“ಪ್ರೀತಿಗಾಗಿ…”
ಪ್ರೀತಿಗಾಗಿ ಹಂಬಲಿಸಿದಳವಳು..
ತುಂಬಿದೆದೆಯ ಪ್ರೀತಿಯನ್ನು
ಅವನೆದೆಯಲಿ ತುಂಬಿದಳು..
ಅವನಿಗೋ ಹೃದಯವಿರಲಿಲ್ಲ..
ನಿರಾಕರಿಸಿಬಿಟ್ಟ..!
ಪ್ರೀತಿಯ ದಿಕ್ಕು ಬದಲಾಯಿತು..
ಅವಳು ಸಾವನ್ನು ಪ್ರೀತಿಸತೊಡಗಿದಳು.!
ಸಾವು ಕ್ರೂರಿಯಾದರೇನಂತೆ.?
ಸಾವಿಗೊಂದು ಹೃದಯವಿದೆ,
ಅದಕ್ಕೂ ಕರುಣೆಯಿದೆ..!
ಪ್ರೀತಿಗಾಗಿ ಹಂಬಲಿಸಿದವಳನ್ನು
ಸಾವು ಪ್ರೀತಿಸಿ, ಆಲಿಂಗಿಸಿ ಮುದ್ದಾಡಿತು..
ಆಸರೆಕೊಟ್ಟು ಕೈಹಿಡಿಯಿತು..!
ಬದುಕನ್ನು ಪ್ರೀತಿಸಿ ಸೋತವಳು
ಸಾವನ್ನೇ ಪ್ರೇಮಿಸಿ ವರಿಸಿದಳು!
ಸಮಾಜದ ಕಣ್ಣಿಗದು ಪ್ರೇಮವೈಫಲ್ಯತೆ,
ಅದೊಂದು ‘ಆತ್ಮಹತ್ಯೆ..’
ಅವಳ ಪಾಲಿಗೆ ಮಾತ್ರ
ಪ್ರೇಮ ಸಾಫಲ್ಯತೆಯ ಉತ್ಕಟ ಭಾವ.!
ಸಾವಿನೊಳಗೊಂದಾಗುವ ಸರಸಸಂಭ್ರಮ,
‘ಪ್ರೇಮಸಮ್ಮಿಲನ.!’
“ಹೆಣ್ಣೊಬ್ಬಳು”
ಹೆಣ್ಣೊಬ್ಬಳು
ಕವಿತೆಯಾಗುವಳು..
ಅವಳ ಚರ್ಮದ ಕಾಂತಿಯು ಕಳೆದು
ಬಣ್ಣ ಮಾಸುವ ತನಕ..
ಹೆಣ್ಣಿನ ಸೌಂದರ್ಯ
ಕಲೆಯಾಗಿ ಕುಂಚದಲ್ಲರಳುವುದು..
ಅವಳ ದೇಹವು ಮಸಣವ ಸೇರಿ
ಮಣ್ಣಾಗುವ ತನಕ..
ಬೂದಿಯಾಗುವ
ದೇಹದ ಮೇಲೆ ಮೋಹವೇ..?
ಕೃಶವಾಗುವ
ಚರ್ಮದ ಮೇಲೆ ಪ್ರೇಮವೇ..?