ಪ್ರಚಲಿತ

ವರುಷ ಹದಿನಾರು – ಬಲಿದಾನ ನೂರಾರು – 1

ಜೂನ್ ಜುಲಾಯಿ ಬಂತೆಂದರೆ ಸಾಕು ಮನಸ್ಸು ತನ್ನಿಂತಾನೆ  ಕಾರ್ಗಿಲ್ ನ್ನು  ನೆನಪಿಸಿಕೊಳ್ಳುತ್ತದೆ. ಬಾಳು ಕೊನೆಯಾದೀತು ಎನ್ನುವ ಅಸ್ತಿರತೆಗೆ ಜಗ್ಗದೆ ಹೋರಾಡಿದ ಯೋಧರ ಪ್ರೇರಣಾದಾಯಕ ಜೀವನ ಮನದಲ್ಲಿ ಸಾವಿರ ಸಾವಿರ ಯೋಚನೆಗಳನ್ನು ಹುಟ್ಟು ಹಾಕುತ್ತದೆ. ಅಲ್ಲಿ ಪ್ರತಿ ಹೆಸರಿನ ಹಿಂದೆ ಒಂದೊಂದು ಕಥೆಯಿದೆ, ಕುಟುಂಬಿಕರ ವ್ಯಥೆಯಿದೆ. ಸಮಯಾಸಮಯವಿಲ್ಲದೆ ಇವರುಗಳು ತೋರಿದ ಧೈರ್ಯ, ತ್ಯಾಗ ಎಂದಿಗೂ ಚಿರಸ್ಥಾಯಿ! 2015 ಜುಲೈ 26 ರಂದು 16 ನೇ ಕಾರ್ಗಿಲ್ ವಿಜಯ ದಿವಸ ಆಚರಿಸುವ ತವಕದಲ್ಲಿದ್ದೇವೆ ನಾವುಗಳು… ಆದರೆ ಈ ವಿಜಯ ದಿವಸ ಆಚರಿಸಲು ನಮಗಾಗಿ ಮಡಿದ 527 ಯೋಧರನ್ನು ಸ್ಮರಿಸದೇ ಹೋದರೆ, ವಿಜಯ ದಿವಸಕ್ಕೆ ಅರ್ಥವಾದರೂ ಎಲ್ಲಿಂದ???  527 ರಲ್ಲಿ ಕೆಲವರನ್ನಾದರೂ  ಸ್ಮರಿಸುವ ಮೂಲಕ ಸಾರ್ಥಕ ಬದುಕು ನಡೆಸಿದ ಅವರಿಗೆಲ್ಲಾ ನುಡಿ ನಮನ ಸಲ್ಲಿಸುವ ಪ್ರಯತ್ನ ಇಲ್ಲಿದೆ..

saurabh-kalia

“ಸೇನೆಗೆ ಸೇರಿದ ಕೂಡಲೇ ನಿನ್ನ ಬ್ರೈನ್ ತೆಗೆದು ಗನ್ ಕೊಡುತ್ತಾರೆ. ನೀನು ರಿಟೈರ್ಡ್ ಆಗೋವಾಗ ಗನ್ ಕಿತ್ತುಕೊಂಡು ಬ್ರೈನ್ ವಾಪಾಸ್ ಕೊಡೋದನ್ನು ಮರೆಯುತ್ತಾರೆ”  ಹೀಗಂತ ಅಣ್ಣ  ವೈಭವ್ ಕಾಲಿಯಾ  ಹೇಳಿದಾಗ ಸೈನ್ಯ ಸೇರುವ  ಹಂಬಲದಲ್ಲಿದ್ದ ಸೌರಭ್ ಕಾಲಿಯಾ ಅದನ್ನು ಕೇರ್ ಮಾಡಲಿಲ್ಲ. ಆತನಿಗಿದ್ದಿದ್ದು ಸೈನ್ಯ ಸೇರುವ ಗುರಿಯೇ ಹೊರತು ಜೀವದ ಹಂಗಲ್ಲ.  ಸೌರಭ್ ಗೆ ಡಾಕ್ಟರ್ ಆಗಬೇಕೆಂಬ ಆಸೆಯಿತ್ತು, ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಪರೀಕ್ಷೆಗೆ ಅರ್ಜಿ ಕರೆದಿದ್ದರು, ಸೌರಭ್ ನ ಸ್ನೇಹಿತ ಬಳಗವೆಲ್ಲಾ ಪರೀಕ್ಷೆ ಕಟ್ಟಿದರು. ಆದರೆ ಪರೀಕ್ಷೆ ಬರೆದು ಪಾಸಾಗಿದ್ದು ಸೌರಭ್ ಮತ್ತೆ ಆತನ ಇನ್ನೊಬ್ಬ ಸ್ನೇಹಿತ ಮಾತ್ರ. ಪಾಸಾಗಿದ್ದೇ ತಡ, ಡಾಕ್ಟರ್ ಆಗಬೇಕೆಂಬ ಕನಸಿನ ಬದಲು ಸೈನ್ಯ ಸೇರುವ ಹಂಬಲ ಉತ್ಕಟವಾಗಿತ್ತು. ಪಾಸಾಗಿದ್ದು ಬರೆಯುವ ಪರೀಕ್ಷೆಯಲ್ಲಷ್ಟೇ. ನಂತರದ  ಮೆಡಿಕಲ್ ಟೆಸ್ಟಿನಲ್ಲಿ ಎರಡು ಬಾರಿ, ಒಮ್ಮೆ ಹೃದಯದ ಸಣ್ಣ ತೊಂದರೆ ಮತ್ತೊಮ್ಮೆ ಟಾನ್ಸಿಲ್ಸ್ ತೊಂದರೆ ಎಂಬ ಕಾರಣಕ್ಕಾಗಿ ತಿರಸ್ಕರಿಸಲ್ಪಟ್ಟಿದ್ದ. ಆದರೆ ಸೈನ್ಯದ ಕನಸು, ಮನಸಿನಲ್ಲಿ ಬೇರೆ ಯಾವುದಕ್ಕೂ ಜಾಗವಿರದಷ್ಟು ಆವರಿಸಿತ್ತು. ಇದ್ದ ದೈಹಿಕ ಕೊರತೆಗಳನ್ನೆಲ್ಲಾ ನೀಗಿಸಿಕೊಂಡು ಸೌರಭ್ ಡೆಹ್ರಾಡೂನ್ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಸೇರಿಯೇ ಬಿಡುತ್ತಾನೆ.

1998 ಡಿಸೆಂಬರ್ ಕೊನೆಯ ವಾರ, ಕೇವಲ 22 ವರ್ಷದ ಸೌರಭ್ ಕಾಲಿಯಾ ಜಾಟ್ ರೆಜಿಮೆಂಟ್ -4 ಸೇರಲು ಅಣಿಯಾಗಿದ್ದ. ಕನಸು ನನಸಾಗಿತ್ತು. ಅಮೃತಸರದ ರೈಲ್ವೇ ನಿಲ್ದಾಣದಲ್ಲಿ ತನ್ನ ಮನೆಯವರಿಗೆ ವಿದಾಯ ಹೇಳಿ ಕೈ ಬೀಸಿ ಹೊರಟೇ ಬಿಟ್ಟ ಸೌರಭ್ ಕಾಲಿಯಾ. ಆತನ ಮೊದಲ ಪೋಸ್ಟಿಂಗ್ ಇದ್ದುದೇ ಜಮ್ಮು ಕಾಶ್ಮೀರದ ಕಾರ್ಗಿಲ್ ಗೆ! ಸೈನ್ಯಕ್ಕೆ ಸೇರಿ ಸರಿಯಾಗಿ ಆರು ತಿಂಗಳು, ಜೂನ್ ಆರರಂದು ದಿನ ಪತ್ರಿಕೆಯನ್ನು ನೋಡಿದಾಗಲೇ ತಮಾಷೆ ಮಾಡಿದ್ದ ಮನೆಯವರಿಗೆ ಸೌರಭ್ ನ ಸ್ನೇಹಿತರಿಗೆಲ್ಲಾ ಸೈನಿಕನ ಜೀವನ ವಾಸ್ತವ ಎಂಬ ಕಹಿ ಸತ್ಯ ದುತ್ತೆಂದು ನಿಂತಿತ್ತು. ವಿಷಯವೇನೆಂದರೆ ಮೇ 1 ರಿಂದ ಸೌರಭ್ ಹಾಗೂ ಜೊತೆಗಿದ್ದ ಸೈನಿಕರು ಕಾಣೆಯಾಗಿದ್ದಾರೆ ಎಂದು. ಮತ್ತೊಂದು ಟ್ವಿಸ್ಟ್ ಏನೆಂದರೆ ಎಪ್ರೀಲ್ 30 ಕ್ಕೆ ತಮ್ಮ ವೈಭವ್ ನ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಕರೆಮಾಡಿದ್ದ ಸೌರಭ್ ಅಮ್ಮನ ಜೊತೆಗೂ ಮಾತಾಡಿದ್ದ ಅಲ್ಲದೇ ಕೆಲವು ದಿನಗಳ ಕಾಲ ಕಾಲ್ ಮಾಡದೇ ಇದ್ದರೆ ಗಾಬರಿ ಆಗಬೇಡಿ, ದೂರ ತೆರಳಬೇಕಾದ ಸಂದರ್ಭ ಬರಬಹುದು ಎಂದು ಹೇಳಿದ್ದ, ವಾಪಾಸ್ ಬಂದ ಕೂಡಲೇ ಕಾಲ್ ಮಾಡುತ್ತೇನೆ ಎಂದು ಏನೋ ಹೇಳಿದ್ದ. ಆದರೆ ಸೌರಭ್ ಗೆ ತಿಳಿದಿರಲಿಲ್ಲ ಕಾಲ್ ಮಾಡಲೇ ಆಗದಷ್ಟು ದೂರ ತೆರಳುತ್ತೇನೆ ಎಂದು…

ದಿನ ಪತ್ರಿಕೆ ಓದಿದ ತಮ್ಮ ವೈಭವ್ ನೇರವಾಗಿ ಅಪ್ಪನ ಆಫೀಸಿಗೆ ತೆರಳುತ್ತಾನೆ. ಅಮ್ಮನಿಗೋ ಪತ್ರಿಕೆಯಲ್ಲಿ ಬಂದ ಸುದ್ದಿಯಲ್ಲಿ ನಂಬಿಕೆಯೇ ಇಲ್ಲ. ಸಹಜವೇ ಅದು! ಮೇ 10ರ ದಿನಾಂಕ ಹೊಂದಿದ ಸೌರಭ್ ನ ಲೆಟರ್ ಅಲ್ಲಿ ಜೂನ್ 29ಕ್ಕೆ ಬರುತ್ತೇನೆ ತನ್ನ ಹುಟ್ಟಿದ ಹಬ್ಬ ಇದೆಯಲ್ಲಾ ಎಂದು ಬೇರೆ ಅಮ್ಮನಿಗೆ ಪ್ರಾಮಿಸ್ ಮಾಡಿದ್ದ. ಮಗ ಪ್ರಾಮಿಸ್ ತಪ್ಪಿಸುವುದುಂಟೇ, ಅಲ್ಲದೇ ಮೇ 10 ಕ್ಕೆ ಲೆಟರ್ ಹಾಕಿದ ಮಗ ಮೇ ಒಂದಕ್ಕೆ ಕಾಣೆಯಾಗಿದ್ದಾನೆ ಎಂದರೆ?? ಅರ್ಥವಿಲ್ಲ ಎಂಬ ಪ್ರತಿಪಾದನೆ ಅಮ್ಮಂದು.  ಅದಲ್ಲದೇ ಕಾಣೆಯಾಗಿದ್ದಾರೆ ಎಂದರೆ ಸೇನೆಯಿಂದ ಸಂದೇಶವೂ ಬರುತ್ತದೆ ಎಂಬ ನಂಬಿಕೆ.

ಆದರೆ ಗೇಲಿ ಮಾಡಿದ್ದ ತಮ್ಮನಿಗೆ ಸುಮ್ಮನೆ ಕುಳಿತುಕೊಳ್ಳಲಾಗಲಿಲ್ಲ, ನೇರವಾಗಿ ದಿನಪತ್ರಿಕೆ ಕಛೇರಿಗೆ ಹೋಗುತ್ತಾನೆ ಅಲ್ಲಿ ರಿಪೋರ್ಟ್ ಬಗ್ಗೆ ಕೇಳಿದಾಗ, ಆರ್ಮಿ ಆಸ್ಪತ್ರೆಯಲ್ಲಿ ಸೇರಿದ ಸೈನಿಕನೊಬ್ಬ ತಿಳಿಸಿದ ಎನ್ನುತ್ತಾರೆ. ಸರಿ ಅಲ್ಲಿಗೆ ವೈಭವ್ ನ ಆತಂಕ ಹೆಚ್ಚಾಗುತ್ತದೆ. ದೆಹಲಿಗೆ ಕಾಲ್ ಮಾಡಿ ವಿಚಾರಿಸಿದರೆ ಮೇ 1 ರಿಂದಲೇ ಕಾಣೆಯಾಗಿದ್ದಾರೆ ಎಂಬ ಉತ್ತರ. ಮೇ 10 ರಂದು ಲೆಟರ್ ಬಂದಿದೆ, ಎಪ್ರೀಲ್ 30 ಕ್ಕೆ ಕಾಲ್ ಮಾಡಿದ್ದ ಮೇ 1 ರಂದು ಕಾಣೆಯಾಗಲು ಸಾಧ್ಯವೇ ಇಲ್ಲ ಎಂಬ ವಾದ ವೈಭವ್ ನದ್ದು. ಕೊನೆಗೂ ಹೇಗೇಗೋ ಮಾಡಿ ಆಗಿನ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಅವರನ್ನು ಸಂಪರ್ಕಿಸಿದಾಗ ಸಿಕ್ಕಿದ ಉತ್ತರ – ಮೇ 15 ರಂದು ಗಸ್ತು ತಿರುಗಲು ಹೋಗಿದ್ದ ಲೆಫ್ಟಿನೆಂಟ್ ಸೌರಭ್ ಜೊತೆಗೇ ಸಿಪಾಯಿ ಅರ್ಜುನ್ ರಾಮ್, ಭನ್ವರ್ ಲಾಲ್ ಬಗಾರಿಯಾ, ಭಿಕಾರಾಮ್, ಮೂಲಾರಾಮ್, ನರೇಶ್ ಸಿಂಗ್ ಇವರುಗಳನ್ನು ಪಾಕಿಸ್ತಾನಿಗಳು ಅಪಹರಿಸಿದ್ದಾರೆ’

ಮುಂದಿನದು … ಅದು ದುರಂತ ಅಧ್ಯಾಯ..  ನಮ್ಮಲ್ಲಿ ಯುಧ್ಧ ಧರ್ಮ ಅನ್ನೋದಿದೆ. ಶತ್ರುಗಳು ಮಲಗಿರುವಾಗ, ಶರಣಾದ ಮೇಲೆ ದಾಳಿ ಮಾಡಬಾರದು ಎಂದು ಆ ಧರ್ಮ ಹೇಳುತ್ತದೆ. ಆದರೆ ಆ ಧರ್ಮಾಂಧ ಧೂರ್ತ ರಾಷ್ಟ್ರಕ್ಕೆ ಅದ್ಯಾವುದೂ ಇರಲಿಲ್ಲ.. ನಮ್ಮ ಸೈನಿಕರನ್ನು ಅಪಹರಿಸಿದ್ದೇನೋ ಹೌದು, ಆದರೆ ಮುಂದಿನ 22 ದಿನಗಳ ಕಾಲ ಅವರನ್ನು ನಡೆಸಿಕೊಂಡ ರೀತಿ, ಅದಕ್ಕೆ ಕ್ರೂರ ಎಂಬ ಶಬ್ದವೂ ಸಾಲದು. ಕೊನೆಯ ಪಕ್ಷ ದೇಹ ಹಿಂತಿರುಗಿಸುವಾಗ, ದೇಹ ಇಂತಹವರದ್ದೇ ಎಂದಾದರೂ ಗುರುತಿಸುವಂತಹ ಸ್ಥಿತಿಯಲ್ಲಾದರೂ ಇರಬೇಕಲ್ಲ??  ಕನಸಿನ ಆರ್ಮಿ ಯುನಿಫಾರ್ಮಂನಲ್ಲಿ ತನ್ನ ದೈಹಿಕ ಕೊರತೆಗಳನ್ನೆಲ್ಲಾ ಮೀರಿ ನಿಂತು ಹೋಗಿದ್ದ ಸೌರಭ್ ಕಾಲಿಯಾ ಬಂದಿದ್ದು ತ್ರಿವರ್ಣ ಧ್ವಜದಲ್ಲಿ ಒಂದು ಮಾಂಸದ ಮುದ್ದೆಯಾಗಿ!!!! ಕಣ್ಣು, ಕಿವಿ, ಮೂಗು, ಕೈ, ಕಾಲು ಬಿಡಿ ಗುಪ್ತಾಂಗ ಯಾವುದೂ ಇರಲಿಲ್ಲ. ಮೈಯೆಲ್ಲಾ  ಸಿಗರೇಟಿನಿಂದ ಸುಟ್ಟ ಗಾಯ, ದೇಹವೆಲ್ಲಾ ಛಿದ್ರ ಛಿದ್ರ. ಅಬ್ಬಬ್ಬಾ!! ಯುಧ್ಧ ನಿಯಮಗಳನ್ನೆಲ್ಲಾ ಗಾಳಿಗೆ ತೂರಿದ ಪಾಕಿಸ್ತಾನ 22 ದಿನಗಳ ಅಮಾನುಷ ಕೃತ್ಯ ನಡೆಸಿ ಸೈನಿಕರ ದೇಹವನ್ನು ಭಾರತಕ್ಕೆ ಕಳುಹಿಸಿತು. ಅಲ್ಲಿಗೆ ವೀರ ಯೋಧನೊಬ್ಬನ ಯಶೋಗಾಥೆ ವೀರೋಚಿತವಾಗಿ ಅಂತ್ಯಗೊಳ್ಳುತ್ತದೆ.

ಡಾ. ಕೆ. ಎನ್. ಕಾಲಿಯಾ ತನ್ನ ಮಗನಿಗೆ ನೀಡಬೇಕಾದ ಕನಿಷ್ಟ ಗೌರವವನ್ನೂ ನೀಡದೇ ಚಿತ್ರಹಿಂಸೆ ನೀಡಿದ ಪಾಕಿಸ್ತಾನಕ್ಕೆ ಶಿಕ್ಷೆಯಾಗಬೇಕು ಎಂದು ಪತ್ರ ಬರೆಯುತ್ತಾರೆ. ಆದರೆ ಇಂದಿಗೂ ಆ ಪತ್ರಕ್ಕೆ ನ್ಯಾಯ ಸಿಕ್ಕಿಲ್ಲ… ಆ ಪತ್ರಕ್ಕೆ ಬ್ರಿಟನ್ ಹೈ ಕಮಿಷನ್ , ಜರ್ಮನ್, ಜಪಾನ್, ನಾಗಾಲ್ಯಾಂಡ್ ಹೀಗೆ ಹಲವು ರಾಷ್ಟ್ರಗಳಿಂದ ಸಾಂತ್ವನ ಪತ್ರಗಳ ಹರಿವು ಬರುತ್ತದೆ. ದಂಪತಿಯೊಬ್ಬರು ತಮ್ಮ ಮಗನಿಗೆ ಸೌರಭ್ ಎಂದೇ ಹೆಸರಿಟ್ಟರು. ಆದರೆ ನಮ್ಮ ಅವಿಭಾಜ್ಯ ಅಂಗ ಕಾಶ್ಮೀರದಿಂದ ಒಂದೇ ಒಂದು ಪತ್ರ ಬರಲಿಲ್ಲ!! ನಾವೋ, ಉಗ್ರರಿಗೆ ಕೋಟಿ ಖರ್ಚು ಮಾಡುತ್ತೇವೆ, ನಿಮಗೆ ನೆನಪಿರಬಹುದು ಪಾಕಿಸ್ತಾನಿ ಮಗು ನೂರ್ ಫಾತಿಮಾಗೆ ಹೃದಯದ ಆಪರೇಶನ್ ಮಾಡಿತ್ತು ಭಾರತ, ಆದರೆ ನಮ್ಮ ಸೈನಿಕರ ದೇಹವನ್ನು ಸಿಗರೇಟಿನಿಂದ ಸುಟ್ಟು ಕಳುಹಿಸುತ್ತದೆ ಪಾಕಿಸ್ತಾನ. ಅಲ್ಲದೇ, ಯುದ್ಧದ ಸಮಯದಲ್ಲಿ ಹತರಾದ ಪಾಕ್ ಸೈನಿಕರ ದೇಹವನ್ನು ಅವರ ಕ್ರಮದಂತೆಯೇ ಅಂತ್ಯ ಸಂಸ್ಕಾರ ಮಾಡಿತ್ತು ಭಾರತೀಯ ಸೇನೆ, ಅದೇ ಅವರ ರಕ್ತ ಪಿಪಾಸುಗಳ ಕೈಗೆ ಸಿಲುಕಿ ನಲುಗಿದ ನಮ್ಮ ಯೋಧರ ಸ್ಥಿತಿ???

ಸೌರಭ್ ಗೆ ತನ್ನ ಆಸೆಯಂತೆ ಡಾಕ್ಟರ್ ಆಗಬಹುದಿತ್ತು. ರೋಗಿಗಳ ಸೇವೆ ಮಾಡುತ್ತಾ ಆರಾಮವಾಗಿರಬಹುದಿತ್ತು. ಆದರೆ ಆತನಿಗೆ ದೇಶ ಸೇವೆಯ ಮುಂದೆ ಆ ಸೇವೆಯೂ ಸಣ್ಣದಾಗಿ ಕಾಣಿಸಿತೋ ಏನೋ?  ಸೇವೆಯಲ್ಲಿಯೇ ಆತನ ಜೀವ ಸವೆದು ಹೊಯಿತು. ಸೈನ್ಯದಿಂದ ರಿಟೈರ್ಡ್ ಆಗುವಾಗ ಬ್ರೈನ್ ಮಾತ್ರವಲ್ಲ ಕಣ್ಣು, ಕಿವಿ, ಜೀವ, ಜೀವನ ಯಾವುದೂ ಆತನಿಗೆ ಸಿಗಲಿಲ್ಲ!

ಧೀರತ್ವದ ಗಾಥೆ ಬರೆದು ಹೋದ ಸೌರಭ್ ನಿನಗಿದೋ ನಮ್ಮ ಭಾವಪೂರ್ಣ ನಮನ…..

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!