ಪ್ರಚಲಿತ

ಕಲಿಯಲು ಬೇಕಿರುವುದು ಪೂರಕ ವ್ಯವಸ್ತೆಗಳೇ ಹೊರತು ಭಾಗ್ಯಗಳ ಹಂಗಲ್ಲ

ಪಿಯುಸಿ ಅಂದರೆ ಅದನ್ನು ಓದುತ್ತಿರುವವರೆಲ್ಲಾ ಹದಿಹರೆಯದವರೇ. ಸಣ್ಣ ತರಗತಿಗಳ ಮಕ್ಕಳಾಟ ಬಿಟ್ಟು ಮನಸ್ಸು  ಜೀವನದ ದಿಕ್ಕನ್ನು ನಿರ್ಧರಿಸುವ ಮಹತ್ವದ ಘಟ್ಟ. ಪಿಯುಸಿ ಬಳಿಕ ಮುಂದೇನು? ಯಾವ ಕೋರ್ಸಿಗೆ ಸೇರಿಕೊಂಡರೆ ಯಾವ ಕೆಲಸ ಸಿಗಬಹುದು? ತಾನಂದು ಕೊಂಡಿದ್ದ ಕೆಲಸದ ಕಡೆ ಸಾಗಲು ತನಗೆಷ್ಟು ಮಾರ್ಕ್ಸ್ ಬರಬೇಕು? ಪಿಯುಸಿಯಲ್ಲಿ ಎಷ್ಟು ಅಂಕ ಬಂದರೆ ತನಗೆ ಸಿಇಟಿಯಲ್ಲಿ ಒಳ್ಳೆಯ ರಾಂಕ್ ಬರಬಹುದು? ಎಂಬಿತ್ಯಾದಿ ಆಲೋಚನೆಗಳು ಸಾಮಾನ್ಯವಾಗಿ ಪಿಯುಸಿ ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಲ್ಲಿ ನಡೆದೇ ಇರುತ್ತದೆ. ಪರೀಕ್ಷೆ ಬರೆದ ಪ್ರತೀ ವಿದ್ಯಾರ್ಥಿಗಳಿಗೂ ನಿಖರವಾಗಿ ಅಲ್ಲದಿದ್ದರೂ ಒಂದು ಅಂದಾಜಿನ ಮೇಲೆ ತನಗೆ ಇಷ್ಟು ಅಂಕ ಬರುವುದೆಂದು ಊಹಿಸಿರುತ್ತಾರೆ. ಆದರೆ ಅಂತವರ ತಲೆ ಮೇಲೆ ಕೈಯಿಟ್ಟು ಹೊಡೆದಂತೆ ಫಲಿತಾಂಶ ಬಂದರೆ ಹೇಗೆ? ಆತನ ನಿರೀಕ್ಷೇಗಳೆಲ್ಲಾ ತಲೆ ಕೆಳಗಾದರೆ ಹೇಗೆ? ಅದೇ ನೋಡಿ ಆಗಿದ್ದು ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ…

ಹೌದು! ಎಂತಹಾ ಬ್ಲಂಡರ್ ನೋಡಿ. ಇಂಗ್ಲೀಷ್ ಭಾಷೆ ಎಂದಿರಬೇಕಾದಲ್ಲಿ ಫ್ರೆಂಚ್ ಭಾಷೆ. ಎಷ್ಟೋ ಅಂಕ ಬರಬೇಕಾದಲ್ಲಿ ಎಂಟು ಹತ್ತು ಅಂಕಗಳು. ಆರು ವಿಷಯಗಳಿರಬೇಕಾಗಿದ್ದಲ್ಲಿ ಐದು ವಿಷಯಗಳ ಫಲಿತಾಂಶ, ಕೆಲವರು ಪರೀಕ್ಷೆ ಬರೆದಿದ್ದರೂ ಆಬ್ಸೆಂಟ್ ಎಂಬ ಫಲಿತಾಂಶ. ಘೋರ ದುರಂತವೆಂದರೆ, ಪಿಯು ಬೋರ್ಡ್ ಅಧಿಕೃತವಾಗಿ ನೀಡಿದ ವೆಬ್ ಸೈಟ್ ಗಳಲ್ಲಿ ಒಂದೊಂದರಲ್ಲಿ ಒಂದೊಂದು ಫಲಿತಾಂಶ.. ವಾಹ್! ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರುವ ಕಾಲದಲ್ಲಿ ಇನ್ನೂ ಕುಂಟುತ್ತಾ ಸಾಗುತ್ತಿರುವ ನಮ್ಮ ಶಿಕ್ಷಣ ಇಲಾಖೆಗೊಂದು ಸೂಕ್ತ ಪ್ರಶಸ್ತಿ ನೀಡಲೇ ಬೇಕು.

ಯಾಕೆ ಹೀಗೆ ಎಂದು ನಾವು ಯಾರನ್ನೂ ಕೇಳುವ ಹಾಗೂ ಇಲ್ಲ. ಏಕೆಂದರೆ ನಮ್ಮ ವಿದ್ಯಾರ್ಥಿಗಳ ಮೊರೆ ಕೇಳಲು ಶಿಕ್ಷಣ ಸಚಿವರು ಫ್ರೀ ಇಲ್ಲ. ಗ್ರಾಮ ಪಂಚಾಯತ್  ಚುನಾವಣೆ, ನೀತಿ ಸಂಹಿತೆ ಎಂದೆಲ್ಲಾ ಹೇಳಿ ಆಗಿರುವ ತಪ್ಪುಗಳನ್ನು ಶೀಘ್ರವಾಗಿ ಸರಿಪಡಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಂಡರು. ಸಚಿವರಿಂದ ನಿರ್ದೇಶನ ಪಡೆದುಕೊಂಡ ಶಿಕ್ಷಣ ಇಲಾಖೆ ನಿರ್ದೇಶಕರು ‘ನೀವು ಎಷ್ಟು ಬರೆದಿದ್ದೀರೋ ಅಷ್ಟು ಅಂಕಗಳು ಬಂದೆವೆ, ಬೇಕಿದ್ದರೆ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿ’ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಹಾಗಾದರೆ ವಿದ್ಯಾರ್ಥಿಗಳ ಮೊರೆ ಕೇಳುವವರು ಯಾರು ಸ್ವಾಮಿ??

office

ಈ ಶಿಕ್ಷಣ ಇಲಾಖೆಯಲ್ಲಿ ವರ್ಷವೂ ಒಂದಿಲ್ಲೊಂದು ಗೊಂದಲ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಲ್ಲಿಂದ ಹಿಡಿದು ಫಲಿತಾಂಶ ಬರುವವರೆಗೂ ಗೊಂದಲಗಳದ್ದೇ ಕಾರುಬಾರು. ಈ ಬಾರಿಯ ವಿಶೇಷವೇನೆಂದರೆ ಫಲಿತಾಂಶದ ಬಳಿಕವೂ ಗೊಂದಲ ಮುಂದುವರಿದಿದೆ. ಆ ಗೊಂದಲಗಳಾದರೋ ಸಾಮಾನ್ಯವಾದುದಲ್ಲ. ಒಂದು ಜಾಲತಾಣದಲ್ಲಿ ಒಬ್ಬನ ಫಲಿತಾಂಶ ಪಾಸ್ ಎಂದಿದ್ದರೆ, ಆತನ ಫಲಿತಾಂಶ ಇನ್ನೊಂದು ಜಾಲತಾಣದಲ್ಲಿ ಫೈಲ್ ಎಂದಿದೆ. ಒಂದರಲ್ಲಿ ಉತ್ತಮ ಅಂಕ ಬಂದಿದ್ದರೆ, ಮತ್ತೊಂದು ಜಾಲತಾಣದಲ್ಲಿ ಇಲ್ಲ. ಒಂದರಲ್ಲಿ ಫಲಿತಾಂಶ ಬಂದಿದೆ, ಮತ್ತೊಂದರಲ್ಲಿ ಆಬ್ಸೆಂಟ್ ಎಂದಿದೆ. ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದ ಆ ವಿದ್ಯಾರ್ಥಿಗಳು ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು? ದೇವನೇ ಬಲ್ಲ. ಇದಕ್ಕೆ ಮಾನ್ಯ ಶಿಕ್ಷಣ ಸಚಿವರು ನೀಡುವ ಸಬೂಬು ಏನೆಂದರೆ ‘ಇದಕ್ಕೆಲ್ಲಾ ಆ ಖಾಸಗಿ ವೆಬ್ ಸೈಟ್ ಗಳೇ ಹೊಣೆ, ಅವುಗಳು ಮಾಡಿರುವ ಅವಾಂತರದಿಂದ ಇವತ್ತು ಎಲ್ಲರಲ್ಲೂ ಗೊಂದಲವುಂಟಾಗಿದೆ. ಅವುಗಳ ಮೇಲೆ ಕೇಸು ದಾಖಲಿಸಿದ್ದೇವೆ, ನಮ್ಮ ಅಧಿಕೃತ ವೆಬ್ ಸೈಟಿನಲ್ಲಿ ಬಂದಿರುವ ಫಲಿತಾಂಶ ಸರಿಯಾದದ್ದು.’ ಮಾನ್ಯ ಸಚಿವರೇ, ಶಿಕ್ಷಣ ಇಲಾಖೆ ವೆಬ್ ಸೈಟಿನಲ್ಲಿ ಬಂದಿದ್ದೇ ಸರಿಯೆಂದು ಹೇಗೆ ನಂಬುವುದು? ಅದರಲ್ಲೂ ಲೋಪ ದೋಷಗಳಿಲ್ಲ ಎನ್ನಲು ಸಾಧ್ಯವಿದೆಯಾ? ಖಾಸಗಿ ವೆಬ್ ಸೈಟ್ ಗಳ ಮೇಲೆ ಗೂಬೆ ಕೂರಿಸುವುದಾದರೆ ಓಕೆ, ಆದರೆ ಅವುಗಳ ಕಾರ್ಯಕ್ಷಮತೆಯನ್ನು ಮೊದಲೇ ಪರೀಕ್ಷಿಸಿರಲಿಲ್ಲ ಯಾಕೆ? ಫಲಿತಾಂಶಕ್ಕೂ ಮುನ್ನ ಆ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಹೇಗೆ ಬರುತ್ತಿದೆ ಎಂದು ಪರೀಕ್ಷಿಸಿಲ್ಲ ಎಂದಾದರೆ, ಅದು ಶಿಕ್ಷಣ ಇಲಾಖೆಯ ತಪ್ಪಲ್ಲವೇ? ಈ ತಪ್ಪನ್ನು ಯಾರ ಮೇಲೆ ಹೊರಿಸುತ್ತೀರಿ ಸಾರ್?

ಮತ್ತೊಂದು ಗ್ರೇಸ್ ಮಾರ್ಕ್! ತಪ್ಪು ಪ್ರಶ್ನೆಗಳಲಿಗೆ ಉತ್ತರಿಸಿದವರಿಗೆ ಮಾತ್ರ ಅಂಕ ನೀಡಬೇಕು ಎನ್ನುವ ನಿಮ್ಮ ಮಾತು ಸರಿಯೇ. ಆದರೆ ತಪ್ಪು ಪ್ರಶ್ನೆಗಳೇ ಹೇಗೆ ಬರಬೇಕು? ಪ್ರಶ್ನೆ ಪತ್ರಿಕೆ ಮಾಡಿದವರಿಗೆ ವಿಷಯದ ಬಗೆಗೆ ಸರಿಯಾದ ಜ್ಞಾನ ಇರಲಿಲ್ಲವೇ? ಒಬ್ಬ ತಯಾರಿಸಿದ ಪತ್ರಿಕೆಯನ್ನು ಮತ್ತೊಬ್ಬ ಪರೀಕ್ಷಿಸುವ ವ್ಯವಸ್ಥೆ ನಮ್ಮ ಶಿಕ್ಷಣ ಇಲಾಖೆಯಲ್ಲಿಲ್ಲವೇ? ಕೆಲವು ವಿದ್ಯಾರ್ಥಿಗಳಂತೂ ನಾವು ತಪ್ಪು ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ, ಆದರೂ ಅಂಕ ಕೊಟ್ಟಿಲ್ಲ ಎಂದು ವಿಶ್ವಾಸದಿಂದ ಹೇಳುತ್ತಾರಲ್ಲ ಇದಕ್ಕೇನು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿ ಎಂದು ಹೇಳುತ್ತೀರಾ ಸಾಹೇಬ್ರೇ?

ಬೇಕಿದ್ದರೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಎಂದೆಲ್ಲಾ ಬಿಟ್ಟಿ ಸಲಹೆ ನೀಡುತ್ತೀರಲ್ಲವೆ, ನಿವೆಲ್ಲಾ ವಿಷಯದ ಗಂಭೀರತೆಯನ್ನು ಅರಿತಿದ್ದೀರಾ? ವಿದ್ಯಾರ್ಥಿಗಳ ಭವಿಷ್ಯದ ಬಗೆಗೆ ಕಿಂಚಿತ್ತಾದರೂ ಕಾಳಜಿ ಹೊಂದಿದ್ದೀರಾ? ಇವತ್ತು ಫಲಿತಾಂಶ ಬರುವುದಕ್ಕೂ ಮುನ್ನವೇ ಹೆದರಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ನಮ್ಮ ಮುಂದಿದೆ. ಯಾರೋ ಒಬ್ಬ ಫಲಿತಾಂಶಕ್ಕೆ ಹೆದರಿ ಮನೆ ಬಿಟ್ಟು ಹೋಗಿದ್ದಾನಂತೆ ಎಂಬ ಸುದ್ದಿಗಳು ಮೊನ್ನೆ ಕೇಳಿ ಬಂದಿದೆ. ಫಲಿತಾಂಶಕ್ಕೆ ಮೊದಲೇ ಇಂತಹಾ ಘಟನೆಗಳು ಸಂಭವಿಸಿರುವಾಗ, ಇನ್ನು ಫಲಿತಾಂಶ ಪ್ರಕಟಗೊಂಡು ಅದರಲ್ಲಿ ಫೈಲ್ ಎಂದಿದ್ದರೆ ಆ ವಿದ್ಯಾರ್ಥಿಗೆ ಹೇಗಾಗಿರಬಹುದು?  ಆತನಿಗೆ ಅದೆಷ್ಟು ಬೇಸರವಾಗಿರಬಹುದು? ಅದೆಷ್ಟು ಜನ ಅನಾಹುತ ಮಾಡಿಕೊಂಡಿರಬಹುದು? ‘ವಿದ್ಯಾರ್ಥಿಗಳ, ಪೋಷಕರು ಆತಂಕ ಪಡಬೇಕಿಲ್ಲ’ ಎಂದು ನೀವದಷ್ಟೇ ಹೇಳಿದರೂ ಆ ಮುಗ್ದ ಮಕ್ಕಳ ಆತಂಕ ದೂರವಾದೀತೇ?

kimmane1_2414568g

ಕಿಮ್ಮನೆ ರತ್ನಾಕರವರು ಶಿಕ್ಷಣ ಸಚಿವರಾದ ನಂತರ ಇಲಾಖೆಯಲ್ಲಿ ನಡೆದ ಅವಾಂತರಗಳು ಒಂದೆರಡಲ್ಲ. ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪಠ್ಯ ಪುಸ್ತಕ ಕೊರತೆಯುಂಟಾಯಿತು. ಇರಲಿ ಹಿಂದಿನ ಸರ್ಕಾರವನ್ನು ದೂರೋಣ. ಆಮೇಲೆ ಹೋದ ವರ್ಷ ಪಿಯುಸಿ ಪ್ರಶ್ನೆ ಪತ್ರಿಕೆ ಬಯಲಿನ ಭೂತ ಕಾಡಿತು. ಪರೀಕ್ಷೆಗಳನ್ನು ಮುಂದೂಡಿ ಸರ್ಕಾರ ಕೈ ಚೆಲ್ಲಿತು. ಪ್ರಶ್ನೆ ಪತ್ರಿಕೆ ಬಯಲಿನ ಹಿಂದಿರುವ ಮಾಫಿಯಾವನ್ನು ಬಯಲಿಗೆಳೆದು  ಶಿಕ್ಷಣ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತಂದ ರಶ್ಮಿ ಮಹೇಶರನ್ನು ವರ್ಗಾವಣೆ ಮಾಡಿತು. ನಂತರ ನಡೆದ ಟಿಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಹ ಪರೀಕ್ಷೆ ಮೊದಲೇ ಬಯಲಾಗಿ ಪರೀಕ್ಷೆಗಳು ಅರ್ಧದಲ್ಲೇ ರದ್ದಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಂದು ಬಾರಿ ಫೇಲಾಗಿ ಮತ್ತೆ ಪರೀಕ್ಷೆ ಕಟ್ಟಿದ್ದ ಅಭ್ಯರ್ಥಿಗಳನ್ನು ಖಾಸಗೀ ಅಭ್ಯರ್ಥಿಗಳೆಂದು ಪರಿಗಣಿಸಲಾಗುವುದು ಎನ್ನುವ ಮೂಲಕ ಮತ್ತೊಂದು ವಿವಾದಕ್ಕೆ ಕಾರಣವಾಯ್ತು ಶಿಕ್ಷಣ ಇಲಾಖೆ.  ಅಹಿಂದ ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ತಂದು ಅಲ್ಲೂ ಕೈಸುಟ್ಟುಕೊಂಡಿತು.  ಇಷ್ಟೆಲ್ಲಾ ಅವಾಂತರಗಳಾಗುತ್ತಿದ್ದರೂ ಮಾನ್ಯ ಸಚಿವರು  ಮಾತ್ರ… ಉಹು… ಶಿಕ್ಷಣ ಇಲಾಖೆಗಯ ಈ ಎಲ್ಲಾ ದುರವಸ್ತೆಗಳನ್ನು ಸರಿಪಡಿಸಲು ಪ್ರಯತ್ನಿಸಲೇ ಇಲ್ಲ. ಸಚಿವರು ಶಿಕ್ಷಣ ಇಲಾಖೆಗೆ  ಕಾಯಕಲ್ಪ ನೀಡಲು ಏನು ಕ್ರಮ ಕೈಗೊಂಡಿದ್ದಾರೆ,ಏನು ಮುಂದಾಲೋಚನೆ ಹಾಕಿಕೊಂಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಪರೀಕ್ಷೆಗಳು ಬರುತ್ತಿದೆ, ಫಲಿತಾಂಶ ಘೋಷಣೆಯಾಗಬೇಕಿದೆ, ಹಿಂದಿನ ವರ್ಷ ಯಾವುದೆಲ್ಲ ತಪ್ಪುಗಳಾಗಿದೆ, ಅದನ್ನೆಲ್ಲಾ ಸರಿಪಡಿಸಿಕೊಂಡು ಹೋಗಲು ಏನೇನು ಬದಲಾವಣೆಗಳು ತರಬೇಕು ಎಂಬುದಕ್ಕೆ ಯಾವುದೇ ಪ್ರಯತ್ನಗಳು ಸಾಗಿಲ್ಲ. ಅದು ಬಿಟ್ಟು ವರ್ಷವೂ ‘ಯುಧ್ಧಕಾಲೇ ಶಸ್ತ್ರಾಭ್ಯಾಸ ಎಂಬಂತೆ ಕಡೆಗಳಿಗೆಯಲ್ಲಿ ಸಿಧ್ಧತೆ ಮಾಡಿಕೊಂಡು ಏನಾದರೂ ಅವಾಂತರಗಳನ್ನು ಸೃಷ್ಠಿಸುತ್ತಿದೆ.

ಕಿಮ್ಮನೆಯವರು ಸಭ್ಯರು, ದಿನಕ್ಕೆ ಹದಿನಾರು ಘಂಟೆ ಕೆಲಸ ಮಾಡುತ್ತಾರೆ ಎಂದು ಕೇಳಿದ್ದೇವೆ.. ಆದರೆ ಒಬ್ಬ ಉತ್ತಮ ಆಡಳಿತಗಾರನಾಗಲು ಅದಷ್ಟು ಸಾಲದು. ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವ, ಅದನ್ನು ಪರಿಹರಿಸುವ ಸಾಮರ್ಥ್ಯವೂ ಬೇಕು. ನಮ್ಮ ಕಿಮ್ಮನೆಯವರು ವಿದ್ಯಾರ್ಥಿಗಳು ಮೂರು ದಿನದಿಂದ ಪ್ರತಿಭಟಿಸುತ್ತಿದ್ದರೂ ಅವರ ದೂರನ್ನು ಆಲಿಸದೆ,  ಸಮಸ್ಯೆ ಪರಿಹರಿಸಿಕೊಳ್ಳದೆ  ಕಿಮ್ಮನೆಯನ್ನು ಸುಮ್ಮನೆ ಎನ್ನುವುದು ಸುಮ್ಮನೆ ಅಲ್ಲ ಎಂದು ಸಾಬೀತು ಮಾಡಿದ್ದಾರೆ.!

ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿ ಎಂದು ಬಿಟ್ಟಿ ಸಲಹೆ ಕೊಡುವ ಶಿಕ್ಷಣ ಇಲಾಖೆಗೆ ನಮ್ಮದೂ ಕೆಲವು ಸಲಹೆಗಳಿವೆ. ಮರುಮೌಲ್ಯಮಾಪನ, ಫೋಟೊಕಾಪಿಗೆ ಸಾವಿರಾರು ರೂಗಳನ್ನು ಪಡೆದುಕೊಳ್ಳುವ ಇಲಾಖೆ ಅರ್ಜಿ ಹಾಕಿದವನು ಹೆಚ್ಚು ಅಂಕ ಪಡೆದರೆ ಅರ್ಜಿದಾರನ ಸಂಪೂರ್ಣ ಹಣವನ್ನು ವಾಪಾಸು ಮಾಡುವ ವ್ಯವಸ್ತೆ ತರಲಿ. ಪರೀಕ್ಷೆಗೆ ಅರ್ಜಿ ಹಾಕುವಲ್ಲಿಂದ ಹಿಡಿದು ಫಲಿತಾಂಶದವರೆಗೂ ಯಾವುದೇ ಗೊಂದಲಗಳಿಲ್ಲದಂತಹ ‘ಸ್ಟೂಡೆಂಟ್ ಫ್ರೆಂಡ್ಲಿ’ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳಲಿ. ನಮಗಿಂದು ಕಲಿಯಲು ಬೇಕಾಗಿರುವುದು ಪೂರಕ ವ್ಯವಸ್ತೆಗಳೇ ಹೊರತು ಯಾವುದೇ ಭಾಗ್ಯಗಳ ಹಂಗಲ್ಲ.!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!