ವಿಶಾಲವಾರಿಧಿಯ ಹೆದ್ದೆರೆಯಮೇಲೆ
ರತ್ನಗರ್ಭೆಯ ಸುತನ ಹೊತ್ತೊಯ್ದು
ಭರದಿ ಸಾಗಿತ್ತೊಂದು ಕಡಲನೌಕೆ..!
ಶೌರ್ಯತೇಜದ ಗಂಡುಗಲಿಯ
ಕರೆದು ಸಾಗುವ ಜಂಬದಲಿ
ಅದಕಿಷ್ಟು ಗರ್ವ…ಒಂದಿನಿತು ಹೆಮ್ಮೆ..!
ಕೈಕಾಲ ಬಿಗಿದ ದಾಸ್ಯಶೃಂಖಲೆಯ
ಯುಕ್ತಿಯಲಿ ಕಿತ್ತು ಬಿಸುಟೇಳುತಾ
ವೀರ ಧುಮುಕಿದನಾ ಶರಧಿಯೊಳಗೆ..!
ಹರಿದಿರುವ ಚರ್ಮ, ಒಸರುತಿರುವ ರಕ್ತ
ಉಪ್ಪುನೀರಲಿ ಮುಳುಗೇಳುವ ದೇಹ
ಬಿರಿದಿತ್ತು ಗಾಯ…ಉರಿದಿತ್ತು ಕಾಯ.!
ಸಂಸಾರದ ಸರ್ವಸುಖವನೆ ತ್ಯಜಿಸಿ
ದೇಹ ಭಾವವ ತೊರೆದು ಗೆದ್ದವನಿಗೆ
ನೋವು ನಲಿವುಗಳ ನಂಟಿಹುದೇ..!
ಪರತಂತ್ರದಲಿ ಬದುಕಿ ನೊಂದವಗೆ
ದಾಸ್ಯಧಗೆಯನೇ ಸಹಿಸಿ ಬೆಂದವಗೆ
ದೇಹದುರಿಯದು ಪರಿವೆಯುಂಟೇ.!
ಹರಿವ ಸ್ವಾತಂತ್ರ್ಯದ ಬಿಸಿನೆತ್ತರಿನ
ರುಚಿಯ ಸವಿಯುವ ತವಕದಲಿ
ಕಡಲ ನಾಲಿಗೆಗಂದು ತುಂಬು ಸಡಗರ.!
ದೇಶಭಕ್ತಿಯಲಿ ಮಿಂದವನ ಮೈಸೋಕಿ
ತನ್ನ ಪಾವನವಾಗಿಸುವ ಬಯಕೆಯಲಿ
ಕಡಲಿನಲೆಗಳಿಗೂ ಕೊಂಚ ಸಂಭ್ರಮ.!
ಶರಧಿಯಲೆಗಳ ಭೋರ್ಗರೆತಕ್ಕಿಂತಲೂ
ಉಕ್ಕಿಹರಿವ ರಭಸ, ಅತಿಯಾದ ಮೊರೆತ
ಆ ವೀರನೊಳಗಿತ್ತು ಸ್ವಾತಂತ್ರ್ಯದ ತುಡಿತ..!
ಅಧಮ್ಯ ಶಕ್ತಿಯುಕ್ಕುವ ಚಿಲುಮೆಯ
ಕಂಡೊಡನೆ ಆ ಕಡಲು ಬೆಚ್ಚಿತ್ತು.!
ಅಂಬುಧಿಯಲೆಗಳೂ…ಬೆವತಿತ್ತು.!
ಆಂಗ್ಲನೆಲದಲ್ಲೂ ತಾಯ್ನೆಲದ ಕೆಚ್ಚು
ಸ್ವಾತಂತ್ರ್ಯದಾಹ ತಣಿಸುವಾ ಹುಚ್ಚು
ಧೀಂಗ್ರನೆದೆಯಲ್ಲೂ ಹಚ್ಚಿತ್ತು ಕಿಚ್ಚು..!
ಕರಿನೀರ ಕಡಲತಡಿಯ ಕಗ್ಗತ್ತಲಕೋಣೆ
ಘನಘೋರಶಿಕ್ಷೆ, ಯಾತನೆಯ ಬದುಕು
ಅಲ್ಲಿಯೂ ಮೊಳಗಿತ್ತು ರಣಕ್ರಾಂತಿಕಹಳೆ..!
ಖಂಡಭಾರತವ ಕಂಡು ಮರುಗಿದಜೀವ
ಅನ್ನನೀರನೆ ತೊರೆದು ಪ್ರಾಣ ಅರ್ಪಿಸಿದೆ
ಧೂರ್ತರಿಗರಿವಿಲ್ಲವೀ ತ್ಯಾಗಮಹಿಮೆ.!
ಸ್ವಾಭಿಮಾನದಿ ಪದವಿ ತ್ಯಜಿಸಿದ ಧೀರ
ನೀ..ವೀರ..ನೀ..ಶೂರ..ಸ್ವಾತಂತ್ರ್
ಶತಕೋಟಿನಮನ ವೀರಸಾವರ್ಕರ.!