ಅವರು ನೇಹಾ ಪಾರಿಕ್. ಅವರ ಪೋಷಕರು ರೋಮ್ ನಿಂದ ಭಾರತಕ್ಕೆ ಇಸ್ತಾಂಬುಲ್ ಮೂಲಕ ಬರುವವರಿದ್ದರು. ಅವರಲ್ಲಿ ನೇಹಾ ತಾಯಿಯವರ ವೀಸಾ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಕಳೆದು ಹೋಗಿ ಪಜೀತಿಗೆ ಸಿಲುಕಿದ್ದರು. ಈ ವಿಷಯ ತಿಳಿದ ನೇಹಾ ಎನು ಮಾಡುವುದೆಂದು ತೋಚದೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಟ್ವೀಟ್ ಮೂಲಕ ಸುದ್ದಿ ಮುಟ್ಟಿಸುತ್ತಾರೆ. ಪೋಷಕರನ್ನು ಭಾರತಕ್ಕೆ ಕರೆತರಲು ಸಹಾಯ ಮಾಡಿ ಎಂದು ಮನವಿ ಮಾಡುತ್ತಾರೆ. ಟ್ವೀಟ್ ನೋಡಿದ ಸಚಿವರು ಭಾರತೀಯ ರಾಯಭಾರಿಯ ಮೂಲಕ ನೇಹಾ ಪೋಷಕರು ಭಾರತಕ್ಕೆ ಹಿಂದಿರುಗಲು ಎಲ್ಲಾ ವ್ಯವಸ್ಥೆ ಮಾಡಿಸುತ್ತಾರೆ. ಎಲ್ಲೋ ದೂರದಲ್ಲಿ ಬೆಳಗ್ಗೆ ತೊಂದರೆಗೊಳಗಾಗಿದ್ದ ನೇಹಾ ತಂದೆ ತಾಯಿಯ ಸಮಸ್ಯೆ ಸಂಜೆಯ ಹೊತ್ತಿಗೆ ಪರಿಹಾರವಾಗುತ್ತದೆ.
ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವೆಯಾಗಿ ಎಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಮೇಲಿನ ಘಟನೆಯೇ ಸಾಕ್ಷಿ. ಇದೊಂದೇ ಅಲ್ಲ. ಯೆಮೆನಿನಲ್ಲಿ ಯುಧ್ಧ ಸಂಭವಿಸಿದಾಗ ನಮ್ಮವರು ಅನೇಕರು ತೊಂದರೆಗೆ ಸಿಲುಕಿದ್ದರು. ಅವಾಗಲೂ ಸುಷ್ಮಾ ಬರೀಯ ಟ್ವೀಟಿನ ಮೂಲಕವೇ ತೊಂದರೆಗೆ ಸಿಲುಕಿದ್ದವರನ್ನು ಕಾಪಾಡಿದ್ದರು. ಇನ್ಯಾರೋ ಮತ್ಯಾವುದೋ ದೇಶದಲ್ಲಿ ಪಾಸ್ ಪೋರ್ಟ್ ಕಳೆದುಕೊಂಡು, ತಾನು ದುಡಿಯುತ್ತಿದ್ದ ಕಂಪೆನಿ ಪಾಸ್ ಪೋರ್ಟ್ ಹಿಂದಕ್ಕೆ ಕೊಡದೆ ಸಮಸ್ಯೆಗೀಡಾಗಿದ್ದಾಗ ಸಹಾಯಕ್ಕೆ ಧಾವಿಸಿದ್ದು ಮತ್ತದೇ ವಿದೇಶಾಂಗ ಸಚಿವೆ. ಸುಷ್ಮಾ ಸ್ವರಾಜ್ ಟ್ವಿಟ್ಟರ್ ಪುಟವನ್ನೊಮ್ಮೆ ನೋಡಿದರೆ ಇಂತಹ ಹತ್ತು ಹಲವು ಘಟನೆಗಳಿಗೆ ಪುರಾವೆ ಸಿಗುತ್ತದೆ. ವಿದೇಶಾಂಗ ಸಚಿವೆಯಾದುದರಿಂದ ಹಿಡಿದು ಇಂದಿನವರೆಗೂ ಹಲವರಿಗೆ ಮಾನ್ಯ ಸಚಿವರು ಈ ರೀತಿಯ ಸಹಾಯ ಮಾಡಿದ್ದಾರೆ. ಸಚಿವ ಸ್ಥಾನದ ಇತಿಮಿತಿಗಳನ್ನೆಲ್ಲಾ ಬದಿಗಿಟ್ಟು ವಿದೇಶಾಂಗ ಸಚಿವಾಲಯವನ್ನು ‘ಪೀಪಲ್ ಫ್ರೆಂಡ್ಲಿ’ ಸಚಿವಾಲಯವನ್ನಾಗಿ ಮಾಡಿದ್ದು ಸುಷ್ಮಾ ಹೆಗ್ಗಳಿಕೆ.
ಅಂತಹಾ ಸುಷ್ಮಾ ಸ್ವರಾಜ್ ಮೇಲೆ ಭಯಂಕರ ಆರೋಪವೊಂದು ಕೇಳಿ ಬಂದಿದೆ. ಅದೇನೆಂದರೆ ಐಪಿಲ್ ಪಿತಾಮಹ ಲಲಿತ್ ಮೋದಿಯವರಿಗೆ ಸುಷ್ಮಾ ಸ್ವರಾಜ್ ವೀಸಾ ಕೊಡಿಸುವಲ್ಲಿ ಸಹಾಯ ಮಾಡಿದ್ದಾರಂತೆ. ಐಪಿಲ್ ಅವ್ಯವಹಾರದ ಆರೋಪ ಹೊತ್ತಿರುವ ಮೋದಿಗೆ ಸಹಾಯ ಮಾಡಿದ್ದು ತಪ್ಪಂತೆ. ಇದಕ್ಕಾಗಿ ಸುಷ್ಮಾ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ಸ್ ಇಂದು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ.
ಹಾಗಾದರೆ ಕಾಂಗ್ರೆಸ್ಸಿನ ನಾಯಕರಿಗೆ ಇತಿಹಾಸ ನೆನಪಿಲ್ವಾ? ಅಥವಾ ಇತಿಹಾಸದ ಕುರಿತು ಜಾಣ ಮರೆವಾ? ನನ್ನದು ಕೆಲವು ಪ್ರಶ್ನೆ, ಲಲಿತ್ ಮೋದಿಗೆ ಸಹಾಯ ಮಾಡಿದ್ದನ್ನೇ ಮಹಾ ತಪ್ಪೆಂದು ಬಿಂಬಿಸಿ ಸುಷ್ಮಾ ಸ್ವರಾಜ್ ರಾಜಿನಾಮೆ ಕೇಳುತ್ತಿರುವ, ಸುಷ್ಮಾಗೆ ಬೆಂಬಲವಾಗಿದ್ದಾರೆಂಬ ಕಾರಣಕ್ಕೆ ನರೇಂದ್ರ ಮೋದಿ ರಾಜೀನಾಮೆ ಕೇಳುತ್ತಿರುವ ಕಾಂಗ್ರೆಸ್ಸಿಗರೇ, ಕೋಟ್ಯಾಂತರ ರೂಗಳ ಕಲ್ಲಿದ್ದಲು ಹಗರಣವಾಗಿತ್ತಲ್ಲ ಆವಾಗ ಮನಮೋಹನ್ ಸಿಂಗ್ ರಾಜೀನಾಮೆ ಕೇಳಿದ್ದಿರಾ ನೀವು? ಎ ರಾಜಾ ಮತ್ತು ಸುರೇಶ್ ಕಲ್ಮಾಡಿ ಮೇಲೆ ಆರೋಪ ಬಂದಾಗ ಸುಮಾರು ದಿನ ಅವರುಗಳು ಬಂಧನದಿಂದ ತಪ್ಪಿಸಿಕೊಂಡಿದ್ದರು. ಅವಾಗಲೂ ಮನಮೋಹನ್ ಸಿಂಗ್ ಅವರನ್ನು ರಕ್ಷಿಸುತ್ತಿದ್ದಾರೆಂದು ಆರೋಪ ಕೇಳಿ ಬಂದಿತ್ತು. ಅದಕ್ಕಾಗಿ ಎಂಎಂಸ್ ರಾಜೀನಾಮೆಯನ್ನು ಕೇಳಿದ್ದಿರಾ? ಹೋಗಲಿ ಬಿಡಿ. ಡೆಕ್ಕನ್ ಕ್ರಾನಿಕಲ್ ತೆರಿಗೆ ವಂಚನೆ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಸಮನ್ಸ್ ಜಾರಿಯಾಗಿತ್ತಲ್ಲಾ, ಅವಾಗ ಸೋನಿಯಾ, ರಾಹುಲ್ ರಾಜೀನಾಮೆ ಕೇಳುವ ಧೈರ್ಯ ಮಾಡಿದ್ದಿರಾ? ನಿಮ್ಮವರು ವಿದೇಶ ಮಂತ್ರಿಯಾಗಿದ್ದಾಗ ವಿಶ್ವಸಂಸ್ಥೆಯಲ್ಲಿ ಬೇರೆ ದೇಶದ ಭಾಷಣವನ್ನು ಓದಿ ನಮ್ಮ ದೇಶದ ಮಾನವನ್ನು ಹರಾಜು ಹಾಕಿದ್ದಾಗಲಾದರೂ ಅವರ ರಾಜೀನಾಮೆಯನ್ನು ಕೇಳಿದ್ದಿರಾ ನೀವುಗಳು? ಕರ್ನಾಟಕದ ಮುಖ್ಯಮಂತ್ರಿಯವರ ಮೇಲೆ ಅರ್ಕಾವತಿ ಅಕ್ರಮ ಡಿನೋಟಿಫಿಕೇಶನ್ ಆರೋಪವಿದೆ. ಕನಿಷ್ಟ ಅವರ ರಾಜಿನಾಮೆಯನ್ನಾದರೂ ಕೇಳಿದ್ದೀರಾ ಎಂದಾದರೂ? ಮಾನವೀಯ ನೆಲೆಯಲ್ಲಿ ಲಲಿತ್ ಮೋದಿಗೆ ಸಹಾಯ ಮಾಡಿದ ಸುಷ್ಮಾ ರಾಜೀನಾಮೆ ಕೊಡಬೇಕೆಂದಾದರೆ ಮನಮೋಹನ್ ಸಿಂಗ್ ಅದೆಷ್ಟು ಭಾರಿ ರಾಜೀನಾಮೆ ಕೊಡಬೇಕಿತ್ತು? ನೀವೇ ಹೇಳಿ.
ಅಷ್ಟಕ್ಕೂ ಸುಷ್ಮಾ ಮಾಡಿರುವ ತಪ್ಪಾದರೂ ಏನು? ಪತ್ನಿಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಲಲಿತ್ ಮೋದಿಗೆ ಸಹಾಯ ಮಾಡಿದ್ದೇ ತಪ್ಪಾ? ಬೋಫೋರ್ಸಿನಂತಹ ಉತ್ತರ ಸಿಗದ ಹಗರಣದ ರೂವಾರಿಯಾಗಿರುವ ಒಟ್ಟಾವಿಯೋ ಕ್ವಟ್ಟೋಚಿ ಭಾರತದಿಂದ ಪರಾರಿಯಾಗಲು ಸಹಾಯ ಮಾಡಿದ್ದು ಯಾರೆಂದು ನೆನಪಿದೆ ತಾನೇ? ತನ್ನ ತಟ್ಟೆಯಲ್ಲೇ ನೊಣ ಬಿದ್ದಿರುವಾಗ ಇನ್ನೊಬ್ಬರ ತಟ್ಟೆಯಲ್ಲಿ ನೊಣವಿದೆಯೆಂದು ತೋರಿಸಹೊರಟಿರುವುದು ಯಾಕಾಗಿ?
ಖಂಡಿತವಾಗಿಯೂ ಇದು ಕಾಂಗ್ರೆಸ್ಸಿನ ಹತಾಶ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ. ಕೈಯಲ್ಲಿದುದನ್ನೆಲ್ಲಾ ಕಳೆದುಕೊಂಡು ಅನಾಥರಾಗಿ ಒಂದು ವರ್ಷವಾದರೂ ಮೋದಿ ಸರ್ಕಾರದಲ್ಲಿ ಒಂದು ಮಿಕವೂ ಸಿಗುತ್ತಿಲ್ಲವಲ್ಲಾ ಎಂದು ಕೈ ಕೈ ಹಿಸುಕಿಕೊಳ್ಳುವಂತಾಗಿದೆ ಕೈ ಪಕ್ಷದ ಪರಿಸ್ಥಿತಿ. ಅದಕ್ಕಾಗಿ ಅಷ್ಟೊಂದು ಪ್ರಾಮುಖ್ಯವಲ್ಲದ ಸ್ಮೃತಿ ಇರಾನಿಯವರ ಪದವಿ ವಿಚಾರವನ್ನು ದೊಡ್ಡದಾಗಿ ಬಿಂಬಿಸುತ್ತಾ ಬಂದಿದೆ. ಮೋದಿಯನ್ನು ತೆಗಳಲು ದಾರಿಯೇ ತೋಚದೆ ಕಡೆಗೆ ‘ಅಚ್ಚೇ ದಿನ ಯಾರಿಗೆ ಬಂದಿದೆ?’ ಎಂದು ಬೊಬ್ಬಿರಿಯುತ್ತಿದೆ. ಮೋದಿ ವಿದೇಶ ಪ್ರವಾಸ ಮಾಡಿದರೆ ಅದನ್ನೂ ಟೀಕಿಸುತ್ತಿದೆ. ಒಬಾಮಾ ಭೇಟಿಯ ಸಂದರ್ಭದಲ್ಲಿ ಮೋದಿ ಧರಿಸಿದ್ದ ಸೂಟ್ ಬಗ್ಗೆಯೂ ವಿವಾದವೆಬ್ಬಿಸಲು ಪ್ರಯತ್ನಿಸಿದ ಕಾಂಗ್ರೆಸ್ಸಿಗೆ ಅದರಲ್ಲೂ ಯಶ ಸಿಗಲಿಲ್ಲ. ಹೀಗೆ ಕಾಂಗ್ರೆಸ್ಸ್ ಕೈ ಇಟ್ಟಲ್ಲೆಲ್ಲಾ ಕೈ ಸುಟ್ಟು ಕೊಂಡಿದೆ. ಮೋದಿ ಸರ್ಕಾರ ಬಂದ ನಂತರ ಕೆಲವರು ತಮ್ಮ ಉದ್ದ ನಾಲಗೆಯನ್ನು ಹರಿಯ ಬಿಟ್ಟಿದ್ದಾರೆಯೇ ಹೊರತು ಯಾರೂ ಕೂಡ ಯಾವುದೇ ಹಗರಣಗಳಲ್ಲಿ ಸಿಲುಕಿಕೊಂಡಿಲ್ಲ.
ಅಲ್ಲಾ ಈ ಪ್ರತಿಪಕ್ಷಗಳಿರುವುದೇ ಸರ್ಕಾರವನ್ನು ಟೀಕಿಸುವದಕ್ಕಾ? ಸರ್ಕಾರದ ಪ್ರತಿಯೊಂದು ನಡೆಯನ್ನೂ ಪ್ರತಿಪಕ್ಷಗಳು ವಿರೋಧಿಸಬೇಕೆಂದು ಸಂವಿಧಾನದಲ್ಲಿ ಎಲ್ಲಾದರೂ ಹೇಳಲಾಗಿದೆಯಾ? ಅರ್ಥವಾಗುತ್ತಿಲ್ಲ. ಪ್ರತಿಪಕ್ಷವೆಂದರೆ ಅದು ಪ್ರತ್ಯೇಕ ಗುಂಪಲ್ಲ. ಅದು ಸರ್ಕಾರದ ಭಾಗವೇ ಎಂದು ಇವುಗಳಿಗೆ ಅರ್ಥವಾಗುವುದೆಂದು? ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಬೆಂಬಲಿಸಿ ತಪ್ಪಿ ನಡೆದಾಗ ಟೀಕಿಸಿ ಸರಿ ದಾರಿಗೆ ತರಬೇಕಾದದ್ದು ಪ್ರತಿಪಕ್ಷಗಳು ನಿಜವಾಗಿ ಮಾಡಬೇಕಾದ ಕೆಲಸ. ಅವುಗಳು ರಚನಾತ್ಮಕವಾಗಿ ಕೆಲಸ ಮಾಡಿದಾಗ ಮಾತ್ರ ದೇಶದ ಅಭಿವೃಧ್ಧಿ ಸಾಧ್ಯ. ಅದು ಬಿಟ್ಟು ಸರ್ಕಾರ ಏನೇ ಮಾಡಿದರೂ ಅದನ್ನು ಟೀಕಿಸುವುದು ಎಷ್ಟು ಸರಿ? ಸುಷ್ಮಾ ಸ್ವರಾಜ್ ಸಹಾಯ ಮಾಡಿದ್ದನ್ನೇ ಮಹಾ ತಪ್ಪೆಂದು ಬಿಂಬಿಸುತ್ತಿರುವ ಕಾಂಗ್ರೆಸ್ಸ್ ಪಕ್ಷ ಅದೇ ಸುಷ್ಮಾ ಸ್ವರಾಜ್ ಹಲವರಿಗೆ ಟ್ವೀಟ್ ಗಳ ಮೂಲಕವೇ ಸಹಾಯ ಮಾಡಿದ್ದಾಗ ಎಂದಾದರೂ ಪ್ರಶಂಸಿದೆಯೇ? ಅಂತಹಾ ಸಹಾಯವನ್ನು ಯಾವನಾದರೂ ಕಾಂಗ್ರೆಸ್ಸಿಗ ಜನರಿಗೆ ಮಾಡಿದ್ದುಂಟೇ?
ಆನೆ ಕದ್ದರು ಕಳ್ಳ ಅಡಿಕೆ ಕದ್ದರೂ ಕಳ್ಳ ಎನ್ನುವುದರಲ್ಲಿ ಎರಡು ಮಾತಿಲ್ಲ. ಬೆಳ್ಳಗಿರುವುದೆಲ್ಲಾ ಹಾಲಲ್ಲ ಎನ್ನುವ ಹಾಗೆ ಬಿಜೆಪಿಯವರೆಲ್ಲಾ ಒಳ್ಳೆಯವರೆಂದು ಹೇಳುತ್ತಿಲ್ಲಾ. ಒಳ್ಳೆಯವರೆಂದು ಹೇಳುತ್ತಾ ಅಧಿಕಾರಕ್ಕೆ ಬಂದ ಆಮ್ ಆದ್ಮಿಯವರ ಹಣೆಬರಹ ಏನೆಂದು ಕಾಣುತ್ತಿಲ್ವಾ? ರಾಜಕೀಯದಲ್ಲಿ ಇದೆಲ್ಲಾ ಇದ್ದಿದ್ದೆ. ಆದರೆ ಒಬ್ಬ ಸಾಮಾನ್ಯನಾಗಿ ಯೋಚಿಸಿದಾಗ ಸುಷ್ಮಾ ಲಲಿತ್ ಮೋದಿಗೆ ಮಾಡಿದ್ದು ತಪ್ಪೆಂದು ಖಂಡಿತಾ ಅನಿಸುತ್ತಿಲ್ಲ. ಇದು ರಾಜೀನಾಮೆ ಕೇಳುವಂತಹಾ ಗಂಭೀರ ಪ್ರಕರಣವೇನಲ್ಲ ಎಂದು ಕಾಂಗ್ರೆಸ್ಸಿಗರಿಗೂ ಗೊತ್ತಿಲ್ಲದೆ ಏನಲ್ಲ. ಆದರೆ ಅಧಿಕಾರವಿಲ್ಲದೆ ಚಡಪಡಿಸುತ್ತಿರುವ ಕಾಂಗ್ರೆಸ್ಸಿಗರಿಗೆ ಇದು ಮರುಭೂಮಿಯಲ್ಲಿ ಓಯಸಿಸ್ ಕಂಡಂತೆ ಆಗಿದೆ. ಐಸಿಯುನಲ್ಲಿ ಆಕ್ಸಿಜನ್ ಪಡೆದಂತೆ ಖುಷಿ ಆಗಿದೆ. ಆದ್ದರಿಂದಲೇ ವಿಷಯವನ್ನು ರಾಜಕೀಯ ದಾಳವನ್ನಾಗಿಸಿಕೊಂಡು ಸುಷ್ಮಾ ರಾಜೀನಾಮೆಗೆ ಪಟ್ಟು ಹಿಡಿದಿದೆ. ವರ್ಷದಿಂದ ನಿಷ್ಕಳಂಕ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಿದೆ. ಆದರೆ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ಸ್ ಸ್ವಲ್ಪ ಆಲೋಚಿಸುವುದೊಳಿತು. ಅಭಿವೃಧ್ಧಿಯ ವಿಚಾರದಲ್ಲಿ ಸರ್ಕಾರಕ್ಕೆ ಸಹಕರಿಸದೆ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ನಡೆಸಿದರೆ ಡೆಲ್ಲಿಯಲ್ಲಿ ನಾಮಾವಶೇಷವಾದಂತೆ ಮುಂದಿನ ಚುನಾವಣೆಯಲ್ಲಿ ನಲುವತ್ತ್ನಾಲ್ಕು ನಾಲ್ಕಾದೀತು.
ಹೊಸಗಾದೆ: ಕಾಂಗ್ರೆಸ್ಸ್ ಬೊಗಳಿದರೆ ಬಿಜೆಪಿ ಹಾಳಗಲ್ಲ!