ಸಂಜಯ ಹೇಳುತ್ತಾನೆ ” ನೆಲದಲ್ಲಿ ಉರುಳಿಸಿ ಮೈ ಪುಡಿಪುಡಿ ಮಾಡಿ, ಕೊರೆದು, ತಿಂದು, ನೆತ್ತರು ಕುಡಿದರೂ ಹಿಡಿಂಬರಿಪು ತಣಿದನಿಲ್ಲ ದುಶ್ಶಾಸನನಂ”. ಕೌರವ ಇದನ್ನ ಕೇಳಿ ದುಶ್ಶಾಸನನನ್ನ ನೋಡುತ್ತಾನೆ
ನಡುವುಡಿವನ್ನಮೇರಿ ಬರಿಯೆಲ್ವುಡಿವನ್ನೆಗಮೊತ್ತಿ ಮೆಟ್ಟಿ ಮೆ-
ಯ್ಯಡಗಡಗಾಗೆ ಮುನ್ನುರಮನಿರ್ಬಗಿಯಾಗಿರೆ ಪೋಳ್ದು ನೆತ್ತರಂ
ಕುಡಿದನ ನೆತ್ತರಂ ಕುಡಿಯದನ್ನೆಗಮೆನ್ನಳಲೆಂತು ಪೋಕುಮೆಂ-
ದಡಿಗಡಿಗಳ್ತು ತನ್ನಣುಗದಮ್ಮನನೀಕ್ಷಿಸಿದಂ ಸುಯೋಧನ
ಸೊಂಟ ಮುರಿಯುವವರೆಗೆ ಏರಿ, ಎಲುಬುಗಳು ಪುಡಿಪುಡಿಯಾಗುವ ವರೆಗೆ ಒತ್ತಿ ಮೆಟ್ಟಿ, ಮೈ ಮಾಂಸದ ಮುದ್ದೆಯನ್ನಾಗಿ ಮಾಡಿ, ದೇಹವನ್ನ ಎರಡು ಹೋಳಾಗಿ ಸೀಳಿ ನೆತ್ತರನ್ನು ಮೊಗೆಮೊಗೆದು ಕುಡಿದವನ ನೆತ್ತರನ್ನು ಕುಡಿಯದೆ ಹೇಗೆ ಹೋಗಲಿ ಎಂದು ಅಡಿಗಡಿಗೆ ವಿಲಂಪಿಸಿ ತನ್ನ ತಮ್ಮನನ್ನು ನೋಡುತ್ತಾನೆ ಕೌರವ.
ರನ್ನ ಇಲ್ಲಿ ಒಂದು ಅತ್ಯುತ್ತಮವಾದ ಪದ್ಯ ಬರೆಯುತ್ತಾನೆ. ಪಂಚಭೂತಗಳಿಂದ ಯುಕ್ತವಾದ ಈ ಶರೀರವನ್ನು ದುಶ್ಶಾಸನನ ಪ್ರಾಣ ಹೋದ ಸಂದರ್ಭಕ್ಕೆ ಹೋಲಿಸಿ ಬರೆಯುತ್ತಾನೆ.
ನಿಜಜೀವಂ ಪರಲೋಕದೊಳ್ ನಿಜಮಹಾಮಾಂಸಂ ಪಿಶಾಚಾಸ್ಯದೊಳ್
ನಿಜರಕ್ತಂ ರಿಪುಕುಕ್ಷಿಯೊಳ್ ನಿಜಶಿರಂ ನಕ್ತಂಚರೀಹಸ್ತದೊಳ್
ನಿಜಕಾಯಂ ಕುರುಭೂಮಿಯೊಳ್ ನೆಲಸೆ ಗಾಂಧಾರೀಜ ದುರ್ಯೋಧನಾ-
ನುಜ ದುಶ್ಶಾಸನ ಭೀಮಭೀಮಗದೆಯಿಂ ಪಂಚತ್ವಮಂ ಪೊರ್ದಿದಯ್
ಜೀವ, ಮಾಂಸ, ರಕ್ತ, ತಲೆ ಮತ್ತು ಕಾಯ ಈ ಪಂಚಪ್ರಧಾನವಾದ ವಸ್ತುಗಳು ಹೇಗೆಲ್ಲಾ ಬೇರಾಯಿತು. ನಿನ್ನ ಪ್ರಾಣ ಪರಲೋಕದಲ್ಲಿ, ಮಾಂಸ ಪಿಶಾಚಿಗಳ ಹೊಟ್ಟೆಯಲ್ಲಿ, ರಕ್ತವು ಭೀಮನ ಹೊಟ್ಟೆಯಲ್ಲಿ, ತಲೆ ನಕ್ತಂಚರಿ(ಚಂಡಿಕೆಯೊ ಇನ್ನೊಂದು ದೈವವೋ ಚೆಂಡಾಟವಾಡಲು ಬಳಸಿರಬಹುದು!) ಹಸ್ತದಲ್ಲಿ, ದೇಹ ಕುರುಭೂಮಿಯಲ್ಲೂ ನೆಲಸಲು ತಮ್ಮನಾದ, ಗಾಂಧಾರಿಯ ಮಗನಾದ ದುಶ್ಶಾಸನನು ಭೀಮನ ಭೀಕರವಾದ ಗದೆಯಿಂದ ಪಂಚತ್ವವನ್ನು ಹೊಂದಿದೆ. ಪಂಚತ್ವ ಎಂದರೆ ಸಾವು ಎಂದೂ ಅರ್ಥವಿದೆಯಂತೆ.
ದುಶ್ಶಾಸನನಿಗಾಗಿ ಬಹಳ ಮರುಗುತ್ತಾನೆ ಕೌರವ. ಎಂತಹ ಸೋದರ ಸಂಬಂಧ ಅವರದ್ದು.. ಕೆಟ್ಟವರಾದರೂ ಒಳ್ಳೇ ಸೋದರರು.
ಅನುಜನ ನೆತ್ತರನ್ನು ಈಂಟಿದವನ ನೆತ್ತರನ್ನು ಜೀವಸಹಿತ ಈಂಟದೆ ಇದ್ದರೆ ದುರ್ಯೋಧನನೇ ಅಲ್ಲ ಎಂದು ಕೋಪದಿಂದ ಪ್ರತಿಜ್ಞೆ ಮಾಡಿ ಮುಂದೆ ಬರುತ್ತಾನೆ.
ಮುಂದೆ ಬಂದಾಗ ನರನ ಶರದಿಂದ ಜರ್ಜರಿತನಾಗಿ ಬಿದ್ದ ಅಂಗರಾಜ ಕರ್ಣನನ್ನು ಕಾಣುತ್ತಾನೆ.. ಸಂಜಯನು “ಗಂಡಸ್ಯೋಪರಿ ಸ್ಫೋಟಕಂ” ಎನ್ನುವಂತೆ ಅದನ್ನು ಗ್ರಹಿಸುತ್ತಾನೆ. ( ಗಾಯದ ಮೇಲೆ ಬರೆ ಎಳೆದಂತೆ ಎಂದು).
“ಗಂಡಸ್ಯೋಪರಿ ಸ್ಫೋಟಕಂ” ಎನ್ನುವಂತೆ ಸಂಜಯ ಭಾವಿಸಿದ ಈ ಚಿತ್ರದಲ್ಲಿ ಕರ್ಣ ಮಡಿದು ಬಿದ್ದಿದ್ದಾನೆ. ತನ್ನ ಕಾರ್ಯಕ್ಕಾಗಿ ಯುದ್ಧದಲ್ಲಿ ಪಾಲ್ಗೊಂಡು ಸತ್ತರೂ ನಗುಮೊಗದಲಿದ್ದ ಅಂಗಪತಿಯನ್ನು ನೋಡಿ ಕೌರವ ಶೋಕದಿಂದ ಉದ್ಗರಿಸುವ ಸಾಲುಗಳು ಮುಂದೆ ಬರುತ್ತದೆ.
ಅದರಲ್ಲೂ ಎಂಟು ಕಂದ ಪದ್ಯಗಳು “ಅಂಗಾಧಿಪತೀ” ಎಂದು ಕೊನೆಯಾಗುತ್ತದೆ. ಪಂಪನಂತೆಯೇ ರನ್ನನೂ ಕರ್ಣ ಮತ್ತು ಕೌರವರ ಸಂಬಂಧವನ್ನು ಬಹಳ ಚಿತ್ರಿಸಿದ್ದಾನೆ.
ನಿನ್ನ ಮಗಂ ವೃಷಸೇನಂ
ತನ್ನ ಮಗಂ ಸತ್ತನಣ್ಮಿ ಲಕ್ಷಣನುಂ ನೀ-
ನೆನ್ನ ಸಂತೈಸುವುದಾಂ
ನಿನ್ನಂ ಸಂತೈಸೆ ಬಂದೆನಂಗಾಧಿಪತೀ
ನಿನ್ನನ್ನು ಹೀಗೆ ಕಂಡುದಿಲ್ಲ, ನನ್ನ ಮೇಲೇನು ಕೋಪವೇ? ಯಾಕೆ ಮರುಮಾತುಗಳನ್ನಾಡುವುದಿಲ್ಲ, ಮರೆವೆಯೇ? ಅಲ್ಲ ಬಳಲಿಕೆಯೇ?
ನಿನ್ನ ಗೆಳೆಯ ಸುಯೋಧನನನ್ನು ನೋಡದೆ, ನೋಡಿ ಅಪ್ಪಿಕೊಳ್ಳದೆ, ವಿಚಾರಿಸದೆ, ಜೀಯಾ ದೇವಾ ಎಂದೆನ್ನದೆ ಸುಮ್ಮನೇಕುಳಿದೆ ಅಂಗಾಧಿಪತೀ?
ಆನರಿವೆಂ ಪೃಥೆಯರಿವಳ್
ದಾನವರಿಪುವರಿವನರ್ಕನರಿವಂ ದಿವ್ಯ-
ಜ್ಞಾನಿ ಸಹದೇವನರಿವಂ
ನೀನಾರ್ಗೆಂದಾರುಮರಿಯರಂಗಾಧಿಪತೀ
ನನಗೆ, ಕುಂತಿಗೆ, ಕೃಷ್ಣನಿಗೆ, ಸೂರ್ಯನಿಗೆ ಮತ್ತು ಸಹದೇವನಿಗೆ ಮಾತ್ರ ನಿನ್ನ ಹುಟ್ಟಿನ ರಹಸ್ಯ ಗೊತ್ತಿದೆ.
ಒಡವುಟ್ಟಿದನೆಂದರಿದೊಡೆ
ಕುಡುಗುಂ ರಾಜ್ಯಮನೆ ಧರ್ಮತನಯಂ ನಿನಗಾಂ
ಕುಡಲಾರ್ತೆನಿಲ್ಲ ರಾಜ್ಯ-
ಕ್ಕೊಡೆಯನನರಿಯುತ್ತುಮಿರ್ದೆನಂಗಾಧಿಪತೀ
ನಿನ್ನನ್ನು ಅಣ್ಣ ಎಂದು ತಿಳಿದೊಡನೆ ರಾಜ್ಯವನ್ನು ಧರ್ಮರಾಯ ಕೊಡುತ್ತಿದ್ದ, ನಾನು ಗೊತ್ತಿದ್ದೂ ಕೊಡಲಿಲ್ಲ ಎಂದೆಲ್ಲಾ ರೋಧಿಸುತ್ತಾನೆ ಕೌರವ.
ಇನ್ನೊಂದು ಪದ್ಯದಲ್ಲಿ
ಕೆಳೆಯಂಗಾಯ್ತು ಸುಮೋಕ್ಷಮಾಗದೆನಗಂ ಬಾಷ್ಪಾಂಬುಮೋಕ್ಷಂ ಧರಾ-
ತಳಮಂ ಕೊಟ್ಟನಿವಂ ಜಳಾಂಜಳಿಯುಮಂ ನಾ ಕೊಟ್ಟೆನಿಲ್ಲನ್ಯಮಂ-
ಡಳಮಂ ಸುಟ್ಟನಿವಂ ಪ್ರತಾಪಶಿಖಿಯಿಂದಾನೀತನಂ ಸತ್ಕ್ರಿಯಾ-
ನಳನಿಂ ಸುಟ್ಟೆನುಮಿಲ್ಲ ಮತ್ಪ್ರಿಯತಮಂ ಕರ್ಣಂಗಿದೇಂ ಕೂರ್ತೆನೋ
ಗೆಳೆಯ ಕರ್ಣನಿಗೆ ಸುಮೋಕ್ಷವಾಯ್ತು, ನಾನು ಕಣ್ಣೀರ ಮೋಕ್ಷವನ್ನೂ ಕೊಡಲಿಲ್ಲ. ನನಗಾಗಿ ಕರ್ಣ ಭೂಮಿಯನ್ನೇ ಗೆದ್ದುಕೊಟ್ಟ, ಅವನಿಗೆ ನಾನು ಎಳ್ಳುನೀರೂ ಕೊಡಲಿಲ್ಲ. ಶತ್ರುರಾಜರನ್ನು ತನ್ನ ಪ್ರತಾಪಶಿಖಿಯಿಂದ ಸುಟ್ಟ ಕರ್ಣ. ನಾನು ಅವನ ಅಂತ್ಯಸಂಸ್ಕಾರವನ್ನೂ ಮಾಡಲಿಲ್ಲ. ಎಲ್ಲವನ್ನೂ ನನಗಾಗಿ ಮಾಡಿದ ಕರ್ಣನಿಗೆ ನಾನೇನು ಮಾಡಿದೆ?
ಅದ್ಭುತವಾದ ಪದ್ಯ ಇದು. ಸಂಜಯನ ಉತ್ತರವೂ ಸಮಾಧಾನವೂ ಇನ್ನೆರಡು ಪದ್ಯದಲ್ಲಿದೆ.
ಜಲದಾನಕ್ರಿಯೆಯಂ ವಾ-
ಗ್ಜಲದಿಂ ಕೋಪಾಗ್ನಿಯಿಂದೆ ದಹನಕ್ರಿಯೆಯಂ
ಕೆಳೆಯಂಗೆ ಮಾಡಿದಯ್ ಕುರು-
ಕುಲದರ್ಪಣ ಮರೆವುದಿನ್ನಹರ್ಪತಿಸುತನಂ
ಪೆಂಡಿರ್ ಪಳಯಿಸುವಂದದೆ
ಗಂಡರ್ ಪಳಯಿಸಿದೊಡಾಯಮಂ ಛಲಮಂ ಕಯ್
ಕೊಂಡೆಸಪರಾರೊ ಕುರುಕುಲ
ಮಂಡನ ನೀನೆತ್ತಿಕೊಂಡ ಛಲಮನೆ ಮೆರೆಯಾ
ಕಣ್ಣೀರಿನಿಂದ, ಕರುಣೆಯ ಮಾತುಗಳಿಂದ, ಕೋಪಾಗ್ನಿಯಿಂದ ಗೆಳೆಯನಿಗೆ ಅಂತ್ಯಕ್ರಿಯೆಯನ್ನು ಮಾಡಿದ್ದೀಯೆ!, ಇನ್ನು ರವಿಸುತನನ್ನು ಮರೆ.
ಹೆಂಗಸರು ಹಳಹಳಿಸುವಂತೆ ಗಂಡಾದ ನೀನು ಹಳಹಳಿಸಿದರೆ ಕೆಲಸವಾಗುವುದು ಹೇಗೆ? ನಿನ್ನ ಛಲವನ್ನು ನೀನು ಮೆರೆ ಕುರುಕುಲಮಂಡನಾ!
~ ಇನ್ನೂ ಇದೆ.