ರಿಯಾಲಿಟಿ ಶೋ…ವಾಸ್ತವ ಕಾರ್ಯಕ್ರಮ…ಅದು ವಾಸ್ತವಕ್ಕೆ ಬಹು ಹತ್ತಿರವಾದ ಕಾರ್ಯಕ್ರಮ… ಆದರೆ ಯಾರ ವಾಸ್ತವ ಮಾನಸಿಕ ಸ್ಥಿತಿಗೆ ಹಿಡಿದ ಕೈಗನ್ನಡಿ ಎನ್ನುವುದು ಪ್ರಶ್ನೆ??
ರಿಯಾಲಿಟಿ ಶೋಗಳು ಎಂಬ ಅನಿವಾರ್ಯ ಕರ್ಮದಿಂದ ಎಂದಾದರೂ ಮುಕ್ತಿ ಸಿಗಬಹುದೇನೋ ಎಂಬ ಯೋಚನೆ ಹರಿದಾಡುತ್ತಲೇ ಇರುತ್ತದೆ. ಹೆಸರಿನಂತೆ, ರಿಯಾಲಿಟಿಯನ್ನು ತೋರಿಸಿದ್ದರೆ, ಇಂತಹ ಕಾರ್ಯಕ್ರಮ ಬಹುಶಃ ಬಹಳ ದೊಡ್ಡ ಮಟ್ಟಿಗೆ ಪ್ರತಿ ಮನಸ್ಸುಗಳನ್ನು ಅರಳಿಸುತ್ತಿತ್ತು. ಆದರೆ ನಡೆಯುತ್ತಿರುವ ರಿಯಾಲಿಟಿಯೇ ಬೇರೆ. ಇಂಡಿಯನ್ ಐಡಲ್, ಡಾನ್ಸಿಂಗ್ ಸ್ಟಾರ್, ಬಿಗ್ ಬಾಸ್, ಪ್ಯಾಟೆ ಮಂದಿ ಹಳ್ಳಿಗ್ ಬಂದ್ರು, ಇದು ಕಥೆಯಲ್ಲ ಜೀವನ, ಪಟ್ಟಿ ಮಾಡಿದರೆ ಇನ್ನೊಂದಿಷ್ಟಿವೆ ಈ ರಿಯಾಲಿಟಿ ಶೋಗಳು. ಈ ಶೋಗಳ ಮೇಲೆ ಎಂದಿಗೂ ಒಲವು ಮೂಡಲೇ ಇಲ್ಲ, ಇವೆಲ್ಲದರ ನಡುವೆ ಏಪ್ರಿಲ್ 12-2015, ರಂದು “ಸಿಂಪಲ್” ಆಗಿ ಒಂದು ವಿಷಯ ಮತ್ತೆ ಮನಸ್ಸನ್ನು ಕೆಡಿಸಿತು. ನಾವೆಂದಿಗೂ ಬದಲಾಗಲಾರೆವಾ ಎಂಬ ಯೋಚನೆಯಿಂದ ಹೊರ ಬರುವುದು ಕಷ್ಟವಾಯಿತು. ಏನದು??
Simpallagondu Singing Show, Where words fail, Music Speaks!
ನಿಜ, ಆ ಕ್ಷಣ ಶಬ್ದಗಳು ಸೋತವು ಆದರೆ ಸಂಗೀತ ಮಾತನಾಡಲಿಲ್ಲ, ಮಾತನಾಡಿಸಿದ್ದು ಅರುಣ ಸಾಗರರ ವರ್ತನೆ! ಸಿಂಪಲ್ಲಾಗೊಂದು ಸಿಂಗಿಂಗ್ ಶೋ, ಕೇವಲ 4 ಎಪಿಸೋಡುಗಳನ್ನಷ್ಟೇ ಮುಗಿಸಿದೆ. ಅದೇನೋ ಯುನಿಕ್ ಶೋ, ನೀವೂ ಹಾಡಬಹುದು ಎಂದೆಲ್ಲಾ ವಿಪರೀತ ಎನಿಸುವಷ್ಟು ಜಾಹೀರಾತು ನೀಡಿ ಶುರುವಾಯಿತು ಈ ಸಿಂಪಲ್ ಸಿಂಗಿಂಗ್ ಟಾರ್ಚರ್. ವರ್ಸಟೈಲ್ ನಟ, ತನ್ನ ಹಾಸ್ಯ ಪ್ರಜ್ಞೆಯಿಂದ, ಮಾತಿನ ಚಾಕಚಕ್ಯತೆಯಿಂದ ಪ್ರಸಿದ್ಧರಾದ ಅರುಣ್ ಸಾಗರ್ ಅವರ ಆಂಕರಿಂಗ್ ಎಂಬ ವಿವರಣೆ ಬೇರೆ.
ಈ ಸಿಂಪಲ್ ಶೋ ಮೊದಲಿನ ಸುತ್ತು, ಪುಟ್ಟ ಹುಡುಗಿಯೊಬ್ಬಳು ಬರುತ್ತಾಳೆ, ಕನ್ನಡ ಹಾಡೊಂದನ್ನು ತನ್ನದೇ ಭಾಷೆಯಲ್ಲಿ ಹಾಡುತ್ತಾಳೆ. ಬಂದ ಸ್ಪರ್ಧಿಗಳು ಅದ್ಯಾವ ಹಾಡೆಂದು ಗುರುತಿಸಿ ಹಾಡಬೇಕು. ಸರಿ, ಆಕೆ ಹಾಡಿದ್ಲು, ಬಂದವ್ರು ಅದನ್ನು ಬಡ ಬಡಾಯಿಸಿದ್ದೂ ಆಯಿತು. ಮುಂದಿನ ರೌಂಡಿಗೆ ಹೋಗೋ ಮೊದಲು ಈ ಪುಟ್ಟ ಹುಡುಗಿಯನ್ನು ಕಳುಹಿಸಿ ಕೊಡಬೇಕಲ್ಲಾ, ಆಗ ನೋಡಿ ನಮ್ಮ ‘Words Fail’ ಆಗಿದ್ದು. ಅರುಣ್ ಸಾಗರ್ ಅವರಿಗೆ ಆಕೆ ಮೇಲೆ ಇದ್ದಕ್ಕಿದ್ದ ಹಾಗೆ ಬಹಳ ಪ್ರೀತಿ ಬಂದು ಬಿಡ್ತು ನೋಡಿ, ಮಂಡಿಯೂರಿ ಆಕೆಯ ಕೈಗೊಂದು ಮುತ್ತಿಡುತ್ತಾರೆ. ಅಯ್ಯೋ ಸ್ವಾಮಿ, ಇದಕ್ಕೇನೂ ತಕರಾರಿಲ್ಲ ನಮ್ಮದು. ಪುಟ್ಟ ಹುಡುಗಿಯಲ್ಲಿ ಪ್ರೀತಿಯನ್ನು ಕಂಡರೆ ಸಂತೋಷವೇ ನಮಗೆ. ಆದರೆ ಮರುಕ್ಷಣವೇ, ತುಟಿ ಒರೆಸಿಕೊಂಡ ಅರುಣ್ ಸಾಗರ್ ಹೇಳುತ್ತಾರೆ, “ತುಟಿ ಕಪ್ಪಾಗಬಹುದು ಅದಕ್ಕೆ” ಎಂದು. ಅರೇ! ಒಂದು ಕ್ಷಣ ದಂಗಾದೆ. ಇವರೇನು ಹಾಸ್ಯ ಮಾಡುತ್ತಿದ್ದಾರೆಯೇ? ಆದರೆ ಯಾರ ದೃಷ್ಟಿಯಲ್ಲಿ ಇದು ಹಾಸ್ಯ??? ಬಣ್ಣವೇನೂ ಆಕೆ ಮಾಡಿಕೊಂಡಿದ್ದೇ? ಅಥವಾ ಮೈ ಬಣ್ಣವೇನು ಅಂಟುತ್ತದೆಯೇ? ಬಿಳಿ ತೊಗಲಿನವರು ನಮ್ಮನ್ನು ಹೊಸಕಿ ಆಳಿದರೂ, ಅವರ ವಿರುದ್ಧ ಹೋರಾಡಿ ನಮಗೆ ಸ್ವಾತಂತ್ರ ಬಂದರೂ, ನಮಗಿನ್ನೂ ಆ ಬಿಳಿ ತೊಗಲಿನ ವ್ಯಾಮೋಹ, ಕಪ್ಪು ಚರ್ಮ ಎಂಬ ಕೀಳು ಭಾವನೆ ಅಳಿಸಿ ಹಾಕಲು ಸಾಧ್ಯವಾಗಲಿಲ್ಲವೇ?? ಛೇ!!
“ಕೆಡಹುವುದು ಸುಲಭ” ಎಂದು ನೀವೇ ನಿರೂಪಿಸಿದಿರಿ. ಆದರೆ ನೀವು, ಕೆಡವಿದ್ದು ನಿಮ್ಮದೇ ಇಮೇಜ್ ಅನ್ನು!!
ಅರುಣ್ ಸಾಗರ್, ನಿಮಗೊಂದು ಇಮೇಜ್ ಇತ್ತು, ಕಷ್ಟದ ದಿನಗಳನ್ನು ಕಂಡವರು, ಸ್ವಪ್ರಯತ್ನದಿಂದ ಜೀವನದಲ್ಲಿ ಸುಖದ ಹಾದಿಗಳನ್ನು ಹುಡುಕಿದವರು, ಸುಂದರವಾದ ಹಾಸ್ಯ ಪ್ರಜ್ಞೆ ಉಳ್ಳವರು ಎಂದು. ಆದರೆ ನಿಮ್ಮ ಹಾಸ್ಯ ಪ್ರಜ್ಞೆ ಈ ರೀತಿ ಎಂದು ತಿಳಿದಿರಲಿಲ್ಲ. ನಮಗೂ ನಿಮ್ಮ ವೇಷ ಭೂಷಣ ನೋಡಿ ಕೆಲವೊಮ್ಮೆ ಹಾಸ್ಯ ಮಾಡೋಣವೆನಿಸುತ್ತದೆ. ಆದರೆ ನಿಮ್ಮ ಪ್ರತಿಭೆಗೆ ಬೆಲೆ ಕೊಟ್ಟು ಇಷ್ಟು ದಿನ ಸಹಿಸಿಕೊಂಡೆವು, ಮೊನ್ನೆ ನಿಮ್ಮ ಮನಸ್ಸಿನ ಬಣ್ಣವನ್ನು ಹೊರ ಹಾಕಿದಿರಿ ನೋಡಿ, ಆಗ ಸಹಿಸಿಕೊಳ್ಳಲಾಗಲಿಲ್ಲ. ಮೈ ಬಣ್ಣ ಎಂತೇ ಇರಲಿ, ಮನಸ್ಸು ಶುದ್ಧವಾಗಿರಬೇಕು ಅರುಣ್ ಸಾಗರ್. ಅದೇನೇ ಸಮರ್ಥನೆಗಳನ್ನು ನೀವು ನೀಡಬಹುದು, ಆದರೆ ನಿಮ್ಮ ಆ ಮಾತುಗಳು ನಮ್ಮೆಲ್ಲರ ಮನಸ್ಸುಗಳಿಗೆ ಘಾಸಿ ಮಾಡಿದೆ ಎಂಬುದು ಸತ್ಯವೇ, ಜೊತೆಗೆ ನೀವೊಂದಿಷ್ಟು ವೀಕ್ಷಕರನ್ನೂ ಕಳೆದುಕೊಂಡಿರಬಹುದು ಎನಿಸುತ್ತದೆ….
ಹಾಸ್ಯ ಪ್ರಜ್ಞೆ – ಮನರಂಜನೆ ಮನಸ್ಸುಗಳನ್ನು ಅರಳಿಸಬೇಕು, ಮುಗ್ದ ಮನಸ್ಸುಗಳನ್ನು ಚಿವುಟುವುದಲ್ಲ ಹಾಸ್ಯ!
ಜನಪ್ರಿಯತೆ ಪಡೆಯುವ ಅದರಿಂದ ರೇಟಿಂಗ್ ಪಡೆದು ಅತಿ ಹೆಚ್ಚು ಜಾಹೀರಾತು ಗಿಟ್ಟಿಸಿಕೊಂಡು ಲಾಭ ಹೆಚ್ಚಿಸಿಕೊಳ್ಳುವ ಕಾರಣಕ್ಕಾಗಿಯೇ, ಯಾವುದೇ ವಾಹಿನಿಯ ಕಾರ್ಯಕ್ರಮ ರೂಪಿಸಲ್ಪಡುತ್ತದೆ. ಸರಿ, ಇದು ವ್ಯಾಪಾರೀ ತತ್ವ. ಆದರೆ ವ್ಯಾಪಾರೀ ತತ್ವಕ್ಕೂ ನೈತಿಕ ಗೆರೆ ಎಂಬುದು ಇದೆಯಲ್ಲ? ಸಮಾಜ ಏಳಿಗೆ, ಜನರಿಗೆ ಮನರಂಜನೆ ಎಂಬ ಮುಖವಾಡ ಹೊತ್ತುಕೊಂಡ ಈ ಪ್ರೋಗ್ರಾಂಗಳು ಲಾಭ ಪಡೆಯುವ ಉದ್ದೇಶವನ್ನಷ್ಟೇ ಹೊಂದಿವೆ ಎನ್ನುವುದು ವಿಪರ್ಯಾಸ! ಸದಾ ಕಾಲ, ಟಿ ಆರ್ ಪಿ ಜೊತೆಗೆಯೇ ಗುದ್ದಾಡುವ ನಿಮಗೆಲ್ಲಾ ನೈತಿಕತೆ ಎಂದರೇನು ಎಂಬುದೇ ಮರೆತು ಹೋಗಿದೆ ಎನಿಸುತ್ತಿದೆ. ಹೊಸತನವನ್ನು ಸೃಷ್ಟಿಸಲು ಹೋಗಿ, ಅದೇನೋ ಎಡವಟ್ಟುಗಳನ್ನು, ಮನಸ್ಸುಗಳನ್ನು ನೋಯಿಸುವ ಕೆಲಸವನ್ನಷ್ಟು ಮಾಡುತ್ತಿವೆ ಈ ರಿಯಾಲಿಟಿ ಶೋಗಳು. ಎಲ್ಲಾ ಮಿತಿಗಳನ್ನೂ ಮೀರಿ ಬೆಳೆಯುತ್ತಿರುವ ಇವುಗಳು ಸಾಗುತ್ತಿರುವುದಾದರೂ ಎತ್ತ?
ನೆಲ್ಸನ್ ಮಂಡೇಲಾ ಅವರು ಸುಮಾರು 27 ವರ್ಷಗಳ ಕಾಲ ರಾಜಕೀಯ ಕೈದಿಯಾಗಿ ಕಂಬಿಗಳ ಹಿಂದೆ ಬದುಕು ಕಳೆದರು. ಜೈಲಿನಿಂದ ಹೊರಬಂದ ಮಂಡೇಲಾ ಮತ್ತೆ ಗಾಂಧೀ ಹಾದಿ ತುಳಿದರು. ಪ್ರಚೋದನೆ, ಒತ್ತಡಗಳ ನಡುವೆಯೂ ಕಪ್ಪು ವರ್ಣೀಯರೆಂದು ಗುರುತಿಸಲ್ಪಡುತ್ತಿದ್ದವರನ್ನು ಗುಲಾಮರನ್ನಾಗಿ ಮಾಡಿಕೊಂಡು ನೂರಾರು ವರ್ಷಗಳ ಚಿತ್ರಹಿಂಸೆ ನೀಡಿದ್ದ ಅಲ್ಪ ಸಂಖ್ಯಾತ ಶ್ವೇತ ವರ್ಣೀಯರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲಿಲ್ಲ, ಬದಲಿಗೆ ಎಲ್ಲಾ ವರ್ಣಗಳನ್ನೂ ಸಮನಾಗಿ ಕಾಣುವಂತಹ ಪ್ರಜಾಪ್ರಭುತ್ವ ವ್ಯವಸ್ಥೆಯ ಹರಿಕಾರರಾದರು. ಏತಕ್ಕಾಗಿ, ನೆಲ್ಸನ್ ಮಂಡೇಲಾ ಅವರು ಗಾಂಧೀ ಹಾದಿ ತುಳಿದು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ್ದು?? ಕೆಟ್ಟ ಯೋಚನೆಯೊಂದು ತೊಲಗಲಿ ಎಂದು. ಆದರೆ ನಾವಿನ್ನೂ ಕಪ್ಪು – ಬಿಳುಪು ಎಂಬ ಕನ್ನಡಕದಲ್ಲೇ ಬದುಕುತ್ತಿದ್ದೇವೆ ಎಂದರೆ ನಗುವುದೋ ಅಳುವುದೋ???
ಸಹಜತೆಯೇ ಸೌಂದರ್ಯ ಎಂಬ ಅರಿವಿಲ್ಲದ ನಾವುಗಳು…
ಇದೊಂದೇ ಘಟನೆಯಲ್ಲ, ಹಲವು ಫೇಸ್ ಕ್ರೀಂಗಳು ಇದನ್ನು ಹೊರತು ಪಡಿಸಿಲ್ಲ. ಕಪ್ಪು ಮೈ ಬಣ್ಣದ ಹುಡುಗಿಯರಿಗೆ ಆತ್ಮ ವಿಶ್ವಾಸದ ಕೊರತೆಯಿರುತ್ತದೆ, ಉತ್ತಮ ವರ ಸಿಗಲ್ಲ ಎಂಬ ಜಾಹೀರಾತುಗಳು. ಆಕೆಯ ಮೈ ಬಣ್ಣ ಬಿಳುಪಾದ ಕೂಡಲೇ, ಮ್ಯಾಜಿಕ್ ನಡೆದು ಹೋಗುತ್ತದೆ. ಆಕೆಯನ್ನು ನಿರಾಕರಿಸಿದ್ದ ವರ, ಆಕೆಯ ಹಿಂದೆ ಬಿದ್ದು ಪ್ರೋಪೋಸ್ ಮಾಡುತ್ತಾನೆ. ನೀವೇ ಯೋಚಿಸಿ, ಮೈ ಬಣ್ಣ ಬದಲಾದೊಡನೆ ಆತನಿಗೆ ಆಕೆ ಚಂದ ಎಂದೆನಿಸಿದರೆ ಆತನ (ಜಾಹೀರಾತಿನ ಕ್ರಿಯೇಟಿವ್ ಹೆಡ್) ಮನೋಸ್ಥಿತಿ ಹೇಗಿರಬೇಕು?? ನಾವು ಭೂಮಿಯನ್ನು ಬಿಟ್ಟು ಇನ್ನೊಂದು ಗ್ರಹಕ್ಕೆ ಪಯಣ ಬೆಳೆಸುವಷ್ಟು ಬೆಳೆದಿದ್ದೇವೆ. ಆದರೆ ಆಯಾಯ ಭೌಗೋಳಿಕ ಲಕ್ಷಣಗಳಿಗೆ ಅನುಗುಣವಾಗಿ, ಅಲ್ಲಿನ ಪ್ರದೇಶದ ಜನರ ದೈಹಿಕ ಚಹರೆ ರೂಪುಗೊಂಡಿರುತ್ತದೆ ಎಂಬ ಸಣ್ಣ ವಿಷಯವನ್ನು ತಿಳಿಯದಷ್ಟೂ ಸಣ್ಣವರಾದೆವೇ??
ಒಂದೆಡೆ ಸ್ಕಿನ್ ಕ್ರೀಂ ಜಾಹೀರಾತುಗಳು ಕಪ್ಪು ಬಿಳುಪಿನ ಭಾವನೆಯನ್ನು ಜೀವಂತವಾಗಿಡುತ್ತಿದ್ದರೆ, ಮತ್ತೊಂದೆಡೆ ಇಂತಹ ಎಡಬಿಡಂಗಿ ವರ್ತನೆ ಇದಕ್ಕೆ ನೀರೆರೆಯುವ ಕೆಲಸ ಮಾಡುತ್ತಿದೆ. ಇನ್ನಾದರೂ ನಮ್ಮ ಮನವರಳಲಿ ಎಂಬ ಸದಾಶಯದೊಂದಿಗೆ…..