಮತ್ತೆ ಕೆಲವರು ಮಗುವಿನ ಆಗಮನದ ಪ್ರತೀಕ್ಷೆಯಲ್ಲಿದ್ದರು.  ಸರವಣನ್ ಎಂಬಾತ ತನ್ನ ತಂದೆ ತಾಯಿಗೆ ಒಬ್ಬನೇ ಮಗ. ಈತ ಸಾಯುವುದಕ್ಕೆ ಮುನ್ನ ಆತನ ತಂದೆ ಆಕ್ಸಿಡೆಂಟಿನಲ್ಲಿ ಮೃತಪಟ್ಟಿದ್ದರು. ಯುಧ್ಧದಲ್ಲಿ ಸಾಯುವುದರೊಂದಿಗೆ  ಆತನ ತಾಯಿ ಅನಾಥರಾದರು. ಕುಟುಂಬಕ್ಕೆ ಆಧಾರವಾಗಿದ್ದವನ ಕಳಕೊಂಡ ನಂತರ ಅವರ ಬದುಕು ದಿಕ್ಕಾಪಾಲಾಯಿತು. ಇವೆಲ್ಲಾ ಯುವಕರ ಕಥೆಯಾದರೆ ಹಿರಿಯ ಅಧಿಕಾರಿಗಳಾಗಿದ್ದವರು ಕೆಲವೇ ತಿಂಗಳುಗಳಲ್ಲಿ ನಿವೃತ್ತಿಯಾಗಿ ಈ ಜಗಳ ಜಂಜಾಟಗಳಿಲ್ಲದ ಸಂತೋಷದ ನಿವೃತ್ತಿ ಜೀವನ ಸಾಗಿಸುವ ಯೋಜನೆ ಹಾಕಿಕೊಂಡಿದ್ದರು. ಹೀಗೆ ಇಪ್ಪತ್ತೆರಡರ ಬಿಸಿರಕ್ತದ ತರುಣರನ್ನು ಹಿಡಿದು ಸೇನೆಯ ಹಲವಾರು ಹಿರಿಯ ಅಧಿಕಾರಿಗಳು ಆ ಯುಧ್ಧದಲ್ಲಿ ಪ್ರಾಣ ತ್ಯಾಗ ಮಾಡಿದರು. ನೂರಾರು ಸೈನಿಕರು ಗಾಯಗೊಂಡರು. ಕೈ, ಕಾಲು, ಕಣ್ಣು, ಕಿವಿಗಳನ್ನು ಕಳೆದುಕೊಂಡರು. ಕೆಲವರು ಜೀವನ ಪರ್ಯಂತ ಹಾಸಿಗೆ ಹಿಡಿದರು. ಯುಧ್ಧಕೈದಿಯಾಗಿ ಸೆರೆಸಿಕ್ಕ ಸೌರಭ್ ಕಾಲಿಯಾರ ಕಣ್ಣುಗಳನ್ನು ಕಿತ್ತಿ ಚಿತ್ರಹಿಂಸೆ ನೀಡಲಾಗಿತ್ತು.  ನಮಗೆ ಇರುವ ಹಾಗೆ ಅಲ್ಲಿ ಮಡಿದ, ಗಾಯಗೊಂಡ ಪ್ರತಿಯೊಬ್ಬನಿಗೂ ಅವನದ್ದೇ ಆದ ಆಸೆ ಆಕಾಂಕ್ಷೆಗಳಿರುತ್ತವೆ. ತಮ್ಮ ಕುಟುಂಬನ್ನು ಸಂತೋಷದಿಂದ ನೋಡಿಕೊಳ್ಳಬೇಕು, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಅವರನ್ನು ಒಳ್ಳೆಯ ನಾಗರೀಕರನ್ನಾಗಿ ಮಾಡಬೇಕೆಂಬ ಹಂಬಲಗಳಿರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಇನ್ನೂ ಇನ್ನೂ ದೇಶ ಸೇವೆ ಮಾಡಬೇಕೆಂಬ ತುಡಿತವಿರುತ್ತದೆ, ಅಷ್ಟೆಲ್ಲಾ ಆಸೆ ಹಂಬಲಗಳಿರುವ ವ್ಯಕ್ತಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ರಾಣ ಹೋಗುತ್ತದೆ ಎಂದಾದಾಗ ಆತನಿಗೆ ಏನೆನಿಸಬಹುದು? ಸ್ವಲ್ಪ ಯೋಚಿಸೋಣ!

ಒಮ್ಮೆ ಇಮ್ಯಾಜಿನ್ ಮಾಡೋಣ.. ಮಳೆಗಾಲದಲ್ಲಿ ಜೋರಾಗಿ ಮಳೆ ಬಂದರೆ ‘ಅಯ್ಯೋ ಇದೇನು ದರಿದ್ರದ ಮಳೇನಪ್ಫಾ, ಒಮ್ಮೆ ನಿಲ್ಬಾರ್ದಾ’ ಎಂದು ಹಿಡಿಶಾಪ ಹಾಕುತ್ತೇವೆ ನಾವು. ಚಳಿಗಾಲದಲ್ಲಿ ‘ಉಫ್ ಎಂತಾ ಚಳಿ ಮಾರ್ರೆ’ ಎಂದು ಹಲುಬುತ್ತೇವೆ. ಬೇಸಗೆಯಲ್ಲಿ ‘ಯಾಕಾದ್ರೂ ಈ ಶೆಖೇನಪ್ಪಾ’ ಎಂದು ನಖಶಿಖಾಂತ ಉರಿದು ಹೋಗುತ್ತೇವೆ. ಹೀಗೆ ನಮ್ಮ ನಮ್ಮ ಜೀವನ ಮಾಡಿಕೊಂಡು ಸ್ವಾರ್ಥಿ ಜೀವನ ಮಾಡುವ ನಾವು ಎಂದಾದರೂ ಯೋಚಿಸಿದ್ದೇವಾ, ಅಲ್ಲಿ ಬಿಸಿಲಿನಲ್ಲಿ ಬೆವರು ಕಿತ್ತು ಬರುತ್ತಿದ್ದರೂ ಆಯಾಸಗೊಳ್ಳದೆ, ಚಳಿಯಲ್ಲಿ ಮರಗಟ್ಟಿ ಹೋಗುತ್ತಿದ್ದರೂ ಬೆಚ್ಚಗೆ ಮಲಗದೆ, ಮಳೆಯಲ್ಲಿ ಒದ್ದೆಯಾಗಿ ಜ್ವರ ಬಂದರೂ ವಿರಮಿಸದೆ ತಮ್ಮ ಪಾಡಿಗೆ ಕರ್ತವ್ಯ ಮಾಡುವ ಸೈನಿಕರ ಬಗ್ಗೆ ಎಂದಾದರೂ ಯೋಚಿಸುತ್ತೇವಾ? ದೇಶವಾಸಿಗಳ ನೆಮ್ಮದಿಗಾಗಿ ಊಟ ನಿದ್ದೆಯಿಲ್ಲದೆ ತಮ್ಮ ಮನೆಯವರಿಗೂ ನೆಮ್ಮದಿಯನ್ನು ಕೊಡದೆ ಗಡಿ ಕಾಯುತ್ತಿರುವವರ ಬಗ್ಗೆ ಕಿಂಚಿತ್ತಾದರೂ ಕಾಳಜಿ ನಮಗಿದೆಯಾ?

kargil-war-spot630

ಹ.. ನಾವ್ಯಾರೂ ಅವರನ್ನೆಲ್ಲಾ ಮರೆತಿಲ್ಲ ನಿಜ. ಅವರ ತ್ಯಾಗಕ್ಕಾಗಿ ಅವರಿಗೆಲ್ಲಾ ಮರಣೋತ್ತರವಾಗಿ ಪರಮವೀರ ಚಕ್ರ ಪ್ರಶಸ್ತಿ, ಶೌರ್ಯ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಿದ್ದೇವೆ. ಆದರೆ ಅದೆಲ್ಲಾ ಅವರ ಶೌರ್ಯ ಸಾಧನೆಗೆ, ಪ್ರಾಣತ್ಯಾಗಕ್ಕೆ ಸಮವಾಗುವ ನೈಜ ಪುರಸ್ಕಾರಗಳೇ? ಯಾಕೆಂದರೆ ಕಳೆದುಕೊಂಡಿರುವ ಪ್ರಾಣವನ್ನು ಮರಳಿ ಕೊಡಲು ನಮಗ್ಯಾರಿಗೂ ಸಾಧ್ಯವಿಲ್ಲ ಅಲ್ವಾ? ಆದರೂ ಅವರನ್ನೆಲ್ಲಾ ಒಂದು ಕ್ಷಣ ಸ್ಮರಿಸುವಾಗ ನಮ್ಮ ಕಣ್ಣಿಂದ ಒಂದೆರಡು ಹನಿ ಕಣ್ಣೀರು ಜಿನುಗಿದರೂ ಸಾಕು, ಅದುವೇ ನಾವು ಅವರಿಗೆ ಸಲ್ಲಿಸಬಹುದಾದ ಗೌರವ ಎಂದು ನಾನಂದುಕೊಂಡಿದ್ದೇನೆ.

ಕಡೇಯದಾಗಿ, ನಮ್ಮೆಲ್ಲರ ನಾಳೆಗಾಗಿ ತಮ್ಮ ಭವಿಷ್ಯವನ್ನೇ ಬಲಿಕೊಟ್ಟು ಅಮರರಾಗಿ ಹೋಗಿರುವ ಪ್ರತಿಯೊಬ್ಬರಿಗೂ ಮನಸಾ ಪ್ರಣಾಮಗಳು.  ಇವತ್ತಿನ ವಿಜಯ ದಿವಸಕ್ಕಾಗಿ ಭಾರತ ಮಾತೆಗೆ ತಮ್ಮನ್ನು ತಾವು ಅರ್ಪಿಸಿಕೊಂಡವರಿಗೆಲ್ಲಾ ಒಂದು ದೊಡ್ಡ ಸಲಾಂ

ಜೈ ಜವಾನ್ ಜೈ ಹಿಂದ್!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!