ಅಂಕಣ

ಕಾರ್ಗಿಲ್ ಕದನ: ದೇಶ ಉಳಿಸಿದ ಯೋಧನಿಗೆ ನಮನ

M_Id_405156_Kargil_War

ಮೇ 3, 1999. ಕಣ್ಮರೆಯಾಗಿದ್ದ ತನ್ನ ಯಾಕ್ ಒಂದನ್ನು ಹುಡುಕುತ್ತಾ ಕಾರ್ಗಿಲ್ ಜಿಲ್ಲೆಯ ತಶಿ ನಂಗ್ಯಾಲ್ ತನ್ನ ಗಾರ್ಕೋನ್ ಹಳ್ಳಿಯ ಸೀಮೆಯ ಗಿರಿಯೊಂದನ್ನೇರಿ ಹೊರಟಿದ್ದ. ಆಗವನಿಗೆ ಕಂಡದ್ದು ಆರು ಜನ ಸೈನಿಕರು. ಮೊದಲಿಗೆ ಭಾರತೀಯ ಸೈನಿಕರಿರಬಹುದು ಎಂದು ತನ್ನ ಪಾಡಿಗೆ ತಾನು ಹೊರಡಲೆತ್ನಿಸಿದ ಆತನಿಗೆ ಸಂಶಯ ಕಾಡಿತು. ಸಮವಸ್ತ್ರದ ವರ್ಣವನ್ನು ಸರಿಯಾಗಿ ಗಮನಿಸಿದವನಿಗೆ ಅದು ಭಾರತೀಯ ಸೈನಿಕರಲ್ಲ ಅನ್ನುವುದು ಸ್ಪಷ್ಟವಾಯಿತು. ಕೂಡಲೇ ಆತ ಸನಿಹದಲ್ಲಿದ್ದ ದೇಶದ ಸೇನಾನೆಲೆಗೆ ತೆರಳಿ ಸುದ್ದಿ ಮುಟ್ಟಿಸಿದ. ಘಟನೆಯ ಬಗ್ಗೆ ಸರಿಯಾದ ಅಂದಾಜಿರದ ಅಧಿಕಾರಿ, ಒಂದು ಸಣ್ಣ ಪಡೆಯನ್ನು ಕಳುಹಿಸಿದ. ಆದರೆ ಅವರಾರೂ ಜೀವಂತವಾಗಿ ಮರಳಲೇ ಇಲ್ಲ. ಆಗ ಅಧಿಕಾರಿಗೆ ಪರಿಸ್ಥಿತಿಯ ವಿಷಮತೆಯ ಅರಿವಾಯಿತು. ಇದು ಯುದ್ಧ! ಬಾರಿ ಬಾರಿ ಸೋತರೂ ಬುದ್ಧಿ ಬರದ ನಾಚಿಕೆ ಇರದ ವಾಮಮಾರ್ಗಗಳ ಮೂಲಕ ಪದೇ ಪದೇ ಭಾರತವನ್ನು ಛಿದ್ರಗೊಳಿಸಲು  ಯತ್ನಿಸುತ್ತಿರುವ ಅದೇ ಪಾಪಿ ಪಾಕಿಸ್ತಾನದಿಂದ ಮಗದೊಮ್ಮೆ ನೇರ ಯುದ್ಧ!

ಅದೇನು ಕಾಲು ಕೆರೆದು, ಜಗಳ ತೆಗೆದು ನಾವಾಗಿ ಮೈಮೇಲೆ ಎಳೆದುಕೊಂಡ ಯುದ್ಧವಲ್ಲ. ಲಾಹೋರಿಗೆ ಪ್ರಧಾನಿ ಅಜಾತಶತ್ರು  ಅಟಲ್ ಬಿಹಾರಿ ವಾಜಪೇಯಿ ಬಸ್ ಯಾತ್ರೆ ಕೈಗೊಂಡ ಬಳಿಕ ಉಭಯ ದೇಶಗಳ ನಡುವೆ ಹೊಸದೊಂದು ಭಾಯಿ-ಭಾಯಿ ಶಕೆಯೇ ಆರಂಭವಾಗಬಹುದೆಂದು ಭಾವಿಸಲಾಗಿತ್ತು. ಜಂಗ್ ನ ಹೋನೇ ದೇಂಗೇ ಎಂದು ವಾಜಪೇಯಿ ಅವರು ಫೆಬ್ರವರಿ 21 ರಂದು ಲಾಹೋರಿನಲ್ಲಿ ಪ್ರಧಾನಿ ನವಾಜ್ ಶರೀಫ್ ಭೇಟಿಯ ಬಳಿಕ ಘೋಷಿಸಿದ್ದರು. ಭಾರತ ತನ್ನ ಮಾತಿನಂತೆಯೇ ನಡೆದುಕೊಂಡಿತು. ಆದರೆ ವಚನ ಬದ್ಧತೆ ಇಲ್ಲದ, ಪ್ರಾಮಾಣಿಕತೆ-ನಿಷ್ಟೆ-ಕೃತಜ್ಞತೆ ಎಂಬ ಪದಗಳ ಅರ್ಥವೇ ಅರಿಯದ ಕಪಟಿ ಪಾಕಿಸ್ತಾನ ಒಂದು ಕಡೆಯಿಂದ ವಾಜಪೇಯಿ ತೋರಿದ ಸ್ನೇಹ ಹಸ್ತಕ್ಕೆ ಕೈಚಾಚಿ ಇನ್ನೊಂದು ಕಡೆಯಿಂದ ಭಾರತದ ಬೆನ್ನಿಗೇ ಇರಿಯಿತು. ಅತ್ತ ಲಾಹೋರಿನಲ್ಲಿ ನವಾಜ್ ಶರೀಫ್ ಪ್ರಧಾನಿ ವಾಜಪೇಯಿ ಅವರ ಕೈಕುಲುಕುತ್ತಿರುವಾಗ ಇತ್ತ ಕಾರ್ಗಿಲ್, ಬಟಾಲಿಕ್, ದ್ರಾಸ್, ಮುಷ್ಕೊ ಕಣಿವೆಯುದ್ಧಕ್ಕೂ ಗಡಿನಿಯಂತ್ರಣ ರೇಖೆ ಅತಿಕ್ರಮಿಸಿ ಪಾಕ್ ಸೈನಿಕರು, ಮುಜಾಹಿದ್ದೀನ್ ಬಾಡಿಗೆ ಬಂಟರು ಅಡಗುದಾಣ ರಚಿಸಿಕೊಳ್ಳತೊಡಗಿದ್ದರು.

ಭಾರತ ಮಾನಸಿಕವಾಗಿ ಯುದ್ಧಕ್ಕೆ ಸಿದ್ಧವಾಗಿರಲಿಲ್ಲ. ಅತಿಕ್ರಮಣಕಾರಿಗಳು ಗಡಿನಿಯಂತ್ರಣ ರೇಖೆ ದಾಟಿ ನಮ್ಮ ಸೇನೆಯ ಮೇಲೆ ದಾಳಿ ನಡೆಸಿದಾಗ ಇಡೀ ದೇಶವೇ ಆಘಾತಗೊಂಡಿತು. ಅನಿರೀಕ್ಷಿತ ದಾಳಿಗೆ ನಮ್ಮ ಕೆಲವು ಸೈನಿಕರೂ ಪ್ರಾರಂಭದಲ್ಲಿ ಬಲಿಯಾದರು. ಆದರೆ ಆನಂತರ ನಡೆದದ್ದೇ ಬೇರೆ. ಮೈ ಕೊಡವಿ ಮೇಲೆದ್ದ ನಮ್ಮ ಸೈನ್ಯ ಶತ್ರುಗಳನ್ನು ಸದೆಬಡಿದು ಗಡಿಯಾಚೆತೊಲಗಿಸುವವರೆಗೆ ವಿಶ್ರಮಿಸಲಿಲ್ಲ.  ದ್ರಾಸ್-ಬಟಾಲಿಕ್, ಕಾರ್ಗಿಲ್, ಟೈಗರ್ ಹಿಲ್ ಗಳು ಅತ್ಯಂತ ದುರ್ಗಮವಾದ ಹುಲ್ಲು ಕಡ್ಡಿಯೂ ಬೆಳೆಯದ ಬರಡು ಪ್ರದೇಶಗಳು. ಅಲ್ಲಿ ರಸ್ತೆಗಳೇ ಇರಲಿಲ್ಲ. ಎತ್ತ ನೋಡಿದರತ್ತ ಹಿಮಾಚ್ಛಾದಿತ ಗಿರಿಶಿಖರಗಳು. ಒಂದೊಂದು ಪರ್ವತವೂ 15-18 ಸಾವಿರ ಅಡಿ ಎತ್ತರ. ಈ ಎತ್ತರವನ್ನು ಯೋಧರು ಕಾಲ್ನಡಿಗೆಯಲ್ಲೇ ಹತ್ತಬೇಕಾದ ಅನಿವಾರ್ಯತೆ. ಮಣಭಾರದ ಬಂದೂಕು, ಇತರ ಆಯುಧಗಳು, ತಮ್ಮ ಆಹಾರವನ್ನು ಬೆನ್ನ ಮೇಲೆ ಹೊತ್ತುಕೊಂಡು ಟೈಗರ್ ಹಿಲ್ ನ ತುದಿ ತಲುಪಲು ಒಬ್ಬ ಯೋಧನಿಗೆ ಕನಿಷ್ಟವೆಂದರೂ 11 ಘಂಟೆ ಹಿಡಿಯುತ್ತಿತ್ತು. ಸೀಮಿತ ಯುದ್ಧೋಪಕರಣ, ಪ್ರತಿಕೂಲ ಹವಾಮಾನ, ಶತ್ರು ಪಡೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳು – ಯಾವುದಕ್ಕೂ ನಮ್ಮ ಯೋಧರು ಹೆದರಿ ಕಂಗೆಡಲಿಲ್ಲ. ಕೊರೆಯುವ ವಿಪರೀತ ಚಳಿಯಲ್ಲಿ ನೆಹರು ವ್ಯಂಗ್ಯವಾಗಿ ಹೇಳುತ್ತಿದ್ದ ಒಂದಿಂಚೂ ಹುಲ್ಲು ಬೆಳೆಯದ ಪ್ರದೇಶದಲ್ಲಿ ನಮ್ಮ ಯೋಧರು ಅವಿತರವಾಗಿ ಶತ್ರುಪಡೆಯ ವಿರುದ್ಧ ಸೆಣಸಿದರು. ದುರ್ಗಮ ಶಿಖರಗಳನ್ನು ಕಷ್ಟಪಟ್ಟು ಏರಿ ಹೋರಾಡಿದ ನಮ್ಮ ಸೈನ್ಯಕ್ಕೆ ವಿಶ್ರಾಂತಿಯೆಂಬುದೇ ಇರಲಿಲ್ಲ. ಕೆಲವೊಂದು ಬಾರಿ ನಿರಂತರ ಮೂವತ್ತಾರು ಗಂಟೆಗಳಿಗೂ ಅಧಿಕ ಕಾಲ ಶತ್ರುಪಡೆಯೊಂದಿಗೆ ಸೆಣಸುವ ಅನಿವಾರ್ಯತೆ. ಸಾಧನಗಳ ಕೊರತೆಗಳು ನಮ್ಮ ಧೀರ ಯೋಧರ ಸಾಧನೆಗೆ ಅಡ್ಡಿಯಾಗಲಿಲ್ಲ. ಧೈರ್ಯ, ಪರಾಕ್ರಮ, ದೃಢ ನಿರ್ಧಾರ, ದೇಶಪ್ರೇಮಗಳೇ ಅವರ ಪ್ರಬಲ ಅಸ್ತ್ರಗಳಾದವು. ಆ ಅಸ್ತ್ರಗಳ ಮುಂದೆ ಪಾಕಿಗಳ ಬೇಳೆ ಬೇಯಲಿಲ್ಲ.

ಟೋಲೋಲಿಂಗ್! 16 ಸಾವಿರ ಅಡಿ ಎತ್ತರದ ಬರಡು ಹಿಮ ಶಿಖರ. ಅದರ ನೆತ್ತಿಯ ಮೇಲೆ ಕೂತಿದ್ದರು ಪಾಕಿಗಳು. ಟೋಲೋಲಿಂಗ್ ಅನ್ನು ವಶಪಡಿಸಿಕೊಳ್ಳಲು ಮೇ 14ರಂದು ಹೋದ ಒಂದು ಪಡೆ ತಿರುಗಿ ಬರಲೇ ಇಲ್ಲ. ಹಾಗೆ ಶುರುವಾದ ಯುದ್ಧ ಕಾರ್ಗಿಲ್ ನಲ್ಲಿ ಭಾರತದ ಸೈನ್ಯಕ್ಕೆದುರಾದ ಅತಿ ಪ್ರಮುಖ ಸವಾಲು. ಕಾರ್ಗಿಲ್ ನಲ್ಲಿ ಮರಣವನ್ನಪ್ಪಿದ ಅರ್ಧದಷ್ಟು ಭಾರತೀಯ ಯೋಧರು ಟೋಲೋಲಿಂಗ್ ಯುದ್ಧದಲ್ಲೇ ಪ್ರಾಣತೆತ್ತರು. ಟೋಲೋಲಿಂಗನ್ನು ವಶಪಡಿಸಿಕೊಳ್ಳುವುದು ಪ್ರಮುಖ ಅವಶ್ಯಕತೆಯಾಗಿತ್ತು. ಕಾರಣ ಅದು ಲೇಹ್ ನ ಹೆದ್ದಾರಿಯ ಪ್ರಮುಖ ಸಂಪರ್ಕ ಕೊಂಡಿ. ಅದರ ಮೇಲೆ ಕೂತು 200 ಕಿಲೋಮೀಟರುಗಳುದ್ದಕ್ಕೂ ನರಪಿಳ್ಳೆಯೂ ಮಿಸುಕಾಡದಂತೆ ಪಾರುಪತ್ಯ ನಡೆಸಬಹುದಿತ್ತು. ಆ ದುರ್ಗಮ ಪ್ರದೇಶದಲ್ಲಿದದ್ದು ಅದೊಂದೇ ರಸ್ತೆ. ಹಾಗಾಗಿ ಸೈನ್ಯ ಮುಂದುವರಿಯುವುದಕ್ಕಿಂತಲೂ ಮೊದಲು ಈ ಟೋಲೋಲಿಂಗ್ ಅನ್ನು ವಶಪಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆ ಭೀಕರ ಹೋರಾಟದಲ್ಲಿ ಮೊದಲಿಗೆ ಬೆಟ್ಟದ ಮೇಲೆ ಫಿರಂಗಿಗಳ ದಾಳಿ ನಡೆಸಿದ ಸೈನ್ಯ ಅದು ಫಲಿಸದಿದ್ದಾಗ ವಾಯುಸೇನೆಯನ್ನು ಬಳಸಬೇಕಾಯಿತು. ಕೊನೆಗೆ ಇಂಚಿಂಚೇ ತೆವಳುತ್ತಾ ಹೋದ ಭಾರತದ ಸೈನ್ಯ ಶಿಖರದ ನೆತ್ತಿಯನ್ನು ತಲುಪಿ ಅಳಿದುಳಿದ ಪಾಕಿಗಳನ್ನು `ಮಲ್ಲಯುದ್ಧದಲ್ಲಿ’ ಮುಗಿಸಿಹಾಕಿತು. ಹೀಗೆ ಜೂನ್ 12ರಂದು ಟೋಲೋಲಿಂಗ್ ಭಾರತದ ತೆಕ್ಕೆಗೆ ಬಂತು.  ಟೋಲೋಲಿಂಗ್ ಭಾರತದ ಕೈವಶವಾದ ಕೇವಲ ಆರು ದಿನಗಳಿಗೆ ಭಾರತ ಪಾಯಿಂಟ್ 4590, 5140, ರಾಕಿ ನಾಬ್ ಮತ್ತು ಹಂಪ್ ಗಳನ್ನು ಮುಕ್ತಗೊಳಿಸಿ ನಾಲ್ಕು ದಿಗ್ವಿಜಯಗಳನ್ನು ಸಾಧಿಸಿತು.

ಸೂರ್ಯ ರಶ್ಮಿ ಮೊದಲು ಮುತ್ತಿಕ್ಕುವ ಶಿಖರ 17 ಸಾವಿರ ಅಡಿ ಎತ್ತರದಲ್ಲಿರುವ ಪಾಯಿಂಟ್ 5140. ಜೂನ್ 19ರ ರಾತ್ರಿ 5140 ಶಿಖರವನ್ನು ಜಯಿಸಲೇಬೇಕೆಂದು ಲೆಫ್ಟಿನೆಂಟ್ ವಿಕ್ರಮ್ ಬಾತ್ರಾ ಮತ್ತು ಕ್ಯಾಪ್ಟನ್ ಸಂಜೀವ್ ಜಾಮ್ವಾಲ್ಗೆ ಆದೇಶ ನೀಡಲಾಗಿತ್ತು. ಬೆಳಗಾದರೆ ಶಿಖರವೇರಲು ಸಾಧ್ಯವೇ ಇಲ್ಲ. ಶತ್ರುವಿನ ಗುಂಡಿಗೆ ಎದೆಗೊಡಬೇಕಾಗುತ್ತದೆ.  ಕಡಿದಾದ ಭಾಗದ ಮೂಲಕ ಶಿಖರವನ್ನೇರುವಂತೆ ತಮ್ಮ ಸಂಗಡಿಗರಿಗೆ ನಿರ್ದೇಶನ ನೀಡಿದ ವಿಕ್ರಮ್, ತಾನು ಹಿಂದಿನಿಂದ ದಾಳಿ ಮಾಡಲು ನಿರ್ಧರಿಸಿದ. ಬೆಳಗಾಗುವಷ್ಟರಲ್ಲಿ ಉತ್ತುಂಗದಲ್ಲಿದ್ದ ಬಂಕರ್ ಸ್ಫೋಟಗೊಂಡಿತ್ತು. ಶತ್ರುಗಳು ಹೆಣವಾಗಿದ್ದರು. ವಿಕ್ರಮ್ ಬಾತ್ರಾ ನೇತೃತ್ವದ ‘13 ಜಮ್ಮು-ಕಾಶ್ಮೀರ್ ರೈಫಲ್ಸ್ ಸೇನಾ ತುಕಡಿ ನಿರ್ಣಾಯಕ ಕಾಳಗದಲ್ಲಿ ಗೆದ್ದಿತ್ತು. ಮುಂದೆ ಟೈಗರ್ ಹಿಲ್ಸ್ನ ಜಯಕ್ಕೆ ಕಾರಣವಾದದ್ದು ಇದೇ. ಮುಂದೆ ಇದೇ ಪಡೆ 16 ಸಾವಿರ ಅಡಿ ಎತ್ತರದಲ್ಲಿರುವ 4875 ಶಿಖರವನ್ನು ಜಯಿಸಿತು. ಮಂಜು ಮುಸುಕಿರುವ ವಾತಾವರಣದಲ್ಲಿ 80 ಡಿಗ್ರಿ ಕಡಿದಾದ ಶಿಖರವನ್ನು ಏರುವುದು ಸಾಮಾನ್ಯ ಮಾತಾಗಿರಲಿಲ್ಲ. ಜುಲೈ 8ರ ರಾತ್ರಿ ವಿಕ್ರಮ್ ಪಡೆ ಶತ್ರುಗಳ ಮೇಲೆ ಪ್ರತಿ ದಾಳಿ ಆರಂಭಿಸಿತು. ಶಿಖರದ ಪ್ರತಿ ಹಂತದಲ್ಲೂ ಇದ್ದ ಶತ್ರುಗಳ ಬಂಕರ್ಗಳನ್ನು ನಾಶಪಡಿಸುತ್ತಲೇ ಸಾಗಿದರು. ಬೆಳಗಾಗುವಷ್ಟರಲ್ಲಿ 4875 ಶಿಖರವೇನೋ ಕೈವಶವಾಯಿತು. ಆದರೆ ವಿಕ್ರಮನ ಪ್ರೇಯಸಿ ಮದುವೆಯ ಮುನ್ನವೇ ವಿಧವೆಯಾಗಿದ್ದಳು.

ಇನ್ನುಳಿದದ್ದು ದ್ರಾಸ್ ಕಣಿವೆಯ ಭಾರೀ ಪರ್ವತಶಿಖರ ಟೈಗರ್ ಹಿಲ್! ಟೋಲೋಲಿಂಗ್ ನಷ್ಟೇ ಪ್ರಾಮುಖ್ಯತೆಯುಳ್ಳ ಅದರ ಮುಕ್ತಿ ಯುದ್ಧವನ್ನು ಬಹುತೇಕ ಮುಗಿಸಲಿತ್ತು! ಟೋಲೋಲಿಂಗ್ ಅನ್ನು ವಶಪಡಿಸಿಕೊಂಡ ರಜಪುತಾನಾ ರೈಫಲ್ಸ್ ಬಟಾಲಿಯನ್ನಿಗೇ ಟೈಗರ್ ಹಿಲ್ ಅನ್ನು ವಶಪಡಿಸಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಉತ್ಸಾಹದಿಂದ ಮುನ್ನುಗ್ಗಿದ ಇಡೀ ತಂಡವನ್ನು ಪಾಕಿಗಳು ಹೊಡೆದುರುಳಿಸಿದ್ದರು. ಒಬ್ಬ ಯೋಗೇಂದರ್ ಸಿಂಗ್ ಕಿಸೆಯಲ್ಲಿದ್ದ ಕಾಯಿನ್ ಗುಂಡಿಗೆ ಅಡ್ಡವಾಗಿ ನಿಂತದ್ದರಿಂದ ಬಚಾವಾಗಿದ್ದರು! ಮೊದಲ ಪ್ರಯತ್ನ ಕೈಕೊಟ್ಟ ನಂತರ ಎರಡನೇ ಬಾರಿ 18 ಗ್ರೆನೇಡ್ಸ್ ಬೆಟಾಲಿಯನ್ ಅಪಾರ ಕಷ್ಟ ನಷ್ಟದ ಬಳಿಕ ಟೈಗರ್ ಹಿಲ್ನ ಮೇಲೆ ಭಾರತದ ಪತಾಕೆಯನ್ನು ಹಾರಿಸಿತು. ಜುಲೈ 14 ರಂದು ವಿಜಯ್ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದಾಗ ತ್ರಿವರ್ಣಧ್ವಜರಕ್ತದಲ್ಲಿ ಸಂಪೂರ್ಣ ತೊಯ್ದು ಕೆಂಪಾಗಿತ್ತು.

ಶತ್ರುಗಳು ದೇಶದ ಅಂಗುಲ ಅಂಗುಲವನ್ನು ಅತಿಕ್ರಮಿಸಿ ಬರುತ್ತಿರುವಾಗಲೂ ಬಡಿದಟ್ಟಲು ಸಿಗದ “ಅನುಮತಿ” ಎಂಬ ನಾಕಕ್ಷರ ಭಾರತೀಯ ಸೈನ್ಯವನ್ನು ಕಾಡಿದಷ್ಟು ಯಾರನ್ನೂಕಾಡಿರಲಿಕ್ಕಿಲ್ಲ! ಶತ್ರು ಎದುರು ನಿಂತು ಗುಂಡು ಹಾರಿಸುತ್ತಿರುವಾಗ ಕೈಯಲ್ಲಿ ಬಂದೂಕು ಹಿಡಿದಿದ್ದರೂ ಪ್ರಯೋಗಿಸಲು ಅನುಮತಿ ಇಲ್ಲದೆ ಅದೆಷ್ಟು ಯೋಧರು ಬಲಿಯಾಗಿರಬಹುದು. ಒಬ್ಬ ಯೋಧನಿಗೆಅದಕ್ಕಿಂತ ದೊಡ್ದ ಅವಮಾನ ಏನಿದೆ? “ವೋಟ್ ಬ್ಯಾಂಕ್ ರಾಜಕೀಯ” ಹೆಚ್ಚು ಬಲಿ ತೆಗೆದುಕೊಂಡದ್ದು ಸೈನಿಕರನ್ನೇ! ಕೇಂದ್ರದಲ್ಲಿ ಭಾಜಪಾ ಸರಕಾರ ಬಂದ ನಂತರ ಭಾರತೀಯರ ಯೋಧರಮುಖಕಮಲದಲ್ಲಿ ಮಂದಹಾಸ ಅರಳಿದೆ. ಶತ್ರುಗಳ ಉಪಟಳಕ್ಕೆ ಪ್ರತ್ಯುತ್ತರ ನೀಡಲು ಪೂರ್ಣ ಸ್ವಾತಂತ್ರ್ಯ ಲಭಿಸಿದೆ. ಇದು ಪರಿಪೂರ್ಣವಾಗಿ ಪ್ರಕಟಗೊಂಡದ್ದು ಜೂನ್ ಒಂಬತ್ತರಂದು ಬರ್ಮಾಕ್ಕೆ ನುಗ್ಗಿಉಗ್ರರನ್ನು ಸದೆಬಡಿದು ಇತ್ತೀಚೆಗೆ ಮಣಿಪುರದಲ್ಲಿ ಸೇನಾ ನೆಲೆ ಮೇಲೆ ದಾಳಿ ನಡೆಸಿ 18 ಯೋಧರ ಹತ್ಯೆಗೆ ಮಾಡಿದ  ತಕ್ಕ ಪ್ರತೀಕಾರದಲ್ಲಿ. ಆದರೆ ನಮ್ಮ ನೆಮ್ಮದಿ, ಮೋಜು, ತೆವಲು, ರಕ್ಷಣೆಗಾಗಿತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ ಸೈನಿಕರಿಗೆ ನಾವು ಎಷ್ಟು ಪ್ರೀತಿ ತೋರಿದ್ದೇವೆ? ಅವರ ಕೆಲಸವನ್ನು ಮೆಚ್ಚಿ ಮೈದಡವಿದ್ದೇವೆಯೇ? ಅವರ  ಶ್ರಮ, ರಕ್ತ, ಕಣ್ಣೀರಿಗೆ ಯಾವ ಬೆಲೆಯಿದೆ? ಆಹಾರದಪೊಟ್ಟಣದ ಬದಲು ನೂರಕ್ಕೂ ಹೆಚ್ಚು ಬುಲೆಟುಗಳನ್ನು ಹಿಡಿದುಕೊಳ್ಳಬಹುದೆಂದು ಆಹಾರವನ್ನು ತ್ಯಜಿಸಿ ದೇಶರಕ್ಷಣೆಗಾಗಿ ಹೋರಾಡಿದ ಆ ವೀರ ಯೋಧರಿಗಾಗಿ ಕನಿಷ್ಟ ಒಂದು ದಿನವನ್ನುಮೀಸಲಿಡಲಾರೆವೇ? ಈ ಜಗತ್ತಿನ ಅತ್ಯಂತ ಎತ್ತರದ ಮತ್ತು ದುರ್ಗಮವಾದ ಯುದ್ಧಭೂಮಿ ಸಿಯಾಚಿನ್ ಪ್ರದೇಶವನ್ನೊಮ್ಮೆ ಸುಮ್ಮನೆ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಿ. ದೇಹ ಕೊರೆಯುವ ಮೈನಸ್ ಎಪ್ಪತ್ತುಡಿಗ್ರಿ ಹವಾಮಾನವಿರುವ ಭೀಕರ ಚಳಿ, ಶೀತಗಾಳಿ, ಗಂಟೆಗೆ 160-180 ಕಿ.ಮಿ. ವೇಗದಲ್ಲಿ ಬೀಸುವ ಚಳಿಗಾಳಿ, ವರ್ಷವಿಡೀ ಸುರಿಯುವ ಮಂಜಿನಧಾರೆ, ಹಿಮ ಪರ್ವತದ ಹೊರತಾಗಿ ಮತ್ತೇನೂಕಾಣದ, ಪ್ರತಿದಿನ ಮಲ ಮೂತ್ರ ವಿಸರ್ಜನೆಗೂ ಹರಸಾಹಸ ಮಾಡಬೇಕಾದ ಪರಿಸ್ಥಿತಿಯಿರುವ ಸಿಯಾಚಿನ್ ಪ್ರದೇಶವನ್ನು ಕಂಡು ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ “ಸಾಮಾನ್ಯಮನುಷ್ಯನಾದವನು ಸಿಯಾಚಿನ್ನಲ್ಲಿ ಹತ್ತು ನಿಮಿಷ ಸಹ ಇರಲಾರ. ಇಂಥ ಪ್ರದೇಶದಲ್ಲಿ ನಮ್ಮ ಸೈನಿಕರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದೇ ದೊಡ್ಡ ವಿಸ್ಮಯ” ಎಂದಿದ್ದರು. ನಾಗಾಲ್ಯಾಂಡ್ನಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ  ಪ್ರತಿಮೆ ಇದೆ. ಅದರ ಕೆಳಗೆ ” ನಿಮ್ಮ ನಾಳೆಗಳಿಗೆ ನಾವು ನಮ್ಮ ಈದಿನಗಳನ್ನು ತ್ಯಾಗ ಮಾಡಿದ್ದೇವೆ” ಎಂಬ ಒಕ್ಕಣಿಕೆ ಇದೆ. ಹೌದು ನಮ್ಮ ನಾಳೆಯ ಬದುಕಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸುವ ನಮ್ಮ ಯೋಧರಿಗೊಂದು ಗೌರವದ ಬದುಕನ್ನು ಕೊಡಲಾರೆವೇ?ಪ್ರಾಣ ಕಾಯ್ವ ಪ್ರತ್ಯಕ್ಷ ದೇವತೆಗಳಿಗಾಗಿ ನಮ್ಮ ಮನ ಮಿಡಿಯದೇ?

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!