ಅಂಕಣ

ಯುನಿಫಾರಂ ಕೊಳ್ಳಲೂ ಹಣವಿರಲಿಲ್ಲ, ಕಡೆಗೆ ಸತ್ತಿದ್ದು ಅದೇ ಯೂನಿಫ಼ಾರಂನಲ್ಲಿ!

1999, ಜುಲೈ 25 …… ಕಾರ್ಗಿಲ್ ವಿಜಯ ದಿವಸದ ಮುನ್ನಾ ದಿನ 5200 ಮೀಟರ್ ಎತ್ತರದಲ್ಲಿರುವ ಜಮ್ಮು-ಕಾಶ್ಮೀರದ ಝುಲು ಪರ್ವತ ಶ್ರೇಣಿಯಲ್ಲಿ ಇನ್ನೂ ಭಯೋತ್ಪಾದಕರು ಅಡಗಿದ್ದಾರೆ ಎನ್ನುವುದು ತಿಳಿಯುತ್ತದೆ. ಎರಡು ಬಾರಿ ಶೌರ್ಯ ಪ್ರಶಸ್ತಿ ಗೆದ್ದ ಮೇಜರ್ ಸುಧೀರ್ ವಾಲಿಯಾ ಮಾತ್ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ದೆಹಲಿಯ ಕಛೇರಿಯಲ್ಲೇ ಉಳಿದಿರುತ್ತಾನೆ. ಒಬ್ಬ ಯೋಧನ ಜೀವನದಲ್ಲಿ ನಿಜವಾದ ಅರ್ಥದಲ್ಲಿ ಇದ್ದೂ ಸತ್ತಂತ ಕ್ಷಣವದು. ಅದು ಹೇಗೋ ಎಲ್ಲಾ ಮಾಡಿ ಆಗಿನ ಸೇನಾ ಜನರಲ್ ವೇದ್ ಪ್ರಕಾಶ್ ಮಲಿಕ್ ಅವರ ಮನವೊಲಿಸಿದ ಸುಧೀರ್ ಝುಲು ಪರ್ವತದೆಡೆಗೆ ತನ್ನ ಕಮಾಂಡೋ ಪಡೆಯೊಂದಿಗೆ ತೆರಳುತ್ತಾನೆ. ಕೊನೆಯ ಕ್ಷಣದ ಹೋರಾಟವದು, ಕಾರ್ಯಾಚಾರಣೆ ಆರಂಭಿಸಿದ ಪಡೆ ಕೊನೆಗೂ 13 ಭಯೋತ್ಪಾದಕರನ್ನು ನೆಲಕ್ಕುರುಳಿಸುವುದರ ಜೊತೆಗೆ ಝುಲು ಪರ್ವತ ಶ್ರೇಣಿಯನ್ನು ಮತ್ತೆ ಭಾರತದ ಮಡಿಲಿಗೆ ವಶವಡಿಸಿಕೊಳ್ಳುತ್ತಾರೆ ಅದರೊಂದಿಗೆ ಕಾರ್ಗಿಲ್ ವಿಜಯ ದಿವಸಕ್ಕೆ ಮೇಜರ್ ಮುನ್ನುಡಿ ಬರೆದಾಗಿತ್ತು.

ಟೈಟಲಿನಲ್ಲೇ  ಯುನಿಫಾರಂ ವಿಷಯ ಎತ್ತಲೂ ಕಾರಣವಿದೆ. ಸುಧೀರ್ ವಾಲಿಯಾ ಮೇಜರ್ ಸುಧೀರ್ ವಾಲಿಯಾ ಆಗುವ ಮೊದಲಿನ ಕಥೆಯದು. ರುಲಿಯಾ ರಾಮ್ ಸೇನೆಯ ಸಿಪಾಯಿ ಆಗಿ ದುಡಿಯುತ್ತಿದ್ದರು, ಅವರ  ಮಗನೇ ಸುಧೀರ್ ವಾಲಿಯಾ ಶಾಲೆಗೆ ಹೋಗುತ್ತಿದ್ದರೆ ಕೆಂಪು ಬಣ್ಣದ ಯುನಿಫಾರಂ ಕಣ್ ಮನ ಸೆಳೆಯುತ್ತಿತ್ತು ಆದರೆ ಅದು ಮಿಲಿಟರಿ ಶಾಲೆಯಾಗಿತ್ತು, ‘ಅಲ್ಲಿಗೆ ಹೋಗುವುದು ಮೇಲಧಿಕಾರಿಗಳ ಮಕ್ಕಳಷ್ಟೇ, ನೀನು ಪರಿಶ್ರಮ ಪಟ್ಟು ಓದಿದರೆ ಮುಂದೆ ಯುನಿಫಾರಂ ಹಾಕಿಕೊಳ್ಳಬಹುದು’ ಎಂದಿದ್ದರು.

ಮುಂದೆ ನಡೆದಿದ್ದೆಲ್ಲಾ ವೀರ ಕಥನ.. 5 ನೇ ತರಗತಿಯಲ್ಲಿರುವಾಗ ಮಿಲಿಟರಿ ಶಾಲೆಗೆ ಸೇರುವ ಸಲುವಾಗಿ ಪ್ರವೇಶ ಪರೀಕ್ಷೆಗೆ ತೆರಳುತ್ತಾನೆ, ಪರೀಕ್ಷೆಯೂ ಪಾಸಾಗುತ್ತಾನೆ ಶಾಲೆಗೂ ಸೇರುತ್ತಾನೆ. ೧೪ ನೇ ವಯಸ್ಸಿಗೇ ಎನ್ ಡಿ ಎ ಪರೀಕ್ಷೆಯೂ ಪಾಸಾಗುತ್ತಾನೆ ಸಂದರ್ಶನಕ್ಕಾಗಿ ಬೆಂಗಳೂರಿಗೆ ದೂರದ ಹಿಮಾಚಲದಿಂದ ಬರುತ್ತಾನೆ, ಯಾರೂ ಪರಿಚಯ ಇಲ್ಲದ ಊರು, ಬೇಕಾದ ಲಾಡ್ಜ್ ಅಲ್ಲಿ ತಂಗುವಷ್ಟು ಆರ್ಥಿಕ ಹಿನ್ನಲೆ ಇಲ್ಲ, ಬೆಂಗಳೂರಿನಲ್ಲಿ ರೈಲ್ವೇ ನಿಲ್ದಾಣದಲ್ಲಿ ಶೌಚಾಲಯದಲ್ಲೇ ಸಿದ್ಧಗೊಂಡು ಸಂದರ್ಶನಕ್ಕೆ ಹೋಗುತ್ತಾನೆ, ಹೋದವ ಮತ್ತೆ ಹಿಂದಿರುಗಿ ನೋಡಲಿಲ್ಲ, ‘ನಾನು ಪಾಸಾಗಿದ್ದೇನೆ’ ಎಂಬ ಟೆಲಿಗ್ರಾಂ ಕಳುಹಿಸುತ್ತಾನೆ. ಖಡಕ್ ವಾಸ್ಲಾದಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಸೇರುತ್ತಾನೆ ಅಲ್ಲಿ ತೋರಿದ ಶೈಕ್ಷಣಿಕ ಸಾಧನೆಯಿಂದ ಡೆಹ್ರಾಡೂನ್ ಮಿಲಿಟರಿ ಅಕಾಡೆಮಿಗೆ ಪ್ರವೇಶಿಸುತ್ತಾನೆ. 1988 ರಲ್ಲಿ ಸಿಪಾಯಿಯ ಮಗ ಸೇನಾಧಿಕಾರಿಯಾಗಿ 3 ನೇ ಜಾಟ್ ರೆಜಿಮೆಂಟ್ ಸೇರಿದ ಸುಧೀರ್ ಶ್ರೀಲಂಕಾಕ್ಕೆ ಕಳುಹಿಸಿದ ಶಾಂತಿಪಾಲನಾ ಪಡೆಯ ಜೊತೆಯಾಗುತ್ತಾನೆ. ಅಲ್ಲಿಂದ ಬಂದ ಬಳಿಕ ‘9 ಪ್ಯಾರಾಚೂಟ್ ಕಮಾಂಡೋ’ ಪಡೆಗೆ ವರ್ಗಾಯಿಸಲ್ಪಡುತ್ತಾನೆ, ಜಗತ್ತಿನ ಅತ್ಯುನ್ನತ ಯುದ್ಧಭೂಮಿಯಾದ ಸಿಯಾಚಿನ್ ಅಲ್ಲಿ ಒಂದು ವರ್ಷ ಸೇವೆ ಸಲ್ಲಿಸುತ್ತಾನೆ. ಅದೇ ಸಮಯಕ್ಕೆ ಅಮೆರಿಕದಲ್ಲಿ ಸೇನೆಯ ವಿಶೇಷ ತರಬೇತಿಗಾಗಿ ಈತನೇ ಆಯ್ಕೆಯಾಗುತ್ತಾನೆ. 6 ತಿಂಗಳ ತರಬೇತಿ ಮುಗಿಸಿ ಹೊರಬರುವಾಗ 80 ದೇಶಗಳ ಪರಿಣತ ಕಮಾಂಡರ್ ಗಳು ಬಂದಿದ್ದ ಆ ಕೋರ್ಸ್ ಅಲ್ಲಿ ಮೊದಲಿಗನಾಗುತ್ತಾನೆ ನಮ್ಮ ಸುಧೀರ್ ವಾಲಿಯಾ.

ಆ ಕ್ಷಣದ ಕುರಿತು ರುಲಿಯಾ ರಾಮ್ ಹೇಳಿದ ಮಾತು ಇಷ್ಟೇ “ ನಾನು ದಿನಗೂಲಿ ಹುಡುಕಿಕೊಂಡು 15ಕಿ.ಮೀ ನಡೆದುಕೊಂಡು ಹೋಗುತ್ತಿದ್ದೆ. ಆದರೆ ಹಿಮಾಚಲದ ಹಳ್ಳಿಯಲ್ಲಿ ಹುಟ್ಟಿದ ನನ್ನ ಮಗ ಅಮೆರಿಕದ ಪೆಂಟಗನ್ ಅಲ್ಲಿ ಸೇನಾಧಿಕಾರಿಗಳನ್ನುದ್ದೇಶಿ ಮಾತನಾಡುವಷ್ಟರ ಎತ್ತರಕ್ಕೆ ಏರಿದ್ದಾನೆ” ಎಂದು….

major sudhir walia

ನಮಗೆಲ್ಲಾ ಕಾರ್ಗಿಲ್ ಯುದ್ಧ ಮುಗಿಯುತ್ತಿದ್ದಂತೇ ಅಬ್ಬಾ ನಾವು ಗೆದ್ದೆವು ಎನ್ನುವ ಸಂಭ್ರಮವಷ್ಟೇ ಉಳಿದಿದ್ದು, ಆದರೆ ನಿಜವಾದ ಯೋಧನಿಗೆ ಹೋರಾಟ ಮುಗಿದಿರಲಿಲ್ಲ. ಸುಧೀರ್ ನೇತೃತ್ವದ 9 ಪ್ಯಾರಾಚೂಟ್ ಕಮಾಂಡೋ ಪಡೆಗೆ ಕಾಶ್ಮೀರದಲ್ಲಿನ ಭಯೋತ್ಪಾದನೆ ನಿಗ್ರಹ ಜವಾಬ್ದಾರಿಯನ್ನು ವಹಿಸಲಾಯಿತು. ಈ 9 ಪ್ಯಾರಾಚೂಟ್ ಕಮಾಂಡೋ ಪಡೆಯಲ್ಲಿ ಇರುವುದು ಅಸಾಂಪ್ರದಾಯಿಕ ಯುದ್ಧದಲ್ಲಿ ಪರಿಣತಿ ಸಾಧಿಸಿದವರು ಮಾತ್ರ. ಕಾರ್ಗಿಲ್ ಯುದ್ಧ ಮುಗಿದು ಭರ್ತಿ ಒಂದು ತಿಂಗಳು, 1999 ಆಗಸ್ಟ್ 29 ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಫ್ರುದಾ ಕಾಡಿನಲ್ಲಿ ಭಯೋತ್ಪಾದಕರು ಅಡಗಿರುವ ಸುಳಿವು ಸಿಗುತ್ತದೆ. ಮೇಜರ್ ಸುಧೀರ್  ತುಕಡಿಗೆ ಆದೇಶವೂ ಬಂದಾಗಿತ್ತು, ರಾತ್ರಿಯಿಡೀ ಹುಡುಕಾಟ, ಬೆಳಗಾಗುವ ಹೊತ್ತಿಗೆ ಅರಣ್ಯದ ಮಧ್ಯದಲ್ಲಿ ಹೊಳೆಯೊಂದರ ಬಳಿ ತಲುಪುತ್ತಾರೆ ಸುಳಿವು ಎಂಬಂತೆ ಟೂತ್ ಪೇಸ್ಟ್ ನೊರೆ ಕಾಣಿಸುತ್ತದೆ ಕ್ಷಣಾರ್ಧದಲ್ಲಿ ಗುಂಡಿನ ಮೊರೆತವೂ ಆರಂಭವಾಗುತ್ತದೆ. ಇದ್ದ 20 ಭಯೋತ್ಪಾದಕರಲ್ಲಿ 9 ಜನರನ್ನು ಸುಧೀರ್ ಏಕಾಂಗಿಯಾಗಿ ಕೊಲ್ಲುತ್ತಾನೆ, ಜೊತೆಗೇ ಶತ್ರುವಿನ ಗುಂಡೊಂದು ಸುಧೀರನ ಹೊಟ್ಟೆಯನ್ನೇ ಸೀಳುತ್ತದೆ ಆದರೂ ಬೇರೆಡೆ ತನ್ನನ್ನು ಸಾಗಿಸುವುದು ಬೇಡ ಎಂದು ಕುಸಿದ ಸ್ಥಳದಿಂದಲೇ ತನ್ನ ನಿರ್ದೇಶನ ನೀಡುತ್ತಾ 35 ನಿಮಿಷಗಳ ಹೋರಾಟ ಮುನ್ನಡೆಸುತ್ತಾನೆ. ಶತ್ರುಗಳ ಸದ್ದಡುಗುತ್ತಲೇ ಮತ್ತೊಬ್ಬ ವೀರ ಮೇಜರ್ ಕೊನೆಯುಸಿರೆಳೆದಿರುತ್ತಾನೆ.

ಮಿಲಿಟರಿ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯದಲ್ಲಿಯೇ ತಾನು ಅಮ್ಮನಿಗೆ ಹೇಳುತ್ತಿದ್ದಂತೇ ‘’I won’t die in an accident or die of any disease, I will go down in glory.’,  ಎಂಬಂತೆ ನಿಜಾರ್ಥದಲ್ಲಿ ಪಾಕಿಗಳನ್ನು ಕೊಂದ ಕೀರ್ತಿಯೊಂದಿಗೇ ಯುನಿಫಾರಂನಲ್ಲಿಯೇ ಕೊನೆಯುಸಿರೆಳೆಯುತ್ತಾನೆ…

ಅದಕ್ಕೇ ಅಂದಿದ್ದು, ಯುನಿಫಾರಂ ಧರಿಸಲು ಅಸಾಧ್ಯ ಎನ್ನುವ ಸ್ಥಿತಿಯಲ್ಲಿದ್ದವನು ಮಿಲಿಟರಿ ಯುನಿಫಾರಂನಲ್ಲಿ ಕೊನೆಯುಸಿರೆಳೆದ ಎಂದು.

ನಾಳೆ ಕಾರ್ಗಿಲ್ ವಿಜಯ ದಿವಸ, ಕೊನೆಯ ಕ್ಷಣದಲ್ಲಿ ಝುಲು ಪರ್ವತವನ್ನು ನಮ್ಮ ಮಡಿಲಿಗೆ ಅರ್ಪಿಸಿದ, ಮತ್ತೆ ಆಗಸ್ಟ್ 29 ರಂದು ಭಯೋತ್ಪಾದಕರನ್ನು ಹೊಡೆದುರುಳಿಸುತ್ತಲೇ ಮಿಲಿಟರಿ ಯುನಿಫಾರಂ ಅಲ್ಲಿ ಕೊನೆಯುಸಿರೆಳೆದವನನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳದೇ ಇದ್ದರೆ ತಪ್ಪಾದೀತು…

ಜೊತೆಗೇ ಈ ದೇಶದ ಮಾನ ಕಾಪಾಡಿರುವುದು, ಸಮಗ್ರತೆ ಎನ್ನುವುದು ಇನ್ನೂ ಉಳಿದಿರುವುದು, ನಾನಿಂದು ಯಾರ ಭಯವಿಲ್ಲದೇ ಈ ಲೇಖನವನ್ನು ಟೈಪಿಸುತ್ತಿದ್ದೇನೆ ಎಂದಾದರೆ ಇದಕ್ಕೆಲ್ಲಾ ಕಾರಣ ರಾಜೇಶ್ವರಿ ದೇವಿ – ರುಲಿಯಾ ರಾಮ್ ಅಂತಹ ಸಾವುರಾರು ಅಪ್ಪ-ಅಮ್ಮಂದಿರ ಮತ್ತು ಮಕ್ಕಳ ಬಲಿದಾನವೇ!

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!