ಸ್ನೇಹಾ ಎಂಬುದೂ ಹೃದಯದ ಸ್ವಂತ ಕುಟೀರಾ
ಎಲ್ಲರಾ ಹೆಸರನ್ನು ನೋಂದಾಯಿಸುವಂತ ಶಿಬಿರ.
ಕಥಾ ಪಾತ್ರವಿಲ್ಲದೇ ತನ್ನದೆನ್ನೋ ವಿಚಾರ..
ಧೂಳ್ ಹಿಡಿದಾ ಮೈಯಲೀ ಮಿಂಚುವಾ ವೈಯ್ಯಾರ..
ಸ್ನೇಹಾ$$ ಖುಷಿಯಾ$$ ಸಾಗರಾ$$!
ಗೆಳೆತನದ ಬಗ್ಗೆ ಬರೆದಿದ್ದ ಈ ಹಾಡಿಗೆ ಅನ್ವರ್ಥವೆಂಬಂತಿದ್ದ ನಮ್ಮ ಟೀಮ್ ಆ ದಿನ ಹೊರಟಿದ್ದು ದೂದ್ ಸಾಗರದ ಕಡೆ. ಮೊದಲನೇ ದಿನ ದಾಂಡೇಲಿಯಲ್ಲಿ ನಲಿದಾಡಿ ಬಳಿಕ ಹುಬ್ಬಳ್ಳಿಯಲ್ಲಿ ತಂಗಿದ್ದ ನಮಗೆ ನಿದ್ದೆಯಲ್ಲೂ ದೂದ್ ಸಾಗರದ್ದೇ ಕನವರಿಕೆ. ಟೀವಿಯಲ್ಲಿ ದೂದ್ ಸಾಗರದ ಚಂದವನ್ನು ನೋಡಿ ಒಮ್ಮೆಯಾದರೂ ದೂದ್ ಸಾಗರ ನೋಡ್ಬೇಕೂಂತ ಅಂದುಕೋಂಡಿದ್ದ ನಮಗೆ ಆ ರಾತ್ರಿ ನಿದ್ದೆಯೇ ಬರಲಿಲ್ಲವೆನ್ನಬಹುದು. ಎಂಜಿನಿಯರಿಂಗ್ ಬಳಿಕ ತುಂಬಾ ಸಮಯದ ನಂತರ ನಾವೆಲ್ಲಾ ಒಟ್ಟು ಸೇರಿದ್ದರಿಂದ ತಡರಾತ್ರಿವರೆಗೂ ನಮ್ಮೆಲ್ಲರ ಹರಟೆ ಮುಂದುವರಿದಿತ್ತು. ಮರುದಿನ ಬೆಳಗ್ಗೆ ಬೇಗ ಎದ್ದಿದ್ದರೂ ಸಹ ಪುಲಾವ್ ಮಾಡುವುದು ತಡವಾದ್ದರಿಂದ ಸಮಯಕ್ಕೆ ಸರಿಯಾಗಿ ಹುಬ್ಬಳ್ಳಿ ರೈಲು ನಿಲ್ದಾಣ ತಲುಪುವುದು ತ್ರಾಸವೆನಿಸಿತ್ತು. 6.45ಕ್ಕೆ ಚೆನ್ನೈ ವಾಸ್ಕೋ ಎಕ್ಸ್ ಪ್ರೆಸ್ಸ್ ಟ್ರೈನ್ ಏರಬೇಕಾಗಿದ್ದರಿಂದ ದಡಬಡನೆ ದೌಡಾಯಿಸಿ, ಏದುಸಿರು ಬಿಟ್ಟುಕೊಂಡು ರೈಲು ಏರಿದ ನಮಗೆ ಬ್ರೇಕ್ ಫಾಸ್ಟ್ ಮುಗಿಸಲೂ ಟೈಮ್ ಇರಲಿಲ್ಲ. ಫ್ರೆಂಡ್ ತನ್ನ ಆಂಟಿ ಮನೆಯಿಂದ ತಂದಿದ್ದ ನೀರ್ ದೋಸೆಯೇ ನಮ್ಮೆಲ್ಲರ ಆಹಾರವಾಯಿತು. ನೀರ್ ದೋಸೆ ತಿಂದು ಮುಗಿಯುವಷ್ಟರಲ್ಲೇ ಕ್ಯಾಸಲ್ ರಾಕ್ ರೈಲು ನಿಲ್ದಾಣ ತಲುಪಿತ್ತು.
ಜನ ಎಲ್ಲಿದ್ದರೋ ಗೊತ್ತಿಲ್ಲ. ಏಕಾಏಕಿ ರೈಲು ಜನಜಂಗುಳಿಯಿಂದ ತುಂಬತೊಡಗಿತ್ತು. ಎಲ್ಲರೂ ಎಲ್ಲೆಲ್ಲಿಂದಲೋ ಬಂದಿದ್ದ ಪ್ರವಾಸಿಗರೇ. ಮತ್ತೆ ಕೆಲವರು ಮಾಮೂಲಿ ವಡ, ಇಡ್ಲಿ ವಡ, ಚಾಯ್ಯೇ, ಕೋಫೀ ಎಂದು ಕೂಗಿಕೊಂಡು ಹೊಟ್ಟೆಯ ಕೂಗನ್ನು ತಣ್ಣಗಾಗಿಸುತ್ತಿದ್ದವರು.ರೈಲು ಗಾಡಿ ಮುಂದುವರಿದಂತೆ ಮೊದಲ ಸುರಂಗ ಮಾರ್ಗವೊಂದು ಎದುರಾಯಿತು. ಬೃಹತ್ ಬಂಡೆ ಕಲ್ಲುಗಳನ್ನು ಸೀಳಿ ಮುನ್ನಡೆದ ಅನುಭವ! ವಿಶಾಲ ಬೆಳಕಿನಲ್ಲಿದ್ದ ರೈಲನ್ನು ಸಡನ್ನ್ ಕತ್ತಲು ಬಿಗಿದಪ್ಪಿಕೊಂಡಿತು. ಒಮ್ಮೆ ನೀರವ ಮೌನ. ಮತ್ತೆ ಜನರ ಶಿಳ್ಳೆ, ಚೀರಾಟ, ಕೂಗಾಟ…ನಮಗೂ ಕೂಗಬೇಕೆಂದೆನಿಸಿತು. ಕಿಸೆಯಲ್ಲಿದ್ದ ಹೊಸ ಬಿಗಿಲು ಬಾಯಿಗೆ ಬಂತು. ಅದರ ಸದ್ದು ಬಂಡೆಗೆ ಬಡಿದು ಎಲ್ಲೆಲ್ಲೂ ಮಾರ್ಧನಿಸಿತು. ಪಟ ಪಟ ಸದ್ದು ಮಾಡುತ್ತಿದ್ದ ಸಣ್ಣ ಮಳೆ ಒಮ್ಮೆಗೆ ಉಪದ್ರವೆನಿಸಿದರೂ ನಮ್ಮ ಇಡೀಯ ಪ್ರವಾಸಕ್ಕೆ ಕಳೆ ಕಟ್ಟಿದಂತಿತ್ತು. ಹಳಿಗಳ ಇಕ್ಕೆಲಗಳಲ್ಲಿ ಟ್ರೆಕ್ಕಿಂಗ್ ಮಾಡುತ್ತಿದ್ದ ಹುಡುಗ ಹುಡುಗಿಯರ ದಂಡು ನಮ್ಮನ್ನು ಕೈ ಬೀಸಿ ಬೀಳ್ಕೊಡುತ್ತಿತ್ತು. ಹೀಗೆ ಹಲವು ಸುರಂಗಗಳನ್ನು ದಾಟಿ, ಸಣ್ಣ ಸಣ್ಣ ಜಲಪಾತಗಳನ್ನು ಸರಿದು, ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಸಾಗಿತ್ತು ನಮ್ಮ ಪಯಣ. ಆಗ ಬಂದಿತ್ತು ನೋಡಿ ದೂದ್ ಸಾಗರ್ ರೈಲು ನಿಲ್ದಾಣ!
ಜಲಪಾತ ತಲುಪುವ ಮೊದಲೇ ಎಕ್ಸೈಟ್ಮೆಂಟ್ ನ ತುತ್ತ ತುದಿಗೆ ತಲುಪಿದ್ದ ನಮಗೆ ನೀರು ಭೋರ್ಗರೆವ ಸದ್ದು ಕಿಲೋಮೀಟರ್ ದೂರಕ್ಕೆ ಕೇಳಿಸುತ್ತಿತ್ತು. ಸಾವಿರಾರು ಜನ ರೈಲಿನಿಂದ ಇಳಿವ ದೃಶ್ಯ ಸೈನ್ಯವೇ ದಂಡೆತ್ತಿ ಬಂದಂತೆ ಕಾಣುತ್ತಿತ್ತು. ಅಲ್ಲಿ ರೈಲು ನಿಲ್ಲುವುದು ಎರಡೇ ನಿಮಿಷವಾದ್ದರಿಂದ ಇಳಿಯುವುದಕ್ಕೂ ನೂಕುನುಗ್ಗಲು! ಉಳಿದವರು ಹತ್ತುವುದಕ್ಕೂ ನೂಕುನುಗ್ಗಲು. ಧಾವಂತದಲ್ಲಿ ಇಳಿದು ಹಳಿಗೆ ಬಿದ್ದು ಎಡವಟ್ಟು ಮಾಡಿಕೊಂಡವರು, ಸ್ವಲ್ಪದರಲ್ಲೇ ಅಪಾಯದಿಂದ ಪಾರದವರು, ಇನ್ನೊಬ್ಬರ ಮೇಲೆ ಬಿದ್ದು ಬೈಸಿಕೊಳ್ಳುತ್ತಿದ್ದವರು… ಇಂತಹ ಸೀನ್ ಕಾಮನ್ ಆಗಿತ್ತು ಅಲ್ಲಿ. ಹಾಗೆಯೇ ರೈಲು ಹಳಿಗಳ ಮೇಲೆ ಆದಾ ಕಿಲೋಮೀಟರ್ ಮುಂದೆ ಸಾಗಿದರೆ, ಪಕ್ಕಾ ಹಾಲಿನ ಕೆನೆಯಂತಿದ್ದ ಬೃಹತ್ ಜಲಪಾತ! ಮಾಹಾಪರ್ವತಗಳ ಮಧ್ಯದಿಂದ ಮುನ್ನುಗ್ಗಿ ಬರುತ್ತಿರುವ ನೀರು, ಹಿಮಾವೃತ್ತವಾದ ದಟ್ಟ ಕಾಡಿನ ವಿಹಂಗಮ ನೋಟ, ಕೆಳಗೆ ನೋಡಿದರೆ ಪ್ರಪಾತ, ಕ್ಷಣವೂ ಬಿಡದೆ ಕಾಡುತ್ತಿರುವ ಮಳೆ, ಸುರಂಗಗಳ ಸೀಳಿ ನಮ್ಮತ್ತ ಬರುತ್ತಿರುವ ಉಗಿಬಂಡಿ,ಇವೆಲ್ಲದರ ನಡುವೆ ದೂದ್ ಸಾಗರದ ಮುಂದೆ ನಿಂತು ಮುಗಿಬಿದ್ದು ಫೋಟೊ ಕ್ಲಿಕ್ಕಿಸುತ್ತಿರುವ ಜನಸಾಗರ!! ಜನ ಮರುಳೋ ಸಾಗರ ಮರುಳೋ? ಆಹ್!! ಹೇಗೆ ವರ್ಣಿಸಲಿ ಆ ಸೊಬಗ? ಬ್ಯೂಟಿಫುಲ್ಲ್,ಅಮೇಝಿಂಗ್,ಆಸ್ಸಮ್!! ತಳದ ನೀರಲ್ಲಿ ಮಿಂದೆದ್ದ ಮೇಲಂತೂ ನಾವು ಕಂಪ್ಲೀಟ್ ಸ್ಪೀಚ್ ಲೆಸ್ಸ್! ಎಲ್ಲೆಲ್ಲಿಂದಲೋ ಬಂದವರ ಮನಸ್ಸಿಗೆ ಮುದ ನೀಡುವ ಅದು ಬರೀ ದೂದ್ ಸಾಗರವಲ್ಲ.. ಆನಂದ ಸಾಗರವದು!!
ಮೂರು ಗಂಟೆ ಪ್ರಕೃತಿ ಸೌಂದರ್ಯವನ್ನು ಸವಿದ ನಾವು ಮೊದಲೇ ತಂದಿದ್ದ ಪುಲಾವ್ ತಿಂದು ಭಾರವಾದ ಹೆಜ್ಜೆಗಳನ್ನಿಡುತ್ತಾ ಮುಂದಿನ ನಿಲ್ದಾಣಕ್ಕೆ ನಡೆಯತೊಡಗಿದೆವು. ಮನಸ್ಸು ಮಾತ್ರವಲ್ಲ, ನೀರಿನಲ್ಲಿ ಆಟವಾಡಿದ ಕಾರಣ ನಮ್ಮ ಬಟ್ಟೆ ಒದ್ದೆಯಾಗಿ ಅವುಗಳೂ ಭಾರವಾಗಿದ್ದವು. ದಾರಿ ಮಧ್ಯ ಸಿಗುವ ಜಲಪಾತದ ಫುಲ್ ವ್ಯೂ ನೋಡಿ, 10 ಕಿಮೀ ದೂರದ ಕೂಲೆಮ್ ನಿಲ್ದಾಣದಲ್ಲಿ ರೈಲನ್ನೇರಿ ರಾತ್ರೆ ಹೊತ್ತಿಗೆ ಹುಬ್ಬಳಿ ತಲುಪಿದೆವು. ನಡೆದು ನಲಿದಾಡಿ ಕೈಕಾಲುಗಳು ಘಾಸಿಗೊಂಡಿತ್ತು, ಮುಖ ಬಾಡಿ ಹೋಗಿತ್ತು, ಆದರೂ ಅಲ್ಲಿ ಕಳೆದ ಕ್ಷಣಗಳನ್ನು ಮೆಲುಕು ಹಾಕಿದಾಗ ಮತ್ತೆ ಬರುವೆವು ಎಂಬ ಆಶಾವಾದ ಮನದೊಳಗೆ ಚಿಗುರಿತ್ತು!
photo courtesy: Ramnath Kamath and Sudarshan Sharma