ಪ್ರಚಲಿತ

ಬೀಯಿಂಗ್ ಹ್ಯುಮನ್ ಟೀ ಶರ್ಟ್ ಧರಿಸಿದ ಮಾತ್ರಕ್ಕೆ ಯಾರೂ ಹ್ಯುಮನ್ ಬೀಯಿಂಗ್ ಆಗಲ್ಲ!

d878f878-b8be-4178-bc39-01fd1310f0f2wallpaper1

ಸಲ್ಮಾನ್ ಖಾನ್… ಬಾಲಿವುಡ್ ನ ಬಿಗ್ ಮ್ಯಾನ್! ಹೀರೋಯಿನ್ ಗಳು ಮಾತ್ರವಲ್ಲ, ಹೀರೋ ಬಟ್ಟೆ ಬಿಚ್ಚಿಯೂ ಕೋಟಿ ಕೋಟಿ ಗಳಿಸಬಹುದು ಎಂದು ಚಿತ್ರರಂಗಕ್ಕೆ ತೋರಿಸಿದಾತ. ಈತ ಹಲವರ ಪಾಲಿಗೆ ನಾಯಕನೂ ಹೌದು ಇನ್ನು ಕೆಲವರ ಪಾಲಿಗೆ ಖಳನಾಯಕನೂ ಹೌದು. ತನ್ನ ಲುಕ್ ನಲ್ಲೇ ‘ಕಿಕ್’ ಕೊಡುವ, ದಬಾಂಗ್ ನಲ್ಲಿ ರೌಡಿಗಳ ಹುಟ್ಟಡಗಿಸಿದ, ಇಷ್ಟು ದಿನ ‘ವಾಂಟೆಡ್’ ಲಿಸ್ಟ್ ನಲ್ಲಿದ್ದ ಸಲ್ಮಾನ್ ಖಾನ್ ಈಗ ‘ಬಾಡಿಗಾರ್ಡ್’ ಗಳನ್ನು ಬಿಟ್ಟು ಜೈಲಿಗೆ ಹೋಗಲು ‘ರೆಡಿ’ಯಾಗಿದ್ದಾರೆ.

ಯೆಸ್ಸ್!! ಮಾಧ್ಯಮಗಳ ಪಾಲಿನ ಬ್ರೇಕಿಂಗ್ ನ್ಯೂಸ್, ಬಾಲಿವುಡ್ ಪಾಲಿನ ಶಾಕಿಂಗ್ ನ್ಯೂಸ್ ನಿನ್ನೆಯಷ್ಟೇ ಹೊರಬಿದ್ದಿದೆ. 2002 ರಲ್ಲಿ ಮುಂಬೈನ ಫುಟ್ಪಾತ್ ಮೇಲೆ ಮಲಗಿದ್ದ ಅಮಾಯಕರ ಮೇಲೆ ಕುಡಿದು ಕಾರು ಹತ್ತಿಸಿದ ತಪ್ಪಿಗೆ ಖಾನ್ ಗೆ ಮುಂಬೈನ ಸೆಷನ್ಸ್ ಕೊರ್ಟ್ ಐದು ವರ್ಷಗಳ ಶಿಕ್ಷೆ ವಿಧಿಸಿದೆ.  ಖಾನ್ ಜೀವನದ ಈ ಆಗುಹೋಗುಗಳು ಬಾಲಿವುಡ್ ನಲ್ಲಿ ತೀವ್ರ ಸಂಚಲನವುಂಟು ಮಾಡಿದ್ದರೆ, ಜನಸಾಮಾನ್ಯರಲ್ಲಿ ‘ಸತ್ಯಮೇವ ಜಯತೇ” ಎಂಬ ನಂಬಿಕೆ ಹೆಚ್ಚಾಗುವಂತೆ ಮಾಡಿದೆ.

ಸಲ್ಮಾನ್ ಖಾನ್ ರ ಈ ಆಕ್ಸಿಡೆಂಟ್ ನ ಬಗ್ಗೆ ಹೇಳುವುದಾದರೆ, ಅದು 2002 ರ ಸಪ್ಟೆಂಬರ್ 28ರ ಬೆಳಗಿನ ಜಾವ. ಸುಮಾರು ಮೂರು ಗಂಟೆಯಿರಬೇಕು. ಬೇಕರಿಯಲ್ಲಿ ದುಡಿಯುತ್ತಿದ್ದ ನೂರುಲ್ಲಾ ಮೆಹಬೂಬ್ ಶರೀಫ್, ಖಲೀಮ್ ಮೊಹಮದ್ ಪಠಾಣ್, ಮುನ್ನಾ ಮಲೈ ಖಾನ್, ಅಬ್ದುಲ್ಲಾ ರವೂಫ್ ಶೇಕ್, ಮುಸ್ಲಿಂ ಶೇಕ್ ದಿನದ ಕೆಲಸ ಮುಗಿಸಿ  ಬಾಂದ್ರಾದ ಅಮೇರಿಕನ್ ಬೇಕರಿಯ ಮುಂದಿನ ಫುಟ್ಪಾತ್ನಲ್ಲಿ  ನಿರಾಳರಾಗಿ ಮಲಗಿದ್ದರು. ಆ ನಟ್ಟ ನಡುರಾತ್ರೆಯಲ್ಲಿ ಲೋಕದ ಪರಿವೆಯೆಲ್ಲಿರಬೇಕು? ಅದೇ ಹೊತ್ತಿಗೆ ಬಾರೊಂದರಲ್ಲಿ ಕಂಠಪೂರ್ತಿ ‘ಬಕಾರ್ಡಿ ರಮ್’  ಕುಡಿದು ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರನ್ನೇರಿ  ಮನೆಯತ್ತ ಹೊರಟಿದ್ದರು ಸಲ್ಮಾನ್ ಖಾನ್. ಹೊರಟವರೇ ಕುಡಿತದ ಅಮಲಿನಲ್ಲಿ ಸ್ವಲ್ಪ ಹೊತ್ತಿನಲ್ಲಿ ಕಾರಿನ ನಿಯಂತ್ರಣ ತಪ್ಪಿ ಫುಟ್ಪಾತ್ನಲ್ಲಿ ಮಲಗಿದ್ದವರ ಮೇಲೆ ಯಮದೂತನಂತೆ ಕಾರು ಹತ್ತಿಸಿದರು. ಈ ಘಟನೆಯಲ್ಲಿ ಮೆಹಬೂಬ್ ಸಾವನ್ನಪ್ಪಿ ಉಳಿದವರು ಗಂಭೀರ ಗಾಯಗೊಂಡಿದ್ದರು. ಇಷ್ಟಾದರೂ ಕ್ಷಮಿಸಬಹುದಿತ್ತು. ಆದರೆ ಈ ಕೃತ್ಯಕ್ಕೆ ಕಾರಣರಾದ ಸಲ್ಮಾನ್ ಜನ ಸೇರುತ್ತಿದ್ದಂತೆ ಸಿನಿಮೀಯ ಶೈಲಿಯಲ್ಲಿ ಅಲ್ಲಿಂದ ಎಸ್ಕೇಪ್ ಆಗಿದ್ದರು.!

ನಂತರ ಸಲ್ಮಾನ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ, ಕೋರ್ಟು-ಕಛೇರಿ, ವಿಚಾರಣೆ  ಎಲ್ಲವೂ ನಡೆಯಿತು. ನಮ್ಮ ದೇಶದಲ್ಲಿ ಅದೊಂದು ಮಿನಿ ರಾಮಾಯಣವಲ್ಲವೇ? ಈಗ ಅದರ ತೀರ್ಪು ಪ್ರಕಟಗೊಂಡಿದೆ.ಅದೂ ಸಹ ಬರೋಬ್ಬರಿ ಹದಿಮೂರು ವರ್ಷಗಳ ನಂತರ! ಈ ತೀರ್ಪಿನಿಂದ ಸಲ್ಮಾನ್ ಗೂ, ಆತನ ಅಭಿಮಾನಿಗಳಿಗೂ ಸಂತೋಷವಿಲ್ಲ, ಆ ಘಟನೆಯ ಸಂತ್ರಸ್ತರ ಮನೆಯವರಿಗೂ ಸಂತಸವಿಲ್ಲ. ಏಕೆಂದರೆ ಕೋರ್ಟ್ ತೀರ್ಪಿನಿಂದ  ಹೋದ ಜೀವ ಮತ್ತೆ ಬರುವುದಿಲ್ಲವಲ್ಲಾ? ಆದರೂ ಕಡೆಗೂ ತಪ್ಪಿತಸ್ತನಿಗೆ ಶಿಕ್ಷೆಯಾಗಿರುವುದರಿಂದ ನ್ಯಾಯಾಂಗದ ಮೇಲೆ ಭರವಸೆ ಹೆಚ್ಚಾಗಿದೆ. ಈ ಹದಿಮೂರು ವರ್ಷಗಳಲ್ಲಿ ಸಲ್ಮಾನ್ ಖಾನ್ ಹತ್ತು ಹಲವು ಹಿಟ್ ಚಿತ್ರಗಳ ಮೂಲಕ ಕೋಟಿ ಕೋಟಿ ಸಂಪಾದಿಸಿರಬಹುದು. ಹೆಸರು ಪಡೆದುಕೊಂಡಿರಬಹುದು. ಸುಖವಾಗಿ ನಿದ್ರಿಸಿರಬಹುದು. ಆದರೆ ಆ ಕರಾಳ ರಾತ್ರಿಯಲ್ಲಿ ಮೃತಪಟ್ಟವನ ಮನೆಯವರನ್ನೊಮ್ಮೆ ಊಹಿಸಿ.. ಆತ ಇಡೀಯ ಕುಟುಂಬಕ್ಕೆ ಆಧಾರ ಸ್ಥಂಭವಾಗಿದ್ದಿರಬಹುದು, ಮುದ್ದು ಮಕ್ಕಳ ತಂದೆಯಾಗಿದ್ದಿರಬಹುದು. ಆತನಿಲ್ಲದೆ ಈ ಹದಿಮೂರು ವರ್ಷಗಳಲ್ಲಿ ಆತನ ಕುಟುಂಬದ ಪಾಡು ಏನಾಗಿದ್ದಿರಬಹುದು.? ಆ ಅಕ್ಸಿಡೆಂಟಿನಲ್ಲಿ ಮೆಹಬೂಬ್ ಬದುಕು ಮಾತ್ರವಲ್ಲ, ಹೆಚ್ಚು ಕಡಿಮೆ ಆತನನ್ನು ಅಧರಿಸಿಕೊಂಡಿದ್ದವರು ಬದುಕೂ ಮುಗಿದಿರಬಹುದು. ಬಹುಶಃ ಆತನ ಸಾವಿನಿಂದ ಅವರೆಲ್ಲರ ಜೀವನದ ದಿಕ್ಕೇ ಬದಲಾಗಿರಬಹುದು. ಮತ್ತು ಆ ಘಟನೆಯಲ್ಲಿ ಗಾಯಗೊಂಡವರು?? ಅವರಲ್ಲೊಬ್ಬ ಅಬ್ದುಲ್ಲಾ ರವೂಫ್ ಶೇಕ್. ಘಟನೆ ನಡೆದಾಗ ಆತನಿಗೆ ಮೂವತ್ತಾರೇ ವರ್ಷ. ಆವತ್ತು ಗಾಯಗೊಂಡ ಶೇಕ್ ಗೆ ಇವತ್ತೂ ಸಹ ನಡೆಯಲಾಗುತ್ತಿಲ್ಲ. ಆತ ನರಕ ಸದೃಶ ಜೀವನ ಸಾಗಿಸುತ್ತಿದ್ದಾನೆ.  ಉಳಿದವರ ಸ್ಥಿತಿಯೂ ಇದಕ್ಕಿಂತ ಭಿನ್ನವೇನಲ್ಲ. ಸಲ್ಮಾನ್ ಗೆ ಶಿಕ್ಷೆಯಾಗಿರುವುದರಿಂದ ಚಿತ್ರರಂಗಕ್ಕೆ ನಷ್ಟವಾಗುತ್ತದೆ, ಅದನ್ನ ತುಂಬಿಕೊಡುವವರಾರು ಎಂದು ಎದೆ ಬಡಿದುಕೊಳ್ಳುತ್ತಿರುವ ಬಾಲಿವುಡ್ ಮಂದಿಗೆ ಆ ಅಮಾಯಕರಿಗೆ ಆಗಿರುವ ನಷ್ಟ ಕಾಣಿಸುತ್ತಿಲ್ಲವೇ? ಹಣದ ನಷ್ಟವನ್ನಾದರೂ ತುಂಬಿಕೊಡಬಹುದು, ಆದರೆ ಸಲ್ಮಾನ್ ನಿಂದಾಗಿ ಜೀವ, ಕೈಕಾಲು ನಷ್ಟ ಮಾಡಿಕೊಂಡಿದ್ದಾರಲ್ಲ, ಆ ನಷ್ಟವನ್ನು ಯಾರು ತುಂಬಿಕೊಡುತ್ತಾರೆ ಸ್ವಾಮಿ?

ಸಲ್ಮಾನ್ ಗೆ ಶಿಕ್ಷೆ ಆಗಲೇ ಬೇಕಿತ್ತು ಎನ್ನಲು ಕಾರಣಗಳಿವೆ. ಒಂದು ಆತನ ಅಪರಾಧವೇ ಗಂಭೀರ ಸ್ವರೂಪದ್ದು. ಮತ್ತೆ, ಮೊನ್ನೆಯ ವಿಚಾರಣೆಯಲ್ಲಿ ಸಲ್ಮಾನ್ ತಾನು ಡ್ರೈವರ್ ಸೀಟಿನಲ್ಲಿರಲಿಲ್ಲ, ಡ್ರೈವಿಂಗ್ ಮಾಡುತ್ತಿದ್ದುದು ನನ್ನ ಡ್ರೈವರ್ ಎಂದು ಸುಳ್ಳು ಹೇಳಿದ್ದಾರೆ.ತಪ್ಪೇ ಮಾಡದ ಡ್ರೈವರ್ ಮೇಲೆ ತನ್ನ ತಪ್ಪನ್ನು ಹೊರಿಸಲು ಯತ್ನಿಸಿದ ಸಲ್ಲೂನ ದುರಹಾಂಕಾರವನ್ನು ಎಂದೂ ಕ್ಷಮಿಸಲು ಸಾಧ್ಯವಿಲ್ಲ.  ಅದೂ ಸಾಲದೆಂಬಂತೆ ‘ನಾನು ಆಲ್ಕೋಹಾಲ್ ಕುಡಿದಿರಲಿಲ್ಲ, ಕುಡಿದಿದ್ದು ಬರೀ ನೀರು’ ಎಂದು ನ್ಯಾಯಾಧೀಶರ ಮೇಲೆ ಮಕ್ಮಲ್ ಟೋಪಿ ಇಡಲು ನೋಡಿದ್ದಾರೆ.  ಹಾಗಾದ್ರೆ ನಮ್ಮ ಪೋಲಿಸರೇನು ಹಾಲು ಯಾವುದು, ಅಲ್ಕೋಹಾಲು ಯಾವುದೆಂದು ತಿಳಿಯದಷ್ಟು ಗುಗ್ಗುಗಳಾ ಸಲ್ಲುಮಿಯಾ??

ಹಾಗೆ ಮಾಡಿದ ತಪ್ಪಿಗೆ ಸಲ್ಮಾನ್ ಖಾನ್ ಗೆ ಶಿಕ್ಷೆಯಾಗಿದೆ. ಬೇರೆ ಪ್ರಕರಣಗಳಿಗೆ ಹೋಲಿಸಿದರೆ ಈ  ಸಣ್ಣ ಕೇಸ್ ಗೆ ಹದಿಮೂರು ವರ್ಷ ತಗುಲಿದ್ದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಘೋರ ದುರಂತ. ಇದಕ್ಕಿಂತಲೂ ದೊಡ್ಡ ದುರಂತವೆಂದರೆ ಖಾನ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬಹುದು, ಜಾಮೀನು ಅರ್ಜಿ ಸಲ್ಲಿಸಬಹುದು. ಅಲ್ಲಿ ಸಲ್ಲುಗೆ ಜಾಮೀನು ಸಿಗಬಹುದು. ಅಷ್ಟೇ ಏಕೆ, ಸಲ್ಲು ನಸೀಬು ಚೆನ್ನಾಗಿದ್ದರೆ ಕೇಸೇ ರದ್ದಾಗಬಹುದು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾಗೆ ಶಿಕ್ಷೆಯಾದಾಗ ದೇಶಕ್ಕೆ ದೇಶವೇ ಸಂಭ್ರಮಿಸಿತ್ತು. ಭೃಷ್ಟಾಚಾರದ ವಿರುಧ್ಧ ನಾವು ಗೆದ್ದೇ ಬಿಟ್ಟೆವು ಎಂದು ಬೀಗಿದ್ದೆವು. ಕಡೆಗೆ ನಮ್ಮ ಈ ಸಂಭ್ರಮಕ್ಕೆಲ್ಲಾ ಸುಪ್ರೀಂ ಕೋರ್ಟ್ ಒಂದೇ ತಿಂಗಳಿನಲ್ಲಿ ಬ್ರೇಕ್ ಹಾಕಿತು. ನಾಲ್ಕು ವರ್ಷ ಜೈಲು ಶಿಕ್ಷೆಗೊಳಗಾಗಿದ್ದ ಜಯಲಲಿತಾಗೆ ಜಾಮೀನು ಸಿಕ್ಕಿತು. ಅದರೊಂದಿಗೆ ಶ್ರೀಮಂತರು ಶ್ರೀಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವಂತೆಯೇ ನ್ಯಾಯಾಂಗವೂ ಕಣ್ಣಾಮುಚ್ಚಾಲೆ ಆಡುತ್ತಿದೆ ಎಂಬ ಭಾವನೆ ಮೂಡಿತು. ಸಲ್ಮಾನ್ ಕೇಸಲ್ಲೂ ಇದು ಪುನರಾವರ್ತನೆಯಾದರೂ ಅಚ್ಚರಿಯಿಲ್ಲ.

ಸಲ್ಮಾನ್ ಗೆ ಶಿಕ್ಷೆಯಾಗುತ್ತಿದ್ದಂತೆ ಅಭಿಮಾನಿಗಳು ಗೋಗರೆಯಲು ಶುರುಮಾಡಿಕೊಂಡಿದ್ದಾರೆ. ಜಯಲಲಿತಾ ಪ್ರಕರಣದಲ್ಲಿ ಅವಿದ್ಯಾವಂತ ಅಭಿಮಾನಿಗಳು ಎದೆಬಡಿದುಕೊಂಡು ಸತ್ತಿದ್ದರೆ, ಸಲ್ಲು ಕೇಸಲ್ಲಿ ಸೋ ಕಾಲ್ಡ್ ವಿದ್ಯಾವಂತರೇ ಎದೆ ಬಡಿದುಕೊಳ್ಳುತ್ತಿದ್ದಾರೆ. #IMWITHSALMAN, #ISUPPORTSALMAN ಎಂಬಿತ್ಯಾದಿ ಹ್ಯಾಶ್ ಟ್ಯಾಗ್ ಗಳು ಹಲವರ ಫೇಸ್ಬುಕ್ ಗೋಡೆಗಳಲ್ಲಿ ರಾರಾಜಿಸುತ್ತಿದೆ. ಇವರ ವರಾತವೇನೆಂದರೆ, ಸಲ್ಲು ಒಳ್ಳೆ ಹ್ಯುಮನ್ ಬೀಯಿಂಗ್ ಅಂತೆ, ಅದು ಆಕಸ್ಮಿಕವಾಗಿ ನಡೆದ ಘಟನೆ, ಅದಕ್ಕೆ ನೀಡಿದ ಶಿಕ್ಷೆ ಜಾಸ್ತಿಯಾಯಿತಂತೆ, ಸಲ್ಮಾನ್ ಅಕ್ಸಿಡೆಂಟಿನಲ್ಲಿ ಒಬ್ಬನನ್ನು ಕೊಂದಿರಬಹುದು, ಆದರೆ ಹಲವರ ಜೀವನಕ್ಕೆ ಆಧಾರವಾಗಿದ್ದಾರೆ, ಹಲವು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಸೋ ಸಲ್ಲುಗೆ ಶಿಕ್ಷೆ ವಿಧಿಸಬಾರದಂತೆ.! ಅಯ್ಯಯ್ಯೊ… ಇದೆಂತಾ ಅಂಧಾಭಿಮಾನ?? ಒಳ್ಳೆಯ ಹ್ಯುಮನ್ ಬೀಯಿಂಗ್ ತಪ್ಪೆಸಗಿದರೆ ಬಿಟ್ಟುಬಿಡಬೇಕಾ?  ನಿಮ್ಮ ಪ್ರೀತಿಪಾತ್ರರನ್ನು ಯಾರಾದರೂ ಕೊಂದು ಹಾಕಿ ನಂತರ ಒಂದಷ್ಟು ಸಮಾಜ ಸೇವೆ ಮಾಡಿದರೆ ಅವರನ್ನು ಕ್ಷಮಿಸಿಬಿಡುತ್ತೀರಾ? ಅಕ್ಸಿಡೆಂಟ್ ಆಕಸ್ಮಿಕವಾಗಿಯೇ ನಡೆದಿದ್ದರೂ, ಗಾಯಾಳುಗಳ ಸಹಾಯಕ್ಕೆ ಧಾವಿಸದೆ ತಪ್ಪಿಸಿಕೊಂಡವರನ್ನು ಒಳ್ಳೆಯ ಹ್ಯುಮನ್ ಬೀಯಿಂಗ್ ಎನ್ನಲಾಗುತ್ತದಾ?

ಹಾಗೆಂದು ಸಲ್ಮಾನ್ ತೀರಾ ಕೆಟ್ಟವರೆಂದು ಹೇಳುತ್ತಿಲ್ಲ. ಸಲ್ಲೂ ಶಾರುಖ್ ಖಾನ್ ನಂತೆ ದುರಹಾಂಕಾರಿಯಲ್ಲ. ಈ ನಡುವೆ ಸಲ್ಲೂ ತುಂಬಾ ಬದಲಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಸಲ್ಮಾನ್ ಬದಲಾಗಿರಬಹುದು. ತನ್ನ ತಪ್ಪನ್ನು ರಿಯಲೈಸ್ ಮಾಡಿಕೊಂಡಿರಬಹುದು. ಆದರೆ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇ ಬೇಕಲ್ಲಾ? ಘಟನೆಯ ಬಗ್ಗೆ ಆವತ್ತು “An unfortunate incident beyond my control, such as an act of God” ಎಂದು ಪ್ರತಿಕ್ರಿಯಿಸಿದ್ದ ಸಲ್ಲೂ ಈಗ ಆಗಿರುವ ಶಿಕ್ಷೆಯನ್ನೂ “Act of God” ಎಂದು ಸ್ವೀಕರಿಸುತ್ತಾರಾ?

ಬಹುಬೇಡಿಕೆಯ “Being Human” ಟೀಶರ್ಟ್, ವಾಚ್ ಗಳ ಬಗ್ಗೆ ಗೊತ್ತಲ್ಲ? ಅದನ್ನು ಪ್ರಾರಂಭಿಸಿದ್ದೇ ಸಲ್ಮಾನ್ ಖಾನ್. ಯುವ ಜನತೆಯಲ್ಲಿ ಹೊಸ ಟ್ರೆಂಡ್ ಹುಟ್ಟಿಸಿರುವ ಈ ‘Being Human’  ಟೀಶರ್ಟ್ ಗಳು ಒಂದು ಬ್ರ್ಯಾಂಡ್ ಆಗಿ ಫೇಮಸ್ಸಾಗಿದೆ. 2007ರಲ್ಲಿ “Being Human Foundation” ಹೆಸರಿನಲ್ಲಿ ಬ್ರ್ಯಾಂಡೆಡ್ ಟೀಶರ್ಟ್, ವಾಚ್ ಗಳನ್ನು ಮಾರಾಟಕ್ಕಿಟ್ಟ ಸಲ್ಲು ಅದರಿಂದ ಬಂದ ಲಾಭವನ್ನು ಬಡ ಮಕ್ಕಳ ಶಿಕ್ಷಣ ಮತ್ತು ಅರೋಗ್ಯಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಇದಕ್ಕೆ ಕೆಲ ಕಾರ್ಪೋರೇಟ್ ಕಂಪನಿಗಳೂ ಸಲ್ಲೂಗೆ ಸಾಥ್ ಕೊಟ್ಟಿದೆ. ಬಡವರ ಮಕ್ಕಳ ಮೇಲೆ ಕಾಳಜಿ ತೋರಿಸುತ್ತಿರುವ ಸಲ್ಲು ಮೇಲೆ  ‘ಹಿಟ್ ಆಂಡ್ ರನ್’ ಕೇಸ್ ಬಿಟ್ಟರೆ  ಹೇಳುವಂತಹ ಪ್ರಕರಣವೇನೂ ಇಲ್ಲ.

ಆದೇನೇ ಇರಲಿ. ನಿಜವಾದ ಹ್ಯುಮನ್ ಬೀಯಿಂಗ್ ಕುಡಿದು ಕಾರು ಹತ್ತಿಸಿ ಅನಾಮತ್ತಾಗಿ ಅಮಾಯಕನ ಜೀವ ತೆಗೆಯುತ್ತಿರಲಿಲ್ಲ. ಹೋಗಲಿ, ಕನಿಷ್ಟ ಪಕ್ಷ ಎಸ್ಕೇಪ್ ಆಗುತ್ತಿರಲಿಲ್ಲ. ಶಿಕ್ಷೆಯೇನೋ ಆಗಿದೆ. ಮುಂದೆ ಜಾಮೀನು ಸಿಗಲೂಬಹುದು. ಆದರೆ ಬೀಯಿಂಗ್ ಹ್ಯುಮನ್ ಟೀಶರ್ಟ್ ಧರಿಸಿದ ಮಾತ್ರಕ್ಕೆ ಯಾರೂ ಹ್ಯುಮನ್ ಬೀಯಿಂಗ್ ಆಗಲ್ಲ ಎನ್ನುವುದು ಅರ್ಥವಾದರೆ ಸಾಕು!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!