ಅಂಕಣ

ವರುಷ ಹದಿನಾರು – ಬಲಿದಾನ ನೂರಾರು – 2

kargil war heroes 2

ಜೂನ್ ಎರಡನೇ ವಾರ… ಕಾರ್ಗಿಲ್ ಯುದ್ಧ ಸಾಗುತ್ತಲೇ ಇತ್ತು.. ನಮ್ಮ ಯೋಧರದೋ ವೀರತ್ವದ ಪ್ರದರ್ಶನ, ಆದರೆ 23,24,25 ಹೀಗೆ ಸಣ್ಣ ವಯಸ್ಸಿನಲ್ಲೇ ಮರಣವನ್ನು ತಬ್ಬಿಕೊಂಡವರು ಹಲವರು..  ವರುಷ ಹದಿನಾರು – ಬಲಿದಾನ ನೂರಾರು -1 ರಲ್ಲಿ ನಾವು ನುಡಿ ನಮನ ಸಲ್ಲಿಸಿದ ಸೌರಭ್ ಕಾಲಿಯಾ ಅವರನ್ನು ನೆನಪಿಸಿಕೊಳ್ಳುತ್ತಾ ಇನ್ನೊಬ್ಬ ವೀರನ ಕಥನ ಇಲ್ಲಿದೆ…

 ಕ್ಯಾಪ್ಟನ್ ಹನೀಫುದ್ದೀನ್….  ಹುಟ್ಟಿದ್ದು ಆಗಸ್ಟ್ 23, 1974 ರಂದು – ಭಾರತೀಯ ಸೇನೆ ಸೇರಿದ್ದು 1997 ಜೂನ್ 7 ರಂದು – ಸಾರ್ಥಕ್ಯ ಜೀವನದ ಕೊನೆಯುಸಿರೆಳೆದಿದ್ದು 1999 ಜೂನ್ 6 ರಂದು … ಅಂದರೆ ತನ್ನ 23 ವರ್ಷ ಪ್ರಾಯದಲ್ಲೇ ಸೈನ್ಯಕ್ಕೆ ಸೇರಿದ ಈತ, ಸೇರಿದ ಎರಡನೆಯ ವರ್ಷದಲ್ಲೇ ಕಾರ್ಗಿಲ್ ಯುದ್ಧವನ್ನು ಎದುರಿಸುತ್ತಾನೆ, ಹೋರಾಡುತ್ತಲೇ ವೀರ ಮರಣವನ್ನೂ 25 ನೇ ವರ್ಷದಲ್ಲೇ ಕಾಣುತ್ತಾನೆ……

ಹನೀಫುದ್ದೀನ್ ನ ಬಾಲ್ಯವೇನೂ ಸುಂದರ ಸುಖಮಯದ್ದಾಗಿರಲಿಲ್ಲ. ಎಂಟು ವರ್ಷ ಪ್ರಾಯಕ್ಕೆ ತನ್ನ ತಂದೆಯನ್ನು ಕಳೆದುಕೊಂಡ ಈತ “ಯುನಿಫಾರ್ಮಂ” (ಸೈನ್ಯದ ಸಮವಸ್ತ್ರ)ದ ಮೇಲೆ ಅತೀವವಾದ ಪ್ರೀತಿಯನ್ನಿಟ್ಟುಕೊಂಡಿದ್ದ. ಇಂಡಿಯನ್ ಮಿಲಿಟರಿ ಅಕಾಡೆಮಿ ಒಂದೇ ಈತನ ಎದುರಿಗಿದ್ದ ಗುರಿಯಾಗಿತ್ತು. ಕೊನೆಗೂ ತನ್ನ ಕನಸಾದ ಇಂಡಿಯನ್ ಮಿಲಿಟರಿ ಅಕಾಡೆಮಿಯನ್ನು ೧೯೯೭ರಲ್ಲಿ ಸೇರುತ್ತಾನೆ. ಹನೀಫುದ್ದೀನ್ ತಾಯಿ ಹೇಮಾ ಅಝೀಝ್ ಶಾಸ್ತ್ರೀಯ ಸಂಗೀತ ಕಲಿತವರು. ರಕ್ತದಲ್ಲೇ ಬಂದಿತ್ತು ಸಂಗೀತ.. ಹನೀಫುದ್ದೀನ್ ಗೋ ಹಾಡುವುದೆಂದರೆ ಅದೊಂದು ಹುಚ್ಚು, ಬೆಟ್ಟದ ಮೇಲೇ ಇರಲಿ, ಕೊರೆಯುವ ಚಳಿಯೇ ಇರಲಿ ಈತನ ಹಾಡು ಸಾಗುತ್ತಲೇ ಇರುತ್ತಿತ್ತು.

ಎಕ್ ಪಲ್ ಮೇ ಹೈ ಸಚ್ ಸಾರೀ ಝಿಂದಗೀ ಕಾ

ಇಸ್ ಪಲ್ ಮೇ ಜೀ ಲೋ ಯಾರೋ

ಯಹ ಕಲ್ ಹೈ ಕಿಸ್ನೆ ದೇಖಾ

ಈ ಕ್ಷಣ ಇದುವೇ ಸತ್ಯ – ಇದುವೇ ಜೀವನ

ಈ ಸತ್ಯದಲ್ಲಿ ಜೀವಿಸು

ನಾಳೆ ಎಂಬುದ ನೋಡಿದವರಾರು??

ತನ್ನ ಸಹೋದರನೇ ಬರೆದ ಈ ಸಾಲುಗಳನ್ನು ಹಾಡು ರಂಜಿಸುತ್ತಿದ್ದ ಹನೀಫುದ್ದೀನ್.. ಮೊದಲು ಆತನನ್ನು ನರನಾಡಿಗಳು ಮಡುಗಟ್ಟುವಂಥ ಚಳಿಯ ಸಿಯಾಚಿನ್‌ನಲ್ಲಿ ನಿಯೋಜಿಸಲಾಗಿತ್ತು. ಅಲ್ಲಿಯೂ “ಇಸ್ ಪಲ್ ಮೇ ಜೀ ಲೋ ಯಾರೋ” ಎನ್ನುತ್ತಾ ತನ್ನ ಸಂಗಡಿಗರನ್ನೆಲ್ಲಾ ಹುರಿದುಂಬಿಸುತ್ತಿದ್ದ ಈತ… ಹೀಗೆ ಸಾಗುತ್ತಿದ್ದ ಮಿಲಿಟರಿ ಜೀವನದಲ್ಲಿ 1999 ಮೇ – ಕಾರ್ಗಿಲ್ ಯುದ್ಧವನ್ನು ಹೊತ್ತು ತಂದಿತು. ಸೇನೆಗೆ ಸೇರಿದ ಎರಡು ವರ್ಷದಲ್ಲೇ ಯುದ್ಧ ಎದುರಿಸುವ ಸಂದರ್ಭ!

ತಾಯಿಗೆ ಕರೆಯೊಂದು ಬರುತ್ತದೆ “ ಗುಂಡುಗಳು ಯಾವ ಸಮಯದಲ್ಲೂ, ಯಾವ ದಿಕ್ಕಿನಿಂದಲೂ ಸೀಳಿಕೊಂಡು ಬರಬಹುದು. ಸಿಯಾಚಿನ್ ಇಂದ ಕೆಳಗೆ ಬರುತ್ತಿದ್ದೇನೆ. ಫೋನ್ ಎಂಗೇಜ್ ಅಲ್ಲಿ ಇಡಬೇಡ ಅಮ್ಮ” ಅಷ್ಟೇ… ಆದರೆ ಅದಾಗಲೇ 11 ನೇ ಬೆಟಾಲಿಯನ್ ಅಲ್ಲಿ ಇದ್ದ ಇವರಿಗೆ ಸಿಯಾಚಿನ್ ಬಿಟ್ಟು ಲಡಾಕ್ ನ ನುಬ್ರಾ ಕಣಿವೆಯಲ್ಲಿ ಬರುವ ತುರ್ತುಕ್ ಅನ್ನು ಶತ್ರುಗಳಿಂದ ವಶಪಡಿಸಿಕೊಳ್ಳಬೇಕೆಂದು ಆದೇಶ ಬಂದಾಗಿತ್ತು. ಅದೊಂದು ಹಿಮಾಚ್ಛಾದಿತ ಕಣಿವೆ. ಇವರಿದ್ದುದು ಅತಿ ಕಠಿಣವಾದ ಸಿಯಾಚಿನ್ ಅಲ್ಲಿ, ಹಲವು ಕಣಿವೆಗಳನ್ನು ದಾಟಿ ಬಂದು ಶತ್ರುಗಳನ್ನು ಮಟ್ಟ ಹಾಕಲು ಸಜ್ಜಾದರು. ಆದರೆ, ನಮಗಿದ್ದ ಹಿನ್ನಡೆಯೇ ಇದು – ಬೆಟ್ಟದ ತುದಿಯಲ್ಲಿ ಶತ್ರುಗಳು – ಕೆಳಗಿನಿಂದ ನಾವು ಹೋರಾಟ ನಡೆಸಬೇಕು,. ಸ್ವಾಭಾವಿಕವಾಗಿಯೇ ಶತ್ರು ಸೈನ್ಯವೇ ಗೆಲುವಿನ ಹಾದಿಯಲ್ಲಿ ಸಾಗುತ್ತಿತ್ತು. ಛಲ ಬಿಡದ ಹನೀಫುದ್ದೀನ್ ತನ್ನ ಸೇನಾ ತುಕಡಿಯನ್ನು ಮುನ್ನಡೆಸುತ್ತಾನೆ. ಕೊನೆಗೂ ಹೋರಾಡುತ್ತಲೇ, ತನ್ನ ಶೌರ್ಯಕ್ಕೆಂದೂ ಕೊನೆಯಿಲ್ಲ ಎಂದು ತೋರಿಸಿಯೇ ಬಿಟ್ಟ ಹನೀಫುದ್ದೀನ್… ಕಾರ್ಗಿಲ್ ರಣರಂಗದಲ್ಲೇ ಕಾಪ್ಟನ್ ಕೊನೆಯುಸಿರೆಳೆದರು. ಅರೆ ಕ್ಷಣ ಯೋಚಿಸಿ, ಕೊನೆಯುಸಿರೆಳೆದ ಎನ್ನುವುದು ಬಹಳ ಸುಲಭ, ಆದರೆ ಆತನ ಸಾವು ಎಂತಹುದ್ದಾಗಿತ್ತೆಂದರೆ ಆತನ ಶರೀರವನ್ನು ವಾಪಸ್ ತರಲು ಯುದ್ಧ ಮುಗಿಯುವವರೆಗೂ ಸಾಧ್ಯವಾಗಿರಲಿಲ್ಲ. ಆತ ವೀರ ಮರಣವನ್ನಪ್ಪಿದ್ದು ಜೂನ್ 6 ರಂದು ಯುದ್ಧ ಕೊನೆಗೊಂಡಿದ್ದು ಜುಲೈ 26ರಂದು!! ಅಂತಹಾ ಹಿಮ ಪರ್ವತ ಶ್ರೇಣಿಯಡಿಯಲ್ಲಿ, ಗುಂಡೇಟಿನ ನಡುವಿನಲ್ಲೂ ಹೋರಾಡಿದ್ದ ಹನೀಫುದ್ದೀನ್…

ಈ ಸತ್ಯದಲ್ಲಿ ಜೀವಿಸು, ನಾಳೆ ಎಂಬುದ ನೋಡಿದವರಾರು?? ಎಂದು ಗುನುಗುತ್ತಲೇ ಹನೀಫುದ್ದೀನ್ ವೀರಾವೇಶದ ಮರಣವನ್ನು ಅಪ್ಪಿಕೊಂಡಿದ್ದ ಅನಿಸುತ್ತದೆ…

ಹನೀಫುದ್ದೀನ್ ಹೆಣವಾಗಿ ತ್ರಿವರ್ಣ ಧ್ವಜದಲ್ಲಿ ಸುತ್ತಿಕೊಂಡು ಬಂದಾಗ ತಾಯ್ನಾಡಿಗಾಗಿ ಅಗತ್ಯ ಬಿದ್ದರೆ ಅತ್ಯುನ್ನತ ತ್ಯಾಗವನ್ನದರೂ ಮಾಡಬೇಕು ಎಂದು ಮಗನಿಂದ ಪ್ರಮಾಣ ಮಾಡಿಸಿಕೊಂಡಿದ್ದೆ. ಇಂದು ತನ್ನ ಪ್ರೀತಿಯ ಸಮವಸ್ತ್ರದಲ್ಲಿಯೇ ದೇಶಕ್ಕೆ ತನ್ನನೇ ತ್ಯಾಗ ಮಾಡಿ ಬಂದಿದ್ದಾನೆ ಎಂಬ ಹೆಮ್ಮೆಯಿದೆ ನನಗೆ ಎಂದಿದ್ದರು ಅಮ್ಮ ಹೇಮಾ ಅಝೀಝ್. ಎಂತಹವನ ಕಣ್ಣಂಚೂ ಒದ್ದೆಯಾಗದಿರದು… ಇಂತಹ ತ್ಯಾಗಕ್ಕಾಗಿ ಸರ್ಕಾರ ವೀರ ಚಕ್ರವನ್ನು ನೀಡಿತು…

ಶೂರತ್ವದ ಬೆಳಕನ್ನು ಚೆಲ್ಲಿದ ಅಮರ ಯೋಧನಿಗೆ ನಮ್ಮ ನುಡಿ ನಮನ…..

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!