ಜಗದ ಡೊಂಕ ಕಳೆಯಲು
ಬಾಗಿಲೆಲ್ಲಿದೆ ಗೋಲಕೆ..?
ತೋರೋ ಹರಿಯೇ, ಮನದ ಗೋಡೆಗೆ,
ತಿಮಿರದ ಬಾಗಿಲ…
ಹೃದಯ ಕವಾಟವ ತೆರೆದು,
ಮಲಿನ ಜೀವ-ಜಲವ ಶುದ್ಧಿ ಸಿದ್ಧಿಸಿದಂತೆ,
ಮಾಡೋ ಹರಿಯೇ, ನನ್ನ ಮನದ ಜೀವವಾಯುವ.
ಪಾಪ-ಪುಣ್ಯಗಳ ಭ್ರಾಂತಿ
ಜನನ ಮರಣದ ವರ್ತುಲಗಳ ಭೀತಿ.
ತೋರೋ ಹರಿಯೇ, ಪರಿಪೂರ್ಣ ಛಾಪು ಈ ಜೀನಕೆ
ಶಾಂತಿಯ ಕಾನನದಲ್ಲಿ ಕಾಣದ ಆತ್ಮನ ಬಾಣ,
ಅವಿರ್ಭಾವ ಅವಭೃಥ ಅಮೃತದ ಸ್ನಾನ.
ಮಾಡೋ ಹರಿಯೇ, ಇವನ್ನೇ ಕುಡಿಸಿ ಜಾಣರ ಜಾಣ
ಹಸಿರು ಮರದಲ್ಲಿ ಐಕ್ಯವಾಗಿ ಬಾಳುವುದು ಬೆಂಕಿ
ಸಖ್ಯದಿಂದಲೇ ಮಾಡುವುದುಬೂದಿ, ಕುದಿಯುವುದು ಮನ,
ಆರಿಸೋ ಹರಿಯೇ ಮನದ ಮಾನಕಷಾಯದ ಬೆಂಕಿಯ.
ಸಂಕಟದ ಬುತ್ತಿಯ ತುಂಬ ಅಗುಳು ಸುಡುವುದು,
ಹೃದಯ ಗೋಡೆಯ ಮೇಲೆ ಅದು ಉಷ್ಣ ಬಿಡುವುದು
ತೋರೋ ಹರಿಯೇ ಸ್ಪಷ್ಟ ದೃಷ್ಠಿಯ ಸೃಷ್ಠಿಯ ಹಾದಿಯ…
ಒಡೆದ ಸಂದಿನಿಂದ ಬಳಿತ ಬೆಳಕು
ಕೋಣೆಯ ಕತ್ತಲ ಮಿಟುವುದು.
ತೋರೋ, ಹರಿಯೇ ಕತ್ತಲ ಭಾವಕೆ ದೀಪದ ಬಿಂಬವ
ವಿಕಾರವ ಕಡೆದು ವಿಕಾಸವ ಹಡೆದು
ತಾ ಹರಿಯೇ ಅಂತರಂಗದ ಅರ್ಮೂತಕೆ ಬೆಳಕ….