ಅಂಕಣ

ಗದಾಯುದ್ಧ- ೮

ಗುರು ದೀಕ್ಷಾವಿಧಿಗಳ್ಗೆ ಮಂತ್ರಿ ಹಿತಕಾರ್ಯಾಳೋಚನಕ್ಕಾಳ್ದನು-
ರ್ವರೆಯಂ ಕಾವ ಗುಣಕ್ಕೆ ನರ್ಮಸಚಿವಂ ಕ್ರೀಡಾರಸಕ್ಕಾನೆಯಾಳ್
ಗುರುಭಾರಕ್ಕಿರಿವಾಳ್ ರಣಕ್ಕೆ ತುರಿಲಾಳ್ ಕಟ್ಟಾಯದೊಳ್ ಮೇಳದಾಳ್
ಪರಿಹಾಸಕ್ಕೆನಿಸಿರ್ದನೆಂತು ಮರೆವಂ ದುರ್ಯೋಧನಂ ಕರ್ಣನಂ

ಒಂದೊಂದು ಸಮಯದಲ್ಲಿ ಒಂದೊಂದು ರೀತಿ ನಮಗೊದಗುವ ಮಿತ್ರ ಇಲ್ಲದಿದ್ದಾಗ ಅನೇಕ ಮಂದಿಯನ್ನು ಕಳೆದುಕೊಂಡಾಗುತ್ತದೆ. ಅಂತೆಯೇ ಕರ್ಣನ ವಿಯೋಗದಿಂದ ದುರ್ಯೋಧನ ಎಷ್ಟು ಜನರನ್ನು ಕಳೆದುಕೊಂಡ ದುಃಖವನ್ನು ಅನುಭವಿಸುತ್ತಾನೆ ನೋಡಿ. ಅದನ್ನ ರನ್ನ ಬಹಳ ಸುಂದರವಾಗಿ ಈ ಪದ್ಯದಲ್ಲಿ ಹೇಳುತ್ತಾನೆ.

ದೀಕ್ಷಾವಿಧಿಗಳಿಗೆ ಗುರುವಿನಂತೆ, ಹಿತಕಾರ್ಯದ ಆಲೋಚನೆಗಳಿಗೆ ಮಂತ್ರಿಯಂತೆ, ರಾಜನಾಗಿ, ಕ್ರೀಡಾ ವಿನೋದಕ್ಕೆ ನರ್ಮ ಸಚಿವನಾಗಿ, ಆನೆಯಂತೆ ಭಾರವನ್ನೆಳೆಯುವ ಕೆಲಸಕ್ಕೆ, ಯುದ್ಧಕ್ಕೆ ಮೊದಲಿಗನಾಗಿ, ತಮಾಷೆಗೆ ವಿದೂಷಕನಂತೆ ಇದ್ದಂತಹ ಕರ್ಣನನ್ನು ದುರ್ಯೋಧನ ಹೇಗೆ ಮರೆತಾನು?

ಕರ್ಣನನ್ನು ನೆನೆದು ಕೌರವನ ಶೋಕಸಾಗರವನ್ನು ಕೋಪವೆಂಬ ಬಡಬಾಗ್ನಿ ಹೀರಿತು.

ದೇವಾ, ಭೀಷ್ಮರು ಈ ಕಡೆ ಇದ್ದಾರೆ ಎಂದು ಸಂಜಯನು ಹೇಳಲಾಗಿ, ಅಪ್ಪ ಹೇಳಿದಂತ ಮಾತುಗಳನ್ನ ಸ್ಮರಣೆ ಮಾಡಿ, ಸಂಜಯನ ಮಾತನ್ನೂ ಮೀರದೆ ಶರಶಯ್ಯೆಯೊಳಗೆ ಇರುವಂತಹ ನದೀನಂದನನ ಚರಣಾರವಿಂದವದನಂ ಗೈಯ್ಯಲೆಂದು ಗಾಂಧಾರೀನಂದನಂ ಎಯ್ದೆವಂದಂ.

ರನ್ನನ ಈ ಕಾವ್ಯಭಾಗ ಇನ್ನೂ ಸ್ವಲ್ಪ ವಿಸ್ತರಿಸಿ ಹೇಳಿದ್ದರೆ ಚೆನ್ನಿತ್ತು ಎಂದುಕೊಂಡೆ ಓದುವಾಗ. ಆದರೆ ಹಣ್ಣನ್ನು ತುಂಡುಮಾಡಿ ಕೊಡಬಹುದು, ಅಗಿದು ಉಗಿದರೆ ಚೆನ್ನಾಗಿರುವುದಿಲ್ಲ ಎಂದು ಸ್ವಲ್ಪ ಓಡಿಸಿಕೊಂಡು ಓದಿಸುತ್ತೇನೆ. ಕ್ಷಮೆ ಇರಲಿ.

ನರಶರಕೋಟಿ ಜರ್ಜರಿಸೆ ತನ್ನ ಶರೀರಮನಸ್ತ್ರವೇದನಾ
ಪರವಶನಾಗಿಯುಂ ಮರೆದನಿಲ್ಲ ಮುಕುಂದನನೇಕಚಿತ್ತದಿಂ
ಸ್ಮರಿಯಿಸುತಿರ್ದುಮತ್ತ ಕುರುಭೂಮಿಯೊಳೀಗಳದೆಂತುಟಾದುದೋ
ಕುರುಪತಿಗೆಂದನಾ ಪರಮಯೋಗಿಗಮಿಂತುಟು ಮೋಹಮಾಗದೇ

ಇಂತಿರುವ ಭೀಷ್ಮನನ್ನು ನೋಡಿ ಕೌರವನು ” ನಿಮ್ಮಂತಹ ಗುರುಗಳ ಹಿತೋಪದೇಶವನ್ನು ಕೇಳದೆ ವೈರವನ್ನೇ ಸಾಧಿಸಿದೆ. ನಿಮ್ಮನ್ನು ಅರ್ಜುನನ ಜೊತೆ ಯುದ್ಧಮಾಡುವಂತೆ ಪ್ರೇರೇಪಿಸಿ ನಿಮ್ಮ ಈ ಸ್ಥಿತಿಗೆ ನಾನೇ ಕಾರಣನಾದೆ ಎಂದು ಪಶ್ಚಾತ್ತಾಪ ಪಡುತ್ತಾನೆ.

ಹೀಗೆ ಮರುಗಿ ಬರುತ್ತಿರುವ ಕೌರವನ ದನಿ ಕೇಳಿ ಭೀಷ್ಮ ಕಣ್ಣೀರು ತುಂಬಿಕೊಂಡು

ಧವಳಗಜೇಂದ್ರಮುಂ ಧವಳಚಾಮರಮುಂ ಧವಳಾತಪತ್ರಮುಂ
ಧವಳವಿಲೋಚನೋತ್ಪಲವಧೂಜನಮುಂ ಬೆರಸಷ್ಟದಿಕ್ತಟಂ
ಧವಳಿಸೆ ಕೀರ್ತಿಯಿಂ ಧವಳಮಂಗಳಗೇಯದಿನೊಪ್ಪಿ ಬರ್ಪ ಕೌ-
ರವಧವಳಂಗೆ ದೇಸಿಗನೆ ಬರ್ಪವೊಲೊರ್ವನೆ ಬರ್ಪುದಾದುದೇ

ಧವಳವನ್ನು ಎಷ್ಟು ಸೊಗಸಾಗಿ ಎಲ್ಲೆಡೆ ತಂದಿದ್ದಾನೆ ರನ್ನ. ಇಷ್ಟೂ ಧವವಳಮಂಗಳಗೇಯದೊಂದಿಗೆ ಬರುತ್ತಿದ್ದ ಕೌರವರಲ್ಲಿ ಶ್ರೇಷ್ಠನಾದ ಸುಯೋಧನನು ಅಲೆಮಾರಿ ಬಂದಹಾಗೆ ಬರುವಂತಾಯ್ತಲ್ಲ..
ಎಂತಹಾ ಸೊಗಸಾದ ಪದ್ಯ!

ಸೋಮವಂಶದಲ್ಲಿ ಇದುವರೆಗೆ ಗೋತ್ರಕಲಹವಾದುದಿಲ್ಲ. ನಿಮ್ಮೊಳಾದುದು. ಇನ್ನೂ ಕಾಲ ಮಿಂಚಿಲ್ಲ. ಪಾಂಡವರೊಂದಿಗೆ ಸಂಧಿಯನ್ನು ಮಾಡಿ ಮೊದಲಿದ್ದ ಹಾಗೇ ಚೆನ್ನಾಗಿರು ಎಂದ ಭೀಷ್ಮನ ಮಾತಿಗೆ ಕೌರವ

ನಿಮಗೆ ಪೊಡೆಮಟ್ಟು ಪೋಪುದೆ
ಸಮಕಟ್ಟೆನೆ ಬಂದನಹಿತರೊಳ್ ಸಂಧಿಯನೇಂ
ಸಮಕೊಳಿಸಲೆಂದು ಬಂದೆನೆ
ಸಮರದೊಳೆನಗಜ್ಜ ಪೇಳಮಾವುದು ಕಜ್ಜಂ

ನೆಲಕಿರಿವೆನೆಂದು ಬಗೆವಿರೆ
ಛಲಕಿರಿವೆಂ ಪಾಂಡುಸುತರೊಳೀ ನೆಲನಿದು ಪಾ-
ಳ್ನೆಲನೆನಗೆ ದಿನಪಸುತನಂ
ಕೊಲಿಸಿದ ನೆಲನೊಡನೆ ಮತ್ತೆ ಪುದುವಾಳ್ದಪೆನೇ

ನಿಮಗೆ ನಮಸ್ಕರಿಸಿ ಯುದ್ಧಕ್ಕೆ ಹೋಗಲೆಂದು ಬಂದೆ. ಅಲ್ಲದೇ ಸಂಧಿಯನ್ನು ಮಾಡಲು ಬಂದಿಲ್ಲ. ಯುದ್ಧದಲ್ಲಿ ನನಗೆ ಏನುಮಾಡಬೇಕೆಂದು ತಿಳಿಸಿ.
ನೆಲಕ್ಕಾಗಿ ಯುದ್ಧವೆಂದು ಬಗೆದಿರೇ? ಛಲಕ್ಕಾಗಿ ಹೋರಾಡುತ್ತೇನೆ. ಕರ್ಣನಿಲ್ಲದ ನೆಲವು ಪಾಳ್ನೆಲ, ಅಲ್ಲಿ ನಾನು ಹೊಸತಾಗಿ ಬಾಳುವುದುಂಟೇ? ಎನ್ನುತ್ತಾನೆ.

ಅಜ್ಜಾ, ವಿರೋಧಿಗಳನ್ನ ಕೊಂದು ಅವರ ಮಾಂಸದಿಂದ ಭೋಜನವನ್ನು ಮಾಡದೆ, ವೈರಿಗಳ ವನಿತೆಯರ ಮುಖಕಮಲವನ್ನು ಕಂದಿಸದೆ, ಬಂಧುಶೋಕದಲ್ಲಿ ಇರುವಂತಹ ಬಂಧುಜನಗಳಿಗೆ ಸಂತಸವನ್ನುಂಟುಮಾಡದೆ ಸಂಧಿಯನ್ನು ಒಪ್ಪುವುದೇ ಫಣಿರಾಜಕೇತನ?

ರನ್ನ ಕೌರವನ ದಯನೀಯ ಸ್ಥಿತಿಯನ್ನೂ ಚಿತ್ರಿಸುತ್ತಾನೆ.

ಬಾಡಮನಯ್ದವರ್ ಮುಂ
ಬೇಡಿದೊಡಾನಿತ್ತೆನಿಲ್ಲ ರಾಜ್ಯಾರ್ಧಮನಾಂ
ಬೇಡಿಯವರಲ್ಲಿಗಟ್ಟಿದೊ-
ಡೇಡಿಸಿ ಳೋಡಿಸನೆ ಪವನನಂದನನೆನ್ನಂ!

ಪಾಂಡವರು ಬೇಡಿಕೊಂಡು ನನ್ನ ಬಳಿಗೆ ಬಂದಾಗ ಅರ್ಧ ರಾಜ್ಯವನ್ನು ಕೊಟ್ಟೆನಿಲ್ಲ. ಈಗ ಬೇಡಿಕೊಂಡು ಹೋದರೆ ಭೀಮಸೇನ ನನ್ನನ್ನು ಅಟ್ಟಾಡಿಸಿ ಓಡಿಸದಿರುವನೇ?

ಅಂತೆಯೇ, ನನ್ನ ತಮ್ಮಂದಿರನ್ನೂ, ಮಿತ್ರನನ್ನೂ ಇಕ್ಕಿದ ಪಾರ್ಥಭೀಮರನ್ನು ಕೊಂದ ಮೇಲೆ ಧರ್ಮರಾಯನಲ್ಲಿ ಹೋಗಿ, ಬೇಕಾದರೆ ಸಂಧಿಯನ್ನು ಮಾಡಿಕೊಳ್ಳುವೆ.

ಪುಟ್ಟಿದ ನೂರ್ವರುಮೆನ್ನೊಡ-
ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ
ಪುಟ್ಟಿ ಪೊದಳ್ದುದು ಸತ್ತರ್
ಪುಟ್ಟರೆ ಪಾಂಡವರೊಳಿರಿದು ಛಲಮನೆ ಮೆರೆವೆಂ

ಹುಟ್ಟಿದ ನೂರು ಜನ ತಮ್ಮಂದಿರು ಯುದ್ಧದಲ್ಲಿ ಸತ್ತರೆ ಪುನಃ ಹುಟ್ಟಬಹುದು. ಕೋಪ ಸತ್ತರೆ? ಸತ್ತವರು ಹುಟ್ಟುತ್ತಾರೆ, ಆದ್ದರಿಂದ ಪಾಂಡವರೊಂದಿಗೆ ಛಲವನ್ನೇ ಮೆರೆಯುತ್ತೇನೆ.

ಹೀಗೆಲ್ಲಾ ಕೌರವ ಹೇಳುತ್ತಿರುವಾಗ ಅಜ್ಜ ಭೀಷ್ಮ ಯೋಚಿಸುತ್ತಾನೆ. ರನ್ನ ತಾನು ಇಡಿಯ ಮಹಾಭಾರತವನ್ನು ಆಗಾಗ ತಂದು ನೆನಪಿಸುತ್ತಾನೆ. ಕತೆಗಾಗಿ ಕಾವ್ಯ ಕಂಡಿತ ಅಲ್ಲ. ಮಹಾಭಾರತದ ಮುಖ್ಯ ಘಟನೆಗಳು ಗೊತ್ತಿಲ್ಲವೆಂದಾದಲ್ಲಿ ಈ ಪದ್ಯಗಳು ಸ್ವಾರಸ್ಯ ಕಳೆದುಕೊಳ್ಳಬಹುದೇನೋ. ರನ್ನನ ಒಳ್ಳೆಯ ಪದ್ಯಗಳಲ್ಲಿ ಇದೂ ಒಂದು. ಎಲ್ಲವನ್ನು ಒಂದು ಚಿತ್ರದಲ್ಲಿ ತಂದುಕೊಡುತ್ತಾನೆ ಇಲ್ಲಿ.

ಜತುಗೇಹಾನಲಬೀಜಮುಗ್ರ ವಿಷಸಂಯುಕ್ತಾನ್ನ ಜಾತಾಂಕುರಂ
ಕೃತಕದ್ಯೂತವಿನೋದಪಲ್ಲವಚಯಂ ಪಾಂಚಾಲರಾಜಾತ್ಮಜಾ-
ಯತಕೇಶಗ್ರಹಪುಷ್ಪಮುಂ ಬೆಳೆದುದಾ ವೈರದ್ರುಮಂ ಕೌರವ-
ಕ್ಷಿತಿಪಾಲೋರುಕಿರೀಟಭಂಗ ಫಲಮಂ ಪೇಳ್ ಮಾಡದೇಂ ಪೋಕುಮೇ

“ಅರಗಿನ ಮನೆಯಲ್ಲಿ ಸುಡುವಂತ ಪ್ರಸಂಗದಿಂದುಂಟಾದ ಬೀಜ, ವಿಷದ ಊಟವನ್ನಿಕ್ಕಿದಲ್ಲಿ ಅಂಕುರವಾದ್ದು, ಮಾಯಾದ್ಯೂತವಿನೋದ, ಪಾಂಚಾಲೀ ಕೇಶ ಪ್ರಸಂಗದಲ್ಲಿ ಬೆಳೆದು ಹೂವಾಗಿ, ಈಗ ಕೌರವನ ತೊಡೆಮುರಿಯುವ ಕಿರೀಟಭಂಗವಾಗುವ ಫಲವನ್ನು ಕೊಡದೆ ಇರದು”

ಇನ್ನೊಂದು ರನ್ನನ ಅದ್ಭುತ ಕಲ್ಪನೆ. ಯುದ್ಧರಂಗದಲ್ಲಿ ಸಿಗುವ ವಸ್ತುಗಳಿಂದ ಭೀಷ್ಮ ಪತ್ರವೊಂದನ್ನು ಬರೆದನೆಂದು ಹೇಳುವ ಈ ಪದ್ಯ ನೋಡಿ.

ಶರಮೊಂದಂ ತೆಗೆದು ನಿಜೋ-
ದರದಿಂ ಲೆಕ್ಕಣಿಕೆ ಮೂಡಿ ಗಜಮದಮಸಿಯಂ
ತರಿಸಿ ಪತಾಕಾಪಟದೊಳ್
ಬರೆದಟ್ಟಿದನಂಧನೃಪತಿಗಾ ಸಿಂಧುಸುತಂ

ತನ್ನ ದೇಹಕ್ಕೇ ಚುಚ್ಚಿಕೊಂಡಿರುವ ಬಾಣವೊಂದನ್ನು ತೆಗೆದು ಅದನ್ನು ಲೇಖನಿಯಾಗಿ ಮಾಡಿ, ಆನೆಯ ಮದಜಲವನ್ನು (ಕಪ್ಪಾಗಿರುತ್ತದೆ) ಮಸಿಯನ್ನಾಗಿ ಮಾಡಿ, ಅಲ್ಲೆಲ್ಲೋ ಬಿದ್ದಿದ್ದ ಧ್ವಜವನ್ನು ಕಾಗದದಂತೆ ಉಪಯೋಗಿಸಿಕೊಂಡು ಧೃತರಾಷ್ಟ್ರನಿಗೆ ಪತ್ರವೊಂದನ್ನು ಬರೆದು ಸಂಜಯನಿಗೆ ಕೊಟ್ಟು ಕಳಿಸುತ್ತಾನೆ.

~
ಇನ್ನೂ ಇದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Ishwara Bhat

ವೃತ್ತಿ : ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗ,
ಹವ್ಯಾಸ : ಓದುವುದು, ಇಂಟರ್ನೆಟ್, ಪ್ರವಾಸ ಇಷ್ಟು.
ಒಂದು ಕವನಸಂಕಲನ ಪ್ರಕಟವಾಗಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!