ಅಂಕಣ

ವರುಷ ಹದಿನಾರು – ಬಲಿದಾನ ನೂರಾರು – 3

kargil war heroes 3

ಕಾರ್ಗಿಲ್ ವಾರ್… ಅದೆಂತದ್ದೇ ರಫ್ ಆಂಡ್ ಟಫ್ ವಾರ್ ಇರಲಿ ನಮಗ್ಯಾರು ಸಾಟಿ ಇಲ್ಲ ಎನ್ನುವುದನ್ನು ಜಗತ್ತಿಗೇ ತೋರಿಸಿದ ದಿನಗಳವು… ದಿನಗಳು ಉರುಳುತ್ತಾ ಬಂದಂತೇ ವೀರ ಮರಣಗಳೂ ಹೆಚ್ಚಾಗುತ್ತಲೇ ಇತ್ತು. ಮತ್ತೆ ಇನ್ನಿಬ್ಬರನ್ನು ನೆನಪಿಸಿಕೊಳ್ಳುವ ಪ್ರಯತ್ನದಲ್ಲಿ……

ಕಾಪ್ಟನ್ ಮನೋಜ್ ಕುಮಾರ್ ಪಾಂಡೆ…. If death strikes before i prove my blood, I promise (swear), I will kill death,  ಒಂದು ವೇಳೆ ನಾನು ನನ್ನ ತಾಕತ್ತನ್ನು ತೋರುವ ಮೊದಲೇ ಸಾವೇನಾದರೂ ಎದುರಾದರೆ ಮೊದಲು ಸಾವನ್ನೇ ಕೊಲ್ಲುತ್ತೇನೆ ಎನ್ನುವ ಮಾತನ್ನಾಡಲು ಸಾಧ್ಯವಿಲ್ಲ. ಅಂತಹ ಕೆಚ್ಚೆದೆ ಸಾಮಾನ್ಯರಿಗೆ ಇರುವುದೂ ಇಲ್ಲ. ಹುಟ್ಟಿದ್ದು 1975 ಜೂನ್ 25 ರಂದು ಕಲಿತಿದ್ದೂ ಲಕ್ನೋ ಸೈನಿಕ ಶಾಲೆಯಲ್ಲಿಯೇ. ಅತ್ಯಂತ ಕ್ಲಿಷ್ಟಕರವಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಪಾಸು ಮಾಡಿದ ಈತ ಆರ್ಮಿ ಸೇರಿದ ಮೇಲೆ ಗೂರ್ಖಾ ರೈಫಲ್ಸ್ ಅಲ್ಲಿ ಇದ್ದ. ಗೂರ್ಖಾ ಎಂದಾಗಲೆಲ್ಲಾ ಸಾಮ್ ಮಾಣಿಕ್ ಶಾ ನೆನಪಾಗುತ್ತಾರೆ, ಅವರೊಂದು ಮಾತು ಹೇಳಿದ್ದರು “ If a man says he is not afraid of dying he is either lying or is a gurkha” ಎಂದು. ಈ ಮಾತಿಗೆ ಅಕ್ಷರಶಃ ಸಾಕ್ಷಿಯಾಗಿ ನಿಲ್ಲುತ್ತಾರೆ ಗೂರ್ಖಾ ರೈಫಲ್ಸ್ ಅಲ್ಲಿ ಇದ್ದ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ.

ಮನೋಜ್ ಕುಮಾರ್ ಪಾಂಡೆಯ ತುಕಡಿಗೆ ಬಟಾಲಿಕ್ ಸೆಕ್ಟರ್‌ನಿಂದ ಭಯೋತ್ಪಾದಕರನ್ನು ಬಡಿದೋಡಿಸುವ ಜವಾಬ್ದಾರಿಯನ್ನು ನೀಡಲಾಯಿತು. 14,229 ಅಡಿ ಎತ್ತರದ ಬಟಾಲಿಕ್ ಸೆಕ್ಟರ್ ಅಲ್ಲಿರುವ ಶತ್ರುಗಳನ್ನು ಬಡಿದೋಡಿಸುವುದು ನಿಜವಾದ ಅರ್ಥದಲ್ಲಿ ರಫ್ ಆಂಡ್ ಟಫ್ ವಾರ್ ಆಗಿತ್ತು. ಅದು 1999, ಜೂನ್ 11. ಜುಬರ್ ಶಿಖರವನ್ನು ಮರುವಶಪಡಿಸಿಕೊಳ್ಳುವ ಕಾರ್ಯಾಚರಣೆಯೊಂದಿಗೆ ತನ್ನ ತುಕಡಿಯನ್ನು ಮುನ್ನೆಡೆಸಲಾರಂಭಿಸಿದರು ಪಾಂಡೆ. ಅದು ಸೇನಾ ಕಾರ್ಯಾಚರಣೆ ದೃಷ್ಟಿಯಿಂದ ಅತ್ಯಂತ ಮಹತ್ವದ ತುದಿಯಾಗಿತ್ತು. ಈ ಹೋರಾಟದ ಪ್ರಮುಖ ಕ್ಷಣವೆಂದರೆ 1999, ಜುಲೈ 3ರ ಬೆಳಗಿನ ಜಾವ. ಖಲುಬಾರ್ ಶಿಖರದ ಮರುವಶವಾಗಿತ್ತು.

ಮುಂದುವರಿದು ಮಧ್ಯರಾತ್ರಿಯ ವೇಳೆಗೆ ಅವರ ತುಕಡಿ ಅಂತಿಮ ಗುರಿಯತ್ತ ಮುಂದಡಿಯಿಡುತ್ತಿತ್ತು. ಆದರೆ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತಿದ್ದ ಶತ್ರುಗಳು ತಡೆದು ನಿಲ್ಲಿಸಿದರು. ಆದರೆ ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ ಈ ತೊಂದರೆಯನ್ನು ದೂರ ಮಾಡಲೇಬೇಕಿತ್ತು ಅಲ್ಲದೇ ಹೋದರೆ ಬೆಳಕಿನಲ್ಲಿ ಶತ್ರುಗಳ ಕಣ್ಣಿಗೆ ಬಿದ್ದು ಉಳಿಗಾಲವಿಲ್ಲ ಎಂಬುದು ತಿಳಿದೇ ಇತ್ತು. ಪಾಂಡೆಯವರೇ ಮುಂದೆ ಸಾಗುತ್ತಾ ಒಂದು ಕಿರಿದಾದ ಭಾಗದ ಮೂಲಕ ಶತ್ರುವಿನ ಸಮೀಪಕ್ಕೆ ತಮ್ಮ ಬೆಟಾಲಿಯನನ್ನು ಕರೆತಂದರು. ಎಚ್ಚೆತ್ತ ಶತ್ರುಗಳು ಗುಂಡಿನ ಸುರಿಮಳೆಗೈಯ್ಯಲಾರಂಭಿಸಿದರು.

ಅಷ್ಟರಲ್ಲಿ ಹೆಗಲು, ಕಾಲಿಗೆ ತೀವ್ರ ಗಾಯಗಳಾಗಿದ್ದವು. ಅದಾಗಲೇ ಹೇಳಿದ ಮಾತಿಗೆ ಕಟಿ ಬದ್ಧರಾದ ಪಾಂಡೆ ಸಾವು ಕಣ್ಣ ಮುಂದೆ ನಲಿದಾಡುತ್ತಿದ್ದರೂ ಮುನ್ನುಗ್ಗುವುದನ್ನು ನಿಲ್ಲಿಸಲಿಲ್ಲ. ಇಬ್ಬರು ಶತ್ರುಗಳನ್ನು ಹೊಡೆದುರುಳಿಸಿ ಮೊದಲ ಬಂಕರ್ ವಶಪಡಿಸಿಕೊಂಡರು. ತಮ್ಮ ನಾಯಕನ ಈ ಧೈರ್ಯ ವಿಜಯ ಅಷ್ಟೇ ಸಾಕಾಯಿತು ಬೆಟಾಲಿಯನ್ ನ ಉಳಿದ ಸೈನಿಕರಿಗೆ, ಅವರದ್ದೂ ವೀರಾವೇಶದ ಹೋರಾಟ ಮುಂದುವರೆಯಿತು. ಸಾರ್ಥಕವೆಂಬಂತೆ ಕೊನೆಯ ಬಂಕರ್ ಕೂಡ ವಶವಾಯಿತು, ಶತ್ರುಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಯಿತು.

ಆದರೆ, ಆ ವೇಳೆಗಾಗಲೇ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಕಡೆಯ ಬಂಕರ್ ಬಳಿ ಕುಸಿದರು, ಮತ್ತೆ ಮೇಲೇಳಲಿಲ್ಲ!

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಯನ್ನು ಪಾಸು ಆದ ಬಳಿಕ ಸಂದರ್ಶನ ನಡೆಯುತ್ತದೆ ಆಗ ಪಾಂಡೆಗೆ ಕೇಳಿದ ಪ್ರಶ್ನೆ, ‘ನೀನು ಯಾತಕ್ಕಾಗಿ ಸೇನೆಯನ್ನು ಸೇರಲು ಬಯಸುತ್ತೀಯಾ’ ಎಂದು, ಒಂದೇ ಉಸಿರಿನಲ್ಲಿ ಮರುಕ್ಷಣ ಬಂದ ಉತ್ತರವೇ ‘ಪರಮವೀರ ಚಕ್ರ ಪಡೆಯಲು’ ಎಂದು!

ಇಲ್ಲೂ ಸಂದರ್ಶನದಲ್ಲಿ ಹೇಳಿದ ಉತ್ತರವನ್ನು ಸಾಧಿಸಿಯೇ ಬಿಟ್ಟರು, ದೇಶ ಯುದ್ಧ ಕಾಲದಲ್ಲಿ ನೀಡುವ ಅತ್ಯುಚ್ಛ ಶೌರ್ಯ ಪ್ರಶಸ್ತಿಯಾದ ‘ಪರಮವೀರ ಚಕ್ರ’ವನ್ನು ಅಪ್ಪ ಗೋಪಿಚಂದ್ ಪಾಂಡೆ ಮಗನ ಪರವಾಗಿ ಪಡೆದುಕೊಂಡರು.

ಮೇಜರ್ ಮರಿಯಪ್ಪನ್ ಸರವಣನ್…. ತಂದೆ ಲೆಫ್ಟಿನೆಂಟ್ ಕರ್ನಲ್ ಎ.ಮರಿಯಪ್ಪನ್, ಸೇನೆಯಲ್ಲಿ ವೈದ್ಯರಾಗಿದ್ದರು. ಆದರೆ ಆರ್ಮಿಯಲ್ಲಿ ವೈದ್ಯರಾಗಿದ್ದ ತಂದೆಯನ್ನು ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಸರವಣನ್ ಕಳೆದುಕೊಂಡಿದ್ದ. ಆಗ ಆತನಿಗೆ ಕೇವಲ 14 ವರ್ಷ.

ತನ್ನ ಶಾಲಾಭ್ಯಾಸವನ್ನು ಬೆಳಗಾಂ, ಕಣ್ಣೂರು, ಬಿಹಾರದಲ್ಲಿ ಮುಗಿಸಿ ತಿರುಚಿರಾಪಲ್ಲಿಯಲ್ಲಿ ಕಾಲೇಜಿಗೆ ಸೇರಿಕೊಳ್ಳುತ್ತಾನೆ. 14 ವರ್ಷದಲ್ಲೇ ತಂದೆಯನ್ನು ಕಳೆದುಕೊಂಡ ನೋವಿದ್ದರೂ, ಇದ್ದ ಛಲವೊಂದೇ ಆರ್ಮಿಗೆ ಸೇರಬೇಕು ಎಂದು. ಕಾಲೇಜು ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆಯೇ ಆಫೀಸರ್ ಟ್ರೈನಿಂಗ್ ಅಕಾಡೆಮಿಗೆ ಸೇರುವುದರೊಂದಿಗೆ ಆರ್ಮಿಗೆ ಸೇರಬೇಕು ಎಂಬ ಛಲವನ್ನು ಸಾಕಾರಗೊಳಿಸುವ ಮೊದಲ ಹೆಜ್ಜೆಯಿಡುತ್ತಾನೆ. ಅಲ್ಲಿಂದ ಟ್ರೈನಿಂಗ್ ಪಡೆದ ಬಳಿಕ ಬಿಹಾರ್ ರೆಜಿಮೆಂಟ್ ಗೆ ಆಯ್ಕೆಯಾಗುತ್ತಾನೆ. ಸೇರಿದ ಮರು ವರ್ಷದಲ್ಲೇ ಕಾಪ್ಟನ್ ಮರಿಯಪ್ಪನ್ ಸರವಣನ್ ಕೂಡಾ ಆಗುತ್ತಾನೆ. 1999 ಆತನ ಪಾಲಿಗೆ ಮತ್ತೊಂದು ಗರಿ, ಮೇಜರ್ ಸರವಣನ್ ಆದ ವರ್ಷ ಅದು. ಮೇಜರ್ ಆಗಿದ್ದೇ ತಡ ನೇರವಾಗಿ ಬಂದು ತನ್ನ ಏಕೈಕ ಆತ್ಮ ಬಂಧು ಅಮ್ಮನನ್ನು ಕಾಣುತ್ತಾನೆ. ಊರಿಗೆ ಬಂದು ಸರಿ ಸುಮಾರು ಒಂದೂವರೆ ತಿಂಗಳು ಸಂತಸದಲ್ಲೇ ಕಳೆದು ಮತ್ತೆ ಆರ್ಮಿ ಯುನಿಫಾರ್ಮ್ ಜೊತೆ ಅಸ್ಸಾಂ ಅಲ್ಲಿದ್ದ ಬಿಹಾರ್ ರೆಜಿಮೆಂಟ್ ಸೇರುತ್ತಾನೆ. ಮಗನಿಗೆ ವರ್ಷ 26 ಆಗಿದೆ ಮದುವೆ ಮಾಡಿಸಬೇಕು ಎಂಬ ಚಿಂತೆ ಅಮ್ಮ ಅಮಿತಾವಳ್ಳಿಗೆ. ಹುಡುಗಿಯ ಫೋಟೋ ಕೂಡ ಮಗನಿಗೆ ಅಸ್ಸಾಂಗೆ ಕಳುಹಿಸಿದ್ದರು. ಸರವಣನ್ ಒಪ್ಪಿದ್ದೂ ಆಯಿತು. ಆಗಸ್ಟ್ ೧೦ಕ್ಕೆ ಮಗನ ಹುಟ್ಟಿದ ಹಬ್ಬ ಆಗ ಆತ ಬಂದರೆ ಜೊತೆಗೆಯೇ ಮದುವೆ ಮಾಡಿಸಬಹುದು ಎಂಬ ಯೋಚನೆ ಅಮ್ಮನದ್ದು. ಆದರೆ ಯೋಚಿಸಿದ್ದೆಲ್ಲವೂ ಆಗುವುದಿಲ್ಲವಲ್ಲಾ….

ಅಸ್ಸಾಂ ಅಲ್ಲಿದ್ದ ಬೆಟಾಲಿಯನ್ ಗೆ ತುರ್ತು ಕರೆ ಬಂದು ಪೋಸ್ಟಿಂಗ್ ಬೇರೆ ಕಡೆಗೆ ಆಗಿತ್ತು. ಸೈನ್ಯ ಎಂದರೆ ಹಾಗೆಯೇ ಎಂದು ಅಮ್ಮ ಅಮಿತಾವಳ್ಳಿಗೂ ತಿಳಿದಿತ್ತು. ಆದರೆ ಅಮ್ಮ ಚಿಂತಿಸಲಾರಂಭಿಸಿದ್ದು ಯಾವಾಗ ಎಂದರೆ ಪ್ರತಿದಿನ ಕಾಲ್ ಮಾಡುವೆ ಎಂದ ಮಗ 15 ದಿನವಾದರೂ ಸುದ್ದಿ ಇರದೇ ಇದ್ದಾಗ. ಅಮ್ಮನಿಗೆ ತಿಳಿದಿರಲಿಲ್ಲ ಎನಿಸುತ್ತದೆ ಅಸ್ಸಾಂನಿಂದ ಅವರ ನೇರ ಪಯಣ ಸಾಗಿದ್ದು ಕಾರ್ಗಿಲ್ ಗೆ! 1999 ಮೇ 28 ರಂದು ‘ ಆಪರೇಶನ್ ವಿಜಯ್’ ಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕರೆ ಕೊಟ್ಟಾಗಿತ್ತು ಆಗ.

ಆಗಲೇ ಪಾಂಡೆ ಬಗ್ಗೆ ಮಾತನಾಡುತ್ತಾ ಬಟಾಲಿಕ್ ಸೆಕ್ಟರ್ ಪುನರ್ ವಶ ಪಡಿಸಿಕೊಳ್ಳುವ ಹಾದಿ ಎಷ್ಟು ಕಠಿಣ ಹಾದಿ ಎನ್ನುವ ಅರಿವು ನಮಗಿದೆ. ಅದೇ ಬಟಾಲಿಕ್ ಸೆಕ್ಟರ್ ವಶ ಪಡಿಸಿಕೊಳ್ಳಲೆಂದೇ ಬಂದಿದ್ದು ಸರವಣನ್ ಪಡೆ. ಒಂದು ಅದು ಎತ್ತರದ ಪರ್ವತ ಶ್ರೇಣಿ ಜೊತೆಗೇ ಅಲ್ಲಿರು ಭಯೋತ್ಪಾದಕರ ಸಾಮರ್ಥ್ಯದ ಬಗ್ಗೆ ಎಳ್ಳಷ್ಟೂ ಅರಿವಿಲ್ಲದೇ ಕೆಳಗಿನಿಂದ ಹೋರಾಡಬೇಕು ನಮ್ಮ ಯೋಧರು. ಮೇಜರ್ ಸರವಣನ್ ಹೆಸರೇ ಬದಲಾಗಿತ್ತು “ಚೆಂಗಿಸ್ ಖಾನ್” ಎಂಬ ಗುಪ್ತನಾಮದೊಂದಿಗೆ ಬೆಳಗ್ಗೆ 4 ಗಂಟೆಗೆ ಪರ್ವತ ಏರಲು ಶುರು ಮಾಡಿದ್ದ ಸರವಣನ್, ಮೇಲಿದ್ದ ಭಯೋತ್ಪಾದಕರದ್ದು ಗುಂಡಿನ ದಾಳಿ ಶುರುವಾಯಿತು ಪ್ರತಿದಾಳಿಯಾಗಿ ಬಿಹಾರ್ ರೆಜಿಮೆಂಟ್ ಗುಂಡಿನ ಸುರಿಮಳೆಗೈದಿದ್ದೂ ಆಯಿತು. ಆದರೆ ಪರಿಸ್ಥಿತಿ ಎಲ್ಲವೂ ಪರ್ವತದ ಮೇಲಿದ್ದ ಶತ್ರುಗಳಿಗೆ ಅನುಕೂಲಕರವಾಗಿತ್ತು, ಶತ್ರುವಿನ ಗುಂಡೊಂದು ಸರವಣನ್ ದೇಹವನ್ನೇ ಹೊಕ್ಕಿತು. “ಚೆಂಗಿಸ್ ಖಾನ್ ಹಿಂದೆ ಸರಿ” ಎಂಬ ಆಜ್ಞೆ ಬರುತ್ತದೆ ಆದರೆ “ಸರ್, ಇದು ಹಿಂದೆ ಸರಿಯುವ ಸಮಯವಲ್ಲ, ನಮ್ಮ ಗುರಿ ಸಾಧನೆ ಸಮಯ ಹತ್ತಿರ ಬಂದಿದೆ” ಎನ್ನುತ್ತಲೇ ಹೋರಾಟ ಮುಂದುವರಿಸುತ್ತಾನೆ. ಮತ್ತೊಂದು ಗುಂಡು ತಲೆಯನ್ನೇ ಸೀಳಿತು. ಮೇ 29 ರಂದು, 4 ಗಂಟೆಗೆ ಪರ್ವತವನ್ನೇರಿದ ಈತ 6 ಗಂಟೆ 3೦ ನಿಮಿಷಕ್ಕೆ ನೆಲಕ್ಕುರುಳಿ ಹಿಮದಡಿಯಲ್ಲಿ ಹೂತು ಹೋಗಿದ್ದ.

ಕಾರ್ಗಿಲ್ ಕದನದಲ್ಲಿ ಪ್ರಾಣ ತ್ಯಾಗ ಮಾಡಿದ ಮೊದಲ ಅಧಿಕಾರಿ ಮೇಜರ್ ಸರವಣನ್ ಆದರೆ ತ್ರಿವರ್ಣ ಧ್ವಜದಲ್ಲಿ ವಾಪಸ್ ಬಂದಿದ್ದು 41 ದಿನಗಳ ನಂತರ ಅಂದರೆ ಜುಲೈ 8 ರಂದು. ಇಲ್ಲಿಯೇ ತಿಳಿಯುತ್ತದೆ ಅದೆಂತಹ ರಫ್ ಟಫ್ ವಾರ್ ಎಂದು.

ಈತನಿಗೆ, ದೇಶ “ವೀರ ಚಕ್ರ” ನೀಡುತ್ತದೆ, “ಹೀರೋ ಆಫ್ ಬಟಾಲಿಕ್” ಎಂಬ ಬಿರುದನ್ನೇ ನೀಡಿ ಗೌರವಿಸುತ್ತದೆ ಭಾರತೀಯ ಸೇನೆ.

ಬಟಾಲಿಕ್ ಸೆಕ್ಟರ್ ಪುನರ್ ವಶ ಪಡೆದುಕೊಳ್ಳುವ ಹೋರಾಟದಲ್ಲಿ ಹಿಮದ ಅಡಿಯಲ್ಲೂ, ಗುಂಡೇಟಿನಲ್ಲೂ ತಾಯ ಮಡಿಲನ್ನು ಸೇರಿ ಅಮರರಾದ ವೀರ ಮಣಿಗಳಿಗೆ ಮತ್ತೆ ನಮ್ಮೆಲ್ಲರ ಅಕ್ಷರ ನಮನ…

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!