ಪ್ರಚಲಿತ

ಅಜಾತ ಶತ್ರು ‘ಭಾರತ ರತ್ನ’ರಾದುದು ಸುಮ್ಮನೇ ಅಲ್ಲ!

ಇಲ್ಲಾರೀ… ವಾಜಪೇಯಿ ಬಗ್ಗೆ ಎಷ್ಟು ಬರೆದರೂ ಸಾಕೆನಿಸುತ್ತಿಲ್ಲ.ಅವರ ಬಗ್ಗೆ ಸಂಶೋಧಿಸಿದಷ್ಟೂ ಮುಗಿಯುತ್ತಿಲ್ಲ. ಹೊಗಳಿದಷ್ಟೂ ಅಕ್ಷರಗಳು ಸಾಕಾಗುತ್ತಿಲ್ಲ. ಅಕ್ಷರಗಳೇ ಸಿಗುತ್ತಿಲ್ಲ. ಒಂದೇ ವಿಷಯದ ಬಗ್ಗೆ ಮತ್ತೆ ಮತ್ತೆ ಬರೆಯಲು ಬೋರೂ ಆಗುತ್ತಿಲ್ಲ. ಖಂಡಿತವಾಗಿಯೂ ಅವರ ಬಗ್ಗೆ ಓದಲು ನಿಮಗೂ ಬೋರಾಗುವುದಿಲ್ಲ.  ಸಾಕು ಸಾಕೆಂದರೂ ಮತ್ತೆ ಓದೋಣವೆಂದೆನಿಸುತ್ತದೆ. ಒಮ್ಮೆ ಶುರು ಮಾಡಿದರೆ ಮುಗಿಯುವವರೆಗೂ ಕದಲಲೂ ಮನಸಾಗುವುದಿಲ್ಲ. ಅಂತಹಾ ಒಂದು ಇಂಟರೆಸ್ಟಿಂಗ್ ಪೊಲಿಟಿಕಲ್ ಫಿಗರ್‍ ಯಾರದ್ರೂ ದೇಶದಲ್ಲಿ ಇದ್ರೆ ಅದು ನಮ್ಮ ಅಟಲ್ ಜೀ ಮಾತ್ರ

ಇದುವರೆಗೆ ದೇಶ ಕಂಡಿರುವ ನಂ1 ರಾಜಕಾರಣಿ ಯಾರು ಎಂದು ಕೇಳಿದರೆ ನಮ್ಮೆಲ್ಲರ ಒಕ್ಕೊರಲ ಉತ್ತರ – ಅಟಲ್ ಬಿಹಾರಿ ವಾಜಪೇಯಿ. ನಿಸ್ಸಂಶಯವಾಗಿಯೂ ಹೌದು. ಲಾಲ್ ಬಹದ್ದೂರ್ ಶಾಸ್ತ್ರಿ ಸ್ವಲ್ಪ ಸ್ಪರ್ಧೆಯೊಡ್ಡುತ್ತಾರದರೂ ವಾಜಪೇಯಿಯವರು ಸ್ವಲ್ಪ ಜಾಸ್ತಿನೇ.  ಅಡ್ವಾಣಿಯವರು ಸಮಕಾಲೀನರಾದರೂ ಅಟಲ್ ಗೆ ಸರಿಸಾಟಿಯಲ್ಲ. ಯಾರನ್ನೇ ತಂದು ನಿಲ್ಲಿಸಿದರೂ ಅಟಲ್ ಗೆ ಹೋಲಿಕೆಯಿಲ್ಲ. ಹಿಂದೆಂದೂ ಹುಟ್ಟಿಲ್ಲ ಮುಂದೆಂದೂ ಹುಟ್ಟಲ್ಲ ಎಂದರೂ ಹೆಚ್ಚಾಯಿತು ಎನಿಸುವುದಿಲ್ಲ.

ರಾಜಕೀಯ, ಸರ್ಕಾರ, ಸಾರ್ವಜನಿಕ ಜೀವನದಲ್ಲಿ ಹಗರಣಗಳು ಸರ್ವೇ ಸಾಮಾನ್ಯ. ಆರೋಪಗಳು ಯಾರನ್ನೂ ಬಿಟ್ಟಿಲ್ಲ. ಅದರಲ್ಲೂ ಅಧಿಕಾರದ್ದಲ್ಲಿದ್ದರಂತೂ  ಕೇಳುವುದೇ ಬೇಡ. ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ಚುನಾವಣಾ ಅಕ್ರಮದ ಆರೋಪ, ರಾಜೀವಗಾಂಧಿ ಸಮಯದಲ್ಲಿ ಬೋಫೋರ್ಸ್ ಹಗರಣ, ಜಾರ್ಜ್ ಫೆರ್ನಾಂಡಿಸ್ ಮೇಲೆ ಶವ ಪೆಟ್ಟಿಗೆ ಹಗರಣದ ಆರೋಪ, ಮನಮೋಹನ್ ಸಿಂಗ್ ಮೇಲೆ ಕಲ್ಲಿದ್ದಲು ಹಂಚಿಕೆ ಅಕ್ರಮ ಆರೋಪ, ಅಡ್ವಾಣಿ ಮೇಲೆ ಹವಾಲ ಲಂಚದ ಆರೋಪ. ಅಷ್ಟೇ ಏಕೆ ಪ್ರಧಾನಿ ಮೋದಿ ಮೇಲೆ ಗೋಧ್ರಾ ನರಮೇಧ, ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಆರೋಪಗಳು ಕೇಳಿಬಂದಿದ್ದವು. ಎಲ್ಲ ಬಿಡಿ, ರಾಮಾಯಣದ ಕಾಲದಲ್ಲಿ ಪ್ರಭು ಶ್ರೀರಾಮಚಂದ್ರನ ಮೇಲೆಯೇ ಆರೋಪಗಳು ಕೇಳಿ ಬಂದಿದ್ದವು. ಮೇಲಿನ ಆರೋಪಗಳೆಲ್ಲ ನಿಜವೇ ಆಗಬೇಕೆಂದಿಲ್ಲ, ಸುಳ್ಳೂ ಇರಬಹುದು, ರಾಜಕೀಯ ಪ್ರೇರಿತವಾಗಿರಬಹುದು, ವೈಯಕ್ತಿಕ ದ್ವೇಷದಿಂದಾಗಿರಬಹುದು, ಉದ್ದೇಶಪೂರ್ವಕವೇ ಇರಬಹುದು. ಆದರೆ ಒಂದು ಪಕ್ಷದ ಉನ್ನತ ಸ್ಥಾನ ಹೊಂದಿರುವವ, ಪ್ರಧಾನ ಮಂತ್ರಿ ಎಂದ ಮೇಲೆ ಆತನ ಮೇಲೆ ಒಂದಾದರೂ ಆರೋಪವಿರದಿರಲು ಸಾಧ್ಯವಿಲ್ಲ. ಆದರೆ ಸಾರ್ವಜನಿಕ ಜೀವನದಲ್ಲಿ ಅಂತಹ ಒಂದೇ ಒಂದು ಆರೋಪಗಳಿಗೆ ಸಣ್ಣ ಆಸ್ಪದವೂ ನೀಡದೆ ಬದುಕುವುದಿದೆಯಲ್ಲಾ ಅದರಷ್ಟು ಮಹತ್ತರ ಸಾಧನೆ ಮತ್ತೊಂದಿಲ್ಲ. ಅಂತವರನ್ನು Mr. Perfect ಅಂತ ಕರೆಯಬಹುದು. ಅಂತಹಾ ವೆರಿ ರೇರ್  ರಾಜಕಾರಣಿಗಳಲ್ಲಿ ವಾಜಪೇಯಿ ಒಬ್ಬರು ಮತ್ತು ಹೆಚ್ಚಿನಂಶ ಅವರೊಬ್ಬರೇ….!!

ಮನಮೋಹನ್ ಸಿಂಗ್ ಅವರನ್ನೇ ನೋಡಿ.. 10 ವರ್ಷಗಳಲ್ಲಿ ತಿಂದಿದ್ದನ್ನೆಲ್ಲಾ ಈಗ ಕಕ್ಕುತ್ತಿದ್ದಾರೆ. ವಿಪರ್ಯಾಸವೆಂದರೆ ತನ್ನ ತೆಕ್ಕೆಯಲ್ಲಿದ್ದ  ಕಲ್ಲಿದ್ದಲ್ಲನ್ನು ತಿನ್ನಿಸಿದ್ದು ಬೇರೆಯವರಿಗೆ, ಆದರೆ ಕಕ್ಕುತ್ತಿರುವವರು ಸ್ವತಃ ಮನಮೋಹನ್ ಸಿಂಗ್. ಸ್ವಲ್ಪ ಸಾತ್ವಿಕ (ಸ್ವಲ್ಪ ಅಲ್ಲ, ಜಾಸ್ತೀನೆ) ಸಿಂಗ್ ತಮ್ಮ ಸರಕಾರವಿರುವವರೆಗೂ ಸಿಬಿಐ ಮತ್ತು ಸುಪ್ರೀಂ ಕೋರ್ಟ್ ನಿಂದ ತಪ್ಪಿಸಿಕೊಂಡರು. ಆದರೀಗ??? ತೀರ್ಥಯಾತ್ರೆ ಮಾಡಿಕೊಂಡು  ವಿಶ್ರಾಂತಿ ಜೀವನ ಸಾಗಿಸಬೇಕಿದ್ದ ಸಿಂಗ್ ಕೋರ್ಟ್ ಯಾತ್ರೆ ಮಾಡುವಂತಾಗಿದೆ. ಅದೂ ‘ನಾನು ಅಮಾಯಕ, ನನ್ನದೇನೂ ತಪ್ಪಿಲ್ಲ’ ಎಂಬ ಬೋರ್ಡ್ ತಲೆಗೆ ಕಟ್ಟಿಕೊಂಡು. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತಿಗೆ ತಿಳಿಯುವುದಿಲ್ಲ ಎನ್ನುವುದು ಸುಳ್ಳು ಎನ್ನುವುದು ಈಗ ಅರಿವಾಗಿರಬಹುದು MMS ಗೆ. ಯಾಕೆ ಹೀಗಾಯ್ತು? ಆರು ವರ್ಷಗಳ ಕಾಲ ದೇಶ ಮುನ್ನಡೆಸಿದ್ದ ಅಟಲ್ ಜೀಯ ಮೇಲೂ ಇಂತಹಾ ಒಂದೇ ಒಂದು ಆರೋಪಗಳಿಲ್ಲ ಏಕೆ?? ಏಕೆ ಅವರನ್ನು ಕೋರ್ಟ್ ವಿಚಾರಣೆಗೆಳೆಯಲಿಲ್ಲ?  ಏಕೆಂದರೆ ಅಟಲ್ ಜೀ. ಅಧಿಕಾರದಲ್ಲಿದ್ದಷ್ಟು ಸಮಯ ಸ್ವಚ್ಛಂದ ಜೀವನ ಸಾಗಿಸಿದ್ದರು. ಸರ್ಕಾರ ನಡೆಸುವಾಗ ಅಚಲವಾದ ನಿರ್ಧಾರಗಳನ್ನು ಕೈಗೊಂಡರೇ ವಿನಹಾ ಸಿಂಗ್ ತರಹ ತನ್ನ ಮೀಸೆಯಡಿ ಅಕ್ರಮಗಳಿಗೆಲ್ಲಾ ಆಸರೆ ನೀಡಿ ಬುಡಕ್ಕೆ ಬಂದಾಗ ತಾನು ಅಮಾಯಕನೆಂಬ ಪೋಸು ಕೊಡಲಿಲ್ಲ. 13 ದಿನಗಳಲ್ಲಿ ರಾಜೀನಾಮೆ ಕೊಡುವಾಗಲೂ ಅಷ್ಟೇ! ನಾನು ಅಮಾಯಕ ಎಂದು ದೇಶದ ಮುಂದೆ ಅಳಲಿಲ್ಲ. ಮನಸ್ಸು ಮಾಡಿದ್ದರೆ ಅಟಲ್ ಏನು ಬೇಕಾದರೂ ಮಾಡಬಹುದಿತ್ತು. ಕೆಲವು ಸಂಸದರನ್ನೂ ಖರೀದಿಸಬಹುದಿತ್ತು ಆದರೆ ‘ವೀ ಡಿಡ್ ನಾಟ್ ಯೂಸ್ ಸೂಟ್ಕೇಸ್ ಟು ಕನ್ವರ್ಟ್ ಮೈನಾರಿಟಿ ಇಂಟು ಮೆಜಾರಿಟಿ’ . ಎನ್ನುತ್ತಾ ರಾಜೀನಾಮೆ ಎಸೆದವರು ಅಟಲ್. ರಾಜೀನಾಮೆ ಎಸೆದಿದ್ದು ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕಲ್ಲ. ದೇಶದ ಪ್ರಧಾನ ಮಂತ್ರಿ ಸ್ಥಾನಕ್ಕೆ!

ಭಾರತದಂತಹ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಒಂದು ರಾಜಕೀಯ ಪಕ್ಷ ಕಟ್ಟುವುದೆಂದರೆ ಅದು ಕಡ್ಲೆಪುರಿ  ತಿಂದಂತಲ್ಲ. ಕಟ್ಟುವುದಾದರೂ ಅಷ್ಟು ಕಷ್ಟವೇನಲ್ಲ, ಆದರೆ ಕಡೆಯವರೆಗೂ ಕೊಂಡೊಯ್ಯುವುದಿದೆಯಲ್ಲ, ದೇವರಾಣೆಗೂ ಸುಲಭದ ಮಾತಲ್ಲ.  ನಮ್ಮ ಆಮ್ ಆದ್ಮಿ ಪಾರ್ಟಿ ಇದೆಯಲ್ಲಾ, ಪಕ್ಷ ಸ್ಥಾಪನೆಯಾಗಿ ಅಷ್ಟು ಬೇಗ ಅಧಿಕಾರಕ್ಕೆ ಬಂತಲ್ಲಾ?  ಅದರ ಪ್ರಮುಖ ಬೇಸ್ ಯಾವುದು ಗೊತ್ತೇ? ಟ್ವಿಟ್ಟರ್ ಮತ್ತು ಫೇಸ್ ಬುಕ್. ಇವೆರಡನ್ನು ಉಪಯೋಗಿಸಿಕೊಂಡು ಆಪ್ ದೆಹಲಿಯಾದ್ಯಂತ  ಸೀಟುಗಳನ್ನು ಗೆದ್ದಿದ್ದು ಮತ್ತು ದೇಶದಾದ್ಯಂತ ಪಾರ್ಟಿ ಹಬ್ಬಿದ್ದು. ಆದರೆ ವಾಜಪೇಯಿ ವಿಷಯಕ್ಕೆ ಬಂದರೆ, 1960 ರ ಜನಸಂಘ ಮತ್ತು 1980 ರ ಬಿಜೆಪಿ ಪಾರ್ಟಿ ಕಟ್ಟುವ ಸಂದರ್ಭದಲ್ಲಿ , ಟ್ವಿಟ್ಟರ್, ಫೇಸ್ ಬುಕ್ ಆಚೆಗಿರಲಿ ಸರಿಯಾಗಿ ಪೋಸ್ಟ್ ಲೆಟರ್ ಗಳೇ ಇರಲಿಲ್ಲ. ಬಸ್, ರಸ್ತೆಗಳಂತೂ ಅಷ್ಟಕ್ಕಷ್ಟೇ. ಪ್ರಚಾರಕ್ಕಾಗಿ ವಿಮಾನವೇರುವುದಕ್ಕೆ ಯಾರಲ್ಲಿಯೂ ಹಣವಿಲ್ಲ. ಅಲ್ಲೊಂದು ಇಲ್ಲೊಂದು ರೈಲುಗಳು ಸಿಕ್ಕರೆ ಅದುವೇ ಹೆಚ್ಚು. ಅದು ಬಿಟ್ಟರೆ ತಮ್ಮ ಸ್ವಂತ ಕಾಲಿಗೆ ಬುದ್ಧಿ ಹೇಳಿಕೊಂಡು ದೇಶದಾದ್ಯಂತ ತಿರುಗಿ ಪಕ್ಷ ಕಟ್ಟಿದವರು ಅಟಲ್. (ಅಡ್ವಾಣಿ ಮತ್ತಿತರರ ಪಾತ್ರವೂ ಮಹತ್ವದ್ದೇ). ಅಂತಹಾ ಪಕ್ಷ ಸುಮಾರು 16 ವರ್ಷಗಳ ನಂತರ ದೇಶದ ಚುಕ್ಕಾಣಿ ಹಿಡಿಯಲಿ ತಯಾರಾಗಿತ್ತು. ಆದರೂ ಬಹುಮತಕ್ಕೆ ಒಂದು ಮತದ ಕೊರತೆ ಇದ್ದ ಕಾರಣ ವಿಶ್ವಾಸ ಮತಕ್ಕೂ ಎರಡು ದಿನ ಮೊದಲೇ ರಾಜೀನಾಮೆ ಇತ್ತವರು ಅಟಲ್ ಜೀ. ತಾನಾಗೆ ಬಂದ ರಾಜಯೋಗವನ್ನು ಬಿಟ್ಟು ಕೊಡುವಂತಹ ಇಂತಹಾ ಹುಚ್ಚ ಬೇರೆ ಯಾರಾದರೂ ಸಿಕ್ಕಾರ?

ನಮ್ಮ ಜೀವನದಲ್ಲಿ ಒಬ್ಬನಾದರೂ ಶತ್ರು ಸಿಗದೇ ಇರದು. ಒಂದಲ್ಲಾ ಒಂದು ವಿಷಯದಲ್ಲಿ ಯಾರಾದರೂ ನಮ್ಮನ್ನು ದ್ವೇಷಿಸದೇ ಇರರು. ರಾಜಕಾರಣಿಗಳಲ್ಲಂತೂ ಶತ್ರುಗಳಿಲ್ಲದೇ ಮಾತೇ ಇರದು. ಆದರೆ ವಾಜಪೇಯಿ ಇದ್ದಾರಲ್ಲ, ಅಜಾತ ಶತ್ರು. ಶತ್ರುಗಳೇ ಇಲ್ಲ,ಮಿತ್ರರೇ ಎಲ್ಲಾ. ಸಾಧ್ಯವಿದೆಯಾ ಯಾರಿಗಾದರೂ? ಒಬ್ಬನೇ ಒಬ್ಬನೂ ತನ್ನನ್ನು ದ್ವೇಷಿಸದಂತೆ ಬದುಕಲು ಸಾಧ್ಯವಿದೆಯಾ? ಬಿಜೆಪಿಯೆಂದರೆ ಉಗ್ರವಾಗಿ ಉರಿದು ಬೀಳುತ್ತಿದ್ದವರೂ ಕೂಡಾ ಅಟಲ್ ಜೀಯೆಂದರೆ ಪ್ರೀತಿಸುತ್ತಿದ್ದರು. ‘ವಾಜಪೆಯಿ ತೊ ಅಚ್ಚಾ ಹೈ ಮಗರ್ ಪಾರ್ಟಿ ಟೀಕ್ ನಹೀ’ ಎನ್ನುವ ಮಾತು ಅವಾಗಿನ ವಿರೋಧ ಪಕ್ಷಗಳಲ್ಲಿ ಪ್ರಚಲಿತದಲ್ಲಿತ್ತು. ರಾಮಾಯಣದ ಯುದ್ಧದಲ್ಲಿ ರಾವಣ ಸತ್ತು ಬಿದ್ದಾಗ ಅವನ ಅಂತ್ಯ ಸಂಸ್ಕಾರ ಮಾಡಲು ವಿಭೀಷಣ ನಿರಾಕರಿಸುತ್ತಾನೆ. ಆವಾಗ ರಾವಣನ ಕಡುವೈರಿ ಶ್ರೀರಾಮ ಮಾರ್ಮಿಕವಾಗಿ  ಒಂದು ಮಾತು ಹೇಳುತ್ತಾನೆ, ‘ದ್ವೇಷ ವಿಷಯದ ಮೇಲೇಯೇ ಹೊರತು ವ್ಯಕ್ತಿಯ ಮೇಲಲ್ಲ, ಅಂತ್ಯಕ್ರಿಯೆ ನೆರವೇರಿಸು’ ಎಂದು. ವಾಜಪೇಯಿ ವಿಷಯದಲ್ಲಿ, ದ್ವೇಷ ವಿಷಯದ ಮೇಲೂ ಇಲ್ಲ, ವ್ಯಕ್ತಿಯ ಮೇಲೂ ಇಲ್ಲ. ವಾಜಪೇಯಿಯವರ ಬಿಜೆಪಿಗೆ ಸಂಬಂಧಿಸಿದ ವಿಷಯಗಳಿಗೆ ಕೆಲವರಲ್ಲಿ ಭಿನ್ನಾಭಿಪ್ರಾಯಗಳಿದ್ದಿರಬಹುದು. ಆದರೆ ರಾಷ್ಟೀಯ ಹಿತಾಸಕ್ತಿಗಳ ವಿಚಾರದಲ್ಲಿ ಯಾರಿಗೂ ದ್ವೇಷವಿರಲಿಲ್ಲ. ಯಾವುದೇ ಕಾರಣವಿಲ್ಲದೇ ಮೋದಿಯನ್ನು ದ್ವೇಷಿಸುತ್ತಾರಲ್ಲ ನಿತೀಶ್ ಕುಮಾರ್ ಅವರು ಕೂಡಾ ಅಟಲ್ ಜೀಯ ಭಕ್ತರಾಗಿದ್ದರು. ಪ್ರಧಾನಿಯಾಗಿ 9 ತಿಂಗಳಾದರೂ ಒಮ್ಮೆಯೂ ಮೋದಿಯನ್ನು ಭೇಟಿ ಮಾಡದೇ ತನ್ನ ಡೋಂಗಿ ಜಾತ್ಯಾತೀತವಾದ ಪ್ರದರ್ಶಿಸಿದ್ದ  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ಕೂಡಾ ಅಟಲ್ ಜೀ ಕಡೆಗೆ ಮಮತೆ ವ್ಯಕ್ತ ಪಡಿಸುತ್ತಾರೆ. ತನ್ನ ಪರಮೋಚ್ಚ ಸೈದ್ಧಾಂತಿಕ ನಿಲುವುಗಳಿಂದ, ವಾಕ್ಚಾತುರ್ಯದಿಂದ ಅಟಲ್ ಯಾವ ಪರಿ ಮೋಡಿ ಮಾಡಿದ್ದರೆಂದರೆ 1962 ರಲ್ಲಿ ಬಲರಾಮಪುರದಲ್ಲಿ ಚುನಾವಣೆಗೆ ನಿಂತಿದ್ದಾಗ, ಅವರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ  ಬರಬೇಕಾಗಿದ್ದ ಪ್ರಧಾನಿ ಜವಾಹರ್ ಲಾಲ್ ನೆಹರೂ ತನ್ನ ಕಾರ್ಯಕ್ರಮವನ್ನೇ ರದ್ದುಗೊಳಿಸಿದರು. ಏಕೆಂದರೆ ‘ವಾಜಪೇಯಿಯಂತಹ ಚತುರನೊಬ್ಬ ಸಂಸತ್ತಿನಲ್ಲಿರಬೇಕು, ಆತನ ವಿರುದ್ಧ ನಾನು ಪ್ರಚಾರ ಮಾಡಲಾರೆ’ ಎಂಬುದು ನೆಹರೂ ನಿಲುವಾಗಿತ್ತು. ಇಂತದ್ದೊಂದು ರಾಜಕೀಯ ನಡೆ ಬೇರೆ ಎಲ್ಲಾದರು ಸಂಭವಿಸಿರಬಹುದೇ? ವಿರೋಧ ಪಕ್ಷದ ನಾಯಕನೇ ತನ್ನ ವಿರುದ್ಧ ಪ್ರಚಾರಕ್ಕೆ ಬರದಂತೆ ತನ್ನ ಬೌದ್ಧಿಕ ಸಾಮರ್ಥ್ಯದಿಂದಲೇ ತಡೆದ ನಾಯಕ ಬೇರೆ ಎಲ್ಲಾದರೂ ಸಿಕ್ಕಾರೇ? ರಾಜಕೀಯದಲ್ಲಿ  ಮೊನ್ನೆ ಮೊನ್ನೆ ಜನಿಸಿ ನೇರವಾಗಿ ಬೇರೊಂದು  ಪಕ್ಷದ ಪ್ರಧಾನಿ ಅಭ್ಯರ್ಥಿ ನಿಂತ ಕ್ಷೇತ್ರದಲ್ಲಿ ಎದುರಾಳಿಯಾಗಿ ನಿಂತು ತಾನೇ ಗೆಲ್ಲುತ್ತೇನೆಂದು ದುರಹಂಕಾರ ತೋರುವ ಕೆಲವರಿಗೆ ನೆಹರೂ ಮಾದರಿಯಾಗಬೇಕು.

ಅಟಲ್ ಮಾತುಗಾರಿಕೆಯ ವಿಷಯಕ್ಕೆ ಬಂದಾಗ, ಅಂತಹಾ ಮತ್ತೊಬ್ಬ ಸೊಗಸಾದ ಮಾತುಗಾರನನ್ನು ದೇಶ ಕಂಡಿಲ್ಲ, ಕೇಳಿಲ್ಲ. ಅರ್ನಬ್ ಗೋಸ್ವಾಮಿಯಂತವರು ನೂರು ಜನ್ಮವೆತ್ತಿ ಬಂದರೂ ಅಟಲ್ ರಂತಹ ಕನ್ವಿನ್ಸಿಂಗ್ ಮಾತುಗಾರ ಖಂಡಿತಾ ಆಗಲಾರ. ಅಟಲ್ ಮಾತಿನ ಝಲಕ್ ನೋಡಿ. ಅದು ಬಿಜೆಪಿಯ ಮಹಾ ಅಧಿವೇಶನ ಮುಂಬೈನಲ್ಲಿ. ಪಕ್ಷ ಸ್ಥಾಪನೆಯಾಗಿ ಇಷ್ಟು ವರ್ಷವಾದರೂ ಇನ್ನೂ ಅಧಿಕಾರ ಸಿಗದೆ ಇದ್ದಿದ್ದಕ್ಕೆ, ಕಾರ್ಯಕರ್ತರು ಕೊಂಚ ಮಂಕಾಗಿದ್ದರು. ಆವಾಗ ಅಧ್ಯಕ್ಷೀಯ  ಭಾಷಣಕ್ಕಾಗಿ  ಎದ್ದು ನಿಂತ ವಾಜಪೇಯಿ “ಅಂಧೇರಾ ಛಟೇಗಾ, ಸೂರಜ್ ನಿಕಲೇಗಾ, ಔರ್ ಕಮಲ್ ಖಿಲೇಗಾ’ ಅಂದರೆ ‘ಕತ್ತಲೆ ಕಳೆಯಲಿದೆ, ಬೆಳಕಾಗಲಿದೆ ಮತ್ತೆ ನಿಸ್ಸಂಶಯವಾಗಿ ಕಮಲ (ಬಿಜೆಪಿ) ಅರಳಲಿದೆ’ ಎನ್ನುವ ಮೂಲಕ ಸಾವಿರಾರು ಕಾರ್ಯಕರ್ತರಿಗೆ ಸ್ಪೂರ್ತಿ ತುಂಬಿದ್ದರು. ಚುನಾವಣಾ ಹೋರಾಟಕ್ಕೆ ಹೊಸ ಹುರುಪು ನೀಡಿದ್ದರು. ಈ ವಾಕ್ಯದ ತಿರುಳು ಬರೀ ಬಿಜೆಪಿಗರಿಗೆ ಮಾತ್ರವಲ್ಲ, ನಿತ್ಯ ಜೀವನದಲ್ಲಿ ನಮಗೆಲ್ಲರಿಗೂ ಅಪ್ಪ್ಲ್ಯೈ ಆಗುವಂತದ್ದು. ಇದು ಅಟಲ್ ಜೀ ಬಿಚ್ಚು ಮಾತಾದರೆ ಇನ್ನು ಕೆಲವೊಂದು ಚುಚ್ಚು ಮಾತು. ಆವತ್ತು ವಿರೋಧ ಪಕ್ಷದಲ್ಲಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರು ಬಿಜೆಪಿಯವರ  ರಾಮ ಮಂದಿರದ ಪ್ರಸ್ತಾಪ ಮಾಡುತ್ತಿದ್ದ ಸಂದರ್ಭದಲ್ಲಿ  ಎದ್ದು ನಿಂತು ‘ಬಿಜೆಪಿ ಬಹುತ್ ರಾಮ್ ಕೀ ಬಾತೇ ಕರ್ತಿ ಹೈ, ಲೇಕಿನ್ ಉನ್ಮೇ ಕೋಯಿ ರಾಮ್ ನಹೀ ಹೈ’  ಎಂದು ಬಿಜೆಪಿಯವರನ್ನು ಕೆರಳಿಸಿದರು . ಅದಕ್ಕೆ ಅಟಲ್ ತಿರುಗೇಟು ನೀಡಿದ್ದು ಹೇಗೆ ಗೊತ್ತೇ?  ‘ಪಾಸ್ವಾನ್ ಜೀ, ಹರಾಮ್ ಮೇ ಭೀ ರಾಮ್ ಹೈ!’ ಅಲ್ಲಿಗೆ ಪಾಸ್ವಾನ್, ‘ಖೇಲ್ ಖತಂ ನಾಟಕ್ ಬಂದ್’ ಆಗಿತ್ತು. ಅಂತಹಾ ವಾಗ್ಮಿ ವಾಜಪೇಯಿ. ಆದರೆ ಬೇಸರದ ಸಂಗತಿ ಏನು ಗೊತ್ತಾ? ತನ್ನ ಮಾತುಗಾರಿಕೆಯಿಂದಲೇ ದೇಶದ ಮನಗೆದ್ದಿದ್ದ ವಾಜಪೇಯಿ ತಾತನೀಗೀಗ ಮಾತನಾಡಲೂ ಆಗುತ್ತಿಲ್ಲವಂತೆ, ಬೇರೆಯವರನ್ನು ಬಿಡಿ ತನ್ನನ್ನು ತಾನೆ ಗುರುತಿಸಿಕೊಳ್ಳಲೂ ಆಗುತ್ತಿಲ್ಲವಂತೆ. ದೇಶಕ್ಕಾಗಿ ಸರ್ವಸ್ವವನ್ನೂ ಸಮರ್ಪಿಸಿದ ಭೀಷ್ಮ ಪಿತಾಮಹ ಈ ರೀತಿ ನಿಶ್ವಲವಾಗಿರುವುದನ್ನು ನೋಡುವಾಗ ಬಹಳ ದುಃಖವಾಗುತ್ತದೆ. ಬಹಳ ಸಮಯಗಳ ನಂತರ ಇವತ್ತು ವಾಜಪೇಯಿ ಮುಖ ಸರಿಯಾಗಿ ನೋಡಬಹುದು ಎಂಬ ನಿರೀಕ್ಷೆಯಲ್ಲಿ ನಾನಿದ್ದೆ.ಆದರೆ  ಮೊನ್ನೆ ಭಾರತ ರತ್ನ ನೀಡುವಾಗ ತೆಗೆದ ಎಲ್ಲಾ ಫೋಟೋಗಳಲ್ಲಿ ಅಟಲ್ ಮುಖಕ್ಕೆ ಅಡ್ಡವಾಗಿ ಪ್ರಶಸ್ತಿ ಪತ್ರ ಹಿಡಿದವ ನಿಂತಿದ್ದ. ಎಂಥಾ ದರಿದ್ರ ಫೋಟೋಗ್ರಾಫರ್ ಅವನು ಎಂದು ಶಪಿಸುತ್ತಿದ್ದ ನನಗೆ ಆಘಾತಕಾರಿ ವಿಷಯವೊಂದು ತಿಳಿಯಿತು. ‘ಅಟಲ್ ಜೀ ಮುಖ ನೋಡಲೂ ಆಗುತ್ತಿಲ್ಲ. ಆದ್ದರಿಂದ ಉದ್ದೇಶಪೂರ್ವಕವಾಗಿ  ಪ್ರೈವೆಸಿ ಕಾಪಾಡುವ ದೃಷ್ಟಿಯಿಂದ ಆ ಥರ ಫೋಟೋ ತೆಗೆಯಲಾಯಿತಂತೆ ಎಂದು. ರಾಮಾ! ರಾಮಾ! ಕಣ್ಣೀರು ಒತ್ತರಿಸಿ ಬಂತು!  ಅಕ್ಷರಷಃ ಗದ್ಗದಿತನಾದ ಸ್ಥಿತಿ ನನ್ನದು (ಎಲ್ಲಾ ಅಭಿಮಾನಿಗಳದ್ದು)

ಭಾರತ ರತ್ನ ಯಾರಿಗೂ ಸುಮ್ಮನೇ ಸಿಗುವುದಿಲ್ಲ, ಅರ್ಜಿ ತುಂಬಿ ಲಾಬಿ ಮಾಡಿ ಪಡೆಯಲು ಅದೇನು ರಾಜ್ಯೋತ್ಸವ ಪ್ರಶಸ್ತಿಯಲ್ಲ, ಹಠ ಹಿಡಿದು, ಸರ್ಕಸ್ ಮಾಡಿ, ರಿಸ್ಕ್ ತೆಗೆದುಕೊಂಡು ಏನೇನೋ ಮಾಡಲು ಅದು ಗಿನ್ನೆಸ್ ರೆಕಾರ್ಡ್  ಕೂಡ ಅಲ್ಲ. ಅಜಾತ ಶತ್ರು ಭಾರತ ರತ್ನ ಆಗಿದ್ದು ಸುಮ್ಮನೆ ಅಲ್ಲ, ಸಾಧನೆಯೆಂಬ ತಪಸ್ಸನಾಚರಿಸಿದ ಸಂತನಿಗೆ ಮಾತ್ರ ಇದು ಸಿಕ್ಕಲು ಸಾಧ್ಯ,. ಅದರ ಹಿಂದೆ ಪರಿಶ್ರಮವಿದೆ, ಶ್ರದ್ಧೆಯಿದೆ, ಸಾಧನೆಯಿದೆ. ಭಾರತ ರತ್ನಕ್ಕಾಗಿ ಜೀವನ ಸವೆಸಿದವರಲ್ಲ ಅಟಲ್. ಅಟಲ್ ಗಾಗಿಯೇ ಭಾರತರತ್ನ ಕಾದಿದ್ದು. ಹಲವು ವರ್ಷಗಳ ನಂತರ ಅರ್ಹ ರಾಜತಾಂತ್ರಿಕ ಸಾಧಕನಿಗೆ ಭಾರತ ರತ್ನ ಸಿಕ್ಕಿದ್ದು ನಮಗೆಲ್ಲರಿಗೂ ಭಾರತ ರತ್ನ ಸಿಕ್ಕಿದಷ್ಟೇ ಸಂತಸವಾಗಿದೆ.

ಮೊನ್ನೆ ಅಟಲ್ ಜೀ ಭಾರತ ರತ್ನ ಪಡೆದುದನ್ನು ನೋಡುತ್ತಿದ್ದಾಗ ಇವೆಲ್ಲವನ್ನು ಹೇಳಬೇಕೆನಿಸಿತು.

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!