ಭಾರತ ಈಗ ಮೊದಲಿನಂತಿಲ್ಲ. ಕತ್ತೆ ನಿಂತರೂ ಚುನಾವಣೆ ಗೆಲ್ಲಬೇಕು ಅಂದುಕೊಂಡಿದ್ದವರಿಗೆಲ್ಲಾ ಜನ ಅತ್ಯಂತ ಪ್ರಬುದ್ಧ ಉತ್ತರ ನೀಡಲಾರಂಭಿಸಿದ್ದಾರೆ. ಉದಾಹರಣೆಗೆ ಕಳೆದ ಲೋಕಸಭಾ ಚುನಾವಣೆ. ಹಗರಣಗಳ ಸರಮಾಲೆ, ದುರಾಡಳಿತದಿಂದ ದೇಶದ ಮಾನ ಹರಾಜು ಹಾಕಿದ್ದ ಯುಪಿಎಯನ್ನು ಇನ್ನಿಲ್ಲದಂತೆ ಕಿತ್ತೊಗೆದು ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಅಭೂತ ಪೂರ್ವ ಜಯವನ್ನಿತ್ತಿದ್ದಾರೆ ಜನ. ಇದೇ ಜನ ಅದೇ ಬಿಜೆಪಿಗೆ ಮೊನ್ನೆಯ ದೆಹಲಿ ಚುನಾವಣೆಯಲ್ಲಿ ಆರಕ್ಕೇರಿದವರನ್ನು ಮೂರಕ್ಕಿಳಿಸಿದ್ದು ತಿಳಿದೇ ಇದೆ. ಇಲ್ಲಿ ಮಾತ್ರವಲ್ಲ, ಇತ್ತೀಚೆಗಿನ ದಿನಗಳಲ್ಲಿ ದೇಶದ ಉಳಿದ ರಾಜ್ಯಗಳಲ್ಲೂ ಜನರು ಇಂತಹ ಪ್ರಬುದ್ಧ ಸರ್ಕಾರಗಳನ್ನೇ ಆರಿಸಿದ್ದಾರೆ. ಇದರರ್ಥ, ಭ್ರಷ್ಟರಿಗೆ, ಕುಟುಂಬ – ಅವಕಾಶವಾದಿ ರಾಜಕಾರಣ ಮಾಡುವವರಿಗೆ, ಗೆದ್ದೇ ಗೆಲ್ಲುತ್ತೇವೆಂದು ಅಹಂಕಾರದಿಂದ ಬೀಗುವವರಿಗೆ ಇನ್ನು ಅವಕಾಶವಿಲ್ಲ ಅಂತ ಹೇಳಬಹುದು. ಆದರೆ ಇಷ್ಟೆಲ್ಲ ಬೆಳವಣಿಗೆಗಳನ್ನು ಗಮನಿಸಿಯೂ ಕೆಲವರು ಇನ್ನೂ ಪಾಠ ಕಲಿತಂತಿಲ್ಲ.
ನಿಮಗೆ ನೆನಪಿರಬೇಕು, ಲೋಕಸಭಾ ಚುನಾವಣೆಯಲ್ಲಿ ಎರಡಂಕೆಯ ಸೀಟು ಆಚೆಗಿಡಿ, ಕೇವಲ ಎರಡೇ ಸೀಟ್ ಗೆ ಇನ್ನಿಂಗ್ಸ್ ಮುಗಿಸಿದ ಜೆಡಿಯು ಮುಖಂಡ ನಿತೀಶ್ ಕುಮಾರ್ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ವಾಸ್ತವದಲ್ಲಿ ನೈತಿಕತೆಯಿಂದ ರಾಜೀನಾಮೆ ನೀಡಿದ್ದಲ್ಲ. ಆ ಪರಿ ಮೋದಿಯವರನ್ನು ಹೀಯಾಳಿಸಿ, ಮುಸ್ಲಿಮರನ್ನು, ಅಲ್ಪ ಸಂಖ್ಯಾತರನ್ನು ಓಲೈಸಿಯೂ ತನಗೆ ದಕ್ಕಿದ್ದು ಎರಡೇ ಸ್ಥಾನವೆಂದಾಗ ರಾಜೀನಾಮೆ ನೀಡದೆ ಬೇರೆ ವಿಧಿಯಿರಲಿಲ್ಲ. ಪಾಪ! ಪ್ರಧಾನಿಯಾಗುವ ಕನಸು ಕಾಣುತ್ತಿದ್ದವರಿಗೆ ಕಡೇ ಪಕ್ಷ ಮುಖ್ಯಮಂತ್ರಿ ಸ್ಥಾನವನ್ನೂ ಉಳಿಸಿಕೊಳ್ಳಲಾಗಲಿಲ್ಲ. ಆದ್ದರಿಂದ ಜಿತನ್ ಕುಮಾರ್ ಮಾಂಜಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ‘ರಿಮೋಟ್ ಕಂಟ್ರೋಲ್ಡ್’ ಆದರೂ ದಲಿತ, ಹಿಂದುಳಿದ ವರ್ಗಕ್ಕೆ ಸೇರಿದವರೆಂದು ಪೋಸು ಬೇರೆ ಕೊಡಲಾಯಿತು.
ಇತ್ತ ತನ್ನ ಬದ್ಧ ವೈರಿ ನರೇಂದ್ರ ಮೋದಿ ಸ್ವಚ್ಛ ಭಾರತ, ಜನ ಧನ ಯೋಜನೆಗಳಂತಹ ಉತ್ತಮ ಕೆಲಸಗಳಿಂದ, ವಿದೇಶಿ ನಾಯಕರುಗಳ ಭೇಟಿ, ಪ್ರವಾಸ ಮುಂತಾದವುಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸುತ್ತಿದ್ದರೆ, ಇತ್ತ ಮಹಾನ್ ಸಮಾಜವಾದಿ ನಾಯಕ ನಿತೀಶ್ ಕುಮಾರ್ ನೇರ ಅಧಿಕಾರವಿಲ್ಲದೆ ಒಂದು ಲೆಕ್ಕದಲ್ಲಿ ಮೂಲೆ ಗುಂಪಾಗಿದ್ದರು. ಅವಾಗವಾಗ ಮೋದಿಯನ್ನು ಟೀಕಿಸಿ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಿದ್ದರೇ ಹೊರತು ಉಳಿದ ಹಾಗೆ ಅವರನ್ನು ಕೇಳುವವರೇ ಇರಲಿಲ್ಲ. ಆದರೆ ಅಧಿಕಾರಕ್ಕಾಗಿ ಸದಾ ಜೊಲ್ಲು ಸುರಿಸುವ ಮನಸ್ಸು ಸುಮ್ಮನಿದ್ದೀತೇ? ಅದೇ ಸಮಯಕ್ಕೆ ನಿತೀಶ್ ಗೆ ಕಂಡಿದ್ದು ಮಾಂಜಿ! ಎಷ್ಟಾದ್ರೂ ತಾನೇ ಮುಖ್ಯಮಂತ್ರಿ ಮಾಡಿದ್ದು ತಾನೇ? ಸುಲಭವಾಗಿ ಇಳಿಸಬಹುದೆಂದು ಅಂದಾಜಿಸಿ ಮಾಂಜಿಯನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಕಾರ್ಯಕ್ಕೆ ಇಳಿದೇ ಬಿಟ್ಟರು.
ಆದರೆ ಮಾಂಜಿ ಕೂಡಾ ರಾಜಕೀಯದ ಎಲ್ಲಾ ಪಟ್ಟುಗಳನ್ನು ಬಲ್ಲವರೇ.. ಅಷ್ಟು ಸುಲಭವಾಗಿ ಸೀಟು ಬಿಟ್ಟು ಕೊಡುವವರಲ್ಲ ಎಂದರಿತೊಡನೆ ಮಾಂಜಿ ಮತ್ತು ಬೆಂಬಲಿಗರನ್ನು ಉಚ್ಚಾಟಿಸಿಯಾದರೂ ಸರಿ ಹೇಗಾದರೂ ಮಾಡಿ ಮತ್ತೆ ಮುಖ್ಯಮಂತ್ರಿಯಾಗಲೇ ಬೇಕೆಂದು ಪಣ ತೊಟ್ಟರು ನಿತೀಶ್ ಕುಮಾರ್. ಏಕೆಂದರೆ ಈ ಬಾರಿ ಆರ್ ಜೆ ಡಿ ಮತ್ತು ಕಾಂಗ್ರೆಸ್ ಬೆಂಬಲವೂ ಇತ್ತು. ರಾಷ್ಟ್ರಪತಿಗಳ ಮುಂದೆ ಪರೇಡ್ ನಡೆಸಿ,ರಾಜ್ಯಪಾಲರ ಮೇಲೆ ಗೂಬೆ ಕೂರಿಸಿ, ಹರಸಾಹಸ ಮಾಡಿ ಮಾಂಜಿಯನ್ನು ಕೆಳಗಿಳಿಸಿ ತನ್ನನ್ನು ತಾನು ಮತ್ತೆ ಮುಖ್ಯಮಂತ್ರಿಯಾಗಿ ಪ್ರತಿಷ್ಟಾಪಿಸಿಕೊಂಡರು.
ವಿಷಯವದಲ್ಲ, ಈ ನಿತೀಶರಂತಹ ಹೊಲಸು ರಾಜಕಾರಣಿಗಳಿಗೆ ನಾಚಿಕೆಯೆಂಬುದು ಇಲ್ಲವೇ ಇಲ್ವಾ? ಲೋಕಸಭೆ ಚುನಾವಣೆಯಲ್ಲಿ ಸೋತಾಗ ಇದ್ದ ನೈತಿಕತೆಯ ವ್ಯಾಲಿಡಿಟಿ ಒಂಬತ್ತು ತಿಂಗಳಿಗೇ ಮುಗೀತಾ? ಒಂದು ಕಾಲದಲ್ಲಿ ಆಜನ್ಮ ವೈರಿಗಳಂತಿದ್ದ ಲಾಲು-ನಿತೀಶ್ ಈಗ ಅಧಿಕಾರಕ್ಕಾಗಿ ಒಂದಾಗಿದ್ದಾರೆಂದರೆ ಅವರುಗಳಿಗೆ ಒಂದು ತತ್ವ ಸಿದ್ಧಾಂತ ಅನ್ನೋದು ಇಲ್ವಾ? ಅಥವಾ ಅಧಿಕಾರಕ್ಕೋಸ್ಕರ ತತ್ವ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಳ್ಳಬಹುದು ಅಂತಾನಾ? ಅಗತ್ಯವಿದ್ದಾಗ ಮಾತ್ರ ಇತರರನ್ನು ಉಪಯೋಗಿಸಿಕೊಳ್ಳುವುದು, ಬೇಡವಾದಾಗ ಕಿತ್ತೊಗೆಯುವುದು ನಿಮ್ಮದು ಅದೆಂತಹಾ ಸಿದ್ಧಾಂತ? ಬಿಹಾರದಲ್ಲಿ ಮಾತ್ರ ಅಲ್ಲ. ತಮಿಳುನಾಡು, ಜಾರ್ಖಂಡ್ ನಲ್ಲೂ ಇಂತಹದೇ ಕತೆಗಳು. ತಮಗೆ ಬೇಕಾಗಾದ ಬೇಕಾದವರನ್ನು ಉಪಯೋಗಿಸಿಕೊಂಡು ಬೇಡದೇ ಇರುವಾಗ ಕಿತ್ತೊಗೆಯುವಂತಹ ದರಿದ್ರ ರಾಜಕಾರಾಣವನ್ನು ದೇಶ ತಲತಲಾಂತರದಿಂದ ಕಾಣುತ್ತಿದೆ.
ಕರ್ನಾಟಕವನ್ನೇ ತೆಗೆದುಕೊಳ್ಳಿ, ಯಡಿಯೂರಪ್ಪನವರು ಗಣಿ ಅಕ್ರಮದ ವಿಚಾರದಲ್ಲಿ ರಾಜೀನಾಮೆಯಿತ್ತಾಗ ನಂಬಿಕಸ್ಥನೆಂಬ ಕಾರಣಕ್ಕೆ ಡಿ.ವಿ.ಸದಾನಂದ ಗೌಡರಿಗೆ ಪಟ್ಟ ಕಟ್ಟಿದರು. ಆದರೆ ಹತ್ತು ತಿಂಗಳ ನಂತರ ಇದೇ ಯಡಿಯೂರಪ್ಪ ಡಿವಿಎಸ್ ತನ್ನ ಮಾತು ಕೇಳುತ್ತಿಲ್ಲವೆಂದು ಜಗದೀಶ್ ಶೆಟ್ಟರ್ ನ್ನು ದಾಳವಾಗಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಡಿವಿಎಸ್ ರನ್ನು ಕೆಳಗಿಳಿಸಿದರು. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಅರಾಜಕತೆಗೆ ಕಾರಣರಾದರು. ಅವಾಗ ಸರ್ಕಾರದ ಅವಧಿಯಿದ್ದಿದ್ದು ಬರೀ 9 ತಿಂಗಳು. ಆ ಒಂಬತ್ತು ತಿಂಗಳಿಗೆ ಮುಖ್ಯಮಂತ್ರಿ ಬದಲಾವಣೆ, ಮಂತ್ರಿಮಂಡಲ ವಿಸ್ತರಣೆಯಂತಹ ಸಂಭ್ರಮ ಬೇಕಿತ್ತಾ?ಅಷ್ಟೇ ಅಲ್ಲ, ಸರ್ಕಾರವನ್ನು ಸುಭದ್ರಗೊಳಿಸುವುದಕ್ಕಾಗಿ ಆಪರೇಷನ್ ಕಮಲವೆಂಬ ಹೀನ ಸಂಪ್ರದಾಯ ಹುಟ್ಟು ಹಾಕಿ ಹತ್ತಾರು ಉಪಚುನಾವಣೆಗಳಿಗೆ ಯಡಿಯೂರಪ್ಪನವರು ಕಾರಣರಾದರು. ಈ ಯಡಿಯೂರಪ್ಪ, ಮಾಂಜಿ, ನಿತೀಶ್ ಕುಮಾರ್, ಶೆಟ್ಟರ್, ಕುಮಾರಸ್ವಾಮಿ ಮಾತ್ರವಲ್ಲ, ದೇಶದ ಉಳಿದೆಲ್ಲಾ ಅಧಿಕಾರದಾಹಿ ರಾಜಕಾರಣಿಗಳು ಒಂದು ಮಾತನ್ನು ಗಮನಿಸಬೇಕು. ಇವತ್ತು ಟೆಕ್ನಾಲಜಿ ತುಂಬಾ ಅಪ್ ಡೇಟ್ ಆಗಿದೆ, ಮಾಧ್ಯಮಗಳು ಅಡ್ವಾನ್ಸ್ಡ್ ಆಗಿದೆ ಮತ್ತು ಜನರು ಎಜುಕೇಟೆಡ್ ಆಗಿದ್ದಾರೆ. ಹೀಗಿರುವಾಗ ನೀವುಗಳೆಲ್ಲ ಅಪ್ಡೇಟ್ ಆಗುವುದು ಯಾವಾಗ? ನಿಮ್ಮ ಅವಕಾಶವಾದಿ ರಾಜಕಾರಣ ಕೊನೆಗಾಣುವುದೆಂತು?
ಇದೀಗ ಮತದಾನ ಕಡ್ಡಾಯಗೊಳಿಸುವುದು, ತಪ್ಪಿದವರನ್ನು ಶಿಕ್ಷೆಗೆ ಗುರಿಪಡಿಸುವಂತಹ ಕಾಯಿದೆಯನ್ನು ಪಂಚಾಯತ್ ಚುನಾವಣೆಯಲ್ಲಿ ಜಾರಿಗೊಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಇದು ಒಂದು ವೇಳೆ ಜಾರಿಯಾದರೆ, ಭವಿಷ್ಯದಲ್ಲಿ ವಿಧಾನಸಭೆ, ಲೋಕಸಭೆ ಚುನಾವಣೆಗಳ ಮೇಲೂ ಜಾರಿಯಾಗಬಹುದು. ಹೀಗೇ ಒಂದು ಪ್ರಶ್ನೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 2008ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಜಯಗಳಿಸಿದರು. ಪಕ್ಷಕ್ಕೆ ನಿರೀಕ್ಷಿತ ಜಯ ಸಿಗದೇ ಇದ್ದಿದರಿಂದ ಮತ್ತೆ ಮುಖ್ಯಮಂತ್ರಿಯಾಗುವ ಕನಸೂ ಸಾಕಾರಗೊಳ್ಳಲಿಲ್ಲ. ಹೀಗಾಗಿ 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಗಳೂರು ಗ್ರಾಮಾಂತರದಿಂದ ಎಂಪಿಯಾದರು. ಮತ್ತೆ 2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತನ್ನ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಮನಗರದಿಂದ ಸ್ಪರ್ಧಿಸಿ ಜಯಗಳಿಸಿದರು. (ನಮ್ಮ ಪುಣ್ಯ, ಮತ್ತೆ 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಲಿಲ್ಲ). ಇದರಿಂದ ಇನ್ನು ಒಂಬತ್ತೇ ತಿಂಗಳುಗಳ ಸಮಯವಿದ್ದರೂ ಬೆಂಗಳೂರು ಗ್ರಾಮಾಂತರದಲ್ಲಿ ಮತ್ತೆ ಚುನಾವಣೆ ನಡೆಸಬೇಕಾಯಿತು. ಹೀಗೆ ಒಬ್ಬನೇ ವ್ಯಕ್ತಿ ಐದು ವರ್ಷದಲ್ಲಿ ಎರಡು ಉಪಚುನಾವಣೆಗೆ ಕಾರಣರಾದರು.ಈ ಚುನಾವಣೆಗಳಿಗಾಗಿ ಪರವೂರಿನಲ್ಲಿರುವವರೂ ಮತದಾನಕ್ಕೆ ಬಂದರು, ಜನರ ಹಣ. ಸಮಯ ಎಲ್ಲಾ ವ್ಯರ್ಥವಾಯಿತು. ಈ ಚುನಾವಣೆಗಳ ಭರಾಟೆಯಿಂದ ಊರಿಗೇನು ಲಾಭವಾಯಿತೋ ಗೊತ್ತಿಲ್ಲ, ನಮ್ಮ ಹಣ ಮತ್ತು ಸಮಯ ಪೋಲಾಯಿತು. ಇಷ್ಟಿದ್ದೂ ಮತದಾನ ಕಡ್ಡಾಯಗೊಳಿಸುವುದು ಎಷ್ಟು ಸರಿ?
ಈ ಚುನಾವಣೆ ಮತ್ತು ಚುನಾವಣೆ ನಂತರದ ಬೆಳವಣಿಗೆಗಳನ್ನು ನೋಡುವಾಗ ನನಗನಿಸುತ್ತದೆ, ನಿಜವಾಗಿಯೂ ಅಚ್ಚೇ ದಿನ್ ಬರುವುದು ಯಾರಿಗೆ? ನಿತೀಶ್ ಕುಮಾರ್, ಯಡಿಯೂರಪ್ಪ, ಕುಮಾರಸ್ವಾಮಿಯಂತಹ ಅವಕಾಶವಾದಿಗಳಿಗಾ? ಅಥವಾ ಶ್ರೀಸಾಮಾನ್ಯರಾದ ನಮಗಾ?!