ಅಂಕಣ

ಕಾಲವನ್ನು ತಡೆಯೋರು ಯಾರೂ ಇಲ್ಲ.. ಆದರೆ..

ಸಾಮಾನ್ಯವಾಗಿ ನನ್ನ ಒಂದು ಬರವಣಿಗೆ ಕೆಲವೇ ಕೆಲವು ಘಂಟೆಗಳನ್ನು ತೆಗೆದುಕೊಳ್ಳುತ್ತೆ, ಯಾಕೆಂದರೆ ನಾನು ಮಾತನ್ನು ಬರೆಯೊನು, ಈ ಲೇಖನವನ್ನು ಬರೆಯೋದಕ್ಕೆ ನಾನು ವಾರಗಟ್ಟಲೇ ಸಮಯ ತೆಗೆದುಕೊಂಡೆ, ಬೇಸರ, ಕೋಪ ಒಂದಷ್ಟು ದುಃಖ ಎಲ್ಲವನ್ನೂ ಅದುಮಿಟ್ಟುಕೊಂಡು ಅಕ್ಷರವನ್ನು ಜೋಡಿಸೋದು ಎಷ್ಟು ಕಷ್ಟ ಎಂಬುದು ಮೊದಲಬಾರಿಗೆ ಅನುಭವ ಆದಂತಾಯ್ತು. ಬರೆಯೋಕೆ ಕೂತಾಗಲೆಲ್ಲ ಒಂದು ರೀತಿಯಲ್ಲಿ ಹಿಂಸೆಯಾಗುತ್ತಾ ಇತ್ತು, ಆದರೂ ನನ್ನ ಅಭಿಪ್ರಾಯಗಳನ್ನು ಈ ಬಾರಿ ಹೊಟ್ಟೆಯಲ್ಲಿಟ್ಟುಕೊಳ್ಳಬಾರದು ಎಂಬ ಉದ್ದೇಶದಿಂದ ಬರೆದು ಮುಗಿಸಿದ್ದೇನೆ, ಈ ಲೇಖನದ ಮೊದಲ ಸಾಲುಗಳನ್ನು ಕೊನೆಯಲ್ಲಿ ಬರೆದೆ. ಯಾಕೆಂದರೆ ಇದನ್ನು ಬರೆದು ಮುಗಿಸುತ್ತೇನೆ ಅನ್ನೊ ನಂಬಿಕೆ ನನ್ನಲ್ಲಿರಲಿಲ್ಲ.. ಬಿಡಿ.. ಅದೆಲ್ಲವೂ ಅಪ್ರಸ್ತುತ. ಹಲವರ ಕಣ್ಣೀರನ್ನು ಪ್ರತಿನಿಧಿಸುತ್ತ, ನನ್ನೊಳಗೆ ಪ್ರಶ್ನೆಗಳನ್ನು ಹುಟ್ಟು ಹಾಕಿಕೊಳ್ಳುತ್ತ ಅದನ್ನೆಲ್ಲ ನಿಮ್ಮ ಮುಂದಿಡುತ್ತಿದ್ದೇನೆ, ಅದರ ಜೊತೆಗೆ ಒಂದಷ್ಟು ಅನಿಸಿಕೆಗಳನ್ನು ಸೇರಿಸಿದ್ದೇನೆ..

ಈಗೊಂದು 15 ದಿನದ ಕೆಳಗೆ ದುರಂತ ಅಂತ್ಯಕಂಡ ಬೈಂದೂರಿನ ಅಕ್ಷತಾ ದೇವಾಡಿಗ ಎಂಬ ಹದಿನೇಳರ ಹರೆಯದ ಬಾಲಕಿಯನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸು ಒಂದು ಕ್ಷಣ ಎಲ್ಲ ಆಲೋಚನೆಗಳನ್ನು ಒಮ್ಮೆ ಬದಿಗೊತ್ತಿ ಮೌನವನ್ನಾಚರಿಸುತ್ತೆ, ಜಗತ್ತನ್ನೇ ಗೆಲ್ಲೊ ಹುಮ್ಮಸ್ಸಿನ ಹರೆಯದಲ್ಲಿ ಸಾವಿನ ಮನೆಯ ಅತಿಥಿಯಾದ ಆಕೆಯ ಫೋಟೊ ನೋಡಿದಾಗಲೆಲ್ಲ ಹೊಟ್ಟೆಯಲ್ಲಿ ಸಂಕಟವಾಗೊದಂತೂ ಸತ್ಯ. ಕಾಲೇಜಿನಿಂದ ಮನೆಗೆ ಒಂಟಿಯಾಗಿ ಹೋಗೊ ಸಮಯದಲ್ಲಿ ಆಕೆಯನ್ನು ಅಡ್ಡಗಟ್ಟಿ ಎಳೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಆತನೂ ಹದಿ ಹರೆಯದವನೇ, ವಯಸ್ಸು 19. ತನ್ನ ಜೊತೆ ಕಾಲ ಕಳೆಯಬೇಕೆಂದು ಒತ್ತಾಯ ಮಾಡಿದ್ದಕ್ಕೆ ಆಕೆ ಒಲ್ಲೆ ಎಂದಳು, ಅದಕ್ಕಾಗಿ ಎಳೆದುಕೊಂಡು ಹೋಗಿ  ಆಕೆ ಹೊದ್ದ ಶಾಲಿನಲ್ಲೇ ಉಸಿಗಟ್ಟಿಸಿ ಮಾಡಿದ್ದಾನೆ. ಎಂತಹ ದುರಂತ… ಬದುಕಿ ಬಾಳಬೇಕಾದ ಜೀವ ಪೊದೆಗಳ ಮಧ್ಯೆ ಹೆಣವಾಗಿ ಮಲಗಿದೆಯೆಂದರೆ ಎಂತಹ ಕಲ್ಲು ಹೃದಯವೂ ಒಮ್ಮೆ ಕರಗುತ್ತೆ..

ಗೆಳೆಯ ಶಶಿಧರ ಹೆಮ್ಮಾಡಿಯವರು ಆಕೆಯ ಬಗ್ಗೆ ಬರೆದ ಬರಹ ಕರಾವಳಿ ಕರ್ನಾಟಕ ಪತ್ರಿಕೆಯಲ್ಲಿದೆ. ಅದರಲ್ಲಿ ಆಕೆಯ ಡೈರಿಯ ಒಂದೆರಡು ಪುಟದ ಫೋಟೊ ಇದೆ. ಅದನ್ನೊಮ್ಮೆ ನೋಡಿದಾಗ ಆಕೆಯ ಗುರಿ, ಆದರ್ಶ, ಕನಸುಗಳ ಅರಿವಾಗದೇ ಇರಲಾರದು, ಬರೆದಿಟ್ಟ ಕನಸುಗಳು ನೂರಾರಿದ್ದರೆ ಬರೆಯಲಾರದ, ಹೇಳಲಾರದ ಕನಸುಗಳು ಇನ್ನೆಷ್ಟಿದ್ದವೊ ಯಾರಿಗೆ ಗೊತ್ತು.. ಏನನ್ನಾದರೂ ಸಾಧಿಸಬಲ್ಲ ಶಕ್ತಿಯ ಚೆಂಡು ನಾನು ಎಂದು ಬರೆದುಕೊಂಡ ಹೆಣ್ಣುಮಗಳ ಬದುಕು ಈ ರೀತಿಯ ಅಂತ್ಯಗೊಂಡಿದೆಯೆಂದರೆ ದೇವರಲ್ಲಿ ಈ ಸಾವು ಯಾವ ನ್ಯಾಯ ಎಂದು ಕೈ ಹಿಡಿದು ನಿಲ್ಲಿಸಿ ಕೇಳಬೇಕು ಅನ್ನಿಸುತ್ತದೆ.ಕೊಲೆಮಾಡುವ ಮನಸ್ಸು ಹೇಗೆ ಬಂತೋ ಆತನಿಗೆ, ಇಂತಹ ನೀಚ ಕೆಲಸಕ್ಕೆ ಕೈ ಹಾಕಿದ ಪಾಪಿಗೆ ಶಿಕ್ಷೆ ಏನು ನೀಡಬೇಕು..?? ಆದರೆ ಈ ಪ್ರಶ್ನೆಗೆ ಉತ್ತರ ನೀಡುವ ಮೊದಲು ನಮ್ಮಲ್ಲಿ ನಾವು ಹಲವು ಪ್ರಶ್ನೆಗಳನ್ನು ಕೇಳಿಕೊಳ್ಳುವದು  ತುಂಬ ಮುಖ್ಯ. ಅದರ ಮೊದಲು ಮತ್ತೊಂದು ಹಳೆಯ ನೋವನ್ನು ನೆನಪು ಮಾಡಿಕೊಂಡು ಹಂಚಿಕೊಳ್ಳುತ್ತೇನೆ, ಕ್ಷಮಿಸಿ..

ಈಗ ಕೆಲವು ವರ್ಷಗಳ ಹಿಂದೆ, ಅಂದರೆ 2007 ನೇ ಇಸವಿ, ನಾನು ಪಿಯುಸಿ ವ್ಯಾಸಾಂಗ ಮಾಡುತ್ತಿದ್ದೆ, ಆಗ ನನ್ನೂರು ಶಿರಸಿಯಲ್ಲಿ ಒಂದು ಕೊಲೆ ಪ್ರಕರಣವಾಗಿತ್ತು, ಆಕೆಯ ಹೆಸರು ವತ್ಸಲಾ ಹೆಗಡೆ. ಆಕೆಯದ್ದೂ ಹದಿನೆಂಟರ ಹರೆಯ ಕಾಲೇಜಿನಿಂದ ಮನೆಗೆ ಹೋಗುತ್ತಿದ್ದಾಗ ಒಬ್ಬ ಪಾಪಿಯ ಕಾಮದ ಕಣ್ಣಿಗೆ ಬಲಿಯಾದ ಜೀವ ಅದು. ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಮೊಟ್ಟ ಮೊದಲ ಬಾರಿಗೆ ಒಂದು ಶಾಕ್ ಅನ್ನು ಅನುಭವಿಸಿದ್ದೆ, ಅದೇ ನೋವು ಇಂದಿಗೂ ನನ್ನ ಮನಸ್ಸಿನೊಳಗೆ ನಾಟಿಬಿಟ್ಟಿದೆ. ಇಂದಿಗೂ ಹರೆಯದ ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆಯ ವಾರ್ತೆಗಳನ್ನು ಓದಿದಾಗ, ಕೇಳಿದಾಗ ಆಕೆಯೇ ನೆನಪಾಗುತ್ತಾಳೆ. ಆಕೆಯದ್ದೂ ಸಹ ಅರಳೊ ಬದುಕು, ಆದರೆ ಅರಳೋ ಮೊದಲೇ ಚಿವುಟಿ ಮಣ್ಣು ಮಾಡಿಬಿಟ್ಟರು. ಆಕೆಯ ತಾಯಿ ಸಭೆಯಲ್ಲಿ ಕಣ್ಣೀರಿಡುತ್ತಿದ್ದರೆ, ಅಲ್ಲಿ ಸೇರಿದ್ದವರೆಲ್ಲರ ಕಣ್ಣೂ ತುಂಬಿ ಬಂದಿತ್ತು. ಮೊನ್ನೆ ಅಕ್ಷತಾ ಕೊಲೆ ಪ್ರಕರಣದ ಬಗ್ಗೆ ಕೇಳಿದಾಗಲೂ ನೆನಪಾದದ್ದು ವತ್ಸಲಾ ಹೆಗಡೆಯೇ..

ಕೊಲೆ ಮಾಡಿದ ಪಾಪಿಗೆ ಶಿಕ್ಷೆ ನೀಡುವ ಮಾತನ್ನಾಡುತ್ತಿದ್ದೆ, ಆದರೆ ಇದು ಒಬ್ಬಳು ವತ್ಸಲಾಳದ್ದೋ ಅಥವಾ ಅಕ್ಷತಾಳ ಕಥೆಯೋ ಅಲ್ಲವಲ್ಲ. ದೇಶದಾದ್ಯಂತ ಅದೇಷ್ಟೋ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಹಿಂಸೆ, ಇದರಲ್ಲಿ ಕೆಲವು ಘಟನೆಗಳು ಸಮಾಜಕ್ಕೆ ತಿಳಿಯುತ್ತಿದೆಯಷ್ಟೇ. ಅದರಲ್ಲಿ ಕೆಲವೇ ಕೆಲವು ಅನ್ಯಾಯಗಳಿಗೆ ನ್ಯಾಯ ಸಿಕ್ಕುತ್ತಿದೆ. ತಿಳಿಯದ, ನ್ಯಾಯ ಸಿಗದ ಘಟನೆಗಳು ಇನ್ನೆಷ್ಟಿವೆಯೊ ಯಾರಿಗೆ ಗೊತ್ತು. ಸಿಗದ ಪ್ರೀತಿಗಾಗಿ ಕೊಲೆ, ಆಸೆ ತೀರಿಸಿಕೊಳ್ಳುವ ಆತುರದ ಅತ್ಯಾಚಾರ,. ನಿಮಗ್ಯಾರಿಗೂ ಅಕ್ಕ-ತಂಗೀರೇ ಇಲ್ವಾ ಎಂದು ಕೇಳುವಂತೆಯೂ ಇಲ್ಲ ಯಾಕೆಂದರೆ ಎಷ್ಟೋ ಪ್ರಕರಣಗಳಾಗಿದ್ದು ತಂದೆಯಿಂದ ಮಗಳ ಮೇಲೆ, ಅಣ್ಣನಿಂದ ತಂಗಿಯ ಮೇಲೆ ಅತ್ಯಾಚಾರ., ಸಂಬಂಧಗಳಿಗೆ ಬೆಲೆಯೇ ಇಲ್ಲವಾ..?? ಇವರೆಲ್ಲರಿಗೂ ಶಿಕ್ಷೆ ನೀಡುವುದು ಹೇಗೆ..?? ಏನು ಶಿಕ್ಷೆ ನೀಡಬೇಕು..?? ಇದು ನನ್ನಲ್ಲಿ ಹುಟ್ಟಿಕೊಂಡಿರೊ ಪ್ರಶ್ನೆ… ಯಾಕೋ ನಮ್ಮ ಮೌನವೇ ಉತ್ತರವೇ, ಅಥವಾ ನಮ್ಮ ಮೌನದಲ್ಲೇ ಉತ್ತರವಿದೆ ಅನ್ನಿಸತೊಡಗಿದೆ.

ಈಗಿನ ಬದಲಾಗುತ್ತಿರುವ ಸ್ಥಿತಿಗೆ ಕಾರಣಗಳು ಹಲವಾರು.. ಆದರೆ ಸೂಕ್ಷ್ಮವಾಗಿ ಅವಲೋಕಿಸಿದರೆ ಬದಲಾವಣೆ ಆಗುತ್ತಿರುವವರು 17 ರಿಂದ 25ರ ವಯಸ್ಕರು. ಹದಿಹರೆಯದ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚು, ಬಲಿಯಾಗುತ್ತಿರುವ ಹೆಣ್ಣು ಮಕ್ಕಳೂ ಅದೇ ವಯಸ್ಸಿನವರೇ. ಒಮ್ಮೆ ಫೇಸ್ ಬುಕ್ ನಲ್ಲಿ ತಪ್ಪು ಒಪ್ಪುಗಳ ಬಗ್ಗೆ ಒಂದು ಪೋಸ್ಟ್ ನೋಡಿದ್ದೆ ಅದರಲ್ಲಿ ಹಲವು ಹುಡುಗರು ಹಣ್ಣು ಮಕ್ಕಳ ಉಡುಗೆ ತೊಡುಗೆ ಮತ್ತು ನಡೆ ನುಡಿಗಳು ಸರಿಯಾಗಿಲ್ಲ ಎಂಬುದಾಗಿ ಕಮೆಂಟ್ ಮಾಡಿದ್ದರೆ ಹೆಣ್ಣು ಮಕ್ಕಳು ಹುಡುಗರ ಕೆಟ್ಟ ಮನಸ್ಥಿತಿ ಮತ್ತು ಹುಡುಗಿಯರನ್ನು ನೋಡುವ ದೃಷ್ಟಿ ಎಂಬುದಾಗಿ ಕಮೆಂಟ್ ಮಾಡಿದ್ದರು. ಅದರ ಬಗ್ಗೆ ಸ್ವಲ್ಪ ಹೆಚ್ಚಾಗೇ ಯೋಚಿಸಿದ್ದೆ ಯಾಕೋ ತಪ್ಪು ಗಂಡಸರ ಬದಿಯಲ್ಲೇ ಹೇಚ್ಚಾಗಿದೆ ಅನ್ನಿಸುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ನಮ್ಮೆಲ್ಲರಲ್ಲಿಯೂ ಈ ತಪ್ಪು ಇದೆ ಎಂಬ ಭಾವನೆ ಇನ್ನೂ ಹೆಚ್ಚಾಗಿತ್ತು.. ಇಂದಿನ ಜನಾಂಗ ಇಡುತ್ತಿರುವ ಹೆಜ್ಜೆ, ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಸರಿಯಾದ ದಿಕ್ಕಿನಲ್ಲಂತೂ ಇಲ್ಲ ಎಂಬುದು ಹತ್ತು ಹಲವು ಘಟನೆಗಳಿಂದ ನಿಜವಾಗುತ್ತಿದೆ. ದೆಹಲಿಯ ನಿರ್ಭಯ ಪ್ರಕರಣದಲ್ಲಿ ಅಪ್ರಾಪ್ತರೂ ಭಾಗಿಯಾಗಿದ್ದರಲ್ಲವೇ..? ಇವೆಲ್ಲದಕ್ಕೆ ಕಾರಣ ಅವರ ಮನಸ್ಥಿತಿ, ಅದಕ್ಕೆ ಕಾರಣ ಅವರು ಬೆಳೆಯುವ ರೀತಿ, ಬೆಳೆಸುವ ರೀತಿ. ಒಂದು ಹಂತದಲ್ಲಿ ಬೆಳೆಸುವ ಪಾಲಕರೂ ಪರೋಕ್ಷವಾಗಿ ಕಾರಣರಾಗುತ್ತಾರೆ. ಜೊತೆಯಲ್ಲಿ ಬೆಳೆಯುವ ವಾತಾವರಣ, ಪ್ರಭಾವ ಬೀರುವ ಘಟನೆಗಳು, ಮಾಧ್ಯಮಗಳು, ಸಿನೇಮಾಗಳು ಹೀಗೆ ಹತ್ತು ಹಲವು ಮೂಲಗಳು ಒಬ್ಬನ ಮನಸ್ಥಿತಿಯನ್ನು ಸಂಪೂರ್ಣವಾಗಿ ಬದಲಿಸಿಬಿಡುತ್ತೆ.. ನಮ್ಮ ಬದುಕನ್ನೇ ಒಮ್ಮೆ ತಿರುಗಿ ನೋಡಿದರೆ ತಿಳಿಯುತ್ತೆ.. ಹೇಗಿದ್ದೆವು, ಈಗ ಹೇಗಾಗಿದ್ದೇವೆ ಈ ಎಲ್ಲ ಬದಲಾವಣೆಯಲ್ಲಿ ಹಲವಾರು ಪಾತ್ರಗಳಿವೆಯಲ್ಲವೇ..?? ಇದೂ ಹಾಗೆಯೇ…

ನಮ್ಮ ಸುತ್ತ ಮುತ್ತ ಇಂದು ಹೆಚ್ಚಾಗುತ್ತಿರೋದೆಂದರೆ ಈ ಅತ್ಯಾಚಾರ ಮತ್ತು ಕೊಲೆ, ಬದುಕಿನಲ್ಲಿ ನೂರಾರು ಕನಸುಗಳನ್ನು ಕಟ್ಟಿಕೊಂಡು ಬದುಕುತ್ತಿರೊ ಎಷ್ಟೋ ಬದುಕುಗಳು ಕಾಮಾಂಧರ ಕಣ್ಣಿಗೆ ಪ್ರತೀ ದಿನ ಬಲಿಯಾಗುತ್ತಿದೆ ಎಂದರೆ ನಾವೆಂತಹ ಮನಸ್ಥಿತಿ ಹೊಂದಿದ್ದೇವೆ ಎಂಬುದಾಗಿ ಯೋಚಿಸಲೇ ಬೇಕು, ಜಗತ್ತು ಬೆತ್ತಲಾಗಿದ್ದರೇನಂತೆ ನನ್ನ ಮೈಮೇಲೆ ಬಟ್ಟೆಯಿದೆಯೆಂದು ಸಮಾಧಾನ ಪಟ್ಟುಕೊಂಡು ಬದುಕುತ್ತಿರೋ ಎಷ್ಟೊ ಮನಸ್ಸುಗಳು ಬದಲಾಗಲೇ ಬೇಕು, ಸಮಾಜವನ್ನು ಹಾಳುಮಾಡುತ್ತಿರೋದು ಕೆಟ್ಟವರ ಅಬ್ಬರವಲ್ಲ ಒಳ್ಳೆಯವರ ಮೌನ ಎಂಬ ಪುಣ್ಯಾತ್ಮರ ಮಾತು ಎಷ್ಟೋ ಬಾರಿ ಸರಿ ಅನ್ನಿಸುತ್ತೆ. ಇದನ್ನು ನಾವು ಒಪ್ಪಿದ್ದೇವೆ ಕೂಡ, ಆದರೂ ಮೌನ ಮುರಿಯಲು ಹಿಂಜರಿದು ನೂರಾರು ಅಕ್ಷತಾಳ ಬಲಿಗೆ ಕಾರಣರಾಗುತ್ತಿರುವುದು ದುರ್ವಿಧಿಯಲ್ಲದೇ ಇನ್ನೇನು..?? ಇಂತಹ ಬಲಿಗಳು ಆದಾಗೆಲ್ಲ ಪ್ರತೀ ಬಾರಿ ಧ್ವನಿ ಎತ್ತಿ ಕೂಗುತ್ತೇವೆ, ಆದರೆ ಆ ಧ್ವನಿ ಎರಡೇ ದಿನಕ್ಕೆ ಮೌನಕ್ಕೆ ಶರಣಾಗಿ ಇನ್ನೊಂದು ಬಲಿಯಾಗುವ ತನಕ ಮೂಕವಾಗುತ್ತೆ. ಈ ಮೌನ ಸಂಪೂರ್ಣವಾಗಿ ಸಮಾಧಿಯಾಗಲು ಇನ್ನೆಷ್ಟು ಬಲಿಗಳಾಗಬೇಕೋ..?? ಇಂತಹ ಯೋಚನೆಗಳು ಮನಸ್ಸಿನಲ್ಲಿ ಬಂದಾಗ ಒಂದು ರೀತಿಯ ನಡುಕ ಒಳಗೊಳಗೇ ಪ್ರಾರಂಭವಾಗೋದಂತೂ ನಿಜ.

ಪ್ರತೀ ದಿನ ಪತ್ರಿಕೆಗಳಲ್ಲಿ ಬರೋ ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಬಿಸಿಬಿಸಿ ಕಾಫೀ ಹೀರುತ್ತಾ ಓದಿ, ಈ ಪೇಪರ್ ನವರಿಗೆ ಬೇರೆ ಯಾವ ವಿಷಯವೂ ಸಿಗೋದೆ ಇಲ್ವಾ ಅಂತಾನೋ, ನಮ್ ದೇಶ ಯಾವತ್ತೂ ಉದ್ಧಾರ ಆಗಲ್ಲ ಅಂತಾನೋ ಬೈದುಕೊಂಡು ಸುಮ್ಮನಾಗೋ ನಮಗೆ ಆ ಸಾವಿನ ಹಿಂದಿನ ನೋವು, ನರಳುವ ಜನರು, ಅವರ ದುಃಖ ಅರ್ಥವಾಗೋಕೆ ಇಷ್ಟು ಬಲಿ ಸಾಕಾಗದೇ..? ಒಂದು ಅತ್ಯಾಚಾರ ಪ್ರಕರಣವನ್ನು ಯಾವುದೋ ದೇಶದ ಜನ ಬಂದು ಡಾಕ್ಯೂಮೆಂಟರಿ ಮಾಡಿದರೆಂಬ ಕಾರಣಕ್ಕೆ ತಿರುಗಿ ಬೀಳುತ್ತೇವೆ, ನಮ್ಮ ದೇಶದಲ್ಲೇನು ನೋಡುತ್ತೀರಿ, ನಿಮ್ಮ ದೇಶದಲ್ಲಿ ನೋಡಿ ನಮಗಿಂತ ಹೆಚ್ಚಾಗಿ ಮಾಡೋರು ನೀವೇ ಎಂದು ಕೈ ಎತ್ತಿ ತಪ್ಪನ್ನು ತೋರಿಸುತ್ತೇವೆ.. ಇದೆಲ್ಲವೂ ಒಳ್ಳೆದು, ಮಾಡಬೇಕಾದ್ದೇ, ಆದರೆ ಮತ್ತೆ ನಮ್ಮ ಕಡೆ ಮುಖ ಹಾಕದಿರುವಂತೆ ಮಾಡಬೇಕು ಎಂಬ ಯೋಚನೆ ಮಾಡಿದ್ದೇವೆಯೇ..?? ನಮ್ಮಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಇದು.. ನಮ್ಮ ಬಟ್ಟಲಲ್ಲಿ ನೊಣ ಬಿದ್ದಾಗ ತೋರಿಸಿದರೆ ಅವರ ಬಟ್ಟಲಿನಲ್ಲಿ ಬಿದ್ದ ಹೆಗ್ಗಣವನ್ನು ತೋರಿಸಿ ನಗಾಡುವದರಲ್ಲಿ ತಪ್ಪಿದೆಯೋ ಇಲ್ಲವೊ ಆದರೆ ನೊಣವನ್ನು ಎತ್ತಿ ಎಸೆಯುವದರಲ್ಲಿ ಜಾಣತನವಿದೆ…

ಕೊನೆಯ ಮಾತು: ಎಲ್ಲಾ ಕಾಲಕ್ಕೂ ಕಲಿಯೇ ಕಾರಣನಲ್ಲ, ನಮ್ಮ- ನಿಮ್ಮೆಲ್ಲರ ಪಾಲೂ ಇದೆ.. ಹಾಗೇನಾದರೂ ಅವನೇ ಕಾರಣನಾಗಿದ್ದರೆ ಆತ ಇರೋದು ನಮ್ಮಲ್ಲೇ.. ಕಾಲವನ್ನು ತಡೆಯೋರಿಲ್ಲ ಆದರೆ ಖಂಡಿತ ಬದಲಾಯಿಸಬಹುದು..

Manjunath V Hegde

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!