ಪ್ರಚಲಿತ

ಮತ್ತೊಬ್ಬ ರಾಜೇಶ ಹುಟ್ಟದಿರಲಿ!

halli haida pyateg banda

ನನ್ನನ್ನು ಮತ್ತೆ ರಿಯಾಲಿಟಿ ಶೋ ಎಂಬ ಹುಚ್ಚರ ಸಂತೆ ಕಾಡುತ್ತಿದೆ. ಹಳ್ಳಿ ಹೈದ ಪ್ಯಾಟೆಗ್ ಬಂದ ಅಂತೆ, ಅರೆರೆ, ಇವರೇನೋ ಹಳ್ಳಿ ಹೈದರನ್ನು ಪೇಟೆಗೆ ಕರೆ ತಂದು ಬಹಳ ಉದ್ಧಾರ ಮಾಡ ಹೊರಟಿದ್ದಾರೆನೋ ಅಂದುಕೊಳ್ಳಬೇಕು. ಹಳ್ಳಿ ಹೈದರ ತಾಕತ್ತು ಗತ್ತು ನಮಗಿಲ್ಲ, ಬಿಡಿ ಅದು ಬೇರೆ ವಿಷಯ. ಆದರೆ ಈ ಹಳ್ಳಿ ಹೈದ ಪ್ಯಾಟೆಗ್ ಬಂದ ಶೋ ನ ಉದ್ದೇಶವಾದರೂ ಏನು?? ನಿಮಗೆ ಹಳ್ಳಿ ಹೈದ ಪ್ಯಾಟೆಗ್ ಬಂದ ಸೀಸಸ್ ಒಂದು ನೆನಪಿರಬಹುದು. ಆ ಶೋ ನೋಡದೇ ಇದ್ದವರಿಗೂ, ಆ ಶೋ ಮುಗಿದ ಬಳಿಕ ನಡೆದ ಘಟನೆಗಳು ಇನ್ನೂ ಮನಸ್ಸಲ್ಲಿ ಅಚ್ಚಳಿಯದೇ ಕುಳಿತಿರುತ್ತದೆ. ನನ್ನದೂ ಅಂತಹದ್ದೇ ಸ್ಥಿತಿ.

ಮೊನ್ನೆಯಿಂದ ಸುವರ್ಣಾ ಚಾನಲ್ ಹಾಕಿದೊಡನೆ, ಈ ಹಳ್ಳಿ ಹೈದ ಪ್ಯಾಟೆಗ್ ಬಂದ ಇದರದ್ದೇ ಅಬ್ಬರ, ಸೀಸನ್ ೨, ನೋಡಿ ನಮ್ಮ ಹೈದರು ಪೇಟೆಗೆ ಬರುತ್ತಾರೆ ಎಂಬಿತ್ಯಾದಿ ಗಿಮಿಕ್ ಗಳು. ಸಾಲದ್ದಕ್ಕೆ ಅದು ಸುವರ್ಣಾ ನ್ಯೂಸ್ ಚಾನೆಲ್ ಹಾಕಿದರೆ ಮತ್ತೆ ಅಲ್ಲಿಯೂ ಮೇಕಿಂಗ್ ಆಫ್ ಹಳ್ಳಿ ಹೈದ ಪ್ಯಾಟೆಗ್ ಬಂದ! ಅಲ್ಲಾರೀ, ನ್ಯೂಸ್ ಚಾನೆಲ್ಲಿಗೂ ಇಂತಹಾ ಗತಿ ಬಂತಾ???

 ನಾನ್ಯಾಕೆ ಮತ್ತೆ ರಿಯಾಲಿಟಿ ಶೋ ಬಗ್ಗೆ ಬರೆಯ ಹೊರಟೆ ಎಂದರೆ, ಅಲ್ಲಾ ಒಂದು ಸಲ ತಪ್ಪಾದರೆ ಸರಿ ಅದು ತಪ್ಪು ಕ್ಷಮೆ ಇದೆ ಎನ್ನಬಹುದು, ಆದರೆ ಮತ್ತೆ ಅದನ್ನೇ ಮಾಡ ಹೊರಡುತ್ತೇವೆ ಎಂದರೆ ಸುಮ್ಮನಿರಲು ಸಾಧ್ಯವೇ? ನಿಮಗೆ ರಾಜೇಶ್ ಎಂಬ ಹೆಸರು ನೆನಪಿದೆಯಾ? ಬಿಡಿ ನಿಮಗೆಲ್ಲಿ ನೆನಪಿರತ್ತೆ. ಈ ರಿಯಾಲಿಟಿ ಶೋ ನ ಟಿ ಆರ್ ಪಿ  ದಾಹಕ್ಕೆ ಸಿಲುಕಿ ಕಡೆಗೆ ತನ್ನ ಬಾಳನ್ನೇ ಬಲಿಕೊಟ್ಟ ಆತನನ್ನು ನೀವೆಲ್ಲಾ ಒಂದು ಮನರಂಜನೆಯ ವಸ್ತುವನ್ನಾಗಿ ನೋಡಿದಿರೇ ಹೊರತು ನೆನಪಲ್ಲಂತೂ ಖಂಡಿತಾ ಇಟ್ಟಿರುವುದಿಲ್ಲ. ಎಲ್ಲೋ ಕಾಡಿನಲ್ಲಿದ್ದವ  “ಹಳ್ಳಿ ಹೈದ ಪ್ಯಾಟೆಗ್ ಬಂದ” ರಿಯಾಲಿಟಿ ಶೋ-1 ರಲ್ಲಿ ಭಾಗವಹಿಸಿದ್ದ ಆ ರಾಜೇಶ. ಯಾವುದೇ ಕಲ್ಮಶಗಳಿಲ್ಲದ ಪರಿಶುದ್ಧ ಮನದ ಮುಗ್ದ ಹುಡುಗ ಆತ. ಈ ರಿಯಾಲಿಟಿ ಶೋ ನಲ್ಲಿ ಮೊದಲಿಗೆ ಒಂದಿಷ್ಟು ಹಳ್ಳಿ ಹುಡುಗರನ್ನು ಸೇರಿಸಿಕೊಂಡರು ಅವರಿಗೆ ಜೊತೆಯಾಗಿ ನಮ್ಮ ಪೇಟೆಯ ಹುಡುಗಿಯರು. ಕಪಟವೇ ಅರಿಯದ ಇವರಿಗೆಲ್ಲಾ ಈ ಹುಡುಗಿಯರ ಜೊತೆ ಮಾಡಿ ಕೊಟ್ಟು ಆಂಕ್ಯರ್ , ಹಳ್ಳಿ ಹೈದನಿಗೂ ಪ್ಯಾಟೆ ಹುಡುಗಿಗೂ ಒಂದಿಷ್ಟು ತಮಾಷೆ ಮಾಡಿ ಇಲ್ಲದ ಕನಸನ್ನು ಬಿತ್ತಿ ಬಿಡುತ್ತಾನೆ. ಹಳ್ಳಿ ಹೈದನಿಗೋ ಇಲ್ಲಿ ನಡೆಯುತ್ತಿರುವುದು ಪಕ್ಕಾ ಬಿಸಿನೆಸ್ ಅಂತಾ ಗೊತ್ತಿಲ್ವೇ! ಅದಕ್ಕೆ ಮೊದಲ ಬಲಿಯೇ ಈ ರಾಜೇಶ್!

ಈ ಕಾರ್ಯಕ್ರಮದ ಮೂಲಕ ಇವರು ಜಗತ್ ಪ್ರಸಿದ್ಧರಾಗುತ್ತಾರೆ ಎಂಬ ನಂಬಿಕೆ ಮೂಡಿಸಿ ಇವರನ್ನು ಕರೆತಂದಿದ್ದೇನೋ ನಿಜ. ಆದರೆ ಅಮೇಲೆ ನಡೆದಿದ್ದು ದುರಂತ……

ಹೌದು, ಆತ ಮೈಸೂರು – ಮಾನಂತವಾಡಿ ಮಾರ್ಗದಲ್ಲಿ ನಾಗರಹೊಳೆ ಅಭಯಾರಣ್ಯದ ಕಾಕನಕೋಟೆ ಕಾಡಿನ ನಡುವೆ ಇರುವ ಬಳ್ಳೇ ಹಾಡಿಯ ಕೃಷ್ಣಪ್ಪ ಮತ್ತು ಲಕ್ಷ್ಮೀ ದಂಪತಿಯ ಮಗ., ರೀ, ಈತ  ಹಳ್ಳಿ ಹೈದ ಪ್ಯಾಟೆಗ್ ಬಂದ ವಿಜಯಿಯಾಗಿದ್ದ, ಅಲ್ಲದೇ ‘ಜಂಗಲ್ ಜಾಕಿ’ ಎಂಬ ಸಿನಿಮಾದ ನಾಯಕ ನಟನಾಗಿಯೂ ಆಯ್ಕೆಯಾಗಿದ್ದ. ಯೋಚಿಸಿ, ಅಂತಹಾ ದಟ್ಟ ಕಾಡಿನಲ್ಲಿ ತನ್ನವರೊಂದಿಗೆ ತನ್ನದೇ ಪ್ರಪಂಚದಲ್ಲಿ ಆಡಿಕೊಂಡಿದ್ದವನು, ಬೆಂಗಳೂರು ಎಂಬ ನಗರಿಯನ್ನು ಕನಸಿನಲ್ಲೂ ಆಲೋಚನೆ ಮಾಡದ ಮನದವನು ಇಂತಹಾ ಶೋ ಗೆ ಬಂದಾಗ ಆಗಬಹುದಾದ ತಳಮಳಗಳೆಷ್ಟಿರಬಹುದು?! ಪುಟ್ಟ ಮಕ್ಕಳೂ ಮೊಬೈಲ್ ಆಪರೇಟ್ ಮಾಡುವ ನಗರಿ ಬೆಂಗಳೂರು, ಆದರೆ ರಾಜೇಶ ಮೊಬೈಲ್ ಅರಿಯದ ಮುಗ್ದ. ಆತನನ್ನು ಹಳ್ಳಿ ಹಾಡಿಯಿಂದ ಕರೆದೊಯ್ಯುವ ದಿನ ಹರಕೆಗೆ ಕುರಿ ಕೊಂಡೊಯ್ಯುವಂತೆ ಹಾರ ಎಲ್ಲಾ ಹಾಕಿ ಜೀಪಿಗೆ ಹತ್ತಿಸಿದ್ದೇ ತಡ, ಸಿಟಿ ಎಂಬ ಶಬ್ದ ಕೇಳಿದವನೇ ಒಂದು ಓಟ ಮತ್ತೆ ಹಾಡಿಯೆಡೆಗೆ. ಆತನನ್ನು ಹೇಗೇಗೋ ಪುಸಲಾಯಿಸಿ ಅಂತೂ ಇಂತೂ ಮಾಯಾನಗರಿಗೆ ಕರೆದುಕೊಂಡು ಬಂದರು.

ಮುಂದೆ, ಬೆಂಗಳೂರಿಗೆ ಬಂದ, ಈ ಶೋ ನಡೆಸುವ ವಿಕೃತ ಮನಸ್ಸಿನ ವಿಕೃತ ಟಾಸ್ಕ್ ಗಳಿಗೆ ಈ ಬುಡಕಟ್ಟು ಹುಡುಗರು ಬಲಿಪಶುಗಳು. ಪ್ರತಿ ಹುಡುಗನಿಗೂ ಒಬ್ಬೊಬ್ಬ ಪ್ಯಾಟೆ ಹುಡುಗಿ, ‘ಆಧುನಿಕತೆ’ ಎಂಬ ಸೋಗಿನಲ್ಲೇ ಬೆಳೆದ ಈ ಹುಡುಗಿಯರು ಹಾಕುವ ಡ್ರೆಸ್ ಈ ಹಾಡಿಯಲ್ಲಿಯೇ ಹುಟ್ಟಿ ಬೆಳೆದ ಈ ಮನಸ್ಸುಗಳಲ್ಲಿ ಅದೆಷ್ಟು ಇರುಸುಮುರುಸು ಹುಟ್ಟು ಹಾಕಿರಬಹುದು? ಈ ಹುಡುಗಿಯರು ಬಂದಿದ್ದು ಸುಮ್ಮನೇ ಅಲ್ಲಾ, ಇವರೆಲ್ಲಾ ಹುಡುಗರಿಗೆ (ಅ)ನಾಗರೀಕತೆ ಹೇಳಿಕೊಡೋಕ್ಕೆ ಬಂದಿದ್ದು.  ಯಾರೋ ಅಪರಿಚಿತ ಹುಡುಗಿಯರ ಬಳಿ ಮೊಬೈಲ್ ನಂಬರ್ ಕೇಳುವ, (ಹೀಗೆ ನಗರವಾಸಿ ಹುಡುಗರು ಯಾರಾದರೂ ಮಾಡುತ್ತಾರಾ?!) ಬಾಡಿಗೆ ಮನೆ ಹುಡುಕಲು ಬಿಡುವ, ಭೇದಿ ಮಾತ್ರೆಯೊಂದಿಗೆ ಹೊಟ್ಟೆ ತುಂಬ ತಿನ್ನಿಸಿ ಟಾಯ್ಲೆಟಿಗೆ ನುಗ್ಗದಂತೆ ತಡೆದು ಹಿಡಿದು ಕೊಳ್ಳುವ,ಲೀಟರ್‌ಗಟ್ಟಲೆ ಬಾಳೆಹಣ್ಣಿನ ಜ್ಯೂಸ್ ಕುಡಿಸಿ ವಾಂತಿಯಾಗದಂತೆ ತಡೆಗಟ್ಟುವ, ಎಷ್ಟೋ ವಿದ್ಯಾವಂತ ನಗರವಾಸಿಗಳೇ ಹೋಗಲು ಮುಜುಗರವಾಗುವ ದೊಡ್ಡ ಮಾಲ್‌ಗಳಿಗೆ ಹೋಗುವ ಚಿತ್ರವಿಚಿತ್ರ ಟಾಸ್ಕ್ ನೀಡಲಾಗಿತ್ತು. ಅದೇನ್ ನಾಗರೀಕತೆಯೋ ಏನೋ?!

ಈ ಮುಗ್ಧ ರಾಜೇಶನಿಗೂ ಆಕೆಯ ಜೊತೆಗಿದ್ದ ಎಜೆ ಐಶ್ವರ್ಯಳಿಗೂ ಒಂದು ಹಂತದಲ್ಲಿ ಹೊಡೆದಾಟವಾಗುವಂತೆ ಮಾಡಿ ಅದನ್ನು ತೋರಿಸಿ ಟಿಆರ್‌ಪಿ ಕೂಡ ಹೆಚ್ಚಿಸಿ ಕೊಂಡಿದ್ದರು. ರೂಮಿನೊಳಗೆ ಹುಡುಗಿಯೊಂದಿಗೆ ಬಿಟ್ಟು ಶೌಚಾಲಯದೊಳಗೂ ರಹಸ್ಯ ಕ್ಯಾಮೆರಾಗಳನ್ನಿಟ್ಟು ಇವರ ವರ್ತನೆಗಳನ್ನು ಚಿತ್ರೀಕರಿಸಿಕೊಂಡು ನಂತರ ಎಡಿಟ್ ಮಾಡಿ ಪ್ರದರ್ಶಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಜ್ಞಾವಂತರಾದ ಎಷ್ಟೋ ಜನರಿಗೆ ಪಿಚ್ಚೆನಿಸಿತ್ತು.

ಕೊನೆಹಂತದಲ್ಲಿ ವೀಕ್ಷಕರ ಮತದ ಸಹಾಯದಿಂದ ಅಂತಿಮವಾಗಿ ವಿಜೇತರಾದದ್ದು ರಾಜೇಶ್ ಮತ್ತು ಐಶ್ವರ್ಯ. ವಾಹಿನಿಯವರು ಬುಡಕಟ್ಟಿನ ಜನರ ಸಮಸ್ಯೆಗಳ ಕುರಿತು ಗಮನ ಸೆಳೆಯುತ್ತೇವೆ ಎಂದೂ ಮಾತು ಕೊಟ್ಟಿದ್ದರಲ್ಲ. ಹಾಗಾಗಿ ಜೇನುಕುರುಬರ ಸಮಸ್ಯೆಗಳ ಬಗ್ಗೆಯೂ ಅಲ್ಲಲ್ಲಿ ಮಾತನಾಡುವಂತೆ ನೋಡಿಕೊಂಡಿದ್ದರು. ಆದರೆ, ಲೊಳಲೊಟ್ಟೆ ಇಲ್ಲಿ ಎಲ್ಲಾ ಲೊಳಲೊಟ್ಟೆ!!

ಮತ್ತೆ ಹಾಡಿಗೆ ಹೋದ ರಾಜೇಶ ತನ್ನದೇ ಹಾಡಿಯ ಹುಡುಗಿಯನ್ನು ಮದುವೆಯೂ ಆದ, ಆದರೆ ಅತ್ತದರಿ ಇತ್ತ ಪುಲಿ ಎಂದ ಸ್ಥಿತಿ ಈತನದ್ದು. ಆ ಕಡೆ ಹಳ್ಳಿ ಕ್ರಮವನ್ನೂ ಅನುಸರಿಸಲಾಗದೆ, ಇತ್ತ ಪ್ಯಾಟೆಯವರ ತಳುಕು ಬಳುಕು ವೈಯಾರವನ್ನು ಬಿಡಲೂ ಆಗದೇ, ಆ ಮುಗ್ದ ಹುಡುಗಿ ತನ್ನ ನಿರೀಕ್ಷೆಯ ಮಟ್ಟಿಗೆ ತಲುಪುತ್ತಿಲ್ಲ, ಎಂದು ಮದುವೆಯಾದ ಹುಡುಗಿಯನ್ನೂ ಆಕೆಯ ತಾಯಿ ಮನೆಗೆ ಬಿಟ್ಟು ಬಂದ. ಅದಾಗಲೇ ಆತ ‘ಜಂಗಲ್ ಜಾಕಿ’ ಎಂಬ ಸಿನಿಮಾದ ಹೀರೋ ಆಗುತ್ತಾನೆ ಎಂದು ಚಿತ್ರೀಕರಣವೂ ಆರಂಭವಾಗಿತ್ತು.

ಆದರೆ ಎಲ್ಲವೂ ನೀರಿನಲ್ಲಿ ಮಾಡಿದ ಹೋಮ. ಸಿನಿಮಾವೂ ಕೊನೆ ಮುಟ್ಟಲಿಲ್ಲ, ಮದುವೆಯೂ ಚಂದದ ಸಂಸಾರವನ್ನು ಮೂಡಿಸಲಿಲ್ಲ, ರಾಜೇಶ್ ಇವೆಲ್ಲದರ ಒತ್ತಡದಲ್ಲಿ  ‘ಅಕ್ಯೂಟ್ ಮೇನಿಯಾ’ಗೆ  ಅಟ್ಯಾಕ್ ಆಗುತ್ತಾನೆ. ಇದೊಂದು ರೋಗವೇನಲ್ಲ. ಮನಸ್ಸಿನಲ್ಲಿ ಉಂಟಾದ ತೀವ್ರ ತಳಮಳ, ಹೊಯ್ದಾಟಗಳಿಂದ ಒಬ್ಬ ವ್ಯಕ್ತಿಯಲ್ಲಿ ಈ ಮಾನಸಿಕ ಅಸ್ವಸ್ಥತೆಯನ್ನು ಉಂಟು ಮಾಡುತ್ತದೆ ಎನ್ನುತ್ತಾರೆ ಆತನ ವೈದ್ಯರು. ಯಾವುದನ್ನೂ ತಡೆಯಾಲಾಗದ ಸ್ಥಿತಿ ಬಂದಾಗ, ನವೆಂಬರ್ – 2013 ರಂದು ತನ್ನ ಮನೆಯ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಳ್ಳುತ್ತಾನೆ. ಅಲ್ಲಿಗೆ ಹಳ್ಳಿಯಿಂದ ಪ್ಯಾಟೆಗ್ ಬಂದ ಹೈದನ ದುರಂತ ಅಂತ್ಯವಾಗುತ್ತದೆ.

ಇನ್ನು 3 ವರ್ಷವೂ ಆಗಿಲ್ಲ ಈ ಮುಗ್ದ ಬಲಿಯಾಗಿ, ಈಗ ಮತ್ತೆ ಶುರುವಾಗಿದೆ ಪಕ್ಕಾ ಬಿಸಿನೆಸ್ ಆದ ಹಳ್ಳಿ ಹೈದ ಪ್ಯಾಟೆಗ್ ಬಂದ. ಅಲ್ಲಾ ನನಗೆ ಕಾಡಿದ್ದು ಇಷ್ಟೇ, ಎಲ್ಲವನ್ನೂ ಇಷ್ಟು ಬೇಗನೆ ಮರೆತು ಬಿಡುವ ನಮ್ಮ ಪ್ರವೃತ್ತಿ ಕೊನೆಗೊಳ್ಳುವುದೇ ಇಲ್ಲವೇ?

ಅಥವಾ

ಇಂತಹಾ ಅದೆಷ್ಟೋ ಸಾವುಗಳು ಆಗಲಿ ಆದರೆ ನಮಗೆ ಬೇಕಿರುವುದು ಟಿ ಆರ್ ಪಿ, ನಾವು ಮನಿ ಮಿಂಟಿಂಗ್ ಯೋಜನೆಯನ್ನಷ್ಟೇ ರೂಪಿಸುತ್ತೇವೆ ಎನ್ನುವ ಇಂತಹಾ ಚಾನೆಲ್ ಮಾಲಕರು ಬದಲಾಗುವುದೇ ಇಲ್ಲವೇ?

ಅದೇನೆ ಇರಲಿ, ನಾನು ಇಲ್ಲಿ ಬರೆದ ಮಾತ್ರಕ್ಕೆ ಈ ಶೋ ನಿಲ್ಲದು, 13-ಜುಲೈ-2015 ರಂದು ಶೋ, ಚಾನೆಲ್ ಅಲ್ಲಿ ಬಿತ್ತರಗೊಂಡೂ ಆಗಿದೆ. ಕೊನೆಯ ಪಕ್ಷ ಮತ್ತೊಬ್ಬ ರಾಜೇಶ್ ಹುಟ್ಟದಿರಲಿ (ಬಲಿಯಾಗದಿರಲಿ!) ಎಂಬುದಷ್ಟೇ ನನ್ನ ಕಾಳಜಿ

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!