ಪ್ರಚಲಿತ

ಕಾನೂನು ಕೇವಲ ಉಳ್ಳವರ ಸ್ವತ್ತೇ?

lawarticle

ಭಾರತದಂಥ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ದೇಶದ ಅಖಂಡತೆಯನ್ನು,ಸಂವಿಧಾನದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವಲ್ಲಿ ಕಾನೂನು ಪ್ರಮುಖ ಪಾತ್ರ ವಹಿಸುತ್ತದೆ.ಶ್ರೀಸಾಮಾನ್ಯ ನಾಗರೀಕನಿಂದ ಹಿಡಿದು ರಾಷ್ಟ್ರ‍ಪತಿಯವರೆಗೂ ಕಾನೂನು ಎಲ್ಲರಿಗೂ ಒಂದೇ.ಆದರೆ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ನ್ಯಾಯದೇವತೆಯೂ ಭೇದ-ಭಾವ,ತುಷ್ಟೀಕರಣ ಮಾಡುತ್ತಿದ್ದಾಳೇನೋ,ಕಾನೂನು ಕೇವಲ ಹಣವಂತರ ಸ್ವತ್ತಾಗಿದೆಯೇನೋ ಎಂದು ನಮಗೆ ಅನ್ನಿಸಿದರೆ ಆಶ್ಚರ್ಯವೇನಿಲ್ಲ.

       2002 ರ ಸೆಪ್ಟೆಂಬರ್ ತಿಂಗಳ ಒಂದು ಬೆಳಗಿನ ಜಾವ ಕುಡಿದು ವಾಹನ ಚಲಾಯಿಸಿ,ರಸ್ತೆಯ ಪುಟ್ ಪಾತ್ ಮೇಲೆ ಕಾರು ಹರಿಸಿ ಅಲ್ಲಿ ಮಲಗಿದ್ದವರಲ್ಲಿ ಒಬ್ಬರು ಸಾವನ್ನಪ್ಪುವಂತೆ ಮಾಡಿ ಇನ್ನುಳಿದವರನ್ನು ಗಂಭೀರವಾಗಿ ಗಾಯಗೊಳ್ಳುವಂತೆ ಮಾಡಿದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಪ್ರಕರಣದ ವಿಚಾರಣೆಯನ್ನು ನಡೆಸಲು ಮುಂಬೈನ ಸೆಷನ್ ಕೋರ್ಟ್ ಬರೋಬ್ಬರಿ ಹದಿಮೂರು ವರ್ಷಗಳನ್ನು ತೆಗೆದುಕೊಂಡಿತು.ಮೊನ್ನೆಯಷ್ಟೇ ಸಲ್ಮಾನ್ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ ಐದು ವರ್ಷಗಳ ಕಾಲ ಶಿಕ್ಷೆ ವಿಧಿಸಿದರೂ ಎರಡು ದಿನಗಳ ನಿರೀಕ್ಷಣಾ ಜಾಮೀನು ನೀಡಿತು.ಎರಡು ದಿನಗಳ ನಂತರ ಮತ್ತೆ ವಿಚಾರಣೆ ನಡೆಸಿದ ಮುಂಬೈ ಹೈಕೋರ್ಟ್ ಶಿಕ್ಷೆಯನ್ನು ವಜಾಗೊಳಿಸಿ ಕೇವಲ 30000 ರೂಪಾಯಿಯ ಮುಚ್ಚಳಿಕೆ ಬರೆಸಿಕೊಂಡು ಜಾಮೀನು ನೀಡಿತು.ಆ 30000 ರೂಪಾಯಿಗಳು ಸಲ್ಮಾನ್ ಖಾನ್ ನ ಅರ್ಧದಿನದ ಸಂಪಾದನೆಯಷ್ಟೇ.ತಮ್ಮ ಚಿತ್ರಗಳಿಗಾಗಿ ಸಲ್ಮಾನ್ ರಿಂದ ಡೇಟ್ಸ್ ಪಡೆದುಕೊಂಡಿದ್ದ ನಿರ್ಮಾಪಕರು,ನಿರ್ದೇಶಕರು ನಿರಾಳರಾದರು.ದೇಶದ ಎಷ್ಟೋ ಜನ ನಿರ್ಗತಿಕರು ರಸ್ತೆ ಬದಿಯಲ್ಲಿ ರಾತ್ರಿ ಕಳೆಯುತ್ತಾರೆ.ಹಾಗಂತ ಅವರ ಜೀವಕ್ಕೇನು ಬೆಲೆಯಿಲ್ಲವೇ?ಹಣ,ಪ್ರಸಿದ್ಧಿ ಇದ್ದ ಮಾತ್ರಕ್ಕೆ,ಒಂದಷ್ಟು ಸಮಾಜ ಸೇವಾ ಸಂಘಟನೆಗಳನ್ನು ನಡೆಸುತ್ತಿದ್ದ ಮಾತ್ರಕ್ಕೆ ಒಬ್ಬ ವ್ಯಕ್ತಿ ಕಾನೂನಿನ ಕುಣಿಕೆಯಿಂದ ಹೇಗೆ ಪಾರಾಗಲು ಸಾಧ್ಯ?ಆದರೆ ಹಣವೊಂದಿದ್ದರೆ ಪಾರಾಗಬಹುದು ಎಂಬುದನ್ನು ನಮ್ಮ ನ್ಯಾಯಾಂಗ ವ್ಯವಸ್ಥೆ ಪದೇ ಪದೇ ಸಾಬೀತು ಮಾಡುತ್ತಿದೆ.

      2000ನೇ ಇಸವಿಯ ಮಾರ್ಚ್ 11 ರಂದು ಕೋಲಾರ ಜಿಲ್ಲೆಯ ಕಂಬಾಲಪಲ್ಲಿಯಲ್ಲಿ ಎರಡು ಪಂಗಡಗಳ ಮಧ್ಯೆ ನಡೆದ ಜಗಳದಲ್ಲಿ ಏಳು ಜನ ದಲಿತರನ್ನು ಅವರು ಮನೆಯೊಳಗಿರುವಾಗಲೇ ಬೆಂಕಿ ಹಚ್ಚಿ ಜೀವಂತವಾಗಿ ದಹಿಸಲಾಯಿತು.ಪ್ರಕರಣದ ವಿಚಾರಣೆಯನ್ನು ಸುಮಾರು 14 ವರ್ಷ ನಡೆಸಿದ ನ್ಯಾಯಾಲಯ 40 ಜನ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆ ಎಂಬ ಕಾರಣಕೊಟ್ಟು ಶಿಕ್ಷೆಯಿಂದ ತಪ್ಪಿಸಿತು.ಆರೋಪಿಗಳೆಲ್ಲರೂ ಅಲ್ಲಿನ ಪ್ರಭಾವಿ ರಾಜಕಾರಣಿಗಳ ನಿಕಟವರ್ತಿಗಳಾಗಿದ್ದರು.ಜೀವಂತವಾಗಿ ದಹನವಾಗಿ ಹೋದ ಆ ಏಳು ಜನರಿಗೆ ನ್ಯಾಯ ಸಿಗಲೇ ಇಲ್ಲ.ಈ ಪ್ರಕರಣದಲ್ಲಿ ಆರೋಪಿಗಳು ನ್ಯಾಯಾಧೀಶರನ್ನೇ ಕೊಂಡುಕೊಂಡಿದ್ದಾರೆ ಎಂದು ಯಾರಿಗಾದರೂ ಅನ್ನಿಸದೇ ಇರದು.ಕಾನೂನು ಕೇವಲ ಉಳ್ಳವರ ಸ್ವತ್ತು ಎಂದು ಮತ್ತೆ ಸಾಬೀತಾಯಿತು.

      ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕಳೆದ ವರ್ಷ ನಿಯತಕಾಲಿಕೆಯೊಂದರ ಮುಖಪುಟದಲ್ಲಿ ವಿಷ್ಣುವಿನ ವೇಷದಲ್ಲಿ ವಿವಾದಾತ್ಮಕವಾಗಿ ಕಾಣಿಸಿಕೊಂಡಿದ್ದರು.ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡುವ ಚಿತ್ರವಾದ್ದರಿಂದ ಆಂಧ್ರಪ್ರದೇಶದಲ್ಲಿ ನ್ಯಾಯವಾದಿಯೊಬ್ಬರು ಧೋನಿ ಮೇಲೆ  ಕೇಸ್ ದಾಖಲಿಸಿದ್ದರು.ಅನಂತಪುರ ಹೈಕೋರ್ಟ್ ಮೂರು ಮೂರು ಸಲ ನೋಟೀಸ್ ಜಾರಿ ಮಾಡಿದರೂ ಧೋನಿ ಉತ್ತರಿಸಲಿಲ್ಲ.ಕೊನೆಗೆ ನಾಲ್ಕನೇ ಬಾರಿಗೆ ಜುಲೈ 14 2014ರಂದು ಧೋನಿ ಎಲ್ಲಿದ್ದರೂ ಕೋರ್ಟ್ ಗೆ ಕರೆತರುವಂತೆ ನ್ಯಾಯಾಲಯ ಪೋಲೀಸರಿಗೆ ಸೂಚಿಸಿತು.ಆ ಪೋಲೀಸರು ಏನಾದರೋ ಗೊತ್ತಿಲ್ಲ.ಧೋನಿ ಇವತ್ತಿನವರೆಗೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ.ಒಬ್ಬ ಸಾಮಾನ್ಯ ವ್ಯಕ್ತಿ ಮೂರು ಮೂರು ಸಲ ಕೋರ್ಟ್ ನೋಟೀಸ್ ಗೆ ಉತ್ತರಿಸದೇ ಇದ್ದಿದ್ದರೆ ಕಾನೂನು ಏನು ಮಾಡುತ್ತಿತ್ತು?ದೇಶದ ಯಾವ ಮೂಲೆಯಲ್ಲಿದ್ದರೂ ಹುಡುಕಿತಂದು ವ್ಯಕ್ತಿಯನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿತ್ತು.ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು ಎಂಬ ಸಾಮಾನ್ಯ ಜ್ಞಾನವೂ ನಮ್ಮ ಕ್ರಿಕೆಟ್ ತಂಡದ ನಾಯಕನಿಗೆ ಇಲ್ಲವಾಯಿತು.ತೆರೆಯ ಹಿಂದೆ ಹಣಬಲದಿಂದ ಏನೇನು ನಡೆದಿದೆಯೋ ಯಾರಿಗೆ ಗೊತ್ತು?

    ಇದೆಲ್ಲಾ ಉಳ್ಳವರ ಕಥೆಯಾಯಿತು.ಸಾಧ್ವಿ ಪ್ರಜ್ಞಾ ಸಿಂಗ್ ಎಂಬ ಹಿಂದೂ ಸನ್ಯಾಸಿನಿಯೋರ್ವರು ಮಾಡದ ತಪ್ಪಿಗಾಗಿ ಒಂಬತ್ತು ವರ್ಷಗಳಿಂದ ಜೈಲಿನಲ್ಲೇ ಕೊಳೆಯುತ್ತಿದ್ದಾರೆ.ಸೆಪ್ಟೆಂಬರ್ 8 2006ರಂದು ಮಹಾರಾಷ್ಟ್ರದ ಮಾಲೆಗಾಂವ್ ಎಂಬಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 39 ಜನ ಅಸುನೀಗಿದರು.ಸ್ಫೋಟಕ್ಕೆ ಬಳಸಲಾದ ಬೈಕ್ ನ ರಿಜಿಸ್ಟರ್ ಸಂಖ್ಯೆ ಸಾಧ್ವಿ ಪ್ರಜ್ಞಾ ಸಿಂಗ್ ರ ಹೆಸರಲ್ಲಿತ್ತು.ಆದರೆ ಸಾಧ್ವಿ ಆ ಬೈಕ್ ಅನ್ನು ಹಲವು ವರ್ಷಗಳ ಹಿಂದೆಯೇ ಮಾರಿದ್ದರು.ರಿಜಿಸ್ಟರ್ ಸಂಖ್ಯೆ ಮಾತ್ರ ಅವರ ಹೆಸರಲ್ಲಿತ್ತು.ಪೋಲೀಸರಿಗೆ ಮತ್ತು ವೋಟ್ ಬ್ಯಾಂಕ್ ರಾಜಕಾರಣ ಮಾಡುವವರಿಗೆ ಅಷ್ಟು ಸಾಕಾಯಿತು.ಹಿಂದೂ ಭಯೋತ್ಪಾದಕಿ ಎಂಬ ಹಣೆಪಟ್ಟಿ ಕಟ್ಟಿ ಸಾಧ್ವಿಯನ್ನು ಜೈಲಿಗಟ್ಟಿದ್ದರು.ಅಲ್ಲಿ ನಾನಾರೀತಿಯ ಚಿತ್ರಹಿಂಸೆ ಕೊಟ್ಟು,ಊಟ ತಿಂಡಿ ಸರಿಯಾಗಿ ಸಿಗದಂತೆ ಮಾಡಿದರು.ಇಲ್ಲಿಯವರೆಗೆ ಒಮ್ಮೆಯೂ ಪ್ರಜ್ಞಾಸಿಂಗ್ ಗೆ ಬೇಲ್ ಸಿಕ್ಕಿಲ್ಲ.ಸಂಜಯ್ ದತ್ ಗೆ ಹಲವಾರು ಸಲ ಪೆರೋಲ್ ಮೇಲೆ ಹೊರಬರಲು ಅವಕಾಶ ಮಾಡಿಕೊಟ್ಟ ನಮ್ಮ ಕಾನೂನು ಸಾಧ್ವಿಯ ತಂದೆ ನಿಧನರಾದಾಗ ಅಂತಿಮ ದರ್ಶನ ಮಾಡಲೂ ಅವಕಾಶ ಕೊಡಲಿಲ್ಲ.ಈಗ ಸಾಧ್ವಿ ಪ್ರಜ್ಞಾ ಸಿಂಗ್ ಗೆ ಕ್ಯಾನ್ಸರ್ ಬಂದಿದೆ ಎಂಬ ಸುದ್ದಿಯೂ ಇದೆ.ಇದೇಕೆ ಹೀಗೆ?ಸಾಧ್ವಿಯ ಬಳಿ ತನ್ನ ಪರವಾಗಿ ವಾದ ಮಾಡಲು ಒಬ್ಬ ಒಳ್ಳೆಯ ವಕೀಲರನ್ನು ನೇಮಿಸಿಕೊಳ್ಳಲೂ ಹಣವಿಲ್ಲ.ಮೊನ್ನೆ “I am with Salman Khan” ಎಂದು ಸಾಮಾಜಿಕ ಜಾಲತಾಣದಲ್ಲಿ ಗದ್ದಲ ಎಬ್ಬಿಸಿದವರಿಗೆ ಸಾಧ್ವಿಯ ಕಥೆ ಗೊತ್ತೇ ಇಲ್ಲ.ಅವಳು ಒಬ್ಬಳು ಹೆಣ್ಣು ಎಂದು ತಿಳಿದೂ ಅವಳ ಪರವಾಗಿ ಹೋರಾಟ ಮಾಡಲು ಯಾವ ಮಹಿಳಾವಾದಿಗಳೂ,ಮಹಿಳಾ ಸಂಘಟನೆಗಳೂ,ಬುದ್ಧಿಜೀವಿಯೂ ಮುಂದೆ ಬರಲಿಲ್ಲ.ಅಂದರೆ ಹಣವಿದ್ದರೆ ಮಾತ್ರ ಈ ದೇಶದಲ್ಲಿ ನ್ಯಾಯ ಪಡೆಯಬಹುದೇನೋ.

     ಹಣವಂತರೇನೋ ತಮಗೆ ಬೇಕಾದ ಒಳ್ಳೆಯ ವಕೀಲರನ್ನು ನೇಮಿಸಿಕೊಂಡು ಅಪರಾಧವೆಸಗಿದ್ದರೂ ತಮ್ಮ ಪರವಾಗಿ ನ್ಯಾಯ ದೊರೆಯುವಂತೆ ಮಾಡಿಕೊಳ್ಳುತ್ತಾರೆ.ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಸಾಮರ್ಥ್ಯವಿರದ ಶ್ರೀಸಾಮಾನ್ಯ,ದೊಡ್ದ ದೊಡ್ಡ ವಕೀಲರನ್ನು ಹಿಡಿಯಲು ಸಾಧ್ಯವಾಗದವರು ನ್ಯಾಯ ತಮ್ಮ ಪರವಾಗಿದ್ದರೂ ಜೈಲಿನ ಕಂಬಿ ಎಣಿಸಬೇಕಾಗುತ್ತದೆ.”ಪುಟ್ ಪಾತ್ ನಲ್ಲಿ ನಾಯಿಗಳಂತೆ ಮಲಗಿದರೆ ನಾಯಿಗಳಂತೆ ಸಾಯಬೇಕಾಗುತ್ತದೆ.ಎಷ್ಟೇ ಬಡವರಾದರೂ ರಸ್ತೆ ಬದಿಯಲ್ಲಿ ಮಲಗುವುದಿಲ್ಲ” ಎಂದು ಬಾಲಿವುಡ್ ಗಾಯಕ ಅಭಿಜಿತ್ ಟ್ವೀಟ್ ಮಾಡಿ ಸಲ್ಮಾನ್ ನನ್ನು ಸಮರ್ಥಿಸಿಕೊಂಡರು.ನ್ಯಾಯಾಲಯ ಸಲ್ಮಾನ್ ಖಾನ್ ನ ಶಿಕ್ಷೆಯನ್ನು ವಜಾ ಮಾಡುವುದರ ಮೂಲಕ ಅಭಿಜಿತ್ ಹೇಳಿಕೆಯನ್ನು ಪರೋಕ್ಷವಾಗಿ ಒಪ್ಪಿಕೊಂಡು ಪುಟ್ ಪಾತ್ ನಲ್ಲಿ ಮಲಗುವವರು ನಾಯಿಗಳು ಎಂದು ಒಪ್ಪಿಕೊಂಡಂತಾಗುತ್ತದೆ ಎಂದು ತೀರ್ಪು ನೀಡಿದ ನ್ಯಾಯಾಧೀಶರು ಆಲೋಚಿಸಲಿಲ್ಲ.ಕುಡಿದು ವಾಹನ ಚಲಾಯಿಸುವುದೇ ತಪ್ಪು.ಕುಡಿದು ಡ್ರೈವ್ ಮಾಡಿ ಜನರನ್ನು ಕೊಲ್ಲುವುದು ಶಿಕ್ಷಾರ್ಹ ಅಪರಾಧ.ಹಾಗಿದ್ದೂ ಸಲ್ಮಾನ್ ಗೆ ಜಾಮೀನು ಸಿಗುತ್ತದೆಂದರೆ ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಯಾರಿಗಾದರೂ ಅನುಮಾನ ಬರುತ್ತದೆ.

     ಅವತ್ತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಜೈಲುಪಾಲಾದರೆಂದು ತಿಳಿದು ತಮಿಳುನಾಡಿನಲ್ಲಿ ನೂರಕ್ಕೂ ಹೆಚ್ಚು ಜನ ‘ಅಮ್ಮ’ನ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡರು.ಮೊನ್ನೆ ಕೂಡಾ ಸಲ್ಮಾನ್ ಅಭಿಮಾನಿಯೊಬ್ಬ ಕೋರ್ಟ್ ಆವರಣದಲ್ಲೇ ಆತ್ಮಹತ್ಯೆಗೆ ಯತ್ನಿಸಿದ.ತಾವು ಇಷ್ಟಪಡುವ ಸೆಲೆಬ್ರೆಟಿಗಳು ತಪ್ಪು ಮಾಡಿದ್ದಾರೆಂದು ಗೊತ್ತಿದ್ದೂ ಅವರ ಬೆಂಬಲಕ್ಕೆ ನಿಲ್ಲುವ,ಅವರಿಗಾಗಿ ಪ್ರಾಣತ್ಯಾಗ ಮಾಡುವ ಹುಚ್ಚು ಅಭಿಮಾನಕ್ಕೆ ಏನು ಹೇಳಬೇಕೋ?ಇಂಥ ಬೆಂಬಲ ತಪ್ಪೇ ಮಾಡದಿದ್ದರೂ ಶಿಕ್ಷೆಗೊಳಗಾಗುವ ಶ್ರೀಸಾಮಾನ್ಯ ನಾಗರೀಕನಿಗೆ ಸಿಕ್ಕೀತೇ?ತಪ್ಪೇ ಮಾಡದ ಸಾಧ್ವಿ ಪ್ರಜ್ಞಾ ಸಿಂಗ್ ಗಾಗಿ ಎಷ್ಟು ಜನ ಹೋರಾಟ ಮಾಡಿದರು?ಎಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ “I Am with Sadhvi” ಎಂಬ ಟ್ರೆಂಡ್ ಕ್ರಿಯೇಟ್ ಮಾಡಿದರು?

      ಉಳ್ಳವರು ಕಾನೂನಿನ ಕುಣಿಕೆಯಿಂದ ಪಾರಾಗುವರು,ನಾನೇನು ಮಾಡಲಿ ಬಡವನಯ್ಯಾ ಎಂದು ಸಾಮಾನ್ಯ ಜನರು ಅಲವತ್ತುಕೊಳ್ಳುವಂತಾಗಿದೆ.ಇಂದು ಇಲ್ಲಿ ಹಣವೊಂದಿದ್ದರೆ ನಿಮಗೆ ಭೇಲ್ ಪುರಿಯಿಂದ ಹಿಡಿದು ಬೇಲ್ ತನಕ ಎಲ್ಲವೂ ಸುಲಭವಾಗಿ ಸಿಕ್ಕಿಬಿಡುತ್ತದೆ.

– ಲಕ್ಷ್ಮೀಶ ಜೆ.ಹೆಗಡೆ

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!