ಪುಪ್ಪಸಕ್ಕೆ, ಹಸಿರ ಜೀವವ ತುಂಬುತ್ತಾ,
ಸೋಡಾರಿನಂತೆ ಅಲ್ಲಾಡುವ ಉಸಿರಬತ್ತಿಯನ್ನು,
ಅನಾಯಸವಾಗಿ ಚೇತನದಿಂದ, ಜಡದವರೆಗೆ ಚಾಲಿಸಿ
ಶುಷ್ಕಕವಾಟಗಳಲ್ಲಿ ಶಾಂತಿ ತುಂಬಿದರೆ
ತಂಪು ಶೈತ್ಯಾಗಾರ, ಪಾಪವ ತುಂಬಿದರೆ ಸುಡುಬಿಸಿಲು.
ಗಾಜಿನ ಪಾರದರ್ಶಕತೆಗೆ ತಿಮಿರವೂ ಎದೆಯಲ್ಲೇ
ಬೇಯುತ್ತಾ, ಅಂತರಾಳದ ಕೆಚ್ಚಿ ಕಿಚ್ಚು ಬಿಚ್ಚು
ನುಡಿಗಳು, ದ್ವಂದ್ವ ವಿಚಾರಣೆಯಿಂದ ಜೀವ-ಜಲ
ಪಡೆಯುವುದು ವೇಗೋತ್ಕರ್ಷ, ಹೊಗಳಿಕೆಯ ತೀಟೆಗೆ
ಹಷೋತ್ಕರ್ಷ, ಬೆಚ್ಚಗಿನ ಉಷ್ಣಕ್ಕೆ ಆತ್ಮನ
ಆಮೂರ್ತವಾಗಿ ಆವಿರ್ಭಾವದಿಂದ ಪ್ರಕಾಶಿಸಿದರೆ,
ಪುಣ್ಯವಂತ, ಇಲ್ಲದೇ ಇದ್ದರೆ ತಾಪದ ಪಾಪಿಯೆಂಬ ಕಡಗೋಲು…!
ಮನದಾಳದ ಸೃಷ್ಠಿಯ ದೃಷ್ಠಿಗೆ ಕಣ್ಣಾಗಿ,
ಕುರುಡು ವಿಘ್ನಗಳ ಓಡಿಸಿ, ಜಾಗ್ರತೆಯ
ಪರಿಧಿಯಲ್ಲಿ ಜತನದಿಂದ ಮಿಥ್ಯಗಳ
ಸುಡುತ್ತಾ, ಮತ್ತೆ ಸುಟ್ಟ ಬೂದಿಯಲ್ಲಿ
ಹೂವ ಅರಳಿಸಿ ನೆನೆದವರ ಮನಸ್ಸನ
ಹೂವಾಗಿಸಿ ಕನಸ ಬಂಗಾರವಾಗಿಸಿ,
ಪ್ರೀತಿ-ಪ್ರೇಮಗಳ ಗಂಭೀರ ಚಿಂತನೆಗೆ
ಎದೆಯ ರಕ್ತದ ಮುದ್ದೆಯಿಂದ ಚಿಲುಮೆ ಚಿಮ್ಮಿಸಿ,
ಆ ನೆತ್ತರ ಕಣಗಳಲ್ಲಿ ಹುದುಗಿರುವ
ಮಾನಕಷಾಯದ ನಿವೃತಿಯು ಮೇಣದಂತೆ
ಉರಿದು ಕರಗಿ, ಭಾವಕುಸುಮವ ಬೀರುತ್ತಾ
ಪರಮಾತ್ಮನ ಮಂದಿರಕ್ಕೆ ಸತ್ಯದ ಸಾರ್ಥಕತೆಯ
ಸತ್ಕಾರದ ಸಾಕ್ಷಾತ್ಕಾರ ರುಜುವಾದರೆ
ಆ ಹೃದಯ ಧನ್ಯ.. ಧನ್ಯ……