ಅಂಕಣ

ಮರಗಳನ್ನೇ ಮಕ್ಕಳನ್ನಾಗಿಕೊಂಡವರು!

ಜೂನ್ 5, ಇಂದಿನ ವಿಶೇಷತೆ ನಮಗೆ ಎಲ್ಲರಿಗೂ ಗೊತ್ತೇ ಇದೆ, ವಿಶ್ವ ಪರಿಸರ ದಿನಾಚರಣೆ. 1973 ರಿ೦ದ ವಿಶ್ವ ಪರಿಸರ ದಿನಾಚರಣೆ ಜಾರಿಗೆ ಬ೦ತು. ಈ ದಿನಾಚರಣೆಯ ಉದ್ಧೇಶ ಜನರಲ್ಲಿ ಪರಿಸರ ಕಾಳಜಿಯನ್ನು೦ಟು ಮಾಡುವದು ಮತ್ತು ಪರಿಸರ ರಕ್ಷಣೆ ಅವಶ್ಯಕತೆಯ ಪ್ರಚಾರ ಹಮ್ಮಿಕೊಳ್ಳುವದು. ಈ ದಿನಾಚರಣೆ, ವೃಕ್ಷಗಳನ್ನು ನೆಡುವ ಮೂಲಕ, ಜಲ ಮತ್ತು ವಾಯು ಮಾಲಿನ್ಯ ತಡೆವ ಕಾರ್ಯಕ್ರಮಗಳಿ೦ದ, ಇನ್ನು ಹಲವು ಪರಿಸರ ಆ೦ಧೋಲನಗಳಿ೦ದ ಆಚರಿಸಲ್ಪಡುತ್ತದೆ.

11845.real-trees

ಈ ಪರಿಸರ ಅದರಲ್ಲೂ ಮರ  ಎಂದಾಕ್ಷಣ ನಮ್ಮ ಮನದಲ್ಲಿ ಮೂಡಿ ಬರುವವರೇ  ತಿಮ್ಮಕ್ಕರವರು. ಬರೀ ತಿಮ್ಮಕ್ಕನೆಂದರೆ ಬಹುಶಃ ಯಾರಿಗೂ ಗೊತ್ತಾಗಲಾರದು. ಸಾಲು ಮರದ ತಿಮ್ಮಕ್ಕನೆಂದೇ ಕರೆಯಬೇಕು.ಇವರ ಬಗ್ಗೆ ತಿಳಿದೇ ಇಲ್ಲ ಅನ್ನೋ ಜನ ಬಹಳ ಕಡಿಮೆ. ನಮಗೆ ತಿಳಿದ ಪ್ರಕಾರ, ಸಾಲು ಮರದ ತಿಮ್ಮಕ್ಕ ಎಂದರೆ ನಾಲ್ಕು ಕಿಲೋಮೀಟರ್ ಉದ್ದಕ್ಕೂ ಮರ ನೆಟ್ಡಿದ್ದಾರೆ. ಪೃಕೃತಿ ಮಾತೆಯನ್ನೇ ಬೆಳೆಸಿ ಪೋಷಿಸುವ ಮಹತ್ಕಾರ್ಯ ಮಾಡಿರುವ  ಸಾಲು ಮರದ ತಿಮಕ್ಕ ಅವರು ನಮ್ಮೆಲ್ಲರ ಹೆಮ್ಮೆ ಹಾಗು ಆದರ್ಶವಾದ ಪರಿಸರವಾದಿ. ಪರಿಸರ ದಿನದ ನೆಪದಲ್ಲ್ಲಿ ತಿಮ್ಮಕ್ಕನವರ ಸಾಧನೆಗಳನ್ನು ಪಸರಿಸುವ ಸಣ್ಣ ಪ್ರಯತ್ನ ನನ್ನದು.

ತಿಮ್ಮಕ್ಕ ಮೂಲತಃ ಬೆಂಗಳೂರು ಹತ್ತಿರದ, ಮಾಗಡಿ ತಾಲ್ಲೂಕಿನ ಹುಳಿಕಲ್ ಗ್ರಾಮದವರು. ತಿಮ್ಮಕ್ಕರವರು ಹೆಚ್ಚು ಓದಿಲ್ಲದ ಕಾರಣ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಚಿಕ್ಕಯ್ಯ ಎಂಬ ಒಬ್ಬ ದನಕಾಯುವವರನ್ನು ಮದುವೆಯಾಗಿದ್ದರು. ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ಮಕ್ಕಳಾಗದಿದ್ದರೆ ಎಂತವರಿಗೂ ಬೇಸರವಾಗುತ್ತದೆ. ಹಾಗೆಯೇ ತಿಮ್ಮಕ್ಕನವರಿಗೂ ಈ ಕೊರತೆ ಕಾಡುತ್ತಲೇ ಇತ್ತು. ಆದರೆ ತಿಮ್ಮಕ್ಕ ಕುಗ್ಗಲಿಲ್ಲ.  ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ಆಲದ ಮರಗಳನ್ನು ನೆಡಲಾರಂಭಿಸಿದರು. ಮರಗಳನ್ನೇ ಮಕ್ಕಳಂತೆ ಪ್ರೀತಿಯಿಂದ ಬೆಳೆಸಿದರು ಅವರ ಈ ಮಹಾನ್ ಕೆಲಸಕ್ಕೆ, ಪತಿ ಚಿಕ್ಕಯ್ಯ ಅವರು ಸಹ ಕೈ ಜೋಡಿಸಿದರು.

ತಿಮ್ಮಕ್ಕ ಹುಟ್ಟುತ್ತಲೇ ಬಡತನವನ್ನು ಹಾಸಿ ಹೊದ್ದು ಬಂದವರು. ಬಡತನದ ಬೇಗೆಯ ನಡುವೆಯೂ ಆದರ್ಶಮಯ ಜೀವನ ನಡೆಸುತ್ತಿರುವ ಸಾರ್ಥಕ ಜೀವ ಅವರದು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ 4 ಕಿ.ಮೀ. ಉದ್ದಳತೆಯ ದೂರ ನೆಡಲಾಯಿತು. ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ 20 ಸಸಿಗಳನ್ನು ನೆಡಲಾಯಿತು. ಇವರು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು. ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನೀರನ್ನು ನಾಲ್ಕು ಕಿ.ಮೀ. ದೂರ ಸಾಗಿಸುತ್ತಿದ್ದರು. ಹಾಗೂ ಸಸಿಗಳನ್ನು ಮೇವಿನ ಜಾನುವಾರುಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿ ಕಾಪಾಡಿದರು. ಸಸಿಗಳು ಬೆಳೆಯಲು ನೀರಿನ ಅವಶ್ಯಕತೆಯಿರುವುದರಿಂದ, ಅವಗಳನ್ನು ಹೆಚ್ಚಾಗಿ ಮಳೆಯ ಕಾಲದಲ್ಲಿ ನೆಡಲಾಯಿತು.ಮುಂದಿನ ಮುಂಗಾರಿನಷ್ಟು ಹೊತ್ತಿಗೆ ಈ ಎಲ್ಲ ಸಸಿಗಳು ಚೆನ್ನಾಗಿ ಬೇರು ಬಿಟ್ಟಿದ್ದವು. ಒಟ್ಟಾರೆ ಹಲವಾರು ಸಸಿಗಳನ್ನು ನೆಡಲಾಗಿ ಈಗ ಆ ಮರಗಳ ನಿರ್ವಹಣೆಯನ್ನು ಸರ್ಕಾರ ವಹಿಸಿಕೊಂಡಿದೆ.

ಮಕ್ಕಳಿಲ್ಲದ ಕೊರಗು, ಬಡತನದಿಂದ ಬೆಂಡಾದ ಬಾಳ್ವೆಯ ನಡುವೆಯೂ ‘ನೆರಳು ನೀಡುವ ಮರಗಳೆ ನನ್ನ ಮಕ್ಕಳು, ಅವುಗಳನ್ನು ಬೆಳೆಸಿ ಪೋಷಿಸುವುದೇ ನನ್ನ ಜೀವನದ ಗುರಿ’ ಎಂದು ನಂಬಿ ನಡೆದ ಈ ವೃಕ್ಷ ಮಹಿಳೆ ತಿಮ್ಮಕ್ಕರವರಿಗೆ 100 ವರ್ಷ ತುಂಬಿದೆ. ತಮ್ಮ ಸಾಧನೆಗಾಗಿ ತಿಮ್ಮಕ್ಕ ಅವರಿಗೆ ಹಲವು ಸನ್ಮಾನಗಳು ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಇವರಿಗೆ, ರಾಷ್ಟ್ರೀಯ ಪೌರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ವೀರಚಕ್ರ ಪ್ರಶಸ್ತಿ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆರವರಿಂದ ಮಾನ್ಯತೆಯ ಪ್ರಮಾಣ ಪತ್ರ, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಕಡೆಯಿಂದ ಶ್ಲಾಘನೆಯ ಪ್ರಮಾಣ ಪತ್ರ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಗಾಡ್‌ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ, ಪಂಪಾಪತಿ ಪರಿಸರ ಪ್ರಶಸ್ತಿ, ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ, ಶ್ರೀಮಾತಾ ಪ್ರಶಸ್ತಿ, ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ, ಕರ್ನಾಟಕ ಪರಿಸರ ಪ್ರಶಸ್ತಿ, ಮಹಿಳಾರತ್ನ ಪ್ರಶಸ್ತಿ, ನ್ಯಾಷನಲ್ ಸಿಟಿಜನ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಟ ಆಫ ಲೀವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ, 2010 ರ ಸಾಲಿನ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿಗಳು ಲಭಿಸಿವೆ.

ಸಾಲು ಮರದ ತಿಮ್ಮಕ್ಕ ಅವರ ಸಾಧನೆಯಿಂದ ಸ್ಪೂರ್ತಿ ಪಡೆದಾದರೂ  ನಾವು ಪರಿಸರವನ್ನು ಉಳಿಸುವಲ್ಲಿ ನಮ್ಮ ಕಾರ್ಯ ನಿರ್ವಹಿಸಬೇಕು. ಗಿಡ ಮರಗಳನ್ನು ನಮ್ಮ ಮನೆ ಸುತ್ತ ಬೆಳೆಸೋಣ. ಕಸ-ಕಡ್ಡಿ ತ್ಯಾಜ್ಯಗಳನ್ನು ಎಲ್ಲೆ೦ದರಲ್ಲಿ ಹಾಕೋದನ್ನು ನಿಲ್ಲಿಸೋಣ. ಶಬ್ದ ಮಾಲಿನ್ಯ ಕಡಿಮೆ ಮಾಡೋಣ. ಜಲಮಾಲಿನ್ಯ ಆದಷ್ಟು ತಡೆಯೋಣ. ನದಿ, ಭಾವಿ, ಕೆರೆ, ಕೊಳ್ಳಗಳನ್ನು ಉಳಿಸಿ ಮಾಲಿನ್ಯದಿ೦ದ ತಡೆಗಟ್ಟೋಣ. ನಮ್ಮ ಪರಿಸರವನ್ನು ಶುದ್ಧಿಯಾಗಿ ಉಳಿಸಲು ಇನ್ನು ಏನೇನು ಸಾಧ್ಯವೋ ಅದನ್ನು ಮಾಡೋಣ. ಇದು ಈ ದಿನದ೦ದು ನಮ್ಮ ಪ್ರತಿಜ್ಞೆಯಾಗಲಿ. ಪರಿಸರ ದಿನದ ಸಂದರ್ಭದಲ್ಲಿ, ಮರಗಳನ್ನು ಬೆಳೆಸುತ್ತಲೇ ನಮ್ಮೆಲ್ಲರ ಮನದಲ್ಲಿ ಹೆಮ್ಮರವಾಗಿ ಬೆಳೆದ ಸಾಲುಮರದ ತಿಮ್ಮಕ್ಕನವರಿಗೆ ನಮ್ಮದೊಂದು ಸಲಾಂ!

Facebook ಕಾಮೆಂಟ್ಸ್

ಲೇಖಕರ ಕುರಿತು

Prashanth N Rao

Passionate in writing and a social animal. Love to innovate new things. A great food lover and a travel freak.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!