ಪ್ರಚಲಿತ

ಸತ್ಯಮೆವ ಜಯತೇ ಎನ್ನಲು ಸಾಧ್ಯವಿದೆಯೇ?!

 INDIANjUDI

ಕೇಸ್ ನಂ1: ಅವರು ತಮಿಳುನಾಡಿನ ಮುಖ್ಯಮಂತ್ರಿ ಕು.ಜಯಲಲಿತಾ. ಹಲವಾರು ವರ್ಷಗಳಿಂದ ಆದಾಯಕ್ಕೂ ಮೀರಿದ ಆಸ್ತಿ ಪ್ರಕರಣದ ಆರೋಪಿಯಾಗಿದ್ದರೂ ಸಹ ನಿಶ್ಚಿಂತೆಯಿಂದ ಅಧಿಕಾರದ ಸವಿ ಅನುಭವಿಸುತ್ತಿದ್ದರು. ಆದರೆ ಆವತ್ತು ಬಡಿದಿತ್ತು ನೋಡಿ ಬರಸಿಡಿಲು. ಜಯಲಲಿತಾ ತಪ್ಪಿತಸ್ತೆ ಎಂದು ಸಾಬೀತಾಗಿ ಆಕೆಗೆ ನಾಲ್ಕು ವರ್ಷ ಜೈಲಾಯಿತು. ಸುಪ್ರೀಂಕೋರ್ಟ್ ಜಾರಿಗೆ ತಂದ ಹೊಸ ಕಾನೂನಿನ್ವಯ ಆವರು ತಕ್ಷಣವೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಮತ್ತೆ ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸಿದಾಗ ಅಲ್ಲಿ ಅವರಿಗೆ ಸೋಲಾಯಿತು. ಅಷ್ಟಕ್ಕೂ ಜಗ್ಗದೆ ಸುಪ್ರೀಂ ಕೋರ್ಟಿನ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದಾಗ ಅಲ್ಲಿ ಜಯಲಲಿತಾಗೆ ಜಾಮೀನು ಮಂಜೂರಾಯಿತು ಮತ್ತು ಆವರಿಗೆ ಜಾಮೀನು ನೀಡದ ಕರ್ನಾಟಕ ಹೈಕೋರ್ಟಿನ ಕ್ರಮವನ್ನು ಸುಪ್ರೀಂ ಕೋರ್ಟ್ ಖಂಡಿಸಿತು. ಇದಾದ ಕೆಲವು ತಿಂಗಳುಗಳ ಬಳಿಕ ಕರ್ನಾಟಕ ಹೈಕೋರ್ಟ್ ಜಯಲಲಿತಾರನ್ನು ನಿರ್ದೋಷಿ ಎಂದಿತು.

ಕೇಸ್ ನಂ2: ಮೊನ್ನೆಯಷ್ಟೇ 2002ರ ಹಿಟ್ ಆಂಡ್ ರನ್ ಕೇಸಿನಲ್ಲಿ ಸಲ್ಮಾನ್ ಖಾನ್ ರನ್ನು ಅಪರಾಧಿ ಎಂದು ಪರಿಗಣಿಸಿದ ಮುಂಬೈ ಸೆಷನ್ಸ್ ಕೋರ್ಟ್ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ತೀರ್ಪು  ನೀಡಲು ಕೋರ್ಟ್ ಬರೋಬ್ಬರಿ ಹದಿಮೂರು ವರ್ಷಗಳನ್ನು ತೆಗೆದುಕೊಂಡಿತ್ತು. ಮತ್ತು ತೀರ್ಪು ನೀಡಿದ ನಂತರ ಬರೀ ಎರಡೇ ಗಂಟೆಗಳಲ್ಲಿ ಅದೇ ನ್ಯಾಯಾಲಯ ಸಲ್ಮಾನ್ ಗೆ ಜಾಮೀನು ನೀಡಿತು. ಮತ್ತೆ ಎರಡು ದಿನಗಳ ಬಳಿಕ ಮಂಬೈ ಹೈಕೋರ್ಟ್ ಸೆಷನ್ಸ್ ನ್ಯಾಯಾಲಯದ ತೀರ್ಪನ್ನೇ ತಡೆ ಹಿಡಿಯಿತು ಮತ್ತು ಜಾಮೀನು ಅವಧಿಯನ್ನು ಮತ್ತೆ ವಿಸ್ತರಿಸಿತು.

ಜಾಮೀನುಯೋಗ್ಯ ಕೇಸಾಗಿದ್ದರೆ ಜಾಮೀನು ನೀಡಲಿ, ನಮ್ಮದೇನೂ ತಕರಾರಿಲ್ಲ. ಪ್ರಶ್ನೆಯೇನೆಂದರೆ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ಸೆಷನ್ಸ್ ನ್ಯಾಯಾಲಯಗಳು ನೀಡಿದ ತೀರ್ಪನ್ನು ಕೆಲವೇ ಗಂಟೆಗಳಲ್ಲಿ ಹೈಕೋರ್ಟ್, ಸುಪ್ರೀಂಕೋರ್ಟ್ ತಡೆಹಿಡಿಯುತ್ತದೆ ಎಂದರೆ ಏನರ್ಥ? ಕೆಳಮಟ್ಟದ ಕೋರ್ಟ್ ಗಳು, ಅಲ್ಲಿಯ ನ್ಯಾಯಾಧಿಶರು, ವಕೀಲರು ಮತ್ತು ತನಿಖೆ ನಡೆಸಿದ ಪೋಲಿಸರು ಅಸಮರ್ಥರೆಂದಾ?  ತಪ್ಪಿತಸ್ತ ನೀನೇ ಎಂದು ತಿರ್ಮಾನಿಸಿ, ಶಿಕ್ಷೆ ವಿಧಿಸಿ ನಂತರ ಎರಡೇ ಗಂಟೆಗಳಲ್ಲಿ ಅದೇ ನ್ಯಾಯಾಧೀಶರು ಜಾಮೀನು ಮಂಜೂರು ಮಾಡುತ್ತಾರಾದರೆ ಅವರು ಇಡೀಯ ನ್ಯಾಯ ವ್ಯವಸ್ಥೆಯನ್ನೇ ಕುಹುಕವಾಡಿದಂತೆ ಅಲ್ಲವೇ? ಕೆಳಮಟ್ಟದ ಕೋರ್ಟುಗಳಲ್ಲಿ ತನಿಖೆ ನಡೆಸಿ ಹತ್ತು ಹದಿಮೂರು ವರ್ಷಗಳನ್ನು ರಬ್ಬರ್ ಸವೆಸಿದಂತೆ ಸವೆಸುವುದಕ್ಕಿಂತ  ನೇರವಾಗಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡುವಂತಹ ವ್ಯವಸ್ತೆಯನ್ನು ತರಬಾರದೇಕೆ? ಕೆಳಮಟ್ಟದ ನ್ಯಾಯಾಲಯಗಳು ಶಿಕ್ಷೆ ನೀಡಿದಷ್ಟೇ ವೇಗದಲ್ಲಿ ಜಾಮೀನು ಮಂಜೂರು ಮಾಡಿ ಆರೋಪಿ ರಾಜಾರೋಷವಾಗಿ ತಿರುಗಲು ಅನುವು ಮಾಡಿಕೊಡುವುದಾದರೆ ಈ ಶಿಕ್ಷೆ ಪ್ರಕಟದಂತಹ ಪ್ರಹಸನಗಳೆಲ್ಲಾ ಏಕೆ?

ಸಲ್ಮಾನನ ಕೇಸನ್ನೇ ತೆಗೆದುಕೊಳ್ಳಿ. ‘ಕಾರು ಚಲಾಯಿಸುತ್ತಿದ್ದುದು ನೀವೇ, ಅದಕ್ಕಾಗಿ ನಿಮಗೆ ಶಿಕ್ಷೆ ವಿಧಿಸುತ್ತಿದ್ದೇನೆ’ ಎಂದು ನ್ಯಾಯಾಧೀಶರಾದ ಡಿಡಬ್ಲೂ ದೇಶಪಾಂಡೆಯವರು ಖಡಾಖಂಡಿತವಾಗಿ ತೀರ್ಪು ನೀಡಿದ್ದರು. ಹಾಗೆ ತೀರ್ಪು ನೀಡಿದವರೇ ಸಂಜೆ ವೇಳೆಗೆ ಜಾಮೀನು ನೀಡಿದ್ದರು. ಹೀಗೆ ದೇಶದಲ್ಲಿರುವ ಎಲ್ಲಾ ಆರೋಪಿಗಳಿಗೂ ಜಾಮೀನು ಸಿಗುತ್ತದಾ? ಅದಾದ ಬಳಿಕ ಹೈಕೋರ್ಟ್ ಸೆಷನ್ಸ್ ಕೋರ್ಟಿನ ಆ ತೀರ್ಪಿಗೆ ತಡೆ ನೀಡಿತು. ಹಾಗಾದರೆ  ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ನೀಡಿದ ತಿರ್ಪಿನಲ್ಲಿ ಏನಾದರೂ ದೋಷವಿತ್ತೆ? ಸಹಜ ನ್ಯಾಯ ಒದಗಿಸಲು ಅವರು ವಿಫಲರಾದರಾ? ಇಲ್ಲಿ ಒಂದಂತೂ ನಿಜ. ಒಂದೋ ಸೆಷನ್ಸ್ ನ್ಯಾಯಾಲಯ ನ್ಯಾಯ ಒದಗಿಸಲು ವಿಫಲವಾಗಿದೆ ಇಲ್ಲವೇ ಉನ್ನತ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಗೊಂದಲವಿದೆ. ನ್ಯಾಯಾಧೀಶರೂ ಸಹ ಮನುಷ್ಯರೇ ಆಗಿರುವುದರಿಂದ ಸಣ್ಣ ಪುಟ್ಟ ತಪ್ಪುಗಳು ಆಗಿರಬಹುದು. ಮೂರು ವರ್ಷ ನೀಡಬೇಕಾಗಿದ್ದ ಶಿಕ್ಷೆ ಐದು ವರ್ಷ ಆಗಿರಬಹದೋ ಗೊತ್ತಿಲ್ಲ. ಆದರೆ ಹದಿಮೂರು ವರ್ಷಗಳಿಂದ ತನಿಖೆ ನಡೆಸಿ ನೀಡಿದ ತೀರ್ಪು ನೂರಕ್ಕೆ ನೂರು ಶೇಕಡಾ ತಪ್ಪಾಗಿರಲು ಸಾಧ್ಯವೆ? ಅದು ತಪ್ಪಾಗಿದ್ದರೆ ಅಂತಹಾ ನ್ಯಾಯಾಲಗಳ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಯೇಳುತ್ತದೆ.

ಜಯಲಲಿತಾ ಕೇಸಿನ ಕಡೆಗೆ ಸ್ವಲ್ಪ ನೋಡೋಣ. ಎಂತಹಾ ವಿಚಿತ್ರ ನೋಡಿ. ಹಲವಾರು ವರ್ಷಗಳ ನಂತರ ಬೆಂಗಳೂರು ಸೆಷನ್ಸ್ ಕೋರ್ಟ್ ತೀರ್ಪು ನೀಡಿತ್ತು. ಅದಕ್ಕೆ ತಡೆ ನೀಡಲು ಮತ್ತು ಜಾಮೀನು ನೀಡಲು ಮೊದಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಆದರೆ ಈಗ ಅದೇ ಕರ್ನಾಟಕ ಹೈಕೋರ್ಟ್ ಆಕೆಯನ್ನು ದೋಷಮುಕ್ತಗೊಳಿಸಿದೆ. ಈವಾಗ ನಿರ್ದೋಷಿ ಎಂದಿರುವ ಕೋರ್ಟಿಗೆ ಈ ವಿಷಯ ಮೊದಲೇ ಗೊತ್ತಿರಲಿಲ್ಲವಾ? ಮತ್ತೇಕೆ ಅವತ್ತು ಜಾಮೀನು ನಿರಾಕರಿಸಿದ್ದು? ಸಾವಿರಾರು ಕೇಸುಗಳು ಕೊಳೆಯುತ್ತಾ ಬಿದ್ದಿರುವಾಗ ಮತ್ತೆ ಏಕೆ ಕೋರ್ಟಿನ ಸಮಯ ವ್ಯರ್ಥ ಮಾಡಿದ್ದು? ಜಯಲಲಿತಾಗೆ ಜೈಲಾಗದಿದ್ದರೆ ಇರಲಿ ಬಿಡಿ. ಆವತ್ತು ಬೆಂಗಳೂರು ಸೆಷನ್ಸ್ ಕೋರ್ಟ್ ತೀರ್ಪು ನೀಡಿದಾಗ ಬೆಂಗಳೂರಿನಲ್ಲಿ ನೂರಾರು ತಮಿಳಿಗರು ಸೇರಿ ದಾಂಧಲೆ ಮಾಡಿದರಲ್ಲವೇ, ಸೆಷನ್ಸ್ ಕೋರ್ಟ್ ನೀಡಿದ ತಪ್ಪು ತೀರ್ಪೇ ಅದಕ್ಕೆ ಕಾರಣವಲ್ಲವೇ? ಪಾಪ, ಜಯಲಲಿತಾ ಅಭಿಮಾನಿಗಳಿಂದಾಗಿ ಅಮಾಯಕ ಕನ್ನಡಿಗರು ತಮ್ಮ ಮನೆ, ವಾಹನ, ಆಸ್ಥಿಪಾಸ್ತಿಗಳಿಗೆ ಹಾನಿಮಾಡಿಕೊಂಡರಲ್ಲವೇ, ಅದಕ್ಕೆ ಯಾರು ಕಾರಣ? ಹಲವಾರು ಜಯಲಲಿತಾ ಅಭಿಮಾನಿಗಳು ಅತ್ಮಹತ್ಯೆ ಮಾಡಿಕೊಂಡರಲ್ಲವೇ? ಪಾಪ ಅವರ ಕುಟುಂಬದವರ ಕತೆ ಏನಾಗಿರಬಹುದು? ಇದಕ್ಕೆಲ್ಲಾ ತಮಿಳಿಗರ ಅಂಧಾಭಿಮಾನವೇ ಕಾರಣವಾಗಿದ್ದರೂ, ಕೋರ್ಟಿನ ತಪ್ಪು ತೀರ್ಪಿನ ಪಾಲೂ ಇದೆಯಲ್ಲವೇ? ಕೋರ್ಟಿನ ತೀರ್ಪಿನಿಂದ ಪೋಲೀಸರಿಗೂ ಪೀಕಲಾಟ ಬಂದಿತ್ತಲ್ಲವೇ ಮಹಾಸ್ವಾಮಿ? ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಕೋರ್ಟೇ ಇದಕ್ಕೆಲ್ಲ ಕಾರಣವಾಯ್ತು ಎಂದಾದರೆ ನಾವು ಎಲ್ಲಿಗೆ ಹೋಗಬೇಕು ? ನಮ್ಮ ಮೊರೆ ಕೇಳುವವರಾರು?

ಸದ್ಯದ ಬೆಳವಣಿಗೆಗಳನ್ನು ಗಮನಿಸುವಾಗ, ಜಯಲಲಿತಾ, ಸಲ್ಮಾನ್ ಖಾನ್ ಗೆ ಅನ್ವಯವಾದಂತಹ ನ್ಯಾಯ ವ್ಯವಸ್ಥೆಯೇ ಶ್ರೀಸಾಮಾನ್ಯನಿಗೂ ಅನ್ವಯವಾಗುತ್ತಾ? ಸಾಮಾನ್ಯನೊಬ್ಬ ಕೊಲೆ ದರೋಡೆ ಮಾಡಿ ಸಿಕ್ಕಿಬಿದ್ದರೆ ಅವನಿಗೂ ಇದೇ ರೀತಿ ಜಾಮೀನು ಸಿಗುತ್ತಾ? ಆತನ ಶಿಕ್ಷೆಗೆ ಉನ್ನತ ನ್ಯಾಯಾಲಯ ತಡೆ ನೀಡುತ್ತದಾ? ಜಾಮೀನು ಬಿಡಿ, ಸಾಮಾನ್ಯ ನಾಗರೀಕರಿಗೆ ಕೆಲವು ಸಲ ಜಾಮೀನು ಅರ್ಜಿ ಸಲ್ಲಿಸಲೂ ಅವಕಾಶವಿರುವುದಿಲ್ಲ. ಅವಕಾಶವಿದ್ದರೂ ಅವನ ಬಳಿ ತಾಕತ್ತಿರುವುದಿಲ್ಲ. ಹಣ ಪೀಕದೆ ಕೆಲವು ವಕೀಲರು ಫೈಲು ಮುಟ್ಟುವುದಿಲ್ಲ. ಅಲ್ಲಿಗೆ ಆತನಿಗೆ ಜೈಲು ತಪ್ಪುವುದಿಲ್ಲ.

ನಮ್ಮ ನ್ಯಾಯಾಂಗ ವ್ಯವಸ್ತೆಯ ಮೇಲೆ ಪ್ರಶ್ನೆಯೇಳಲು ಇನ್ನೂ ಕಾರಣಗಳಿವೆ. ಜಯಲಲಿತಾರಂತಹ ಭೃಷ್ಟ ರಾಜಕಾರಣಿಗೆ ಸುಲಭವಾಗಿ ಬೇಲ್ ಸಿಗುತ್ತದೆ. ಸಲ್ಮಾನ್ ಒಬ್ಬನನ್ನು ಕೊಂದು(ಬೇಕೂಂತಲೇ ಕೊಂದಿದ್ದಲ್ಲವಂತೆ, ಇರಲಿ) ಅದು ಸಾಬೀತಾದರೂ ಆತನ ಶಿಕ್ಷೆಗೆ ತಡೆ ಬೀಳುತ್ತದೆ. ಆದರೆ ನಿರಪರಾಧಿಯಾಗಿದ್ದರೂ ಬಂಧನಕ್ಕೊಳಗಾಗಿ ಕ್ಯಾನ್ಸರಿನೊಂದಿಗೆ ಹೋರಾಡುತ್ತಿದ್ದರೂ ಸಾಧ್ವಿ ಪ್ರಜ್ನಾ ಸಿಂಗ್ ರಂತವರಿಗೆ ಜಾಮೀನು ಸಿಗುವುದಿಲ್ಲ. ಹಲವರನ್ನು ಕೊಂದ ಸಯ್ಯದ್ ಮದನಿಗೆ  ಆರೋಗ್ಯದ ನೆಪದಲ್ಲಿ ಜಾಮೀನು ಕೊಡುವುದಾದರೆ ಸಾಧ್ವಿಗೇಕೆ ಜಾಮೀನು ಕೊಡಬಾರದು? ಹೋಗಲಿ ತನಿಖೆಯನ್ನಾದರೂ ತ್ವರಿತವಾಗಿ ಮಾಡಬಾರದಾ? ಬಿಡಿ. ತ್ವರಿತ ತನಿಖೆಯನ್ನು ನಾವು ಬಯಸಿದರೆ ಅದರಷ್ಟು ಮೂರ್ಖತನ ಮತ್ತೊಂದಿಲ್ಲ. ಇಲ್ಲಿಯ ಸ್ಥಿತಿ ಹೇಗಿದೆಯೆಂದರೆ ಗಂಡ ಹೆಂಡತಿ ಡಿವೋರ್ಸ್ ಗೆ ಅಪ್ಪ್ಲೈ ಮಾಡಿ ವರ್ಷಗಳೇ ಕಳೆದರೂ ನಮ್ಮ ಕೋರ್ಟಿನಿಂದ ಡಿವೋರ್ಸ್ ಸಿಗುವುದಿಲ್ಲ. ಈ ಕೋರ್ಟು, ಕಚೇರಿಯ ಕಂಬ ಸುತ್ತಿಯೇ ಬಸವಳಿಯುತ್ತಾರೆ. ಮದುವೆಯಾಗಿ ಜಗಳವಾಡಿಕೊಂಡಿದ್ದರಿಂದ ಜಾಸ್ತಿ ಈ ಅಲೆದಾಟದಲ್ಲಿ ಹೆಚ್ಚು ಅನುಭವಿಸುತ್ತಾರೆ. ಈಕಡೆ ಇವಳ ಜೊತೆಗೆ ಬಾಳುವ ಹಾಗೂ ಇಲ್ಲ, ಆಕಡೆ ಮತ್ತೊಬ್ಬಳ ಜೊತೆ ಸಂಸಾರ ಹೂಡುವ ಹಾಗೂ ಇಲ್ಲ. ಅಂತಹಾ ಪ್ರಸವ ವೇದನೆ! ಸಣ್ಣ ಸಣ್ಣ ಆಕ್ಸಿಡೆಂಟುಗಳಿಂದ ಹಿಡಿದು ಎಲ್ಲಾ ಕೇಸುಗಳ ಕಥೆಯೂ ಇಷ್ಟೇ. ಕೇಸು ಶುರುವಾಗಿ ತೀರ್ಪು ಬರುವ ಹೊತ್ತಿಗೆ ಹಲವು ನ್ಯಾಯಾಧೀಶರು ಬಂದು ಹೋಗಿರುತ್ತಾರೆ, ಹಲವು ವಕೀಲರು ತಿಂದು ಹೋಗಿರುತ್ತಾರೆ. ಈ ಮಧ್ಯದಲ್ಲಿ ಕೆಲ ಕಕ್ಷಿದಾರರು, ಆರೋಪಿಗಳು ಮೇಲೆ ಹೋಗಿರುತ್ತಾರೆ!

ಇನ್ನೇನಿಲ್ಲ. ನಮ್ಮ ಹಣೆಬರಹವೇ ಇಷ್ಟು ಎಂದುಕೊಳ್ಳಬೇಕಷ್ಟೆ. ಒಮ್ಮೆ ಸಂಭ್ರಮಿಸುವುದು ಮತ್ತೆ ಭ್ರಮನಿರಸನಗೊಳ್ಳುವುದು. ಜಯಲಲಿತಾಗೆ ಶಿಕ್ಷೆಯಾದಾಗ ಭೃಷ್ಟಾಚಾರದ  ಮೂಲವನ್ನೇ ಕಿತ್ತೆವು ಎಂಬಂತೆ ಖುಷಿಪಟ್ಟೆವು. ಆದರೆ ಸುಪ್ರೀಂ ಕೋರ್ಟು ಏನು ಮಾಡಿತು? ಜಾಮೀನು ನೀಡಿತು. ಒಮ್ಮೆ ಜಾಮೀನನ್ನೇ ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್ ಈಗ ಜಯಲಲಿತಾರನ್ನು ನಿರ್ಧೋಷಿ ಎಂದು ತೀರ್ಪಿತ್ತಿದೆ. ಸಲ್ಮಾನ್ ಗೆ ಶಿಕ್ಷೆಯಾದಾಗಲೂ ಅಷ್ಟೆ.  ತಪ್ಪು ಯಾರು ಮಾಡಿದರೇನು ಕಾನೂನು ಎಲ್ಲರಿಗೂ ಒಂದೇ ಎಂದು ಹೆಮ್ಮೆ ಪಟ್ಟೆವು. ಆದರೆ ನಾವುಗಳು ಖುಷಿಪಟ್ಟಷ್ಟೇ ವೇಗದಲ್ಲಿ ಬೇಸರಗೊಳ್ಳುವಂತಹ ಸ್ಥಿತಿಗೆ ನಮ್ಮನ್ನು ನ್ಯಾಯಾಂಗ ವ್ಯವಸ್ಥೆ ತಂದಿಟ್ಟಿದೆ.  ಯಾವುದನ್ನು ನಂಬೋದು ಯಾವುದನ್ನು ಬಿಡೋದು ಹೇಳಿ?

ಹೇಳುವುದಕ್ಕೆ ನಮ್ಮದು ‘ಕಾನೂನು ಎಲ್ಲರಿಗೂ ಒಂದೆ’, ‘ಸತ್ಯಮೇವ ಜಯತೇ!’ ಹೆಹೆ.. ಹೇಳುವುದಕ್ಕೂ ಕೇಳುವುದಕ್ಕೂ ಬಹಳ ಹಿತವಾಗಿದೆ. ಆದರೆ ವಾಸ್ತವದಲ್ಲಿ ಎಲ್ಲಿ ಕಾನೂನು ಎಲ್ಲರಿಗೂ ಒಂದೇ ಆಗಿದೆ? ನಿಜ ಹೇಳಬೇಕೆಂದರೆ ಅದು ಮಂತ್ರಿ, ಸೆಲೆಬ್ರಿಟಿಗಳಿಗೊಂದು ಕಾನೂನು, ಸಾಮಾನ್ಯರಿಗೊಂದು ಎಂಬಂತಿದೆ. ಕಾನೂನು ಎಲ್ಲರಿಗೂ ಒಂದೇ ಎನ್ನುವುದಾದರೆ ಒಂದೋ ಸಲ್ಮಾನ್ , ಜಯಲಲಿತಾಗೆ ಜಾಮೀನು ನೀಡಿದಂತೆ ದೇಶದಲ್ಲಿರುವ ಎಲ್ಲಾ ಅಪರಾಧಿಗಳಿಗೂ ಜಾಮೀನು ಸಿಗಲಿ, ಶಿಕ್ಷೆಗೆ ತಡೆಯಾಜ್ಞೆ ಸಿಗಲಿ. ಇಲ್ಲದಿದ್ದರೆ ಸಲ್ಮಾನ್, ಜಯಲಲಿತಾರಂತಹ ತಪ್ಪೆಸಗಿರುವ ಎಲ್ಲಾ ಸೆಲೆಬ್ರಿಟಿಗಳಿಗೂ ಉಳಿದವರಂತೆ ಶಿಕ್ಷೆ ಜಾರಿಯಾಗಲಿ.  ಅದು ಬಿಟ್ಟು ಒಬ್ಬರಿಗೆ ಜಾಮೀನು ಮತ್ತೊಬ್ಬರಿಗೆ ಶಿಕ್ಷೆಯ ಫರ್ಮಾನು ಹೊರಡಿಸಿದರೆ ಕಾನೂನು ಎಲ್ಲರಿಗೂ ಒಂದೇ ಹೇಗಾದೀತು? ವಿಐಪಿಗಳಿಗೆ ಜೈಲಿನಲ್ಲಿ ಏಸಿ, ಟೀವಿ, ಭರ್ಜರಿ ಊಟ ಉಳಿದವರಿಗೆ ಸಾಮಾನ್ಯ ಬ್ಯಾರಕ್, ಅನ್ನ-ಸಾರು ನೀಡಿದರೆ ಕಾನೂನು ಎಲ್ಲರಿಗೂ ಒಂದೇ ಎನ್ನಲಾಗುತ್ತದೆಯೇ?

ನಿಜವಾಗಿಯೂ ಕಾನೂನು ತಪ್ಪಿತಸ್ತರಿಗೆ ಶಿಕ್ಷೆ ನೀಡಿ, ಶಿಷ್ಟರನ್ನು ರಕ್ಷಿಸುವುದಕ್ಕಾಗಿ ಇರಬೇಕೇ ಹೊರತು ದುಷ್ಟರನ್ನು ರಕ್ಷಿಸುವುದಕ್ಕಾಗಿ ಅಲ್ಲ. ಆದರೆ ನಮ್ಮ ಘನ ಮಂತ್ರಿ ಮಾಗಧರು ತಮ್ಮ ಸ್ವಯಂ ರಕ್ಷಣೆಗಾಗಿ ಕೆಲವು ಕಾನುನುಗಳನ್ನು ತಂದಿದ್ದಾರೆಯೇ ಹೊರತು ನೈಜ ಕಾನೂನನ್ನು ಎತ್ತಿ ಹಿಡಿಯುವುದಕ್ಕಾಗಿ ಅಲ್ಲ.  ಹಿಂದಿನ ಕಾಲದಲ್ಲಿ (ಈಗಲೂ ಕೆಲವು ಹಳ್ಳಿಗಳಲ್ಲಿ ಇದೆ) ಪಂಚಾಯ್ತಿ ಪಧ್ಧತಿ ಇತ್ತಂತೆ. ಯಾರಾದ್ರೂ ತಪ್ಪು ಮಾಡಿದ್ರೆ ಊರಿನ ಮುಖ್ಯಸ್ಥರೆಲ್ಲಾ ಪಂಚಾಯ್ತಿ ನಡೆಸಿ ಆರೋಪಿಗೆ ಅಲ್ಲೆ ಡ್ರಾ ಅಲ್ಲೇ ಬಹುಮಾನ ಕೊಡ್ತಾ ಇದ್ದರಂತೆ. ಅದೂ ಸಹ ವ್ಯತಿರಿಕ್ತ ಪರಿಣಾಮ ಹೊಂದಿತ್ತಾದರೂ ನಮ್ಮ ಈಗಿನ ನಮ್ಮ ನಿಧಾನ ನ್ಯಾಯ ಪಧ್ಧತಿಯನ್ನು ನೋಡುವಾಗ ಅದೇ ಆಗುತ್ತಿತ್ತೆಂದು ಒಮ್ಮೊಮ್ಮೆ ಅನಿಸುತ್ತದೆ. ಏಕೆಂದರೆ ಪ್ರಸ್ತುತ ಜಗತ್ತಿನಲ್ಲಿ ಒಬ್ಬ ಕಟ್ಟಕಡೇಯ ನಾಗರೀಕನಿಗೆ ನ್ಯಾಯವೆಲ್ಲಿ ಸಿಗುತ್ತಿದೆ?  ಸತ್ಯಮೆವ ಜಯತೇ ಎನ್ನಲು ಸಾಧ್ಯವಿದೆಯೇ?!

ಅಭಿವ್ಯಕ್ತಿ ಸ್ವಾತಂತ್ರ್ಯವನ್ನುಪಯೋಗಿಸಿ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೇಯೇ ಹೊರತು ಇದು ನ್ಯಾಯಾಂಗ ನಿಂದನೆಯ ಪ್ರಯತ್ನವಲ್ಲ. ಸತ್ಯಮೇವ ಜಯತೇ!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!