ಅಂಕಣ

ಗದಾಯುದ್ಧ- ೬

ಸ್ವಲ್ಪ ತಡವಾಯಿತು. ಕ್ಷಮೆ ಇರಲಿ, ನಿರತ ಓದುಗರೇ.

 ಕೌರವ ಮುಂದೆ ರಣಧಾರುಣಿಯಲ್ಲಿ ಬರುತ್ತಾ ಪಿಶಾಚಿಗಳೊಡನೆ ಸಂವಾದದಂತಹ ಒಂದು ಕಲ್ಪನೆಯನ್ನು ಅತ್ಯಂತ ಮಾರ್ಮಿಕವಾಗಿ ತೆರೆದಿಡುತ್ತಾನೆ ರನ್ನ. ರನ್ನನ ಪ್ರತಿಭೆಯ ಬೆಂಕಿಯೊಳಗೆ ಎಲ್ಲವೂ ನೀರು!

 ಕೌರವ ಮುಂದೆ ಬರುತ್ತಿರುವಾಗ,

 ಗುರುವಿನ ನೆತ್ತರನ್ನು ಕುಡಿವೊಡೆ ಅದು ಸಾಧುವಲ್ಲ, ದ್ವಿಜರಕ್ತ!, ದುಶ್ಶಾಸನನ ನೆತ್ತರು ಭೀಮನೇ ಕುಡಿದ, ಭೀಷ್ಮನ ನೆತ್ತರನ್ನು ಕುಡಿಯಲು ಅವನಿನ್ನೂ ಸತ್ತಿಲ್ಲ, ಕೌರವಾ, ನಿನ್ನ ನೆತ್ತರನ್ನೇ ಕುಡಿಯಬೇಕೆಂದಿದ್ದೇವೆ ಬಾ ಬಾ ಎಂದೆನುತ್ತಿತ್ತು ಒಂದು ಪಿಶಾಚಿ.

 ಅದನ್ನು ಕೇಳುತ್ತ ಮುಂದುವರೆದು ಬರುತ್ತಿರಲು, ಯಾವುದೋ ಶವದ ಮೆದುಳಿನ ಮೇಲಿಟ್ಟು ಜಾರಿ ಬೀಳುವಂತಾಗುತ್ತಾನೆ ಕೌರವ. ಅಯ್ಯೋ, ಜಾಗ್ರತೆ ಕಾಲು ತೊಡೆ ಮುರಿದೀತು ಎನ್ನುತ್ತಾ ಸಂಜಯ ಅವನನ್ನು ಮೇಲಕ್ಕೆತ್ತುತ್ತಾನೆ. ಆಗ ಒಂದು ಪಿಶಾಚಿ “ಭೀಮಕೋಪದಲ್ಲಿ ನಿನಗೆ ಊರುಭಂಗಭಯಮಾಗದೆ ಪೋಕುಮೆ ಕೌರವೇಶ್ವರಾ” ಎಂದು ಅಣಕಿಸುತ್ತದೆ.

 ಈ ಭಾಗವನ್ನು ಓದಿಯೇ ಸುಖಿಸಬೇಕು. ಈ ಮರುಳ್ಗಳ ಮಾತಿನಲ್ಲಿ ಹುರುಳಿಲ್ಲ ಎಂದು ಕೌರವ ಎನ್ನುತ್ತಿರುವಾಗ ಅರಗಿನ ಮನೆಯಿಂದಲಾಗಿ, ವಿಷದ ಲಡ್ಡುಗೆಗಳನ್ನು ಕೊಟ್ಟು ಕೊಲ್ಲಲು ಯತ್ನಿಸಿ ಭೀಮನ ವೈರವನ್ನು ಗಳಿಸಿದ ನೀನು ಮರುಳನೋ? ಅಲ್ಲ, ಎಲ್ಲರೊಂದಾಗಿ ಇರುವಂತಹ ನಾವು ಮರುಳ್ಗಳೋ ಎಂದು ಕೇಳಿತು ಪಿಶಾಚಿ. ಮತ್ತೆ ಕೌರವನಿಗೆ ಸವಾಲಾಗಿ,

ನುಡಿಯದೆ ಪೋಗಲೀಯೆನೆಲೆ ಪೋದೊಡೆ ಧೂರ್ಜಟಿಯಾಣೆ ಮೀರೆ ಪೋ-

ದೊಡೆ ಕಲಿಭೀಮನಾಣೆಯೆನೆ ಧೂರ್ಜಟಿಯಾಣೆಗೆ ನಿಂದು ಭೀಮನೆಂ-

ದೊಡೆ ಮುಳಿದಟ್ಟಿ ಕುಟ್ಟಲರಸಂ ಗದೆಯಂ ಕೊಳೆ ಭೂತಕೋಟಿಯುಂ

ಬಡಿಗೊಳೆ ಸಂಜಯಂ ನಯದೆ ಬಗ್ಗಿಸಿದಂ ಫಣಿರಾಜಕೇತುವಂ

ಉತ್ತರವನ್ನು ಹೇಳದಿದ್ದರೆ ಭೀಮನಾಣೆ ಎನ್ನುವಾಗ ಕೌರವ ಪಿಶಾಚಿಯನ್ನು ಹೊಡೆಯಲು ಹೋಗುವಾಗ ಸಂಜಯ ನಯದಲ್ಲಿ ಎಳೆದು ನಿಜಲೋಕಕ್ಕೆ ಕರೆತರುತ್ತಾನೆ .

 ಈ ಮರುಳ್ಗಳಾಟವೆಲ್ಲವೂ ಕೌರವನ ಮನದಲ್ಲಿ ಆದದ್ದು, ಘಟನೆಯಲ್ಲ ಎನ್ನುವಂತೆ ರನ್ನ ಬರೆಯುತ್ತಾನೆ. ಎಷ್ಟು ಅಮೋಘವಾಗಿದೆ ನೋಡಿ ಚಿತ್ರ.

 ಸತ್ತವರನ್ನು ನೋಡುವುದಿಲ್ಲ, ನೇರವಾಗಿ ನನ್ನನ್ನು ಭೀಷ್ಮನಿದ್ದಲ್ಲಿ ತಲುಪಿಸು ಎಂದು ಸಂಜಯನಿಗೆ ಹೇಳಿ ಮುಂದೆ ಬರುತ್ತಾನೆ ಕೌರವ. ಹೇಗೆಂದರೆ

 ಇಭಶೈಲಂಗಳನೇರಿಯೇರಿ, ರುಧಿರಸ್ರೋತಂಗಳಂ ದಾಂಟಿ ದಾಂಟಿ, ಭದೋರ್ನೀಲತಾಪ್ರತಾನ ವಿಪಿನವ್ರಾತಂಗಳೊಳ್ ಸಿಲ್ಕಿ ಸಿಲ್ಕಿ ಮುಂದುವರೆಯುತ್ತಾ ಬಾಣಗಳಿಂದ ಹೊಡೆಯಲ್ಪಟ್ಟು ಪ್ರಾಣವಿಲ್ಲದ ಬಿದ್ದಿರುವ ದ್ರೋಣಾಚಾರ್ಯನನ್ನು ಕಾಣುತ್ತಾನೆ.

ನಿಮ್ಮ ಬಿಲ್ಗಾರಿಕೆಗೆ ಅರ್ಜುನನೇನು? ಆ ಪಿನಾಕಪಾಣಿಯೇ ಬಂದರೂ ಸಮನಲ್ಲ. ಆದರೆ ಇದೇನಾಯ್ತು? ಕರ್ಮವಶದಿಂದಲೋ ಅಥವಾ ನಿಮ್ಮ ಉಪೇಕ್ಷೆಯಿಂದಲೋ ಮರಣಹೊಂದುವಂತಾಯ್ತಲ್ಲ.

ಶರಸಂದೋಹಮನನ್ಯಸೈನ್ಯದೊಡಲೊಳ್ ಬಿಲ್ಬಲ್ಮೆಯಂ ತನ್ನ ಶಿ-

ಷ್ಯರ ಮೈಯ್ಯೊಳ್ ನಿಜಕೀರ್ತಿಯಂ ನಿಖಿಳದಿಕ್ಚಕ್ರಂಗಳೊಳ್ ಚಿತ್ತಮಂ

ಹರಪಾದಾಂಬುಜಯುಗ್ಮದೊಳ್ ನಿರುಸಿದಂ ಚಾಪಾಗಮಾಚಾರ್ಯರೊಳ್

ದೊರೆಯಾರೆಂಬಿನಮಣ್ಮಿ ಸತ್ತಳವಿದೇಂ ದ್ರೋಣಂಗೆ ಮೆಯ್ವೆತ್ತುದೋ

ನಿಮ್ಮ ಬಾಣಗಳೆಲ್ಲ ಶತ್ರುಸೈನ್ಯದ ಒಡಲಿನಲ್ಲಿದೆ, ನಿಮ್ಮ ವಿದ್ಯೆಯೆಲ್ಲವೂ ಶಿಷ್ಯರಲ್ಲಿದೆ. ಕೀರ್ತಿಯು ದಿಕ್ಕುದಿಕ್ಕಿನಲ್ಲಿದೆ, ಮನಸ್ಸು ಹರಪಾದಾಂಬುಜದಲ್ಲಿದೆ.

ಬಿಲ್ವಿದ್ಯೆಯ ಆಚಾರ್ಯನನ್ನು ನೆನೆದು ಕೌರವ ಅಳಲುತ್ತಾನೆ. ಹಿಂದೊಮ್ಮೆ ಬಹಳವಾಗಿ ದ್ರೋಣನನ್ನು ನಿಂದಿಸಿದ್ದ ಕೌರವ ಶವಶರೀರದ ಮುಂದೆ ಹೀಗೆಲ್ಲ ಕೊರಗುವುದನ್ನು ನೋಡಿದರೆ ಕರುಣೆ ಉಕ್ಕದುಳಿದೀತೇ?

ದ್ರೋಣನಿಗೆ ಮೂರುಸುತ್ತು ಬಂದು ಮುಂದುವರೆಯುತ್ತಾ ಕೌರವ.ಬರುತ್ತಾ ರುಧಿರಸ್ರೋತದಲ್ಲಿ ಮುಳುಗಿರುವ ಅಭಿಮನ್ಯುವನ್ನು ಕಾಣುತ್ತಾನೆ. ಅಭಿಮನ್ಯುವಿನ ಸಾಹಸವನ್ನು ಕೌರವನೇ ಮೆಚ್ಚುವುದಾದರೆ ಅಭಿಮನ್ಯು ಎಷ್ಟು ದೊಡ್ಡವನು? ರನ್ನನ ವರ್ಣನೆ ನೋಡಿ.

ಅರೆಮುಗಿದಿರ್ದ ಕಣ್ಮಲರಲರ್ದ ಮೊಗಂ ಕಡಿವೋದ ಕಯ್ಯುಮಾ-

ಸುರತರಮಾಗೆ ಕರ್ಚಿದವುಡುಂ ಬೆರಸನ್ಯಶರಪ್ರಹಾರ ಜ-

ರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳ್ದು ಬಿಳ್ದನಂ

ಕುರುಪತಿ ನೋಡಿ ಕಂಡನಭಿಮನ್ಯುಕುಮಾರನಾಜಿವೀರನಂ

ಅರೆನಿಮೀಲಿತ ಕಣ್ಣುಗಳು, ಇನ್ನೂ ಅರಳಿರ್ದ ಮೊಗ, ಕತ್ತರಿಸಿಹೋದ ಕೈಗಳು, ಅವಡುಕಚ್ಚಿದವನು, ಶತ್ರುಶರಗಳಿಂದ ಜರ್ಜರಿತನಾಗಿ ಹೊಸನೆತ್ತರಿನ ಸಮುದ್ರದಲ್ಲಿ ಬಿದ್ದ ಅಭಿಮನ್ಯುಕುಮಾರನನ್ನು ಕೌರವ ನೋಡುತ್ತಾನೆ.

ದ್ರೋಣಾಚಾರ್ಯ ಮಾಡಿದಂತಹ ಪದ್ಮವ್ಯೂಹವನ್ನು ಹೊಕ್ಕು, ಶತ್ರುಗಳನ್ನು ಇಕ್ಕಿದ ನಿನ್ನಂತಹ ಗಂಡುಗಳು ಇದ್ದಾರೆಯೇ? ನಿನ್ನನ್ನು ಹೆತ್ತವಳೆ ವೀರಜನನಿ ಎಂದೆಲ್ಲಾ ಹೇಳುತ್ತಾ ಕೌರವನ ಬಾಯಿಯಿಂದ ಒಂದು ಅದ್ಭುತ ಸಾಲನ್ನು ಬರೆಯಿಸುತ್ತಾನೆ ರನ್ನ.

ಅಸಮಬಲ ಭವದ್ವಿಕ್ರಮ

ಮಸಂಭವಂ ಪೆರರ್ಗೆ ನಿನ್ನನಾನಿತಂ ಪ್ರಾ-

ರ್ಥಿಸುವೆನಭಿಮನ್ಯು ನಿಜಸಾ-

ಹಸೈಕದೇಶಾನುಮರಣಮೆಮಗಕ್ಕೆ ಗಡಾ

ನಿನ್ನಂತೆ ಸಾಹಸವನ್ನು ಮೆರೆಯುವುದು ಅಸಂಭವ. ಅದರಲ್ಲಿ ಒಂದಂಶದ ಸಾಹಸವನ್ನಾದರೂ ನಾನು ತೋರಿಸುವಂತೆ ಮಾಡು ಎಂದು ಅಭಿಮನ್ಯುವನ್ನು ಪ್ರಾರ್ಥಿಸಿ ಮುಂದುವರೆಯುತ್ತಾನೆ.

 ಮುಂದೆ ಮಗನಾದ ಲಕ್ಷಣಕುಮಾರನನ್ನು ಕಂಡು ಕಣ್ಣೀರು ತುಂಬಿ,

ಜನಕಂಗೆ ಜಲಾಂಜಲಿಯಂ

ತನೂಭವಂ ಕುಡುವುದುಚಿತಮುದುಗೆಟ್ಟೀಗಳ್

ನಿನಗಾಂ ಕುಡುವಂತಾದುದೆ

ತನೂಜ ನೀಂ ಕ್ರಮವಿಪರ್ಯಯಂ ಮಾಡುವುದೇ?

ಅಪ್ಪನಿಗೆ ತಿಲೋದಕವನ್ನು ಕೊಡುವುದು ಉಚಿತವಾದ್ದು. ಆದರೆ ನಾನು ನಿನಗೆ ಕೊಡುವಂತಾಯ್ತೇ. ಕ್ರಮತಪ್ಪುವುದು ಸರಿಯೇ?

ಎಂದಲ್ಲಿ ನಿಲಲಾರದಾ ಪ್ರದೇಶದಿಂ ತಳರ್ದು ಬರೆವರೆ ಶಲ್ಯನನ್ನೂ ಶಕುನಿಯನ್ನೂ ಕಂಡು ಅವರಿಗಾಗಿಯೂ ನೋಯುತ್ತಾನೆ. ಪಶ್ಚಾತ್ತಾಪದಲ್ಲಿರುವ ಕೌರವನನ್ನು ಸಂಜಯ ಸಂತೈಸಿ ಮುಂದೆ ಕರೆದುಕೊಂಡು ಸಾಗುತ್ತಾನೆ. ಭೀಮಸೇನನ ಗದಾಘಾತದಿಂದ ನೆತ್ತರಿನ ಪ್ರವಾಹದಲ್ಲಿ ಮುಳುಗಿರುವ ಯುವರಾಜ ದುಶ್ಶಾಸನನನ್ನು ಕಾಣುತ್ತಾನೆ.

ಇನ್ನೂ ಇದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Ishwara Bhat

ವೃತ್ತಿ : ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗ,
ಹವ್ಯಾಸ : ಓದುವುದು, ಇಂಟರ್ನೆಟ್, ಪ್ರವಾಸ ಇಷ್ಟು.
ಒಂದು ಕವನಸಂಕಲನ ಪ್ರಕಟವಾಗಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!