ಪ್ರಚಲಿತ

ಕೆಸರಿನಲ್ಲರಳಿದ ಕಮಲ ಅದು!

ಹೇ ದೇವರೇ,

ನನಗೆ ಇಷ್ಟೊಂದು ಎತ್ತರವನ್ನು ದಯಪಾಲಿಸಬೇಡ

ನನ್ನ ಆತ್ಮೀಯರನ್ನು ಆಲಿಂಗಿಸದಷ್ಟು ಎತ್ತರವನ್ನು ಕರುಣಿಸಬೇಡ

ಯಾವತ್ತೂ ಬೇಡ!

ವಾಹ್! ಅದೆಂತಹ ಅಧ್ಬುತ ಭಾವ! ಒಡಹುಟ್ಟಿದವರಿಗಿಂತಲೂ ಎತ್ತರಕ್ಕೆ ಬೆಳೆದು ಬಿಡಬೇಕು, ಆತ್ಮೀಯರಿಗಿಂತಲೂ ದೊಡ್ಡದಾದ ಸ್ಥಾನದಲ್ಲಿರಬೇಕು ಎಂದು ಹಪಹಪಿಸುವವರೇ ನಮ್ಮೊಳಗೆ ಇರುವಾಗ ಆ ವ್ಯಕ್ತಿ ಮಾತ್ರ ಬೇರೆಯೇ ಪ್ರಾರ್ಥಿಸುತ್ತಿದ್ದರು.ಪ್ರಧಾನಿಯಾಗಿ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದಾಗ “ಮಿತ್ರರನ್ನು ಆಲಿಂಗಿಸದಷ್ಟು ಎತ್ತರವನ್ನು ಯಾವತ್ತೂ ಕರುಣಿಸಬೇಡ” ಎಂದು ಆಶಿಸಿದ್ದರು ವಾಜಪೇಯಿ!

ಅಟಲ್ ಬಿಹಾರಿ ವಾಜಪೇಯಿ…
ತೊಂಬತ್ತರ ದಶಕದಲ್ಲಿ ಜನರ ಮನೆಮನಗಳಲ್ಲಿ ನೆಲೆಯಾಗಿದ್ದ ಹೆಸರದು. ಅದೇಕೋ ಗೊತ್ತಿಲ್ಲ. ಆ ಹೆಸರು ಕೇಳಿದರೇ ಏನೋ ಒಂದು ರೋಮಾಂಚನ. ನಮಗೆಲ್ಲ ಹಿಂದಿ ಅರ್ಥವಾಗದಿದ್ದರೂ ಮಂತ್ರಮುಗ್ದಗೊಳಿಸುವ ಅವರ ಭಾಷಣ, ಮೋಡಿಗೊಳಿಸುವ ಆ ಕವಿತೆ, ನಗೆಗಡಲಲ್ಲಿ ತೇಲಿಸುವ ಆ ಹಾಸ್ಯಭಾವವನ್ನು ಕೇಳುವುದು, ನೋಡುವುದೆಂದರೆ ಇಡೀ ದೇಶಕ್ಕೆ ದೇಶವೇ ಮೈಮತೆಯುತ್ತಿತ್ತು. ಯಾರು ಏನೆಂದು ಅರಿಯದಿದ್ದರೂ ಬಾಲ್ಯದಲ್ಲಿಯೇ ನಮಗವರು Role Model. ವಾಜಪೇಯಿ, ಅಡ್ವಾಣಿ ಮತ್ತು ತಾವರೆಯ ಚಿತ್ರವಿರುವ ಪೋಸ್ಟರ್ ಗಳು ಹೆಚ್ಚಿನ ಮನೆಗಳ ದ್ವಾರಗಳಲ್ಲಿ, ಹಲವರ ವಾಹನಗಳಲ್ಲಿ ರಾರಾಜಿಸುತ್ತಿದ್ದವು. ಅಷ್ಟರ ಮಟ್ಟಿಗೆ ಹಿಂದಿನ ಸರ್ಕಾರಗಳು ಜನರನ್ನು ರೋಸಿಹೋಗುವಂತೆ ಮಾಡಿದ್ದವು.ಕಿಚಿಡಿ ಸರ್ಕಾರಗಳ ರಾಜೀನಾಮೆ ಪರ್ವ, ಬೆನ್ನು ಬೆನ್ನಿಗೆ ಬಂದ ಚುನಾವಣೆಗಳಿಂದ ಜನ ಬದಲಾವಣೆಗೆ ಕಾದಿದ್ದರು. ಇದೆಲ್ಲಕ್ಕಿಂತ ಹೆಚ್ಚಾಗಿ ಕವಿಹೃದಯದ ರಾಜಕಾರಣಿ ಇನ್ನಿಲ್ಲದಂತೆ ಜನರನ್ನು ಮೋಡಿಗೊಳಿಸಿದ್ದರು.

ವಾಜಪೇಯಿ ಅಂದ್ರೆ ಹಾಗೇನೆ.. ಬರೀ ಭಾಷಣದ ಮೂಲಕವೇ ಜನರನ್ನು ಮಂತ್ರಮುಗ್ದಗೊಳಿಸುವಂತಹ, ಜನರಲ್ಲಿ ಹೊಸ ಭರವಸೆ ತುಂಬುವಂತಹ ವಾಕ್ಚಾತುರ್ಯ ಅವರದು. ಎಷ್ಟೆಂದರೆ.. ನಮ್ಮಂತಹ ಜನಸಾಮಾನ್ಯರನ್ನು ಬಿಡಿ, 60ರ ದಶಕದಲ್ಲೇ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಕೈಯಿಂದಲೇ “ಈತ ಮುಂದೊಂದು ದಿನ ದೇಶದ ಪ್ರಧಾನಿಯಾದರೂ ಆಶ್ಚರ್ಯವಿಲ್ಲ” ಎಂದು ಹೊಗಳಿಸಿಕೊಳ್ಳುವಷ್ಟು, ರಾಜಕೀಯ ಅರಾಜಕತೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದು ಹೋಗಿದ್ದ ದೇಶದ ವಿಶ್ವಾಸಾರ್ಹತೆಯನ್ನು ವಿದೇಶ ಮಂತ್ರಿಯಾಗಿ ಮರಳಿ ಗಳಿಸಿಕೊಡುವಷ್ಟು, ಎದುರಾಳಿ ಪಕ್ಷದ ನಾಯಕಿ ಇಂದಿರಾ ಗಾಂಧಿಯವರನ್ನು “ದುರ್ಗಾದೇವಿ” ಎಂದು ಹೊಗಳಿ ದೊಡ್ಡಸ್ತಿಕೆ ಮೆರೆಯುವಷ್ಟು, ಅಪ್ರತಿಮ ದೇಶಭಕ್ತನಿಗೆ “ದೇಶದ್ರೋಹಿ” ಎಂದು ಜರೆದರೂ ಅದಕ್ಕೆ ಪ್ರತಿಕ್ರಿಯೆಯನ್ನೇ ನೀಡದೆ ಜನರ ಮನ ಗೆಲ್ಲುವಷ್ಟು, ಸಣ್ಣ ವಯಸ್ಸಿನಲ್ಲಿಯೇ “ಸರ್ವಶೇಷ್ಟ ಸಂಸದೀಯ ಪಟು” ಪ್ರಶಸ್ತಿ ಪಡೆದುಕೊಳ್ಳುವಷ್ಟು ಮತ್ತು “ಜೈ ಜವಾನ್ ಜೈ ಕಿಸಾನ್ ಜೈ ವಿಜ್ನಾನ್” ಎನ್ನುವ ಮೂಲಕ ದೇಶದ ಭವಿಷ್ಯದ ಕುರಿತಾಗಿ ತನಗಿದ್ದ ಕನಸನ್ನು ಸಿಂಪಲ್ಲಾಗಿ ವ್ಯಕ್ತಪಡಿಸುಷ್ಟು!

ಹಾಗೆಂದು ದಾಕ್ಷಿಣ್ಯಕ್ಕೆ ಬಿದ್ದು ರಾಷ್ಟ್ರೀಯ ಹಿತಾಸಕ್ತಿಗಳ ವಿಚಾರದಲ್ಲಿ ರಾಜಿ ಮಾಡಿಕೊಂಡವರಲ್ಲ. ಯಾವ ನೆಹರೂರವರ ಕೈಯಿಂದ ಹೊಗಳಿಸಿಕೊಂಡಿದ್ದರೋ ಅದೇ ನೆಹರೂರವರ ವಿದೇಶಾಂಗ ನೀತಿಯಲ್ಲಿದ್ದ ತಪ್ಪುಗಳನ್ನು ಟೀಕಿಸಲು ಹಿಂದೆ ಮುಂದೆ ನೋಡಿದವರಲ್ಲ ಅಟಲ್, “ದುರ್ಗಾದೇವಿ” ಎಂದು ತಾವೇ ಬಿರುದು ನೀಡಿದ್ದರೂ ತುರ್ತುಪರಿಸ್ಥಿತಿ ಮತ್ತು ಇನ್ನಿತರ ಆಡಳಿತಾತ್ಮಕ ವಿಷಯಗಳಲ್ಲಿ ಇಂದಿರಾ ಗಾಂಧಿಯವರನ್ನೂ ಸುಮ್ಮನೆ ಬಿಡಲಿಲ್ಲ. ವಿದೇಶಗಳ ಧೋರಣೆಗೆ ಹೆದರದೆ ಅಣು ಪರೀಕ್ಷೆ ನಡೆಸಿದ ವಾಜಪೇಯಿ, ಪಾಕಿಸ್ತಾನದೊಂದಿಗೆ ಕಾರ್ಗಿಲ್ ಯುಧ್ಧ ಮಾಡುವ ದಿಟ್ಟ ನಿರ್ಧಾರವನ್ನೇ ಕೈಗೊಂಡವರು. ಚಂದ್ರಯಾನ, ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನಾ, ಸಾವಿರಾರು ಕಿಲೋಮೀಟರಗಳ ರಾಷ್ಟ್ರೀಯ ಹೆಧ್ಧಾರಿ ನಿರ್ಮಾಣ, ಸರ್ವ ಶಿಕ್ಷಾ ಅಭಿಯಾನ ಮುಂತಾದ ಜನಪ್ರಿಯ ಯೋಜನೆಗಳ ಮೂಲಕ ಸುಶಾಸನವನ್ನು ನೀಡುವುದರಿಂದ ನಿಮಿಷವೂ ವಿರಮಿಸಲಿಲ್ಲ. ಮೋದಿ ಈಗ ಹೇಳುತ್ತಿರುವ ಏಕರೂಪ ನಾಗರೀಕ ಸಂಹಿತೆ, ರಾಮ ಮಂದಿರ ನಿರ್ಮಾಣ, ಜಮ್ಮು ಕಾಶ್ಮೀರದ 370ನೆ ಸಂವಿಧಾನದ ವಿಧಿಯನ್ನು ರದ್ದುಗೊಳಿಸುವುದು ಇವೆಲ್ಲಾ ಅಟಲ್ ಐಡಿಯಾಗಳೇ ಅಗಿದ್ದರೂ ಮಿತ್ರಪಕ್ಷಗಳ ಅಸಹಕಾರದಿಂದ ಅದೆಲ್ಲವನ್ನು ಪೂರೈಸಲು ಸಾಧ್ಯವಾಗಲಿಲ್ಲ. ಇಷ್ಟೆಲ್ಲ ಇದ್ದರೂ ತನ್ನ ಸಂಪೂರ್ಣ ರಾಜಕೀಯ ಜೀವನದಲ್ಲಿ ಒಂದೇ ಒಂದು ಭೃಷ್ಟಾಚಾರದ ಆರೋಪ ಸುಳಿಯಲು ಬಿಟ್ಟಿದ್ದರೆ ಕೇಳಿ.. ಊಹಿಸಿ ಅದೆಂತಹ ನಿಷ್ಕಳಂಕ ವ್ಯಕ್ತಿತ್ವ ಆಗಿದ್ದಿರಬಹುದು ಅವರದು?

ಅಬ್ಕೀ ಬಾರೀ ಅಟಲ್ ಬಿಹಾರಿ..
ಈ ಬಾರಿ ಹೇಗೆ “ಅಬ್ಕೀ ಬಾರ್ ಮೋದಿ ಸರ್ಕಾರ್” ಘೋಷಣೆ ಮೊಳಗಿತ್ತೋ ಆವತ್ತು “ಅಬ್ಕೀ ಬಾರೀ ಅಟಲ್ ಬಿಹಾರಿ” ಘೋಷಣೆ ದೇಶದೆಲ್ಲೆಡೆ ಮೊಳಗಿತ್ತು. ಬಹುಶಃ ಇವತ್ತಿನ ಹಾಗೆ TV ಚಾನೆಲುಗಳು, ಸೋಶಿಯಲ್ ಮೀಡಿಯಾಗಳು ಇದ್ದಿದ್ದರೆ ವಿರೋಧ ಪಕ್ಷಗಳು ಪೈಪೋಟಿಗೆ ಬಿದ್ದಿ ಠೇವಣಿ ಕಳೆದುಕೊಳ್ಳುತ್ತಿದ್ದವು. ಬಿಜೆಪಿಗೆ ಕಾಂಜಿಪೀಂಜಿ ಪಕ್ಷಗಳ ಕೈಕಾಲು ಹಿಡಿದು ಸರ್ಕಾರ ರಚಿಸುವ ಪ್ರಮೇಯವೇ ಬರುತ್ತಿರಲಿಲ್ಲ. ಸ್ವಂತ ಬಲದ ಸರ್ಕಾರ ಬರುತ್ತಿತ್ತೋ ಏನೊ.. ಅಷ್ಟು ಜೋರಾಗಿತ್ತು ಅಟಲ್ ಹವಾ. ಆದರೆ ವಾಜಪೇಯಿಯವರು ಯಾವತ್ತು ಅಧಿಕಾರದ ಹಿಂದೆ ಬೀಳಲಿಲ್ಲ. ಹದಿಮೂರೇ ದಿನದಲ್ಲಿ ಸರ್ಕಾರ ಬೀಳುವುದು ಖಚಿತವಾಗಿದ್ದರೂ ಒಬ್ಬನೇ ಒಬ್ಬ ಸಂಸದನನ್ನು ಖರೀದಿಸುವ ಕೆಲಸಕ್ಕೆ ಕೈ ಹಾಕಲಿಲ್ಲ. ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹೊಸ ಪಕ್ಷವನ್ನು ಸ್ಥಾಪಿಸಿ ಅದನ್ನು ಪೂರ್ಣ ಪ್ರಮಾಣದಲ್ಲಿ ಅಧಿಕಾರದತ್ತ ಕೊಂಡೊಯ್ಯುವುದೇ ಸಣ್ಣ ಮಾತಲ್ಲ ಅಂತಾದ್ದರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಹದಿಮೂರೇ ದಿನದಲ್ಲಿ ರಾಜೀನಾಮೆ ಕೊಡುವಂತಹ ಮನಸ್ಸು ಯಾರು ತಾನೇ ಮಾಡಿಯಾರು? ನಂತರದ ಚುನಾವಣೆಯಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿ ಪ್ರಧಾನಿಯಾಗಿ ಆರು ವರ್ಷಗಳ ಕಾಲ ಯಶಸ್ವಿಯಾಗಿ ದೇಶವನ್ನು ಮುನ್ನಡೆಸಿ ತಾನೊಬ್ಬ ಸರ್ವಸಮ್ಮತ ನಾಯಕನೆಂದು ಜಗತ್ತಿಗೆ ಪ್ರದರ್ಶಿಸಿದರು.

ಅಂತೂ ಬಹುಜನರ ಕನಸೊಂದು ಅರ್ಥಪೂರ್ಣವಾಗಿ ಸಾಕಾರಗೊಳ್ಳುತ್ತಿದೆ. 90ರ ಹೊಸಿಲಲ್ಲಿ ಅಟಲ್ ಜಿ ಗೆ ಭಾರತರತ್ನ ಘೋಷಣೆಯಾಗಿದೆ. ಪ್ರಧಾನವೊಂದೇ ಬಾಕಿ ಇದೆ. ನವಭಾರತದ ಕನಸುಗಾರ, ಕವಿತೆಯ ಸೊಗಸುಗಾರ, ಅಭಿವೃದ್ದಿಯ ಹರಿಕಾರನ ಸಾಧನೆಗೆ ಅದ್ಯಾವ ಭಾರತರತ್ನವೂ ಲೆಕ್ಕವಲ್ಲ. ಮುಂದೊಂದು ದಿನ ವಾಜಪೇಯಿಗೆ ಭಾರತರತ್ನ ಸಿಕ್ಕಿದೆ ಅನ್ನೋ ವಿಷಯವನ್ನೇ ನಾವು ಮರೆತೇವು, ಆದರೆ ವಾಜಪೇಯಿಯವರನ್ನು ಅವರ ಸಾಧನೆಗಳನ್ನು ಮರೆಯಲು ಸಾಧ್ಯವೇ? ಅಷ್ಟಕ್ಕೂ ಬಡವ- ಬಲ್ಲಿದ, ಹಿಂದೂ ಮುಸ್ಲಿಂ ಕ್ರೈಸ್ತನೆನ್ನದೆ ಪಕ್ಷಾತೀತವಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಸಿರುವ ಅಟಲ್ ಜೀ ಈ ದೇಶದ ಅನರ್ಘ್ಯರತ್ನ!

ಅದು ಬೆಂಕಿಯಲ್ಲಿ ಅರಳಿದ ಹೂ, ಕಾರ್ಮೋಡಗಳ ಮರೆಯಿಂದ ಮಿಂಚಿದ ಆಶಾಕಿರಣ, ಬರಡು ಭೂಮಿಯಲ್ಲಿ ಕಂಡ ಅಮೃತದ ಸಿಂಚನ,ತಾವರೆಯ ಒಡಲಿಂದ ಮಿನುಗಿದ ತಾರೆ, ಅದು… ಕೆಸರಿನಲ್ಲರಳಿದ ಸುಂದರ ಕಮಲ!!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!