ಅಂಕಣ

ಗದಾಯುದ್ಧ – ಭಾಗ ೫

ಮೂರ್ಛೆ ಬಿದ್ದಿರುವ ಕೌರವನಿಗೆ ಉಪಚಾರ ಮಾಡುತ್ತಿರುವುದನ್ನು ಪರಿಜನರು ಕಂಡು ಅದನ್ನು ಗಾಂಧಾರಿಗೆ ತಿಳಿಸುತ್ತಾರೆ. ಇಲ್ಲಿಂದ ಮುಂದಿನ ಕೆಲವು ಪದ್ಯಗಳು ಅತ್ಯಂತ ಕರುಣಾಪೂರಿತವಾಗಿದೆ. ಕೆಟ್ಟವನಾದ ಕೌರವನ ಬಗೆಗೂ ಅನುಕಂಪ ಬರುವಂತೆ ಚಿತ್ರಿಸುತ್ತಾನೆ ರನ್ನ.

 

ಗಾಂಧಾರಿಯ ಮಾತು-

 

ಎಮಗಂಧಯಷ್ಟಿಯಾಗಿ-

ರ್ದೆ ಮಗನೆ ನೀನುಳ್ಳೊಡೆಯೆಲ್ಲರೊಳರೆಂದೀ ನೀ-

ನ್ನುಮನಿರಿಸದೆ ಕುರುವಂಶಾ-

ನಿಮಿತ್ತರಿಪು ಪಾಶಪಾಣಿ ಸವಿನೋಡಿದನೇ

 

(ಅಂಧಯಷ್ಟಿ= ಊರುಗೋಲು, ನಮಗೆ ಊರುಗೋಲಾಗಿದ್ದೆ ಮಗನೆ, ನೀನೊಬ್ಬ ಉಳಿದರೂ ಎಲ್ಲರೂ ಇದ್ದಾರೆ ಎಂದುಕೊಳ್ಳುತ್ತಿದ್ದೆವು, ನಿನ್ನನ್ನೂ ಇರಿಸದಂತೆ ಆ ನಿಮಿತ್ತರಿಪು ಪಾಶಪಾಣಿ (ಯಮ) ಸವಿನೋಡಿದನೇ?).

 

ಮಡಿದೀ ದುಶ್ಶಾಸನನೇಂ

ನುಡಿಯಿಸುವನೊ ಕುರುನರೇಂದ್ರ ದುರ್ಮರ್ಷಣನೇಂ

ನುಡಿಯಿಸುವನೊ ದುಷ್ಕರ್ಣಂ

ನುಡಿಯಿಸುವನೊ ನೀನುಮುಸಿರದಿರ್ಪುದೆ ಮಗನೇ!

 

ಎಂದು ಗಾಂಧಾರಿ ಅಳುತ್ತಿರಲು, ತಂದೆ ಧೃತರಾಷ್ಟ್ರ ತನ್ನ ಮಗನ ಕಾಲ ಮೇಲೆ ಬಿದ್ದು ಹಾ! ಕುರುಕುಲಚೂಡಾಮಣಿ, ಹಾ ಕುರುಕುಲಚಕ್ರವರ್ತಿ ಎಂದು ರೋಧಿಸುತ್ತಾನೆ. ತನ್ನ ತಂದೆತಾಯಿಗಳ ಈ ರೋಧನೆಗೆ ಪುನಃ ಮೂರ್ಛೆ ತಪ್ಪುತ್ತಾನೆ ಕೌರವ.

 

ಮೂರ್ಛೆ ತಿಳಿದೆದ್ದು ಲಜ್ಜೆಯಿಂದ ಅವರ ಕಾಲಿಗೆ ನಮಸ್ಕರಿಸಲು, ಅಪ್ಪಿಕೊಂಡು, ಆಶೀರ್ವದಿಸಿ ಧೃತರಾಷ್ಟ್ರ ಕೆಲವು ಮಾತುಗಳನ್ನು ಹೇಳುತ್ತಾನೆ.

 

ರನ್ನ ಎಂತಹ ಕರುಣೆಯಿಂದ ಈ ಪದ್ಯಗಳನ್ನು ತುಂಬುತ್ತಾನೆಂದರೆ, ಒಂದು ಪದ್ಯದಲ್ಲಿ ” ಧರ್ಮರಾಜ ಒಳ್ಳೆಯದನ್ನೇ ಮಾಡುತ್ತಾನೆ, ಈಗಲೂ ಕಾಲ ಮಿಂಚಿಲ್ಲ, ಸಂಧಿಯನ್ನು ಮಾಡಿಕೋ. ಸಂಧಿಗೆ ಸಂಜಯನನ್ನು ಕಳಿಸುತ್ತೇನೆ. ಭೀಮನ ವೈರ, ತಮ್ಮಂದಿರ ಸ್ನೇಹಿತರ ಸಾವನ್ನು ಮರೆತು ಇನ್ನಾದರೂ ಪಾಂಡವರಿಗೆ ಅರ್ಧರಾಜ್ಯವನ್ನು ಕೊಡು ಎಂದು ಕಾಲಿಗೆ ಬಿದ್ದು ಬೇಡುತ್ತಾನೆ”

 

ಯಾವ ಮಾತಿಗೂ ಕೇಳದ ಕೌರವ ತನ್ನದೇ ಮೊದಲಿನ ಮಾತುಗಳಿಗೆ ಜೋತು ಬೀಳುತ್ತಾನೆ.

 

ಆಂ ಮಗನೆನಾಗೆ ಧರ್ಮಜ-

ನೇಂ ಮಗನಲ್ಲನೆ ಬಳಿಕ್ಕೆ ನೀಮುಂ ತಾಮುಂ

ನಿಮ್ಮೊಳ್ ನೇರ್ಪಡುಗಿಡದೆ ಸು-

ಖಂ ಮುನ್ನಿನ ತೆರದೆ ಬಾಳ್ವುದಾಂ ಬೆಸಕೆಯ್ವೆಂ

 

ಬಿಡಿಮೆನ್ನನೆಂದು ಮುಂದಿ-

ರ್ದಡಿಗೆರಗಿದ ಮಗನನಪ್ಪಿಕೊಂಡಶ್ರುಜಲಂ

ಗುಡುಗುಡುನೆ ಸುರಿಯೆ ನಾಲಗೆ

ತಡತಡವರೆ ನುಡಿದನಂಧನೃಪನಾ ನೃಪನಂ

 

ನೀನು ಎಂತುಂ ಎಮ್ಮ ಪೇಳ್ವುದಂ ಕಯ್ಕೊಳ್ಳದೆ ಛಲಮನೆ ಕಯ್ಕೊಂಡು ಪಾಂಡುನಂದನರೊಳ್ ಕಾದಿದಲ್ಲದೆ ಸಂಧಿಯನೊಡಂಬಡೆಯಪ್ಪಿನಂ ನೀನೆಮಗಿನಿತನ್ ಒಳ್ಳಿಕಯ್ಯಲ್ವೇಳ್ವುದು

 

ನೆಗಳ್ವ ಕಜ್ಜಮಾವುದುಮ್?

 

ನಿಮ್ಮಜ್ಜನೊಳ್ ಆಲೋಚಿಸಿ ನೆಗಳ್ವುದು, ಅಲ್ಲಿಗೆ ಬಿಜಯಂಗೆಯ್ವುದು!

 

ನಾವು ಹೇಳಿದಂತೆ ಕೇಳದೆ ನೀನು ನಿನ್ನ ಛಲವೆಂದು ಮುಂದುವರೆಯುತ್ತಿದ್ದೀಯ. ನೀನೊಂದು ಕೆಲಸಮಾಡು, ಅದೇನೆಂದರೆ ನಿನ್ನಜ್ಜ ಭೀಷ್ಮನನ್ನು ನೋಡುವುದು. ಅದಕ್ಕೆ ಸಮ್ಮತಿಸಿ ಕೌರವ ತನ್ನ ಜೊತೆಗಾರ ಸಂಜಯನೊಂದಿಗೆ ಭೀಷ್ಮನಲ್ಲಿರುವಲ್ಲಿಗೆ ತೆರಳುತ್ತಾನೆ.

 

ದುರ್ಯೋಧನವಿಲಾಪಂ ಎನ್ನುವ ಆಶ್ವಾಸವು ಈವರೆಗೆ ನೋಡಿದ ಭಾಗಗಳಿಂದ ಬಹಳ ಸುಂದರವಾಗಿರುವಂತಹದ್ದು. ಅತ್ಯುತ್ತಮವೆನ್ನುವಂತೆ ಬಹಳ ನಾಟಕೀಯವಾಗಿ ಬರೆದಿದ್ದಾನೆ ರನ್ನ. ( ಈ ಭಾಗಗಳನ್ನು ರಂಗದಲ್ಲಿ ಅತ್ಯಂತ ಸುಂದರವಾಗಿ ಅಭಿನಯಿಸಬಹುದು ಎನ್ನುವ ಅರ್ಥದಲ್ಲಿ)

 

ಭೀಕರವಾದ ಯುದ್ಧದಿಂದ ಮಸಣವಾದ ರಣಾಂಗಣದಲ್ಲಿ ಕುರುಪತಿ ಮೆಲ್ಲಮೆಲ್ಲನೆ ಬರುತ್ತಿದ್ದಾನೆ. ಅತ್ಯಂತ ಸೊಗಸಾದ ಒಂದು ಪದ್ಯ ಇಲ್ಲಿದೆ.

 

ಹಲಚಕ್ರಾಂಕುಶರೇಖಾ

ವಿಲಸಿತಪದತಳಕೆ ಮಾಡೆ ಪುನರುಕ್ತತೆಯಂ

ಹಲಚಕ್ರಾಂಕುಶ ಕುರುಕುಲ

ತಿಲಕಂ ಕುಸಿಕುಸಿದು ಮೆಲ್ಲನೆ ನಡೆದಂ.

 

ರಾಜರ ಪಾದಗಳಲ್ಲಿ ಇರಬಹುದು ಎನ್ನುವಂತಹ ನೇಗಿಲು,ಚಕ್ರ, ಅಂಕುಶ ರೇಖೆಗಳು ಕೌರವನ ಪಾದದಲ್ಲಿದೆ. ಹಾಗೇ ರಣರಂಗದಲ್ಲಿ ಬಿದ್ದಿರುವಂತಹ ಸೈನಿಕರ ಆಯುಧಗಳು ಆ ಕಾಲಿನಲ್ಲಿ ಮತ್ತೆ ಈ ಆಯುಧಗಳ ರೇಖೆಯನ್ನು ಮೂಡಿಸುತ್ತಿದೆ. ಒಬ್ಬ ರಾಜನ ಅವಸ್ಥೆಯನ್ನು ಈ ಪದ್ಯ ಎಷ್ಟು ಸರಳ ಸುಂದರವಾಗಿ ಹೇಳುತ್ತಿದೆ ನೋಡಿ.

 

ಸಂಜಯ ನೋವಿನಲ್ಲಿ “ನಿಮ್ಮ ಕೋಮಲ ಪಾದ, ವಿರೋಧಿಗಳಮಂಡಳಿಕಮೌಳಿವಿಘಟ್ಟಿತ ಪಾದ ಪೀಠ ಇಂದು ಬಾಣ, ಕತ್ತಿ, ಪರಿಘ ಮುಂತಾದ ಆಯುಧಗಳು ಬಿದ್ದಿರುವ ಈ ಸಂಗ್ರಾಮ ಭೂಮಿಯಲ್ಲಿ ನಡೆಯಬೇಕಾಯಿತೇ” ಎಂದಾಗ

 

ತನುಜಾನುಜರ ವಿಯೋಗದ

ಮನಃಕ್ಷತಂ ನೋಯಿಸಲ್ಕೆ ನೆರೆಯವು ಸಮರಾ-

ವನಿಯೊಳುಡಿದಿರ್ದ ಕಯ್ದುಗ-

ಳಿನಿಸುಂ ನೋಯಿಕುಮೆ ವಜ್ರಮನನಪ್ಪೆನ್ನಂ

 

(ಮಕ್ಕಳ, ಸೋದರರ ಸಾವಿನಿಂದ ಉಂಟಾದ ನೋವನ್ನೇ ಲೆಕ್ಕಿಸುತ್ತಿಲ್ಲ, ಮತ್ತೆ ಈ ಜುಜುಬಿ ಆಯುಧಗಳು ನನ್ನನ್ನು ನೋಯಿಸುವುದೇ?)

 

ಹೀಗೆ ಆ ಯುದ್ಧಭೂಮಿಯಲ್ಲಿ ಮುಂದೆ ಬರುತ್ತಿರಬೇಕಾದರೆ…… ಮರುಳ್ಗಳ್! ಮುಂದುವರೆಯುವುದು.

Facebook ಕಾಮೆಂಟ್ಸ್

ಲೇಖಕರ ಕುರಿತು

Ishwara Bhat

ವೃತ್ತಿ : ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗ,
ಹವ್ಯಾಸ : ಓದುವುದು, ಇಂಟರ್ನೆಟ್, ಪ್ರವಾಸ ಇಷ್ಟು.
ಒಂದು ಕವನಸಂಕಲನ ಪ್ರಕಟವಾಗಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!