ಬೇಲಿಯೇ ಎದ್ದು ಹೊಲ ಮೇಯ್ದಂತೆ…ಎಂಬ ಮಾತು ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಲೋಕಾಯುಕ್ತಕ್ಕೆ ಸರಿಯಾಗಿ ಅನ್ವಯವಾಗುತ್ತದೆ. ಯಾವ ಸಂಸ್ಥೆಯನ್ನು ನಾವು ಭ್ರಷ್ಟಾಚಾರದ ನಿಗ್ರಹಕ್ಕಾಗಿ ನೇಮಿಸಿದ್ದೆವೋ ಇವತ್ತು ಅದೇ ಸಂಸ್ಥೆಯಲ್ಲಿ ಭ್ರಷ್ಟಾಚಾರದ ಅರೋಪಗಳು ಕೇಳಿ ಬಂದಿದೆ. ಇದಕ್ಕಿಂತ ವಿಷಾದಕರ ಸಂಗತಿಯೇನಿಗೆ ಹೇಳಿ?
ಹಿಂದೆ ನ್ಯಾ.ವೆಂಕಟಾಚಲಯ್ಯ ಎನ್ನುವವರು ಲೋಕಾಯುಕ್ತರಾಗಿದ್ದರು. ಬಹುಶಃ ಅವರು, ಅವರ ಖದರನ್ನು ಅರಿಯದವರಾರೂ ಇರಲಿಕ್ಕಿಲ್ಲ. ಸ್ವತಃ ಲೋಕಾಯುಕ್ತರಾಗಿದ್ದುಕೊಂಡೇ ಖುದ್ದಾಗಿ ದಾಳಿ ಮಾಡಿ ರೆಡ್ ಹ್ಯಾಂಡಾಗಿ ತಿಮಿಂಗಿಲಗಳನ್ನು ಹಿಡಿಯುವುದು, ಸ್ಥಳದಲ್ಲಿಯೇ ಅಮಾನತು ಮಾಡುವುದು, ಗದರಿಸುವುದು ಅವರ ಸ್ಟೈಲಾಗಿತ್ತು. ಅವರಿಗೆ ಮೊದಲೇ ಮೂವರು ಲೋಕಾಯುಕ್ತರು ಆಗಿ ಹೋಗಿದ್ದರೂ ಲೋಕಾಯುಕ್ತಕ್ಕೆ ಆದರದ್ದೇ ಆದ ಖದರನ್ನು ತಂದುಕೊಟ್ಟಿದ್ದು ಈ ವೆಂಕಟಾಚಲಯ್ಯ. ಲೋಕಾಯುಕ್ತವನ್ನು ಜನರ ಬಳಿ ಕೊಂಡೊಯ್ದಿದ್ದು ಇವರೇ. ಅವರ ಕಾರ್ಯ ದಕ್ಷತೆಯಿಂದಾಗಿ ದಿನಕ್ಕೆ 20-30 ದೂರುಗಳು ಬರುತ್ತಿದ್ದ ಲೋಕಾಯುಕ್ತಕ್ಕೆ ದಿನಕ್ಕೆ 250ಕ್ಕೂ ಹೆಚ್ಚು ದೂರುಗಳು ಬರಲಾರಂಭಿಸಿದವು. ತನ್ನ ದಾಳಿಯ ಸ್ಟೈಲಿನಿಂದಾಗಿ ಲಂಚ ಪಡೆಯುವವರಲ್ಲೂ ಲಂಚ ಕೊಡುವವರಲ್ಲೂ ಎಚ್ಚರಿಕೆ ಮೂಡಿಸಿದ್ದರು. ಮತ್ತು ಇತರರಲ್ಲಿ ಭ್ರಷ್ಟಾಚಾರದ ಕುರಿತಾಗಿ ಜಾಗೃತಿ ಮೂಡಿಸಿ ಆ ಕಾಲದಲ್ಲಿ ಕರ್ನಾಟಕದ ಮನೆ ಮಾತಾಗಿದ್ದರು. ಎಷ್ಟೆಂದರೆ, ಅವರ ಅಧಿಕಾರಾವಧಿ ಮುಗಿದಾದ ಮತ್ತೆ ಅವರನ್ನೇ ಲೋಕಾಯುಕ್ತರನ್ನಾಗಿ ಮುಂದುವರಿಸುವಂತೆ ಸಾವಿರಾರು ಜನ ಆಂದೋಲನ ನಡೆಸಿದ್ದರು.
ತದನಂತರ ಬಂದ ಸಂತೋಷ ಹೆಗ್ಡೆಯವರು ವೆಂಕಟಾಚಲಯ್ಯನವರಷ್ಟು ಖಡಕ್ ಅಲ್ಲದಿದ್ದರೂ ನಿರ್ಧಾರ ತೆಗೆದುಕೊಳ್ಳುವಾಗ ಯಾವುದೇ ಮುಲಾಜಿಗೊಳಗಾಗುತ್ತಿರಲಿಲ್ಲ. ನಿಷ್ಕಳಂಕ ವ್ಯಕ್ತಿತ್ವದ ಹೆಗ್ಡೆಯವರು ಶುರುವಾತಿನಲ್ಲಿ ಸಣ್ಣ ಸಣ್ಣ ದಾಳಿಗಳನ್ನು ನಡೆಸಿ ಕಡೆಗೆ ನಿವೃತ್ತಿಯ ಸಮಯದಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಗಣಿಧಣಿಗಳಾದ ಜನಾರ್ಧನ ರೆಡ್ಡಿ, ಶ್ರೀ ರಾಮುಲು , ಅನಿಲ್ ಲಾಡ್ ವಿರುದ್ಧವಾಗಿ ವರದಿ ಕೊಟ್ಟು ಸರ್ಕಾರದ ಬದಲಾವಣೆಗೂ ಕಾರಣರಾಗಿದ್ದರು. ಆ ಮೂಲಕ ಲೋಕಾಯುಕ್ತವೆಂಬುದು ಯಾವ ರಾಜಕಾರಣಿಗಳ ಮರ್ಜಿಗೂ ಒಳಗಾಗುವುದಿಲ್ಲ ಎಂದು ಸ್ಪಷ್ಟ ಸಂದೇಶ ಕಳುಹಿಸಿದ್ದರು.
ನಿಮಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಕರ್ನಾಟಕ ಲೋಕಾಯುಕ್ತ ಕಾಯಿದೆ ಇಡೀ ದೇಶದಲ್ಲೇ ಬಲಿಷ್ಟ ಲೋಕಾಯುಕ್ತ ಕಾಯಿದೆ. ಆದರೂ ಲಂಚ ಪಡೆದು ಸಿಕ್ಕಿ ಬೀಳುವ ಅಧಿಕಾರಿಗಳನ್ನು ಅಮಾನತುಗೊಳಿಸಬಹುದೇ ಹೊರತು ಅವರಿಗೆ ಶಿಕ್ಷೆ ನೀಡುವ ಅಧಿಕಾರ ನಮ್ಮ ಲೋಕಾಯುಕ್ತಕ್ಕಿಲ್ಲ. ಬಲಿಷ್ಟ ಲೋಕಪಾಲ್, ಲೋಕಾಯುಕ್ತಕ್ಕಾಗಿ ದೇಶಾದ್ಯಂತ ಕೂಗೆದ್ದಿದ್ದರೂ ಲೋಕಾಯುಕ್ತವಿನ್ನೂ ಹಲ್ಲಿಲ್ಲದ ಹಾವಿನಂತೆಯೇ ಇದೆ. ವೆಂಕಟಾಚಲಯ್ಯ, ಸಂತೋಷ್ ಹೆಗ್ಡೆಯವರ ದಾಳಿಗಳಿಂದಾಗಿ ಅಮಾನತುಗೊಂಡವರು, ಅಧಿಕಾರ ಕಳೆದುಕೊಂಡವರು ಈಗ ಮತ್ತೆ ಪ್ರವರ್ಧಮಾನಕ್ಕೆ ಬಂದಿರಬಹುದು. ಮತ್ತೆ ಅಧಿಕಾರದ ಸವಿಯನ್ನು ಮೆಲ್ಲುತ್ತಿರಬಹುದು. ಆದರೆ ಅವರಿಬ್ಬರ ಕಾರ್ಯ ದಕ್ಷತೆಯ ಪರಿಶ್ರಮದಿಂದಾಗಿ ಇವತ್ತಿಗೂ ಲಂಚ ಪಡೆಯಲು ಹಿಂದೆ ಮುಂದೆ ನೋಡುವವರಿದ್ದಾರೆ. ಆವತ್ತು ಸಿಕ್ಕಿ ಬಿದ್ದವರು ಮತ್ತೆ ಪಡೆಯಲು ಹಲವು ಭಾರಿ ಯೋಚಿಸುತ್ತಾರೆ.
ಇದು ನಮ್ಮ ಲೋಕಾಯುಕ್ತದ ಬಗ್ಗೆ ಇರುವ ಹಿಸ್ಟರಿಯಾಯ್ತು. ಅಂತಹಾ ಲೋಕಾಯುಕ್ತಕ್ಕೆಯೇ ಈಗ ಮಂಕು ಬಡಿದಿದೆ. ಪಕ್ಕದ ಮನೆಯಲ್ಲಿನ ಹೆಗ್ಗಣಗಳನ್ನು ಹುಡುಕುತ್ತಿದ್ದ ಲೋಕಾಯುಕ್ತರೀಗ ತನ್ನ ಮನೆಯ ಹೆಗ್ಗಣವನ್ನೇ ಹುಡುಕಬೇಕಾಗಿದೆ.
ಇದು ನೀವು ನಂಬಲೇ ಬಕಾದ ಸಂಗತಿ. ಲೋಕಾಯುಕ್ತ ಕಛೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬರು ಲೋಕೋಪಯೋಗಿ ಇಲಾಖೆ ಇಂಜಿನಿಯರೊಬ್ಬರಿಗೆ ಒಂದು ಕೋಟಿ ಲಂಚ ಕೊಡಬೇಕು ಇಲ್ಲದಿದ್ದರೆ ನಿಮ್ಮ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗುವುದೆಂದು ಬೆದರಿಕೆ ಹಾಕಿದ್ದಾರೆಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಒಬ್ಬರು ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಬಳಿ ದೂರು ನೀಡಿದ್ದರು. ಈ ಬಗ್ಗೆ ಕೂಲಂಕುಷ ತನಿಖೆ ನಡೆಸುವಂತೆ ಸ್ವತಃ ಲೋಕಾಯುಕ್ತರಿಗೆ ಪತ್ರ ಬರೆದಿದ್ದ ಸೋನಿಯಾ ನಾರಂಗ್ ಅವರಿಗೆ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ. ಹೋಗಲಿ ಆ ಕುರಿತು ಸ್ವಷ್ಟ ತನಿಖೆಯನ್ನೂ ಕೈಗೊಳ್ಳುವಂತೆ ನಿರ್ದೇಶನವನ್ನೂ ನೀಡಿಲ್ಲ. ಅದೂ ಅಲ್ಲದೆ ನಿನ್ನೆಯಷ್ಟೇ ತನಿಖೆಯನ್ನು ಕೈಗೊಂಡಿದ್ದ ಸೋನಿಯಾ ನಾರಂಗ್ ಅವರಿಗೆ ಈ ಪ್ರಕರಣದ ಕುರಿತಾಗಿ ಯಾವುದೇ ತನಿಖೆ ನಡೆಸದಂತೆ ಸ್ವತಃ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರೇ ಸೂಚಿಸಿದ್ದಾರೆ. ಇದು ಹಲವು ಅನುಮಾನಗಳನ್ನು ಹುಟ್ಟಿ ಹಾಕಿದೆ.
ಲೋಕಾಯುಕ್ತರ ಪುತ್ರನ ಹೆಸರೇ ಈ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವುದರಿಂದ ಭಾಸ್ಕರ್ ರಾವ್ ಅವರ ನಡೆಗಳನ್ನು ಅನುಮಾನದಿಂದ ನೋಡುವಂತಾಗಿದೆ. ತ್ವರಿತ ಗತಿಯಿಂದ ನ್ಯಾಯಾವನ್ನೊದಗಿಸಬೇಕಾದ ಲೋಕಾಯುಕ್ತರೇ ತನಿಖೆಯನ್ನು ನಿಲ್ಲಿಸುವಂತೆ ಸೂಚಿಸಿದರೆಂದರೆ ಏನರ್ಥ? ಲೋಕಾಯುಕ್ತದ ಮೇಲೆಯೇ ಆರೋಪ ಬಂದಿರುವಾಗ ಅದನ್ನು ತಕ್ಷಣ ಪರಿಹರಿಸಿ ಸ್ಪಷ್ಟನೆ ನೀಡಿ ಲೋಕಾಯುಕ್ತದ ಗೌರವವನ್ನು ಎತ್ತಿಹಿಡಿಯುವುದು ಮಾನ್ಯ ಲೋಕಾಯುಕ್ತರ ಕರ್ತವ್ಯವಲ್ಲವೇ?
ಇವತ್ತು ಸಣ್ಣ ಸಣ್ಣ ಅಂಗಡಿ ಮುಂಗಟ್ಟುಗಳಿಂದ ಹಿಡಿದು ಶಾಪಿಂಗ್ ಮಾಲುಗಳಲ್ಲಿ, ಗ್ರಾಮ ಪಂಚಾಯತಿನಿಂದ ಹಿಡಿದು ವಿಧಾನ ಸೌಧದವರೆಗೂ ಸಿಸಿ ಕ್ಯಾಮೆರಾಗಳಿರುತ್ತವೆ. ಅಲ್ಲಿನ ಪ್ರತಿಕ್ಷಣದ ಆಗುಹೋಗುಗಳು ಅದರಲ್ಲಿ ರೆಕಾರ್ಡ್ ಆಗುತ್ತದೆ. ಆದರೆ ನಮ್ಮ ಲೋಕಾಯುಕ್ತ ಕಛೇರಿಯಲ್ಲಿ ಸೆರೆಯಾದ ದೃಶ್ಯಗಳನ್ನೆಲ್ಲಾ ಹಿಡಿದಿಟ್ಟುಕೊಳ್ಳುವ ತಂತ್ರಾಂಶವಿಲ್ಲವಂತೆ. ಇದು ಪಾರದರ್ಶಕ ಆಡಳಿತ ವ್ಯವಸ್ಥೆಗಾಗಿ ನಾವು ಸ್ಥಾಪಿಸಿರುವ ಲೋಕಾಯುಕ್ತದೊಳಗಿನ ಪಾರದರ್ಶಕತೆಗೆ ಕನ್ನಡಿ ಹಿಡಿದಂತಿದೆ. ಅದೂ ಅಲ್ಲದೆ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರ ನಡುವೆ ಭಿನ್ನಾಭಿಪ್ರಾಯ ಮೂಡಿರುವುದು, ಹೊಂದಾಣಿಕೆಯಿಲ್ಲದೆ ವಿಭಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಇಡೀಯ ಲೋಕಾಯುಕ್ತ ಸಂಸ್ಥೆಯನ್ನೇ ನಗೆಪಾಟಲಿಗೀಡುಮಾಡಿದೆ. ಒಮ್ಮೆ ಲೋಕಾಯುಕ್ತರೇ ತನಿಖೆಗೆ ತಡೆ ನೀಡುವುದು ಮತ್ತೊಮ್ಮೆ ಉಪಲೋಕಾಯುಕ್ತರು ತನಿಖೆಯನ್ನು ಮೂಂದುವರಿಸುವಂತೆ ಆದೇಶಿಸುವುದು ಮುಂತಾದ ಘಟನೆಗಳು ಇಡೀಯ ಲೋಕಾಯುಕ್ತವನ್ನೇ ಬೀದಿಗೆ ತಂದು ನಿಲ್ಲಿಸಿದೆ.
ಲೋಕಾಯುಕ್ತವೊಂದು ಸ್ವಾಯುತ್ತ ಸಂಸ್ಥೆಯಾದರೂ ಬರೀ ಸಣ್ಣ ಸಂಸ್ಥೆಯೇನಲ್ಲ. ಅದರಲ್ಲಿ ಈಗಾಗಲೇ ಸಾವಿರಾರು ಕೇಸುಗಳು ಕೊಳೆಯುತ್ತಾ ಬಿದ್ದಿದೆ. ಯಡಿಯೂರಪ್ಪ, ಕುಮಾರ ಸ್ವಾಮಿ, ರೆಡ್ಡಿ ಸಹೋರದರ ಕೇಸುಗಳು ಇನ್ನೂ ತನಿಖೆಯಲ್ಲಿದೆ. ಈಗ ಲೋಕಾಯುಕ್ತದಲ್ಲಿಯೇ ಆರೋಪ ಕೇಳಿ ಬಂದಿರುವಾಗ ಮೇಲಿನ ಕೇಸುಗಳಲ್ಲೆಲ್ಲಾ ಸ್ಪಷ್ಟ ನ್ಯಾಯ ಹೊರಬರುತ್ತದೆಂದು ಏನು ಗ್ಯಾರಂಟಿ? ರಾಜಕೀಯ ನಾಯಕರುಗಳ ಮೇಲಿನ ದೂರುಗಳು ದುರುದ್ದೇಶಪೂರ್ವಕವಾಗಿಯೂ ಆಗಿರಬಹುದು. ಅವುಗಳಲ್ಲೆಲ್ಲಾ ಲೋಕಾಯುಕ್ತದೊಳಗಿನವರ ಹಸ್ತಕ್ಷೇಪವಿಲ್ಲವೆಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿದೆಯೇ? ಹಣ ಕೊಡಲು ಬ್ಲಾಕ್ ಮೈಲ್ ಮಾಡಿ, ಹಣ ಕೊಟ್ಟರವರ ಕೇಸು ಮುಚ್ಚಿ ಹಾಕಿ, ಕೊಡದಿದ್ದವರಿಗೆ ಇನ್ನೂ ಕಿರಿಕಿರಿ ಮಾಡುವುದಿಲ್ಲ ಎಂದು ಹೇಳುವುದು ಯಾವ ಧೈರ್ಯದ ಮೇಲೆ? ಒಬ್ಬ ಇಂಜಿನಿಯರ್ ನ ದೂರು ಅಥವಾ ಲೋಕಾಯುಕ್ತ ಅಧಿಕಾರಿಯ ಮನವಿಗೇ ಈ ಗತಿ ಆದ್ರೆ ಲೋಕಾಯುಕ್ತದಲ್ಲಿ ಜನಸಾಮಾನ್ಯರ ಮಾತಿಗೇನು ಬೆಲೆಯಿದೆ??
ಕರ್ನಾಟಕ ಲೋಕಾಯುಕ್ತವೆಂಬುದು ಬರೀ ಒಂದು ತನಿಖಾ ಸಂಸ್ಥೆಯಾಗುಳಿಯದೆ ಜನರ ಮನಸ್ಸಿನಲ್ಲಿ ಹೋರಾಟದ ಪ್ರತಿಬಿಂಬವಾಗಿ ಛಾಪನ್ನೊತ್ತಿದೆ. ನಮ್ಮ ಶಾಸಕಾಂಗ ಮತ್ತು ಕಾರ್ಯಾಂಗ ದಾರಿ ತಪ್ಪಿದಾಗ ಸರಿದಾರಿಗೆ ತರಲು ನಮ್ಮ ಬಳಿಯಲ್ಲಿರುವ ಒಂದೇ ಒಂದು ಆಯುಧ. ಈ ಲೋಕಾಯುಕ್ತ ಸಂಸ್ಥೆ. ಆದರೆ ಲೋಕಾಯುಕ್ತದೊಳಗಿನ ಸದ್ಯದ ಎಲ್ಲಾ ಘಟನೆಗಳು ನಮ್ಮೆಲ್ಲರ ವಿಶ್ವಾಸಾರ್ಹತೆಗೆ ಕೊಡಲಿಯೇಟು ನೀಡಿದೆ. ವೆಂಕಟಾಚಲಯ್ಯ, ಸಂತೋಷ್ ಹೆಗ್ಡೆಯವರು ತಂದು ಕೊಟ್ಟಿದ್ದ ಖ್ಯಾತಿಯನ್ನು ಮಂಕಾಗಿಸಿದೆ. ಲೋಕಾಯುಕ್ತವೆಂಬುದು ಎಷ್ಟು ಪಾರದರ್ಶಕ ಸಂಸ್ಥೆಯೆಂದರೆ ಹಿಂದೊಮ್ಮೆ ಶಿವರಾಜ್ ಪಾಟೀಲರು ಲೋಕಾಯುಕ್ತರಾಗಿ ಆಯ್ಕೆಯಾದಾಗ ಅವರ ಮೇಲೆ ಏನೋ ಸಣ್ಣ ಆರೋಪ ಕೇಳಿ ಬಂದಿದ್ದಕ್ಕೆ ಎರಡೇ ತಿಂಗಳಿನಲ್ಲಿ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದರು. ದೊಡ್ಡ ದೊಡ್ಡ ತಿಮಿಂಗಿಲಗಳಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತದಲ್ಲಿಯೇ ಕೆಲ ತಿಮಿಂಗಿಲಗಳು ಸೇರಿಕೊಂಡಿವೆ ಎಂದರೆ ಜನ ಸಾಮಾನ್ಯರು ಇನ್ನು ಯಾರನ್ನು ನಂಬುವುದು ಯಾರನ್ನು ಬಿಡುವುದು? ಭ್ರಷ್ಟಾಚಾರದ ವಿರುದ್ಧ ಹೋರಾಡಲು ಲೋಕಾಯುಕ್ತವೆಂಬ ಬೇಲಿಯನ್ನು ಹಾಕಿಕೊಂಡಿರುವ ನಮಗೆ ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೇ??