ಅಂಕಣ

ಕಾವ್ಯರಚನೆ- ಅಮೂರ್ತಾನುಭವ ಮೂರ್ತ ರೂಪ ತಳೆವ ಸಂಕೀರ್ಣ ಪ್ರಕ್ರಿಯೆ

ಸವಿನುಡಿಯ ಸಿರಿಗುಡಿಯ ಕಟ್ಟುವರು ನಾವು

ಸೊನ್ನೆಯಲಿ ಸಗ್ಗವನು ಕೆತ್ತುವರು ನಾವು;

ಶೂನ್ಯದಲಿ ಪೂರ್ಣತೆಯ ಬಿತ್ತುವರು ನಾವು

ನಮ್ಮ ಇಂದಿನ ಕನಸು, ನಿಮ್ಮ ನಾಳೆಯ ಮನಸು||

ಎಂಬ ‘ಕುವೆಂಪು’ ವಿರಚಿತ ಕವನದ ಸಾಲುಗಳು ಕಾವ್ಯರಚನೆಯ ಅನೂಹ್ಯ ವಿಲಾಸವನ್ನೂ, ಕವಿತ್ವ ಉಂಟು ಮಾಡುವ ಬೆರಗನ್ನೂ ಸುಂದರವಾಗಿ ಚಿತ್ರಿಸುತ್ತವೆ. ಕಾವ್ಯರಚನೆ ಎಂಬುದು ಕವಿಮನಸ್ಸೊಂದು ತಾನು ಪ್ರಕೃತಿಯ ಲೀಲೆಯಡಿಯಲ್ಲಿ ನಡೆವ ದೈನಂದಿನ ಸನ್ನಿವೇಶಗಳಿಂದ ಸಂವೇದಿತನಾದಾಗ, ತನ್ನೊಳಡಗಿರುವ ಕವಿತ್ವ ಶಕ್ತಿಯ ಬೆರಗಿನಿಂದ ಸೃಜಿಸುವ ಅಪೂರ್ವ ಕಲೆ. ಅಲರೊಳಗೆ ಬೆರೆತುಹೋದ ಮಕರಂದದಂತೆ ಕವಿತ್ವವೆಂಬುದು ಅಭೇದ್ಯ. ಊಹಿಸಲಾರದ ಸೃಷ್ಟಿಯ ಅನಾವರಣದ ಪರಿ. ಶತಶತಮಾನಗಳಿಂದ ಭಾವತೀವ್ರತೆಯ ಹೊನಲಿಗೆ ಅನೂನ ತಡೆಯಾಗಿ ನಿಂತು, ಮಾನಸಿಕ ತುಮುಲಗಳನ್ನು ನಿವಾರಿಸಿ, ಆನಂದದ ಹೊಳಹನ್ನು ಬಿತ್ತರಿಸಲು ಮಾನವ ಕಂಡುಕೊಂಡ ಅಪೂರ್ವ ವರ ಈ ಕಾವ್ಯಶಕ್ತಿ. ಭಾಷೆಯ ವಿಧವಿಧ ಆಂತರಿಕ ಕೊಂಡಿಗಳನ್ನು ಬೆಸೆದು, ಅಲ್ಲಿ ಭಾವಾಂತರ್ಗತ ವರ್ಣಗಳನ್ನು ಸಾಕ್ಷಾತ್ಕರಿಸುವುದು. ಸಹಜ- ಸಾಮಾನ್ಯ ನೋಟಕ್ಕೆ ಗೋಚರವಾಗದ ಸೂಕ್ಷ್ಮ ಮಜಲುಗಳನ್ನು ಸಂಶೋಧಿಸಿ, ಭಾವಧಾತುವಿನೊಂದಿಗೆ ಉಣಬಡಿಸುವ ಅನುಪಮ ಮಾರ್ಗವಾಗಿದೆ. ‘ಪ್ರತಿಭೆ’ಯೇ ಮೂಲವಾದರೂ ಅಧ್ಯಯನಶೀಲತೆ, ವಿಶಾಲದೃಷ್ಟಿಕೋನ ಕಾವ್ಯರಚನೆಗೆ ಗಟ್ಟಿಯಾದ ಆಧಾರಸ್ತಂಭಗಳು. ಜಗತ್ತಿನ ಶೇ. ೯೯ ರಷ್ಟು ಕಾವ್ಯಮೀಮಾಂಸಕರು ಪ್ರತಿಭೆಯೇ ಪ್ರಮುಖ ಹಾಗೂ ಏಕಮಾತ್ರ ಅಗತ್ಯ ಧಾತುವೆಂದು ಪರಿಗಣಿಸಿದರೂ, ನಿರಂತರ ಅಭ್ಯಾಸ, ವಿಷಯ ಸಂಗ್ರಹಣೆ, ವಿಭಿನ್ನ ವಿಷಯಗಳ ಕುರಿತ ಸೂಕ್ಷ್ಮ ತಿಳಿವು ಒಂದು ಕಾವ್ಯವನ್ನು ಹೆಚ್ಚು ಗಟ್ಟಿಯಾಗಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಪೂರ್ವದಲ್ಲಿ ಅನುಭವವೇ ಕಾವ್ಯರಚನೆಗೆ ಪ್ರಧಾನ ಧಾತುವಾಗಿತ್ತು. ಕಾರಣ ಆಗಿನ ಕಾವ್ಯ ಅಲೌಕಿಕವಾದದ್ದು. ಅನುಭಾವ ಪ್ರಧಾನವಾದದ್ದಾಗಿತ್ತು. ಕಾಲಚಕ್ರ ಉರುಳುತ್ತಿರುವಂತೆ  ಬದಲಾಗುತ್ತಿರುವ ಸಾಹಿತ್ಯ ಸ್ವರೂಪ,  ವಸ್ತುನಿಷ್ಠತೆಯನ್ನೂ ವಿಷಯ ವಿಸ್ತಾರತೆಯನ್ನೂ ಬಯಸುತ್ತದೆ. ಏಕೆಂದರೆ  ಈಗ ಕಾವ್ಯಕ್ಕೆ ಹೆಚ್ಚಾಗಿ ವಿಷಯವಾಗಿರುವುದು ಯಾಂತ್ರಿಕ ಬದುಕಿಗೆ ಪಕ್ಕಾಗಿ, ತೊಳಲಾಡುತ್ತಿರುವ ಭಾವನಾತ್ಮಕತೆ ಹಾಗೂ ಸಾಮಾಜಿಕ ಸ್ಥಿತ್ಯಂತರಗಳು.

‘ಕಾವ್ಯರಚನಾ ಕೌಶಲ್ಯ ‘ ಜನ್ಮಾಂತರ್ಗತವಾದುದು ಎಂದು ವಾದಿಸುವ ಒಂದು ದೊಡ್ಡ ಗುಂಪೇ ಇದೆ. ಆದರೆ ಪ್ರತಿಯೊಂದು ಹೃದಯದಲ್ಲೂ ಭಾವನೆಗಳಿಂದ ಸಂವೇದನೆಗೊಳಪಡುವ ಒಂದು ಚೇತಸಶಕ್ತಿಯಿದೆ. ವ್ಯತ್ಯಾಸವಾಗುವುದು ಈ ಸಂವೇದನೆಯ ತೀವ್ರತೆಯಷ್ಟೇ! ಒಂದು ವಿಷಯವನ್ನು ಕಂಡಾಗ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುವ ಆಂತರಿಕ ಪ್ರತಿಸ್ಪಂದನೆ ಕವಿಮನಸ್ಸನ್ನು ಸಾಮಾನ್ಯ ಮನಸ್ಸುಗಳಿಂದ ವಿಶೇಷವಾಗಿಸಿ ಬೇರ್ಪಡಿಸುತ್ತದೆ. ಒಣಗಿದ ಬೋಳು ವೃಕ್ಷವೊಂದು ಹಲವ್ಯಕ್ತಿಗಳಿಗೆ ಕೇವಲ ಒಂದು ಒಣವೃಕ್ಷವಾಗಿಯಷ್ಟೇ ಕಂಡರೆ, ಕವಿಮನಸ್ಸೊಂದಕ್ಕೆ ಅದು ಬೀತಬದುಕಿನ ಪ್ರತಿಬಿಂಬದಂತೆ ಗೋಚರವಾಗಬಹುದು. ಮತ್ತೊಂದು ಮನಕ್ಕೆ ಅದು ಇನ್ನಷ್ಟು ಸಂವೇದನೆ ಮೂಡಿಸಿ, ಇನ್ನ್ಯಾವುದೋ ಸ್ವರೂಪದಿಂದ ಕಾವ್ಯದಲ್ಲಿ ವ್ಯಕ್ತವಾಗಬಹುದು. ಜಗತ್ತಿನಲ್ಲಿ ಕವಿಯಲ್ಲದವ ಯಾರೂ ಇಲ್ಲ. ಜಗತ್ತಿನ ಲೀಲೆಯಾಟದಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಪ್ರತಿಯೊಬ್ಬರೂ ಕಾವ್ಯದ ಮೋಡಿಗೆ ಸೋತುಹೋದವರೇ. ಆದರೆ ಕೆಲವೆಡೆ ಅದು ಗೋಚರವಾದರೆ, ಇನ್ನೂ ಕೆಲವೆಡೆ ನಿರ್ಲಕ್ಷ್ಯ, ಸುಪ್ತಅರಿವು, ದೈನಂದಿನ ಜಂಜಾಟಗಳಂಥ ಪದರುಗಳ ತಳದಲ್ಲಿ ಮರೆಯಾಗಿಬಿಡುತ್ತದೆ.

ಯಾರು ಬೇಕಾದರೂ ಬರೆಯಬಹುದು. ಆದರೆ ಬರೆದುದೆಲ್ಲಾ ಸಾಹಿತ್ಯವಾಗಿಬಿಡಲು ಸಾಧ್ಯವಾ? ಸಾಹಿತ್ಯವಾಗಬಹುದೇನೋ, ಆದರೆ ಕಾವ್ಯವಾಗಲಾರದು.  ಸಾಹಿತ್ಯದ ಇತರ ಪ್ರಾಕಾರಗಳಿಗೆ ಹೋಲಿಸಿದರೆ ಕಾವ್ಯರಚನಾ ಪ್ರಕ್ರಿಯೆ ತೀರಾ ಸಂಕೀರ್ಣವಾದದ್ದು. ಪದಗಳ ಮಿತಿಯೊಂದಿಗೆ , ಭಾವತೀವ್ರತೆಯಲ್ಲಿ ಗಾಢತೆಯನ್ನು ಬಯಸುವುದರಿಂದಲೇ ಕಾವ್ಯರಚನೆ ಒಂದು ಸವಾಲು. ಆದ್ದರಿಂದಲೇ ಕಾವ್ಯರಚನೆ ಜಗತ್ತಿನಲ್ಲಿ ಅತಿಹೆಚ್ಚು ಜಿಜ್ಞಾಸೆಗೊಳಗಾಗಿರುವುದು ಮತ್ತು ಅದರ ಕುರಿತು ಅಷ್ಟೊಂದು ಮೀಮಾಂಸೆ ಕೃತಿಗಳು ರಚಿತವಾಗಿರುವುದು. ಕನ್ನಡ ಸಾಹಿತ್ಯದಲ್ಲಿ ಆದಿಕವಿಗಳಿಂದ ಮೊದಲುಗೊಂಡು ನವ್ಯ, ನವೋದಯದ ಹಲವಾರು ಅನುಭವಸ್ಥ ಸಾಹಿತಿಗಳು ಕೆಲ ಕಾವ್ಯತತ್ತ್ವಗಳನ್ನು ನೀಡಿರುವರು. ವಿವರಣೆಯ ರೀತಿ ವಿಭಿನ್ನವಾಗಿದ್ದರೂ, ಅವುಗಳ ಒಟ್ಟು ಸಾರಾಂಶ ಒಂದೇ ಆಗಿದೆ. ಹಾಗೆಂದು ಯಾವುದೇ ಕಾವ್ಯವನ್ನು ಶಾಸ್ತ್ರದ ಚೌಕಟ್ಟಿನೊಳಗೆ ನಿರ್ಬಂಧಿಸಲಾಗದು. ಹಾಗೂ ನಿರ್ಬಂಧಿಸಿದ್ದೇ ಆದರೆ ಅದು ಆ ಕಾವ್ಯದ ಸಹಜ ಸೌಂದರ್ಯ, ಆಂತರಿಕ ಸಂವೇದನಾಶೀಲತೆಗೆ ಪೆಟ್ಟು ನೀಡುತ್ತದೆ. ಆದರೆ ಕಾವ್ಯವೊಂದು ವಾಚಕನ ಸೂಕ್ಷ್ಮಾಂತರ್ಗತ ಭಾವಜಿಹ್ವೆಗೆ ರಸಾಸ್ವಾದಿತವಾಗಬೇಕಾದ್ದೇ ಆದರೆ ಅದು ಶಾಸ್ತ್ರೀಯತೆಯ ಕೆಲ ಚೌಕಟ್ಟುಗಳನ್ನು ಗಮನಿಸುವುದೊಳಿತು ಎಂಬುದಷ್ಟೇ ಕಾಳಜಿ. ಉದಾಹರಣೆಗೆ  ಪೂರ್ವದಲ್ಲಿ ಆದಿ, ಅಂತ್ಯ ಅಥವಾ ಮಧ್ಯಪ್ರಾಸಗಳಿಗೆ ಕಾವ್ಯಲಕ್ಷಣಗಳಲ್ಲಿ ಪ್ರಮುಖವಾದ ಒಂದು ಸ್ಥಾನವಿತ್ತು. ಆದರೆ ಆಧುನಿಕತೆಯ ರಶ್ಮಿ ಪಸರಿಸುತ್ತಿರುವಂತೆ, ಪ್ರಾಸದ ಹಂಗಿರದ ಹಲವು ಕಾವ್ಯಗಳು ವಿರಚಿತಗೊಂಡವು. ಪ್ರಾಸಕ್ಕಿಂತ ಕಾವ್ಯವೊಂದು ಭಾವನಾತ್ಮಕ ಪ್ರತಿಸ್ಪಂದನ ಮೂಡಿಸುವುದು ಅಗತ್ಯ ಎಂಬ ನವ ಆಲೋಚನೆಯ ಸೆಳೆತದೊಂದಿಗೆ ಕಾವ್ಯವನ್ನು ವಿಶ್ಲೇಷಿಸುವ ಪ್ರಬಲ ಮಾನಸಿಕ ಪರಂಪರೆಯೊಂದು ಆಧುನಿಕ ಕವಿಗಳಲ್ಲಿ ಹುಟ್ಟಿಕೊಂಡಿತು. ಈ ವಾದವನ್ನು ಮುಕ್ತಮನಸ್ಸಿನಿಂದ ಒಪ್ಪಿಕೊಳ್ಳಬಹುದಾಗಿದ್ದರೂ, ಪ್ರಾಸ ಕಾವ್ಯದ ಲಾಲಿತ್ಯವನ್ನು ಹಿಗ್ಗಿಸಿ, ಹೆಚ್ಚು ಹೃದಯಸ್ಪರ್ಶಿಯಾಗಿಸುವುದೆಂಬುದು ಮಾತ್ರವೇ ಸಾರ್ವಕಾಲಿಕ ಸತ್ಯ. ಇತ್ತೀಚಿನ ಕಾವ್ಯಗಳು ಗದ್ಯದ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನೂ ಕಾಣಬಹುದು. ಇದು ಕಾವ್ಯದ ಲಾಲಿತ್ಯವನ್ನು ಸೊರಗಿಸಿ, ಅದರ ಸಹಜ ಸೌಂದರ್ಯಕ್ಕೆ ಚ್ಯುತಿಯುಂಟು ಮಾಡುವುದು. ನಿರಂತರ ಅಧ್ಯಯನಶೀಲತೆ ಮಾತ್ರವೇ ಯಾವುದೇ ರೀತಿಯ ಸಾಹಿತ್ಯಕ್ಕೆ ಶಕ್ತಿ ತುಂಬಿ, ಜೀವಸಂಚಯವುಂಟುಮಾಡಲು ಸಾಧ್ಯ. ಜ್ಞಾನ ವಿಸ್ತಾರತೆ ಹೆಚ್ಚಾದಂತೆಲ್ಲಾ ಒಂದು ವಸ್ತು ಅಥವಾ ವಿಷಯವನ್ನು ವಿಭಿನ್ನ ಮಜಲುಗಳಿಂದ ಪರಿಗ್ರಹಿಸುವ ಸಾಮರ್ಥ್ಯ ತನ್ನಿಂತಾನೇ ಉದ್ಭವವಾಗುವುದು. ಸೊರಗಿದ ಅಧ್ಯಯನಶೀಲ ಮನಸ್ಸು, ಕಂಡುಂಡುದೆಲ್ಲವನ್ನೂ ಹೊತ್ತಿಗೆಗಿಳಿಸಿಬಿಡಬೇಕೆಂಬ ಆತುರ ಮನೋಸ್ಥಿತಿ ಗಟ್ಟಿ ಸಾಹಿತ್ಯವನ್ನು ಸೃಜಿಸಲಾರದು. ಹಲವಾರು ಮೂಲಗಳಿಂದ ಉದಕ ಪಡೆದುಕೊಳ್ಳುತ್ತಾ ಹಿಗ್ಗುತ್ತಾ ಹೋಗುವ ಕಡಲಿನಂತೆಯೇ, ವಿಸ್ತಾರವಾದ ಓದು, ಚಿತ್ತದ ಒಳಗಣ್ಣಿನಿಂದ ಮಾಡಿದ ಪರಿವೀಕ್ಷಣೆ, ತೀರದ ಉತ್ಸಾಹದ ದಾಹ ಕವಿತ್ವದೀಪ್ತಿಯನ್ನು ಇನ್ನಷ್ಟು ಪ್ರಜ್ವಲಿಸುತ್ತದೆ.

ಜ್ಞಾನಭಂಡಾರವನ್ನು ಸೂಕ್ತರೀತಿಯಿಂದ ದುಡಿಸಿಕೊಳ್ಳುವುದು ಕೂಡ ಸೃಜನಶೀಲ ಕವಿತ್ವದ ಪ್ರಮುಖ ಲಕ್ಷಣ. ಭಾಷಾವಾಹಿನಿ ಚಲಿಸುತ್ತಿರುವಂತೆಲ್ಲಾ ನೆರೆ- ಹೊರೆಯ ಭಾಷೆಗಳೊಂದಿಗೆ ಕೊಳ್ಳು- ಕೊಡುಗೆ ನಡೆಸಿ, ಕಡಲನ್ನು ನದಿ ಸೇರಿದಷ್ಟೇ ಸೂಕ್ಷ್ಮವಾಗಿ ತನ್ನ ಆಂತರಿಕ ಸ್ವರೂಪದಲ್ಲಿ ಬದಲಾವಣೆ ಹೊಂದುತ್ತದೆ. ಆ ಬದಲಾವಣೆಗೆ ತಕ್ಕಂತೆ ಕಾವ್ಯ ಸೃಜಿಸುವಿಕೆಯೂ ಬದಲಾದಾಗ ಅಲ್ಲಿ ಕ್ರಿಯಾಶೀಲತೆ ಏರ್ಪಡುತ್ತದೆ. ಸಾಹಿತ್ಯಲೋಕ ವಿಸ್ತಾರವಾಗುತ್ತಾ ಸಾಗುತ್ತದೆ. ಕಾವ್ಯದ ನಡುನಡುವೆ ತಲೆದೋರುನ ನವ- ವಿರಳ ಪದಗಳು ಕರಿಮಣಿಯ ನಡುವಿನ ಚೆಂಬವಳದಂತೆ ಕಂಗೊಳಿಸುತ್ತವೆ. ಒಟ್ಟಾರೆ, ತುಸು ಲಾಲಿತ್ಯ ಹಾಗೂ ಆಯಾ ಭಾಷಾ ಭಂಡಾರದ ಸುಂದರ ಪದಗಳ ಸಮನ್ವಯದೊಂದಿಗೆ, ಭಾವನಾತ್ಮಕತೆಯಡಿಯಲ್ಲಿ ರಚಿತವಾದ ಕಾವ್ಯಗಳು ಸೊಗಸಾಗಿ ವಾಚಕನಿಗೆ ಪ್ರಿಯವಾಗುತ್ತವೆ. ಇದೇ ಕುವೆಂಪು ಕಾವ್ಯಗಳ ಬೆರಗು! ದೈನಿಕ ಜೀವನದಲ್ಲಿ ಬಳಕೆಯಲ್ಲಿಲ್ಲದ ಎಷ್ಟೋ ಸುಂದರ ಪದಗಳು, ಪಾಂಡಿತ್ಯದೊಂದಿಗೆ ಬೆರೆತು ಅವರ ಕಾವ್ಯಮಾಲೆಯಲ್ಲಿ ಅನರ್ಘ್ಯ ರತ್ನಗಳಾಗಿವೆ. ಹೀಗೆಂದು ಅರ್ಥಗರ್ಭಿತವಾಗಿರದ ಕಾವ್ಯವೊಂದಕ್ಕೆ ಎಷ್ಟೇ ವಿನೂತನ ಪದಪುಂಜಗಳಿಂದ ಸಿಂಗರಿಸಿದರೂ ಅದು ಧ್ವನಿಪೂರ್ಣವಾಗಲಾರದು. ಇಲ್ಲಿ ಭಾವವೇ ಪ್ರಮುಖ. ಆದರೆ ಲಾಲಿತ್ಯವೂ ಅಗತ್ಯ!

ವಾಸ್ತವವನ್ನು ವಾಸ್ತವಿಕವಾಗಿಯೇ ಕಟ್ಟಿಕೊಡುವುದು ಕಾವ್ಯದ ಭಾವನಾನ್ವಿತ ಸೌಂದರ್ಯಕ್ಕೆ ಚ್ಯುತಿಯುಂಟುಮಾಡುವುದು.ಪ್ರತಿ ಬಾರಿ ವಾಚಿಸಿದಾಗಲೂ ಹೊಸ ಹೊಸ ಒಳಾರ್ಥದ ಪದರುಗಳನ್ನು ಸರಿಸುವಂತಾದರೆ ಅದು ಕಾವ್ಯವೊಂದರ ದಿಗ್ವಿಜಯ! ಒಂದು ಕಾವ್ಯ ಸುಂದರವಾಗಬೇಕಾದರೆ ಜಗತ್ತಿನ ಲೀಲೆಯ ವಿಭಿನ್ನ ಮಜಲುಗಳಿಗೆ ಕವಿ ಹುಚ್ಚನಾಗಬೇಕು, ಆಗ ಅವನ ಕವಿತ್ವ ಮೋಡಿಯಾಗುತ್ತದೆ! ಅಮೂರ್ತಾನುಭವವನ್ನು ಮೂರ್ತವಾಗಿ ಕಟ್ಟಿಕೊಡುವ ಕೈಂಕರ್ಯದಲ್ಲಿ ಕವಿ ವಾಸ್ತವಿಕತೆಯನ್ನೂ ಮೀರಿ ಭಾವನಾತ್ಮಕತೆಯನ್ನು ನುಸುಳಿಸುತ್ತಾನೆ. ಈ ಮೂರ್ತಶಿಲ್ಪ ಗಟ್ಟಿಯಾಗಬೇಕಾದರೆ ಅದು ಸ್ವಾನುಭವದಿಂದ ಮಾತ್ರವೇ ಸಾಧ್ಯ. ಹೃದಯದೊಳ ಅನುರಣನ ಹಾಳೆಯ ಮೇಲೆ ಅಂಕುರಿಸುತ್ತದೆ.

ಬಿ. ಎಂ. ಶ್ರೀ ಹೇಳುತ್ತಾರೆ, “ಒಬ್ಬ ಕವಿಯ ವಸ್ತು- ವಿಷಯಗಳೆಡೆಗಿನ ಸ್ಪಂದನೆ ಅದನ್ನು ಓದುವ ಸಹೃದಯನಲ್ಲಿ ಸಂವೇದನೆ ಮೂಡಿಸಿ, ಪ್ರತಿಸ್ಪಂದನಗೊಂಡಾಗಲೇ ಆ ಕವಿಯ ವಾಜ್ಞಯ ಸಾರ್ಥಕ್ಯ ಕಾಣಲು ಸಾಧ್ಯ” ಎಂದು. ಅಂದರೆ ಓರ್ವ ಕವಿಯ ಅನುಭವ ಅದನ್ನೋದಿದ ಸಹೃದಯನೆದೆಯಲ್ಲಿ ಪುನರನುಭವಗೊಂಡಾಗಲೇ ಕಾವ್ಯ ಸಾರ್ಥಕ್ಯದ ಶಿಖರ ಮುಟ್ಟುವುದು. ಅದೇ ಕವಿಗೆ ಬಹುದೊಡ್ಡ ಸಮ್ಮಾನ! ಬೇಂದ್ರೆ ಹೇಳುವಂತೆ “ತಾಪವೇ ತಪವಾಗಬೇಕು”. ಹೃದಯ ಸರಸಿಯ ಆಳದಲ್ಲಿ ಮೂಡಿದ ಸಂವೇದನೆಯ ಮಧ್ಯಬಿಂದು , ಹಲವಾರು ವರ್ತುಲಗಳಾಗಿ ಕಾವ್ಯದಲೆಯಾಗಿ ಏಳಬೇಕು. ಬರೆಯುವ ಪ್ರತಿ ಅಕ್ಷರ, ಪ್ರತಿ ಸಾಲು ಹೃದಯದ ತೀವ್ರ ತುಡಿತವಾಗಿರಬೇಕು. ಬರೆಯಲಿಕ್ಕಾಗಿ ಬರೆಯುವವ ಕವಿಯಲ್ಲ, ಉಸಿರು ತಳೆದು ಬದುಕಲಿಕ್ಕಾಗಿ ಬರೆಯುವವ ನಿಜವಾದ ಕವಿ! ಕಾವ್ಯಸುಳಿಯಲ್ಲಿ ಪರಿಪೂರ್ಣತೆಯನ್ನು ಅರಸುತ್ತಾ ಹೋಗುವವ, ಆ ಸುಳಿಯ ಆಳದಲ್ಲಿ ಕಳೆದು ಹೋಗುತ್ತಾನೆ. ಕಾವ್ಯದಲ್ಲಿ ಪರಿಪೂರ್ಣತೆ ಎಂದೂ ಸಾಧ್ಯವಾಗದು. ಸೃಷ್ಟಿಯ ನೇಮ ಅಭೇದ್ಯವಾದುದು. ಅದರ ಆಂತರ್ಯವನ್ನು ಎಷ್ಟೇ ಬಗೆದರೂ ತಳ ಮುಟ್ಟಲಾರೆವು. ಹಾಗೂ ತಳ ಮುಟ್ಟಿದ್ದೇ ಆದರೆ ಅದು ಮತ್ತೊಂದು ನಿಗೂಢ ಕಂದರದ ಚಪ್ಪರವಾಗಿರುವುದು, ಅಷ್ಟೇ! ಹೀಗೆಂದು ಇಲ್ಲಿ ನಿರಾಶೆ ಸಲ್ಲ. ಕಾವ್ಯ ಎಂದೂ ಅಪರಿಪೂರ್ಣವೇ. ಆ ಅಪರಿಪೂರ್ಣತೆಯಿಂದಲೇ ಅದಕ್ಕೆ ನಿಜ ಸೌಂದರ್ಯ!

ಕೊನೆಯದಾಗಿ, ಸಹೃದಯಶೀಲತೆ ಇರದ ಯಾವ ಸಾಹಿತ್ಯವಾದರೂ ಮೌಲ್ಯಯುತವಾಗಿರಲಾರದು. ಯಾರನ್ನೂ ನೋಯಿಸುವ ಉದ್ದೇಶವಿರದ, ಸಮಾಜಕ್ಕೆ ತಾನೊಂದು ಪ್ರೇರಕ ಶಕ್ತಿಯಾಗಿ ದುಡಿವ ಆಕಾಂಕ್ಷೆ ಹೊತ್ತ ಕವಿತ್ವ ಪವಿತ್ರವಾದುದು. ಅಂತಹ ಕಾವ್ಯ ತೂಕವುಳ್ಳದ್ದು. ನಾವೆಲ್ಲರೂ ಬದುಕಿನ ಬಂಡಿಗೆ ಹೆಗಲು ಕೊಟ್ಟು ಸಾಗುತ್ತಿರುವ ತೃಣ ಪಶುಗಳೇ. ಎಲ್ಲರಿಗೂ ಹೃದಯವಿದೆ.ಭಾವಸಂಕೋಲೆಯ ರಸವಿದೆ. ಎದೆಯ ಕರೆಯನ್ನು ಸೂಕ್ಷ್ಮವಾಗಿ ಆಲಿಸಿದರೆ, ವೇದನೆ ಸಂವೇದನೆಯಾಗಿ ಭಾವಹೊನಲು ಕಾವ್ಯವಾಗುತ್ತದೆ. ಸಾಹಿತ್ಯ ಒಂದು ತಪಸ್ಸು, ಉಪಾಸನೆ! ಅದರ ದೀಪ್ತಿಯಡಿ ಧೇನಿಸಿದವ ತೃಪ್ತಿ ಹೊಂದುತ್ತಾನೆ, ಆ ಸಂತೃಪ್ತಿಯ ನಿರ್ಜರವನ್ನು ತನ್ಮೂಲಕ ಎಲ್ಲರಿಗೂ ಉಣಬಡಿಸುತ್ತಾನೆ. ಅಲ್ಲಿಗೆ ಭಾವಕೊಂಡಿ ಏರ್ಪಡುತ್ತದೆ, ಕಾವ್ಯದೇವಿಯ ಕೊರಳಿಗೆ ಮಾಲೆಯಾಗುತ್ತದೆ!

Kavana V Vasishta

Facebook ಕಾಮೆಂಟ್ಸ್

ಲೇಖಕರ ಕುರಿತು

Kavana V Vasishta

An Akashavani artist, loves reading novels and have published a book "Anthargami"

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!