ಪ್ರಚಲಿತ

ವಿಶಿ: ಚೆಸ್ಸ್ ನಲ್ಲಿ ಸಾಮ್ರಾಟ್- ಈಗ ನಾಸಾದ ಪ್ಲಾನೆಟ್

ಒಂದಿಷ್ಟು ಚೆಸ್ ಮಾಸ್ಟರ್ ಗಳು ಹೊಸ ಸಾಫ್ಟವೇರ್ ಸೃಷ್ಟಿಸುತ್ತಾರೆ. ಹತ್ತು ಜನ ಮೇಧಾವಿಗಳು ತಮ್ಮ ಆಲೋಚನೆಗಳನ್ನು ಒಂದಾಗಿಸಿ ಕಂಪ್ಯೂಟರ್ ಗೆ ಫೀಡ್ ಮಾಡುತ್ತಾರೆ. ನೋಡ ನೋಡುತ್ತಲೇ ಕಂಪ್ಯೂಟರ್ ಗಣಿತದ ಲೆಕ್ಕಗಳಿಗೆ ಉತ್ತರ ನೀಡುವ ವೇಗದಲ್ಲೇ ಚೆಸ್ ಆಡುವುದನ್ನು ಕಲಿತು ಬಿಡುತ್ತದೆ. 1999 ರಲ್ಲಿ ಚೆಸ್ ಪ್ರೋಗ್ರಾಮ್ Frits ಸೃಷ್ಟಿಸಿದ ಚಾಣಾಕ್ಷರು ಯುವಕನೊಬ್ಬನಿಗೆ ಪಂಥಾಹ್ವಾನ ಒಡ್ಡುತ್ತಾರೆ “ಚಾಲೆಂಜ್ ಹಾಕ್ತಾ ಇದ್ದೀವಿ, ಈ ಕಂಪ್ಯೂಟರ್ ಜೊತೆ ಆಡ್ತೀಯಾ, ಇದನ್ನ ಸೋಲಿಸ್ತೀಯಾ?”. ಆ ಯುವಕನೋ, ಮಾಸ್ಟರ್ ಮೈಂಡ್ ಆತ್ಮ ವಿಶ್ವಾಸದಿಂದ ಆಡಲು ಕುಳಿತ ಕೇವಲ ಮೂರೇ ಮೂರು ನಿಮಿಷದಲ್ಲಿ ಕಂಪ್ಯೂಟರ್ ಸೋತು ಹೋಯಿತು.

ಈ ಯುವಕ ಮತ್ಯಾರು ಅಲ್ಲ, ಚದುರಂಗದ 64 ಮನೆಗಳ  ದೊರೆ – ವಿಶ್ವನಾಥನ್ ಆನಂದ್

 1969 ಡಿಸೆಂಬರ್ 11 ರಂದು ತಮಿಳ್ನಾಡಿನ ಮಯಿಲಾದು ತುರೈನಲ್ಲಿ ಜನಿಸಿದ ಆನಂದ್ ತಂದೆ ವಿಶ್ವನಾಥನ್. ಮನೆಯೆ ಮೊದಲ ಪಾಠ ಶಾಲೆ, ತಾಯಿ ತಾನೆ ಮೊದಲ ಗುರು ಎಂಬಂತೆ, ಮಗನ 6ನೇ ವಯಸ್ಸಿಗೆ ತಾಯಿ ಸುಶೀಲಾ ಚೆಸ್ ಕಲಿಸಲು ಆರಂಭಿಸಿದರು. ಅಲ್ಲಿಂದ ಮುಂದೆ ವಿಶ್ವನಾಥನ್ ಆನಂದ್ ಅವರದ್ದು ಚದುರಂಗದಾಟದಲ್ಲಿ ನಿಲ್ಲದ ನಡೆ.

 1983 ರಲ್ಲಿ ರಾಷ್ಟ್ರೀಯ ಸಬ್ ಜೂನಿಯರ್ ಚಾಂಪಿಯನ್ ಆದಾಗ ಆನಂದ್ ಗೆ ಕೇವಲ 14 ವರ್ಷ. ಅದರ ಮುಂದಿನ ವರ್ಷವೇ ಚೆಸ್ ನ ಅಂತರಾಷ್ಟ್ರೀಯ ಮಾಸ್ಟರ್ ಆಗುವ ಮೂಲಕ, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಆನಂದ್. 1987 ಫಿಲಿಫೈನ್ಸ್ ಅಲ್ಲಿ ನಡೆದ “ವಿಶ್ವ ಜೂನಿಯರ್ ಚೆಸ್ ಚಾಂಪಿಯನ್ ಶಿಪ್” ಗೆಲ್ಲುವುದರೊಂದಿಗೆ, ಸಾಧನೆ ಮಾಡಿದ ಮೊದಲ ಏಷ್ಯನ್ ಎನಿಸಿಕೊಂಡರು.

1988 ರಲ್ಲಿ ತನ್ನ 18 ವರ್ಷ ಪ್ರಾಯದಲ್ಲಿ ಕೊಯಂಬತ್ತೂರಿನಲ್ಲಿ ನಡೆದ ಶಕ್ತಿ ಫೈನಾನ್ಸ್ ಅಂತರಾಷ್ಟ್ರೀಯ ಚೆಸ್ ಟೂರ್ನಮೆಂಟ್ ಅಲ್ಲಿ ಗೆಲ್ಲುವುದರೊಂದಿಗೆ, ಭಾರತದ ಪ್ರಥಮ ಗ್ರಾಂಡ್ ಮಾಸ್ಟರ್ ಆದರು ವಿಶ್ವನಾಥನ್ ಆನಂದ್. ಗ್ಯಾರಿ ಕ್ಯಾಸ್ಪರೋವ್, ಅನಾತೋಲಿ ಕಾರ್ಪೋವ್ ಇವರೆಲ್ಲಾ ಅಂದು ಚೆಸ್ ಆಟದಲ್ಲಿ ಕೇಳಿ ಬರುತ್ತಿದ್ದ ದೊಡ್ಡ ಹೆಸರುಗಳು, ಸೋಲಿಸಲಸಾಧ್ಯವಾದ ಚದುರಂಗ ಕಲಿಗಳು. 1992 ರಲ್ಲಿ ರಷ್ಯಾದ ಈ ಈರ್ವರನ್ನು ಮೀರಿಸಿ ಪ್ರತಿಷ್ಟಿತ ರೆಗಿಯೋ ಎಮಿಲಿಯಾ ಟೂರ್ನಿಯನ್ನು ಗೆದ್ದ ವ್ಯಕ್ತಿ ಆನಂದ್. 1995 ರಲ್ಲಿ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ವಿಶ್ವ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್ ಅವರನ್ನು ಎದುರಿಸುವ ಹಂತಕ್ಕೆ ತಲುಪಿದ್ದರಾದರೂ, ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.ಆದರೆ ಅವರೊಳಗಿದ್ದ ಸ್ಪೋರ್ಟ್ಸ್ ಮಾನ್ ಶಿಪ್ ತೃಪ್ತಿ ಹೊಂದಿರಲಿಲ್ಲ. 1996 ರಲ್ಲಿ ನಡೆದ ರಾಪಿಡ್ ಚೆಸ್ ಟೂರ್ನಿಯಲ್ಲಿ ಅದೇ ಕ್ಯಾಸ್ಪರೋವ್ ಅವರನ್ನು ಮಣಿಸಿದರು ಆನಂದ್. 1997 ರಲ್ಲಿ ಮತ್ತದೇ ಟೂರ್ನಿಯಲ್ಲಿ ಅನಾತೋಲಿ ಕಾರ್ಪೋವ್ ಅವರನ್ನು ಮಣಿಸಿದರು.

 ಮುಂದೆ, 2000 ದಲ್ಲಿ ಸ್ಪೇನಿನ ಅಲೆಕ್ಸಿ ಶಿರೋವ್ ವಿರುದ್ಧ ಗೆದ್ದು ವಿಶ್ವ ಚಾಂಪಿಯನ್ ಶಿಪ್ ಜಯಿಸಿದ ಮೊದಲ ಭಾರತೀಯನಷ್ಟೇ ಅಲ್ಲ, ಮೊದಲ ಏಷ್ಯನ್ ಎಂಬ ಖ್ಯಾತಿ ಪಡೆದರು. ಆದರೆ ಅಲ್ಲೊಂದು ಟ್ವಿಸ್ಟ್ ಇತ್ತು. ಆಗ, ವಿಶ್ವ ಚೆಸ್ ಫಿಡೆ ಹಾಗೂ ಪಿಸಿಎ (ಪ್ರೊಫೆಷನಲ್ ಚೆಸ್ ಅಸೋಸಿಯೇಷನ್) ಎಂದು ಇಬ್ಬಾಗವಾಗಿತ್ತು. ಕ್ಯಾಸ್ಪರೋವ್ ಮತ್ತು ಕಾರ್ಪೋವ್ ಎಂಬ ಇಬ್ಬರು ವಿಶ್ವ ಚಾಂಪಿಯನ್ ಗಳಿದ್ದರು. ಹಾಗಾದಿ ಆನಂದ್ ಎಲ್ಲರಿಂದಲೂ ಚೆಸ್ ನ ಸಾಮ್ರಾಟನೆನಿಸಲಿಲ್ಲ. ಆದರೇನಂತೆ, ಇವೆರಡು ಮತ್ತೆ ವಿಲೀನವಾಯಿತು, ಜೊತೆ ಜೊತೆಗೆ ಸವಾಲೂ ದೊಡ್ಡದಾಯಿತು. ಗ್ಯಾರಿ ಕಾಸ್ಪರೋವ್, ಅನಾತೋಲಿ ಕಾರ್ಪೋವ್, ವ್ಲಾದಿಮಿರ್ ಕ್ರಾಮ್ನಿಕ್, ಗಾಟಾ ಕಾಮ್ ಸ್ಕಿ ಹೀಗೆ ಹತ್ತು ಹಲವು ಚದುರಂಗದ ಜಗಜಟ್ಟಿಗಳನ್ನು ಎದುರಿಸಬೇಕಾಯಿತು. 2007 ರಲ್ಲಿ ಫಿಡೆ ವಿಶ್ವ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಇವೆರಲ್ಲರನ್ನೂ ಚದುರಂಗದ ಚತುರ ನಡೆಗಳ ಮೂಲಕ ಸೋಲಿಸುವುದರೊಂದಿಗೆ ಚೆಸ್ ನ ಜಗತ್ ಸಾಮ್ರಾಟರಾದರು. ಆದರು. 2008 ರಲ್ಲಿ ಮತ್ತೆ ಪುನಃ ವ್ಲಾದಿಮಿರ್ ಕ್ರಾಮ್ನಿಕ್ ವಿರುದ್ಧ ಸೆಣೆಸಿದ ಪಂದ್ಯಾಟದಲ್ಲಿ ತನ್ನ ಸ್ಥಾನ ಭದ್ರಗೊಳಿಸಿಕೊಂಡು ತಾನು ಚಾಂಪಿಯನ್ನರ ಚಾಂಪಿಯನ್ನನೆಂದು ನಿರೂಪಿಸಿದರು.. 2010 ರಲ್ಲಿ ಸೋಫಿಯಾದಲ್ಲಿ ನಡೆದ ಟೂರ್ನಮೆಂಟ್ ನಲ್ಲಿ ವೆಸೆಲಿನ್ ಟೊಪ್ಲಾವ್ ಅವರನ್ನು ಮಣಿಸಿ ವಿಶ್ವ ಚಾಂಪಿಯನ್ ಶಿಪ್ ತಮ್ಮಲೇ ಉಳಿಸಿಕೊಂಡರು. 2012 ರಲ್ಲಿ ಬೊರಿಸ್ ಗೆಲ್ಫಾಂಡ್ ಅವರನ್ನು ಸೋಲಿಸುವುದರೊಂದಿಗೆ 5 ನೇ ಸಲ ವಿಶ್ವ ಚಾಂಪಿಯನ್ ಶಿಪ್ ಪಟ್ಟ ತಮ್ಮದಾಗಿಸಿಕೊಂಡ ಹೆಗ್ಗಳಿಕೆ ವಿಶ್ವನಾಥ ಆನಂದ್ ಅವರದ್ದು.

2013, 2014 ರಲ್ಲಿ ವಿಶ್ವ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಸೋತರೂ ನಮ್ಮೆಲ್ಲರ ಮನದಲ್ಲಿ ಇಂದಿಗೂ ‘ಚದುರಂಗ ಚತುರ’ನಾಗಿಯೇ ಉಳಿದಿದ್ದಾರೆ ಆನಂದ್. ಸೋತಾಗ, ಯಾರೇನೇ ಅಂದರೂ, ಅವರು ನೀಡಿದ ಪ್ರಬುದ್ಧ ಪ್ರತಿಕ್ರಿಯೆ ಅವರ ವ್ಯಕ್ತಿತ್ವ, ವರ್ಚಸ್ಸನ್ನು ಹೆಚ್ಚಿಸಿತು. ಅವರಂದರು, “Sometimes Life is a bitch. But you have to put Ctrl X and start again. ನಾನು ಒಂದು ರೋಚಕ ಪಂದ್ಯವಾಡಿದೆ, ಅದರ ಬಗ್ಗೆ ಅತೀವ ಹೆಮ್ಮೆಯಿದೆ. ಈ ಪಂದ್ಯದಲ್ಲಿ ಸೋತಿರಬಹುದು ಪರವಾಗಿಲ್ಲ. ನನ್ನ ಸ್ಟೈಲ್ ನಲ್ಲಿ ಎಂದಿನ ಸಹಜ ರೀತಿಯಲ್ಲಿ ಆಡಿದೆ ಎಂಬ ಸಮಾಧಾನವಿದೆ.” ಎಂದು. ಹೌದು, ಸೋಲು ಗೆಲುವನ್ನು ಸಮನಾಗಿ ತೆಗೆದುಕೊಳ್ಳುವ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ. ಯಾವುದೇ ಆಟಗಾರ ಸೋತಾಗ ಹೀನಾಯವಾಗಿ ಹಿಗ್ಗಾ ಮುಗ್ಗಾ ಬೈಯುವ ನಮ್ಮ ಪ್ರವೃತ್ತಿ ಬದಲಾಗಬೇಕಿದೆ.

 1985 ರಲ್ಲಿ ಅರ್ಜುನ ಪ್ರಶಸ್ತಿ, 1987, ತನ್ನ 18 ವರ್ಷ ಪ್ರಾಯದಲ್ಲಿ ಪದ್ಮಶ್ರೀ ಪ್ರಶಸ್ತಿ, 1991-92 ರಲ್ಲಿ ಪ್ರಥಮ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, 2000 ದಲ್ಲಿ ಪದ್ಮ ಭೂಷಣ ಗೌರವ, 2007 ರಲ್ಲಿ ಪದ್ಮ ವಿಭೂಷಣ ಗೌರವ ಸ್ವೀಕರಿಸುವುದರೊಂದಿಗೆ ಈ ಗೌರವ ಪಡೆದ ಮೊದಲ ಕ್ರೀಡಾ ತಾರೆ ಆದರು. “My Best Games of Chess” ಪುಸ್ತಕಕ್ಕೆ 1998 ರಲ್ಲಿ ಬ್ರಿಟಿಷ್ ಚೆಸ್ ಫೆಡರೇಶನ್ “ವರ್ಷದ ಪುಸ್ತಕ” ಗೌರವ ನೀಡಿತು. ವಿಶ್ವದ ಪ್ರಮುಖ ಚೆಸ್ ವಿಮರ್ಶಕರು ಹಾಗೂ ರಷ್ಯಾದ ‘64’ ಮ್ಯಾಗಝಿನ್ ವರ್ಷದ ಅತ್ಯುತ್ತಮ ಚೆಸ್ ಆಟಗಾರನಿಗೆ ನೀಡುವ ‘ಚೆಸ್ ಆಸ್ಕರ್’ ಪ್ರಶಸ್ತಿಯನ್ನು ಆನಂದ್ ನಾಲ್ಕು ಬಾರಿ ಪಡೆದಿದ್ದಾರೆ. ಅಂದ ಹಾಗೆ, ವಿಶ್ವ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ೩ ಮಾದರಿಗಳಲ್ಲಿ ಆಟ ನಡೆಯುತ್ತದೆ – ನಾಕೌಟ್, ಟೂರ್ನಮೆಂಟ್ ಮತ್ತು ಮ್ಯಾಚ್ ಫಾರ್ಮಾಟ್. ಈ ಮೂರೂ ಮಾದರಿಗಳಲ್ಲಿ ಜಯ ಗಳಿಸಿರುವ ಏಕೈಕ ಆಟಗಾರ ಆನಂದ್. ಚೆಸ್ ನ ಹಲವು ಮಾದರಿಗಳಲ್ಲಿ ಮಾಸ್ಟರ್ ಎನಿಸಿಕೊಂಡ ಕಾರಣಕ್ಕಾಗಿಯೇ ಇವರಿಗೆ ನಾಸ್ಕಾಮ್ ( ನ್ಯಾಷನಲ್ ಅಸೋಸಿಯೇಶನ್ ಆಫ್ ಸಾಫ್ಟ್ ವೇರ್ ಮತ್ತು ಸರ್ವೀಸಸ್ ಕಂಪೆನೀಸ್) ಇವರು 2011 ರಲ್ಲಿ “ಗ್ಲೋಬಲ್ ಸ್ಟ್ರಾಟಜಿಸ್ಟ್” ಅವಾರ್ಡ್ ನೀಡಿ ಗೌರವಿಸುತ್ತದೆ.   ಈ ಎಲ್ಲಾ ಗೌರವಗಳಿಗಿಂತಲೂ ಹೆಚ್ಚು, ವಿಶ್ವನಾಥನ್ ಆನಂದ್ ಹೆಸರಿನಲ್ಲಿ ಸಾವಿರಾರು ಚೆಸ್ಸ್ ತರಬೇತಿ ಶಾಲೆಗಳಿವೆ. ಆದರೆ ವಿಶ್ವನಾಥನ್ ಆನಂದ್ ಥರ ಆಗಬೇಕೆಂದು ಹಠ ಹಿಡಿದು ಆಡುವವರಿದ್ದಾರೆ. !

ಮತ್ತೀಗ  ವಿಶೇಷದಲ್ಲಿ ವಿಶೇಷ ಸುದ್ದಿಯೊಂದು ಬಂದಿದೆ. ಅಮೇರಿಕಾದ ನಾಸಾ ಸಂಸ್ಥೆ , ಪುಟ್ಟ ಗ್ರಹವೊಂದಕ್ಕೆ ವಿಶ್ವನಾಥನ್ ಆನಂದ್ ಅವರ ಹೆಸರನ್ನು ಇಡುವ ಮೂಲಕ, ಆನಂದ್ ಇನ್ನೊಂದು ಗರಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.ಚೆಸ್ಸ್ ನಲ್ಲಿ ದಶಕಗಳ ಕಾಲ ಸಾಮ್ರಾಟನಾಗಿ ಮೆರೆದ ವಿಶಿ ಹೆಸರನ್ನು “4538 ವಿಶ್ಯಾನಂದ್” ಎಂದು ನಾಸಾ ಪ್ಲಾನೆಟ್ ಒಂದಕ್ಕೆ ಹೆಸರಿಟ್ಟಿದೆ. ವಿಶ್ವದಲ್ಲಿಯೇ, ಗ್ರಹಗಳಿಗೆ ಕೇವಲ ಮೂವರು ಚೆಸ್ ಆಟಗಾರರ ಹೆಸರು ಇಡಲಾಗಿದೆ. ಆ ಮೂರನೇ ವ್ಯಕ್ತಿಯೇ ವಿಶ್ವನಾಥನ್ ಆನಂದ್.  ಚೆಸ್ ಆಟದಲ್ಲಿ ತಾರೆಯಾಗಿ ಮಿಂಚಿದ ಆನಂದ್ ಈಗ ಆಗಸದ ಗ್ರಹವೊಂದರ ಹೆಸರಾಗಿದ್ದಾರೆ. ಇದಲ್ಲವೆ ಸಾಧನೆ ಅಂದರೆ?

 

We are Proud of You Vishwanathan Anand…  

 

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!