ಪ್ರಚಲಿತ

ಅಂತಹ ಕೆಟ್ಟ ದಿನಗಳು ಇನ್ನೆಂದೂ ಬರದಿರಲಿ

ಸುಮ್ಮನೆ ಒಮ್ಮೆ  ಊಹಿಸಿ. ದಿನ ಬೆಳಗಾದರೆ ಫೇಸ್ ಬುಕ್, ಟ್ವಿಟ್ಟರಿನಲ್ಲಿ ಬೇಕಾದ್ದನ್ನು, ಬೇಡವಾದ್ದನ್ನು ಹರಟುತ್ತೇವಲ್ಲಾ ಅದಕ್ಕೆಲ್ಲಾ ನಮ್ಮ ಸರ್ಕಾರ ನಿರ್ಬಂಧ ಹೇರಿದರೆ ಹೇಗಿರಬಹುದು?  ಬೆಳಗ್ಗೆ ಬರುವ ದಿನಪತ್ರಿಕೆ ಒಂದು ದಿನ ಬರದೇ ಇದ್ದರೆ ಹೇಗಿರಬಹುದು? ನೀವು ಬಳಸುತ್ತಿರುವ ಮೊಬೈಲಿನ ನೆಟ್ ವರ್ಕನ್ನು ಕಿತ್ತುಕೊಂಡು ನಿಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡದಂತೆ, ಮೆಸ್ಸೇಜ್ ಮಾಡದಂತೆ ಮಾಡಿದರೆ ಏನನಿಸಬಹುದು ನಿಮಗೆ? ನಾವು  ನಿತ್ಯವೂ ನೋಡುವ ಟೀವಿಯಲ್ಲಿ ಕೇವಲ ಸರ್ಕಾರದ ಕುರಿತಾದ ಪ್ರೋಗ್ರಾಮ್ ಗಳು ಮಾತ್ರ ಬಂದರೆ ನಿಮ್ಮ ಪ್ರತಿಕ್ರಿಯೆ ಏನು? ನಿಮ್ಮನ್ನು ಸಾರ್ವಜನಿಕವಾಗಿ ಹೆಚ್ಚು ವ್ಯವಹರಿಸದಂತೆ ತಡೆದರೆ ಏನು ಮಾಡುತ್ತೀರಿ? ನೀವು ಸಾಮಾಜಿಕವಾಗಿ ಹೆಚ್ಚು ಕ್ರಿಯಾಶೀಲರಾಗಿದ್ದೀರಿ ಎಂಬ ಕಾರಣಕ್ಕೆ ಸುಮ್ಮನೆ ಹೇಳದೆ ಕೇಳದೆ ನಿಮ್ಮನ್ನು ಅರೆಸ್ಟ್ ಮಾಡಿದರೆ ಏನು ಮಾಡುತ್ತೀರಿ?

ಹುಹ್..! ಇದೆಲ್ಲಾ ಆಗುವಂತಹಾ ಮಾತಾ ಅಂದು ಕೇಳುತ್ತೀರಾ?   ಹೌದು ಸ್ವಾಮಿ. ನಮ್ಮ ದೇಶದಲ್ಲಿ ಇದೆಲ್ಲ ಖಂಡಿತಾ ಆಗುವಂತಹ ಮಾತುಗಳೇ. ಸದ್ಯದ ಪರಿಸ್ಥಿತಿ ಅಥವಾ ನಾಯಕತ್ವದ ಬಗ್ಗೆ ಹೇಳುತ್ತಿಲ್ಲವಾದರೂ ಹಿಂದೊಮ್ಮೆ ಇಂತಹುದೇ ಘಟನೆಗಳು ನಮ್ಮ ದೇಶದಲ್ಲಿ ನಡೆದಿರುವುದರಿಂದ ಧೈರ್ಯವಾಗಿ ಹೇಳುತ್ತಿದ್ದೇನೆ.

ತುರ್ತು ಪರಿಸ್ಥಿತಿ..! ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಇಟ್ಟ ದೊಡ್ಡ ಕಪ್ಪು ಚುಕ್ಕೆ ತುರ್ತು ಪರಿಸ್ಥಿತಿ. ನಾನಂತೂ ಆಗಿನ ಸಂದರ್ಭವನ್ನು ಕಂಡಿಲ್ಲ, ಅನುಭವಿಸಿಯೂ ಇಲ್ಲ. ಆದರೆ ಅದರ ಬಗ್ಗೆ ಓದಿದರೆ ಸಾಕು, ಇದೆಂತಹಾ ಗುಲಾಮಗಿರಿ ಎಂದೆನಿಸಿಬಿಡುತ್ತದೆ. ಆ ಕರಾಳ ದಿನಗಳ ಬಗ್ಗೆ ಕೆಲವು ಹಿರಿಯರ ಮಾತು ಕೇಳುವಾಗ ಮೈ ಜುಮ್ಮೆನ್ನುತ್ತದೆ. ಹೋರಾಟದ ಕಿಚ್ಚು ಮೂಡುತ್ತದೆ.

Emergency

ಹೌದು. ಬ್ರಿಟಿಷರು ಬಂದು ಹೋದ ನಂತರ ಮೊದಲ ಬಾರಿಗೆ ನಮ್ಮವರೇ ನಮ್ಮ ಸ್ವಾತಂತ್ರವನ್ನು ಬಲವಂತದಿಂದ ಕಿತ್ತುಕೊಳ್ಳುವಂತೆ ಮಾಡಿದ್ದು ಈ ತುರ್ತು ಪರಿಸ್ಥಿತಿ. ನಮ್ಮವರೇ ಎನ್ನುವುದಕ್ಕಿಂತ ನಮ್ಮ ಕಾಂಗ್ರೆಸ್ಸಿಗರು ಇನ್ನೂ ನೇರವಾಗಿ ಹೇಳುವುದಾದರೆ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ. ಒಬ್ಬ ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಮಾಡಿಯಾಳು ಎನ್ನುವುದಕ್ಕೆ ಅತ್ಯಂತ ಕೆಟ್ಟ ಉದಾಹರಣೆಯಾಗಿ ಇಂಧಿರಾಗಾಂಧಿಯವರನ್ನು ಹೇಳಬಹುದು. ಯಾಕೆಂದರೆ ಪುರುಷರು ಮಹಿಳೆಯರೆನ್ನದೆ ಎಲ್ಲರನ್ನೂ ರಾತ್ರೋರಾತ್ರಿ ಜೈಲು ಬಂಧಿಯನ್ನಾಗಿ ಮಾಡಿದ್ದು ಇಂಧಿರಾಗಾಂಧಿ. ರಾಜಕಾರಣಿಗಳು, ಉದ್ಯಮಿಗಳು, ಸಾಹಿತಿಗಳು, ವಿದ್ಯಾರ್ಥಿಗಳಾದಿಯಾಗಿ ಸರ್ಕಾರದ ವಿರುಧ್ಧ ನಿಂತಿದ್ದ ಎಲ್ಲರನ್ನೂ ಕಂಬಿಗಳ ಹಿಂದೆ ಬಂಧಿಸಲಾಗಿತ್ತು ಆವತ್ತು. ದೇಶಾದ್ಯಂತ ಇರುವ ಸಾವಿರಾರು ಜೈಲುಗಳಲ್ಲಿ ಕೋಟ್ಯಾಂತರ ಜನರನ್ನು ಉಪ್ಪಿನಕಾಯಿ ಹಾಕಿದಂತೆ ತುಂಬಲಾಗಿತ್ತು. ಯಾರನ್ನೇ ಆದರೂ ಬಂಧಿಸಬೇಕಾದರೆ ಯಾವುದೇ ಕಾರಣಗಳು ಬೇಕಾಗಿರಲಿಲ್ಲ. ಸರ್ಕಾರದ ವಿರುಧ್ಧವಾಗಿ ಯೋಚಿಸಿದರೂ ಬಂಧನ ಎನ್ನುವಂತಹಾ ಸ್ಥಿತಿಯಲ್ಲಿ ನಮ್ಮವರಿದ್ದರು ಆವತ್ತಿನ ತುರ್ತು ಪರಿಸ್ಥಿತಿಯಲ್ಲಿ.

ಹಾಗಂತ ನಮ್ಮ ಹಿರಿಯರೆಲ್ಲಾ ಹೇಡಿಗಳಾಗಿದ್ದರೆಂದು ಅಂದುಕೊಳ್ಳುವುದು ಬೇಡ. ಸರ್ಕಾರ ಪೋಲೀಸ್ ಬಲವನ್ನು ಉಪಯೋಗಿಸಿ ವಿರೋಧಿಗಳನ್ನೆಲ್ಲಾ ಮಟ್ಟ ಹಾಕುತ್ತಿದ್ದರೆ ಅರ್.ಎಸ್.ಎಸ್, ಜನಸಂಘ, ಜನತಾದಳ, ಕಮ್ಮ್ಯುನಿಸ್ಟ್ ಮುಂತಾದ ಪಕ್ಷಗಳು ಸರ್ಕಾರಕ್ಕೆ ತಿಳಿಯದಂತೆಯೇ ಹೋರಾಟ ರೂಪಿಸಿದ್ದರು. ಹಲವು ನಾಯಕರು, ಸಾಹಿತಿಗಳು , ಪತ್ರಕರ್ತರು ಭೂಗತರಾಗಿ ಸರ್ಕಾರದ ವಿರುಧ್ಧ ಲೇಖನಗಳನ್ನು ಬರೆದು ಜನರಿಗೆ ರಹಸ್ಯವಾಗಿ ತಲುಪಿಸುತ್ತಿದ್ದರು. ಕೆಲವರಂತೂ ಜೈಲಿನೊಳಗಿನಿಂದಲೇ ಈ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಸಿಸಿ ಕ್ಯಾಮೆರಾ ಕಣ್ಣುಗಳು ಆವಾಗ ಇಲ್ಲದೇ ಇದ್ದರೂ ಪೋಲೀಸರ ಹದ್ದಿನ ಕಣ್ಣು ತಪ್ಪಿಸಿ ಇವನ್ನೆಲ್ಲಾ ಮಾಡುವುದು ಸುಲಭದ ಮಾತಾಗಿರಲಿಲ್ಲ.  ಇವತ್ತಿನ ಹಾಗೆ ಸಾಮಾಜಿಕ ಜಾಲತಾಣಗಳು, ವಾಟ್ಸಾಪ್ ಹೈಕಿನಂತಹ ಮೆಸೆಂಜರುಗಳು ಆವಾಗ ಇರುತ್ತಿದ್ದರೆ ಸುಲಭವಾಗಿ ಜನರನ್ನು ತಲುಪಬಹುದಿತ್ತು.  ಆದರೆ ಅವುಗಳ್ಯಾವುದೂ ಇಲ್ಲದಿದ್ದುದರಿಂದ ಹೋರಾಟಗಾರರು ಭೂಗತರಾಗಿ ಸರ್ಕಾರದ ವಿರುಧ್ಧ ಹೋರಾಟ ನಡೆಸುತ್ತಿದ್ದರು. ಸ್ವಲ್ಪ ಎಚ್ಚರ ತಪ್ಪಿದರೂ ಜೈಲು ಪಾಲಾಗುವ ಆತಂಕವಿತ್ತು.

ಆ ದಿನಗಳು ಎಷ್ಟು ಕೆಟ್ಟದಾಗಿದ್ದವೆಂದರೆ ‘ಛೆ! ಇದಕ್ಕಿಂತ ಬ್ರಿಟಿಷರಿದ್ದಾಗಲೇ ಚೆನ್ನಾಗಿತ್ತು ಎನ್ನುವವರಿದ್ದಾರೆ. ಬ್ರಿಟಿಷರಿರುವಾಗ ಅವರದ್ದೇ ಆಡಳಿತವಿತ್ತು, ಅವರಿಗೆ ಕಪ್ಪ ಕಾಣಿಕೆಗಳನ್ನು ನೀಡಿ ನಾವು ಬದುಕಬೇಕಿತ್ತು. ಆದರೆ ನಮ್ಮ ವಾಕ್ಸ್ವಾತಂತ್ರ್ಯಕ್ಕೇನೂ ಧಕ್ಕೆಯಿರಲಿಲ್ಲ, ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಮಾತನಾಡಲೂ ಹೆದರಬೇಕು, ಎಲ್ಲಿ ನಮ್ಮನ್ನು ಬಂಧಿಸುತ್ತಾರೋ ಎನ್ನುವು ಹೆದರಿಕೆಯಲ್ಲಿಯೇ ದಿನ ದೂಡಬೇಕು. ತುರ್ತುಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದೂ ಅಲ್ಲ, ಅದರ ವಿರುಧ್ಧ ಹೋರಾಡುವುದೂ ಅಲ್ಲ. ಒಟ್ಟಿನಲ್ಲಿ ಬಿಸಿತುಪ್ಪ. ನುಂಗಲೂ ಅಲ್ಲ ಉಗುಳಲೂ ಅಲ್ಲ ಎನ್ನುವಂತಹಾ ಸನ್ನಿವೇಷ ಸೃಷ್ಟಿಸಿತ್ತು ಆ ದಿನಗಳು.

ಇಷ್ಟೆಲ್ಲಾ ಆಗಿದ್ದು ದೇಶದ ಒಳ್ಳೆಯದಕ್ಕಾಗಿದ್ದರೆ ಹೇಗಾದರೂ ಸಹಿಸಿಕೊಳ್ಳಬಹುದಿತ್ತು. ಆದರೆ ನಮ್ಮೆಲ್ಲರ ಸ್ವಾತಂತ್ರವನ್ನು ಕಸಿದುಕೊಳ್ಳುವಂತಹ ಈ ತುರ್ತು ಪರಿಸ್ಥಿತಿ ಹೇರಲ್ಪಟ್ಟಿದ್ದು ಕಾಂಗ್ರೆಸ್ಸಿನ ಅಧಿನಾಯಕಿ ಇಂಧಿರಾಗಾಂಧಿಗಾಗಿ.ಅವರ ಪ್ರಧಾನಿ ಗಾದಿಯನ್ನು ಉಳಿಸಿಕೊಳ್ಳುವುದಕ್ಕಾಗಿ. ಚುನಾವಣೆಯಲ್ಲಿ ಎಸಗಿದ ಅಕ್ರಮಗಳು ಸಾಬೀತಾಗಿ ಅವರ ಲೋಕಸಭಾ ಸದಸ್ಯತ್ವವನ್ನು ಅನೂರ್ಜಿತಗೊಳಿಸಿದ ಅಲಹಾಬಾದ್ ಹೈಕೋರ್ಟ್ ಮುಂದೆ ಆರು ವರ್ಷ ಚುನಾವಣೆ ಸ್ಪರ್ಧಿಸದಂತೆ ನಿಷೇಧ ಹೇರಿತು. ಅಧಿಕಾರದ ದರ್ಪದಿಂದ ಬೀಗುತ್ತಿದ್ದ ಇಂದಿರಾಗಾಂಧಿಗೆ ಇದು ಸಹ್ಯವಾಗದೆ ತನಗೆ ನಿಷೇದ ಹೇರಿದ ನ್ಯಾಯಾಲಯಕ್ಕೇ ಕಪ್ಪು ಬಟ್ಟೆ ಕಟ್ಟಿದರು. ತನ್ನ ಅಧಿಕಾರ ವ್ಯಾಮೋಹಕ್ಕೆ ಕೋಟ್ಯಾಂತರ ದೇಶವಾಸಿಗಳ ಹಕ್ಕನ್ನು ಕಸಿದುಕೊಂಡರು. ರಾತ್ರೋ ರಾತ್ರಿ ತೆಗೆದುಕೊಂಡ ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಜನ ದಂಗೆಯೆದ್ದರು. ದೇಶದೆಲ್ಲೆಡೆ ಅಲ್ಲೋಲ ಕಲ್ಲೋಲವುಂಟಾಯಿತು. ಮನೆಮನೆಗಳಲ್ಲಿ ಅಶಾಂತಿವುಂಟಾಯಿತು. ಕುಹುಕದ ಸಂಗತಿಯೇನೆಂದರೆ ತುರ್ತುಪರಿಸ್ಥಿತಿಯಿಂದಾಗಿ ದೇಶದೆಲ್ಲೆಡೆ ಅಶಾಂತಿಗೆ ಕಾರಣರಾಗಿದ್ದ ಇಂದಿರಾಗಾಂಧಿ ಹೆಸರಿನಲ್ಲಿ ಮುಂದಿನ ಕಾಂಗ್ರೆಸ್ಸ್ ಸರ್ಕಾರ ‘ಇಂದಿರಾ ಶಾಂತಿ ಪ್ರಶಸ್ತಿ’ ಕೊಡಲು ಶುರು ಮಾಡಿದ್ದು.

ಹ್ಹ! ಒಂದನ್ನಂತೂ ಮರೆಯಬಾರದು. ತುರ್ತು ಪರಿಸ್ಥಿತಿ ಅದೆಷ್ಟೇ ಕೆಟ್ಟ ಪರಿಣಾಮಗಳನ್ನು ಬೀರಿದ್ದರೂ ಒಂದು ಪಾಸಿಟಿವ್ ಪರಿಣಾಮವನ್ನೂ ಬೀರಿದೆ. ಅದೇನೆಂದರೆ ತುರ್ತು ಪರಿಸ್ಥಿತಿಯು ನಮಗೆ ಅದೆಷ್ಟೋ ದೇಶಭಕ್ತ ಹೋರಾಟಗಾರರನ್ನು ನಮಗೆ ಪರಿಚಯಿಸಿಕೊಟ್ಟಿದೆ. ಅಡ್ವಾಣಿ, ವಾಜಪೇಯಿ, ಜಾರ್ಜ್ ಫರ್ನಾಂಡಿಸ್, ರಾಮಕೃಷ್ಣ ಹೆಗಡೆ ಮುಂತಾದವರು ತಮ್ಮ ರಾಜಕೀಯ ಬದುಕನ್ನು ಇದರಿಂದಲೇ ಹರಿತಗೊಳಿಸಿದ್ದಾರೆ. ಹಲವು ಹೋರಾಟಗಾರರು ತಮ್ಮ ರಾಜಕೀಯ ಬದುಕನ್ನು ಇದರಿಂದಲೇ ರೂಪಿಸಿಕೊಂಡಿದ್ದಾರೆ. ಮುಂದಿನ ತಮ್ಮ ರಾಜಕೀಯ ಜೀವನದಲ್ಲಿ ಯಾವ ರೀತಿ ಇರಬೇಕು ಇರಬಾರದೆನ್ನುವ ಎಚ್ಚರಿಕೆಯನ್ನೂ ತುರ್ತು ಪರಿಸ್ಥಿತಿಯಿಂದಲೇ ಪಡೆದುಕೊಂಡಿದ್ದಾರೆ.

ನಾಡಿದ್ದು ಜೂನ್ ಇಪ್ಪತ್ತಾರು.. ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದೇ ಹೇಳಬಹುದಾದ ಈ ತುರ್ತು ಪರಿಸ್ಥಿತಿ ಹೇರಲ್ಪಟ್ಟು ನಲುವತ್ತು ವರ್ಷ.. ನಮಗೆ ಅಚ್ಚೇ ದಿನಗಳು ಬಂದಿವೆಯೇ, ಬರುತ್ತದೆಯೇ ಎನ್ನುವುದು ಗೊತ್ತಿಲ್ಲ ಆದರೆ ತುರ್ತು ಪರಿಸ್ಥಿತಿಯಂತಹಾ ಕೆಟ್ಟ ದಿನಗಳು ಇನ್ಯಾವತ್ತೂ ಬರದಿರಲಿ!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!